ಅರಣ್ಯ ನೆಡುತೋಪುಗಳ ಅಸಲಿಯತ್ತು
———————————————————————————–
ಪರಿಸರ, ಅರಣ್ಯ, ಮಲೆನಾಡು, ಪಶ್ಚಿಮ ಘಟ್ಟ… ಮುಂತಾದ ವಿಚಾರಗಳಲ್ಲಿ ಆಸಕ್ತಿ ಇರುವವರೆಲ್ಲರೂ ಗಮನಿಸಿರಬಹುದಾದ ಒಂದು ವಿದ್ಯಮಾನವೆಂದರೆ ಪತ್ರಿಕೆಗಳಲ್ಲಿ ಆಗಾಗ ಬರುವ ಅಕೇಸಿಯಾ ವಿರೋಧಿ ಬರಹಗಳು. ಯಾವಾಗ ಅರಣ್ಯ ಇಲಾಖೆ ಈ ಅಕೇಸಿಯಾ ಸಸ್ಯವನ್ನು (Acacia Auriculiformis/Earpod Wattle) ಭಾರತದಲ್ಲಿ ನೆಡುತೋಪು ಮಾಡಲು ಪರಿಚಯಿಸಿತೋ ಬಹುಶಃ ಆಗಿಂದಲೇ ಇದಕ್ಕೆ ವಿರೋಧವೂ ಹುಟ್ಟಿಕೊಂಡಿರಬಹುದು. ಆ ವಿರೋಧ ಒಂದು ಮಟ್ಟಿಗೆ ಸಮಂಜಸವೂ ಆಗಿದೆ ಯಾಕೆಂದರೆ ಅರಣ್ಯ ಇಲಾಖೆ ಈ ಮರದ ನೆಡುತೋಪುಗಳನ್ನ ಮಾಡಿದ್ದು ಮತ್ತೆಲ್ಲೋ ಅಲ್ಲ ಪ್ರಪಂಚದ ಜೀವವೈವಿಧ್ಯತೆಯ ಪ್ರಮುಖ ತಾಣಗಳಲ್ಲೊಂದಾದ (biodiversity hostspot) ಪಶ್ಚಿಮ ಘಟ್ಟದ ಮಳೆಕಾಡುಗಳಲ್ಲಿ. ಆದರೆ ಕಾಲಕ್ರಮೇಣ ಈ ವಿರೋಧ ಹೆಪ್ಪುಗಟ್ಟುತ್ತಾ ಬಂದು ಈಗ ಅಕೇಸಿಯಾ ಮರವನ್ನೇ ಕೇಂದ್ರೀಕರಿಸಿಕೊಂಡ, ಸುಳ್ಳು, ಪೊಳ್ಳುವಾದಗಳನ್ನ ಹರಿಯಬಿಡುವ ದಾರಿತಪ್ಪಿದ ವಿರೋಧವಾಗಿ ಬದಲಾಗಿದೆ. ಮಾಧ್ಯಮಗಳಲ್ಲಿ ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿಸಿದಾಗ ಜನ ಅದು ಸತ್ಯ ಅಂತ ನಂಬುವುದು ಸಹಜ. ಆಗ ವಾಸ್ತವವನ್ನು ಹೇಳಿದರೆ ಯಾರೂ ನಂಬುವುದಿಲ್ಲ. ಅಕೇಸಿಯಾ ಪರಿಸ್ಥಿತಿಯೂ ಈಗ ಅದೇ ಆಗಿದೆ.
ಅಕೇಸಿಯಾ ವಿರುದ್ಧ ಪದೇ ಪದೇ ಕೇಳಿಬರುತ್ತಿರುವ ಕೆಲವು ಮಾಹಿತಿಗಳೂ, ಅದರ ಬಗೆಗಿನ ವಾಸ್ತವಾಂಶವೂ ಕೆಳಗಿನ ಪಟ್ಟಿಯಲ್ಲಿದೆ.
1. ಅಕೇಸಿಯಾ ಒಂದು ವಿದೇಶೀ ಸಸ್ಯ – ಇದು ಸತ್ಯವೇ ಆಗಿದೆ. ಈ ಮರವನ್ನು ಆಸ್ಟ್ರೇಲಿಯಾ ದಿಂದ ಪರಿಚಯಿಸಲಾಗಿದೆ. ಆದರೆ ವಿದೇಶೀ ಸಸ್ಯವೆನ್ನುವುದೊಂದೇ ಅದನ್ನು ವಿರೋಧಿಸಲು ಒಂದು ಕಾರಣವಾಗಲಾರದು. ನಾವು ಇಂದು ಬೆಳೆದು, ಉಪಯೋಗಿಸುತ್ತಿರುವ ಅನೇಕ ಸಸ್ಯಗಳು ವಿದೇಶೀ ಮೂಲದವೇ ಆಗಿವೆ. ಉದಾಹರಣೆಗೆ ಪಪಾಯ, ಅನಾನಸು, ಮೆಣಸು, ಹುಣಸೆ ಇತ್ಯಾದಿ.
2. ಅಕೇಸಿಯಾ ಮರ ಬೇರೆ ಸಸ್ಯಗಳನ್ನ ಬೆಳೆಯಗೊಡುವುದಿಲ್ಲ – ಇದು ಕೂಡ ಸತ್ಯವೇ ಆಗಿದೆ. ಆದರೆ ಇದು ಅಕೇಸಿಯಾ ಮರದ ಗುಣ ಮಾತ್ರವಲ್ಲ. ಇಂತಹ ಗುಣ ಇರುವ ಅನೇಕ ಪ್ರಭೇಧಗಳಿವೆ. ಇದನ್ನ ಸಸ್ಯ ವಿಜ್ನಾನಿಗಳು ಅಲೆಲೋಪತಿ (Allelopathy) ಅಂತ ಕರೆದಿದ್ದಾರೆ. ಇದು ಆಕ್ರಮಣಕಾರಿ ಪ್ರಭೇಧಗಳ ಒಂದು ಗುಣ. ಈ ಗುಣ ಇದ್ದ ಮಾತ್ರಕ್ಕೆ ಅಕೇಸಿಯಾ ಸರ್ವತ್ರ ಬೆಳೆದು ಇತರ ಮರಗಳನ್ನು ನಾಶಗೊಳಿಸುವುದಿಲ್ಲ. ಅಸಲಿಗೆ ಅಕೇಸಿಯಾ ಬೆಳೆಯಲು ಪೂರ್ತಿ ಬಿಸಿಲಿರುವ ಜಾಗ ಬೇಕು. ಅಂದರೆ ಬೇರೆ ಯಾವುದೋ ಕಾರಣಕ್ಕೆ (ಕೃಷಿ/ತೋಪು,ಸೊಪ್ಪು ಇತ್ಯಾದಿ) ಸ್ವಭಾವಿಕ ಅರಣ್ಯ ನಾಶವಾದ ಕಡೆ ಇದು ಬೀಜದ ಮೂಲಕ ಪ್ರಸಾರವಾಗುತ್ತದೆ. ಇಂತಹ ಜಾಗದಲ್ಲಿ ಇದು ಯಾವುದೇ ಆರೈಕೆ ಇಲ್ಲದೆಯೇ ಬೆಳೆಯುತ್ತದೆ. ಆದರೆ ಸಹಜಾರಣ್ಯದಲ್ಲಿ ಇದರ ಗಿಡವನ್ನೇ ನೆಟ್ಟರೂ ಅದು ಬೆಳೆಯುವುದಿಲ್ಲ. ಹಾಗಾಗಿ ಅಕೇಸಿಯಾ ದ ಬುಡದಲ್ಲಿ ಬೇರೆ ಸಸ್ಯಗಳು ಬೆಳೆಯುವುದಿಲ್ಲ ಅನ್ನುವುದು ಸ್ವಲ್ಪ ಮಟ್ಟಿಗೆ ಸತ್ಯವಾದರೂ ಇದು ಅಂತಹಾ ವಿಚಿತ್ರವಾದ ಮತ್ತು ಆಘಾತಕಾರಿಯಾದ ವಿಚಾರವೇನಲ್ಲ. ನಮ್ಮದೇ ಪಶ್ಚಿಮಘಟ್ಟ ಮೂಲದ ಅನೇಕ ಸಸ್ಯಗಳು ಕೂಡ ಆಕ್ರಮಣಕಾರಿ ಪ್ರವೃತ್ತಿಯನ್ನು ಹೊಂದಿವೆ. ಉದಾಹರಣೆಗೆ ಉಪ್ಪಳಿಕ(macaranga peltata), ಅಂಡಿಪುನಾರು (carallia brachiata), ಬೋವಿನ ಮರ(hopea ponga), ಚೇರದ ಮರ (holigarna arnottiana) ಇತ್ಯಾದಿ. ಈ ಆಕ್ರಮಣ, ನಂತರ ಅದರ ಮೇಲೆ ಇನ್ನೊಂದು ಆಕ್ರಮಣ.. ಇವೆಲ್ಲ ಪ್ರಕೃತಿ ಸಹಜ ವಿಚಾರಗಳು. ಇಷ್ಟಾಗಿಯೂ ಅಕೇಸಿಯಾ ಮರದ ಜೊತೆಜೊತೆಗೆಯೇ ಬೇರೆ ಮರಗಳು ಬೆಳೆಯುವುದನ್ನ ನಾನು ಹಲವಾರು ಕಡೆ ಗಮನಿಸಿದ್ದೇನೆ. ನಮ್ಮಲ್ಲಿ ಅಕೇಸಿಯಾ ಬೆಳೆದ ಗುಡ್ಡದಲ್ಲಿ ಯಥೇಚ್ಛ ಹುಲ್ಲು ಬೆಳೆದಿದೆ ಮತ್ತು ಅಲ್ಲಿ ಹಸುಗಳೂ ಮೇಯುತ್ತವೆ. ಅದೇ ಗುಡ್ಡದಲ್ಲಿ ಗೇರು ಬೀಜದ ಮರಗಳೂ ಯಾವುದೇ ಸಮಸ್ಯೆಯಿಲ್ಲದೆಯೇ ಬೆಳೆದಿವೆ. ಬಹುಶಃ ಅಕೇಸಿಯಾ ಮರ ನಮ್ಮ ಪರಿಸರಕ್ಕೆ ಬಂದು ಹಲವಾರು ವರ್ಷಗಳು ಕಳೆದಿರುವ ಕಾರಣ ಅದರ ಆಕ್ರಮಣಶೀಲತೆ ಒಂದೋ ಕಡಿಮೆಯಾಗಿರಬಹುದು ಅಥವಾ ನಮ್ಮ ಸ್ಥಳೀಯ ಸಸ್ಯಗಳು ಅಕೇಸಿಯಾ ದ ಆಟವನ್ನ ಅರಿತು ಅದಕ್ಕೆ ಪ್ರತಿತಂತ್ರ ಹೂಡಿರಬಹುದು. ಏನೇ ಇದ್ದರೂ ಸಹಜ/ದಟ್ಟ ಕಾಡಿನೊಳಗೆ ಅಕೇಸಿಯಾ ದ ಆಕ್ರಮಣಶೀಲತೆ ಸೊನ್ನೆಯೇ.
3. ಅಕೇಸಿಯಾ ಸಸ್ಯ ವಿಷಮಯವಾಗಿದೆ – ಇದೂ ಒಂದು ಅಪ್ಪಟ ಸುಳ್ಳು. ಅಸಲಿಗೆ ಮೇವಿನ ಕೊರತೆ ಸಂದರ್ಭದಲ್ಲಿ ಈ ಮರದ ಎಳೆ ಸೊಪ್ಪನ್ನು ಹಸುಗಳಿಗೆ ಮೇವಾಗಿ ಕೊಡುವ ಪದ್ಧತಿ ಅನೇಕ ಕಡೆ ಇದೆ. ಇದು ಒಳ್ಳೆಯ ಮೇವು ಅಲ್ಲದಿದ್ದರೂ ವಿಷವಂತೂ ಅಲ್ಲ.
4 ಅಕೇಸಿಯಾ ಮರದ ಪರಾಗ ಅಲರ್ಜಿ ಉಂಟುಮಾಡುತ್ತದೆ – ಇದು ಸತ್ಯ ಆದರೆ ಅಲರ್ಜಿ ಅಕೇಸಿಯಾ ಮಾತ್ರವಲ್ಲ ಯಾವುದೇ ಮರ/ಗಿಡದ ಪರಾಗ ಉಂಟುಮಾಡಬಹುದು. ಅನೇಕರಿಗೆ ಮಲ್ಲಿಗೆ ಸುವಾಸನೆಯೇ ಅಲರ್ಜಿಯಾಗುತ್ತ್ದೆ. ಹಾಗೆಯೇ ಸಂಪಿಗೆ ಪರಿಮಳ, ಕೆಲವು ಬಗೆಯ ಹುಲ್ಲಿನ ಪರಾಗ ಇತ್ಯಾದಿ ಹಲವಾರು ಅಲರ್ಜಿ ಮೂಲಗಳಿವೆ. ಇದರಲ್ಲಿ ದೇಶೀ ವಿದೇಶೀ ಎಲ್ಲವೂ ಇವೆ ಹಾಗಾಗಿ ಅಕೇಸಿಯಾ ವನ್ನು ಇದೊಂದೇ ಕಾರಣಕ್ಕೆ ವಿರೋಧಿಸುವುದರಲ್ಲಿ ತಿರುಳಿಲ್ಲ.
5. ಅಕೇಸಿಯಾದಿಂದ ಟಿಂಬರ್ ಬಿಟ್ಟರೆ ಬೇರೆ ಯಾವುದೇ ಉಪಯೋಗವಿಲ್ಲ – ಇದೂ ಕೂಡ ತಪ್ಪು ಮಾಹಿತಿ. ಅಕೇಸಿಯಾ ಒಂದು ಸಾರಜನಕ ಸ್ಥಿರೀಕರಿಸುವ ಸಸ್ಯ. ಹಾಗಾಗಿ ಇದು ಮಣ್ಣಿನ ಸಾರ ವರ್ಧನೆಗೆ ಸಹಕಾರಿ. ಇದರ ಅಸಂಖ್ಯ ಜಾಲ ಬೇರುಗಳು (fibrous roots) ಮಣ್ಣಿನ ಸವಕಳಿಯನ್ನ ತಡೆಯುತ್ತದೆ. ಇದರ ಸೊಪ್ಪು ಮತ್ತು ತರಗೆಲೆ ಉತ್ತಮ ಸಾವಯವ ಹೊದಿಕೆಯಾಗಿದೆ (organic mulch). ಇದರಲ್ಲಿ ಲಿಗ್ನಿನ್ ಅಂಶ ಹೆಚ್ಚಿರುವುದರಿಂದ ಇದು ನಿಧಾನವಾಗಿ ಕಾಂಪೋಸ್ಟ್ ಆದರೂ ಇದರಿಂದ ಹಾನಿಯೆನೂ ಇಲ್ಲ. ಅಕೇಸಿಯಾ ದ ಹೂವಿಗೆ ಜೇನ್ನೊಣ ಗಳು ಪರಾಗಕ್ಕಾಗಿ ಬರುವುದು ಕೆಲವೆಡೆ ವರದಿಯಾಗಿದೆ (ಬಹುಶಃ ಪರಾಗದ ತೀವ್ರ ಕೊರತೆ ಇದ್ದಾಗ ಮಾತ್ರ). ಅಕೇಸಿಯಾ ಒಂದು ಅತ್ಯುತ್ತಮ ಸೌದೆ ಯಾಗಿಯೂ ಬಳಕೆಯಲ್ಲಿದೆ. ಇದರ ಸೌದೆ ಸಾಕಷ್ಟು ಸಿಗುವಲ್ಲಿ ಸಹಜಾರಣ್ಯದ ಇತರ ಮರಗಳ ಕಡಿಯುವಿಕೆ ಸಾಕಷ್ಟು ಕಡಿಮೆ. ಇದರ ಮೂಲಸ್ಥಾನದಲ್ಲಿ (ಆಸ್ಟ್ರೇಲಿಯಾ) ಇದರ ಎಳೆ ಕಾಯಿಗಳನ್ನು ತರಕಾರಿಯಾಗಿಯೂ, ಅಂಟು, ಕೆತ್ತೆ ಇತ್ಯಾದಿಗಳನ್ನು ಔಷಧವಾಗಿಯೂ ಉಪಯೋಗಿಸುತ್ತಾರಂತೆ.
6. ಅಕೇಸಿಯಾ ಮರದ ತೋಪುಗಳಿಂದ ಅಂತರ್ಜಲ ಬರಿದಾಗುತ್ತದೆ – ಇದಂತೂ ಬಹಳ ಕಡೆ ಕೇಳಿಬರುವ, ಆಧಾರ, ತರ್ಕ ಎರಡೂ ಇಲ್ಲದ ಆರೋಪ. ಅಸಲಿಗೆ ಅಕೇಸಿಯಾ ಮರದ ಬೇರುಗಳು ಮೂರು-ನಾಲಕ್ಕು ಅಡಿಗಿಂತ ಹೆಚ್ಚು ಆಳಕ್ಕೆ ಇಳಿಯುವುದಿಲ್ಲ. ಇದನ್ನು ನಾನು ಸ್ವತಃ ಗಮನಿಸಿದ್ದೇನೆ. ವಾದಕ್ಕೋಸ್ಕರ ಹೆಚ್ಚೆಂದರೆ ಹತ್ತಡಿ ಇಳಿಯುತ್ತದೆ ಎಂದುಕೊಂಡರೂ ನೂರಾರು ಅಡಿ ಆಳದಲ್ಲಿರುವ ಅಂತರ್ಜಾಲವನ್ನು ಇದು ಬರಿದುಮಾಡುತ್ತದೆ ಅನ್ನುವುದು ಹಾಸ್ಯಾಸ್ಪದ.
7. ಅಕೇಸಿಯಾ ಮರ ಇರುವ ಕಡೆ ಭೂಮಿಯಲ್ಲಿ ನೀರು ಇಂಗುವುದಿಲ್ಲ – ಇದೂ ಕೂಡ ಸುಳ್ಳು. ನಮ್ಮಲ್ಲಿ ಮಳೆಗಾಲದಲ್ಲಿ ಜೋರಾಗಿ ಮಳೆ ಬರುತ್ತಿರುವಾಗಲೇ ನಾನು ಪರಿಶೀಲಿಸಿ ನೋಡಿದ್ದೇನೆ. ಅಕೇಸಿಯಾ ಮರದ ಕೆಳಗಡೆ ಇರುವ ದಪ್ಪನೆಯ ತರಗೆಲೆ ಮಳೆನೀರನ್ನು ಪೂರ್ತಿಯಾಗಿ ಇಂಗಿಸಿಕೊಡುತ್ತದೆ. ನನ್ನ ವೈಯಕ್ತಿಕ ಪರಿಶೀಲನೆ ಹೊರತುಪಡಿಸಿಯೂ ಬೇರೆಲ್ಲೂ ಈ ಆರೋಪಕ್ಕೆ ಪೂರಕವಾದ ವರದಿಗಳಿಲ್ಲ. ಇದು ಕೇವಲ ಊಹಾಪೋಹದ ಹೇಳಿಕೆ ಮಾತ್ರ.
8. ಅಕೇಸಿಯಾ ದಿಂದ ಮಣ್ಣಿಗೆ ಹಾನಿಯಾಗುತ್ತದೆ – ಮೇಲೆ ಈಗಾಗಲೇ ಹೇಳಿದಂತೆ ಅಕೇಸಿಯಾ ಯು ಸಾರಜನಕ ಸ್ಥಿರೀಕರಿಸಿ ಮತ್ತು ಸಾಕಷ್ಟು ಸಾವಯವ ವಸ್ತುಗಳನ್ನು ಮಣ್ಣಿಗೆ ಸೇರಿಸುವ ಮೂಲಕ ಮಣ್ಣನ್ನು ಫಲವತ್ತುಗೊಳಿಸುತ್ತದೆಯೇ ಹೊರತು ಹಾಳುಮಾಡುವುದಿಲ್ಲ. ಬದಲಾಗಿ ಅನೇಕ ಕಡೆ ಪಾಳುಬಿದ್ದಿರುವ ಜಮೀನುಗಳನ್ನು ಸರಿಪಡಿಸಲು ಅಕೇಸಿಯಾ ದ ತೋಪುಗಳನ್ನು ಶಿಫಾರಸು ಮಾಡಲಾಗುತ್ತದೆಯೆಂತೆ.
9. ಅಕೇಸಿಯಾ ದಿಂದ ವನ್ಯಜೀವಿಗಳಿಗೆ ಯಾವುದೇ ಉಪಯೋಗವಿಲ್ಲ – ಇದು ಭಾಗಶಃ ಸತ್ಯ. ನೇರವಾಗಿ ಈ ಮರದ ಹಣ್ಣು/ಕಾಯಿ ಯಾವುದೇ ಪ್ರಾಣಿಪಕ್ಷಿಗಳಿಗೆ ಉಪಯೋಗ ಇಲ್ಲದಿರಬಹುದು. ಕೀಟಗಳೂ ಕೂಡ ಇದರ ಎಲೆಯನ್ನು ತಿನ್ನುವುದಿಲ್ಲ ಅಂತಾರೆ. ಆದರೆ ಕೀಟಗಳು ಇದರ ಎಳೇ ಎಲೆಗಳನ್ನು ತಿಂದಿರುವದನ್ನು ನಾನು ಗಮನಿಸಿದ್ದೇನೆ. ನಿಧಾನಕ್ಕೆ ಕೀಟಗಳು ಈ ಮರದ ಉಪಯೋಗ ಮಾಡಲು ಕಲಿತಂತೆ ಇದಕ್ಕೆ ಹೆಚ್ಚಿನ ಕೀಟಗಳು ಬರಬಹುದು. ಆದರೂ ಜೀವವೈವಿಧ್ಯ ದೃಷ್ಟಿಯಿಂದ ಇದು ಅಷ್ಟೊಂದು ಉಪಯುಕ್ತ ಮರವಲ್ಲ ಅಂತಲೇ ಹೇಳಬಹುದು. ಹಾಗಾಗಿ ಇದನ್ನ ನೈಸರ್ಗಿಕ ಅರಣ್ಯದೊಳಗೆ ತೋಪು ಮಾಡಿ ಬೆಳೆಸುವ ಅರಣ್ಯ ಇಲಾಖೆ ಕ್ರಮ ಖಂಡಿತ ಸಮರ್ಥನೀಯವಲ್ಲ.
10. ಅಕೇಸಿಯಾ ಪಕ್ಕ ಇದ್ದರೆ ಕೃಷಿ ಹಾಳಾಗುತ್ತದೆ – ಇದು ಸತ್ಯ ಯಾಕೆಂದರೆ ಅಕೇಸಿಯಾ ಮರವು ಶೀಘ್ರವಾಗಿ ಬೆಳೆದು ಬೆಳೆಗಳ ಜೊತೆ ಪೈಪೋಟಿ ನಡೆಸುತ್ತದೆ. ಆದ್ದರಿಂದ ಇದನ್ನುಇತರ ಬೆಳೆಗಳ ಜೊತೆ ಬೆಳೆಸಲಾಗದು. ಆದರೆ ಅಕೇಸಿಯಾ ಒಂದೇ ಈ ಗುಣ ಹೊಂದಿರುವುದಲ್ಲ ಹೆಚ್ಚಿನ ಅರಣ್ಯ ಮರಗಳ ಜೊತೆ ಕೂಡ ಕೃಷಿ ಬೆಳೆಗಳನ್ನ ಬೆಳೆಯಲಾಗದು.
ಇಷ್ಟೆಲ್ಲ ವಿಚಾರಗಳನ್ನ ನಾನು ಸಂಗ್ರಹಿಸಿದ್ದು ಕೇವಲ ಗೂಗಲ್ ಸಹಾಯದಿಂದ ಅಲ್ಲ. ಅಕೇಸಿಯಾ ಜೊತೆ ನನಗೆ ಸುಮಾರು ಇಪ್ಪತ್ತು ವರ್ಷಗಳಿಗಿಂತ ಹೆಚ್ಚಿನ ಒಡನಾಟವಿದೆ. ಸುಮಾರು 2000 ನೇ ವರ್ಷ ಅಥವಾ ಅದರ ಆಸುಪಾಸಿ ನಲ್ಲಿ ನಾನು ಹೀಗೆ ನೆಟ್ಟ ಅಕೇಸಿಯಾ ಗಿಡಗಳ ಸಂಖ್ಯೆ ಹೆಚ್ಚೇನಿಲ್ಲ… ಒಂದೈವತ್ತು ಇರಬಹುದು ಅಥವಾ ಹೆಚ್ಚೆಂದರೆ ನೂರು. ಇದು ನೆಟ್ಟದ್ದು ನಮ್ಮ ಆಗಿನ ಕೃಷಿಭೂಮಿಯ ಮೇಲ್ಭಾಗದಲ್ಲಿ ಗುಡ್ಡದ ಮೇಲೆ. ಮೇಲೆ ಎಂದರೆ ಎಲ್ಲಕ್ಕಿಂತ ಮೇಲೆ – ಅಂದರೆ “ಅಡ್ಕ” ಅಂತ ಗ್ರಾಮ್ಯ ಭಾಷೆಯಲ್ಲಿ ಕರೆಯುವ ಜಾಗ. ಅಡ್ಕ ಅಂದರೆ ಸಾಮಾನ್ಯವಾಗಿ ಮರಗಿಡಗಳಿಲ್ಲದೆ ಒಣಗಿದಂತಿರುವ, ಸ್ವಲ್ಪ ಸಮತಟ್ಟಾಗಿರುವ ಜಾಗ. ಕೆಲವು ಕಡೆ ಅಂತಹ ಜಾಗದಲ್ಲಿ ಮುಳಿ ಹುಲ್ಲು ಬೆಳೆದಿರುತ್ತದೆ. ಕೆಲವು ಕಡೆ ಏನೂ ಇರುವುದಿಲ್ಲ. ನಮ್ಮಲ್ಲಿ ಆ ಜಾಗ ಎಷ್ಟು ಬರಡಾಗಿತ್ತೆಂದರೆ ಮಣ್ಣು ಸವೆದು ಹೋಗಿ ಅದರಲ್ಲಿನ ಸಣ್ಣ ಸಣ್ಣ ಕಲ್ಲುಗಳು (ಸ್ಥಳೀಯವಾಗಿ ಚರಳು ಎನ್ನುತ್ತಾರೆ) ಮಾತ್ರ ಮೇಲ್ಭಾಗದಲ್ಲಿ ಉಳಿದುಕೊಂಡಿದ್ದವು. ಸುತ್ತ ಮುತ್ತ ಅಲ್ಲೊಂದು ಇಲ್ಲೊಂದು ಪೊದೆ (ಸಾಮಾನ್ಯವಾಗಿ ಕುಂಟಾಲ ಅಥವಾ ಅಲಿಮಾರು, ಮಾದೆರಿ, ಕೇಪುಳು.. – ಎಲ್ಲವೂ ಸ್ಥಳೀಯ ಹೆಸರುಗಳು – ಮುಂತಾದ ಕೆಲವು ಜಾತಿಯ ಸಸ್ಯಗಳು ಮಾತ್ರ ಇಂತಹ ಕಡೆ ಇರುವುದು) ಬಿಟ್ರೆ ಬೇರೆ ಮರಗಳಿಲ್ಲ, ಮುಳಿ ಹುಲ್ಲೂ ಇಲ್ಲ. ಅಂತಹ ಜಾಗದಲ್ಲಿ ನಾನು ಅಕೇಸಿಯಾ ನೆಟ್ಟಿದ್ದು.
ಈಗ ಸುಮಾರು ಇಪ್ಪತ್ತು ವರ್ಷಗಳ ನಂತರ ನೋಡಿದರೆ ಆ “ಅಡ್ಕ” ವೇ ಮಾಯವಾಗಿದೆ. ಅಷ್ಟೂ ಜಾಗ ಹಸಿರು ಹಸಿರಾಗಿ.. ಒಂದು ಹೊಸಾ ಕಾಡೇ ಸೃಷ್ಟಿ ಆಗಿದೆ [ಲಗತ್ತಿಸಿರುವ ಫೋಟೋ ಗಳಲ್ಲಿ ಕಾಣಬಹುದು]. ನಾನು ನೆಟ್ಟ ಅಷ್ಟೂ ಅಕೇಸಿಯಾ ಗಿಡಗಳು ಮರವಾಗಿವೆ. ಕೆಲವು ದೊಡ್ಡ ಮರಗಳು, ಇನ್ನು ಕೆಲವು ಸಾಧಾರಣ ಗಾತ್ರದವು. ನೆಲದ ತುಂಬಾ ಅಕೇಸಿಯಾ ಎಲೆಗಳ ದಪ್ಪ ಪದರ ಹಾಸಿದೆ. ರಣ ಬಿಸಿಲು ಬೀಳುತ್ತಿದ್ದ ಜಾಗ ಈಗ ತಂಪಾಗಿದೆ. ಇದಿಷ್ಟೂ ಬಹುಷಃ ಯಾರೂ ಕೂಡ ಒಪ್ಪತಕ್ಕದ್ದು. ಆದರೆ ಅಷ್ಟೇ ಅಲ್ಲ. ಅಕೇಸಿಯಾ ಬೆಳೆದಿದ್ದರ ಜೊತೆ ನಾನು ಅಕೇಸಿಯಾ ನೆಡುವಾಗ ಇದ್ದಿದ್ದ ಕುರುಚಲು ಕಾಡು ಗಿಡಗಳು ಕೂಡಾ ಬೆಳೆದಿವೆ. ಯಾವ ಗಿಡವನ್ನೂ ಅಕೇಸಿಯಾ ಸಾಯಿಸಿಲ್ಲ! ಬದಲಾಗಿ ಪೋಷಿಸಿದೆ. ಸುತ್ತ ಮುತ್ತ ಇದ್ದ ಕುಂಟಾಲ, ಅಂಡಿಪುನಾರು, ಮರುವ ಮುಂತಾದ ಸಸ್ಯಗಳಿಗೆ ಯಾವ ಹಾನಿಯೂ ಆಗಿಲ್ಲ, ಬದಲಾಗಿ ಅವು ಇನ್ನೂ ಹೆಚ್ಚು ಬೆಳೆದಿವೆ. ಅಲ್ಲಿಗೆ ಅಕೇಸಿಯಾ ಇತರ ಸಸ್ಯಗಳನ್ನು ಬೆಳೆಯಗೊಡುವುದಿಲ್ಲ ಅನ್ನುವ “ಥಿಯರಿ” ಢಮಾರ್. ಹಾಗಿದ್ದರೆ ಇಂತಹ ಥಿಯರಿಯೊಂದು ಹುಟ್ಟಿಕೊಳ್ಳಲು ಕಾರಣ ಏನಿರಬಹುದು? ನನಗೆ ತೋಚಿದಂತಹ ಕಾರಣಗಳು :
1. ಅರಣ್ಯ ಇಲಾಖೆ ಯ ಅಕೇಸಿಯಾ ತೋಪುಗಳು – ಬಹುತೇಕ ಜನರು ಅರಣ್ಯ ಇಲಾಖೆಯ ಅಕೇಸಿಯಾ ತೋಪುಗಳನ್ನು ನೋಡಿ ಈ ನಿರ್ಧಾರಕ್ಕೆ ಬಂದಿರಬಹುದು. ಅರಣ್ಯ ಇಲಾಖೆಯವರು ಯಾವುದೇ ನೆಡುತೋಪು ಮಾಡುವಾಗ ಆ ಜಾಗದಲ್ಲಿರುವ ಎಲ್ಲಾ ಸಸ್ಯ ಪ್ರಭೇಧಗಳನ್ನು ಇಲ್ಲವಾಗಿಸಿ ನಂತರ ಅಕೇಸಿಯಾ (ಅಥವಾ ನೆಡುತೋಪು ಮಾಡುವ ತೇಗ ಇತ್ಯಾದಿ) ಗಿಡಗಳನ್ನು ಒತ್ತೊತ್ತಾಗಿ ನೆಡುತ್ತಾರೆ. ನಂತರ ಕೆಲವು ವರ್ಷಗಳ ಕಾಲ ನಡುವೆ ಬರುವ ಗಿಡಗಂಟಿಗಳನ್ನು ಕಡಿಯುತ್ತಾರೆ. ಹೀಗೆ ಮಾಡಿದಾಗ ಕೆಲವು ವರ್ಷಗಳಲ್ಲಿ ಅಕೇಸಿಯಾದ “ಮೊನೊ ಫಾರೆಸ್ಟ್” ನಿರ್ಮಾಣವಾಗುತ್ತದೆ. ಇದರಿಂದಾಗಿ ನೋಡುವವರಿಗೆ ಅಕೇಸಿಯಾ ಇರುವ ಕಡೆ ಬೇರೆ ಯಾವುದೇ ಮರಗಿಡಗಳು ಬೆಳೆಯುವುದಿಲ್ಲ ಅನ್ನುವ ಭ್ರಮೆ ಹುಟ್ಟುತ್ತದೆ. ಇದು ನೆಡುತೋಪು ಮಾಡುವ ವಿಧಾನದಿಂದಾಗಿ ಆಗಿದ್ದು ಅನ್ನುವ ಸೂಕ್ಷ್ಮ ಅವರಿಗೆ ತಿಳಿಯುವುದಿಲ್ಲ. ಅಸಲಿಗೆ ಅರಣ್ಯ ಇಲಾಖೆ ಮಾಡುವ ಎಲ್ಲಾ ತೋಪುಗಳು ಕೂಡ ಇದೇ ರೀತಿ ಇರುತ್ತವೆ. ಉದಾಹರಣೆಗೆ ತೇಗ, ಧೂಪ ಇತ್ಯಾದಿ. ಆದರೆ ಅದೇಕೋ ದೋಷ ಮಾತ್ರ ಅಕೇಸಿಯಾಕ್ಕೆ ಅಂಟಿಕೊಂಡಿದ್ದು (ಅಕೇಸಿಯಾ ವಿದೇಶದ್ದು ಅನ್ನುವ ಕಾರಣಕ್ಕೆ ಇರಬಹುದು).
2. ಫಾರೆಸ್ಟಿನವರು ತೋಪು ಮಾಡಿದ ಮೇಲೆ ಅಲ್ಲಿಗೆ ಊರವರ ಎಂಟ್ರಿ ಆಗುತ್ತದೆ. ವರ್ಷಕ್ಕೊಮ್ಮೆ ಅಕೇಸಿಯಾ ತೋಪಿನ ತರಗೆಲೆ ಸಂಗ್ರಹಿಸುವ ಭರಾಟೆಯಲ್ಲಿ ತೋಪಿನ ಅಡಿಯಲ್ಲಿ ಹುಟ್ಟಿ ಬೆಳೆಯುವ ಸಣ್ಣ ಪುಟ್ಟ ಗಿಡಗಳಿಗೆ ಕತ್ತಿ ಪ್ರಯೋಗ ಆಗುತ್ತದೆ. ಅಂದರೆ ಅರಣ್ಯ ಇಲಾಖೆ ಮಾಡಿದ ಸ್ವಚತೆ ಕಾರ್ಯವನ್ನು ಇವರುಗಳು ಅಚ್ಚುಕಟ್ಟಾಗಿ ಮುಂದುವರೆಸುತ್ತಾರೆ. ಇದರಿಂದ ಬೇರೆ ಸಸ್ಯಗಳು ಹುಟ್ಟಿ ಬೆಳೆಯುವ ಸಾಧ್ಯತೆ ಪರ್ಮನೆಂಟ್ ಆಗಿ ಇಲ್ಲವಾಗುತ್ತದೆ. ಇದು ರಸ್ತೆ ಬದಿಯಲ್ಲಿ ಬೆಳೆದಿರಬಹುದಾದ ಅಕೇಸಿಯಾ ತೋಪುಗಳಲ್ಲೂ ಕಂಡುಬರುತ್ತದೆ.
3. ಅಕೇಸಿಯಾ ಬೆಳೆಯುವಂತಹ ಕಡೆ (ಬರಡು, ಒಣ ಭೂಮಿ) ಬೆಳೆಯಲು ಸ್ಥಳೀಯ ಸಸ್ಯಗಳಿಗೆ ಸಮಯ ಹಿಡಿಯುತ್ತದೆ. ಯಾಕೆಂದರೆ ಅಕೇಸೀಯಾ ಎಂಬುದೊಂದು ದಾದಿ ಸಸ್ಯ (ಈ ಪದಪ್ರಯೋಗ ಶ್ರೀ ಪಡ್ರೆ ಯವರ “ನೆಲ ಜಲ ಉಳಿಸಿ” ಪುಸ್ತಕದಿಂದ ಎರವಲು ಪಡೆದಿದ್ದು). ಅಂದರೆ ತೀರಾ ಅನಾನುಕೂಲ ಇರುವ ಕಡೆ ಬೆಳೆದು, ಮಣ್ಣನ್ನು ಸುಧಾರಿಸಿ ಕೊನೆಗೆ ಇತರ ಸಸ್ಯಗಳ ಬೆಳವಣಿಗೆಗೆ ಅನುಕೂಲ ಮಾಡಿಕೊಡುವ ಸಸ್ಯ ಪ್ರಭೇಧ. ಪ್ರಕೃತಿ ಇಂತಹದ್ದೊಂದು ಶಕ್ತಿಯನ್ನು ಅಕೇಸಿಯಾಗೆ ಕೊಟ್ಟಿದೆ. ಇಂತಹ ಶಕ್ತಿ ನಮ್ಮ ಇತರ ಸ್ಥಳೀಯ ಪ್ರಭೇಧಗಳಿಗೆ ಇಲ್ಲ (ಅಪವಾದಗಳನ್ನು ಹೊರತುಪಡಿಸಿ. ನಮ್ಮ ಸ್ಥಳೀಯ ಸಸ್ಯಗಳಲ್ಲಿ ಕೆಲವಕ್ಕೆ ಇಂತಹ ಶಕ್ತಿ ಇದೆ. ಒಂದು ಉದಾಹರಣೆ ಎಂದರೆ ಬೋವಿನ ಗಿಡ/Hopea Ponga). ಹಾಗಾಗಿ ಅಕೇಸಿಯಾ ಇಲ್ಲದಿದ್ದರೂ ಅಂತಹ ಸ್ಥಳಗಳಲ್ಲಿ ಸ್ಥಳೀಯ ಸಸ್ಯಗಳು ಬೆಳೆಯುವುದು ತೀರಾ ನಿಧಾನ (ಅಕೇಸಿಯಾದ ವೇಗದ ಬೆಳವಣಿಗೆಗೆ ಹೋಲಿಸಿದಾಗ). ಇದರಿಂದಾಗಿಯೂ ಅಕೇಸಿಯಾ ಸ್ಥಳೀಯ ಸಸ್ಯಗಳನ್ನು ಬೆಳೆಯಗೊಡುವುದಿಲ್ಲ ಅನ್ನುವ ಅನಿಸಿಕೆ ಬಂದಿರಬಹುದು.
ನಾನು ಲಗತ್ತಿಸಿರುವ ಫೊಟೋ ಗಳಲ್ಲಿ ಅಕೇಸಿಯಾ ಅಕ್ಕ ಪಕ್ಕ ಬೆಳೆದಿರುವ ಚಂದಳಿಕೆ (ಗಣಪತಿ ಕಾಯಿ ಮರ, [2] ನೇ ಫೋಟೋ) ಯ ಗಿಡ, ಮಹಾಗನಿ ([4] ನೇ ಫೋಟೋ) ಇತ್ಯಾದಿಗಳನ್ನು ನೀವು ಗಮನಿಸಬಹುದು. ಇವು ನಾನು ನೆಟ್ಟ ಗಿಡಗಳು ಮಾತ್ರ. ತನ್ನಿಂತಾನೇ ಬೆಳೆದ ಇನ್ನೆಷ್ಟೋ ಗಿಡಗಳು ಕೂಡ ಇವೆ.
ಇನ್ನು ಅಕೇಸಿಯಾ ದ ಅಡಿಯಲ್ಲಿ ಹುಲ್ಲು ಕೂಡಾ ಬೆಳೆಯುವುದಿಲ್ಲ ಅನ್ನುವ ಅಪವಾದ. ಈ ಅಪವಾದವೂ ಸುಳ್ಳು ಅನ್ನುವುದು ನಾನು ಬೆಳೆಸಿದ ಅಕೇಸಿಯಾ ಕಾಡಲ್ಲಿ ಸಾಬೀತಾಯ್ತು. [3] ನೇ ಫೊಟೊದಲ್ಲಿ ತೋರಿಸಿದಂತೆ ನಮ್ಮಲ್ಲಿ ಅಕೇಸಿಯಾ ತರಗೆಲೆ ರಾಶಿಯ ಮೇಲೆಯೇ ಮುಳಿ ಹುಲ್ಲು (ಒಂದು ಜಾತಿಯ ಉಪಯುಕ್ತ ಹುಲ್ಲು) ಸೊಂಪಾಗಿ ಬೆಳೆದಿರುವುದನ್ನು ಕಾಣಬಹುದು (ಮಳೆಗಾಲದಲ್ಲಿ ಹಸಿರಾಗಿರುತ್ತದೆ, ಈಗ ಅದರ ಒಣಗಿದ ಪಳೆಯುಳಿಕೆ ಮಾತ್ರ ಕಾಣುತ್ತಿದೆ). ಅಕೇಸಿಯಾ ಹಾಕುವ ಮುಂಚೆ ಇದು ನಾನು ಮೊದಲೇ ಹೇಳಿದಂತೆ ಒಂದೇ ಒಂದು ಹುಲ್ಲಿನ ಎಸಳೂ ಇಲ್ಲದಿದ್ದಂತಹ “ಅಡ್ಕ”. ಹಾಗಿದ್ದರೆ ಈ ಅಪವಾದ ಬಂದದ್ದು ಹೇಗೆ? ಇಲ್ಲೂ ಅರಣ್ಯ ಇಲಾಖೆ ತೋಪೇ ಕಾರಣ ಅನಿಸುತ್ತದೆ. ಅಲ್ಲಿ ಅಕೇಸಿಯಾ ವನ್ನು ಒತ್ತೊತ್ತಾಗಿ ಬೆಳೆಸುವುದರಿಂದ ಬುಡದಲ್ಲಿ ಸೂರ್ಯನ ಬೆಳಕಿನ ಕೊರತೆ ಆಗಿ ಹುಲ್ಲು ಬೆಳೆಯದೇ ಇರಬಹುದು. ಇದು ನಮ್ಮ ಸ್ಥಳೀಯ ಸಸ್ಯಗಳ ಕಾಡಲ್ಲೂ ಕೂಡ ಅಷ್ಟೇ. ದಟ್ಟ ಮರಗಳಿರುವಲ್ಲಿ ಹುಲ್ಲು ಇರುವುದಿಲ್ಲ. ಮರಗಳು ಇಲ್ಲದೆ, ಪೊದೆ/ಕುರುಚಲು ಇರುವೆಡೆ ಅಥವಾ ಏನೂ ಇಲ್ಲದಿರುವೆಡೆ ಮಾತ್ರ ಹುಲ್ಲು ಬರುತ್ತದೆ. ಅಕೇಸಿಯಾ ದಲ್ಲೂ ಅಷ್ಟೇ. ದುರದೃಷ್ಟಕ್ಕೆ ಇಲ್ಲೂ ಅಕೇಸಿಯಾ ಮೇಲೆ ಮಾತ್ರ ಅಪವಾದ ಬಂತು. ಬಹುಷಃ ಚೌತಿ ದಿನ ಚಂದ್ರನ ನೋಡಿತ್ತೋ ಏನೋ ಅಕೇಸಿಯಾ?
ಇನ್ನು ಅಕೇಸಿಯಾ ಎಂಬ “ದಾದಿ” ಸಸ್ಯದ ಬಗ್ಗೆ – ನಾನು ಲಗತ್ತಿಸಿದ [4] ನೇ ಫೋಟೋದಲ್ಲಿ ಹಿನ್ನೆಲೆಯಲ್ಲಿ ಕಾಣುವುದು ದಪ್ಪನೆಯ ಅಕೇಸಿಯಾ ಮರ, ನಾನು ಕೈಯಲ್ಲಿ ಹಿಡಿದುಕೊಂಡಿರುವುದು ಅಕೇಸಿಯಾ ದ ಜೊತೆಗೆಯೇ ನೆಟ್ಟ ಮಹಾಗನಿ ಗಿಡ. ಎರಡರ ಮಧ್ಯೆ ಬೆಳವಣಿಗೆಯ ವ್ಯತ್ಯಾಸ ಗಮನಿಸಿ. ಮೇಲೆ ಹೇಳಿದಂತೆ ಮಣ್ಣು ಹಾಳಾಗಿರುವ, ನೀರಿಲ್ಲದ ಕಡೆ ಶೀಘ್ರ ಕಾಡು ಬೆಳೆಸಬೇಕೆಂದರೆ ಅಕೇಸಿಯಾ ಅತ್ಯತ್ತಮ ಆಯ್ಕೆ (ದಾದಿ ಸಸ್ಯ) ಎಂಬುದು ಇಲ್ಲಿ ನಿರೂಪಿತವಾಯ್ತು.
ನನ್ನ ಈ ಲೇಖನದ ಉದ್ದೇಶ ಅಕೇಸಿಯಾ ವನ್ನು ಹೇಗಾದರೂ ಮಾಡಿ ಸಮರ್ಥಿಸಬೇಕು ಎಂದಲ್ಲ. ಬದಲಾಗಿ ಅಕೇಸಿಯಾ ವಿರೋಧದ ಭರಾಟೆಯಲ್ಲಿ ನೆಡುತೋಪು ಹುಚ್ಚಿನಿಂದಾಗಿರುವ ಅನಾಹುತಗಳು ಮರೆಯಾಗದಿರಲಿ ಎಂದಷ್ಟೇ ಆಗಿದೆ. ಪಶ್ಚಿಮ ಘಟ್ಟಗಳಿಗೆ ನೆಡುತೋಪುಗಳಿಂದಾಗಿರುವ ಹಾನಿಯನ್ನು ಈಗಾಗಲೆ ಸಾಕಷ್ಟು ಅಧ್ಯಯನ ಮಾಡಲಾಗಿದೆ. ಈಗ ಅಕೇಸಿಯಾ ವಿರೋಧ ದಿಂದ ಏನಾಗಿದೆ ಅಂದರೆ ಅಕೇಸಿಯಾ ಬದಲಾಗಿ ಇನ್ನೊಂದು ದೇಶಿ ಜಾತಿಯ ನೆಡುತೋಪು ಮಾಡಬಹುದು ಎನ್ನುವ ಅಭಿಪ್ರಾಯ ಬರುವ ಎಲ್ಲ ಸಾಧ್ಯತೆಗಳೂ ಇವೆ (ಈಗಾಗಲೇ ಬಂದಿದೆ ಕೂಡ). ಇದರಿಂದ ಮೈಲಾರ ಸುತ್ತಿ ಕೊಂಕಣಕ್ಕೆ ಬಂದಂತೆ ಮತ್ತದೇ ಸಮಸ್ಯೆಯ ಸುಳಿಗೆ ಪಶ್ಚಿಮ ಘಟ್ಟ ಬೀಳುತ್ತದೆ. ಯಾವುದೇ ಜಾತಿಯ (ಅಕೇಸಿಯಾ ಸೇರಿ) ನೆಡುತೋಪು ಕೂಡ ಅರಣ್ಯಕ್ಕೆ, ಪಶ್ಚಿಮ ಘಟ್ಟಕ್ಕೆ ಮಾರಕವೇ. ಅಕೇಸಿಯಾ ದ ಬಗ್ಗೆಯೇ ಹೇಳುವುದಾದರೆ ಎಲ್ಲ ಸಸ್ಯಗಳಂತೆ ಇದೂ ಒಂದು ಸಸ್ಯ ಎಂದು ಮಾತ್ರ ಪರಿಗಣಿಸಿದರೆ ಸಾಕು. ಇದಕ್ಕೆ ಇಲ್ಲದ ವಿಶೇಷಣಗಳನ್ನು ಆರೋಪಿಸಿ ಇದನ್ನೊಂದು ಹರಕೆಯ ಕುರಿ ಮಾಡುವ ಅಗತ್ಯವಿಲ್ಲ. ನಿರ್ದಿಷ್ಟ ಪ್ರದೇಶಗಳಲ್ಲಿ ಇದನ್ನು ಬೆಳೆಸಿದಲ್ಲಿ ಕೃಷಿಕರಿಗೆ ಸಾಕಷ್ಟು ಲಾಭವಿದೆ. ಅರಣ್ಯ ಇಲಾಖೆ ಕೂಡ ಅರಣ್ಯ ಪ್ರದೇಶ ಹೊರತುಪಡಿಸಿ ಬೇರೆ ಪಾಳು ಜಮೀನಿನಲ್ಲಿ ಬೆಳೆಸಿ ದೇಶಕ್ಕೆ ಅಗತ್ಯವಾದ ನಾಟ ವನ್ನು ಉತ್ಪಾದನೆ ಮಾಡಬಹುದು. ಇಷ್ಟು ಪ್ರಾಥಮಿಕ ವಿಚಾರಗಳನ್ನು ವಿರೋಧಿಸುವವರು ತಿಳಿದುಕೊಂಡರೆ ಆಗ ಮಾಧ್ಯಮಗಳಲ್ಲಿ ಬರುವ ಅಕೇಸಿಯಾ ವಿರೋಧಿ ಲೇಖನಗಳ ಶೀರ್ಷಿಕೆ ಬದಲಾದೀತು. ಅಕೇಸಿಯಾ ವಿರೋಧಿ ಬರಹಗಳು ನೆಡುತೋಪು ವಿರೋಧಿ ಬರಹಗಳಾಗಿ ಬದಲಾದರೆ ನನ್ನ ಈ ಸಣ್ಣ ಪ್ರಯತ್ನ ಸಾರ್ಥಕವಾಗುತ್ತದೆ.
[1]
[4]