
ಬೆಂಗಳೂರು: ಅಡಿಗರು ಭಾರತದ ಪ್ರಮುಖ ಕವಿಗಳಲ್ಲಿ ಅಗ್ರರೆನಿಸಿಕೊಂಡಿದ್ದರು. ಅವರು ಕನ್ನಡದ ಕಾವ್ಯ ಲೋಕಕ್ಕೆ ಹೊಸ ಮೆರುಗು ನೀಡಿದವರು. ಆಗಿನ ಕಾಲದ ಯುವ ಸಾಹಿತಿಗಳಿಗೆ ಪ್ರೇರಕ ಶಕ್ತಿಯೂ ಆಗಿದ್ದರು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜೈನ್ ವಿಶ್ವವಿದ್ಯಾಲಯ ಹಾಗೂ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಎಂ.ಗೋಪಾಲಕೃಷ್ಣ ಅಡಿಗರ ವ್ಯಕ್ತಿತ್ವ ಮತ್ತು ಸಾಹಿತ್ಯ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಯುವ ಪೀಳಿಗೆಗೆ ಪರಿಚಿತರಾಗಿರುವ ಅನೇಕ ಸಾಹಿತಿಗಳು ಅಡಿಗರ ಪಾಠಶಾಲೆಯಿಂದ ಹೊರಬಂದವರು. ಯುಆರ್. ಅನಂತಮೂರ್ತಿ, ಎಚ್ಚೆಸ್ವಿ, ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ ಸೇರಿದಂತೆ ಅನೇಕ ಸಾಹಿತಿಗಳನ್ನು ಸೃಷ್ಟಿ ಮಾಡಿದವರು ಅಡಿಗರು. ಅಡಿಗರು ಕೇವಲ ಹೊಸ ಸಾಹಿತ್ಯವನ್ನು, ಕವಿತೆಯನ್ನು ಂಆತ್ರ ಬರೆಯಲಿಲ್ಲ; ಹೊಸ ಕವಿಗಳನ್ನು ಸಾಹಿತಿಗಳನ್ನು ಹುಟ್ಟುಹಾಕಿದರು. ಅವರ ವ್ಯಕ್ತಿತ್ವದ ಈ ಆಯಾಮ ಅದ್ಭುತವಾದುದು. ಸಾಹಿತಿಗಳಲ್ಲದ ಸಮಾಜದಲ್ಲಿ ಕೆಲಸ ಮಾಡುವ ನೂರಾರು ಮಂದಿಗೂ ಕೂಡಾ ಅವರು ಪ್ರೇರಕರಾಗಿದ್ದರು ಎಂದರು.
‘ಕನ್ನಡಕ್ಕಾಗಿ ಅಡಿಗರ ಮನಸ್ಸು ಸದಾ ತುಡಿಯುತ್ತಿತ್ತು. ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಯಾವ ಸೌಲಭ್ಯವನ್ನೂ ಅಪೇಕ್ಷೆ ಪಡದೇ ಅವರು ಹೋಗುತ್ತಿದ್ದರು. ಶ್ರೇಷ್ಠ ಸಾಹಿತಿಯಾಗಿದ್ದ ಅವರನ್ನು ಕಾರ್ಯಕ್ರಮಗಳಿಗೆ ಸೈಕಲ್ ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಸಮಾಜವಾದಿ ವಿಚಾರಗಳಲ್ಲಿ ನಂಬಿಕೆ ಇಟ್ಟಿದ್ದ ಅಡಿಗರು ವೈಚಾರಿಕ ಸಂಘರ್ಷ ಮತ್ತು ದ್ವಂದ್ವಗಳನ್ನು ಎದುರಿಸಿದ್ದರು. ನಂಬಿದ ಆದರ್ಶ ಮತ್ತು ಸಿದ್ಧಾಂತಕ್ಕಾಗಿ ಪ್ರಾಂಶುಪಾಲ ಹುದ್ದೆಯನ್ನೂ ಅಡಿಗರು ತ್ಯಜಿಸಿದ್ದರು ಎಂದರು.
‘ನೆಹರೂ ವಿಚಾರಧಾರೆಗಳನ್ನು ಅವರು ಒಪ್ಪುತ್ತಿರಲಿಲ್ಲ. ಗೋಪಾಲಕೃಷ್ಣ ಅಡಿಗರು ಸ್ವಾಭಿಮಾನದಿಂದ ಬದುಕಿದವರು. ಅವರಲ್ಲಿ ಅಹಂ ಭಾವ ಕಿಂಚಿತ್ತೂ ಇರಲಿಲ್ಲ ಎಂದರು.
ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ಬಳ್ಳಿ ಮಾತನಾಡಿ, ‘ಅಡಿಗರು ತಮ್ಮ ಪಾಂಡಿತ್ಯದ ಮೂಲಕ ವಿರೋಧಿಗಳ ಮನಸ್ಸನ್ನೂ ಗೆದ್ದಿದ್ದರು. ಬಡ ಮಕ್ಕಳ ಮೇಲೆ ಅವರಿಗೆ ವಿಶೇಷ ಅಕ್ಕರೆ ಇತ್ತು. ಆ ಮಕ್ಕಳ ಶಾಲಾ ಶುಲ್ಕವನ್ನೂ ಸ್ವತಃ ತಾವೇ ಭರಿಸುತ್ತಿದ್ದರು’ ಎಂದು ತಿಳಿಸಿದರು.


ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್, ‘ಊರುಗೋಲು ಬಯಸದೇ ಬದುಕಿದವರು ಅಡಿಗರು. ಅಹಂ ಅವರ ಹತ್ತಿರವೂ ಸುಳಿಯಲಿಲ್ಲ’ ಎಂದರು.
ಅಕಾಡೆಮಿಯ ರಿಜಿಸ್ಟ್ರಾರ್ ಎನ್.ಕರಿಯಪ್ಪ ಜೊತೆಗಿದ್ದರು.