
ಜಗತ್ತನ್ನು ಆವರಿಸಿರುವ ಕಾರ್ಮುಗಿಲಿನ ಅಂಚಿನಲ್ಲೊಂದು ಭರವಸೆಯ ಬೆಳಕು ಮೂಡಿದೆ. ಕೊರೊನಾದಿಂದ ಜನ ತತ್ತರಿಸುತ್ತಿರುವ ಈ ಹಂತದಲ್ಲಿ ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ಪರಿಣಿತ ವಿಜ್ಞಾನಿಗಳು ಕೊರೊನಾ ನಿರ್ಮೂಲನೆಗೆಂದು ಔಷಧಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಮೂಲಕ ಶಸ್ತ್ರಾಸ್ತ್ರಗಳ ತಂತ್ರಜ್ಞಾನ ಮಾತ್ರವಲ್ಲ ಅವಶ್ಯಕ ಸಂದರ್ಭಗಳಲ್ಲಿ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಸಂಶೋಧನೆಯನ್ನೂ ನಾವು ಯಶಸ್ವಿಯಾಗಿ ಮಾಡುತ್ತೇವೆ ಎಂಬುದನ್ನು ಇಲ್ಲಿನ ವಿಜ್ಞಾನಿಗಳು ತಿಳಿಸಿದಂತಾಗಿದೆ.
ಈಗಾಗಲೇ ತಾನು ತೇಜಸ್ ಲಘು ಯುದ್ಧವಿಮಾನದಲ್ಲಿ ಬಳಸಿದ್ದ ಆಕ್ಸಿಜನ್ ಉತ್ಪಾದನೆಯ ತಂತ್ರಜ್ಞಾನವನ್ನು ಹಂಚಿಕೊಂಡು ಕೊರೊನಾ ಪೀಡಿತರಿಗೆ ಕ್ಷಿಪ್ರಗತಿಯಲ್ಲಿ ಪ್ರಾಣವಾಯುವನ್ನು ಪೂರೈಸುವಲ್ಲಿ ವೈದ್ಯಲೋಕಕ್ಕೆ ನೆರವನ್ನು ನೀಡಿ ಸತ್ಕಾರ್ಯವನ್ನು ಮಾಡಿದ್ದ ಡಿಆರ್‌ಡಿಒ ಈ ಔಷಧಿಯ ಸಂಶೋಧನೆಯ ಮೂಲಕ ಮತ್ತೊಮ್ಮೆ ಭಾರತ ದೇಶವು ಜಗತ್ತಿನ ಪಾಲಿನ ಸಂಜೀವಿನಿ ಎಂಬುದನ್ನು ಸಿದ್ಧಗೊಳಿಸಿದೆ.
ಈ ಹಿಂದೆಯೂ ಕೊರೊನಾ ವಿರುದ್ಧ ಹೋರಾಟದಲ್ಲಿ ಅಮೆರಿಕಾ ಸೇರಿದಂತೆ ಜಗತ್ತಿನ ಅನೇಕ ದೇಶಗಳಿಗೆ ಆಪದ್ಭಾಂಧವನಂತೆ ಅಗತ್ಯ ಔಷಧಿಯನ್ನು ಸರಬರಾಜು ಮಾಡಿದ್ದು ಭಾರತ. ಕೊರೊನಾಗೆ ವಾಕ್ಸಿನ್ ಅನ್ನು ಸಹ ಅತಿ ಕ್ಷಿಪ್ರಸಮಯದಲ್ಲಿ ಅಭಿವೃದ್ಧಿಪಡಿಸಿದೆ. ರಷ್ಯಾ, ಅಮೆರಿಕಾ ನಿರ್ಮಿತ ಲಸಿಕೆಗಳಿಗಿಂತ ಇದು ಉತ್ತಮ ಗುಣಮಟ್ಟ ಹೊಂದಿದ್ದರೂ ದುಬಾರಿಯಲ್ಲ. ಚೀನಾದ ಲಸಿಕೆಯನ್ನಂತೂ ಅನೇಕ ದೇಶಗಳೂ ತಿರಸ್ಕರಿಸಿವೆ ಆದರೆ ಭಾರತದ ಲಸಿಕೆಯನ್ನು ತೆರೆದ ಹೃದಯದಿಂದ ಸ್ವಾಗತಿಸಿವೆ. ಆದರೂ ಲಸಿಕೆಯ ಉತ್ಪಾದನೆ ಮತ್ತು ಭಾರತದಂತಹ ಬೃಹತ್ ರಾಷ್ಟ್ರದ ಎಲ್ಲ ಜನರಿಗೂ ಎರಡು ಬಾರಿ ಲಸಿಕೆ ಒದಗಿಸುವ ಹೊತ್ತಿಗೆ ಭಾರಿ ಶ್ರಮ ಮತ್ತು ದೀರ್ಘ ಸಮಯ ಹಿಡಿಯುತ್ತದೆ. ಹೀಗಾಗಿ ಜನಸಂಖ್ಯೆಗೆ ತಕ್ಕಂತೆ ಪರ್ಯಾಯ ಪರಿಹೋಪಾಯಗಳನ್ನು ಹುಡುಕುವುದು ಜವಾಬ್ದಾರಿಯುತ ನೇತೃತ್ವದ ಲಕ್ಷಣ. ಈ ಹಿನ್ನೆಲೆಯಲ್ಲಿ ಡಿಆರ್‌ಡಿಒ ಅಭಿವೃಧಿ ಪಡಿಸಿರುವ ಔಷಧಿ ಮಹತ್ವದ್ದೆನಿಸುತ್ತದೆ.
ಡಿಆರ್‌ಡಿಒ ಅಭಿವೃದ್ಧಿ ಪಡಿಸಿದ 2ಡಿಜಿ (2-ಡಿ ಆಕ್ಸಿ-ಡಿ-ಗ್ಲುಕೋಸ್) ಹೆಸರಿನ ಈ ಔಷದಿಗೆ ಈಗಾಗಲೇ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅಧಿಕೃತವಾಗಿ ಕೊರೊನಾ ಔಷಧೋಪಚಾರಕ್ಕೆ ಉಪಯೋಗಿಸಲು ಅನುಮತಿ ನೀಡಿದೆ. ಎಲ್ಲ ಹಂತದ ಕ್ಲಿನಿಕಲ್ ಟ್ರಯಲ್‌ಗಳ ನಂತರವೇ ಇದನ್ನು ಬಳಕೆಗೆ ಯೋಗ್ಯ ಎಂದು ಘೋಷಿಸಲಾಗಿದೆ. ಇದು ಪುಡಿ ರೂಪದಲ್ಲಿದ್ದು ಸುಲಭವಾಗಿ ನೀರಿನೊಂದಿಗೆ ಮಿಶ್ರಮಾಡಿ ತೆಗೆದುಕೊಳ್ಳಬಹುದು. ಇದರ ಉತ್ಪಾದನೆಯೂ ಲಸಿಕೆಯಷ್ಟು ಸಂಕೀರ್ಣವಲ್ಲ. ಅದಕ್ಕೂ ಮುಖ್ಯವಾಗಿ ಇದನ್ನು ಮಕ್ಕಳಿಗೆ ಸಹ ನೀಡಬಹುದು. ಕೊರೊನಾ ಮೂರನೇ ಅಲೆ ಮಕ್ಕಳಿಗೆ ಮಾರಕ ಎಂಬ ಸುದ್ಧಿಗಳು ಬರುತ್ತಿರುವುದನ್ನು ಗಮನಿಸಿದರೆ ಇದು ಆಪದ್ಭಾಂಧವ ಎನ್ನುವುದರಲ್ಲಿ ಸಂಶಯವಿಲ್ಲ.
ಸೋಂಕಿತರನ್ನು ವೇಗವಾಗಿ ಗುಣಪಡಿಸುವುದರ ಜೊತೆಗೆ ಆಕ್ಸಿಜನ್ ಕೃತಕವಾಗಿ ಪಡೆಯಬೇಕಾದಂತಹ ಹಂತವನ್ನು ರೋಗಿಗೆ ಬರದಂತೆ ತಡೆಯುತ್ತದೆ. ವರ್ಷದ ಹಿಂದೆ ಬಾಬಾ ರಾಮ್‌ದೇವ್ ಅವರ ನೇತೃತ್ವದ ಪತಂಜಲಿ ಸಂಸ್ಥೆಯೂ ಈ ಔಷಧ ಪರಿಣಾಮಕಾರಿ ಎಂಬುದನ್ನು ಸೂಚಿಸಿದ್ದನ್ನು ಇಲ್ಲಿ ಗಮನಿಸಬಹುದು. ಆದರೆ ಬಹುಶಃ ಈಗಿನ ವೈದ್ಯಕೀಯ ನಿಯಮಗಳಿಗನಸಾರ ಅದನ್ನು ಪ್ರತಿಪಾದಿಸುವಲ್ಲಿ ಆ ಸಂಸ್ಥೆ ಯಶಸ್ವಿಯಾಗಲಿಲ್ಲ ಎನಿಸುತ್ತದೆ. ತನ್ನ ವೈಜ್ಞಾನಿಕ ಪರಿಣಿತಿಯಿಂದಾಗಿ ಡಿಆರ್‌ಡಿಒ ಸಂಸ್ಥೆಯು 2ಡಿಜಿ ಔಷಧಿಗೆ ಮಾನ್ಯತೆ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸೇವಿಸಿದ ಕೂಡಲೇ ದೇಹದಲ್ಲಿರುವ ಕೊರೊನಾ ವೈರಸ್ ಅನ್ನು ಗುರುತಿಸಿ ನಾಶಪಡಿಸುವ 2ಡಿಜಿಯು ವೈರಸ್‌ನ ಹರಡುವಿಕೆಯನ್ನು ಶೀಘ್ರವಾಗಿ ನಿಯಂತ್ರಿಸುತ್ತದೆ. ಡಿಆರ್‌ಡಿಒ ದ ನ್ಯೂಕ್ಲಿಯರ್ ಮತ್ತು ಅಲೈಡ್ ಸೈನ್ಸಸ್ ವಿಭಾಗವು ಡಾ.ರೆಡ್ಡಿಸ್ ಲ್ಯಾಬ್ ಜೊತೆ ಸೇರಿ ಇದರ ಸಂಶೋಧನೆ ನಡೆಸಿದೆ. ದೊಡ್ಡಪ್ರಮಾಣದಲ್ಲಿ ಮತ್ತು ಸುಲಭದಲ್ಲಿ ತಯಾರಿಸಬಹುದಾದ ಈ ಔಷಧಿ ಶೀಘ್ರವೇ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗುತ್ತದೆ ಎಂಬುದು ಡಿಆರ್‌ಡಿಒ ಹೇಳಿಕೆ.
ಅಮೆರಿಕಾ ಅಧ್ಯಕ್ಷರಾಗಿದ್ದ ಟ್ರಂಪ್‌ರನ್ನು ಮೂರೇದಿನದಲ್ಲಿ ಗುಣಪಡಿಸಿದ್ದು ಎಂದು ಹೇಳಲಾದ ಆಂಟಿಬಾಡಿ ಕಾಕ್‌ಟೇಲ್ ಔಷಧಿಯಂತಹ ಅನೇಕ ಪರಿಹಾರಗಳು ಸಾಮಾನ್ಯ ಜನರ ಕೈಗೆಟುಕದ ದುಬಾರಿ ಪರಿಹಾರಗಳಾಗಿರುವ ಸಂದರ್ಭದಲ್ಲಿ ಮಿತವೆಚ್ಚದ ೨ಡಿಜಿ ಔಷಧಿಯ ಮಹತ್ವ ಏನೆಂದು ವಿವರಿಸಬೇಕಾದ ಅಗತ್ಯವಿಲ್ಲ. ಸೋಂಕನ್ನು ದೂರಗೊಳಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಇದರ ಗುಣ. ಕೊರೊನಾ ಲಸಿಕೆ ಎಲ್ಲರನ್ನೂ ತಲುಪುವ ಮುನ್ನವೇ ಅವರು ಸೋಂಕಿಗೆ ಒಳಗಾಗದಂತೆ ಒಮ್ಮೆ ಕೊರೊನಾ ಸೋಂಕಿಗೆ ಒಳಗಾದರೂ ಪ್ರಾಣಾಪಾಯಕ್ಕೊಳಗಾಗದಂತೆ ಅಮೃತಸ್ವರೂಪವಾಗಿ 2ಡಿಜಿ ಔಷಧಿ ಹೊರಬಂದಿದೆ. ಈ ಅಮೃತ ಮಂಥನದಲ್ಲಿ ಪಾಲ್ಗೊಂಡ, ಅದ್ಭುತವನ್ನು ಸಾಧ್ಯಗೊಳಿಸಿದ ಎಲ್ಲರೂ ಅಭಿನಂದನೆಗೆ, ಜಗತ್ತಿನ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.