
ಇಂದು ಬೆಳಗ್ಗೆ ಬೆಂಗಳೂರಿನ ಜನ ಆಕಾಶದಲ್ಲಿ ವಿಚಿತ್ರ ಸಂಗತಿಯೊಂದನ್ನು ಗಮನಿಸಿದರು. ಇಂತಹದ್ದೇ ಘಟನೆ 2018ರ ಸೆಪ್ಟೆಂಬರ್ 24ರ ಮಧ್ಯಾಹ್ನ 1ರ ಹೊತ್ತಿಗೆ ಶಿವಮೊಗ್ಗದಲ್ಲಿಯೂ ಕಂಡುಬಂದಿತ್ತು. ಅದೇನೆಂದರೆ ಆಕಾಶದಲ್ಲಿ ಸೂರ್ಯನ ಸುತ್ತ ಒಂದು ದೊಡ್ಡ ಬೆಳಕಿನ ವೃತ್ತ ಬರೆಯಲ್ಪಟ್ಟಿತ್ತು. ದೊಡ್ಡದೆಂದರೆ ನಿಜಕ್ಕೂ ದೊಡ್ಡದೇ. ಒಕ್ಕಣ್ಣಿನಲ್ಲಿ ನೋಡಿದರೆ, ಸೂರ್ಯನ ಮೇಲೆ ಹೆಬ್ಬೆರಳಿಟ್ಟು ಅಂಗೈ ಬಿಡಿಸಿದರೆ ಆ ವೃತ್ತದ ಅಂಚನ್ನು ಮುಟ್ಟಲು ಕಿರುಬೆರಳನ್ನು ನೀಳವಾಗಿ ಅಗಲಿಸಬೇಕಿತ್ತು, ಅಷ್ಟು ದೊಡ್ಡದು. ಸೂಕ್ಷ್ಮವಾಗಿ ಗಮನಿಸಿದರೆ ಆ ಬಳೆಯ ಮೇಲೆ ಕೆಂಪು, ಹಸಿರು, ಹಳದಿ, ನೀಲಿ ಬಣ್ಣಗಳೆಲ್ಲ ಕಂಡೂಕಾಣದಂತೆ ಮೆತ್ತಿಕೊಂಡಿದ್ದವು. ಕಾಮನಬಿಲ್ಲಿನಷ್ಟು ಅಗಲವಲ್ಲವಾದರೂ ಈ ಬಳೆಯ ಪ್ರಕಾಶ ಗಮನೀಯವಾಗಿತ್ತು. ಇಷ್ಟು ದಿನ ಅರ್ಧವೃತ್ತಾಕಾರದ ಕಾಮನಬಿಲ್ಲು ನೋಡುತ್ತಿದ್ದೆವು, ಇವೊತ್ತು ಪೂರ್ತಿ ವೃತ್ತ ಕಾಣುತ್ತಿದೆ ಎಂದು ಕೆಲವರು ಸಂಭ್ರಮಪಟ್ಟರು. ಆದರೆ ಇನ್ನು ಕೆಲವರು ಗಾಬರಿಗೊಂಡರು. ಇದೇನೋ ಕೆಟ್ಟ ಘಟನೆಯ ಮುನ್ಸೂಚನೆ ಇರಬಹುದೆ? ಭೂಮಿಯಲ್ಲೀಗ ಪ್ರಳಯ ಆಗಬಹುದೆ? ಭೂಕಂಪ ಸಂಭವಿಸೀತೆ? ಎಂದೆಲ್ಲ ಚಿತ್ರವಿಚಿತ್ರ ಯೋಚನೆಗಳು ಮನಸ್ಸಿನಲ್ಲೆದ್ದವು. ಪತ್ರಿಕಾ ಕಚೇರಿಗಳ ಟೆಲಿಫೋನುಗಳು ನಿರಂತರ ರಿಂಗಣಿಸಿದವು.
ದಿನಂಪ್ರತಿ ನಡೆಯುವ ವಿದ್ಯಮಾನಗಳು ನಮ್ಮ ಕುತೂಹಲವನ್ನೇನೂ ಕೆರಳಿಸುವುದಿಲ್ಲ. ದಿನವೂ ಸೂರ್ಯ ಮೂಡುತ್ತಾನೆ, ಮುಳುಗುತ್ತಾನೆ, ಗಾಳಿ ಯಥಾಪ್ರಕಾರ ಬೀಸುತ್ತದೆ, ಮಳೆ ಬೀಳುತ್ತದೆ, ಹಕ್ಕಿ ಕಿರಲುತ್ತದೆ. ಇವುಗಳಿಂದ ನಾವೇನೂ ವಿಚಲಿತರಾಗುವುದಿಲ್ಲ. ಆದರೆ ಸೂರ್ಯನ ಸುತ್ತ ಪೂರ್ಣ ವೃತ್ತಾಕಾರದ ಬಳೆ ಮೂಡುವಂಥ ವೈಚಿತ್ರ್ಯಗಳನ್ನು ಕಂಡಾಗ ಮನಸ್ಸು ಗಲಿಬಿಲಿಗೊಳ್ಳುವುದು ಸಹಜ. ಕಾಮನಬಿಲ್ಲು ಕಂಡವರಿಗೆ ಇದು ಅದಲ್ಲ ಎಂಬುದು ತಿಳಿಯದ್ದೇನಲ್ಲ. ಇದು ಅದಲ್ಲ ಎಂಬುದೂ ಅವರ ಭಯ ಹೆಚ್ಚಲು ಕಾರಣವಾಗಬಹುದು! ಹಾಗಾದರೆ ಸೂರ್ಯನ ಸುತ್ತ ಕಾಣಿಸಿಕೊಂಡ ಆ ಬಳೆ ಯಾವುದು? ಏಕದು ಕಂಡಿತು? ನೋಡೋಣ!
ಈ ವಿದ್ಯಮಾನ ಅಷ್ಟೇನೂ ಅಪರೂಪದ್ದಲ್ಲ. ಹಳ್ಳಿಗರು ಇದನ್ನು ಹಲವು ಬಾರಿ ಕಂಡಿದ್ದಾರೆ. ಕೆಲವರು ಇದನ್ನು ಸೂರ್ಯಗುಡಿ ಎನ್ನುತ್ತಾರೆ. ಸೂರ್ಯನ ಸುತ್ತ ಬಳೆಯಾಕಾರಾದ ವೃತ್ತ ಮೂಡಿದರೆ “ಗುಡಿ ಕಟ್ಟಿದೆ” ಎಂಬ ಮಾತು ಹಳ್ಳಿಗಳಲ್ಲಿ ಸಾಮಾನ್ಯ. ಸೂರ್ಯನಿಗೆ ಮಾತ್ರವಲ್ಲ ಚಂದ್ರನಿಗೂ ಗುಡಿ ಕಟ್ಟುತ್ತದೆ. ಸೂರ್ಯನ ಸುತ್ತ ಗುಡಿ ಕಟ್ಟಿದಾಗ, ಅದು ಆತನ ಸುತ್ತ ಹಬ್ಬಿದ ಪ್ರಭಾವಳಿಯಂತೆಯೂ ಕಾಣುತ್ತದೆ; ಬಿಡಿಸಿಟ್ಟ ಛತ್ರಿಯಂತೆಯೂ ಗೋಚರಿಸುತ್ತದೆ. ಕೆಲವು ಕಡೆ ಇದನ್ನು ಸೂರ್ಯನ ಕೊಡೆ/ಛತ್ರಿ ಎಂದೂ ಗುರುತಿಸುವುದುಂಟು. ಆದರೆ ಇದು ಕಾಮನಬಿಲ್ಲಲ್ಲ; ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂಬುದು ಸೂಕ್ಷ್ಮ ವೀಕ್ಷಣೆಗಳಿಂದ ಗೊತ್ತಾಗಬಹುದು. ಹೇಗೆ ಗೊತ್ತೆ? ಕಾಮನಬಿಲ್ಲು/ಮಳೆಬಿಲ್ಲು/ಇಂದ್ರಚಾಪ ಎಂದೆಲ್ಲ ಕರೆಸಿಕೊಳ್ಳುವ ವರ್ಣಮಯ ವಿದ್ಯಮಾನ ಘಟಿಸುವುದು ಒಂದೋ ಮುಂಜಾನೆ 9ರ ಒಳಗೆ; ಇಲ್ಲವೇ ಸಂಜೆ 4ರ ನಂತರ. ಸೂರ್ಯ ಪೂರ್ವದಲ್ಲಿ ಮೂಡಿಬಂದಾಗ ಮಳೆಬಿಲ್ಲು ಪಶ್ಚಿಮದ ಬಾನ ಪರದೆಯ ಮೇಲೆ ಮೂಡುತ್ತದೆ. ಸಂಜೆ ಸೂರ್ಯ ಪಶ್ಚಿಮದ ರಂಗಸ್ಥಳದಲ್ಲಿ ಕುಣಿಯುವಾಗ ಮಳೆಬಿಲ್ಲು ಪೂರ್ವದ ಪರದೆಯಲ್ಲಿ ಗೋಚರಿಸುತ್ತದೆ. ಬೆಳಗ್ಗೆ ಅಥವಾ ಸಂಜೆ – ಯಾವುದೇ ಇರಲಿ, ವೀಕ್ಷಕನು (ಅಂದರೆ ಭೂಮಿಯ ಮೇಲಿರುವ ನಾವು) ಸೂರ್ಯ ಮತ್ತು ಮಳೆಬಿಲ್ಲ ಮಧ್ಯದಲ್ಲಿ ಇರುತ್ತಾನೆ. ಯಾಕೆಂದರೆ ಕಾಮನಬಿಲ್ಲು ಉಂಟಾಗುವುದೇ ಸೂರ್ಯನ ಕಿರಣಗಳು ವೀಕ್ಷಕನ ಕಣ್ಣೆದುರಿನಲ್ಲಿ ಸಂಚರಿಸುವ ಮೋಡಗಳೊಳಗಿನ ನೀರಹನಿಗಳ ಮೇಲೆ ಬಿದ್ದು ಪ್ರತಿಫಲಿಸಿ, ವಕ್ರೀಭವಿಸಿ ಬರುವ ಕಿರಣಗಳಿಂದ. ಆದರೆ ಸೂರ್ಯಗುಡಿ ಮೂಡುವುದು ಹೆಚ್ಚಾಗಿ ಮಧ್ಯಾಹ್ನದ ಸಂದರ್ಭದಲ್ಲಿ – ಸೂರ್ಯ ಬಾನಲ್ಲಿ ಸಾಕಷ್ಟು ಎತ್ತರಕ್ಕೆ ಏರಿದ ಹೊತ್ತಲ್ಲಿ. ಮತ್ತು ಇಲ್ಲಿ ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಅಲ್ಲ; ಸೂರ್ಯನಿರುವ ದಿಕ್ಕಿನಲ್ಲೇ ಬಳೆ ಮೂಡುತ್ತದೆ. ಇದೆಲ್ಲಕ್ಕಿಂತ ಮಹತ್ವದ ಇನ್ನೊಂದು ವ್ಯತ್ಯಾಸ ಮಳೆಬಿಲ್ಲಿಗೂ ಸೂರ್ಯಗುಡಿಗೂ ಇದೆ. ಅದೇನೆಂದರೆ ಬಿಲ್ಲಿನಲ್ಲಿ ಎಲ್ಲಕ್ಕಿಂತ ಹೊರಗೆ ಕಾಣಿಸಿಕೊಳ್ಳುವುದು ಕೆಂಪು ಬಣ್ಣವಾದರೆ, ಬಿಲ್ಲಿನ ಒಳಭಾಗದಲ್ಲಿ – ಎಲ್ಲಕ್ಕಿಂತ ಕೆಳಗೆ ಮೂಡುವುದು ನೇರಿಳೆ ಬಣ್ಣ. ಆದರೆ ಸೂರ್ಯಗುಡಿಯ ವೃತ್ತದ ಒಳಭಾಗದಲ್ಲಿ ಕೆಂಪೂ, ಹೊರ ಅಂಚಲ್ಲಿ ನೇರಿಳೆ ಬಣ್ಣವೂ ಮೂಡುತ್ತವೆ. ಯಾಕೆ ಹೀಗೆ?

ಸೂರ್ಯಗುಡಿ ಸೃಷ್ಟಿಯಾಗುವುದು ಸೂರ್ಯನ ಕಿರಣಗಳು ಮೋಡದಲ್ಲಿರುವ ಮಂಜುಗಟ್ಟಿದ ನೀರಿನ ಸ್ಫಟಿಕಗಳ ಮೇಲೆ ಬಿದ್ದಾಗ. ಮೋಡಗಳು – ಭೂಮಿಯ ಮೇಲೆ ನಿಂತಿರುವ ನಮಗೇನೋ ಅರಳೆಯ ಮೂಟೆಯೊಂದು ತೇಲುತ್ತಹೋದಂತೆ ಭಾಸವಾದೀತು. ಆದರೆ ವಾಸ್ತವದಲ್ಲಿ ಒಂದೊಂದು ಮೋಡವೂ ಒಂದು ದೊಡ್ಡ ನೀರಿನ ತೊಟ್ಟಿ! ಜಲಾಶಯ! ಮೋಡಗಳು ಭೂಮಿಯ ತೀರ ಹತ್ತಿರದ ವಾತಾವರಣದಿಂದ ಸ್ವಲ್ಪ ಮೇಲೆ ಹೋದಾಗ ಅಲ್ಲಿನ ಶೈತ್ಯಕ್ಕೆ ಹಿಮಗಟ್ಟುತ್ತವೆ. ನೀರಿನ ಹನಿಗಳೆಲ್ಲವೂ ಪುಟ್ಟ ಪುಟ್ಟ ಮಂಜುಗಡ್ಡೆಯ ಸ್ಫಟಿಕಗಳಾಗುತ್ತವೆ. ಮೋಡಗಳಲ್ಲಿ ಸಂಚಯವಾಗಿರುವ ಲಕ್ಷಾಂತರ ಸಂಖ್ಯೆಯ ಈ ಸ್ಫಟಿಕಗಳು – ಒಂದೊಂದೂ ಷಡ್ಭುಜಾಕಾರದ ಶಲಾಕೆಗಳು. ಅಂದರೆ ಒಂದೇ ಒಂದು ಸ್ಫಟಿಕವನ್ನು ಕೈಗೆತ್ತಿಕೊಂಡರೆ ಅದಕ್ಕೆ ಇರುವುದು ಒಟ್ಟು 8 ಮೈ. ಪಾರ್ಶ್ವದಲ್ಲಿ ಆರು (ಪ್ರತಿಯೊಂದೂ ಆಯತಾಕಾರದ) ಮುಖಗಳು. ಆಚೀಚೆಗೆ ಎರಡು ಷಡ್ಭುಜಾಕಾರದ ಮುಖಗಳು. ಈ ಸ್ಫಟಿಕ ಶಲಾಕೆಯ ಮೇಲೆ ಸೂರ್ಯನ ಕಿರಣ ಬಿದ್ದಾಗ ಅದು ಎರಡು ಬಗೆಯಲ್ಲಿ ವಕ್ರೀಭವನಕ್ಕೆ ಒಳಗಾಗಬಹುದು. ಒಂದೋ ಅದು ಆಯತಾಕಾರದ ಒಂದು ಮುಖದ ಮೇಲೆ ಬಿದ್ದು ವಕ್ರೀಭವಿಸಿ ಮೂರನೇ ಮುಖದಲ್ಲಿ ಹೊರಹಾಯಬಹುದು (ಚಿತ್ರ ಗಮನಿಸಿ). ಅಥವಾ ಆಯತಾಕಾರದ ಮುಖದ ಮೇಲೆ ಬಿದ್ದು ವಕ್ರೀಭವಿಸಿ ಷಡ್ಭುಜಾಕಾರದ ಮುಖದ ಮೂಲಕ ಹೊರಹೋಗಬಹುದು. ಈ ಎರಡು ಬಗೆಯ ವಕ್ರೀಭವನಗಳಲ್ಲಿ ಬೆಳಕು ಕ್ರಮವಾಗಿ 22 ಮತ್ತು 46 ಡಿಗ್ರಿಗಳಷ್ಟು ಬಾಗುತ್ತದೆ (ಇವನ್ನು ಬೆಳಕಿನ ವಿಪಥನ ಕೋನ ಎನ್ನುತ್ತಾರೆ). ಹೀಗೆ ವಕ್ರೀಭವಿಸಿ ಬರುವ ಕಿರಣಗಳೇ ನಮ್ಮ ಕಣ್ಣಿಗೆ ಬಣ್ಣದ ಬಳೆಯಾಗಿ ಗೋಚರಿಸುವುದು.
ಸೂರ್ಯಗುಡಿಯನ್ನು ಇಂಗ್ಲೀಷ್‍ನಲ್ಲಿ ಸೋಲಾರ್ ಹ್ಯಾಲೋ ಎನ್ನುತ್ತಾರೆ. 22 ಡಿಗ್ರಿ ಹ್ಯಾಲೋ ಎಂದೂ ಕರೆಯುವುದುಂಟು. ಯಾಕೆಂದರೆ ಸೂರ್ಯನ ಬೆಳಕಿನಲ್ಲಿರುವ ಏಳು ಬಣ್ಣಗಳ ಪೈಕಿ ಒಂದೊಂದರ ವಿಪಥನ ಕೋನವೂ ಬೇರೆ ಬೇರೆ. ಏಳರ ಪೈಕಿ ಕೆಂಪು ಬೆಳಕಿನ ವಿಪಥನ ಅತಿಕಡಿಮೆ. ಅದು ವಕ್ರೀಭವಿಸಿ ಬಾಗುವುದು 22 ಡಿಗ್ರಿಗಳಷ್ಟು ಮಾತ್ರ. ಅತಿ ಹೆಚ್ಚಿನ ವಿಪಥನ ಕೋನ ಇರುವುದು ನೇರಿಳೆ ಬಣ್ಣಕ್ಕೆ – 46 ಡಿಗ್ರಿಗಳಷ್ಟು. ಹಾಗಾಗಿ, ಕಡಿಮೆ ಬಾಗುವ ಕೆಂಪು ಬಣ್ಣ ಸೂರ್ಯಗುಡಿಯ ವೃತ್ತದ ಒಳಮೈಯಾದರೆ ಅತಿ ಹೆಚ್ಚು ವಿಪಥನ ತೋರುವ ನೇರಿಳೆ ಬಣ್ಣ ವೃತ್ತದ ಹೊರಮೈಯಲ್ಲಿ ಬರುತ್ತದೆ.
ಭೂಮಿಯಿಂದ ಮೇಲಕ್ಕೆ ಹೋದಂತೆ ಮೋಡಗಳು ಸ್ಫಟಿಕರೂಪಿಗಳಾಗುವುದು ಮಾಮೂಲು. ಆ ಪಾರಕ ಸ್ಫಟಿಕಗಳ ಮೂಲಕ ಸೂರ್ಯನ ಬೆಳಕು ಹಾದುಬಂದು ಬೆಳಕಿನ ಬಳೆಯನ್ನು ನಿರ್ಮಿಸುವುದು ಕೂಡ ವಿಶೇಷವೇನಲ್ಲ. ಆದರೆ ಆ ಬಳೆ ಯಾಕೆ ಪ್ರತಿಸಲ ನಮಗೆ ಕಾಣುವುದಿಲ್ಲ? ಬಹುತೇಕ ಸಂದರ್ಭಗಳಲ್ಲಿ, ಹರಳುಗಟ್ಟಿದ ಮೋಡಕ್ಕಿಂತ ಕೆಳಗೆ ಬೇರೆ ಮೋಡಗಳು ತೇಲುತ್ತಿರುತ್ತವೆ. ಹರಳುಗಟ್ಟಿದ ಮೋಡದ ಮೂಲಕ ಹಾದ ಸೂರ್ಯನ ಕಿರಣಗಳು ಬೆಳಕಿನ ಬಳೆ ನಿರ್ಮಿಸಿದರೂ ಅದನ್ನು ನೋಡುವ ಭಾಗ್ಯವನ್ನು ಈ ಬೇರೆ ಮೋಡಗಳು ನಮಗೆ ತಪ್ಪಿಸುತ್ತವೆ. ಹಾಗಾಗಿ ಯಾವಾಗಲೋ ಒಮ್ಮೆ ಶುಭ್ರ ಆಕಾಶದಲ್ಲಿ ಆ ಬಳೆ ಕಂಡಾಗ ನಾವು ಆಶ್ಚರ್ಯಚಕಿತರಾಗುತ್ತೇವೆ, ಗಲಿಬಿಲಿಗೊಳ್ಳುತ್ತೇವೆ. ಇದೇನೋ ವಿಶೇಷ ಘಟನೆಯ ಮುನ್ಸೂಚನೆ ಇರಬಹುದೆಂದು ತರ್ಕಿಸುತ್ತೇವೆ. ಕೆಲವೊಮ್ಮೆ ಬಳೆ ಕಾಣಿಸಿಕೊಂಡ ತುಸು ಹೊತ್ತಿನಲ್ಲಿ ಮಳೆ ಬರುವುದೂ ಉಂಟು. ಬಳೆಗೂ ಆ ಮಳೆಗೂ ನೇರಾನೇರ ಸಂಬಂಧವೇನಿಲ್ಲ! ಬಳೆ ಮೂಡಬೇಕಾದರೆ ಅಲ್ಲಿ ಮಂಜುಗಟ್ಟಿದ ಮೋಡಗಳಿರಬೇಕು. ಆ ಮೋಡಗಳು ಸಾಂದ್ರತೆಯ ಭಾರದಿಂದಾಗಿ ಕುಸಿದು ದೊಪದೊಪನೆ ನೀರಿನ ಹನಿಗಳಾಗಿ ಬೀಳತೊಡಗಿದರೆ ಅದೇ ಮಳೆ ಅಲ್ಲವೆ! ಆದ್ದರಿಂದ ಸೂರ್ಯಗುಡಿ ಕಾಣಿಸಿಕೊಂಡಾಗ ಮಳೆಯ ಸಾಧ್ಯತೆ ಹೆಚ್ಚು ಎನ್ನಬಹುದೇ ಹೊರತು, ಮಳೆ ಬಿದ್ದೇಬೀಳುತ್ತದೆಂದು ಖಚಿತವಾಗಿ ನುಡಿಯುವಂತಿಲ್ಲ. ಇನ್ನು, ಸೂರ್ಯಗುಡಿಯಂತೆಯೇ ಚಂದ್ರಗುಡಿ ಕೂಡ ಮೂಡುವುದುಂಟು (ಇಂದ್ರಚಾಪದಂತೆ ರಾತ್ರಿ ಮೂಡುವ ಚಂದ್ರಚಾಪವೂ ಉಂಟು!). ಸೂರ್ಯ ಮತ್ತು ಭೂಮಿಯ ನಡುವಿನ ಕೋನೀಯ ಅಂತರ ಕಡಿಮೆಯಾದಂತೆ (ಅಂದರೆ ಸೂರ್ಯ ನೆತ್ತಿಯಿಂದ ಇಳಿಯುತ್ತ ಬಂದಂತೆ) ಸೂರ್ಯಗುಡಿಯೂ ಮರೆಯಾಗುತ್ತದೆ.

ಸೂರ್ಯಗುಡಿ ಅಥವಾ ಸೂರ್ಯನ ಬಳೆ ಆಕಾಶದಲ್ಲಿ ಮೂಡಿದಾಗ ಭಯಪಡುವ ಅಗತ್ಯ ಇಲ್ಲ. ಆದರೆ ಅದನ್ನು ನೇರವಾಗಿ ನೋಡುವ ಪ್ರಯತ್ನ ಅಷ್ಟೊಂದು ಒಳ್ಳೆಯದಲ್ಲ. ಕಾಮನಬಿಲ್ಲು ಕಂಡಾಗ ಕಣ್ತುಂಬಿಕೊಳ್ಳಬಹುದು – ಯಾಕೆಂದರೆ ಅಲ್ಲಿ ಸೂರ್ಯ ನಿಮ್ಮ ಬೆನ್ನ ಹಿಂದಿರುತ್ತಾನೆ. ಆದರೆ ಸೂರ್ಯಗುಡಿ ಮೂಡಿದಾಗ ಬಳೆಯೂ ಸೂರ್ಯನೂ ಒಂದೇ ದಿಕ್ಕಿನಲ್ಲಿರುತ್ತಾರೆ ಎಂಬುದು ಗಮನದಲ್ಲಿರಲಿ. ಕ್ಯಾಮೆರಾದಲ್ಲಿ ಸೆರೆಹಿಡಿಯಬಹುದಲ್ಲವೆ ಎನ್ನುತ್ತೀರಾ? ಅದೂ ಅಷ್ಟು ಒಳ್ಳೆಯದಲ್ಲ. ಅತಿನೇರಳೆ, ಆವಕೆಂಪು ಕಿರಣಗಳಿಗೆ ಪಕ್ಕಾಗಿ ಲೆನ್ಸ್ ಹಾಳಾಗುವ ಸಂಭವವಿದೆ. ನೀರಿನ ಬಟ್ಟಲಲ್ಲಿ ಸೂರ್ಯನ ಈ ಚಂದದ ಪ್ರಭಾವಳಿಯನ್ನು ಕಂಡು ಸಂತೋಷಪಡುವುದು ಕಣ್ಣುಗಳಿಗೆ ಆರೋಗ್ಯಕರ.