ಆರ್ಯನ್ನರು ಮತ್ತು ದ್ರಾವಿಡರು
ಭಾರತದಲ್ಲಿ ಅರ್ಥೈಸಿಕೊಳ್ಳಲು, ವಿಮರ್ಶೆಗೆ ಒಳಪಡಿಸಲು,ಒರೆಗಚ್ಚಲು ಸಾಕಷ್ಟು ವಿಚಾರಗಳಿವೆ. ಇಂತಹ ವಿಚಾರಗಳ ಅಧ್ಯಯನಕ್ಕಾಗಿ ಭಾರತದಾದ್ಯಂತ ಪಯಣಿಸುತ್ತಿರುವ ನಾನು, ಆರ್ಯನ್ನರು ಮತ್ತು ದ್ರಾವಿಡ ವಿಭಜನೆಗಳ ಬಗ್ಗೆ ಅರಿತುಕೊಳ್ಳಲು ದಕ್ಷಿಣ ಭಾರತದಲ್ಲೇ ಹೆಚ್ಚಿನ ಸಮಯ ಕಳೆದಿದ್ದೇನೆ.
ಶುದ್ಧ ದ್ರಾವಿಡ ಸಂಸ್ಕೃತಿಯ ನೆಲೆ ಎಂದು ಕರೆಯಲ್ಪಡುವ ತಮಿಳುನಾಡು ನನ್ನ ಅಧ್ಯಯನಕ್ಕೆ ರೂಪುರೇಶೆ ಒದಗಿಸಿದೆ.
ಇಲ್ಲಿ ಮೊದಲಿಗೆ ಗಮನಿಸಬೇಕಾದ ವಿಚಾರವೆಂದರೆ ಶುದ್ಧ ದ್ರಾವಿಡರ ನೆಲೆ ಎನ್ನುವ ತಮಿಳುನಾಡಿನಲ್ಲೂ ಬಹುತೇಕ ಹೆಸರುಗಳು ಶುದ್ಧ ಸಂಸ್ಕೃತದ್ದೇ ಆಗಿದೆ. ಇದನ್ನು ಪ್ರಖ್ಯಾತ ದ್ರಾವಿಡ ರಾಜಕೀಯ ನಾಯಕರಾದ ಜಯಲಲಿತಾ, ಕರುಣಾನಿಧಿ ಅಂತಹವರ ಹೆಸರುಗಳನ್ನು ಗಮನಿಸಿದರೆ ತಿಳಿದುಬರುತ್ತದೆ. ಇದು ಕೇವಲ ಮೊದಲ ಉದಾಹರಣೆ ಅಷ್ಟೇ, ದಕ್ಷಿಣ ಹಾಗೂ ಉತ್ತರದ ಸಂಸ್ಕೃತಿಯ ನಡುವೆ ಸಂಪರ್ಕ ಬೆಸೆದಿರುವ ಇಂತಹ ಸಾಮ್ಯತೆ ಇರುವ ಅನೇಕ ವಿಚಾರಗಳು ಕಾಣಸಿಗುತ್ತವೆ.
ದೇಶದಲ್ಲಿ ಪ್ರಾಚೀನ ವೈದಿಕ ಬೋಧನೆಗಳನ್ನ ಇಂದಿಗೂ ಜೀವಂತವಾಗಿರಿಸಿರುವ ಹಾಗೂ ವೈದಿಕ ಆಚರಣೆಗಳು,ಯುಜ್ಞಗಳು ಸೇರಿದಂತೆ ಪ್ರಾಚೀನ ವಿಷಯಗಳನ್ನು ಭಕ್ತಿಯಿಂದ ಹಿಂದಿನಂತೆಯೇ ಅನುಸರಿಸುತ್ತಿರುವ ಸಂಪ್ರದಾಯವನ್ನು ಕೇರಳದಲ್ಲಿ ನೀವು ಕಾಣಬಹುದು. ಅಷ್ಟೇ ಅಲ್ಲದೆ, ದಕ್ಷಿಣ ಭಾರತದ ದೇಗುಲಗಳೂ ಕೂಡ ಉತ್ತರ ಭಾರತದಂತೆ ಶಿವ, ವಿಷ್ಣು, ದೇವಿ, ಗಣೇಶನಂತಹ ಮಹಾನ್ ದೇವತೆಗಳಿಗೆ ಸಮರ್ಪಿಸಲ್ಪಟ್ಟಿವೆ. ದಕ್ಷಿಣದ ದೇಗುಲಗಳಲ್ಲೂ ಅದೇ ಸಂಸ್ಕೃತ ಪಠಣಗಳೊಂದಿಗೆ ಪೂಜೆ ನೆರವೇರಿಸಲಾಗುತ್ತದೆ ಜತೆಗೆ ತಮಿಳಿನ ಕೆಲವು ಪಠಣಗಳು ಸೇರ್ಪಡೆಗೊಂಡಿರುತ್ತವೆ. ಉತ್ತರದಲ್ಲಿಯೂ ಹೀಗೆ ಸಂಸ್ಕೃತದ ಅದೇ ಪಠಣಗಳ ಮೂಲಕ ಪೂಜೆ ನಡೆಸಲಾಗುತ್ತದೆ,ಅಲ್ಲದೆ ಅಲ್ಪ ಮಟ್ಟದ ಹಿಂದಿಯಲ್ಲಿನ ಪಠಣಗಳು ಸೇರಿರುತ್ತವೆ.
—
ಶಿವನು ದ್ರಾವಿಡ ದೇವರೇ ?
ದ್ರಾವಿಡ ರಾಷ್ಟ್ರೀಯ ವಾದಿಗಳ ಪ್ರಕಾರ ಶಿವ ದ್ರಾವಿಡರ ದೇವರಾಗಿದ್ದು, ಉತ್ತರದ ಆರ್ಯನ್ನರು ದ್ರಾವಿಡರನ್ನು ನೋಡಿಯೇ ಶಿವನನ್ನು ಆರಾಸಲು ಆರಂಭಿಸಿದರು ಎನ್ನುತ್ತಾರೆ. ಆದರೆ, ಉತ್ತರದ ವಾರಣಾಸಿ, ಕಾಶ್ಮೀರ, ಕೇದಾರನಾಥ ಮತ್ತು ಕೈಲಾಸದಂತಹ ಪ್ರದೇಶಗಳಲ್ಲಿ ಆದಿ ದೇವನೇ ಶಿವನೆಂದು ಆರಾಸಲಾಗುತ್ತಿದ್ದು, ವಾರಣಾಸಿ ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಇದರ ಜತೆಗೆ ಶಿವನ ತೆಲೆಯಿಂದ ಗಂಗೆ ಕೆಳಗೆ ಇಳಿಯುತ್ತಾಳೆ ಎಂಬ ಕಲ್ಪನೆಗೆ ಹಿಮಾಲಯದಿಂದ ಹರಿಯುವ ಗಂಗಾನದಿ ಸಾಕ್ಷಿ ಒದಗಿಸಿದೆ. ಮತ್ತೊಂದೆಡೆ ಕಳೆದ ೧,೫೦೦ ವರ್ಷಗಳಲ್ಲಿ ದೇಶಕಂಡ ಮಹಾನ್ ವೇದಜ್ಞಾನಿಗಳು ದಕ್ಷಿಣದವರೇ ಆಗಿದ್ದು,ಈ ಪೈಕಿ ಅದ್ವೈತ ವೇದಾಂತದ ಶಂಕರಾಚಾರ್ಯರು, ವಿಶಿಷ್ಟಾದ್ವೈತ ವೇದಾಂತದ ರಾಮಾನುಜಾಚಾರ್ಯರು ಮತ್ತು ದ್ವೈತ ವೇದಾಂತ ಪ್ರತಿಪಾದಕರಾದ ಮಧ್ವಾಚಾರ್ಯರು ಸೇರಿದ್ದಾರೆ. ಉತ್ತರದಲ್ಲಿರುವ ಹಿಂದೂಗಳ ೪ ಪವಿತ್ರ ಪುಣ್ಯಕ್ಷೇತ್ರಗಳು ಎನ್ನಲಾಗುವ ಚಾರ್‌ಧಾಮ್‌ಗಳಲ್ಲಿ ಒಂದು ದೇಗುಲವನ್ನು ದ್ರಾವಿಡ ಕೇರಳದ ಮಹಾನ್ ಗುರು ಶ್ರೀ ಶಂಕರಚಾರ್ಯರು ಸ್ಥಾಪಿಸಿದ್ದಾರೆ ಎಂದು ಹೇಳಲಾಗುತ್ತದೆ. ಇದಷ್ಟೇ ಅಲ್ಲದೇ,ಹಿಮಾಲಯದ ಅನೇಕ ದೇಗುಲಗಳನ್ನು ದಕ್ಷಿಣದ ಕೆಲ ಪುರೋಹಿತ ಕುಟುಂಬಗಳೇ ನಡೆಸುತ್ತಿವೆ. ಇಂದಿಗೂ ಬದರಿನಾಥ ದೇಗುಲದ ಮುಖ್ಯ ಅರ್ಚಕರನ್ನು ಕೇರಳ ಕುಟುಂಬದಿಂದಲೇ ಆರಿಸಬೇಕೆಂಬ ಆಚರಣೆ ಅಸ್ತಿತ್ವದಲ್ಲಿದೆ.
—
ತಮಿಳು ಮತ್ತು ಸಂಸ್ಕೃತ
ತಮಿಳು ಮತ್ತು ಸಂಸ್ಕೃತ ಬೇರೆ ಬೇರೆ ಭಾಷೆಗಳಾಗಿದ್ದರೂ, ದಕ್ಷಿಣ ಭಾರತದಲ್ಲಿ ಈ ಎರಡೂ ಭಾಷೆಗಳನ್ನು ಒಟ್ಟಿಗೆ ಬಳಸಲಾಗಿದೆ. ತಮಿಳು ಲಿಪಿಗೆ ಗ್ರಂಥ ಲಿಪಿಯ ಎರವಲು ಪಡೆದುಕೊಳ್ಳಲಾಗಿದ್ದು, ಈ ಗ್ರಂಥ ಲಿಪಿಯು ಉತ್ತರ ಭಾರತದ ಬ್ರಾಹ್ಮಿ ಲಿಪಿಯಿಂದ ಹುಟ್ಟಿಕೊಂಡಿದೆ ಹಾಗೂ ೨,೫೦೦ ವರ್ಷಗಳ ಹಿಂದೆಯೇ ಈ ಲಿಪಿ ಶ್ರೀಲಂಕಾವನ್ನು ತಲುಪಿತ್ತು ಎನ್ನುತ್ತದೆ ಇತಿಹಾಸ. ಇದಲ್ಲದೇ, ದಕ್ಷಿಣ ಭಾರತದಲ್ಲಿ ಸಂಸ್ಕೃತ ಕಲಿಕೆಗೆ ಹೆಚ್ಚಿನ ಉತ್ತೇಜನವಿದ್ದು, ಭಾರತದಾದ್ಯಂತ ಹಿಂದೂ ಆಚರಣೆಗಳಲ್ಲಿ ಬಳಸಲಾಗುವ ಅನೇಕ ಪಠಣಗಳಲ್ಲಿ ಸಂಸ್ಕೃತ ಅಡಗಿದೆ “ಭಜ ಗೋವಿಂದಂ”ನಿಂದ ಗಂಗಾ ಸ್ತೋತ್ರದವರೆಗೆ ಸಂಸ್ಕೃತ ಹಿಂದೂಗಳ ಪದ್ಧತಿಗಳಲ್ಲಿ ಒಂದಾಗಿದೆ.
—
ವೈದಿಕ ಸಂಸ್ಕೃತಿಯ ಭದ್ರಕೋಟೆ ದಕ್ಷಿಣ ಭಾರತ
ಸ್ವಾಮಿ ದಯಾನಂದ, ಸ್ವಾಮಿ ಚಿನ್ಮಯಾನಂದ ಮತ್ತು ರಮಣ ಮಹರ್ಷಿ ಸೇರಿದಂತೆ ಆಧುನಿಕ ಕಾಲದ ಅನೇಕ ಮಹಾನ್ ಅಧ್ಯಾತ್ಮ ಗುರುಗಳು ದಕ್ಷಿಣದವರಾಗಿದ್ದು, ಆಯುರ್ವೇದ ಔಷಧಗಳ ಅಧ್ಯಯನ, ಅಧ್ಯಾತ್ಮ ಸಂಪ್ರದಾಯಗಳ ಅಧ್ಯಯನಕ್ಕೆ ಆಧುನಿಕ ಕಾಲದಲ್ಲಿ ಬುನಾದಿ ಹಾಕಿಕೊಟ್ಟಿದ್ದಾರೆ. ಇದಲ್ಲದೇ, ದಕ್ಷಿಣ ಭಾರತದ ದೇಗುಲಗಳು, ಮಠಗಳು, ಅಧ್ಯಾತ್ಮ ಚಿಂತಕರ ದರ್ಶನಕ್ಕೆ ಜನಪೂರವೇ ಹರಿದುಬರುತ್ತದೆ. ಇದೇ ಪ್ರವಾಸೋದ್ಯಮದ ಕೇಂದ್ರವೂ ಆಗಿದೆ.ಜತೆಗೆ ಸಾಂಪ್ರದಾಯಿಕ ನೃತ್ಯ ,ಭರತನಾಟ್ಯ ಸೇರಿದಂತೆ ದಕ್ಷಿಣದಲ್ಲಿ ಹಿಂದೂ ಸಂಸ್ಕೃತಿಯ ಕಲೆಗಳನ್ನು ಜೀವಂತವಾಗಿರಿಸಲಾಗಿದ್ದು, ಉತ್ತರದಲ್ಲಿ ಖಾನ್‌ಗಳ ಪ್ರಾಬಲ್ಯವಿರುವ ಚಿಲನಚಿತ್ರಗಳಿಗೆ ಬದಲಾಗಿ ಇಲ್ಲಿ ಹಿಂದೂ ಕಥೆಗಳು, ದೇವತೆಗಳು, ವೈಚಾರಿಕತೆ ಮತ್ತು ಸಂಪ್ರದಾಯ ಆಧಾರಿತ ಚಿತ್ರಗಳನ್ನೇ ಚಿತ್ರಿಸುವ ಮೂಲಕ ವೈದಿಕ ಸಂಸ್ಕೃತಿಯ ಭದ್ರಕೋಟೆ ಎಂಬುದನ್ನು ಸಾಬೀತು ಪಡಿಸಲಾಗಿದೆ.
—
ಹುಸಿ ಸಿದ್ಧಾಂತಗಳು
ಈ ಆರ್ಯ-ದ್ರಾವಿಡ ವಿ‘ಜನೆಯ ಕಲ್ಪನೆಯ ಹಿಂದೆ ಸಾಕಷ್ಟು ವಾದಗಳಿವೆ ಜತೆಗೆ ಯಾವುದೋ ಕಾಲ್ಪನಿಕ ಕತೆಗಳಿಗೆ ಇಂಬುನೀಡಿ ಅವುಗಳನ್ನೇ ವಾದಿಸುತ್ತಾ ಮುಂದುವರಿದಿರುವುದು ಇದೆ ಅವುಗಳ ಪೈಕಿ ಉತ್ತರ ಭಾಗದಿಂದ ಭಾರತದ ಮೇಲೆ ಆಕ್ರಮಣ ಮಾಡಿ ಅಥವಾ ವಲಸೆ ಬರುವ ಮೂಲಕ ಸೇರಿಕೊಂಡ ಆರ್ಯನ್ನರು ಕ್ರಮೇಣ ಉತ್ತರ ಭಾರತವನ್ನೇ ಹಿಡಿತಕ್ಕೆ ತೆಗೆದುಕೊಂಡು, ದ್ರಾವೀಡರನ್ನು ದಕ್ಷಿಣ ಭಾರತದೆಡೆಗೆ ದೂಡಿದರು ಎನ್ನಲಾಗುತ್ತದೆ. ಪಾಶ್ಚಿಮಾತ್ಯ ಇತಿಹಾಸಕಾರರು ಪ್ರಸ್ತಾಪಿಸಿದಂತೆ ಸುಮಾರು ಕ್ರಿ.ಪೂ೧೫೦೦ರಲ್ಲಿ ಈ ಘಟನೆಗಳು ಸಂಭವಿಸಿದೆ ಎಂದು ಭಾವಿಸಲಾಗಿದ್ದು,ಈ ಕುರಿತು ಐತಿಹಾಸಿಕ ಚರ್ಚೆಗಳು ನಡೆದಿವೆ. ಆದರೆ ಇಂದಿಗೂ ಈ ವಾದಗಳಿಗೆ ಇಂಬು ನೀಡುವ ಅಥವಾ ಸಾಬೀತುಪಡಿಸುವ ಯಾವುದೇ ನೈಜ್ಯ ಪುರಾವೆಗಳಿಲ್ಲ.
‘ ಕಪ್ಪು ಬಣ್ಣದ ಚರ್ಮದವರ ದ್ರಾವೀಡರು ಹಾಗೂ ಬಿಳಿ ಚರ್ಮದವರು ಆರ್ಯನ್ನರೆಂಬ ವಾದವೂ ಕೇಳಿಬಂದಿತ್ತು. ಆದರೆ ಇದಕ್ಕೂ ಆರ್ಯ-ದ್ರಾವೀಡ ವಿಭಜನೆಗೂ ಸಂಬಂಧವಿಲ್ಲ ಎಂಬ ಕಾರಣಕ್ಕೆ ಈ ವಾದವನ್ನು ನಿರಾಕರಿಸಲಾಗಿದೆ. ಜತೆಗೆ ಭಾರತದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ಸಾಂಪ್ರದಾಯಿಕ ಜಾತಿಗಳ ಮೇಲೆ ಜನರನ್ನು ಗುರುತಿಸಲಾಗುತ್ತಿತ್ತು ಹೊರತು ವರ್ಣದ ನೀತಿಯಿಂದಲ್ಲ ಎಂಬುದನ್ನು ಗಮನಿಸಬೇಕಿದೆ.
ಇನ್ನು ಬ್ರಾಹ್ಮಣರನ್ನು ಆರ್ಯವರ್ಗದ ವಾರಸುದಾರರೆಂದು ಕರೆಯುವ ಅನೇಕ ಷಡ್ಯಂತ್ರಗಳನ್ನು ರೂಪಿಸಲಾಗಿತ್ತು. ಕಾರಣ ಸಮಾಜದಲ್ಲಿ ಹಿಂದಿನಿಂದಲೂ ಬ್ರಾಹ್ಮಣ ವರ್ಗಕ್ಕೆ ಸಿಕ್ಕ ಪ್ರಾಶಸ್ತ್ಯವಿರಬಹುದು. ಇಂದಿಗೂ ಹಲವರು ತಮಿಳು ಬ್ರಾಹ್ಮಣರು ಆರ್ಯನ್ನರು ಎನ್ನುತ್ತಾರೆ ಆದರೆ ನೆನಪಿನಲ್ಲಿರಿಸಬೇಕಾದ ವಿಚಾರವೆಂದರೆ ಆ ಬ್ರಾಹ್ಮಣರು ಕೂಡ ಇವರೊಂದಿಗೆ ಸಹಸ್ರಾರು ವರ್ಷಗಳಿಂದ ಇರುವವರೇ ಆಗಿದ್ದಾರೆ.’
ಲೇಖನ ಕೃಪೆ – ಸ್ವರಾಜ್ಯ
ಅನುವಾದ – ಅಶ್ವಿನಿ ಆರಾಧ್ಯ,ಪತ್ರಕರ್ತರು ಹೊಸದಿಗಂತ