
ನನ್ನ ಅಧ್ಯಯನದ ಮೂಲದ ಪ್ರಕಾರವೂ ಆರ್. ಎಸ್.ಎಸ್. ನ ಸ್ಥಾಪಕ ಕೇಶವ ಬಲರಾಮ ಹೆಡಗೆವಾರ್ ಅವರು ಸ್ವಾತಂತ್ರ್ಯ ಹೋರಾಟ ಮಾಡಿದ್ದರು. ಅಸಹಕಾರ ಚಳವಳಿಯಲ್ಲಿ ಅವರಿಗೆ ಜೈಲು ಶಿಕ್ಷೆಯೂ ಆಗಿತ್ತು.ಆಗಿನ್ನೂ ಆರ್. ಎಸ್. ಎಸ್. ಸ್ಥಾಪನೆ ಆಗಿರಲಿಲ್ಲ. ಉಪ್ಪಿನ ಸತ್ಯಾಗ್ರಹದಲ್ಲೂ ಹೆಡಗೆವಾರ್ ಭಾಗವಹಿಸಿದ್ದರು. ಆದರೆ ಸರ ಸಂಘ ಸಂಚಾಲಕ ಹುದ್ದೆಯನ್ನು ಪರಾಂಜಪೆಯವರಿಗೆ ವಹಿಸಿ ವೈಯಕ್ತಿಕ ನೆಲೆಯಲ್ಲಿ ಭಾಗವಹಿಸಿದ್ದರು. ಆರ್.ಎಸ್.ಎಸ್. ಒಂದು ಸಂಘಟನೆಯಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಆದರೆ ಆರ್. ಎಸ್.ಎಸ್. ನ ಸ್ಥಾಪಕರು ಒಬ್ಬ ವ್ಯಕ್ತಿಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು.
ಭಿನ್ನಾಭಿಪ್ರಾಯವಿದ್ದ ಮಾತ್ರಕ್ಕೆ ಮಾಡಿದ್ದನ್ನು ಇಲ್ಲ ಎನ್ನುವುದು ಜವಾಹರ ಲಾಲ್ ನೆಹರೂ ಏನೂ ಮಾಡಲಿಲ್ಲ ಎಂದ ಹಾಗೆಯೇ ಇರುತ್ತದೆ. ಅವರಿಗೂ ಇವರಿಗೂ ವ್ಯತ್ಯಾಸ ಇಲ್ಲ ಎಂದಾಗುತ್ತದೆ.
ಮೇಲಾಗಿ ಸ್ವಾತಂತ್ರ್ಯ ಪೂರ್ವದ ಸನ್ನಿವೇಶವನ್ನು ಈಗಿನ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಾರದು. ಆಗ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸೂ ಹಿಂದೂಗಳ ಪಕ್ಷ. ಆದರೆ ಎಲ್ಲರನ್ನೂ ಜೊತೆಯಾಗಿಸಿಕೊಳ್ಳುವ ಹಿಂದೂಗಳ ಪಕ್ಷ. ಹಿಂದೂ ಮಹಾ ಸಭಾ ಕಟು ಧೋರಣೆಯ ಮುಸ್ಲಿಂ, ಕ್ರೈಸ್ತರನ್ನು ಒಳಗೊಳಿಸಿಕೊಳ್ಳದ ಹಿಂದೂಗಳ ಪಕ್ಷ. ಆರ್.ಎಸ್.ಎಸ್. ಹಿಂದೂ ರಾಷ್ಟ್ರೀಯತೆಯ ಪ್ರತಿಪಾದಕ. ಆದರೆ ಹಿಂದೂ ಮಹಾ ಸಭಾ ರೀತಿಯಲ್ಲಿ ಹಿಂಸೆಯನ್ನು ಒಪ್ಪುವುದಿಲ್ಲ.ಗಾಂಧಿಯ ಹಾಗೆ ಅಹಿಂಸೆಯನ್ನು ವ್ರತವಾಗಿಯೂ ತೆಗೆದುಕೊಂಡಿಲ್ಲ. ಏಕೆಂದರೆ ಹಿಂಸಾತ್ಮಕ ಹೋರಾಟಕ್ಕೆ ವ್ಯಾಪಕವಾಗಿ ಜನರ ತೊಡಗಿಕೊಳ್ಳುವಿಕೆ ಇರುವುದಿಲ್ಲ ಎಂದು ಅದಕ್ಕೆ ಗೊತ್ತಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದೂ ಮಹಾ ಸಭಾದವರು ಕಾಂಗ್ರೆಸ್ ಅಧಿವೇಷನಕ್ಕೆ, ಕಾಂಗ್ರೆಸ್‌ನವರು ಮುಸ್ಲಿಂ ಲೀಗ್ ಅಧಿವೇಷನಕ್ಕೆ ಮುಸ್ಲಿಮ್ ಲೀಗಿನವರು ಕಾಂಗ್ರೆಸ್ ಅಧಿವೇಷನಕ್ಕೆಲ್ಲ ಹೋಗುತ್ತಿದ್ದರು. ಏಕೆಂದರೆ ಆಗ ಇದೆಲ್ಲವೂ ಐಡಿಯಾಲಜಿಗಳ ಭಿನ್ನತೆಗಳಷ್ಟೆ ಆಗಿದ್ದವು. ಸಾವರ್ಕರ್ ಬಿಡುಗಡೆಯಾಗಿ ಉನ್ನತ ಹುದ್ದೆ ಕೊಡಬೇಕೆಂದು ಗಾಂಧಿ ಯಂಗ್ ಇಂಡಿಯಾದಲ್ಲಿ ಬರೆದಿದ್ದರು. ಸಾವರ್ಕರ್ ಗಾಂಧಿಯೊಂದಿಗೆ ಸಂವಾದ ಮಾಡಿದ್ದರು.
ಹಿಂದುತ್ವದ ಐಡಿಯಾಲಜಿಗೆ ದೊಡ್ಡ ಸೆಟ್ ಬ್ಯಾಕ್ ಆದದ್ದು ಗಾಂಧಿ ಹತ್ಯೆ. ಹೆಚ್ಚು ಕಮ್ಮಿ ಆ ಕಾಲಕ್ಕೆ ನೆಹರೂ ಎಮರ್ಜ್ ಆಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಗಾಂಧಿ ಕಾಲದ ಹಿಂದೂ ಐಡೆಂಟಿಟಿಯನ್ನು ಬಿಟ್ಟು ಸೆಕ್ಯುಲರ್ ಐಡೆಂಟಿಟಿಗೆ ಬಂದಿತ್ತು. ಗಾಂಧಿ ಆ ಕಾಲಕ್ಕೆ ಮಹಾ ನಾಯಕ. ಎಂದೂ ಯಾರಿಗೂ ಎಲ್ಲ ದೇಶಗಳ ಧ್ವಜಗಳನ್ನು ಕೆಳಗಿಳಿಸದ ಯು. ವಿಶ್ವ ಸಂಸ್ಥೆ ಗಾಂಧಿ ಹತ್ಯೆಗೆ ಎಲ್ಲ ದೇಶಗಳ ಧ್ವಜಗಳನ್ನು ಕೆಳಗಿಳಿಸುತ್ತದೆ ಎಂದಾದರೆ ಯಾವ ಮಟ್ಟದ ನಾಯಕ ಇದ್ದಿರಬಹುದು ಎಂದು ಊಹಿಸಿ. ಅಂತಹ ನಾಯಕನ ಹತ್ಯೆಗೆ ಕೊಟ್ಟ ಕಾರಣ ಹಿಂದೂ ರಾಷ್ಟ್ರೀಯತೆಯದ್ದಾದುದರಿಂದ ಆ ಐಡಿಯಾಲಜಿಗೆ ನಕಾರಾತ್ಮಕತೆ ಬಂತು.
ಸ್ವಾತಂತ್ರ್ಯಾ ನಂತರದ ಈ ನಕಾರಾತ್ಮಕತೆಯನ್ನು ಸ್ವಾತಂತ್ರ್ಯ ಪೂರ್ವಕ್ಕೆ ಅನ್ವಯಿಸಲು ಆಗುವುದಿಲ್ಲ. ಕೇಶವ ಬಲರಾಮ ಹೆಡಗೆವಾರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದು ಹೌದು.
(ಅರವಿಂದ ಚೊಕ್ಕಾಡಿ ಅವರ ಫೇಸ್ ಬುಕ್ ಬರಹವನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ.)