ಇಂದು ಶ್ರೀ ನಾರಾಯಣ ಗುರು ಅವರ ಜನ್ಮದಿವಸ; ಶ್ರೇಷ್ಠ ಸಂತನನ್ನು ನೆನೆಯೋಣ
ನಾರಾಯಣಗುರು ( ೨೦ . ೮ . ೧೮೫೪ – ೨೮ . ೯ . ೧೯೨೮ )

ಕೇರಳದ ತಿರುವನಂತಪುರದಿಂದ ಸುಮಾರು ಹತ್ತು ಮೈಲಿಯಾಚೆ ಚೆಂಪುಜಂತಿ ಎಂಬ ಗ್ರಾಮದಲ್ಲಿ ‘ಮದನ್ ಆಸನ್,’ ಹಾಗೂ ‘ಕುಟ್ಟಿ ಅಮ್ಮಾಳ್,’ ಎಂಬ ದಂಪತಿಗಳ ನಾಲ್ಕು ಮಕ್ಕಳಲ್ಲಿ ನಾರಾಯಣ್ ಒಬ್ಬನೇ ಗಂಡು ಮಗು. ಇವನನ್ನು ನಾಣು ಅಂತಲೇ ಎಲ್ಲರೂ ಸಂಬೋಧಿಸುತ್ತಿದ್ದುದು. ನಾಣು ತೋರಿಕೆಗೆ ತುಂಬ ತುಂಟನಾಗಿ ಕಂಡರೂ ಅನೇಕ ವೇಳೆ ಅವನು ಯೋಗಿಗಳಂತೆ ನಿರ್ಲಿಪ್ತನಾಗಿ ಗಂಭೀರವಾಗಿ ಇರುತ್ತಿದ್ದನು. ಒಮ್ಮೆ ನಾಣು ಇತರ ಬಾಲಕರೊಂದಿಗೆ ಶಾಲೆಯಿಂದ ಹಿಂದಿರುಗುತ್ತಿದ್ದಾಗ ದಾರಿಯಲ್ಲಿ ಸಂನ್ಯಾಸಿಯೊಬ್ಬ ಎದುರಾದ. ಸಂನ್ಯಾಸಿಯ ಕಾವಿ ಬಟ್ಟೆ, ಗಡ್ಡದ ಬಗ್ಗೆ, ಅಪಹಾಸ್ಯ ಮಾಡುತ್ತಿದ್ದ ನಾಣುವಿನ ಸ್ನೇಹಿತರು ಕೊನೆಗೆ ಸಂನ್ಯಾಸಿಯತ್ತ ಕಲ್ಲು ತೂರಲಾರಂಭಿಸಿದರು. ನಾಣು ಇದನ್ನು ಕಂಡು ಬಹಳ ಬೇಸರಗೊಂಡು ತನ್ನ ಸ್ನೇಹಿತರಿಗೆ ಹಾಗೆಲ್ಲ ಮಾಡಬಾರದೆಂದು ಎಷ್ಟು ತಿಳಿಹೇಳಿದರೂ ಯಾರೂ ಇವನ ಮಾತು ಕೇಳಲಿಲ್ಲ. ಆಗಲೇ ಜೋರಾಗಿ ಅತ್ತು ತನ್ನ ದುಃಖವನ್ನು ತೋಡಿಕೊಂಡ ನಾಣುವನ್ನು ನೋಡಿ ಸ್ನೇಹಿತರು ಸಂನ್ಯಾಸಿಯ ಅವಹೇಳನ ನಿಲ್ಲಿಸಿ ಮುಂದೆ ನಡೆದರು. ಇದು ಆ ಪುಟ್ಟ ಬಾಲಕ ನಾಣುವಿನಲ್ಲಿ ಇದ್ದ ಭಕ್ತಿ ಶ್ರದ್ಧೆಯ ನಿದರ್ಶನ.
ಕೇರಳದಲ್ಲಿದ್ದ ಜಾತಿಗಳನ್ನು ಪ್ರಮುಖವಾಗಿ ಬ್ರಾಹ್ಮಣ, ನಾಯರ್, ಈಳವ, ಹರಿಜನ, ಗಿರಿಜನ ಎಂದು ವಿಂಗಡಿಸಬಹುದು. ಮೊದಮೊದಲು ನಾಯರ್ ಮತ್ತು ಈಳವ ಜಾತಿಗಳು ಸರಿಸಮಾನ ಎಂದು ಪರಿಗಣಿಸಲ್ಪಡುತ್ತಿದ್ದಾದರೂ ನಂತರದ ದಿನಗಳಲ್ಲಿ ನಾಯರ್ ಮೇಲ್ಜಾತಿ, ಈಳವ ಕೀಳುಜಾತಿ ಎಂಬ ರೂಢಿಗಳು ಬರಲಾರಂಭಿಸಿತು. ತಥಾಕಥಿತ ಕೀಳು ಜಾತಿಯಾದ ಈಳವದಲ್ಲಿಯೇ ನಾರಾಯಣ ಗುರು ಜನಿಸಿದ್ದು. ಸಾಮಾಜಿಕ ಸುಧಾರಣಾ ಕ್ಷೇತ್ರದಲ್ಲಿ ಶ್ರೀ ನಾಯಾರಣ ಗುರುಗಳ ಸಾಧನೆ ಗಮನಾರ್ಹ. ಜಾತಿ ಪದ್ಧತಿ, ಅಸ್ಪೃಶ್ಯತೆಗಳ ಬಗ್ಗೆ ಒಂದು ಕಡೆ; ಮದ್ಯಪಾನ, ಪ್ರಾಣಿವಧೆ, ಭೂತಾರಾಧನೆ ಮುಂತಾದ ಪಿಡುಗುಗಳ ಬಗ್ಗೆಯೂ ಸಮರ ನಡೆಸಿ ಪ್ರಸಿದ್ಧರಾದವರು ನಾರಾಯಣ ಗುರುಗಳು.
ಕೋಜಿಕೋಡ್, ಪಾಲ್ಘಾಟ್, ಕಣ್ಣಾನೂರು, ತಮಿಳು ನಾಡಿನ ಹಲವೆಡೆಗಳಲ್ಲಿ, ಕರ್ನಾಟಕದಲ್ಲಿ ಸಾಕಷ್ಟು ದೇವಸ್ಥಾನಗಳನ್ನು ನಿರ್ಮಿಸಿದ ನಾರಾಯಣಗುರುಗಳಿಗೆ ಎಲ್ಲಡೆಯಲ್ಲಿಯೂ ಮನ್ನಣೆ ದೊರೆಯುತ್ತಲೇ ಇತ್ತು. ತಮ್ಮನ್ನು ಹಿಂಬಾಲಿಸುವ ಶಿಷ್ಯವರ್ಗವೂ ಇತ್ತು. ಹೀಗೆ ಸದಾ ಸಂಚಾರದಲ್ಲಿದ್ದಾಗ ಒಮ್ಮೆ ಕೊಚ್ಚಿಯ ಆಳ್ವಾಯಿ ನದಿಯ ತೀರಕ್ಕೆ ಬಂದರು. ಸುತ್ತಲೂ ಹಸಿರು ಗದ್ದೆಗಳು, ಗುಡ್ಡಗಳನ್ನು ಒಳಗೊಂಡ ಮನೋಹರವಾದ ಪ್ರದೇಶದಲ್ಲಿ ತಮ್ಮ ಶಿಷ್ಯರ ಸಹಾಯದಿಂದ ಇಲ್ಲೊಂದು ಆಶ್ರಮವನ್ನು ನಿರ್ಮಿಸಿ ಅದ್ವೈತಾಶ್ರಮ ಎಂದು ಹೆಸರಿಟ್ಟರು.
೧೯೨೧ ರಲ್ಲಿ ಮತ್ತೊಂದು ಹೊಸ ವಿಧಾನವನ್ನು ಜನರ ಸಮ್ಮುಖದಲ್ಲಿ ತಂದರು. ಸಮಾಜದ ವರ್ಗಗಳನ್ನೆಲ್ಲಾ ಒಂದೆಡೆ ಸೇರಿಸಿ, ‘ಮಿಶ್ರ ಭೋಜನ,’ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದ ವೀರಸಂತನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಅಸ್ಪೃಷ್ಯರನ್ನು ಸಮಾಜದಲ್ಲಿ ಹಿಂದುಳಿದ ವರ್ಗದವರನ್ನು ಸಂಘಟಿಸಿ, ಪರೋಪಕಾರವೇ ತಮ್ಮ ಜೀವನದ ಧ್ಯೇಯವೆಂದು ಸಾರಿದವರು ಶ್ರೀ ನಾರಾಯಣ ಗುರುಗಳು. ಕೆಲವರು ಎಲ್ಲ ಸಮಸ್ಯೆಗಳಿಗೂ ಮತಾಂತರವೇ ಮದ್ದು ಎಂದು ಸಾರುತ್ತಿರಬೇಕಾದರೆ ನಾರಾಯಣಗುರುಗಳು ಮತಾಂತರಕ್ಕೆ ಸರ್ವಥಾ ಒಪ್ಪದೇ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕೆಂಬ ದಿವ್ಯ ಕರೆ ಇತ್ತವರು . ವಿಶ್ವದ ಅನೇಕ ಭಾಗಗಳಲ್ಲಿ ಪ್ರವಾಸಮಾಡಿ ಅಪಾರ ಅನುಭವಗಳನ್ನು ಹೊಂದಿ ಹೋದೆಡೆಯಲ್ಲೆಲ್ಲಾ ವಿಶ್ವ ಮಾನವತ್ವವನ್ನು ಬೋಧಿಸಿದರು. ಸನ್ಯಾಸಿಗಳು, ಮಹರ್ಷಿಗಳ ಜೊತೆಗೆ ಸಂಪರ್ಕವನ್ನಿಟ್ಟುಕೊಂಡಿದ್ದರು. ಅವರು ಹೇಳುತ್ತಿದ್ದ ವಾಕ್ಯಗಳು ಇಂದಿಗೂ ಅತ್ಯಂತ ಪ್ರಸ್ತುತ. ” ದೇವರ ಸೇವೆಮಾಡಿದರೆ, ತನ್ನದೊಬ್ಬನದೇ ಏಳಿಗೆ, ಉದ್ಧಾರವಾಗಬಹುದು ; ಆದರೆ, ದೇಶ ಸೇವೆಮಾಡಿದರೆ, ಹಲವರ ಕಲ್ಯಾಣ ನಿಶ್ಚಯ” ಆದ್ದರಿಂದ ದೇಶಸೇವೆ, ಮತ್ತು ಈಶಸೇವೆಗಳ ಸಮನ್ವಯವೇ ನಮ್ಮ ಗುರಿಯಾಗಿರಬೇಕೆಂದು ತಮ್ಮ ಜೀವನದುದ್ದಕ್ಕೂ ಸಾರಿದವರು ಶ್ರೀ ನಾರಾಯಣ ಗುರುಗಳು.
ಆಳ್ವಾಯಿಯಲ್ಲಿ, ಫೆಬ್ರವರಿ, ೧೯೨೪ ರಲ್ಲಿ, ೨ ದಿನಗಳ ‘ಸರ್ವಧರ್ಮಗಳ ಸಮ್ಮೇಳನ,’ ವನ್ನು ಆಯೋಜಿಸಿದರು. ನಾರಾಯಣಗುರುಗಳಿಗೆ ‘ಬ್ರಹ್ಮ ವಿದ್ಯಾಲಯ,‘ ವೆಂಬ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಲಿ, ಸರ್ವಧರ್ಮಗಳ ಬಗ್ಗೆ, ಅಧ್ಯಯನ ಮಾಡುವ ಒಂದು ಅಭಿಯಾನವನ್ನು ಪ್ರಾರಂಭಿಸಬೇಕೆಂಬ ಮಹದಾಶೆಯಿತ್ತು. ಆದರೆ, ಅದು, ಅವರ ಜೀವಿತದಲ್ಲಿ ಸಾಕಾರಗೊಳ್ಳಲಿಲ್ಲ. ಗುರುಗಳ ಮರಣದ ಬಳಿಕ, ಅವರ ಹಿಂಬಾಲಕರು ಆ ಕನಸನ್ನು ಸಾಕಾರಗೊಳಿಸಿದರು.

ರಾಷ್ಟ್ರೋತ್ಥಾನ ಸಾಹಿತ್ಯದವರು ಹೊರತಂದಿರುವ ಬಾರತ ಭಾರತಿ ಮಾಲಿಕೆಯಲ್ಲಿ ಶ್ರೀ ನಾರಾಯಣ ಗುರುಗಳ ಪುಸ್ತಕ