
ಮಂಗಳೂರು: ಕೊರೊನಾದಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ನೆರವಾಗಲು ಪ್ರಾರಂಭವಾದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದಿಂದ ಕಳೆದ 8 ತಿಂಗಳಲ್ಲಿ ಮಂಗಳೂರಿನ 1500ಕ್ಕೂ ಅಧಿಕ ಮಂದಿ ಉದ್ಯೋಗ ಪಡೆದಿದ್ಧಾರೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಗೋಸೇವಾ ಪ್ರಮುಖರಾದ ಪ್ರವೀಣ ಸರಳಾಯರು ಅವರು ತಿಳಿಸಿದರು.
ಅವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೆರ್ಲ ನಲಂದಾ ಕಾಲೇಜಿನಲ್ಲಿ ನಡೆದ ಆರು ದಿವಸಗಳ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
8 ತಿಂಗಳ ಹಿಂದೆ ಕೊರೋನಾ ದಿಂದಾಗಿ ಉದ್ಯೋಗವನ್ನು ಕಳೆದು ಕೊಂಡವರಿಗೆ ಆರಂಭವಾದ ಯೋಜನೆ ಇದು. ಕೊರೋನಾ ನೀಡಿದ ಸವಾಲಿಗೆ ಪರಿಹಾರ ಈ ನೈಪುಣ್ಯ ತರಬೇತಿಯಿಂದ ಸಾಧ್ಯವಾಗಿದೆ. ಮಂಗಳೂರು ವಿಭಾಗದಲ್ಲಿ 19 ಕಡೆ ತರಬೇತಿ ನಡೆಸಿ ಸುಮಾರು 4200 ಜನರಿಗೆ ತರಬೇತಿ ನೀಡಿ ವಿಶ್ವಾಸ ತುಂಬಿಸಲಾಗಿದೆ. ಈಗಾಗಲೇ 1500ಕ್ಕೂ ಅಧಿಕ ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಈ ನೈಪುಣ್ಯ ತರಬೇತಿ ಗ್ರಾಮ ಮಟ್ಟದಲ್ಲಿ ನಡೆಯಬೇಕು. ಮುಂದಿನ ಶಿಕ್ಷಣ ನೀತಿಗೆ ಈ ನೈಪುಣ್ಯ ತರಬೇತಿಯು ಪೂರಕ ಆಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿಅವರು ಮಾತನಾಡಿ, ‘ತರಬೇತಿ ಪಡೆದ ನಂತರ ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿ. ಹಣದ ಹಿಂದೆ ಹೋಗಬೇಡಿ. ಸ್ವಾಭಿಮಾನದ ಬದುಕು ನಿಮ್ಮದಾಗಲಿ ಎಂದು ಹಾರೈಸಿದರು.
ವಿವೇಕಾನಂದ ಪೊಲಿಟೆಕ್ನಿಕ್ ಪ್ರಾಂಶುಪಾಲರಾದ ಗೋಪೀನಾಥ ಶೆಟ್ಟಿ ಅವರು ಮಾತನಾಡಿ, ಗೊತ್ತಿದ್ದವರು ಗೊತ್ತಿಲ್ಲದವರಿಗೆ ಕಲಿಸುವ ಪದ್ಧತಿ ಮೊದಲಿನಿಂದಲೂ ಇದೆ. ಇದು ನಮ್ಮ ದೇಶದ ಸಂಸ್ಕೃತಿ. ಸುಸಂಸ್ಕೃತ ಜನರನ್ನು ಸಮಾಜಕ್ಕೆ ಕೊಡುವ ಉದ್ದೇಶ ವಿವೇಕಾನಂದ ಕಾಲೇಜಿನದು. ಆ ಉದ್ದೇಶ ಈಡೇರುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ ಎಂದರು.
ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿಗಳು ಮಾತನಾಡಿ, ನಾನು ಬಿಕಾಂನಲ್ಲಿ ಫೇಲ್ ಆದೆ. ಉದ್ಯೋಗ ಪಡೆಯುವ ಕನಸು ನುಚ್ಚುನೂರಾಯಿತು. ಸ್ವಉದ್ಯೋಗ ಮಾಡಿ ಎ ಗ್ರೇಡ್ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಆಗಿ ಯಶಸ್ಸನ್ನು ಪಡೆದಿದ್ದೇನೆ. ಹಾಗಾಗಿ ಶಾಲಾ ಕಾಲೇಜಿನ ವಿದ್ಯಾಭ್ಯಾಸ ಮಾಡಿ ಉದ್ಯೋಗ ಅರಸುವ ಪ್ರಯತ್ನಕ್ಕಿಂತ ಸ್ವಉದ್ಯೋಗ ಮಾಡಿ ಹತ್ತಾರು ಜನರಿಗೆ ಉದ್ಯೋಗ ನೀಡುವವರಾಗೋಣ ಎಂದರು.
ಮಂಗಳೂರು ವಿಭಾಗದ ಮಾನ್ಯ ಸಂಘಚಾಲಕರಾದ ಗೋಪಾಲ ಚೆಟ್ಟಿಯಾರ್ ಉಪಸ್ಥಿತರಿದ್ದರು
ಈ ಶಿಬಿರದಲ್ಲಿ *ಕಸಿ ಕಟ್ಟುವುದು, ಫ್ಯಾಶನ್ ಡಿಸೈನಿಂಗ್, ಗೃಹೋಪಕರಣ, ಇಲೆಕ್ಟ್ರಫಿಕೇಶನ್, ಪ್ಲಂಬಿಂಗ್, ಫ್ಯಾಬ್ರಿಕೇಶನ್, ಜೇನು ಸಾಕಣೆ, ಹೈನುಗಾರಿಕೆ, ಮೀನುಗಾರಿಕೆ* ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ.
ಸಂಪರ್ಕ : ಅಶೋಕ ಬಾಡೂರು: 6282205551 ಸತೀಶ ಶೆಟ್ಟಿ ಒಡ್ಡಂಬೆಟ್ಟು:7907264120