ಸರಸಂಘಚಾಲಕ ಮೋಹನ್‌ಜೀ ಭಾಗವತ್‌ರ ವಿಜಯದಶಮೀ ಭಾಷಣ:
ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಧರ್ಮದ ವಿಜಯ ಯಾತ್ರೆಯ ಪ್ರಾರಂಭ ದಿವಸದ ರೂಪದಲ್ಲಿ ಉತ್ಸಾಹ, ಉಲ್ಲಾಸಗಳಿಂದ ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬವು ಈ ವರ್ಷ 30 ಸೆಪ್ಟೆಂಬರ್ 2010 ರಂದು ರಾಮಜನ್ಮಭೂಮಿ ಕುರಿತು ನ್ಯಾಯಾಲಯದ ತೀರ್ಪಿನಿಂದ ರಾಷ್ಟ್ರದ ಜನಮನದಲ್ಲಿ ವ್ಯಾಪಕವಾಗಿ ಆನಂದ ಮೂಡಿಸುವ ಹಿನ್ನೆಲೆಯೊಂದಿಗೆ ಬಂದಿದೆ. ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಖಂಡಪೀಠದ ಈ ತೀರ್ಪು ಕೊನೆಗೂ ಶ್ರೀರಾಮಜನ್ಮಭೂಮಿಯಲ್ಲಿ ಒಂದು ಭವ್ಯವಾದ ದೇವಾಲಯ ನಿರ್ಮಾಣದ ಮಾರ್ಗವನ್ನು ಪ್ರಶಸ್ತಗೊಳಿಸಲಿದೆ. ಮರ್ಯಾದಾಪುರುಷೋತ್ತಮ ಶ್ರೀರಾಮನು, ಜಗತ್ತಿನಾದ್ಯಂತದ ಹಿಂದುಗಳಿಗೆ ದೇವತಾಸ್ವರೂಪನಾಗಿರುವುದರೊಂದಿಗೇ, ನಮ್ಮ ಮೂಲದಲ್ಲಿರುವ ನಮ್ಮೆಲ್ಲರ ರಾಷ್ಟ್ರೀಯ ಸಂಸ್ಕೃತಿಯ ಹೆಗ್ಗಳಿಕೆಯ ಪ್ರತೀಕನೂ ಆಗಿದ್ದಾನೆ. ಆದ್ದರಿಂದ ನಮ್ಮ ಸಂವಿಧಾನದ ಮೂಲ ಪ್ರತಿಯಲ್ಲಿ ಸ್ವತಂತ್ರ ಭಾರತದ ಆದರ್ಶ, ಆಕಾಂಕ್ಷೆಗಳು ಹಾಗೂ ಪರಂಪರೆಯನ್ನು ವಿಶದೀಕರಿಸಲು ನೀಡಿರುವ ಚಿತ್ರಗಳಲ್ಲಿ, ಮೊಹೆಂಜದಾರೋದ ಅವಶೇಷಗಳು ಮತ್ತು ಆಶ್ರಮಜೀವನದ ಚಿತ್ರಗಳ ಬಳಿಕ ಪ್ರಥಮ ವ್ಯಕ್ತಿಚಿತ್ರವು ಶ್ರೀರಾಮನದ್ದಾಗಿದೆ. ಶ್ರೀ ಗುರುನಾನಕರು ೧೫೨೬ರಲ್ಲಿ ಭಾರತ ಸಂಚಾರ ಕೈಗೊಳ್ಳುತ್ತ ಶ್ರೀರಾಮಜನ್ಮಭೂಮಿಯ ದರ್ಶನ ಮಾಡಿದ್ದರು. ಈ ಸಂಗತಿಯನ್ನು ಸಿಕ್ಖ್ ಪಂಥದ ಇತಿಹಾಸದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಐತಿಹಾಸಿಕ, ಪುರಾತಾತ್ವಿಕ ಮತ್ತು ಪ್ರತ್ಯಕ್ಷ ಉತ್ಖನನದ ಸಾಕ್ಷ್ಯಗಳ ಆಧಾರದ ಮೇಲೆ ಶ್ರೀರಾಮಜನ್ಮಭೂಮಿಯ ಮೇಲೆ ೧೫೨೮ಕ್ಕೆ ಮುಂಚೆ ಒಂದು ಹಿಂದೂ ಪವಿತ್ರ ಭವನವಿತ್ತು ಎಂಬುದನ್ನು ಮಾನ್ಯಮಾಡಲಾಯಿತು.
ಇದೊಂದು ಸುಸಂದರ್ಭ
ಶ್ರೀರಾಮಜನ್ಮಭೂಮಿ ಕುರಿತ ನ್ಯಾಯಾಲಯ ಪ್ರಕ್ರಿಯೆಯು ೬೦ವರ್ಷ ವಿಳಂಬಗೊಂಡಿದ್ದರಿಂದ, ಸಮಗ್ರ ಸಮಾಜದಲ್ಲಿ ಸಾಮರಸ್ಯ ಭಂಗದ ವಿಷ ಮತ್ತು ಸಂಘರ್ಷದ ಕಟುತ್ವ ಹಾಗೂ ಪೀಡನೆಯ ವಾತಾವರಣವುಂಟಾಯಿತು. ಈ ವಿನಾಕಾರಣ ವಿವಾದವನ್ನು ಕೊನೆಗೊಳಿಸಿ, ನಮ್ಮ ಆತ್ಮಗೌರವದ ಪ್ರತೀಕವಾದ ಮರ್ಯಾದಾಪುರುಷೋತ್ತಮ ಶ್ರೀರಾಮನ ಅಯೋಧ್ಯೆಯಲ್ಲಿನ ಜನ್ಮಭೂಮಿಯಲ್ಲಿ ಆತನ ಭವ್ಯವಾದ ದೇವಾಲಯವನ್ನು ನಿರ್ಮಿಸುವ ನಿಮಿತ್ತವಾಗಿ ನಾವೆಲ್ಲ ಆಗಿಹೋಗಿದ್ದನ್ನು ಮರೆತು ಒಟ್ಟಾಗಬೇಕು. ಈ ತೀರ್ಪು ನಮ್ಮ ದೇಶದ ಮುಸಲ್ಮಾನರ ಸಹಿತ ಎಲ್ಲ ವರ್ಗಗಳಿಗೆ ಸೇರಿದ ಜನರೂ ಆತ್ಮೀಯತೆಯಿಂದ ಪರಸ್ಪರ ಹೊಂದಿಕೊಂಡು ಒಂದು ನೂತನ ಶುಭಾರಂಭ ಮಾಡಲು ನಿಯತಿಯು ನೀಡಿದ ಒಂದು ಅವಕಾಶವೆಂಬುದು ಸಂಘದ ನಂಬಿಕೆಯಾಗಿದೆ. ನಮ್ಮ ಸಂಕೀರ್ಣ ಭಿನ್ನಾಭಿಪ್ರಾಯಗಳು, ಪೂರ್ವಾಗ್ರಹಗಳಿಂದ ಪ್ರೇರಿತವಾದ ಹಟಮಾರಿತನ ಮತ್ತು ಸಂಶಯಪ್ರವೃತ್ತಿಯನ್ನು ಬದಿಗೊತ್ತಬೇಕು. ನಮ್ಮ ಮಾತೃಭೂಮಿಯ ಬಗ್ಗೆ ಉತ್ಕಟವಾದ ಅನನ್ಯ ಭಕ್ತಿ, ನಮ್ಮ ಸಮಾನ ಪೂರ್ವಜ ಪರಂಪರೆಗೆ ಗೌರವ ಹಾಗೂ ಎಲ್ಲ ವಿವಿಧತೆಗಳಿಗೂ ಮಾನ್ಯತೆ, ಸುರಕ್ಷೆಯ ಅವಕಾಶವೊದಗಿಸುವ , ವಿಶ್ವದ ಏಕಮೇವಾದ್ವಿತೀಯವಾದ, ವಿಶಿಷ್ಟ ರೀತಿಯ ಸರ್ವಸಮಾವೇಶಕ ಮತ್ತು ಸಹಿಷ್ಣುವಾದ ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು, ದಿ ಲೋಹಿಯಾ ಅವರ ಮಾತುಗಳಲ್ಲಿ ಭಾರತದ ಉತ್ತರ-ದಕ್ಷಿಣ ಏಕಾತ್ಮತೆಯನ್ನು ಮೂಡಿಸಿದ ಶ್ರೀರಾಮನ ದೇವಾಲಯವನ್ನು ಜನ್ಮಭೂಮಿಯಲ್ಲಿ ನಿರ್ಮಿಸಲು ನಾವು ಒಟ್ಟುಗೂಡಬೇಕಾಗಿದೆ. ಸಮಗ್ರ ಸಮಾಜದ ಅಭಿಲಾಷೆಯಾದರೂ ಇದೇ. ಸೆಪ್ಟೆಂಬರ್ ೩೦ರ ತೀರ್ಪು ಬಂದ ಬಳಿಕ ಸಮಾಜವು ತೋರಿದ ಏಕತೆ ಮತ್ತು ಸಂಯಮವು ಇದೇ ಅಭಿಲಾಷೆಯನ್ನು ಸ್ಪಷ್ಟೀಕರಿಸುತ್ತದೆ.
ಷಡ್ಯಂತ್ರಕಾರಿಗಳ ಬಗ್ಗೆ ಎಚ್ಚರಿಕೆ
ಆದರೆ ರಾಷ್ಟ್ರೀಯ ಏಕತೆಯ ಪ್ರಯತ್ನಗಳಿಗೆ ಪ್ರಾಪ್ತವಾದ ಈ ಅವಕಾಶವನ್ನೂ ತುಷ್ಟೀಕರಣ ಮತ್ತು ವೋಟ್‌ಬ್ಯಾಂಕ್ ರಾಜಕಾರಣದ ಸ್ವಾರ್ಥಸಾಧನೆಯ ಶಸ್ತ್ರವಾಗಿ ಮಾಡಿಕೊಳ್ಳುವ ದುರ್ಭಾಗ್ಯಕರ ಹುನ್ನಾರವು, ತೀರ್ಪಿನ ಮರುದಿನದಿಂದಲೇ ಶುರುವಾಗಿದ್ದನ್ನು ನಾವು ನೋಡುತ್ತಿದ್ದೇವೆ. ಪಂಥ, ಪ್ರಾಂತ, ಭಾಷೆಗಳ ನಮ್ಮ ವೈವಿಧ್ಯಗಳನ್ನು ಪರಸ್ಪರ ಬಡಿದಾಡಿಸಿ ವೋಟುಗಳನ್ನು ಬಾಚಿಕೊಳ್ಳುವ ಈ ಕೆಲವೇ ಜನರು, ಒಂದು ಕಡೆ ಬಾಯಿಯಿಂದ ‘ಸೆಕ್ಯುಲರಿಸಂ’ ಘೋಷಣೆ ಹಾಕಿ, ದೊಡ್ಡ ದೊಡ್ಡ ಸುತ್ತು ಬಳಸುವ ಮಾತುಗಳನ್ನಾಡಿ ಸಾಮಾಜಿಕ ಸದ್ಭಾವನೆಯನ್ನು ಹದಗೆಡಿಸುವ ಸೂಕ್ಷ್ಮ ಷಡ್ಯಂತ್ರ ರಚಿಸಿ ಸದ್ಭಾವನೆ ಮೂಡಿಸುವ ಪ್ರಸಂಗ ಮತ್ತು ಪ್ರಯತ್ನಗಳಿಗೆ ಆತಂಕವೊಡ್ಡುತ್ತಿರುತ್ತಾರೆ. ಮಾಧ್ಯಮಗಳು ಹಾಗೂ ತಥಾಕಥಿತ ಬುದ್ಧಿಜೀವಿಗಳಲ್ಲೂ ತಮ್ಮ ಭ್ರಾಮಕ ವಿಚಾರಗಳ ಅಹಂಭಾವ ಮೆರೆಯುತ್ತಿರುವ, ಹಿಂದೂ ತತ್ವವಿಚಾರಗಳು ಮತ್ತು ಹಿಂದುಗಳ ಹಿತಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಪೂರ್ವಾಗ್ರಹಪೀಡಿತರಾಗಿ ದ್ವೇಷಿಸುವ ಮತ್ತು ತಮ್ಮ ಸ್ವಾರ್ಥ ಹಾಗೂ ವ್ಯಾಪಾರೀ ಹಿತಗಳಿಗಾಗಿ ಸತ್ಯ, ಅಸತ್ಯಗಳನ್ನು ಲೆಕ್ಕಿಸದೆ ‘ನ ಭಯಮ್ ನ ಲಜ್ಜಾ’ ಎಂಬಂತೆ ವ್ಯವಹರಿಸುವ ಹಲವರಿದ್ದಾರೆ. ಸೆಪ್ಟೆಂಬರ್ ೩೦ರ ಮಧ್ಯಾಹ್ನ ೪ ಘಂಟೆಯವರೆಗಿನ ಇವರ ಭಾಷೆ, ತೀರ್ಪು ಬಂದ ನಂತರದ ಭಾಷೆ ಮತ್ತು ವ್ಯವಹಾರ ಇವುಗಳ ವ್ಯತ್ಯಾಸವನ್ನು ನೋಡಿದರೆ ಈ ಸಂಗತಿ ನಿಮ್ಮೆಲ್ಲರ ಗಮನಕ್ಕೆ ಬಂದೀತು. ಸಮಾಜದ ವಿವಿಧ ವರ್ಗಗಳಲ್ಲಿ ಒಬ್ಬರಿನ್ನೊಬ್ಬರ ಬಗ್ಗೆ ಅಥವಾ ಒಬ್ಬರಿನ್ನೊಬ್ಬರ ಸಂಘಟನೆಗಳ ಬಗ್ಗೆ ಭಯ ಮತ್ತು ಅವಿಶ್ವಾಸದ ಭೂತವನ್ನು ಬಡಿದೆಬ್ಬಿಸುವ ಅವರ ಕೆಲಸವು ಸದಾ ‘ಸೆಕ್ಯುಲರಿಸಂ’ನ ನಿಲುವಂಗಿ ಧರಿಸಿ, ಕುಟಿಲ ದುಷ್ಟಬುದ್ಧಿಯಿಂದ ನಡೆಯುತ್ತಿರುತ್ತದೆ. ಇವರೆಲ್ಲರ ಬಗ್ಗೆ ಸದಾ ಎಚ್ಚರವಾಗಿರುವ ಅವಶ್ಯಕತೆಯಿದೆ. ತಮ್ಮ ಸ್ವಾರ್ಥ ಸಾಧಿಸಲು ವಿಶ್ವಬಂಧುತ್ವ, ಸಮಾನತೆ, ಶೋಷಣಮುಕ್ತಿ ಇತ್ಯಾದಿ ದೊಡ್ಡ ದೊಡ್ಡ ಮಾತುಗಳನ್ನಾಡುವ ಮರೆಯಲ್ಲಿ ಸಮಾಜದಲ್ಲಿ ಆ ಗುಣಗಳು ಬೆಳೆದುಬಾರದಂತೆ ತಡೆಯುವವರೂ ಅವರೇ.
ಇದೇ ಸ್ವಾರ್ಥಲಾಲಸೆ ಮತ್ತು ದ್ವೇಷಭಾವನೆಯಿಂದಾಗಿ, ಎಲ್ಲೋ ಕೆಲವು ಹಿಂದೂ ವ್ಯಕ್ತಿಗಳು ಕೆಲವು ಆತಂಕಕಾರಿ ಘಟನೆಗಳಲ್ಲಿ ತೊಡಗಿದ ಬಗ್ಗೆ ‘ಹಿಂದೂ ಭಯೋತ್ಪಾದನೆ’ ‘ಭಗವಾ ಭಯೋತ್ಪಾದನೆ ’ಯಂತಹ ಶಬ್ದಪ್ರಯೋಗವನ್ನು ರೂಢಿಗೊಳಿಸುವ ದೇಶಘಾತುಕ ಷಡ್ಯಂತ್ರ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದರಲ್ಲಿ ಸಂಘವನ್ನೂ ತಪ್ಪುಕಲ್ಪನೆಯಿಂದ ಎಳೆತರಲು ದುಷ್ಟಪ್ರಯತ್ನವೂ ನಡೆಯುತ್ತಿದೆ. ಅಸತ್ಯದ ಮಾಯಾಜಾಲದಲ್ಲಿ ಜನತೆಯನ್ನು ಭ್ರಮಿಸುವ ಹಾಗೂ ಹಿಂದೂ ಸಂತ, ಸಜ್ಜನರು, ದೇವಾಲಯ ಮತ್ತು ಸಂಘಟನೆಗಳ ಹೆಸರಿಗೆ ಮಸಿ ಬಳಿಯುವ ಈ ಕುಚೇಷ್ಟೆಯು ಯಾರ ಸೂಚನೆಯಂತೆ ನಡೆಯುತ್ತಿದೆ, ಯಾರಿಗೆ ಲಾಭವುಂಟುಮಾಡುತ್ತಿದೆ ಎಂಬುದನ್ನು ತಿಳಿಯಲು ನಾವು ಪ್ರಯತ್ನಿಸಿಲ್ಲ. ಆದರೆ ಇದು ಯಾರಿಗೋ ಲಾಭವುಂಟುಮಾಡುವ ಬದಲು ನಮ್ಮ ರಾಷ್ಟ್ರವನ್ನು ಅಪಕೀರ್ತಿ ಮತ್ತು ವಿಪತ್ತಿಗೆ ತಳ್ಳುವುದಂತೂ ನಿಶ್ಚಿತ.
ನಮ್ಮ ದೇಶದ ಸಂವಿಧಾನ ಸಮ್ಮತವಾದ ರಾಷ್ಟ್ರಧ್ವಜದ ಮುಕುಟಸ್ಥಳದಲ್ಲಿ ವಿರಾಜಮಾನವಾಗಿರುವ ತ್ಯಾಗ, ಕರ್ಮಶೀಲತೆ ಮತ್ತು ಜ್ಞಾನದ ಪ್ರತೀಕವಾಗಿರುವ ಭಗವಾ ಬಣ್ಣವನ್ನು ; ಸ್ವತಃ ಭಯೋತ್ಪಾದಕ ಪ್ರವೃತ್ತಿಗಳಿಂದ ದೂರವುಳಿದು ಭಯೋತ್ಪಾದನೆಯೊಂದಿಗೆ ಸೆಣಸುತ್ತಿರುವ ಹಿಂದೂ ಸಮಾಜ ಹಾಗೂ ಸಂತರು, ಸಾಧ್ವಿಯರನ್ನು ; ಭಾರತ ದೇಶವನ್ನು ; ಪ್ರತಿಯೊಂದು ನೈಸರ್ಗಿಕ ವಿಪತ್ತುಗಳಲ್ಲೂ ಸರಕಾರ-ಆಡಳಿತಗಳಿಗೆ ಪ್ರಾಣದ ಹಂಗು ತೊರೆದು ಸಹಕರಿಸುವ, ೧ ಲಕ್ಷ ೫೭ ಸಾವಿರಕ್ಕೂ ಹೆಚ್ಚಿನ ಸಣ್ಣ-ದೊಡ್ಡ ಸೇವಾಕೇಂದ್ರಗಳನ್ನು ದೇಶದ ಅಭಾವಪೀಡಿತ ಜನರಿಗಾಗಿ ಯಾವುದೇ ಭೇದಭಾವನೆ ಅಥವಾ ಸ್ವಾರ್ಥದ ಉದ್ದೇಶವಿಲ್ಲದೆ ನಡೆಸುತ್ತಿರುವ ಸ್ವಯಂಸೇವಕರನ್ನು, ಸಂಘವನ್ನು ಮತ್ತು ಇತರ ಸಂಘಟನೆಗಳನ್ನು ಕಳಂಕಿತಗೊಳಿಸುವ ಈ ಪ್ರಯತ್ನ ಖಂಡಿತ ವಿಫಲವಾದೀತು. ನ್ಯಾಯಾಲಯದ ಖಟ್ಲೆಗಳ ತೀರ್ಪುಗಳ ಮುಂಚೆಯೇ, ಮಾಧ್ಯಮಗಳು ಸೂಚನಾಭ್ರಮ ತಂತ್ರದ ಮೂಲಕ (Disinformation campaign via mediatrial) ಸಂಘದ ವಿರುದ್ಧವೇ ತೀರ್ಮಾನಿಸುತ್ತವೆ. ಈ ಶಕ್ತಿಗಳು ಅದಕ್ಕಿಂತ ಮುಂಚೆ ತಮ್ಮದೇ ಕಳಂಕಿತ ಆಂತರ್ಯದೊಳಗೆ ಇಣುಕಿ ನೋಡಿಕೊಳ್ಳಬೇಕು. ಈ ಜನ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ‘ಭಗವಾ ಭಯೋತ್ಪಾದನೆ’ ಶಬ್ದವನ್ನು ಪ್ರಯೋಗಿಸಿ ಭಾರತದ ಶ್ರೇಷ್ಠ ಪರಂಪರೆ ಮತ್ತು ಎಲ್ಲ ಸಂತ-ಮಹಾತ್ಮರನ್ನು ಅಪಮಾನಿಸಲು ಹಿಂಜರಿಯುತ್ತಿಲ್ಲ. ದೇಶವು ತನ್ನ ಕ್ಷುದ್ರ ಮತ್ತು ದೂಷಿತ ಚುನಾವಣಾ ಷಡ್ಯಂತ್ರಗಳಲ್ಲಿ ತೊಡಗುವ ಸಮಯವಲ್ಲ ಇದು.
ಕಾಶ್ಮೀರ: ಅಂತಾರಾಷ್ಟ್ರೀಯ ರಾಜಕಾರಣದ ಆಟ
ಕಾಶ್ಮೀರದ ವಿಪತ್ತು ಇಂದು ಗಂಭೀರ ಮತ್ತು ಜಟಿಲ ಸ್ವರೂಪ ತಳೆದಿದೆ. ನಮ್ಮ ಉಪೇಕ್ಷೆಯಿಂದಾಗಿ ಬಾಲ್ಟಿಸ್ತಾನ ಮತ್ತು ಗಿಲ್ಗಿಟ್ ಪಾಕಿಸ್ತಾನದ ಭಾಗಗಳಾದವು ಹಾಗೂ ಚೀನವು ಅಲ್ಲಿ ತನ್ನ ಸೈನ್ಯವನ್ನು ನಿಯುಕ್ತಿಗೊಳಿಸಿ ಭಾರತವನ್ನು ಸುತ್ತುವರಿಯುವ ಕಾರ್ಯವನ್ನು ಪೂರ್ಣಗೊಳಿಸಿದೆ. ಅಫಗಾನಿಸ್ತಾನದಿಂದ ಗೌರವಾನ್ವಿತವಾಗಿ ಸುರಕ್ಷಿತವಾಗಿ ಕಾಲ್ತೆಗೆದು ಪಾಕಿಸ್ತಾನವನ್ನು ಜೊತೆಗೂಡಿಸಿಕೊಂಡು ಕಾಶ್ಮೀರ ಕಣಿವೆಯಲ್ಲಿ ಕಾಲಿಕ್ಕಲು ಅನುಕೂಲವಾದ ಪರಿಸ್ಥಿತಿಯುಂಟುಮಾಡಲು ಅಮೆರಿಕ ಹವಣಿಸುತ್ತಿದೆ. ಕಣಿವೆಯಲ್ಲಿ ಅಂತಾರಾಷ್ಟ್ರೀಯ ರಾಜಕಾರಣದ ಈ ಆಟ ನಡೆಯುವುದಕ್ಕೆ ಮುಂಚೆಯೇ ನಾವು ಕ್ರಮ ಕೈಗೊಳ್ಳಬೇಕಾಗಿದೆ. ಅಫಗಾನಿಸ್ತಾನದಲ್ಲಿ ನಮ್ಮ ಹಿತಾಸಕ್ತಿಗಳಿಗೆ ಅನುಕೂಲವಾದ ವಾತಾವರಣ ನಿರ್ಮಿಸಿಕೊಳ್ಳುತ್ತ, ಕಣಿವೆಯ ಪರಿಸ್ಥಿತಿಯನ್ನು ಉಳಿದ ಭಾರತದೊಂದಿಗೆ ಜಮಾಯಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಯತ್ನಿಸಬೇಕಾಗಿದೆ. ಯಾವುದೇ ಕೇಂದ್ರ ಸರಕಾರವೂ ತನ್ನ ದೇಶದ ಅವಿಭಾಜ್ಯ ಭಾಗಗಳ ಬಗ್ಗೆ ನಿರ್ವಹಿಸಬೇಕಾದ ಅನಿವಾರ್ಯ ಕರ್ತವ್ಯವಿದು. ಭಾರತದ ಸಾರ್ವಭೌಮ ಗಣರಾಜ್ಯ ಸರಕಾರವು ಪ್ರತ್ಯೇಕತಾವಾದಿ ಶಕ್ತಿಗಳು ಮೂಡಿಸಿದ ಪ್ರಾಯೋಜಿತ ಕಲ್ಲು ತೂರಾಟದೆದುರು ಮಣಿಯಲೇಬಾರದು. ಸ್ಯೆನ್ಯದ ಬಂಕರ‍್ಸ್ ತೆಗೆಯುವುದರಿಂದ ಮತ್ತು ಅದರ ಅಧಿಕಾರವನ್ನು ಮೊಟಕುಗೊಳಿಸುವುದರಿಂದ ಅಲ್ಲಿ ಭಾರತದ ಏಕಾತ್ಮತೆ ಮತ್ತು ಅಖಂಡತೆಯ ರಕ್ಷಣೆಯಾಗಲಾರದು. ಸಂಸತ್ತು ೧೯೯೪ ರಲ್ಲಿ ಸರ್ವಾನುಮತದಿಂದ ಸ್ವೀಕರಿಸಿದ ನಿರ್ಣಯದಲ್ಲಿ ವ್ಯಕ್ತವಾದ ಸಂಕಲ್ಪವೇ ನಮ್ಮ ಧೋರಣೆಯ ದಿಶೆಯಾಗಬೇಕು. ಮಹಾರಾಜ ಹರಿಸಿಂಹರು ಸಹಿ ಮಾಡಿದ್ದ ವಿಲೀನ ಪತ್ರಕ್ಕೆ ಅನುಸಾರವಾಗಿ ಭಾರತದಲ್ಲಿ ಕಾಶ್ಮೀರದ ವಿಲೀನವು ಅಂತಿಮ ಮತ್ತು ಅಪರಿವರ್ತನೀಯ ಎಂಬುದನ್ನು ನಾವು ಸದಾ ನೆನಪಿನಲ್ಲಿಡಬೇಕು.
ಎಲ್ಲರೂ ಪ್ರತ್ಯೇಕತಾವಾದಿಗಳಲ್ಲ!
ಜಮ್ಮೂ ಮತ್ತು ಕಾಶ್ಮೀರ ರಾಜ್ಯದಲ್ಲಿ ಕೇವಲ ಕಾಶ್ಮೀರ ಕಣಿವೆಯಷ್ಟೇ ಇರುವುದಲ್ಲ. ಅದರಲ್ಲೂ ಸ್ವಾಯತತ್ತೆಯ ಬೇಡಿಕೆಯಿಡುವವರು ಮತ್ತು ಅದರ ಮರೆಯಲ್ಲಿ ಪ್ರತ್ಯೇಕತೆಯನ್ನು ಉತ್ತೇಜಿಸಿ ಸ್ವಾತಂತ್ರ್ಯದ ಕನಸು ಕಾಣುತ್ತಿರುವವರಂತೂ ಬಹು ಸ್ವಲ್ಪವೇ. ಆದ್ದರಿಂದ ಕೇವಲ ಪ್ರತ್ಯೇಕತಾವಾದಿ ಸಮೂಹಗಳು ಮತ್ತು ಅವರ ನೇತೃತ್ವವನ್ನೇ ವಿವಿಧ ಮಾತುಕತೆಗಳ ಮೂಲಕ ಮುಖ್ಯರೂಪವಾಗಿ ಸಂತೈಸುವುದು ಹಾಗೂ ಮನ್ನಣೆ ನೀಡುವುದು, ಸಮಸ್ಯೆಯನ್ನು ಪರಿಹರಿಸುವ ಬದಲು ಅದನ್ನು ಮತ್ತಷ್ಟು ಉಲ್ಬಣಗೊಳಿಸಲು ಕಾರಣವಾಗಬಹುದು. ಆದ್ದರಿಂದ ನಾವು ಕಣಿವೆಯೊಂದಿಗೇ ಜಮ್ಮೂ ಮತ್ತು ಲಡಾಖಿನ ಅಡಚಣೆಗಳು ಮತ್ತು ಅದರೊಂದಿಗೆ ಅನೇಕ ವರ್ಷಗಳಿಂದ ನಡೆದುಬಂದಿರುವ ಭೇದಭಾವನೆಯ ಕುರಿತು ಸಹ ಗಂಭೀರವಾಗಿ ಆಲೋಚಿಸಬೇಕು. ಕಣಿವೆಯಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳಿಂದ ಉದ್ರೇಕಿಸಲ್ಪಟ್ಟ ಸೈನಿಕರು ಮತ್ತು ಸಾಮಾನ್ಯ ಜನತೆಯೊಂದಿಗೂ ಖಂಡಿತ ಮಾತುಕತೆ ನಡೆಸಬೇಕು. ಆದರೆ ಇದರೊಂದಿಗೇ ಇಡೀ ಜಮ್ಮೂ-ಕಾಶ್ಮೀರದ ರಾಷ್ಟ್ರವಾದಿ ವಿಚಾರದ ಮುಸಲ್ಮಾನರು, ಗುಜ್ಜರ್-ಬಕ್ಕರ್‌ವಾಲಾಗಳು, ಗುಡ್ಡಗಾಡು ಜನ, ಶಿಯಾಗಳು, ಸಿಕ್ಖರು, ಬೌದ್ಧರು, ಕಾಶ್ಮೀರಿ ಪಂಡಿತರು ಮತ್ತು ಇತರ ಹಿಂದುಗಳ ಭಾವನೆಗಳು, ಅವಶ್ಯಕತೆಗಳು ಮತ್ತು ಆಕಾಂಕ್ಷೆಗಳನ್ನೂ ಗಮನದಲ್ಲಿಡುವುದು ತೀರಾ ಅವಶ್ಯಕವಾಗಿದೆ. ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಬಂದಿರುವ ನಿರ್ವಸಿತರ ಬಹು ದೀರ್ಘಕಾಲದಿಂದ ಉಳಿದಿರುವ ನ್ಯಾಯೋಚಿತ ಬೇಡಿಕೆಗಳ ಬಗ್ಗೆ ತುರ್ತು ಗಮನವೀಯುವ ಅಗತ್ಯವಿದೆ. ತಮ್ಮ ಗ್ರಾಮ ಮತ್ತು ಮನೆಗಳಿಂದ ಹೊರಹಾಕಲ್ಪಟ್ಟ ಕಾಶ್ಮೀರಿ ಪಂಡಿತರಿಗೆ ಗೌರವದಿಂದ, ಅವರ ಸುರಕ್ಷೆ ಮತ್ತು ಉದ್ಯೋಗದ ಪೂರ್ಣ ಭರವಸೆ ನೀಡಿ ಶೀರ್ಘಾತಿಶೀಘ್ರ ಅವರ ಇಚ್ಛಾನುಸಾರ ಕಣಿವೆಯಲ್ಲಿ ಪುನರ್ನೆಲಸಬೇಕು. ಅವರೆಲ್ಲ ಭಾರತದೊಂದಿಗೆ ಪೂರ್ಣ ಸೇರ್ಪಡೆ ಬಯಸುವವರು. ಆದ್ದರಿಂದ, ಜಮ್ಮೂ-ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿ ಇವರೆಲ್ಲರ ಸುರಕ್ಷೆ, ಅಭಿವೃದ್ಧಿ ಮತ್ತು ಆಕಾಂಕ್ಷೆಗಳ ಬಗ್ಗೆ ಆಲೋಚಿಸಬೇಕು. ಇವೆಲ್ಲ ಮುಖಗಳ ಕುರಿತು ಆಲೋಚಿಸುವುದರಿಂದಲೇ, ಜಮೂ-ಕಾಶ್ಮೀರಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ ಮಾತುಕತೆಗಳು ಸರ್ವಸಮಾವೇಶಕ ಮತ್ತು ಫಲಪ್ರದವಾದಾವು.
ಸ್ವಾತಂತ್ರ್ಯ ಬಂದಾಗಿನಿಂದಲೇ ಜಮ್ಮೂ ಮತ್ತು ಕಾಶ್ಮೀರದ ಪ್ರಜೆಗಳು ಭೇದಭಾವರಹಿತ ಒಳ್ಳೆಯ ಆಡಳಿತ ಮತ್ತು ಶಾಂತಿಗೆ ಹಾತೊರೆಯುತ್ತ ಬಂದಿದ್ದಾರೆ. ಅವರಿಗೆ ಇವೆಲ್ಲ ಶೀಘ್ರಾತಿಶೀಘ್ರ ಸಿಗುವಂತಹ ಜಾಗೃತ ಸರಕಾರ ಮತ್ತು ಆಡಳಿತದ ವ್ಯವಸ್ಥೆಯನ್ನು ನಿರ್ಮಿಸುವುದು ಅಗತ್ಯ.
ಚೀನಾ: ಒಂದು ಗಂಭೀರ ಸವಾಲು
ಟಿಬೇಟಿನ ನೆಲದಲ್ಲಿ ಬಲವಂತವಾಗಿ ಕಾಲೂರಿಕೊಂಡಿರುವ ಚೀನವು ಅದು ಸಕ್ರಮವೆಂದು ಸಿದ್ಧಗೊಳಿಸಲು, ಟಿಬೆಟ್ ಸಮಸ್ಯೆಯನ್ನು ಕಾಶ್ಮೀರಕ್ಕೆ ಹೋಲಿಸುತ್ತಿದೆ. ಆದರೆ ಅದೀಗ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನದಲ್ಲಿ ನೇರವಾಗಿ ನೆಲೆಯೂರಿದೆ. ಜಮ್ಮೂ ಮತ್ತು ಕಾಶ್ಮೀರ ರಾಜ್ಯ ಮತ್ತು ಈಶಾನ್ಯ ಪ್ರದೇಶದ ಜನರು ಚೀನಕ್ಕೆ ಪ್ರವೇಶಿಸಲು ವೀಸಾದ ಅಗತ್ಯವಿಲ್ಲವೆಂದು ತಿಳಿಸಿ ಅದು ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದೆ. ಚೀನದ ಉದ್ದೇಶಗಳ ವಿಷಯದಲ್ಲಿ ಈಗ ಯಾರಿಗೂ ಯಾವ ಭ್ರಮೆ ಅಥವಾ ಅಸ್ಪಷ್ಟತೆಗೆ ಕಾರಣವೇನೂ ಇಲ್ಲ. ಆ ಉದ್ದೇಶಗಳಿಂದ ಭಾರತವನ್ನು ಸುತ್ತುವರಿಯಲು , ಒತ್ತಡ ತರಲು ಮತ್ತು ದುರ್ಬಲಗೊಳಿಸಲು ಚೀನದ ಸಾಮರಿಕ, ರಾಜಕೀಯ ಮತ್ತು ವ್ಯಾಪಾರೀ ವ್ಯೂಹರಚನೆಯ ಸಶಕ್ತ ಮತ್ತು ಪರಿಣಾಮಕಾರಿ ಕ್ರಮಗಳ ಬಗ್ಗೆ ಸರಕಾರ ಜಾಗೃತವಾಗಿರಬೇಕು, ಸಮಾಜದ ಮನಸ್ಸಿನ ಸಿದ್ಧತೆ ಮಾಡಬೇಕು, ಈ ಕುರಿತು ತ್ವರಿತವಾಗಿ ಗಮನಿಸಿ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಇನ್ನೂ ವಿಳಂಬಿಸಿದಲ್ಲಿ ಭವಿಷ್ಯದಲ್ಲಿ ಬಹು ಗಂಭೀರ ವಿಪತ್ತು ಬಂದೆರಗೀತು.
ನಕ್ಸಲ್‌ರ ಭಯೋತ್ಪಾದನೆ
ಚೀನದ ಬೆಂಬಲದಿಂದ ನೇಪಾಳದಲ್ಲಿ ಮಾವೊವಾದಿಗಳ ಉಪಟಳ ಶುರುವಾಗಿ, ಅದೀಗ ಬೆಳೆದಿದೆ. ನೇಪಾಳದ ಆ ಮಾವೊವಾದಿಗಳು ನಮ್ಮ ದೇಶದ ಮಾವೊವಾದಿ ಭಯೋತ್ಪಾದನೆಯೊಂದಿಗೆ ಸಂಬಂಧಿಸಿದ್ದಾರೆ. ಅವರನ್ನು ದೃಢತೆಯಿಂದ ಹತೋಟಿಗೆ ತರುವ ವಿಷಯದಲ್ಲಿ ಸರಕಾರವು ತನ್ನದೇ ಆಂತರಿಕ ಜಗ್ಗಾಟದಲ್ಲಿ ಸಿಲುಕಿಕೊಂಡಿದೆ. ಸರಕಾರವನ್ನು ಪಾರದರ್ಶಿ ಮತ್ತು ಹೊಣೆಗಾರನನ್ನಾಗಿ ಮಾಡುವುದು, ಮಾವೊವಾದಿ ಪ್ರಭಾವಿತ ಪ್ರದೇಶಗಳಲ್ಲಿ ಅಭಿವೃದ್ಧಿ ಪ್ರಕ್ರಿಯೆಯನ್ನು ಚುರುಕುಗೊಳಿಸುವುದರಲ್ಲಿ ಪರಿಣಾಮಕಾರಿ ಪ್ರಯತ್ನಗಳೇನೂ ತೋರುತ್ತಿಲ್ಲ. ಅಲ್ಲಲ್ಲಿ ಈ ಸಮಸ್ಯೆಯನ್ನೂ ತಮ್ಮ ರಾಜಕೀಯ ಸ್ವಾರ್ಥಕ್ಕೆ ಸಾಧನವಾಗಿ ಬಳಸಲಾಗುತ್ತಿದೆ. ದೇಶದ ಸುರಕ್ಷೆ ಮತ್ತು ಪ್ರಜಾತಂತ್ರಕ್ಕೆ ಈ ವಿಷಯ ಬಹು ದುಬಾರಿಯೇನಿಸೀತು.
ಈಶಾನ್ಯ ಭಾರತೀಯರ ಉಪೇಕ್ಷೆ
ಈಶಾನ್ಯ ಪ್ರದೇಶದ ಸಂದರ್ಭದಲ್ಲಿಯೂ ಈ ವಿಷಯ ಮಹತ್ವಪೂರ್ಣವಾಗಿದೆ. ಅಲ್ಲಿಯೂ ಸಹ ಪ್ರತ್ಯೇಕತಾವಾದಿ ಸ್ವರಗಳಿಗೆ ಪೋಷಣೆ ಸಿಗುತ್ತಿದ್ದು, ದೇಶದ ಬಗ್ಗೆ ನಿಷ್ಠೆ ಹೊಂದಿರುವವರನ್ನು ನಿರ್ಲಕ್ಷಿಸಲಾಗುತ್ತದೆ. ಜನಬೆಂಬಲ ಕಳೆದುಕೊಂಡು ಮೃತಪ್ರಾಯಗೊಳ್ಳುತ್ತಿದ್ದ ಓSಅಓನಂತಹ ಪ್ರತ್ಯೇಕತಾವಾದಿ ಭಯೋತ್ಪಾದಕ ಸಂಘಟನೆಗಳು ಪುನಃ ಪುನರುಜ್ಜೀವಿತಗೊಂಡು ತಮ್ಮ ಭಯೋತ್ಪಾದನೆ ಮತ್ತು ಪ್ರತ್ಯೇಕತೆಯೊಂದಿಗೆ ಎದ್ದು ನಿಲ್ಲಲು ಅವಕಾಶವುಂಟಾಗಲು ಈ ಧೋರಣೆಯೇ ಕಾರಣ. ಈಶಾನ್ಯ ಗಡಿಭಾಗದ ರಕ್ಷಕನಾಗಿದ್ದು ಚೀನದ ಸವಾಲನ್ನು ಎದುರಿಸುವ ಸಾಹಸ ತೋರಿದ ಅರುಣಾಚಲವನ್ನು ಉಪೇಕ್ಷಿಸಲಾಗುತ್ತಿದೆ. ಮಣಿಪುರದ ದೇಶಭಕ್ತ ಜನರಂತೂ ಆ ಪ್ರತ್ಯೇಕತಾವಾದಿಗಳು ಮಾಡಿದ ದೀರ್ಘಾವಧಿಯ ರಸ್ತೆತಡೆಯಿಂದ ಜೀವನಾವಶ್ಯಕ ವಸ್ತುಗಳ ಘೋರ ಅಭಾವದಿಂದ ತತ್ತರಿಸಿದರು, ಪರಿಹಾರಕ್ಕೆ ಕೂಗಾಡುತ್ತ ದಣಿದರು, ನಿರಾಶೆಯಿಂದ ಪ್ರಕ್ಷುಬ್ಧರಾದರು. ನಮ್ಮದೇ ದೇಶದ ದೇಶಭಕ್ತ ಜನತೆಯ ಉಪೇಕ್ಷೆ ಹಾಗೂ ವಿನಾಕಾರಣ ಪ್ರತ್ಯೇಕತಾವಾದಿಗಳ ಪ್ರಶಂಸೆ, ಇದರಿಂದಾಗಿ ಚೀನದ ವಿಸ್ತಾರವಾದಿ ಯೋಜನೆಗಳ ಛಾಯೆಯಲ್ಲಿ ದೇಶದ ಗಡಿಭಾಗಗಳ ಸುರಕ್ಷೆಯ ಸ್ಥಿತಿ ಅದೆಷ್ಟು ಹದಗೆಟ್ಟೀತೆಂದು ನಮ್ಮ ದೇಶದ ನಾಯಕವರ್ಗ ಕಲ್ಪಿಸಿಕೊಳ್ಳುತ್ತಿಲ್ಲವೇಕೆ? ವಿದೇಶಿ ಕ್ರೈಸ್ತ ಮಿಶನರಿಗಳ ಷಡ್ಯಂತ್ರ ಮತ್ತು ಉಪಟಳದ ಕುರಿತು ನಿರಂತರ ನಿರ್ಲಕ್ಷ್ಯದಿಂದಾಗಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ತುಷ್ಟೀಕರಣ ರಾಜಕೀಯದ ಅಪಾಯ
ಒಂದು ಕಡೆಯಂತೂ, ಕತ್ತಲುನಗರಿಯ ರಾಜನಿಗಷ್ಟೇ ಶೋಭಿಸುವಂತಹ ಸರಕಾರದ ಇಚ್ಛಾಶಕ್ತಿಯಿಲ್ಲದ ಡೋಲಾಯಮಾನ ವೈಖರಿ, ಇನ್ನೊಂದು ಕಡೆ ಸ್ವಾತಂತ್ರ್ಯ ಬಂದು ೬೦ ವರ್ಷಗಳಾದರೂ ಶಿಥಿಲವಾದ ಗಡಿಭಾಗಗಳಿಂದ ನಿರಂತರ ನಡೆಯುತ್ತ ಬಂದಿರುವ ಅಕ್ರಮಪ್ರವೇಶ. ನ್ಯಾಯಾಲಯಗಳು ಮತ್ತು ಗುಪ್ತಚರ ಸಂಸ್ಥೆಗಳು ಮತ್ತೆ ಮತ್ತೆ ನೀಡಿದ್ದ
detect, delete, and deport ಎಂಬ ಅಭಿಪ್ರಾಯವಿದ್ದರೂ, ಅದರ ಮೊದಲ ಕ್ರಮವಾದ ಜeಣeಛಿಣವರೆಗೆ ಕಾರ್ಯಾಚರಣೆ ಮಾಡುವ ಇಚ್ಛಾಶಕ್ತಿ ಮತ್ತು ದೃಢತೆಯನ್ನು , ಚುನಾವಣೆಗಳಲ್ಲಿ ಮತಗಳ ಗಳಿಕೆಗಾಗಿ ತುಷ್ಟೀಕರಣದ ಯಾವ ಮಟ್ಟಕ್ಕೂ ಹೋಗಬಲ್ಲ ನಮ್ಮ ರಾಜ್ಯಗಳ ಮತ್ತು ಕೇಂದ್ರದ ನಾಯಕರು ಕಳೆದುಕೊಂಡಿರುವ ಚಿತ್ರಣವೇ ಎಲ್ಲೆಡೆಯೂ ಕಾಣುತ್ತಿದೆ. ಈಶಾನ್ಯದ ರಾಜ್ಯಗಳು, ಬಂಗಾಳ ಮತ್ತು ಬಿಹಾರದ ಗಡಿಭಾಗದ ಜಿಲ್ಲೆಗಳಲ್ಲಿ ಜನಸಂಖ್ಯೆಯ ಚಿತ್ರಣವನ್ನು ಬದಲಾಯಿಸುತ್ತಿರುವ ಈ ಅಕ್ರಮಪ್ರವೇಶವು, ಅಲ್ಲಿ ಕಟ್ಟರ್‌ವಾದಿ ಜಾತೀಯ ಮನೋಭಾವವನ್ನು ಬೆಳೆಸಿ ಅಲ್ಲಿಯ ಮೂಲನಿವಾಸಿ ಜನಜಾತಿಗಳು ಮತ್ತು ಹಿಂದೂ ಜನತೆಯನ್ನು ಪೀಡಿಸುತ್ತಿರುವ ಗೂಂಡಾಗಿರಿ ಮತ್ತು ಅತ್ಯಾಚಾರಿ ಗಲಭೆಕೋರರ ಉದ್ಧಟತನ ಮತ್ತು ದುಸ್ಸಾಹಸವನ್ನು ಪ್ರೋತ್ಸಾಹಿಸಿದೆ. ಇತ್ತೀಚೆಗೆ ಬಂಗಾಳದ ದೇಬ್‌ಗಂಗಾದಲ್ಲಿ ಹಿಂದೂ ಸಮಾಜದ ಮೇಲಾಗಿರುವ ಭೀಕರ ಹಲ್ಲೆಯು, ಈ ಗಡಿಭಾಗದಲ್ಲಿ ಆಗುತ್ತಿರುವ ಹಾವಳಿಗೆ ಒಂದು ಉದಾಹರಣೆಯಾಗಿದೆ. ಅಲ್ಲಿಯ ರಾಜ್ಯ ಸರಕಾರಕ್ಕಾಗಲೀ ಅಥವಾ ಕೇಂದ್ರದ ಅಧಿಕಾರಾರೂಢ ನಾಯಕರಿಗಾಗಲೀ ಹಿಂದೂ ಜನತೆಯ ಈ ವಿಪತ್ತಿನ ಬಗ್ಗೆ ಕಾಳಜಿಯೇನೂ ಇಲ್ಲ. ಎಲ್ಲರೂ ತಮ್ಮ ವೋಟ್ ಬ್ಯಾಂಕಿನ ಮೇಲೆಯೇ ಕಣ್ಣಿಟ್ಟಿರುತ್ತಾರೆ. ಆಂತರಿಕ ಕಾನೂನು, ಸುವ್ಯವಸ್ಥೆ ಹಾಗೂ ಹಿಂದುಗಳ ಸುರಕ್ಷೆಯು ಗಡಿಭಾಗದ ಜಿಲ್ಲೆಗಳಲ್ಲಿ ಅಪಾಯಕ್ಕೀಡಾಗಿರುವುದು, ನಮ್ಮ ಗಡಿಭದ್ರತೆಯನ್ನು ಶಿಥಿಲಗೊಳಿಸುತ್ತದೆ. ಸರಕಾರಗಳ ಸಹಿತ ಎಲ್ಲರಿಗೂ ದೇಶದ ಎಲ್ಲೆಡೆ ಇದು ಅನುಭವಕ್ಕೆ ಬಂದಿದ್ದರೂ, ಇದೇ ಪರಿಸ್ಥಿತಿ ಮುಂದುವರಿಯುತ್ತಿದೆ.
ಈ ವಿಷಯದ ಬಗ್ಗೆ ಸರಕಾರ ವಾಸ್ತವಿಕವಾಗಿ ಚಿಂತಿಸುತ್ತಿದೆಯೇ, ಇಲ್ಲವೇ ಎಂಬ ಸಂದೇಹವುಂಟಾಗುತ್ತಿದೆ. ಈ ಬಾರಿಯ ಜನಗಣತಿಯಲ್ಲಿ ಯಾವ ಪ್ರಮಾಣವೂ ಇಲ್ಲದೆ, ಕೇವಲ ತಿಳಿಸುವವ ಹೇಳುವುದನ್ನು ಪ್ರಮಾಣವೆಂದು ಪರಿಗಣಿಸಿ, ಪೌರತ್ವದ ನಿರ್ಧಾರಕ್ಕೂ ಅವಕಾಶ, ನಮ್ಮ ದೇಶಕ್ಕೆ ಅಕ್ರಮಪ್ರವೇಶ ಮಾಡಿರುವ ಯಾವ ವ್ಯಕ್ತಿಯೂ ಪೌರತ್ವ ಪಡೆಯಲು ಅವಕಾಶ ನೀಡುತ್ತದೆ. ಈಗ ಎಲ್ಲ ಜನರಿಗೂ ಗುರುತಿನ ಕ್ರಮಾಂಕ (
Unique identification number) ಸಿಗುವುದು. ಆದರೆ ಗುರುತಿನ ಕ್ರಮಾಂಕ ಪಡೆಯುವವನು ವಾಸ್ತವಿಕವಾಗಿ ಈ ದೇಶದ ಪೌರನೆಂದು ಪ್ರಮಾಣೀಕರಿಸಲು ಯಾವ ವ್ಯವಸ್ಥೆಯಿದೆ? ಯೋಜನೆಗಳನ್ನು ರೂಪಿಸುವುದರಲ್ಲಿ ಈ ಎಚ್ಚರಿಕೆ ವಹಿಸುವುದರಲ್ಲಿ ಶಿಥಿಲತೆ ಅಥವಾ ತಪ್ಪುಗಳು ಆಗಬಾರದು.
ಹುಟ್ಟಿನಿಂದ ಜಾತಿರಹಿತ ಸಮಾಜದ ರಚನೆಯನ್ನು ಒತ್ತಿ ಹೇಳುವಾಗ, ದೇಶದ ಜನಗಣತಿ ಮಾಡುವಾಗ ಜಾತಿಯನ್ನು ಕೇಳಿ ಮತ್ತೊಮ್ಮೆ ಅದನ್ನು ನೆನಪಿಸುವ ಯೋಜನೆ ಮಾಡಿದ್ದೇಕೆ? ಸಾಮರಸ್ಯದ ಸಮಾಜಪ್ರವೃತ್ತಿ ಬೆಳೆಸಲು ತಮ್ಮ ಜಾತಿ ಹಿಂದೂ, ಹಿಂದುಸ್ಥಾನಿ ಅಥವಾ ಭಾರತೀಯ ಎಂದು ಬರೆಯಿರಿ, ಹೇಳಿರಿ, ಭಾವಿಸಿರಿ ಎಂದು ದೇಶದ ಗಣ್ಯವಿದ್ವಾಂಸರು, ಸಾಮಾಜಿಕ ಕಾರ್ಯಕರ್ತರು ಕರೆ ನೀಡುತ್ತಲೇ ಇದ್ದಾರೆ. ಹೀಗಿರುವಾಗ ದೇಶದಲ್ಲಿ ಭಾವನಾತ್ಮಕ ಏಕತೆಯನ್ನು ಮೂಡಿಸಲು ಕರ್ತವ್ಯಬದ್ಧವಾಗಿರುವ ಸರಕಾರವು ಅವರನ್ನು ವಿರೋಧಿಸುತ್ತ, ಪ್ರತಿಯೊಬ್ಬ ವ್ಯಕ್ತಿಯ ಜಾತಿಯನ್ನು ಲೆಕ್ಕಾಚಾರ ಮಾಡಿಸುವುದೇಕೆ? ಯೋಜನೆಗಾಗಿ ಅಂಕಿಸಂಖ್ಯೆಗಳನ್ನು ಸಂಕಲನ ಮಾಡುವ ಒಂದು ಪ್ರತ್ಯೇಕ, ಸ್ವತಂತ್ರ, ತಾತ್ಕಾಲಿಕ ಮತ್ತು ಸೀಮಿತ ವ್ಯವಸ್ಥೆಯನ್ನು ನಿರ್ಮಿಸುವುದು ಸರಕಾರಿ ಸಾಮರ್ಥ್ಯಕ್ಕೆ ಹೊರತಾದುದೇನಲ್ಲ.
ನಡೆ ಮತ್ತು ನುಡಿಯಲ್ಲಿ ಅಂತರ್ವಿರೋಧ
ದೇಶವನ್ನು ಯಾವ ಕಡೆ ಒಯ್ಯುವ ನಮ್ಮ ಘೋಷಣೆಗಳು ಒಂದೆಡೆಯಾದರೆ, ನಾವು ಅದನ್ನು ವಾಸ್ತವಿಕವಾಗಿ ಯಾವ ಕಡೆ ಒಯ್ಯುತ್ತಿದ್ದೇವೆ? ನಾವು ದೇಶದ ಯಾವ ಸಾಮಾನ್ಯ ವ್ಯಕ್ತಿಯ ಅಧಿಕ ಉನ್ನತಿಯ ಮಾತನಾಡುತ್ತೇವೋ, ಅವರಂತೂ ಕೃಷಿಕರು, ಚಿಲ್ಲರೆ ವ್ಯಾಪಾರಿಗಳು ಅಥವಾ ಕೈಗಾಡಿಯಲ್ಲಿ ತರಕಾರಿ ಮಾರಾಟ ಮಾಡುವವರು, ಫುಟ್‌ಪಾತ್ ಮೇಲೆ ಸಣ್ಣ ಪುಟ್ಟ ವಸ್ತುಗಳನ್ನು ಮಾರಾಟ ಮಾಡುವವರು, ಗ್ರಾಮೀಣ ಮತ್ತು ನಗರದ ಅಸಂಘಟಿತ ಕಾರ್ಮಿಕರು, ಕಸಬುದಾರರು, ವನವಾಸಿಗಳು. ಆದರೆ ನಾವು ಅನುಸರಿಸುತ್ತಿರುವ ಆರ್ಥಿಕತೆ ಮತ್ತು ಅದರ ಆಮದಿನ ಪಾಶ್ಚಾತ್ಯ ಮಾದರಿಯಂತೂ, ದೊಡ್ಡ ವ್ಯಾಪಾರಿಗಳನ್ನು ಕೇಂದ್ರವಾಗಿಸುವಂತಹದ್ದು, ಗ್ರಾಮಗಳನ್ನು ಹಾಳುಗೆಡಹುವಂತಹದ್ದು, ನಿರುದ್ಯೋಗ ಹೆಚ್ಚಿಸುವಂತಹದ್ದು, ಪರ್ಯಾವರಣವನ್ನು ದೂಷಿತಗೊಳಿಸಿ ಅಧಿಕ ಇಂಧನ ಬಳಸಿ ಅಧಿಕ ವೆಚ್ಚದ್ದಾಗಿಸುವಂತಹದ್ದು. ಸಾಮಾನ್ಯ ವ್ಯಕ್ತಿಗಳು, ಪರ್ಯಾವರಣ, ಇಂಧನ ಮತ್ತು ಹಣದ ಉಳಿತಾಯ, ಉದ್ಯೋಗಗಳ ಸೃಷ್ಟಿ ಇತ್ಯಾದಿ ವಿಷಯಗಳು ಅವರ ಕೇಂದ್ರದಲ್ಲಿ ಏನೇನೂ ಇರುವುದಿಲ್ಲ.
ಒಂದು ಕಡೆ ನಾವು ಎಲ್ಲರ ಶಿಕ್ಷಣದ ಬಗ್ಗೆ ಮಾತನಾಡುತ್ತೇವೆ. ಇನ್ನೊಂದು ಕಡೆ ಶಿಕ್ಷಣ ವ್ಯವಸ್ಥೆಯ ವ್ಯಾಪಾರೀಕರಣ ಮಾಡುತ್ತ ಅದು ಬಡವರಿಗೆ ಹೆಚ್ಚೆಚ್ಚು ಕೈಗೆಟುಕದಂತೆ ಮಾಡುತ್ತಿದ್ದೇವೆ. ಮಾನವೀಯ ಭಾವನೆ, ಸಾಮಾಜಿಕ ಹೊಣೆಗಾರಿಕೆ, ಕರ್ತವ್ಯ ತತ್ಪರತೆ, ದೇಶಭಕ್ತಿ ಇವೆಲ್ಲ ನಮ್ಮ ಸಮಾಜಜೀವನದಲ್ಲಿ ಪ್ರಭಾವಿಯಾಗಬೇಕು ಎಂದು ಶಿಕ್ಷಣ ಸಂಸ್ಥೆಗಳಿಗೆ ಹೋಗಿ ನಾವು ಉಪದೇಶ ನೀಡುತ್ತೇವೆ. ಆದರೆ ಇವೆಲ್ಲ ಮೌಲ್ಯಗಳನ್ನು , ಸಂಸ್ಕಾರ ನೀಡುವ ಎಲ್ಲ ವಿಷಯಗಳನ್ನೂ ಬದಿಗೊತ್ತಿ, ಹಣ, ಅಧಿಕ ಹಣ ಮತ್ತು ಅಧಿಕ ಹಣವನ್ನು ಯಾವುದೇ ವಿಧಾನದಿಂದಾಗಲೀ ಸಂಪಾದಿಸುವುದೇ ಜೀವನದ ಸಫಲತೆಯೆಂದು ಭಾವಿಸಿ ಕೇವಲ ಸ್ವಾರ್ಥ, ಭೋಗ ಮತ್ತು ಜಡವಾದವನ್ನು ಕಲಿಸುವ ಪಾಠ್ಯಕ್ರಮ ಮತ್ತು ಪುಸ್ತಕಗಳನ್ನು ಜಾರಿಗೊಳಿಸುತ್ತೇವೆ. ನಡೆ ಮತ್ತು ನುಡಿಯ ಈ ಆಂತರ್ವಿರೋಧದ ವೈಶ್ವಿಕ ಹೊಣೆಗಾರಿಕೆ ಮತ್ತು ಏಕತೆಯ ಸೂತ್ರದ ಬಗ್ಗೆ ಘೋರ ಅಜ್ಞಾನ, ಅಸ್ಪಷ್ಟತೆ ಅಥವಾ ಅವುಗಳ ಬಗ್ಗೆ ಗೌರವದ ಅಭಾವ ಹಾಗೂ ಸ್ವಾರ್ಥ ಮತ್ತು ಒಡಕಿನ ಪ್ರವೃತ್ತಿ. ಎಲ್ಲ ಕ್ಷೇತ್ರಗಳಲ್ಲೂ ರಾಷ್ಟ್ರದ ನೇತೃತ್ವ ವಹಿಸುತ್ತಿರುವ ವ್ಯಕ್ತಿಗಳಲ್ಲಿ ಯೋಗ್ಯ ಸ್ವಭಾವವಿರಬೇಕು, ಯೋಗ್ಯ ಚಾರಿತ್ರ್ಯವಿರಬೇಕು, ಉಚಿತ ಪ್ರವೃತ್ತಿಯಿರಬೇಕು. ಎಂದೂ ಇದರಲ್ಲಿ ಶಿಥಲತೆ ಬರಬಾರದು ಎಂದು ಚಿಂತಿಸುವ ಜಾಗೃತ ಸಮಾಜವೇ ಈ ಪರಿಸ್ಥಿತಿಗೆ ಪರಿಹಾರ ನೀಡಬಲ್ಲದು.
ಹಿಂದುತ್ವ: ಒಂದು ಅನಿವಾರ್ಯ ಆವಶ್ಯಕತೆ
ಕಳೆದ ೮೫ ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅಂತಹದೇ ಸಮಾಜದ ನಿರ್ಮಾಣಕ್ಕಾಗಿ ಸುಯೋಗ್ಯ ವ್ಯಕ್ತಿಗಳ ನಿರ್ಮಾಣದ ಕಾರ್ಯದಲ್ಲಿ ತೊಡಗಿದೆ. ನಮ್ಮ ಈ ಪ್ರಾಚೀನ ರಾಷ್ಟ್ರದ ವಿಶಿಷ್ಟವಾದ ಸ್ವಂತಿಕೆ, ದೇಶದ ಅಖಂಡತೆ ಮತ್ತು ಸುರಕ್ಷೆಯ ಆಧಾರ, ಸಮಾಜದ ಏಕಾತ್ಮತೆಯ ಸೂತ್ರ ಹಾಗೂ ಪುರುಷಾರ್ಥಿ ಉದ್ಯಮದ ಸ್ರೋತ ಮತ್ತು ವಿಶ್ವದ ಸುಖ-ಶಾಂತಿಪೂರ್ಣ ಜೀವನದ ಅನಿವಾರ್ಯ ಅವಶ್ಯಕತೆಯು ಹಿಂದುತ್ವವೇ ಆಗಿದ್ದು, ಇದೀಗ ಸರ್ವಮಾನ್ಯವಾಗಿದೆ. ಹೆಚ್ಚೆಚ್ಚು ಸ್ವಯಂಸ್ಪಷ್ಟವಾಗತೊಡಗಿದೆ. ಎರಡೂವರೆ ದಶಕಗಳ ಹಿಂದೆ ಶ್ರೀ ವಿಜಯದಶಮಿ ಉತ್ಸವದ ಇದೇ ವೇದಿಕೆಯಿಂದ ಸಂಘದ ಆಗಿನ ಪೂಜ್ಯ ಸರಸಂಘಚಾಲಕ ಶ್ರೀ ಬಾಳಾಸಾಹೆಬ್ ದೇವರಸ್ ಹೇಳಿದ್ದರು- ‘ಭಾರತದಲ್ಲಿ ಜಾತ್ಯತೀತತೆ, ಸಮಾಜವಾದ ಮತ್ತು ಪ್ರಜಾತಂತ್ರ ಜೀವಂತವಾಗಿರುವುದು, ಇದು ಹಿಂದೂರಾಷ್ಟ್ರವಾಗಿದೆ ಎಂಬ ಕಾರಣಕ್ಕೆ’, ಇಂದು ಶ್ರೀ ಎಂ.ಜೆ. ಅಕ್ಬರ್ ಮತ್ತು ಶ್ರೀ ರಶೀದ್ ಅಲವೀಯವರಂತಹ ವಿಚಾರವಂತರು ಇದನ್ನೇ ಬರೆಯುತ್ತಿದ್ದಾರೆ, ಹೇಳುತ್ತಿದ್ದಾರೆ. ಎಲ್ಲ ವೈವಿಧ್ಯಗಳಲ್ಲಿ ಏಕತೆಯ ದರ್ಶನ ಮಾಡಿಸುವ ಬೋಧೆಯನ್ನು ನೀಡುವ, ಅದಕ್ಕೆ ಸುರಕ್ಷೆ ಮತ್ತು ಪ್ರತಿಷ್ಠೆ ನೀಡುವ ಹಾಗೂ ಏಕತೆಯ ಸೂತ್ರದಲ್ಲಿ ಪೋಣಿಸುವುದೇ ಹಿಂದುತ್ವ. ಹಿಂದುತ್ವದ ಈ ವ್ಯಾಪಕ, ಸರ್ವಕಲ್ಯಾಣಕಾರಿ, ಮತ್ತು ಪ್ರತಿಕ್ರಿಯೆ ಮತ್ತು ವಿರೋಧರಹಿತವಾದ ಪವಿತ್ರ ಆಶಯವನ್ನು ಮನಸ್ಸು – ಮಾತು – ಕೃತಿಗಳಲ್ಲಿ ರೂಢಿಸಿಕೊಂಡು ಈ ದೇಶದ ಪುತ್ರರೂಪೀ ಹಿಂದೂ ಸಮಾಜ ಎದ್ದು ನಿಲ್ಲಬೇಕು. ನಿರ್ಭಯ ಮತ್ತು ಸಂಘಟಿತವಾಗಿ ನಮ್ಮ ಪವಿತ್ರ ಮಾತೃಭೂಮಿ ಭಾರತಮಾತೆ, ಉಜ್ವಲಪೂರ್ಣ- ಪರಂಪರೆ ಹಾಗೂ ಲೋಕಕಲ್ಯಾಣಕಾರಿಯಾದ ಹಿಂದೂ ಸಂಸ್ಕೃತಿಯ ಗೌರವದ ಘೋಷಣೆ ಮಾಡಬೇಕು, ಇದು ಇಂದಿನ ಮಹತ್ತರ ಅವಶ್ಯಕತೆಯಷ್ಟೇ ಅಲ್ಲ, ಅನಿವಾರ್ಯತೆಯೂ ಆಗಿದೆ. ಸ್ವಾರ್ಥ ಮತ್ತು ಭೇದಗಳ ಕಲ್ಮಶವನ್ನು ದೂರಸರಿಸಿ ಪರಮವೈಭವಸಂಪನ್ನ, ಪುರುಷಾರ್ಥಿ ದಿಗ್ವಿಜಯಿ ಭಾರತದ ನಿರ್ಮಾಣಕ್ಕಾಗಿ ಸರ್ವ ರೀತಿಯ ಪರಿಶ್ರಮದ ಪರಾಕಾಷ್ಠೆ ಮಾಡೋಣ. ಸಂಪೂರ್ಣ ವಿಶ್ವವನ್ನು ಸಮಸ್ಯಾಮುಕ್ತಗೊಳಿಸಿ ಸುಖಶಾಂತಿಯ ಮಾರ್ಗದಲ್ಲಿ ಮುನ್ನಡೆಸೋಣ. ಸರ್ವ ರೀತಿಯ ಬಿಕ್ಕಟ್ಟಿನ ಪರಿಸ್ಥಿತಿಗಳನ್ನೂ ಯಶಸ್ವಿಯಾಗಿ ಬಗೆಹರಿಸಲು ಇದೇ ಏಕೈಕ, ಅಮೋಘ, ನಿಶ್ಚಿತ ಮತ್ತು ನಿರ್ಣಾಯಕ ಉಪಾಯವಾಗಿದೆ.
ಆದ್ದರಿಂದ ನಿತ್ಯ ಶಾಖೆಯ ಸಾಧನೆಯ ಮೂಲಕ ಪ್ರತಿಯೊಬ್ಬ ವ್ಯಕ್ತಿಯನ್ನೂ ಹಿಂದುತ್ವದ ಸಂಸ್ಕಾರಗಳು ಮತ್ತು ಗೌರವದಿಂದ ಪರಿಪೂರ್ಣಗೊಳಿಸಿ ನಿಸ್ವಾರ್ಥ ಮತ್ತು ಭೇದರಹಿತವಾದ ಅಂತಃಕರಣದಿಂದ ತನು-ಮನ-ಧನಪೂರ್ವಕ ದೇಶ, ಧರ್ಮ, ಸಂಸ್ಕೃತಿ ಮತ್ತು ಸಮಾಜಕ್ಕಾಗಿ ಜೀವನವನ್ನು ಮುಡಿಪಾಗಿಡುವ ಪ್ರೇರಣೆ ಮತ್ತು ಗುಣಗಳನ್ನು ಮೂಡಿಸಿ, ಸಮಗ್ರ ಸಮಾಜವನ್ನು ಸಂಘಟಿತ ಮತ್ತು ಶಕ್ತಿಶಾಲಿ ಸ್ಥಿತಿಗೆ ತರಲು, ಸಂಘದ ಕಾರ್ಯ ನಡೆಯುತ್ತಿದೆ. ಈ ಕಾರ್ಯ ಪೂರ್ಣಗೊಳ್ಳುವವರೆಗೂ ಮಾಡುತ್ತಿರುವುದಲ್ಲದೆ ಸಂಘಕ್ಕೆ ಮತ್ತಾವ ಪ್ರಯೋಜನ ಅಥವಾ ಮಹತ್ವಾಕಾಂಕ್ಷೆಯೂ ಇಲ್ಲ. ಕೇವಲ ಅಗತ್ಯವಿರುವುದಾದರೂ, ಇದನ್ನು ಪವಿತ್ರ ಕಾರ್ಯವೆಂದು ಭಾವಿಸಿ ತಮ್ಮ ಕಾರ್ಯವೆಂದು ತಿಳಿದು ಎಲ್ಲರೂ ಸಹಯೋಗಿ ಭಾವನೆಯಿಂದ ಇದರಲ್ಲಿ ತೊಡಗುವುದಷ್ಟೇ. ಇದೇ ನನ್ನ ವಿನಯಪೂರ್ಣ ಆಗ್ರಹ ಮತ್ತು ಅಂತಃಕರಣದ ಕರೆಯಾಗಿದೆ.
– ಮೋಹನ್‌ಜೀ ಭಾಗವತ್
(ಆರೆಸ್ಸೆಸ್ ಸರಸಂಘಚಾಲಕರು, ನಾಗಪುರದಲ್ಲಿ ಭಾನುವಾರ 18.10.2010ರಂದು ನಡೆದ ವಿಜಯದಶಮೀ ಕಾರ್ಯಕ್ರಮದ ಭಾಷಣದಲ್ಲಿ)