ಸಂಘದ ಸ್ಥಾಪಕರ ಪಾಠ ಶಾಲೆಗಳಲ್ಲಿ ಏಕೆ? ಎಂದು ಬುದ್ಧಿಜೀವಿಗಳು ಕೇಳುತ್ತಿದ್ದಾರೆ. ತಮ್ಮ ಮೂಗಿನ ನೇರಕ್ಕಿಲ್ಲದ ವಿಚಾರಧಾರೆಯ ಜನರು ಬದುಕಿರುವುದನ್ನೇ ಸಹಿಸದ ಇವರುಗಳಿಗೆ ಉತ್ತರ ಕೊಟ್ಟು ಪ್ರಯೋಜನವಿಲ್ಲ. ನಿರಂತರವಾಗಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಸಂಘದಂತಹ ಸಂಘಟನೆಯ ವಿಚಾರಗಳು ಪಠ್ಯದಲ್ಲಿ ಬರಲು ಇಷ್ಟು ತಡವೇಕಾಯಿತು? ಎಂಬುದು ಸಮಾಜ ಕೇಳಿಕೊಳ್ಳಬೇಕಾದ ಪ್ರಶ್ನೆ.
ವೈಯಕ್ತಿಕ ಸಾಧನೆ ಮಾಡಿ ಉನ್ನತರಾದವರ ಮತ್ತು ಯಾವುದೇ ಸಮಸ್ಯೆಯನ್ನು ನಿಭಾಯಿಸುವುದರಲ್ಲಿ
ಸಫಲರಾದವರ ವಿಚಾರಗಳನ್ನೇ ತಾನೆ ಪಠ್ಯವಾಗಿ ಇಡಬೇಕಾದ್ದು. ಹೆಡ್ಗೆವಾರರಂತಹ problem solver ಕಳೆದ ಶತಮಾನದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಿಗುತ್ತಾರೆ!
ಅವರಿದ್ದ ಕಾಲ ನೋಡಿದರೆ ಭಾರತಕ್ಕಾಗಿ ಹೋರಾಡುವವರಾಗಲೀ, ಭಾರತದ ಉನ್ನತಿಗೆ ಬೇಕಾದ ಕಾರ್ಯಸಾಮರ್ಥ್ಯ, ಪಾಂಡಿತ್ಯ ಉಳ್ಳವರಾಗಲಿ ಬೇಕಾದಷ್ಟು ಜನರಿದ್ದರು. ಅಲ್ಲದೆ ಸ್ವತಂತ್ರ ಹೋರಾಟ ತುದಿ ಮುಟ್ಟುತ್ತಿದೆ ಎಂದು ನಾಯಕರುಗಳು ತಿಳಿದಿದ್ದ ಕಾಲವದು. ಆದರೆ ಭಾರತದ ಇತಿಹಾಸವನ್ನು ವಿಚಕ್ಷಣ ದೃಷ್ಟಿಯಿಂದ ನೋಡಿದ ಹೆಡ್ಗೆವಾರರಿಗೆ ಆಡಳಿತ ಹಸ್ತಾಂತರವನ್ನೇ ಸ್ವಾತಂತ್ರ್ಯ ಎಂದುಕೊಳ್ಳುವುದು ಸರಿಯಲ್ಲ ಎನ್ನುವುದು ತಿಳಿದಿತ್ತು. ಇತಿಹಾಸದುದ್ದಕ್ಕೂ ಮತ್ತೆ ಮತ್ತೆ ಪರಕೀಯ ದಬ್ಬಾಳಿಕೆಗೆ ಭಾರತ ಒಳಗಾಗುತ್ತಿರುವ ನಿಜವಾದ ಕಾರಣ ಇಲ್ಲಿನ ಅಸಂಘಟಿತ ಸಮಾಜ, ಇಂಥ ಸಂಘಟಿತವಲ್ಲದ ಸಮಾಜ ಅಧಿಕಾರ ಹಿಡಿದರೂ ಮತ್ತೆ ಪರತಂತ್ರವಾಗುತ್ತದೆನ್ನುವುದು ಅವರಿಗೆ ತಿಳಿದಿತ್ತು. ಆ ಸಮಸ್ಯೆಯನ್ನು ಬಗೆಹರಿಸಲು ಅವರು ಹೊರಟದ್ದು.
(ಹಾಗಾಗಿಯೆ ಸಂಘ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿತ್ತೆ? ಎಂಬ ಬುದ್ಧಿಜೀವಿಗಳ ಪ್ರಶ್ನೆ ಹಾಸ್ಯಸ್ಪದವಾದದ್ದು. ಸಂಘ ಈಗ ಮಾಡುತ್ತಿರುವುದೂ ಸ್ವಾತಂತ್ರ್ಯ ಹೋರಾಟವೇ.ಅಲ್ಲದೆ ಡಾಕ್ಟರಜೀಯವರ ಆದಿಯಾಗಿ ಹಲವು ಸಂಘದ ಕಾರ್ಯಕರ್ತರು ಸ್ವತಂತ್ರ ಸಂಗ್ರಾಮದಲ್ಲಿ ಸೆರೆವಾಸವನ್ನೂ ಕಂಡಿದ್ದಾರೆ.ಅದಿರಲಿ.)
ಆದರೆ ಸಾವಿರಾರು ವರ್ಷಗಳಿಂದ ವೈವಿಧ್ಯ ಮತ್ತು ಸಾತತ್ಯ ಎರಡನ್ನೂ ಉಳಿಸಿಕೊಂಡಿರುವ ಸಮಾಜದಲ್ಲಿ ಸಹಜವಾಗಿಯೇ ಹಲವು ಸಂಕೀರ್ಣತೆಗಳಿರುತ್ತವೆ. ಅಂತಲ್ಲಿ ಯಾವುದೇ ಸಮಸ್ಯೆಗೆ ಸರಳ ಪರಿಹಾರಗಳು ಇರುವುದಿಲ್ಲ. ಇನ್ನು ಸಮಸ್ಯೆಯ ಪರಿಹಾರಕ್ಕೂ, ವ್ಯವಸ್ಥೆಯ ನಾಶಕ್ಕೂ ವ್ಯತ್ಯಾಸವೇ ಗೊತ್ತಿರದ ಬುದ್ಧಿಜೀವಿಗಳನ್ನು ಸಮಾಜ ನೆಚ್ಚುವುದಿಲ್ಲ. ಕೈಯನ್ನು ಕತ್ತರಿಸಿಬಿಟ್ಟರೆ ಉಗುರುಸುತ್ತಾಗುವ ಸಾಧ್ಯತೆಯೇ ಇಲ್ಲವಲ್ಲ ಎಂಬುದು ಅವರ ಪರಿಹಾರದ ಧಾಟಿ.
ಇಂತಲ್ಲಿ ಬೇಕಿರುವುದು ವ್ಯವಸ್ಥೆಯನ್ನು ಕೆಡವದೆ, ಸಮಸ್ಯೆಯನ್ನು ಮಾತ್ರ ಕೊಡವುವ ಸೂಕ್ಷ್ಮ ಮತಿ. ಆಯುರ್ವೇದದಲ್ಲಿ ಇಂಥವರನ್ನು ಸಮೀಕ್ಷಕಾರಿ ಎನ್ನುತ್ತಾರೆ. ಸಂಘ ಸ್ಥಾಪಕರು ಡಾಕ್ಟರ್ ಆಗಿದ್ದರು ಎನ್ನುವುದು ಸಾಂಕೇತಿಕವಾಗಿಯೂ ನಿಜ.
ಸಮಾಜದ ಸಂಘಟನೆಗಾಗಿ ಅವರು ಸಂಘವನ್ನು ಆರಂಭಿಸಿದಾಗ ಜನರ ಪಾಲ್ಗೊಳ್ಳುವಿಕೆಗೆ ಸುಲಭದ ದಾರಿಯೊಂದು ಬೇಕಿತ್ತು.ಪರಿಹಾರ ಸರಳವಾಗಿರಲು ಸಾಧ್ಯವಿಲ್ಲದಿದ್ದರೂ ಅದರ ಪರಿಕರ ಸರಳವಾಗಿಯೇ ಇರಬೇಕು. ಇಲ್ಲದಿದ್ದರೆ ಎಲ್ಲ ಜನರನ್ನೂ ಅದು ಒಳಗೊಳ್ಳುವುದಿಲ್ಲ. ಹಾಗಾಗಿಯೆ ಶಾಖೆ ಎಂಬ ಅತ್ಯಂತ ಸರಳಸೂತ್ರವನ್ನು ಡಾಕ್ಟರ್ ಜಿ ಪರಿಚಯಿಸಿದ್ದು.ಸಂಘದ ಶಾಖೆಯ ಕೆಲಸವೆಂದರೆ- ಎಲ್ಲವನ್ನೂ ಬದಲಿಸುತ್ತೇವೆಂಬ ಕ್ರಾಂತಿಯ ಉನ್ಮಾದವಲ್ಲದ, ಆಗಿದ್ದಾಗಲಿ ನಮ್ಮಿಂದೇನು ಸಾಧ್ಯ ಎಂಬ ಜಾಡ್ಯವೂ ಅಲ್ಲದ, ಎಲ್ಲ ಜನರೂ ಸೇರಿ ತಾವೇ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ‘CAUTIOUS REVOLUTION’.
ಇಂಥ ಒಂದು ಜಾಗೃತ ಸಂಘಟನೆ ಇಲ್ಲದಿದ್ದರೆ ಹಿಂದೂಗಳ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸುವುದೂ ಕಷ್ಟ. ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಹಿಂದುಗಳ ಸ್ಥಿತಿ ಗೊತ್ತೇ ಇದೆ. ಭಾರತದಲ್ಲೇ ದೇಶದ ತುಂಬೆಲ್ಲಾ ಬಲಪಂಥೀಯ ವಿಚಾರಧಾರೆಯ ಸರ್ಕಾರವೇ ಇರುವಾಗಲೂ ಹಿಂದೂಗಳು ಹತ್ಯೆಯಾಗುತ್ತಿದ್ದಾರೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಹೋರಾಡುತ್ತಿದ್ದಾರೆ ಎಂದರೆ ಸಂಘಟಿತ ಸಮಾಜದ ಅವಶ್ಯಕತೆ ಎಷ್ಟಿದೆ ಎಂದು ತಿಳಿಯುತ್ತದೆ. ಇದು ಡಾಕ್ಟರ್‌ಜಿ ಯವರ ಕಾರ್ಯದ ಮಹತ್ವ. ಇಂಥ ಸಾಂಸ್ಕೃತಿಕ ಮಹತ್ವವಿರುವ ವಿಷಯಗಳನ್ನು ತಿಳಿದುಕೊಳ್ಳುವುದು ನಾಗರಿಕ ಸಮಾಜದ ಕರ್ತವ್ಯವೇ ಆಗಿದೆ.
ಆದರೆ ಸಂಘದ ವಿಷಯದಲ್ಲಿ ಇದಷ್ಟೇ ಪ್ರಮುಖವಲ್ಲ. ಇಂದಿನ ಸಮಾಜದಲ್ಲಿ ಬೇರೆಬೇರೆ ಶೈಕ್ಷಣಿಕ ರಂಗಕ್ಕೆ ಉಪಯೋಗಕಾರಿಯಾದ ಹಲವು ಅಂಶಗಳು ಸಂಘದಲ್ಲಿದೆ.
ಒಂದೆರಡು ಉದಾಹರಣೆಗಳನ್ನು ನೋಡೋಣ –
*ಸಂಘ ತನ್ನ ಸ್ವಯಂಸೇವಕರಿಗೆ ಆಹ್ಲಾದಕರವಾದ ಸ್ನೇಹ ಬಳಗವನ್ನು ನಿರ್ಮಿಸಿಕೊಡುತ್ತದೆ.ಕೇವಲ ಮೂರ್ನಾಲ್ಕು ವರ್ಷ ಸಂಘದ ಕೆಲಸದಲ್ಲಿ ತೊಡಗಿಕೊಂಡವರು ರಾಜ್ಯದ ತುಂಬೆಲ್ಲಾ ಗೆಳೆಯರನ್ನು ಹೊಂದಿರುತ್ತಾರೆ. ಮತ್ತು ಈ ವಲಯ ಸಂಪೂರ್ಣವಾಗಿ ಜಾತಿ ಮತ್ತು ವರ್ಗಗಳಿಗೆ ಅತೀತವಾಗಿರುತ್ತದೆ. ಇದು ಸಣ್ಣ ವಿಷಯವಲ್ಲ. ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ಎಡವಿರುವ ಹಲವು ಸಮಾಜಗಳಲ್ಲಿ ಮನುಷ್ಯ ಸಂಬಂಧಗಳು ಏರ್ಪಡುವುದು ಹಾಗೂ ಮುಂದುವರಿಯುವುದೇ ದೊಡ್ಡ ಸಾಹಸದಂತೆ ಭಾಸವಾಗುತ್ತಿದೆ. What to say after you say Hello, How to make friends ಇತ್ಯಾದಿ ಪುಸ್ತಕಗಳ ಹತ್ತಾರು ಕೋಟಿ ಪ್ರತಿಗಳು ಮಾರಾಟವಾಗುತ್ತಿರುವುದು ಅಂತಹ ಸಮಾಜಗಳಲ್ಲೇ.
ಆ ಪರಿಸ್ಥಿತಿ ಭಾರತದಲ್ಲಿ ಬರದಂತೆ ತಡೆಯುವಲ್ಲಿ ಭಾರತದ ಕೌಟುಂಬಿಕತೆ, ಧಾರ್ಮಿಕ ಕ್ಷೇತ್ರ ಮತ್ತು ಸಂಘದಂತಹ ಸಂಘಟನೆಗಳ ಕೊಡುಗೆ ಊಹೆಗೆ ಮೀರಿದ್ದು. ಇದು ಸಮಾಜಶಾಸ್ತ್ರ ಅಧ್ಯಯನ ಮಾಡುವವರು ಗಮನಿಸಲೇಬೇಕಾದ ವಿಷಯ.
*Six degree of separation ಎಂಬುದನ್ನು ಹಲವರು ಕೇಳಿರಬಹುದು. ಅಂದರೆ ಜಗತ್ತಿನ ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಕೇವಲ ಆರೇ ಹಂತದಲ್ಲಿ ಜನರನ್ನು ಸಂಪರ್ಕಿಸುವುದರ ಮೂಲಕ ತಲುಪಬಹುದು ಎಂಬುದು ಒಂದು ಲೆಕ್ಕಾಚಾರ. ಸಂಘದಲ್ಲಿ ಇದು ಮೂರು ಅಥವಾ ನಾಲ್ಕು ಹಂತಗಳಿಗೆ ಇಳಿಕೆಯಾಗುತ್ತದೆ. ಜಗತ್ತಿನ ಜನಸಂಖ್ಯೆ ಮತ್ತು ಸಂಕೀರ್ಣತೆ ಸಂಘದಲ್ಲಿ ಇರುವುದು ಸಾಧ್ಯವಿಲ್ಲ ಎನ್ನುವುದನ್ನು ಪರಿಗಣಿಸಿದರೂ ಇದೊಂದು ದೊಡ್ಡ ಸಾಧನೆಯೇ. ಸಂಘದ ಈ ಸಂಪರ್ಕ ವ್ಯವಸ್ಥೆ ಯಾವುದೇ ಸಮೂಹ ಮಧ್ಯಮವನ್ನು ಅವಲಂಬಿಸಿ ಬೆಳದದ್ದಲ್ಲ.
ಈ ಇಡೀ ಸಂಘಟನೆ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಖುದ್ದಾಗಿ ಸಂಪರ್ಕಿಸಿ ಬೆಳೆದಿರುವುದು. ಈ network system ತಾನೇ ಒಂದು ಅಧ್ಯಯನ ಯೋಗ್ಯ ವಿಷಯ. ಉದಾಹರಣೆಗೆ ಮುಂಬೈನ ಡಬ್ಬಾವಾಲಾಗಳು ಊಟ ತಲುಪಿಸುವ ವ್ಯವಸ್ಥೆಯನ್ನು ಕೆಲವು MBA ಕಾಲೇಜುಗಳಲ್ಲಿ Logistics ಅಧ್ಯಯನದ ವಿಷಯವಾಗಿ ಕಲಿಸಲಾಗುತ್ತದೆ. ಅಂತೆಯೇ ಸಂಘದ ಕಾರ್ಯವೈಖರಿ ಒಂದು ಪ್ರತ್ಯೇಕ ವಿಷಯವಾಗಿಯೇ MBA ಪಠ್ಯದಲ್ಲಿ ಸೇರಬಹುದಾದಷ್ಟು ಶಕ್ತವಾಗಿದೆ.
ವಸ್ತುನಿಷ್ಠವಾಗಿ ಸಮಾಜದ ಅಧ್ಯಯನ ನಡೆಸುವ ವ್ಯವಸ್ಥೆ ನಮ್ಮ ವಿದ್ಯಾಲಯಗಳಲ್ಲಿ ಬಂದಾಗ ಸಂಘದ ಅಧ್ಯಯನ ಸಹಜವಾಗಿಯೇ ಪ್ರವೇಶ ಪಡೆಯುತ್ತದೆ. ಆ ನಿಟ್ಟಿನಲ್ಲಿ ಡಾಕ್ಟರ್ ಜಿಯವರ ವಿಚಾರ ಪಠ್ಯವಾಗಿರುವುದು ಮೊದಲ ಸಣ್ಣ ಹೆಜ್ಜೆ ಅಷ್ಟೇ.
ಆದರೆ ಈ ಇಡೀ ಪ್ರಕರಣದಲ್ಲಿ ಬಲಪಂಥ ಕಲಿಯಬೇಕಾದ ಪಾಠವೊಂದಿದೆ.ಅದೆಂದರೆ –
ತಾವು ವೈಚಾರಿಕವಾಗಿ ವಿರೋಧಿಸುವವರು ಅಧಿಕಾರದಲ್ಲಿದ್ದಾಗ ಬುದ್ಧಿಜೀವಿ ವಲಯ ಸಣ್ಣ ಪುಟ್ಟ ವಿಷಯಗಳಿಗೂ ಎಷ್ಟೆಲ್ಲಾ ರಂಪಾಟ ಮಾಡುತ್ತಾರೆಂದರೆ, ವೈಚಾರಿಕವಾಗಿ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಸರ್ಕಾರಗಳು ನೂರು ಬಾರಿ ಯೋಚಿಸುವಂತೆ ಮಾಡುತ್ತಾರೆ.ಇದು ಇತಿಹಾಸದುದ್ದಕ್ಕೂ ಬುದ್ಧಿಜೀವಿ ವಲಯ ಸಫಲವಾಗಿ ನಡೆಸಿಕೊಂಡು ಬಂದಿರುವ ಕುಟಿಲ ತಂತ್ರ. ತಮ್ಮವರು ಮಾಡುವ ಘೋರ ದೌರ್ಜನ್ಯವನ್ನು ಬಲಪಂಥ ಎಸಗಿರಬಹುದಾದ ಯಾವುದೋ ಸಣ್ಣ ಪ್ರಮಾದಕ್ಕೆ ಹೊಲಿಕೆ ಮಾಡಿ ಚರ್ಚೆಯ ದಿಕ್ಕನ್ನು ತಪ್ಪಿಸುತ್ತಾರೆ.
ಈ ಕಾರಣಗಳಿಂದಾಗಿ ಇಂದು ಸಾರ್ವಜನಿಕ ಸಂವಾದದಲ್ಲಿ ಪರಿಮಾಣ ಪರಿಜ್ಞಾನವೇ ಇಲ್ಲದಂತಾಗಿದೆ.
ಸಮಾಜಕ್ಕೆ ಮಾರಕವಾಗಿರುವ ಗಂಭೀರ ಅಪರಾಧಗಳೂ, ಸಣ್ಣ ಪುಟ್ಟ ಘಟನೆಗಳು ಒಟ್ಟಿಗೆ ಚರ್ಚೆಗೆ ಗ್ರಾಸವಾಗುತ್ತವೆ. ನೂರಾರು ಜನ ಹಿಂದೂಗಳು ಕೊಲೆಯಾಗುವಾಗ ಏಳದಷ್ಟು ಚರ್ಚೆ, ಒಬ್ಬ ಮುಸ್ಲಿಮ್ ಹುಡುಗಿಗೆ ಶಾಲೆಯೊಳಗೆ ಬುರ್ಖಾ ಧರಿಸಬೇಡ ಎಂದಾಗ ಏಳುತ್ತದೆ. ಹದಿನೈದು ನಿಮಿಷ ಸಮಯ ಸಿಕ್ಕರೆ ಇಡೀ ಹಿಂದು ಸಮುದಾಯವನ್ನೇ ಮುಗಿಸುತ್ತೇವೆ ಎಂದು ಚುನಾಯಿತ ಪ್ರತಿನಿಧಿ ಕರೆ ಕೊಡುವುದೂ, ಯಾರೋ ಹುಡುಗನೊಬ್ಬ ಫೇಸ್ಭುಕ್‌ನಲ್ಲಿ ಮುಸ್ಲಿಂ ದೂಷಣೆ ಮಾಡುವುದೂ ಮತೀಯ ಅಸಹಿಷ್ಣುತೆ ಎಂಬ ಒಂದೇ ಕಟಕಟೆಗೆ ಬಂದು ನಿಲ್ಲುತ್ತದೆ
ಈ ರೀತಿಯ ಸ್ಥಿತಿ ಇರುವುದರಿಂದಲೇ ಬುದ್ಧಿಜೀವಿಗಳು ತಮ್ಮವರು ಮಾಡಿದ ಕೃತ್ಯಗಳನ್ನು ಖಂಡಿಸಲೇಬೇಕಾಗಿ ಬಂದಾಗ – ಎಲ್ಲ ಧರ್ಮಗಳೂ ಮನುಷ್ಯನಿಗೆ ಮಾರಕ, ನಾವೆಲ್ಲ ಮೊದಲು ಮನುಷ್ಯರಾಗೊಣ ಎಂಬ ಐಷಾರಾಮಿ ಮಾತನಾಡುತ್ತಾ ಸಮಸ್ಯೆಯಿಂದ ನುಣುಚಿಕೊಳ್ಳುತ್ತಾರೆ.
ಅವರ ಈ ಕುಟಿಲ ತಂತ್ರವನ್ನು ಹಣಿಯಲು ನಿರಂತರ ಬೌದ್ಧಿಕ ಯುದ್ಧದಲ್ಲಿ ತೊಡಗುವುದು ಮತ್ತು ವಿಚಾರ ಸ್ಪಷ್ಟತೆಯನ್ನು ಸಮಾಜದಲ್ಲಿ ಬಿತ್ತುವುದು ಅನಿವಾರ್ಯ.
ಏನೇ ಇರಲಿ, ಮಕ್ಕಳು ಭವಿಷ್ಯದಲ್ಲಿ ಭಾರತದ ಸಾಂಸ್ಕೃತಿಕ ಮಹತ್ವವನ್ನು ಎತ್ತಿಹಿಡಿಯುತ್ತಲೇ ಆಧುನಿಕ ಜಗತ್ತಿನಲ್ಲಿ ಮುಂದಡಿ ಇಡಲು ಸಹಾಯಕವಾಗುವಂತೆ ಯಾವುದೇ ಹಂತದ ಪಠ್ಯಗಳನ್ನು ರೋಪಿಸುವಲ್ಲಿ ಸರ್ಕಾರಗಳು ಹಿಂದಡಿ ಇಡದಿದ್ದರಾಯಿತು.