4-8-1974. ಕರುಳ ಸಂಬಂಧ ಕಡಿದ ದಿನ ಎನ್ನುವಂತೆ ಆ ತಾರೀಕು ಅಚ್ಚಳಿಯದೆ ನನ್ನ ಮನದಲ್ಲಿ ಉಳಿದಿದೆ! ಸಾಂತಾಕ್ರೂಜ಼ ನಿಲ್ದಾಣದಿಂದ ಲಂಡನ್ ಅಭಿಮುಖವಾಗಿ ಹೊರಟ ವಿಮಾನದಲ್ಲಿ ಕುಳಿತ ನನ್ನ ಮನದಲ್ಲಿ ತುಮುಲ. ನನ್ನ ಕುಟುಂಬದವರಾರೂ ಮಾಡದ ಪರದೇಶ ಪ್ರವಾಸ ಮಾಡುತ್ತಿರುವ ಉತ್ಸಾಹ ಒಂದು ಕಡೆಯಾದರೆ ನಾನು ದೇಶದ್ರೋಹಿಯೇ ಎನ್ನುವ ಅಳುಕು ಮನದಾಳದಿಂದೆದ್ದು ಮತ್ತೆ ಮತ್ತೆ ಕಾಡುತ್ತಿತ್ತು. ಏಕೆಂದರೆ ನನ್ನನ್ನು ಹರಸಿ ಬೀಳ್ಕೊಟ್ಟ ಅಜ್ಜನ ಪಾದಸ್ಪರ್ಷಿಸಿ ನಮಸ್ಕರಿಸಿ ಹೊರಟಿದ್ದೆ, ಅವರು (ಸಾಲಿ ರಾಮಚಂದ್ರ ರಾಯರು) 1939 ರಲ್ಲಿ ಬರೆದ ಕವಿತೆಯ ಮಾರ್ಮಿಕ ಸಾಲುಗಳು ನೆನಪಿಗೆ ಬಂದವು: ”ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ/ ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ/ಕನ್ನಡದ ಕಲ್ಲೆನಗೆ ಶಾಲಗ್ರಾಮ ಶಿಲೆ: ಕನ್ನಡಂ ದೇವಮೈ.” ಹೊರಟ ಉದ್ದೇಶವೇನೋ ಆಗಿನ ಎಲ್ಲ ಡಾಕ್ಟರುಗಳಿಗೆ ಇದ್ದಂತೆ ಇಂಗ್ಲೆಂಡಿನ ಡಿಗ್ರಿ ಪಡಕೊಡು ತಾಯಿನಾಡಿಗೆ ಮರಳಿ ಬರಬೇಕೆಂಬುದೇ. ನಾನು ಡಿಪ್ಲೋಮಾ, ಎಫ್ ಆರ್ ಸಿ ಎಸ್ ಓದಲು ಹೊರಟಿದ್ದೆ. ’ಎಷ್ಟು ವರ್ಷದಾಗ ತಿರುಗಿ ಬರುತ್ತಿ” ತಾಯಿಯ ಹನಿತುಂಬಿದ ಮುಖದಿಂದ ಹೊರಟಿದ್ದ ಪ್ರಶ್ನೆ: ’ಎರಡು ಮೂರು ವರ್ಷಗಳಾಗ ಬಹುದೇನೋ, ನನಗೂ ಗೊತ್ತಿಲ್ಲ!’ ಅನ್ನುವಾಗ ಮುಂದೆ ಎಂಥೆಂಥ ಅಡಚಣಿಗಳೋ, ಅವುಗಳನ್ನು ಎದುರಿಸಲು ನನ್ನಲ್ಲಿ ಶಕ್ತಿ, ವಿದ್ಯೆ, ಕೌಶಲಗಳು ಇವೆಯೇ ಎನ್ನುವ ಸಂಶಯ; ಅಲ್ಲಿ ವರ್ಣಭೇದದ ಸಮಸ್ಯೆಗಳಿವೆಯೇ? ಪರೀಕ್ಷೆ ಪಾಸಾಗುತ್ತದೆಯೇ? ವಿಫಲನಾಗಿ ಊರಲ್ಲಿ ಮುಖ ತೋರಿಸದಂತಾದರೆ? ಇತ್ಯಾದಿ.
ಆಗ ಭಾರತದಲ್ಲಿ ಫಾರಿನ್ ಎಕ್ಸ್ಚೇಂಜ್ ಕೊರತೆ ಇತ್ತು. ರಿಸರ್ವ್ ಬ್ಯಾಂಕ್ ವಿದೇಶಪ್ರವಾಸಕ್ಕೆ ಹೊರಟವರಿಗೆ ಕೊಡುತ್ತಿದ್ದದ್ದು ಬರೀ ನಲವತ್ತು ಪೌಂಡುಗಳು. ಆಗ ಅದಕ್ಕೆ ಎಂಟು ನೂರು ರೂಪಾಯಿಗಳು. ಕೆಲಸ ಬಂದ ಮೇಲೆ ಹುಡುಕಬೇಕಷ್ಟೇ. ಇಂಟರ್ನೆಟ್ಟು, ಮೋಬೈಲ್ ಯಾಕೆ, ಆಗ STD ಫೋನು ಸಹ ಇದ್ದಿರಲಿಲ್ಲ. ಮನೆಗೆ ಬರೆದ ಪೋಸ್ಟು ವಿಮಾನ ಮಾರ್ಗದಲ್ಲಿ ಒಂದುವಾರದಲ್ಲಿ ತಲುಪಿದರೇ ಅದಷ್ಟ, ಅದೂ ಯಾರೂ ಕದಿಯದಿದ್ದರೆ! ಒಂದು ರೀತಿಯ ವನವಾಸವೇ. ವೆಜಿಟೇರಿಯನ್ ಆಹಾರದ ಕಲ್ಪನೆಯೇ ಇರಲಿಲ್ಲ. ಒಂದು ಕೋತಂಬರಿ ಕಂತೆಗೆಂದು 25 ಮೈಲು ಡ್ರೈವ್ ಮಾಡಿಕೊಂಡು ಹೋಗಬೇಕು, ಅದೂ ಕಾರು ಓಡಿಸಲು ಲೈಸೆನ್ಸ್ ಸಿಕ್ಕಿದ್ದರೆ. ರಸ್ತೆಯಲ್ಲಿ ಯಾರಾದರೂ ಭಾರತೀಯರು ಕಂಡರೆ ನಮ್ಮ ಬಂಧು ಬಳಗವೇನೋ ಅನ್ನುವಷ್ಟು ಖುಶಿ. ಕಿವಿಯ ಮೇಲೆ ಕನ್ನಡದ ಮಾತು ಬಿದ್ದರಂತೂ ಸ್ವರ್ಗವೇ ಸಿಕ್ಕಂತೆ ಮುಗಿಬಿದ್ದು ಮಾತಾಡಿಸಿ ಪರಿಚಯ ಮಾಡಿಕೊಂಡು ಲ್ಯಾಂಡ್ ಲೈನ್ ಫೋನ್ ನಂಬರ್ ಹಂಚಿಕೊಂಡರೆ ಆ ದಿನ ಹಬ್ಬ. ಚಳಿಗಾಲದಲ್ಲಿ ಮನೆಯ ನೆಲ ಪೂರ್ತಿ ಮುಚ್ಚುವ ಕಾರ್ಪೆಟ್ ಸಹ ಇರದೆ ಕಾಲಿಗೆ ಕೈಗೆ ಚಿಲ್ ಬ್ಲೇನ್ಸ್ (ಚಳಿ ಕಜ್ಜಿ) ಆಗುತ್ತಿದ್ದಂಥ ಪರಿಸ್ಥಿತಿ. ಅದು ಈಗ ಕೆಟ್ಟ ಕನಸು ಅನ್ನುವಂತಿದೆ.
Man does not live by bread alone.
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ, ಅಂತ ಕನಕ ದಾಸರು ಅಂದರು. ಹೊಟ್ಟೆ ತುಂಬಿ ಗೇಣು ಬಟ್ಟೆ ಸಿಕ್ಕ ಕೂಡಲೆ ನಮ್ಮ ಜೀವನದ ಗುರಿ ಮುಟ್ಟಿದಂತೆಯೇ? ಒಂದು ಪ್ರಸಿದ್ಧ ಆಂಗ್ಲ ನುಡಿಗಟ್ಟು ಇದೆ: man does not live by bread alone. ಹೊಟ್ಟೆ ತುಂಬಿದ ಮೇಲೆ ಆಧ್ಯಾತ್ಮಿಕ ಹಸಿವು ಇರುತ್ತದೆ ಎಂದು ಬೈಬಲ್ ಹೇಳುತ್ತದೆ. ಆದರೆ ಬಹುಶಃ ಅದಕ್ಕೂ ಮೊದಲು ಭಾಷೆ, ಸಾಂಸ್ಕೃತಿಕ ಮತ್ತು ಲಲಿತಕಲೆಗಳ ಹಸಿವು ಇಂಗಿಸಬೇಕಾಗುತ್ತದೆ. ಪ್ರದೇಶದಲ್ಲಿ ಹೊರಗಡೆ ಇಂಗ್ಲಿಷ್ ವಾತಾವರಣವೇ ಇರುವಾಗ ಮಾತೃಭಾಷೆಯ ಮೇಲಿನ ಅಭಿಮಾನ ಹೆಚ್ಚಾಗುತ್ತದೆ. ’ಇಂಗ್ಲೆಂಡಿಗೆ ಹೋದರೆ ಮುಗೀತು, ಸೂಟು ಬೂಟಿನ ಸಾಹೇಬ ಆಗಿ ಬಿಡ್ತಾರೆ’ ಅನ್ನುವ ಮಾತು ಸತ್ಯಕ್ಕೆ ಬಹು ದೂರ, ನನ್ನ 48 ವರ್ಷಗಳ ಯು ಕೆ ವಾಸದ ಅಭಿಪ್ರಾಯದಲ್ಲಿ. ಬೆಳಿಗ್ಗೆ ಎದ್ದೊಡನೆ ಸಹನಾವವತು ಸ್ತೊತ್ರದ ಗುರುವನ್ದನೆ, ಯೋಗಾಭ್ಯಾಸದಿಂದ ಪ್ರಾರಂಭವಾದ ದಿನ ಕನ್ನಡದಲ್ಲಿ ಸಾಹಿತ್ಯಾಸಕ್ತರಿಂದ ಪ್ರಾರಂಭವಾದ ”ಅನಿವಾಸಿ” ಎನ್ನುವ ಬ್ಲಾಗ್ ನ ಓದು, ಸಂಪಾದನೆ, ಬರಹ ಇತ್ಯಾದಿಗಳಲ್ಲಿ ಸಮಯ ವ್ಯಸ್ತವಾಗಿರುತ್ತದೆ.ಈ ಅಕ್ಷರ ಪೂಜೆಯೊಂದಿಗೆ ನಾವು ಕಟ್ಟಿಕೊಂಡಿರುವ ವಿವಿಧ ಕನ್ನಡ ಸಂಘಗಳ ಸಾಂಸ್ಕೃತಿಕ ಚಟುವಟಿಕೆಗಳು ಇಡೀ ಕುಟುಂಬದವರು ಪಾಲುಗೊಳ್ಳಲು ಆಸ್ಪದ ಮಾಡಿಕೊಟ್ಟಿವೆ. ಮಕ್ಕಳ ಕನ್ನಡ ಹಾಡು, ಭರತನಾಟ್ಯ, ಸಂಗೀತ ಇತ್ಯಾದಿಗೆ ಅವು ಚಾಲನೆ ಕೊಡುತ್ತಿವೆ. ನನಗೆ ಹತ್ತಿರದ ಸಂಬಂಧದವು ಎರಡು ಮೂರು ಸಂಘಟನೆಗಳು. ಈ ದೇಶದ ಬೇರೆ ಬೇರೆ ಪ್ರಾಂತಗಳಲ್ಲಿ ವಿವಿಧ ಸಂಘಟನೆಗಳು ಇರುವುದು ಮೇಲೆ ಹೇಳಿದಂತೆ ನಮ್ಮ ಭಾಷೆ-ಸಂಸ್ಕೃತಿಯ ಹಂಬಲಕ್ಕೆ ಪೋಷಣೆ ಕೊಡುತ್ತಿವೆ. ಕೋವಿಡ್ ಮಾರಿ ಈ ಎರಡು ವರ್ಷಗಳಲ್ಲಿ ಸಮಕ್ಷಮ ಭೇಟಿಯಾಗುವ ಮುಖಾಮುಖಿ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಲಂಡನ್ನಿನ ಸುತ್ತ ಮುತ್ತಲು ಮಿಲ್ಟನ್ ಕೀನ್ಸ್, ರೆಡಿಂಗ ಹತ್ತಿರದ ಮಕ್ಕಳು ಕನ್ನಡಿಗರು ಯು ಕೆ ಅವರು ಸಡೆಸುವ ’ಕನ್ನಡ ಕಲಿ’ ಕನ್ನಡ ತರಗತಿಗಳಿಗೆ ಹೋಗಿ ಕಲಿಯುತ್ತಾರೆ. ಇಲ್ಲಿ ವಾಸಿಸುತ್ತಿರುವ 25 ಸಾವಿರದಷ್ಟು ಕನ್ನಡ ತಾಯಿಯ ಮುದ್ದಿನ ’ಅನಿವಾಸಿ’ ಕರುಗಳಿಗೆಳಿಗೆ ’ಕನ್ನಡವೆನೆ ಕುಣಿದಾಡುವುದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವುದು’, ಇದು ಸತ್ಯ!
ಮುಂದಿನ ಪೀಳಿಗೆಯ ತಲ್ಲಣಗಳು
ನಾವು ಅದೇನನ್ನೇ ಸಾಧಿಸಿರಲಿ ಎರಡು ದೇಶ, ಎರಡು ಬೇರೆ ಸಂಸ್ಕೃತಿಯ ಇಬ್ಬಂದಿಯಲ್ಲಿ ಸಿಲುಕಿ ’ನಿಮಗೇನೋ, ಹುಟ್ಟೂರಿನ ಊರುಗೋಲು ಇದೆ, ನಮಗೆ?’ ಅಂತ ಹೇಳುತ್ತಿರುತ್ತಾರೆ ನಮ್ಮ ಮಕ್ಕಳು ಅಂತ ಅನೇಕ ನನ್ನ ಸಮವಯಸ್ಕರಿಂದ ಕೇಳಿದ್ದೇನೆ. ಒಮ್ಮೊಮ್ಮೆ ಯೋಚನೆಯಲ್ಲಿ ಸಿಲುಕಿದಾಗ, ಆಗಿನ ಕಾಲದಲ್ಲಿ, ಇಪ್ಪತ್ತನೆಯ ಶತಮಾನದ ಎಪ್ಪತ್ತರ ದಶಕದಲ್ಲಿ ಯು ಕೆ ಗೆ ಬರುವಾಗ ಏನೂ ಅರಿಯದೆ ಕತ್ತಲೆಯಲ್ಲಿ ಕಣ್ಣು ಮುಚ್ಚಿ ಧುಮಿಕಿದ ನಮ್ಮ ಕಷ್ಟಗಳು ಹೆಚ್ಚೊ, ಮೇಲೆ ವಿವರಿಸಿದ ಪರಿಸರದಲ್ಲಿ ಬೆಳೆಯುತ್ತಿರುವ ಎಳೆಯರ ಸಮಸ್ಯೆಗಳು ದೊಡ್ಡವೋ ಗೊತ್ತಿಲ್ಲ. ತದ್ರೂಪ ಇರದಿದ್ದರೂ 3.5% ನಷ್ಟಿರುವ ಕರಿಯ ಆಫ್ರಿಕನ್-ಕೆರಿಬ್ಬಿಯನ್ ಮೂಲದವರೂ ಇಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿರಬಹುದಾದರೂ ಅವರು ಎದುರಿಸುವ ರೀತಿ ಬೇರೆಯೇ ಇರಬಹುದು. ನಮ್ಮವರ ಹುಡುಗ ಹುಡಿಗೆಯರು ಮದುವೆಗೆ ಯಾರನ್ನು ಆಯ್ಕೆ ಮಾಡುತ್ತಾರೋ ಎನ್ನುವ ಯೋಚನೆ ಮಾಡದವರಿಲ್ಲ. ಹುಡುಗನೇ ಆಗಲಿ, ಹುಡುಗಿಯೇ ಆಗಲಿ ಬಿಳಿಯ ಚರ್ಮದ ಜೊತೆಗಾರರನ್ನು ಮನೆಗೆ ತಂದರೆ ನಾನು ಚಿಕ್ಕವನಾಗಿದ್ದ ಸಿಡ್ನಿ ಪಾಯ್ಟಿಯೆ-ಸ್ಪೆನ್ಸರ್ ಟ್ರೇಸಿ ಅಭಿನಯಿಸಿದ ಚಿತ್ರದಲ್ಲಿದ್ದಂತೆ ’Guess, who is coming for dinner’ ಅಂತ ಹಸ್ತಲಾಘವದಿಂದ ಸ್ವಾಗತಿಸಿ ಭೋಜನ ಮಾಡುವವರೇ ಹೆಚ್ಚು. ಇದನ್ನು ನನ್ನ ಅಳಿಯ ಶ್ರೀಲಂಕ ಮೂಲದ ತಮಿಳು ಕುಟುಂಬದವ ಎನ್ನುವ ಹಿನ್ನೆಲೆಯಲ್ಲೇ ಹೇಳುತ್ತಿದ್ದೇನೆ.
ಸ್ನಾತಕೋತ್ತರ ಡಿಗ್ರಿ ಪಡೆದು ಕೆಲವರ್ಷಗಳ ನಂತರ ಊರಿಗೆ ಮರಳಿ ಅಜ್ಜನನ್ನು ಕೊನೆಯ ಸಲ ಕಂಡಾಗ ಆತನಲ್ಲಿ ನಾನೇನೂ ದೇಶದ್ರೋಹಿಯೆಂಬ ಭಾವನೆ ಇರದಿದ್ದುದು ಸಮಾಧಾನ ತಂದಿತು. ಕೇರಿಗೊಬ್ಬ ಹುಡುಗನೋ ಹುಡುಗಿಯೋ ವಿದೇಶದಲ್ಲಿರುವ ಬದಲಾಗುತ್ತಿರುವ ಜಗಕ್ಕೆ ಆತನೂ ಹೊಂದಿಕೊಂದು ’ಎಲ್ಲಾದರೂ ಇರು, ಎಂತಾಗಿರು, ಕನ್ನಡವಾಗಿದ್ದರೆ ಸಾಕು,’ ಅಂತ ಅಂದು ವಿದಾಯ ಹೇಳಿ ಕಳಿಸಿದ್ದ ಅಂದುಕೊಂಡಿದ್ದೇನೆ. ಕನ್ನಡದ ನೆಲದ ಹುಲ್ಲು ಈಗಲೂ ತುಲಸಿಯಾಗಿರಲಿ. ”ಜನನೀ ಜನ್ಮ ಭೂಮಿಶ್ಚ” ಏನೊ ಸರಿ, ಆದರೆ ಈಗ ಪ್ರಾಕ್ಟಿಕಲ್ ಆಗಿ ಬದುಕ ಬೇಕಿದ್ದಾಗ ಬಿಟ್ಟು ಬಂದ ಸ್ವರ್ಗದ ಮೇಲೆ ನನ್ನ ಕಣ್ಣಿರ ಬೇಕೋ, ಅಥವಾ ಕಾಣದ ಆ ಮೇಲಿನ ಸ್ವರ್ಗದ ಬಗ್ಗೆ ಯೋಚಿಸಬೇಕೋ ಅದೇ ನನ್ನ ಪ್ರಶ್ನೆ ಈಗ!
1-1-2022
ಲೇಖನ ಎಂದಿನಂತೆ ಸೊಗಸಾಗಿದೆ. ಕುವೆಂಪು ಹೇಳಿದ್ದನ್ನು ಸ್ವಲ್ಪ ಬದಲಾಯಿಸಬೇಕು. ಎಲ್ಲಾದರು ಇರು, ನೀ ಚನ್ನಾಗಿರು, ಎಂದೆಂದ್ದಿಗೂ ನೀ ಕನ್ನಡವಾಗಿರು. ನಿಮ್ಮದು ಒಂದು ಚಿಂತೆಯಾದರೆ ಇಲ್ಲಿ ಇರುವ ನಮ್ಮ ಚಿಂತೆ ಬೇರೆ. ನಮ್ಮ ಮಕ್ಕಳು ಮೊಮ್ಮಕ್ಕಳು ಎಲ್ಲ ಅಮೆರಿಕಾ ನಿವಾಸಿಗಳು. ಅವರು ಭಾರತಕ್ಕೆ ಬರುವದು ಸಾಧ್ಯವೇ ಇಲ್ಲ. ನಮಗೂ ವಯಸ್ಸು ಆಗುತ್ತಿದೆ. ಈಗ ಕೈ ಕಾಲು ಗಟ್ಟಿ ಇವೆ, ಆದರೆ ನಾಳೆ ? ಮಕ್ಕಳ ಕಡೆಗೆ ಹೋಗಿ ಇರುವದು ಸಾಧ್ಯವಿಲ್ಲದ ಮಾತು. ನನಗೆ ಒಂದೇ ಸಂತೋಷ. ನಿವೃತ್ತನಾದ ಮೇಲೆ ತಿರುಗಿ ಧಾರವಾಡಕ್ಕೆ ಬಂದೆ, ತಂದೆ ತಾಯಿಗಳ ಜೊತೆ ಕಾಲ ಕಳೆದೆ.
Awesome article. Everyone from our generation feel , yes I have been there. It brought all my memories back. You know most of us said including me that I will go back after three years.