
ವಿಚಿತ್ರ ತಲ್ಲಣವನ್ನು ಸೃಷ್ಟಿಸಿರುವ ಕರೊನಾ ಮಾನವೀಯ ಸಂಕಟದ ಕರಾಳತೆಯನ್ನು ಪರಿಚಯಿಸಿದೆ. ಸೋಂಕಿತರ ಹೆಚ್ಚುತ್ತಿರುವ ಸಂಖ್ಯೆ, ಮರಣ ಪ್ರಮಾಣ ಆತಂಕಕ್ಕೂ ಕಾರಣವಾಗಿದೆ. ಲಾಕ್ಡೌನ್ನಿಂದ ನಾಡು ಸ್ತಬ್ಧವಾಗಿದೆ. ಭರವಸೆಯ ಬೆಳ್ಳಿಮಿಂಚು ಎಲ್ಲಾದರೂ ಗೋಚರಿಸೀತೇ ಎಂದು ಶ್ರೀಸಾಮಾನ್ಯರು ತವಕದಿಂದ ಕಾಯುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಸ್ಥಿತಿ ತುಂಬ ಭಿನ್ನ. ಹಾಗಾಗಿ, ಅವಶ್ಯಕತೆಗಳು ಕೂಡ ಭಿನ್ನವೇ. ಇದಕ್ಕೆ ಅಷ್ಟೇ ಪರಿಣಾಮಕಾರಿಯಾಗಿ ಸ್ಪಂದಿಸುತ್ತ ನೈರಾಶ್ಯದ ವಾತಾವರಣದಲ್ಲಿಯೂ ಒಂದಿಷ್ಟು ಆಶಾವಾದ ಮೂಡಿಸಿವೆ ಹಲವು ಸ್ವಯಂಸೇವಾ ಸಂಸ್ಥೆಗಳು ಮತ್ತು ಯುವಕರ ಪಡೆಗಳು. ಇಂಥ ಸಕಾರಾತ್ಮಕ ಪ್ರಯತ್ನಗಳು ಜನರ, ಸಮಾಜದ ಮನೋಬಲ ಹೆಚ್ಚಿಸುತ್ತಿವೆ ಎಂಬುದಕ್ಕೆ ಈ ಸೇವಾಕಾರ್ಯಗಳು ಬೀರಿರುವ ಪರಿಣಾಮವೇ ಸಾಕ್ಷಿ.
ಪ್ರೇರಣಾಕಾರ್ಯಗಳು
ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ಸ್ವಾಮಿ ಜಪಾನಂದಜೀ ನೇತೃತ್ವದಲ್ಲಿ ಲಾಕ್ಡೌನ್ ಅವಧಿಯಲ್ಲಿ ಸ್ಥಳೀಯ ಬಡವರಿಗೆ ಮತ್ತು ರೋಗಿಗಳ ಸಂಬಂಧಿಕರಿಗೆ ಊಟ ಒದಗಿಸುತ್ತಿದೆ.
ಉತ್ತರಾದಿ ಮಠ `ರಾಮಪ್ರಸಾದ’ ಹೆಸರಿನಲ್ಲಿ ಸೋಂಕಿತರ ಮನೆಗೇ ತಿಂಡಿ, ಊಟ ಒದಗಿಸುತ್ತಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ತುಮಕೂರು, ಕೋಲಾರ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಪಿಪಿಇ ಕಿಟ್ ಧರಿಸಿ ಅಗತ್ಯ ಸೇವೆ ಒದಗಿಸುತ್ತಿದ್ದು, ಈ ಮೂಲಕ ಆಸ್ಪತ್ರೆ ಸಿಬ್ಬಂದಿಯ ಕಾರ್ಯದೊತ್ತಡ ಕಡಿಮೆ ಮಾಡಿದ್ದಾರೆ.
ಮಾನವೀಯ ಸಂವೇದನೆಗಳಿಗೆ ಹೊಸ ಚೈತನ್ಯ ತುಂಬುತ್ತಿರುವ ಈ ಶಕ್ತಿಗಳು ಸೇವೆ ಎಂಬ ಆಂತರಿಕ ಸೌಂದರ್ಯದ ಮೂಲಕ ಅಂತಃಕರಣದ ಲೋಕವನ್ನು ವಿಶಾಲಗೊಳಿಸುತ್ತಿವೆ. `ನಮಗೆ ಏನೂ ಆಗದಿದ್ದರೆ ಸಾಕಪ್ಪ’ ಎಂದು ಬಹುತೇಕರು ಸುರಕ್ಷತೆಯ ಚಿಪ್ಪಿನೊಳಗೆ ಸೇರಿಕೊಳ್ಳುತ್ತಿದ್ದರೆ, ಇವರು ಮಾತ್ರ ಧೈರ್ಯದಿಂದ ಸೇವಾಕಾರ್ಯ ಮಾಡುತ್ತ ಕರೊನಾ ಭಯವನ್ನು ಹೋಗಲಾಡಿಸುತ್ತಿದ್ದಾರೆ. ಅದೆಷ್ಟೋ ಜನರ ಜೀವ ಉಳಿಸಲು ಶಕ್ತಿ ಮೀರಿ ಯತ್ನಿಸುತ್ತಿದ್ದಾರೆ. ಸೋಂಕಿತರಿಗೆ ತಿಂಡಿ, ಊಟ, ಆಸ್ಪತ್ರೆಗಳಲ್ಲಿನ ಲಭ್ಯ ಹಾಸಿಗೆ ಮತ್ತು ವೈದ್ಯಕೀಯ ಆಮ್ಲಜನಕದ ನಿಖರ ಮಾಹಿತಿ, ಲಸಿಕಾ ಅಭಿಯಾನ, ಪ್ಲಾಸ್ಮಾ ದಾನ, ರಕ್ತದಾನ ಶಿಬಿರ, ಟೆಲಿ ಮೆಡಿಸಿನ್, ಕೋವಿಡ್ ಐಸೋಲೇಶನ್ ಕೇಂದ್ರ-ಇವು ಸೇವೆಯ ಹೊಸ ಸ್ವರೂಪಗಳು. ಇಂಥ ಸಕಾರಾತ್ಮಕ ಕಾರ್ಯಗಳ ಬಗ್ಗೆ, ಅವುಗಳ ಪರಿಣಾಮದ ಬಗ್ಗೆ ಸಮಾಜದಲ್ಲಿ ಚರ್ಚೆ ಹೆಚ್ಚಿದಷ್ಟು, ನಕಾರಾತ್ಮಕತೆ ಕಡಿಮೆಯಾಗುತ್ತದೆ. ಮನೋಬಲವೂ ಹೆಚ್ಚುತ್ತದೆ. ಇಂಥ ಹೃದಯವಂತರ ವಿಶಿಷ್ಟ ಕಾರ್ಯಗಳಿಗೆ ಸಮಾಜದ ಬೆಂಬಲವೂ ಹೆಚ್ಚಬೇಕು.
ರಕ್ತದಾನ ಮಹಾದಾನ:
ರಕ್ತದಾನ ಮಾಡುವವರಲ್ಲಿ 18ರಿಂದ 45 ವರ್ಷದವರೇ ಹೆಚ್ಚು. ಈ ವಯೋಮಾನದವರಿಗೆ ಲಸಿಕೆ ಅಭಿಯಾನ ಆರಂಭವಾಗುತ್ತಿದೆ (ಕೆಲವೆಡೆ ಚಾಲನೆಯೂ ಸಿಕ್ಕಿದೆ). ಲಸಿಕೆ ಪಡೆದಾದ ಮೇಲೆ 60 ದಿನಗಳ ಕಾಲ ರಕ್ತ ನೀಡುವಂತಿಲ್ಲ ಎಂದು ವೈದ್ಯಕೀಯ ತಜ್ಞರೇ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಕೋವಿಡ್ ಮಹಾಮಾರಿಯ ಪರಿಣಾಮ ರಕ್ತದಾನದ ಪ್ರಮಾಣ ತುಂಬ ಕಡಿಮೆಯಾಗಿದ್ದು, ಬ್ಲಡ್ ಬ್ಯಾಂಕ್ ಗಳು ರಕ್ತದ ಕೊರತೆ ಎದುರಿಸುತ್ತಿವೆ. ಮುಂಬರುವ ದಿನಗಳಲ್ಲಿ ರೋಗಿಗಳು ರಕ್ತದ ಕೊರತೆ ಎದುರಿಸುವಂತಾಗಬಾರದು ಎಂಬ ಕಾಳಜಿಯಿಂದ ಸಮರ್ಥ ಭಾರತ ಸಂಸ್ಥೆ ಸೇವಾ ಭಾರತಿಯ ಸಹಯೋಗದೊಡನೆ ಕರ್ನಾಟಕದಾದ್ಯಂತ ರಕ್ತದಾನ ಶಿಬಿರಗಳನ್ನು ನಡೆಸುತ್ತಿದೆ. `ಲಸಿಕೆ ಪಡೆಯುವ ಮುನ್ನವೇ ರಕ್ತದಾನ ಮಾಡಿ’ ಎಂದು ಜಾಗೃತಿ ಮೂಡಿಸುತ್ತ, ಯುವಕರನ್ನು ಹುರಿದುಂಬಿಸುತ್ತಿದೆ. ಕಳೆದ 13 ದಿನಗಳಲ್ಲೇ 40ಕ್ಕೂ ಹೆಚ್ಚು ರಕ್ತದಾನ ಶಿಬಿರಗಳು ನಡೆದಿವೆ. ಪ್ರತಿ ಶಿಬಿರದಲ್ಲೂ ಸರಾಸರಿ 60-75 ಯುವಕರು ರಕ್ತದಾನ ಮಾಡಿದ್ದಾರೆ. ಬೆಂಗಳೂರಿನ ಜಯಯನಗರ, ಚಾಮರಾಜಪೇಟೆ, ಎಲೆಕ್ಟ್ರಾನಿಕ್ ಸಿಟಿ, ಕಾಡುಗೋಡಿ, ರಾಜರಾಜೇಶ್ವರಿ ನಗರ, ಚಂದ್ರಪುರ, ಕಲಬುರಗಿ ನಗರ, ಶಿರಾ ತಾಲೂಕಿನ ತುರುವೆಕೆರೆ ಮುಂತಾದೆಡೆ ಶಿಬಿರಗಳು ನಡೆದಿವೆ. ಪ್ಲಾಸ್ಮಾ ಅವಶ್ಯಕತೆ ಇರುವವರ ಮತ್ತು ದಾನಿಗಳ ಜಾಲವನ್ನು ನಿರ್ಮಿಸಲಾಗಿದ್ದು, ಪ್ಲಾಸ್ಮಾ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. `ಸಮಸ್ಯೆಗಳು ಸಾಕಷ್ಟಿದ್ದರೂ, ಸ್ಪಂದನೆ ಹೆಚ್ಚಿದ್ದಷ್ಟು ಬದಲಾವಣೆ ಸಾಧ್ಯವಾಗುತ್ತದೆ’ ಎನ್ನುತ್ತಾರೆ ಸಮರ್ಥ ಭಾರತ ಸಂಸ್ಥೆಯ ರಾಜೇಶ್ ಪದ್ಮಾರ್.
ಆಸರೆಯಾದ ಸಹಾಯವಾಣಿ:
ವಿವಿಧ ಕ್ಷೇತ್ರಗಳ ನವನಿಮರ್ಾಣದಲ್ಲಿ ತೊಡಗಿಕೊಂಡಿರುವ ಸೇವಾ ಭಾರತಿ ಸಂಸ್ಥೆ ಕೋವಿಡ್ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಲು ಮುಂದಾಗಿದೆ. ಈಗಾಗಲೇ, ಬೆಂಗಳೂರು (93437-51434), ಹುಬ್ಬಳ್ಳಿ (74117-34247), ದಾವಣಗೆರೆ ಸಹಿತ ಹಲವು ನಗರಗಳಲ್ಲಿ ಸಹಾಯವಾಣಿ ಆರಂಭಗೊಂಡಿದೆ. ಯಾವ ಆಸ್ಪತ್ರೆಯಲ್ಲಿ ಹಾಸಿಗೆ, ಆಮ್ಲಜನಕದ ಲಭ್ಯತೆ ಇದೆ ಎಂಬುದನ್ನು ತಿಳಿಸುವುದಲ್ಲದೆ ಆಂಬುಲೆನ್ಸ್ ವ್ಯವಸ್ಥೆ, ಸೋಂಕಿತರಿಗೆ ಮನೋಸ್ಥೈರ್ಯ ತುಂಬಲು ತಜ್ಞರಿಂದ ಮಾರ್ಗದರ್ಶನ ಕೊಡಿಸಲಾಗುತ್ತಿದೆ. ಸೇವಾ ಭಾರತಿ ಲಸಿಕಾ ಅಭಿಯಾನವನ್ನು ತೀವ್ರಗೊಳಿಸಲು ಶ್ರಮಿಸುತ್ತಿದೆ. ಬೆಂಗಳೂರಿನ 2 ಸಾವಿರ ಅಪಾರ್ಟ್ಮೆಂಟ್ ಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, ಲಭ್ಯತೆ ಅನುಸಾರ ಅಪಾರ್ಟ್ಮೆಂಟ್ ಗಳಲ್ಲೇ ಲಸಿಕೆ ನೀಡಲಾಗುತ್ತಿದೆ. ಕರೊನಾ ವಿರುದ್ಧ ಹೋರಾಡಲು ಲಸಿಕೆ ಪ್ರಬಲ ಅಸ್ತ್ರ ಆಗಿರುವುದರಿಂದ, ಈ ಅಭಿಯಾನ ಕೈಗೊಳ್ಳಲಾಗಿದೆ ಎನ್ನುತ್ತಾರೆ ಈ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ರಾಧಾಕೃಷ್ಣ ಹೊಳ್ಳ ಮತ್ತು ಪ್ರವೀಣ್ ಪಟವರ್ಧನ್.
ಸೋಂಕಿತರ ಮನೆಗೇ ಊಟ:
ಅದೆಷ್ಟೋ ಕರೊನಾ ಸೋಂಕಿತರು ತೀವ್ರ ಸುಸ್ತಿನಿಂದ ಬಳಲುತ್ತಿದ್ದಾರೆ. ಯಾರಿಗೆ ಅಡುಗೆ ಮಾಡಿಕೊಳ್ಳಲು ಸಾಧ್ಯವಿಲ್ಲವೋ ಅಂಥವರ ನೆರವಿಗೆ ನಿಂತಿದೆ ಯುವಾ ಬ್ರಿಗೇಡ್. ಬೆಂಗಳೂರಿನ ಜಯನಗರ, ಗಿರಿನಗರ, ಬಸವನಗುಡಿ, ಬನಶಂಕರಿ ಪ್ರದೇಶಗಳಲ್ಲಿ ಪ್ರತಿ ಮಧ್ಯಾಹ್ನ 250 ಜನರಿಗೆ ಶುಚಿಯಾದ ಊಟ ಒದಗಿಸಲಾಗುತ್ತಿದೆ. ಬಿಎನ್ಎಮ್ಐಟಿ ಮತ್ತು ಸ್ವಾಮಿ ವಿವೇಕಾನಂದ ಶ್ರೇಷ್ಠ ಭಾರತ ಪ್ರತಿಷ್ಠಾನದ ಸಹಯೋಗದಲ್ಲಿ ಈ ಕೆಲಸ ನಡೆಯುತ್ತಿದ್ದು, ಯುವಾ ಬ್ರಿಗೇಡಿನ 16 ಕಾರ್ಯಕರ್ತರು ಬೈಕ್ಗಳಲ್ಲಿ ಮನೆ-ಮನೆಗೆ ತೆರಳಿ ಊಟ ವಿತರಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲೂ ಈ ಸೇವೆ ಇತ್ತೀಚೆಗೆ ಆರಂಭಗೊಂಡಿದೆ. `ತೀವ್ರ ಬಳಲಿಕೆ ಇರುವವರಿಗೆ ವಿಶ್ರಾಂತಿ ಅಗತ್ಯ. ಈ ಹೊತ್ತಲ್ಲಿ ಶುಚಿಯಾದ ಊಟ ಅವರಿರುವೆಡೆ ತಲುಪಿಸಿಬಿಟ್ಟರೆ, ಸೋಂಕಿತರಿಗೆ ದೊಡ್ಡ ಹೊರೆ ಕಡಿಮೆಯಾದಂತೆ. ಎಲ್ಲ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಲೇ ಈ ಕೆಲಸ ಮಾಡುತ್ತಿದ್ದು, ವಿಶಿಷ್ಟ ಬಗೆಯ ತೃಪ್ತಿಯನ್ನು ನೀಡಿದೆ’ ಎಂಬ ವಿಶ್ವಾಸದ ನುಡಿ ಯುವಾ ಬ್ರಿಗೇಡ್ ಮಾರ್ಗದರ್ಶಕ ಮತ್ತು ಚಿಂತಕ ಚಕ್ರವತರ್ಿ ಸೂಲಿಬೆಲೆ ಅವರದ್ದು. ಮೈಸೂರಿನಲ್ಲಿ ಜಿಲ್ಲಾಡಳಿತ ನಡೆಸುತ್ತಿರುವ ವಾರ್ ರೂಮ್ನಲ್ಲಿ ಯುವಾ ಬ್ರಿಗೇಡಿನ ಕಾರ್ಯಕರ್ತರು ರಾತ್ರಿ ಪಾಳಿಯಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಹಾವೇರಿ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿದೆ.
ಅದಮ್ಯದಿಂದ ನಿತ್ಯ ಅನ್ನದಾನ:
ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಅದಮ್ಯ ಚೇತನ ಸಂಸ್ಥೆ ಮೊದಲ ಲಾಕ್ಡೌನ್ ಅವಧಿಯಲ್ಲೂ ಪ್ರತಿನಿತ್ಯ ಸಾವಿರಾರು ಜನರಿಗೆ ಆಹಾರ ಒದಗಿಸಿತ್ತು. ಸೋಂಕಿತರಿಗೆ ನೆರವಾಗುವ ಹಲವು ಸ್ವಯಂಸೇವಾ ಸಂಸ್ಥೆಗಳಿಗೆ ಈ ಬಾರಿ ಆಹಾರ ತಯಾರಿಸಿ ಕೊಡುತ್ತಿದ್ದು, ಪ್ರತಿ ನಿತ್ಯ 2500-3000 ಜನರಿಗೆ ಆಹಾರ ಪೊಟ್ಟಣಗಳ ಮುಖಾಂತರ ಊಟ ಒದಗಿಸಲಾಗುತ್ತಿದೆ. ಇದಲ್ಲದೆ, ಅನಂತಕುಮಾರ್ ಪುಣ್ಯತಿಥಿ ದಿನದಿಂದ ಆರಂಭವಾದ ನಿತ್ಯ ಅನ್ನದಾನ ಯೋಜನೆಯೂ ಮುಂದುವರಿದಿದ್ದು, ಅದಮ್ಯ ಚೇತನ ಆವರಣ, ಜಯನಗರ, ರಾಜರಾಜೇಶ್ವರಿ ನಗರದಲ್ಲಿ ನೂರಾರು ಬಡವರ ಹಸಿವನ್ನು ನೀಗಿಸುತ್ತಿದೆ. ಪೌರ ಕಾಮರ್ಿಕರು, ಆಟೋ ಇತರ ವಾಹನ ಚಾಲಕರು, ಹೂವು ಮಾರಾಟಗಾರರು, ಸಣ್ಣಪುಟ್ಟ ಅಂಗಡಿಯವರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. `ಅನ್ನಪೂರ್ಣ’ ಅಡುಗೆಮನೆಯಲ್ಲಿ ಪೂರ್ಣ ಶುಚಿತ್ವದ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ತಯಾರಿಸಲಾಗುತ್ತಿದೆ ಎಂದ ತೇಜಸ್ವಿನಿ ಅನಂತಕುಮಾರ್, ಇಂಥ ಸಂಕಷ್ಟದ ಹೊತ್ತಲ್ಲಿನ ಸಣ್ಣ ಸಹಾಯವೂ ದೊಡ್ಡ ಪರಿಣಾಮ ಬೀರುತ್ತದೆ ಎನ್ನುತ್ತಾರೆ.
ವೈಎಫ್ಎಸ್ ನಿಂದ ಆರೋಗ್ಯ ಕಿಟ್, ಟೆಲಿಮೆಡಿಸಿನ್:
ರಾಜ್ಯದಲ್ಲಿ ಸೇವೆಯ ಸಶಕ್ತ ಜಾಲ ಹೊಂದಿರುವ ಯೂತ್ ಫಾರ್ ಸೇವಾ ಬಹುರಾಷ್ಟ್ರೀಯ ಕಂಪನಿ ಜತೆ ಸೇರಿ ಕೋವಿಡ್ ಸೋಂಕಿತರಿಗೆ ಆರೋಗ್ಯ ಕಿಟ್ ಒದಗಿಸುತ್ತಿದೆ. ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್, ಅಗತ್ಯ ಔಷಧಗಳನ್ನು ಈ ಕಿಟ್ ಒಳಗೊಂಡಿರುತ್ತದೆ. ಬಹುತೇಕರು ಸೋಂಕಿತರಾಗುತ್ತಿದ್ದಂತೆ ಆತಂಕಿತರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆಸ್ಪತ್ರೆಗಳ ಮೇಲಿನ ಅನಗತ್ಯ ಒತ್ತಡ ಕಡಿಮೆ ಮಾಡಲು ಮನೆಯಲ್ಲೇ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಬೇಕು ಎಂಬ ಉದ್ದೇಶದಿಂದ ವೈಎಫ್ಎಸ್ ಪ್ರಸಕ್ತ ಅಭಿಯಾನ ಕೈಗೊಂಡಿದೆ. ಮೊದಲ ಹಂತದಲ್ಲಿ 25 ಸಾವಿರ ಸೋಂಕಿತರಿಗೆ ಕಿಟ್ ವಿತರಿಸಲಾಗುತ್ತಿದೆ.
ಬೆಂಗಳೂರಿನ 17 ಆಸ್ಪತ್ರೆಗಳ ಸಿಬ್ಬಂದಿ ಮತ್ತು ಕೆಲ ರೋಗಿಗಳಿಗೆ ಅದಮ್ಯ ಚೇತನದ ಸಹಯೋಗದೊಡನೆ ಊಟ ಒದಗಿಸುತ್ತಿದೆ. ಆಸ್ಪತ್ರೆಗಳ ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ಇದರಿಂದ ಪ್ರಯೋಜನವಾಗಿದೆ. ವೈಎಫ್ಎಸ್ ನ `ಡಾಕ್ಟರ್ ಫಾರ್ ಸೇವಾ’ ತಂಡದ ವೈದ್ಯರು ಸೋಂಕಿತರಿಗೆ ಫೋನ್ ಮೂಲಕ ಮಾರ್ಗದರ್ಶನ ನೀಡುತ್ತಿದ್ದಾರೆ. ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು, ಮನೆಯಲ್ಲಿನ ಚಿಕಿತ್ಸಾ ವಿಧಾನ ಹೇಗೆ ಎಂಬುದರ ಅರಿವು ತುಂಬುತ್ತಿದ್ದಾರೆ. ಇದರಿಂದ ರೋಗಿಗಳ ಆತಂಕ ಮತ್ತು ಆಸ್ಪತ್ರೆಗಳಲ್ಲಿನ ಒತ್ತಡ ಕಡಿಮೆಯಾಗಿದೆ ಎಂದರು ಯೂತ್ ಫಾರ್ ಸೇವಾದ ಸಂಸ್ಥಾಪಕ ವೆಂಕಟೇಶಮೂರ್ತಿ.
ಶಾಲೆಯೇ ಆರೈಕೆ ಕೇಂದ್ರವಾಯಿತು!:
ಸೋಂಕಿನ ಗಂಭೀರ ಲಕ್ಷಣ ಹೊಂದದವರಿಗೆ ಒಂದಿಷ್ಟು ಸೂಕ್ತ ಆರೈಕೆ ಸಾಕು. ಆದರೆ, ಅದೆಷ್ಟೋ ಜನರಿಗೆ ಮನೆಯಲ್ಲಿ ಐಸೋಲೇಟ್ ಆಗುವ ಸೌಲಭ್ಯ ಇರುವುದಿಲ್ಲ. ಅಂಥವರಿಗಾಗಿ ರಾಷ್ಟ್ರೋತ್ಥಾನ ಪರಿಷತ್ ಸೇವಾ ಭಾರತಿ ಸಹಯೋಗದೊಡನೆ ತನ್ನ ಎರಡು ವಿದ್ಯಾಮಂದಿರಗಳನ್ನೇ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಿದೆ. ಬೆಂಗಳೂರಿನ ಬನಶಂಕರಿ 6ನೇ ಹಂತದ ರಾಷ್ಟ್ರೋತ್ಥಾನ ಶಾಲೆಯಲ್ಲಿ 100 ಹಾಸಿಗೆ ಸಾಮಥ್ರ್ಯದ ಮತ್ತು ರಾಮಮೂರ್ತಿ ನಗರದ ಶಾಲೆಯಲ್ಲಿ 60 ಹಾಸಿಗೆ ಸಾಮರ್ಥ್ಯದ ಐಸೋಲೇಶನ್ ಕೇಂದ್ರ ತೆರೆಯಲಾಗಿದೆ. 24 ಗಂಟೆಯೂ ವೈದ್ಯರು ಮತ್ತು ನರ್ಸ್ ಗಳ ತಂಡ ಕಾರ್ಯನಿರ್ವಹಿಸುತ್ತಿದೆ.
ಇಂಥ ನಿಸ್ವಾರ್ಥ ಮನಸ್ಸುಗಳು, ಸಮಾಜಮುಖಿ ಸಂಘಟನೆಗಳೇ ಭರವಸೆಯ ನಿಜವಾದ ಬೆಳಕು. ಅಷ್ಟೇ ಅಲ್ಲ, ಘೋರ ಸಂಕಷ್ಟವೊಂದು ಎದುರಾದಾಗ ಅದನ್ನು ಹೇಗೆ ಎದುರಿಸಬೇಕು, ಮಾನವೀಯ ಸಂವೇದನೆಯ ಶಕ್ತಿ ಏನು ಎಂಬುದನ್ನು ವಿಶಿಷ್ಟ ಕಾರ್ಯಗಳ ಮುಖೇನವೇ ಪರಿಚಯಿಸಿದ್ದಾರೆ. ಇಂಥ ಸ್ಪಂದನೆ ಎಂಥವರ ಆತಂಕವನ್ನೂ ತೊಡೆದುಹಾಕಬಲ್ಲದು. ಅಲ್ಲವೇ?