ಆ ಊರಿಗೆ ತೀರ್ಥಹಳ್ಳಿಯಿಂದ ಪಶ್ಚಿಮದ ದಾರಿ ಹಿಡಿದು ೨೦ ಕಿಮೀ ಸಾಗಬೇಕು. ದಾರಿಯುದ್ದಕ್ಕೂ ದಟ್ಟ ಕಾಡು. ಅಲ್ಲಲ್ಲಿ ಏರಿ, ಇಳಿದು, ದಣಿದು ದಾರಿ ತಪ್ಪಿಯೇ ಸಿಗುವ ಆ ಊರು ಚಕ್ಕೋಡುಬೈಲು. ಪ್ರವೇಶಿಸುತ್ತಲೇ ಅದೆಷ್ಟೋ ಶತಮಾನಗಳ ಹಿಂದಿನಿಂದಲೇ ಇಲ್ಲೊಂದು ಜನವಸತಿಯ ಜಾಗವಿತ್ತು ಎನಿಸುವ ಆ ಗ್ರಾಮದಂಚಿನಲ್ಲಿ ಮಾಲತಿ ನದಿ ಬಳುಕುತ್ತಾ ಹರಿಯುತ್ತದೆ. ಆ ಗ್ರಾಮದಲ್ಲೊಂದು ರಾಮಲಿಂಗೇಶ್ವರ ದೇವರಿದ್ದಾನೆ. ತುಂಬಾ ಹಿಂದೆ ಕಾಶಿ ಯಾತ್ರೆಗೆ ಹೋದವರು ನೇಪಾಳದಿಂದ ಆ ಲಿಂಗವನ್ನು ತಂದು ಪ್ರತಿಷ್ಠಾಪನೆ ಮಾಡಿದ್ದರು ಎಂಬ ಐತಿಹ್ಯವಿದೆ. ಅಷ್ಟಕ್ಕೂ ಕಾಶಿಗೆ ಹೋದವರು ನೇಪಾಳಕ್ಕೂ ಹೋಗಿ ತಂದ ಲಿಂಗಕ್ಕೇಕೆ ರಾಮಲಿಂಗೇಶ್ವರ ಎಂಬ ಹೆಸರು ಎಂದು ಕೇಳಿದರೆ ಊರ ಜನರು ಕಾಶಿ ಯಾತ್ರೆಯ ಬಗ್ಗೆ ವಿಸ್ತೃತವಾಗಿ ಹೇಳಲಾರಂಭಿಸುತ್ತಾರೆ. ಕಾಶಿ ಯಾತ್ರೆ ಕೈಗೊಳ್ಳುವವರು ಮೊದಲು ರಾಮೇಶ್ವರನನ್ನು ದರ್ಶನ ಮಾಡಿ, ರಾಮಸೇತುವಿನಿಂದ ಹಿಡಿ ಮರಳನ್ನು ಒಯ್ದು ಗಂಗೆಯಲ್ಲಿ ಹಾಕಬೇಕಂತೆ.
ಅನಂತರ ವಿಶ್ವನಾಥನ ದರ್ಶನ ಮುಗಿಸಿ ಗಂಗಾ ತೀರ್ಥದಿಂದ ರಾಮೇಶ್ವರನಿಗೆ ಅಭಿಷೇಕವನ್ನು ಮಾಡಿಸಿ ಊರಿಗೆ ಮರಳಬೇಕಿತ್ತಂತೆ! ಹಾಗಾಗಿ ಚೆಕ್ಕೋಡುಬೈಲಿನ ಶಿವ ರಾಮಲಿಂಗೇಶ್ವರನಾದನಂತೆ. ಕವಲೇದುರ್ಗದ ಕಾಶಿ ವಿಶ್ವನಾಥನೂ ಹೀಗೆಯೇ ಪ್ರತಿಷ್ಠಾಪಿತನಾದವನಂತೆ. ರಾಮಲಿಂಗೇಶ್ವರ ಹೊರತಾಗಿ ಚಕ್ಕೋಡುಬೈಲಿನಲ್ಲಿ ವಿಶೇಷವಾಗಿ ಕಾಣುವುದು ಕಾಡು ಪಾಲಾಗಿಹೋಗಿರುವ ಮಹತಿ ಮಠ ಎಂಬ ಜಂಗಮರ ಮಠ.
ತೀರ್ಥಹಳ್ಳಿಯಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘವನ್ನು ಕಟ್ಟಿದ ದಿ.ಚಕ್ಕೋಡುಬೈಲು ಬೆನಕ ಭಟ್ಟರೆಂಬ ಸ್ವಯಂಸೇವಕರ ವ್ಯಕ್ತಿತ್ವ ಮತ್ತು ಕೆಲವೊಮ್ಮೆ ಅರಗ ಜ್ಞಾನೇಂದ್ರರ ಬಾಯಿಂದ ಬರುವ ಚೆಕ್ಕೋಡುಬೈಲಿನ ಉಲ್ಲೇಖಗಳು ಬಿಟ್ಟರೆ ಈ ಚಕ್ಕೋಡುಬೈಲು ರಾಜ್ಯಕ್ಕೆ ತೀರಾ ಅಪರಿಚಿತವಾದ ಊರು. ಆದರೆ ಒಂದು ಕಾಲದಲ್ಲಿ ಈ ಚಕ್ಕೋಡುಬೈಲು ಇಷ್ಟೇ ಆಗಿರಲಿಲ್ಲ! ಅದರ ಹೆಸರು ಕೆಳದಿಯನ್ನು ದಾಟಿ, ವಿಂಧ್ಯವನ್ನು ಹಾದು ಉತ್ತರದ ಗಂಗೆಯವರೆಗೂ ವ್ಯಾಪಿಸಿತ್ತು ಎಂಬ ಅಚ್ಚರಿಯನ್ನು ಆ ಕಾಲದ ಶಾಸನಗಳು ಹೇಳುತ್ತವೆ.
ತಾಮ್ರ ಶಾಸನವೊಂದರಲ್ಲಿ (ಎಪಿಗ್ರಾಫಿಯಾ ಕರ್ನಾಟಿಕಾ, ತೀರ್ಥಹಳ್ಳಿ-೪೩) ಈ ಚಕ್ಕೋಡುಬಲಿನ ಬಗ್ಗೆ ವಿವರಣೆಗಳಿವೆ. ೧೬೪೧ರಲ್ಲಿ ಕೆಳದಿ ಸಂಸ್ಥಾನದ ವೀರಭದ್ರನಾಯಕನು ತೀರ್ಥಹಳ್ಳಿ ತಾಲೂಕಿನ ೬೧ ವರಾಹ ಮೌಲ್ಯದ ಚಕ್ಕೋಡುಬೈಲು ಗ್ರಾಮವನ್ನು ಕಾಶಿಗಾಗಿ ದತ್ತಿ ನೀಡಿದ್ದನ್ನು ಆ ಶಾಸನ ಉಲ್ಲೇಖಿಸುತ್ತದೆ. ಇದರಲ್ಲಿ ೨೪ ವರಾಹ ಭೂಮಿಯನ್ನು ಕಾಶಿ ವಿಶ್ವನಾಥನ ಸೋಮವಾರದ ಪೂಜೆಗಾಗಿ ಮೀಸಲಾಗಿಡಲಾಗಿತ್ತು ಎಂಬುದನ್ನು ಆ ತಾಮ್ರಶಾಸನ ಹೇಳುತ್ತದೆ. ಅಷ್ಟೇ ಅಲ್ಲದೆ ಚೆಕ್ಕೋಡುಬೈಲಿನ ಉಳಿದ ೩೭ ವರಾಹ ಬೆಲೆಯ ಉತ್ಪತ್ತಿ ಕಪ್ಪಗಳಲೆ ಬಸವಣ್ಣ ಎಂಬವನು ಕಟ್ಟಿಸಿದ ಮಹತ್ತಿನ ಮಠಕ್ಕೆ ಸಲ್ಲುತ್ತಿತ್ತು ಮತ್ತು ಈ ಮಠ ಚಕ್ಕೋಡುಬೈಲಿಗೂ ಕಾಶಿಗೂ ವಾಹಕನಂತೆ ಕೆಲಸ ಮಾಡುತ್ತಿತ್ತು ಎಂಬುದನ್ನು ಹೇಳುತ್ತದೆ. ಎಲ್ಲಿಯ ಚಕ್ಕೋಡುಬೈಲು? ಎಲ್ಲಿಯ ಬನಾರಸ್!? ಒಂದು ಕಾಲದಲ್ಲಿ ಸಮಾಜವಾದದ ಕೋಟೆ ಎಂದೇ ಖ್ಯಾತವಾಗಿದ್ದ ಇದೇ ತೀರ್ಥಹಳ್ಳಿಯ ಗ್ರಾಮಗಳಲ್ಲಿ ಬೆನಕ ಭಟ್ಟರು ರಾ.ಸ್ವ.ಸಂಘದ ಶಾಖೆಗಳನ್ನು ನಡೆಸುತ್ತಿದ್ದಾಗ ಕೆಲವರು ನಾಗಪುರದ ಬೀಜಗಳು ಚಕ್ಕೋಡುಬೈಲಿನಲ್ಲಿ ಮೊಳಕೆಯೊಡೆಯುವುದೇ ಎಂದು ಆಡಿಕೊಂಡಿದ್ದರಂತೆ!
ಆದರೆ ಸಮಾಜವಾದಿಗಳು ಹುಟ್ಟುವುದಕ್ಕೆ ಮೊದಲೇ ಚಕ್ಕೋಡುಬೈಲಿನಲ್ಲಿ ಅನೇಕ ಬೆನಕ ಭಟ್ಟರು ಹುಟ್ಟಿ, ಕಾಶಿಯನ್ನು ಬೆಸೆದಿದ್ದರು. ಅಂಥವರಲ್ಲಿ ಒಬ್ಬ ಕೆಳದಿಯರಸ ವೀರಭದ್ರನಾಯಕ.ಹಾಗೆ ನೋಡಿದರೆ ವೀರಭದ್ರ ನಾಯಕನಿಗಿಂತ ಪೂರ್ವದಲ್ಲೇ ಕೆಳದಿಯರಸರಿಗೂ ಕಾಶಿಗೂ ನಿಕಟ ಸಂಬಂಧವಿದ್ದ ಕುರುಹುಗಳು ಗೋಚರಿಸುತ್ತವೆ. ವಿಶೇಷವೆಂದರೆ ಭಾರತದ ಇತಿಹಾಸದಲ್ಲಿ ಯಾರನ್ನು ಕಾಶಿ ಕಟ್ಟಿದವರು ಎನಲಾಗುತ್ತದೋ ಅವರೆಲ್ಲರೂ ಹುಟ್ಟುವ ಶತಮಾನಗಳ ಹಿಂದೆಯೇ ಕಾಶಿಯ ಅಭಿವೃದ್ಧಿಯನ್ನು ಮಾಡಿದವರು ಈ ಕೆಳದಿಯ ಅರಸರು. ಅಂದರೆ ಪೇಶ್ವೆಗಳು, ಮರಾಠರು, ರಜಪೂತರು, ಹೋಳ್ಕರರು, ಸಿಂಧಿಯಾಗಳು ಕಾಶಿಗೆ ಕಾಲಿಡುವ ಸಾಕಷ್ಟು ಮುಂಚೆಯೇ ಗಂಗಾತಟದಲ್ಲಿ ಕೆಳದಿಯರಸರ ಪದಚಿಹ್ನೆಗಳು ಮೂಡಿದ್ದವು.
ಕೆಳದಿ ಸಾಮ್ರಾಜ್ಯದ ಖ್ಯಾತ ಅರಸ ಸದಾಶಿವ ನಾಯಕನ ಹಿರಿಯ ಮಗ ದೊಡ್ಡ ಸಂಕಣ್ಣ ನಾಯಕ ಅತ್ಯಂತ ಪರಾಕ್ರಮಿಯೂ, ದೈವ ಭಕ್ತನೂ ಆಗಿದ್ದವನು. ೧೫೪೬ ರಲ್ಲಿ ಪಟ್ಟಕ್ಕೆ ಬಂದ ಆತನಿಗೆ ಕೆಲ ಕಾಲಾನಂತರ ವೈರಾಗ್ಯ ಮೂಡಿ ಕಾವಿ ಧರಿಸಿ ಜಂಗಮನಾದ. ತನ್ನ ತಮ್ಮ ಸಣ್ಣ ಸಂಕಣ್ಣ ನಾಯಕನಿಗೆ ಪಟ್ಟವನ್ನು ಒಪ್ಪಿಸಿ ಕಾಶಿಗೆ ಹೊರಟುಹೋದ. ಪರಂಪರೆಯಂತೆ ಆತ ರಾಮೇಶ್ವರದಿಂದ ಕಾಶಿ ಯಾತ್ರೆಯನ್ನು ಆರಂಭಿಸಿದ. ದೊಡ್ಡ ಸಂಕಣ್ಣ ನಾಯಕ ಏಕಾಏಕಿ ಕಾವಿ ಧರಿಸಿ ಯಾತ್ರೆಗೆ ಹೋದ ಬಗ್ಗೆ ಹಲವು ವಾದಗಳಿವೆ. ಯಾವುದೋ ಮಹತ್ತರವಾದ ಉದ್ದೇಶವನ್ನು ಹೊತ್ತು ದೊಡ್ಡ ಸಂಕಣ್ಣ ನಾಯಕ ಕಾವಿಧಾರಿಯಾದ ಎಂದು ಹೇಳಲಾಗುತ್ತದೆ. ಮುಂದಿನ ಘಟನೆಗಳು ಕೂಡಾ ಆ ವಾದಗಳಿಗೆ ಪುಷ್ಠಿಯನ್ನು ನೀಡುತ್ತವೆ. ಏಕೆಂದರೆ ರಾಮೇಶ್ವರದಿಂದ ಹೊರಟ ದೊಡ್ಡ ಸಂಕಣ್ಣ ನಾಯಕ ನೇರವಾಗಿ ಹೋಗಿದ್ದು ದೆಹಲಿಗೆ! ದೆಹಲಿಯಲ್ಲಾಗ ಅಕ್ಬರನ ಆಳ್ವಿಕೆಯಿತ್ತು. ದೆಹಲಿ ಪ್ರವೇಶಿಸಿದ ದೊಡ್ಡ ಸಂಕಣ್ಣ ನಾಯಕನಿಗೆ ಕೋಟೆ ಬಾಗಿಲಲ್ಲಿ ನೇತುಹಾಕಿದ್ದ ಒಂದು ಕತ್ತಿ ಕಾಣುತ್ತದೆ. ಅದರ ಪೂರ್ವಪರವನ್ನು ವಿಚಾರಿಸಿದಾಗ ಅದು ಅಕ್ಬರನ ಸೇನಾಪತಿ ಅಂಕುಶ್ ಖಾನನೆಂಬ ಮತಾಂಧನ ಕತ್ತಿಯೆಂದೂ, ಮಹಾ ಪರಾಕ್ರಮಿಯಾಗಿದ್ದ ಆತನಿಗೆ ಕತ್ತಿ ವರಸೆಯಲ್ಲಿ ತನ್ನನ್ನು ಸೋಲಿಸುವವರು ಭಾರತದಲ್ಲೇ ಇಲ್ಲವೆಂಬ ಅಹಂಕಾರ ತಲೇಗೇರಿ ತನ್ನ ಕತ್ತಿಯನ್ನು ಕೋಟೆ ಬಾಗಿಲಲ್ಲಿ ನೇತು ಹಾಕಿ ಪಂಥಾಹ್ವಾನವನ್ನು ಮಾಡಿದ್ದ.
ಈ ವಿಚಾರ ದೊಡ್ಡ ಸಂಕಣ್ಣ ನಾಯಕನಿಗೆ ತಿಳಿಯುತ್ತದೆ. ಹಿಂದೆಮುಂದೆ ನೋಡದ ಕಾವಿಧಾರಿ ಕೆಳದಿಯರಸ ಅಂಕುಶ ಖಾನನನ್ನು ಕಾದಾಟಕ್ಕೆ ಆಹ್ವಾನಿಸುತ್ತಾನೆ! ದರ್ಬಾರಿನಲ್ಲಿ ನಡೆದ ಕಾಳಗದಲ್ಲಿ ದೊಡ್ಡ ಸಂಕಣ್ಣ ನಾಯಕ ತನ್ನ ’ನಾಗಮುರಿ’ ಎಂಬ ಖಡ್ಗದಿಂದ ತುರುಕನನ್ನು ಅಡ್ಡಡ್ಡ ಸೀಳುತ್ತಾನೆ. ದೊಡ್ಡ ಸಂಕಣ್ಣ ನಾಯಕನಾದರೋ ಕಾವಿಧಾರಿ! ಯಾತ್ರೆಗೆ ಹೊರಟ ಸರ್ವಸಂಗಪರಿತ್ಯಾಗಿ. ಅವನೇಕೆ ಖಡ್ಗವನ್ನು ಜೊತೆಯಲ್ಲಿ ಕೊಂಡೊಯ್ದ ಎಂಬ ಪ್ರಶ್ನೆ ಉದ್ಭವಿಸಿದರೆ ದೊಡ್ಡ ಸಂಕಣ್ಣ ನಾಯಕನ ಯಾತ್ರೆಯ ಉದ್ದೇಶವೂ ನಮಗೆ ತಿಳಿಯುತ್ತದೆ. ಅಂದರೆ ಆ ಕಾಲಕ್ಕಾಗಲೇ ಮುಸಲ್ಮಾನರಿಂದ ಕಾಶಿಯ ಮೇಲೆ ಆಕ್ರಮಣ ನಡೆದು, ಸಂಪೂರ್ಣ ಕಾಶಿ ನಾಶವಾಗಿಹೋಗಿತ್ತು. ಹಾಗಾಗಿ ದೊಡ್ಡ ಸಂಕಣ್ಣ ನಾಯಕನ ಕಾಶಿ ಯಾತ್ರೆಯ ಉದ್ದೇಶವೂ ಕಾಶಿಯ ಉದ್ಧಾರವೇ ಆಗಿತ್ತು. ಕಾಳಗದಲ್ಲಿ ಗೆದ್ದ ಕೆಳದಿಯರಸನಿಗೆ ಅಕ್ಬರ ಬಹುಮಾನಗಳನ್ನು ನೀಡಲು ಮುಂದಾದಾಗ ಆತ ಅದನ್ನು ನಿರಾಕರಿಸಿದ. ಬದಲಿಗೆ ಕಾಶಿಯ ಉದ್ಧಾರಕ್ಕೆ ಅನುಮತಿಯನ್ನು ನೀಡಬೇಕೆಂದು ಕೇಳಿಕೊಂಡ. ಅಕ್ಬರನೂ ಅದಕ್ಕೊಪ್ಪಿದ. ಅದರಂತೆ ಕಾಶಿಗೆ ಹೋದ ದೊಡ್ಡ ಸಂಕಣ್ಣ ನಾಯಕ ಕಾಶಿಯ ಜಂಗಮವಾಡಿ ಮಠದಲ್ಲಿ ವಾಸ್ತವ್ಯ ಹೂಡಿ ನಿಂತುಹೋಗಿದ್ದ ವಿಶ್ವನಾಥನ ಪೂಜಾ ಕಾರ್ಯಗಳನ್ನು ಪುನರಾರಂಭಿಸಿದ. ಅಂದರೆ ದೊಡ್ಡ ಸಂಕಣ್ಣ ನಾಯಕನಿಗಿಂತ ಹಿಂದೆಯೇ ಕಾಶಿಯಲ್ಲಿ ಜಂಗಮವಾಡಿ ಮಠ ಇತ್ತು!
ಅದರ ಪಕ್ಕದಲ್ಲೇ ಆತ ಮಲ್ಲಿಕಾರ್ಜುನ ದೇವಸ್ಥಾನವನ್ನು ನಿರ್ಮಿಸಿ, ಅದರ ಪಕ್ಕದ ಘಾಟ್‌ಗೆ ಜಂಗಮ ಘಾಟ್ ಎಂದೂ, ಅದರ ಸಮುಚ್ಛಯಕ್ಕೆ ಜಂಗಮಪುರವೆಂದೂ ನಾಮಕರಣ ಮಾಡಿದೆ. ಕಾಶಿಯ ಕಪಿಲಧಾರಾ ತೀರ್ಥ. ಮಾನಸಸರೋವರ ತೀರ್ಥ ಮತ್ತು ಗಾಂಧರ್ವ ಸಾಗರ ತೀರ್ಥಗಳನ್ನು ಜೀರ್ಣೋದ್ದಾರ ಮಾಡಿಸಿದ. ಮುಸಲ್ಮಾನರಿಂದ ನಾಶವಾಗಿದ್ದ ಕರ್ದಮೇಶ್ವರ, ನರ್ಮದೇಶ್ವರ, ಭೀಮಚಂಡಿಕೆ, ವೃಷಧ್ವಜೇಶ್ವರ ದೇವಸ್ಥಾನಗಳನ್ನು ಕೂಡಾ ಜೀರ್ಣೋದ್ಧಾರ ಮಾಡಿಸಿದ.
ನರೇಂದ್ರ ಮೋದಿಯವರೆಂದಂತೆ ಕಾಶಿಯನ್ನು ನೂರಾರು ಜನರು ಕಟ್ಟಿದ್ದಾರೆ, ಉದ್ಧರಿಸಿದ್ದಾರೆ. ಕಾಶಿಯನ್ನು ಉದ್ಧರಿಸಿದ ಎಲ್ಲರಿಗೂ ಅನೇಕ ಸವಾಲುಗಳಿದ್ದವು. ಆದರೆ ಕೆಳದಿಯರಸರಂತೆ ಕಾಶಿಯನ್ನು ಕಟ್ಟಿದವರು ನಮಗೆ ಭಾರತದಲ್ಲಿ ಯಾರೂ ಕಾಣಲಾರರು. ಮೊಘಲರ ಮೂಗಿನ ಕೆಳಗೆ ಪರಾಕ್ರಮದಿಂದಲೂ, ಜಾಣತನದಿಂದಲೂ ಕಾಶಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಈ ಪ್ರಸಂಗ ಭಾರತದ ಇತಿಹಾಸದಲ್ಲಿ ಅನೂಹ್ಯವಾದರೂ ಭೂಗತವಾಗಿಯೇ ಉಳಿದುಹೋಯಿತು. ಅದಕ್ಕೆ ಕಾರಣ ಮಧ್ಯಯುಗದ ಚರಿತ್ರೆಯನ್ನು ಸರಿಯಾಗಿ ರಚಿಸದೇ ಇದ್ದಿದ್ದು ಮತ್ತು ಔರಂಗಜೇಬನ ಕಾಲದಲ್ಲಿ ಕಾಶಿ ನಾಶವಾಯಿತು ಎಂಬಷ್ಟಕ್ಕೆ ನಮ್ಮ ಬುದ್ದಿಗಳು ನಿಂತುಹೋದದ್ದು!
ಅಂದರೆ ಔರಂಗಜೇಬನಿಗಿಂತ ಮೊದಲಿನ ತುರುಕರೆಲ್ಲರೂ ಸುಬಗರಲ್ಲ, ತುರುಕರು ಸುಬಗರಾಗಲು ಸಾಧ್ಯವೇ ಇಲ್ಲ ಎಂಬುದನ್ನು ನಾವು ಚಿಂತಿಸಲಿಲ್ಲ. ಅದರ ಪರಿಣಾಮವಾಗಿ ಔರಂಗಜೇಬನಿಗಿಂತ ಮೊದಲೇ ಕಾಶಿಯನ್ನು ಜೀರ್ಣೋದ್ಧಾರ ಮಾಡಿಸಿದವರೂ ನಮಗೆ ತಿಳಿಯಲಿಲ್ಲ. ಅಸಾಧ್ಯವಾದುದನ್ನು ಸಾಧಿಸಿದ ದೊಡ್ಡ ಸಂಕಣ್ಣ ನಾಯಕ ನಮಗೆ ಮಹಾಪುರುಷ ಎನಿಸಲೇ ಇಲ್ಲ. ಮತ್ತೊಂದು ವಿಶೇಷವೆಂದರೆ ಕಾಶಿಯನ್ನು ಜೀರ್ಣೋದ್ಧಾರ ಮಾಡಿಸಿದ ದೊಡ್ಡ ಸಂಕಣ್ಣ ನಾಯಕ ರಾಮೇಶ್ವರನ ದರ್ಶನ ಮುಗಿಸಿ ಮತ್ತೆ ಕೆಳದಿಗೆ ಬಂದ. ಪಟ್ಟದಲ್ಲಿದ್ದ ಸಣ್ಣ ಸಂಕಣ್ಣ ನಾಯಕನಿಂದ ಅಕಾರವನ್ನು ಮರಳಿ ಪಡೆದು, ಕಾವಿ ಕಳಚಿ ಮತ್ತೆ ರಾಜನಾದ. ಆತನ ಸಂಕಲ್ಪ ಈಡೇರಿತ್ತು. ಕೆಳದಿಯ ಜನರೂ ಮತ್ತೆ ಬಂದ ರಾಜನನ್ನು ಸ್ವೀಕರಿಸಿದರು. ಹೀಗೆ ಯಾತ್ರೆಗೆ ಹೊರಟ ಅರಸ ಕಾವಿ ಧರಿಸಿ ಖಡ್ಗಧಾರಿಯಾಗಿದ್ದು, ದೆಹಲಿಯಲ್ಲಿ ಕನ್ನಡದ ಕ್ಷಾತ್ರವನ್ನು ಮೊಳಗಿಸಿದ್ದು, ಕಾವಿಯೊಳಗಿದ್ದ ಕಾವು ಮತ್ತು ಪ್ರತಿಜ್ಞೆಗಳು ನಮ್ಮ ಇತಿಹಾಸದಲ್ಲಿ ಸದಾ ರಾರಾಜಿಸುತ್ತಿರಬೇಕಿತ್ತು. ಆದರೆ ಯಾಕೋ ಕೆಳದಿ ಅಳಿದುಹೋದಮೇಲೆ ಅದರ ಚರಿತ್ರೆಯೂ ನಾಡಿಗೆ ಮರೆತುಹೋಯಿತು.
ಕೆಳದಿಯರಸರ ಕಾಶಿ ಸೇವೆ ದೊಡ್ಡ ಸಂಕಣ್ಣ ನಾಯಕನ ಕಾಲಕ್ಕೆ ಮುಗಿದುಹೋಗಲಿಲ್ಲ. ಕಾಲಕಾಲಕ್ಕೆ ಕೆಳದಿಯ ಅರಸರೆಲ್ಲರೂ ಕಾಶಿಗೆ ದಾನ ದತ್ತಿಗಳನ್ನು ನೀಡುತ್ತಲೇ ಬಂದರು. ಶಿವಪ್ಪ ನಾಯಕ, ಎರಡನೆಯ ವೆಂಕಟಪ್ಪ ನಾಯಕ, ಸಿದ್ದಪ್ಪ ನಾಯಕರೆಲ್ಲರೂ ಕಾಶಿಗಾಗಿ ಯಥಾರ್ಥ ಸೇವೆಗಳನ್ನು ಸಲ್ಲಿಸುತ್ತಾ ಬಂದರು. ಕಾಶಿಗಾಗಿಯೇ ತೀರ್ಥಹಳ್ಳಿಯಲ್ಲಿ ಉದ್ದದೇವರ ಮಠದಂಥ ಎಷ್ಟೋ ಮಠಗಳು ನಿರ್ಮಾಣವಾದವು. ಇಂದಿಗೂ ಶಿವಮೊಗ್ಗ ಜಿಲ್ಲೆಯ ಹಲವು ಭೂ ದಾಖಲೆಗಳಲ್ಲಿ ’ಕಾಶಿ ಧರ್ಮ’ಕ್ಕಾಗಿ ಅರಸರು ಬಿಟ್ಟ ಉಂಬಳಿ ಭೂಮಿಗಳ ಉಲ್ಲೇಖಗಳಿವೆ. ಚಕ್ಕೋಡುಬೈಲು ಅದಕ್ಕೆ ಒಂದು ಸಾಕ್ಷಿ. ಕೆಲವು ವರ್ಷಗಳ ಹಿಂದೆ ಭಾರತೀಯ ಪುರಾತತ್ವ ಇಲಾಖೆಯ ಸಂಶೋಧಕರುಗಳಾದ ಡಾ. ಜಿ.ಎಸ್ ಗಾಯ್ ಮತ್ತು ಡಾ. ಕೆ.ವಿ ರಮೇಶ್ ಅವರುಗಳು ಕಾಶಿಯ ಕಪಿಲಧಾರಾ ತೀರ್ಥದ ಬಳಿ ನಡೆಸಿದ ಉತ್ಖನನದಲ್ಲಿ ಸಿಕ್ಕ ಮೂರು ಶಿಲಾ ಶಾಸನಗಳು ಕೂಡಾ ಕೆಳದಿಯರಸರ ಕೊಡುಗೆಗಳನ್ನು ಸಾರಿದ್ದವು. ವಿಶೇಷವೆಂದರೆ ಲಭಿಸಿದ ಮೂರು ಶಾಸನಗಳಲ್ಲಿ ಎರಡು ಸಂಸ್ಕೃತದ್ದಾಗಿದ್ದರೆ ಒಂದು ಶಾಸನ ಕನ್ನಡದ್ದಾಗಿತ್ತು! ೧೭೧೨, ೧೫೭೭ ಮತ್ತು ೧೬೫೫ರಲ್ಲಿ ಕೆಳದಿಯ ಅರಸರು ಕಾಶಿಯಲ್ಲಿ ನಡೆಸಿದ ಕಾರ್ಯಗಳು ಮತ್ತು ಸೇವೆಗಳ ಬಗ್ಗೆ ಅದು ಬೆಳಕನ್ನು ಚೆಲ್ಲಿತ್ತು.
ಹೀಗೆ ಕೆಳದಿಯರಸರ ಕಾಶಿ ಭಕ್ತಿ ನಮಗೆ ಕನ್ನಡದ ಧರ್ಮಭೀರುತನವನ್ನು, ಕನ್ನಡ ಪ್ರೇಮವನ್ನು, ಕ್ಷಾತ್ರ ತೇಜಸ್ಸನ್ನು, ದಾನ ಗುಣವನ್ನು, ಸಂಸ್ಕೃತಿಯ ಪ್ರೀತಿಯನ್ನು ಹೇಳುತ್ತದೆ. ಆದರೆ ನಮ್ಮ ಪಠ್ಯಗಳು ಇಂದಿಗೂ ಟಿಪ್ಪು ಸುಲ್ತಾನ ಮಠ ಮಂದಿರಗಳಿಗೆ ದಾನ ದತ್ತಿಗಳನ್ನು ಕೊಟ್ಟ, ಸೋದೆ ಸಂಸ್ಥಾನಕ್ಕೆ ಊರುಗಳನ್ನು ಬಿಟ್ಟುಕೊಟ್ಟ ಎಂಬುದನ್ನೇ ಹೇಳುತ್ತಿವೆ. ನಮ್ಮ ವಿದ್ವಾಂಸರುಗಳಿಗೆ, ದತ್ತಿ ಪಡೆದವರುಗಳಿಗೆ ಅದು ಪುಳಕವನ್ನೂ ತರುತ್ತಿವೆ! ಇವೆಲ್ಲದರ ನಡುವೆ ಮೂಡುವ ಪ್ರಶ್ನೆಯೊಂದೇ. ಕೆಳದಿಯವರು ಕಟ್ಟಿದ ಕಾಶಿಯನ್ನೇನೋ ಮೋದಿ ಜೀರ್ಣೋದ್ಧಾರ ಮಾಡಿಸಿದರು. ಆದರೆ ಜೀರ್ಣಾವಸ್ಥೆಯಲ್ಲಿರುವ ಕೆಳದಿಯ ವಿಶ್ವನಾಥನನ್ನು ಉದ್ಧರಿಸುವವರಾರು?
ಗ್ರಂಥಋಣ: ಮಿಥಿಕ್ ಸೊಸೈಟಿ ವಾರ್ತಾಪತ್ರ-Keladi inscripions in benares-keladi Gunda Jois. ಲಿಂಗಣ್ಣನ ಕೆಳದಿ ನೃಪವಿಜಯ