
ಪಶ್ಚಿಮ ಬಂಗಾಳದಲ್ಲಿ ಗೆಲುವಿನಿಂದ ದೂರ ಉಳಿದ ಬಿಜೆಪಿ ಅಸ್ಸಾಂನಲ್ಲಿ ಸತತ ಎರಡನೇ ಸಲ ಗೆದ್ದದ್ದು ‘ ಮತ ಧ್ರುವಿಕರಣ’ ದ ಹಿನ್ನೆಲೆಯಲ್ಲಿ ಗಮನ ಸೆಳದಿದೆ . ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಜನಸಂಖ್ಯೆ ಪ್ರಮಾಣ ಶೇ 70.54 , ಮುಸ್ಲಿಮರದ್ದು ಶೇ 27.1. ಅದೇ ಅಸ್ಸಾಂನಲ್ಲಿ ಹಿಂದುಗಳು ಶೇ 61.47, ಮುಸ್ಲಿಮರು ಶೇ. 34.22. ಕೇವಲ ಹಿಂದುಗಳನ್ನಷ್ಟೆ ಕೇಂದ್ರೀಕರಿಸುತ್ತದೆ ಎನ್ನಲಾಗುವ ಬಿಜೆಪಿಗೆ ಅಸ್ಸಾಂ ಮತ್ತೂ ಕಠಿಣವಾಗಬೇಕಿತ್ತಲವೇ ? ಆದರೆ ಹಾಗೇಕೆ ಆಗಲಿಲ್ಲ ?

2016ರ ಚುನಾವಣೆಯಲ್ಲಿ ಬಿಜೆಪಿ ಶೇ 41.6 ಮತ ಪಡೆದು 86 ಸ್ಥಾನಗಳಲ್ಲಿ ಗೆದ್ದಿತ್ತು . ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಶೇ 31 ( ಸ್ಥಾನ 28 ) , ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ಶೇ 13.2 ( ಸ್ಥಾನ 13 ) ಎಡಪಕ್ಷಗಳು ಶೇ 0.86 ( ಸ್ಥಾನ 0) ಮತ ಪಡೆದಿದ್ದವು . ಆಗ ಬಂದ ವಿಶ್ಲೇಷಣೆ – ‘ ಬಿಜೆಪಿ ಗೆಲ್ಲುವುದು ಸಾಧ್ಯವೇ ಇರಲಿಲ್ಲ , ಮುಸ್ಲಿಂ ಮತಗಳು ಹಂಚಿ ಹೋಗಿದ್ದರಿಂದ ಸೆಕ್ಯುಲರ್ ಪಕ್ಷವಾದ ಕಾಂಗ್ರೆಸ್ ಗೆ ಸೋಲಾಯಿತು . ಕೋಮುವಾದಿ ಬಿಜೆಪಿ ಗೆದ್ದಿತು ‘ . ಆದರೆ ಈ ಸಲದ ಚುನಾವಣೆಯಲ್ಲಿ ಸೆಕ್ಯುಲರ್ ಪಕ್ಷಗಳು ಎಚ್ಚೆತ್ತುಕೊಂಡವು . ಮೂರೂ ಪಕ್ಷಗಳು ಒಂದಾದವು . ಆಷ್ಟೆ ಅಲ್ಲ , 2016ರಲ್ಲಿ ಬಿಜೆಪಿಯ ಜೊತೆಗಿದ್ದ , ಸರಿಸುಮಾರು ಶೇ 5 ರಷ್ಟು ಮತದಾರರ ಮೇಲೆ ಹಿಡಿತವಿರುವ ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಸೆಕ್ಯುಲರ್ ಬಳಗ ಸೇರಿಕೊಂಡಿತು . ಹೀಗಿರುವಾಗ ಮತ ಅಂಕಗಣಿತದ ಮಟ್ಟಿಗೆ ಬಿಜೆಪಿ ಗೆಲ್ಲುವುದು ಸಾಧ್ಯವೇ ಇರಲಿಲ್ಲ . ಆದರೂ ಬಿಜೆಪಿ ಗೆದ್ದಿತು . ಬಿಜೆಪಿ ಗೆಲುವಿಗೆ ಕಾರಣವಾಗಿದ್ದು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಢೋಂಗಿ ಜಾತ್ಯತೀತತೆ !
ಮುಸ್ಲಿಂ ಸಗಟು ಮತದ ಆಸೆಗೆ ಬಿದ್ದ ಕಾಂಗ್ರೆಸ್ , ಕಮ್ಯುನಿಸ್ಟ್ ಪಕ್ಷಗಳು ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ಜೊತೆ ಕೈ ಜೋಡಿಸಿತು . ಪಕ್ಕಾ ಮತೀಯವಾದಿಯಾದ 65ವರ್ಷದ ಅಜ್ಮಲ್ 40ಕ್ಕೂ ಮಿಕ್ಕ ದೇಶಗಳಿಗೆ ಸುಗಂಧ ದ್ರವ್ಯ ರಫ್ತು ಮಾಡುವ ದೊಡ್ಡ ಉದ್ಯಮಿ . ಪಕ್ಕದ ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿ ಬರುವ ಲಕ್ಷಾಂತರ ಮುಸ್ಲೀಮರಿಗೆ ಆಶ್ರಯದಾತ , 2005ರಲ್ಲಿ ಅಕ್ರಮ ನುಸುಳುಕೋರರ ಬಗ್ಗೆ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ ವಿರುದ್ಧ ಬಂಡೆದ್ದು ಅಜ್ಮಲ್ ತನ್ನದೇ ರಾಜಕೀಯ ಪಕ್ಷ ಹುಟ್ಟು ಹಾಕಿದ್ದರು . ಅಜ್ಮಲ್ ರವರ ಪಕ್ಷ 2006ರಲ್ಲಿ 10 ಸ್ಥಾನ, 2011ರಲ್ಲಿ 18 ಸ್ಥಾನ ಗೆದ್ದದ್ದು ಕಾಂಗ್ರೆಸ್ಸನ್ನು ನಡುಗಿಸಿತು . ಆವರೆಗೂ ಕಾಂಗ್ರೆಸ್ ಬುಟ್ಟಿಯಲ್ಲಿದ್ದ ಮುಸ್ಲಿಂ ಸಗಟು ಮತಗಳು ಕರಗಲಾರಂಭಿಸಿತು . 2016ರಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಹತಾಶೆಗೊಳಗಾಯಿತು . ಹಾಗಾಗಿ ಈ ಸಲ ಕಾಂಗ್ರೆಸ್ ಅಜ್ಮಲ್ಲರ ತೆಕ್ಕೆಗೆ ಸೇರಿಕೊಂಡಿತು . ಶಹಬಾನು ಪ್ರಕರಣದ ಕಾಲದಿಂದಲೇ ಕಾಂಗ್ರೆಸ್ ನ ಜಾತ್ಯತೀತ ತತ್ವ ಎಂದರೆ ಮುಸ್ಲೀಮರನ್ನು ಓಲೈಸುವುದಷ್ಟೆ ಎಂಬಂತಾಗಿದೆ . ಕಾಂಗ್ರೆಸ್ ನ ಹತಾಶೆಯೇನೋ ಸರಿ , ಕಮ್ಯುನಿಸ್ಟ್ ಪಕ್ಷಗಳೇಕೆ ಹಳ್ಳ ಹಿಡಿದಿದ್ದು ?
2016ರಲ್ಲಿ 41 ಕಡೆ ಸ್ಪರ್ಧಿಸಿ ಎಲ್ಲ ಕಡೆ ಠೇವಣಿ ಕಳೆದುಕೊಂಡಿದ್ದ ಕಮ್ಯುನಿಸ್ಟ್ ಪಕ್ಷಗಳು ಪುನಶ್ಚೇತನದ ಅಮ್ಲಜನಕ ಹುಡುಕಿಕೊಂಡಿದ್ದು ಅಜ್ಮಲ್ಲರ ಪದತಳದಲ್ಲಿ . ಕಾಂಗ್ರೆಸ್ ಗೆ ಹೋಲಿಸಿದರೆ ವೈಚಾರಿಕವಾಗಿ ಗಟ್ಟಿಗರು ಎನ್ನಲಾದ ಎಡಪಕ್ಷಗಳು ಹೀಗೆ ದಾರಿಬಿಟ್ಟು ಕೋಮುರಾಜಕಾರಣ ಮಾಡುತ್ತಿರುವುದು ಅಸ್ಸಾಂಗಷ್ಟೆ ಸೀಮಿತವಾಗಿಲ್ಲ, ಪಶ್ಚಿಮ ಬಂಗಾಳದಲ್ಲಿ ಪ್ರಖ್ಯಾತ ಮಸೀದಿಯೊಂದರ ಪಾರುಪತ್ತೇದಾರ ಅಬ್ಬಾಸ್ ಸಿದ್ಧಿಕಿ ಸ್ಥಾಪಿಸಿದ ಇಂಡಿಯನ್ ಸೆಕ್ಯುಲರ್ ಫ್ರಂಟ್ ಜೊತೆ ಕಮ್ಯುನಿಸ್ಟ್ ಪಕ್ಷಗಳದ್ದು ಒಡಂಬಡಿಕೆ , ಅದಕ್ಕೆ ಕಾಂಗ್ರೆಸ್ ಬೆಂಬಲ ಕೊಟ್ಟಿತು . ಅಸ್ಸಾಂನಲ್ಲಿ ಅಜ್ಮಲ್ ಜೊತೆ ವ್ಯವಹಾರ ಕುದುರಿಸಿದ್ದು ಕಾಂಗ್ರೆಸ್ಸಾದರೆ , ಬಂಗಾಳದ ಅಬ್ಬಾಸ್ ಸಿದ್ಧಿಕಿ ಜೊತೆ ಕಮ್ಯುನಿಸ್ಟರ ಪೌರಹಿತ್ಯ . ತಮಿಳುನಾಡಿನಲ್ಲಿ ಡಿಎಮ್ಕೆ , ಕಾಂಗ್ರೆಸ್ , ಕಮ್ಯುನಿಸ್ಟ್ ಪಕ್ಷಗಳು ಮುಸ್ಲಿಂಲೀಗ್ ನೊಂದಿಗೆ ಬಹುಕಾಲದಿಂದ ಸಂಸಾರ ನೆಡೆಸುತ್ತಿದ್ದಾರೆ . ಮಹಾರಾಷ್ಟ್ರದಲ್ಲಿನ ಶಿವಸೇನೆಯೊಂದಿಗಿನ ಕಾಂಗ್ರೆಸ್ ಸಖ್ಯ ಚುನಾವಣೆಯ ನಂತರದ್ದು . ಆದರಿಲ್ಲಿ ಮತ್ತೂ ಮುಂದೆ ಹೋಗಿರುವುದು ಸ್ಪಷ್ಟವಾಗಿದೆ . ಈಗ ಹೇಳಿ ಬಿಜೆಪಿ ಮಾತ್ರ ಕೋಮುವಾದಿ ಪಕ್ಷವೇ ?
ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ ಶೇ 61 ರಷ್ಟಿರುವ ಹಿಂದು ಮತಗಳಲ್ಲಿ ಶೇ68 ರಷ್ಟನ್ನು ಕ್ರೋಢಿಕರಿಸಿದೆ . 2006ರಲ್ಲಿ ಕಾಂಗ್ರೆಸ್ ಗಿದ್ದ ಶೇ 32ರ ಹಿಂದುಗಳ ಬೆಂಬಲ ಈಗ ಶೇ19ಕ್ಕೆ ಇಳಿದಿದೆ . ಹಾಗೆ ನೋಡಿದರೆ ಅಸ್ಸಾಂ ತುಂಬಾ ಸಂಕೀರ್ಣವಾದ ರಾಜ್ಯ . ಅಲ್ಲಿಯ ಶೇ 61ರಷ್ಟಿರುವ ಹಿಂದುಗಳಲ್ಲಿ ಅಗಾಧವಾದ ವೈವಿದ್ಯತೆ. ಒಂದೇ ರಾಜ್ಯದಲ್ಲಿ ನೂರಾರು ಬುಡಕಟ್ಟುಗಳು . 45ಕ್ಕೂ ಹೆಚ್ಚು ಸ್ಥಳೀಯ ಭಾಷೆಗಳು . ಸಾಂಸ್ಕೃತಿಕ ಸಿರಿವಂತಿಕೆಯೂ ಆಳವಾದದ್ದು . ಇಂತಹ ಅಪ್ಪಟ ಬಹುತ್ವದ ರಾಜ್ಯದಲ್ಲಿ ಬಿಜೆಪಿ ಎರಡನೇ ಬಾರಿ ಗೆದ್ದದ್ದು ಮಾತ್ರವಲ್ಲ 8 ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ 4, 16 ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ 14ನ್ನು ತನ್ನದಾಗಿಸಿಕೊಂಡಿದೆ. ಸ್ಥಳೀಯ ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಬಿಜೆಪಿಯೊಂದಿಗೆ ಮುನಿಸಿಕೊಂಡು ಹೊರ ಹೋದರೂ ಬುಡಕಟ್ಟು ಜನಜಾತಿಗಳ ನಡುವಿನ ಬಿಜೆಪಿಯ ಹಿಡಿತ ಬಲವಾಗಿಯೇ ಉಳಿದಿದೆ .
ಅಸ್ಸಾಂ ರಾಜ್ಯ ಪಕ್ಕದ ಬಾಂಗ್ಲಾದೇಶದಿಂದ ಅಕ್ರಮ ನುಸುಳುಕೋರರ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿದೆ . ಅಸ್ಸಾಂನಲ್ಲಿರುವ 1.3ಕೋಟಿ ಮುಸ್ಲೀಮರಲ್ಲಿ 90ಲಕ್ಷ ಮಂದಿ ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿದವರೆಂದು ಅಸ್ಸಾಂನ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದಾಖಲೆ ಬಿಡುಗಡೆ ಮಾಡಿದೆ . 30 ಜಿಲ್ಲೆಗಳ ಪೈಕಿ ಬಾಂಗ್ಲಾಗೆ ತಾಗಿಕೊಂಡಿರುವ 9ಜಿಲ್ಲೆಗಳಲ್ಲಿ ಮುಸ್ಲೀಮರೆ ಬಹುಸಂಖ್ಯಾತರು. ಈ ಜಿಲ್ಲೆಗಳಲ್ಲಿ ಜನಸಂಖ್ಯೆಯ ಏರಿಕೆಯ ಪ್ರಮಾಣ ಶೇ 24 ರಷ್ಟಿದ್ದರೆ , ಉಳಿದ ಹಿಂದು ಬಹುಸಂಖ್ಯಾತ 21 ಜಿಲ್ಲೆಗಳಲ್ಲಿ ಜನಸಂಖ್ಯೆಯ ಏರಿಕೆ ಪ್ರಮಾಣ ಶೇ9 . ಇಂತಹ ವಾಸ್ತವಗಳನ್ನು ಮುಚ್ಚಿಟ್ಟ ಜಾತ್ಯತೀತತೆಯ ಸೋಗನ್ನು ಯಾರು ತಾನೆ ಒಪ್ಪುತ್ತಾರೆ ? ಅಸ್ಸಾಂನ ಮಟ್ಟಿಗೆ ಹಿಂದುತ್ವವೇ ಬಹುತ್ವ ಎಂಬುದೂ ಸತ್ಯ .