ಪುಂಗವ ಪತ್ರಿಕೆಯು ಗೋಸಂರಕ್ಷಣೆಯ ಕಾಯಿದೆ ವಾಸ್ತವದ ನೆಲಗಟ್ಟಿನಲ್ಲಿ ಜಾರಿಗೆ ಬರಲು ಸಹಕಾರಿಯಾಗುವಂತೆ ‘ಮುಕ್ತಸಂವಾದ’ವೊಂದನ್ನು ಆರಂಭಿಸಿದೆ.
ಗೋಹತ್ಯೆ ನಿಷೇಧ ವಿಧೇಯಕದ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿರುವುದು ಸಂತೋಷ. ನಾವು ಮೊದಲಿನಿಂದಲೂ ತಾಯಿಯೆಂದು ಪೂಜಿಸಿಕೊಂಡು ಬರುತ್ತಿರುವ ಗೋಮಾತೆಯ ರಕ್ಷಣೆಗೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ.
ಎಲ್ಲರಿಗೂ ಗೋಸಂರಕ್ಷಣೆ ಮಾಡಬೇಕೆಂಬ ಪ್ರಾಮಾಣಿಕ ಕಾಳಜಿಯೇನೋ ಇದೆ. ಆದರೆ, ಹೇಗೆ ಎನ್ನುವುದು ಮಾತ್ರ ಯಾರಿಗೂ ಗೊತ್ತಿದ್ದ ಹಾಗಿಲ್ಲ! ಹಾಗಾಗಿ ಗೋಹತ್ಯೆ ನಿಷೇಧ ವಿಧೇಯಕದ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆಯೇ ಹೊರತು, ರೈತರ ವಾಸ್ತವ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಸಾವಯವ ಕೃಷಿಕರ ಸಮಾವೇಶದಲ್ಲಿಯೂ ರೈತರ ಮಕ್ಕಳು ಕಾಲೇಜು ಓದಲು ಅನುಕೂಲವಾಗುವಂತೆ ಹಳ್ಳಿಗಳಲ್ಲಿಯೂ ಕಾಲೇಜುಗಳನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿಯವರು ಹೇಳಿದರೇ ಹೊರತು ಹಳ್ಳಿಯ ರೈತರ ಮಕ್ಕಳು ಕೃಷಿಯನ್ನು ಲಾಭದಾಯಕವಾಗಿ ನಡೆಸಲು ಅನುಕೂಲ ವಾಗಲು ಏನು ಮಾಡುತ್ತೇವೆಂದು ಹೇಳಲೇ ಇಲ್ಲ! ಎಂಬಲ್ಲಿಗೆ, ಆ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆಯೇ ಎನ್ನುವುದೇ ಒಂದು ಪ್ರಶ್ನೆ.
ಗೋ ಸಂರಕ್ಷಣೆಯ ನನ್ನ ದಾರಿ: ಗೋ ಸಂತತಿಯ ಉಳಿವಿಗಾಗಿ ನಾವೇನಾದರೂ ಮಾಡಿದ್ದೇವೆಯೇ? ನಾವು ಮಾಡಿದ ಪ್ರಯೋಗ – ಪ್ರಯತ್ನಗಳೇನು? ಆದ ಪರಿಣಾಮಗಳೇನು? ಗೋಮೂತ್ರದಿಂದ ಲಾಭದಾಯಕ ಗಳಿಕೆ ಸಾಧ್ಯವಾದ ಉದಾಹರಣೆಗಳಿವೆಯೇ? ಒಂದು ಕುಟುಂಬ, ಒಂದು ಗ್ರಾಮ ಒಟ್ಟಾಗಿ ಕುಳಿತು ಈ ಬಗ್ಗೆ ಯೋಚಿಸಿದ್ದು ಇದೆಯೇ? ಅಂತಹ ಪ್ರಯತ್ನದ ಅನುಭವಗಳೇನು? ಗೋ ಸಂರಕ್ಷಣೆಯ ಬಗ್ಗೆ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳು ವ್ಯಾವಹಾರಿಕ ಪರಿಹಾರದ ಬಗ್ಗೆ ಏನು ಕೆಲಸ ಮಾಡಿವೆ? ಅಂತಹ ಅನುಭವಗಳನ್ನು ದಾಖಲಿಸುವ, ಆ ಮೂಲಕ ಗೋಸಂರಕ್ಷಣೆಯ ಕಾಯಿದೆ ಮೂಲೆ ಸೇರದೆ ವಾಸ್ತವದ ನೆಲಗಟ್ಟಿನಲ್ಲಿ ಜಾರಿಗೆ ಬರಲು ಸಹಕಾರಿಯಾಗುವಂತೆ ‘ಮುಕ್ತಸಂವಾದ’ದ ವೇದಿಕೆಯನ್ನು ಪುಂಗವ ಆರಂಭಿಸಿದೆ.
ಈ ಕುರಿತ ನಿಮ್ಮ ಪ್ರಯತ್ನ, ಅನುಭವಗಳನ್ನು ೧೫೦ ಶಬ್ದಗಳ ಒಳಗೆ ದಾಖಲಿಸಿ ನಮಗೆ ಕಳುಹಿಸಿ ಕೊಡಬೇಕೆಂದು ವಿನಂತಿ. ಕಳುಹಿಸಬೇಕಾದ ವಿಳಾಸ :
‘ಗೋ ಸಂರಕ್ಷಣೆಯ ನನ್ನದಾರಿ’
ಪುಂಗವ ಪತ್ರಿಕೆ, ನಂ. ೭೪ ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು – ೫೬೦ ೦೦೪.