ಹಾಲು ಮಾರಲೆಂದೇ ದನ ಸಾಕುವವರು ಹೆಚ್ಚಿನವರು ವಿದೇಶೀ ಹಸುಗಳನ್ನು ಸಾಕುತ್ತಾರೆ. ಅವುಗಳ ಗಂಡು ಕರುಗಳು ಉಳುಮೆಗೂ ಉಪಯೋಗವಿಲ್ಲ. ಅವುಗಳನ್ನು ಕಸಾಯಿ ಖಾನೆಗೆ ಕೊಡುವುದು ಈಗ ಹೆಚ್ಚಿನೆಡೆ ಚಾಲ್ತಿಯಲ್ಲಿದೆ. ಗೋಹತ್ಯೆ ನಿಷೇಧದ ಬಳಿಕ ಅವುಗಳಿಗೇನು ಗತಿ? ಮುದಿ ಹಸು, ಎಮ್ಮೆ, ಕೋಣಗಳ ಕತೆಯೇನು? ಗೋಶಾಲೆ ಮಾಡಿದರೂ, ಎಷ್ಟು ಗೋಶಾಲೆ ಮಾಡಬೇಕಾಗಬಹುದು? ಅದು ಮಾಡಿ ಮುಗಿಯುವ ಕೆಲಸವೇ? ಕರ್ನಾಟಕದಲ್ಲಿರುವ ಸುಮಾರು ೧೫,೦೦೦ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಸುಮಾರು ೧೦೦ ದನಗಳು ರೈತರಿಗೆ ಉಪಯೋಗವಿಲ್ಲವೆಂದಿಟ್ಟುಕೊಂಡಲ್ಲಿ ಏನಿಲ್ಲವೆಂದರೂ ೧೫ ಲಕ್ಷ ದನಗಳು ಗೋಶಾಲೆಗೆ ಬರುತ್ತವೆ. ಒಂದು ದನ ಸಾಕಲು ತಿಂಗಳಿಗೆ ಬರೀ ೫೦೦ ರೂ. ಖರ್ಚಾಗುತ್ತದೆ ಎಂದಿಟ್ಟುಕೊಂಡರೂ ಪ್ರತೀ ವರ್ಷವೂ ಸರ್ಕಾರ ಗೋಶಾಲೆಗಳ ನಿರ್ವಹಣೆಗೆ ೯೦೦ ಕೋಟಿ ಹಣ ಖರ್ಚು ಮಾಡಬೇಕಾಗುತ್ತದೆ. ಇದು ಸಾಧ್ಯವೇ?
ಗೋ ಸಂರಕ್ಷಣೆಯ ನನ್ನ ದಾರಿ
ಗೋ ಸಂತತಿಯ ಉಳಿವಿಗಾಗಿ ನಾವೇನಾದರೂ ಮಾಡಿದ್ದೇವೆಯೇ? ನಾವು ಮಾಡಿದ ಪ್ರಯೋಗ – ಪ್ರಯತ್ನಗಳೇನು? ಆದ ಪರಿಣಾಮಗಳೇನು? ಗೋಮೂತ್ರದಿಂದ ಲಾಭದಾಯಕ ಗಳಿಕೆ ಸಾಧ್ಯವಾದ ಉದಾಹರಣೆಗಳಿವೆಯೇ? ಒಂದು ಕುಟುಂಬ, ಒಂದು ಗ್ರಾಮ ಒಟ್ಟಾಗಿ ಕುಳಿತು ಈ ಬಗ್ಗೆ ಯೋಚಿಸಿದ್ದು ಇದೆಯೇ? ಅಂತಹ ಪ್ರಯತ್ನದ ಅನುಭವಗಳೇನು? ಗೋ ಸಂರಕ್ಷಣೆಯ ಬಗ್ಗೆ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳು ವ್ಯಾವಹಾರಿಕ ಪರಿಹಾರದ ಬಗ್ಗೆ ಏನು ಕೆಲಸ ಮಾಡಿವೆ? ಅಂತಹ ಅನುಭವಗಳನ್ನು ದಾಖಲಿಸುವ, ಆ ಮೂಲಕ ಗೋಸಂರಕ್ಷಣೆಯ ಕಾಯಿದೆ ಮೂಲೆ ಸೇರದೆ ವಾಸ್ತವದ ನೆಲಗಟ್ಟಿನಲ್ಲಿ ಜಾರಿಗೆ ಬರಲು ಸಹಕಾರಿಯಾಗುವಂತೆ ‘ಮುಕ್ತಸಂವಾದ’ದ ವೇದಿಕೆಯನ್ನು ಪುಂಗವ ಆರಂಭಿಸಿದೆ.
ನಮ್ಮ ಪ್ರಯತ್ನ, ಅನುಭವಗಳನ್ನು ೧೫೦ ಶಬ್ದಗಳ ಒಳಗೆ ದಾಖಲಿಸೋಣ, ಕಳುಹಿಸಬೇಕಾದ ವಿಳಾಸ : ‘ಗೋ ಸಂರಕ್ಷಣೆಯ ನನ್ನದಾರಿ’ ಪುಂಗವ ಪತ್ರಿಕೆ, ನಂ. ೭೪ ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು – ೫೬೦ ೦೦೪ಮಿಂಚಂಚೆ: editor.pungava@gmail.com
ಗೋಹತ್ಯೆ ನಿಷೇಧ ವಿಧೇಯಕದ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿರುವುದು ಸಂತೋಷ. ನಾವು ಮೊದಲಿನಿಂದಲೂ ತಾಯಿಯೆಂದು ಪೂಜಿಸಿಕೊಂಡು ಬರುತ್ತಿರುವ ಗೋಮಾತೆಯ ರಕ್ಷಣೆಗೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಗೋಹತ್ಯೆ ನಿಷೇಧ ಕಾನೂನು ಮಾಡಿದರೆ ಮುಗಿಯಿತು ಗೋರಕ್ಷಣೆ ಆದಂತೆ ಎನ್ನುವ ಯೋಚನೆಯೇ ಬಹಳ ಮಂದಿಯ ತಲೆಯಲ್ಲಿರುವಂತೆ ಕಾಣುತ್ತಿದೆ. ಇಂದು ಪತ್ರಿಕೆಗಳಲ್ಲಿ ಗೋರಕ್ಷಣೆಯ ಬಗ್ಗೆ ಬರೆಯುವ ಕೈಗಳೂ, ಸಮಾವೇಶಗಳಲ್ಲಿ ಗೋಹತ್ಯೆ ನಿಷೇಧ ವಿರೋಧಿಗಳನ್ನು ಧಿಕ್ಕರಿಸುವ ಕೈಗಳೂ ಪ್ಯಾಕೆಟ್ ಹಾಲು ಕುಡಿಯುವ ಕೈಗಳೇ ಹೊರತು ಹಾಲು ಕರೆಯುವ ಕೈಗಳಲ್ಲ! ಗೋರಕ್ಷಣೆ ಮಾಡಬೇಕಾದವರು ನಮ್ಮಂತಹ ರೈತರು. ಪೇಟೆಯಲ್ಲಿರುವ ಉದ್ಯೋಗಸ್ಥ ಮಂದಿ ಗೋಸಾಕಣೆ ಮಾಡುವುದೂ ಸಾಧ್ಯವಿಲ್ಲ; ಅವರಿಗೆ ಹಾಗೆ ಮಾಡಿ ಎಂದು ಹೇಳುವುದು ವ್ಯಾವಹಾರಿಕವಾಗಿ ಸಾಧುವೂ ಅಲ್ಲ.
ಗೋರಕ್ಷಣೆ ಮಾಡಲು ಹಳ್ಳಿಯ ರೈತರಾದ ನಮಗಿರುವ ಕಷ್ಟಗಳೇನು ಎನ್ನುವ ಬಗ್ಗೆ ಇದುವರೆಗೂ ಯಾರೂ ಎಲ್ಲಿಯೂ ನಮ್ಮಂತಹವರನ್ನು ಕೇಳಿದ್ದು, ಆ ಕಷ್ಟಗಳನ್ನು ಪರಿಹರಿಸುವ ಬಗ್ಗೆ ಮಾತನಾಡಿದ್ದನ್ನು ನಾನು ಕೇಳಿಲ್ಲ, ಓದಿಲ್ಲ. ಎಲ್ಲರಿಗೂ ಗೋಸಂರಕ್ಷಣೆ ಮಾಡಬೇಕೆಂಬ ಪ್ರಾಮಾಣಿಕ ಕಾಳಜಿಯೇನೋ ಇದೆ. ಆದರೆ, ಹೇಗೆ ಎನ್ನುವುದು ಮಾತ್ರ ಯಾರಿಗೂ ಗೊತ್ತಿದ್ದ ಹಾಗಿಲ್ಲ! ಹಾಗಾಗಿ ಗೋಹತ್ಯೆ ನಿಷೇಧ ವಿಧೇಯಕದ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆಯೇ ಹೊರತು, ರೈತರ ವಾಸ್ತವ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಸಾವಯವ ಕೃಷಿಕರ ಸಮಾವೇಶದಲ್ಲಿಯೂ ರೈತರ ಮಕ್ಕಳು ಕಾಲೇಜು ಓದಲು ಅನುಕೂಲವಾಗುವಂತೆ ಹಳ್ಳಿಗಳಲ್ಲಿಯೂ ಕಾಲೇಜುಗಳನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿಯವರು ಹೇಳಿದರೇ ಹೊರತು ಹಳ್ಳಿಯ ರೈತರ ಮಕ್ಕಳು ಕೃಷಿಯನ್ನು ಲಾಭದಾಯಕವಾಗಿ ನಡೆಸಲು ಅನುಕೂಲ ವಾಗಲು ಏನು ಮಾಡುತ್ತೇವೆಂದು ಹೇಳಲೇ ಇಲ್ಲ! ಎಂಬಲ್ಲಿಗೆ, ಆ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆಯೇ ಎನ್ನುವುದೇ ಒಂದು ಪ್ರಶ್ನೆ.
ಬದಲಾದ ಇಂದಿನ ಕಾಲಮಾನದಲ್ಲಿ ಗೋಸಾಕಣೆಯೆನ್ನುವುದು ಸುಲಭವಲ್ಲ. ಮೊದಲಿನ ಹಾಗೆ ಗೋಮಾಳಗಳಿಲ್ಲ. ಇದ್ದ ಜಾಗದಲ್ಲೆಲ್ಲ ಕೃಷಿ ಮಾಡುತ್ತಿದ್ದೇವೆ ಅಥವಾ ಬಹಳಷ್ಟು ಪ್ರದೇಶಗಳು ಹುಲ್ಲೂ ಬೆಳೆಯದಷ್ಟು ಬರಡಾಗಿವೆ. ಮಳೆ ಕಡಿಮೆಯಾಗಿದೆ. ಸಾಂಪ್ರದಾಯಿಕ ನೀರಿನ ಮೂಲಗಳು ಬತ್ತಿವೆ. ಹಾಗಾಗಿ ಹಣ ನೀಡುವ ಬೆಳೆಗೇ ಬೋರ್‌ವೆಲ್ ನೀರನ್ನು ಉಪಯೋಗಿಸುತ್ತಿರುವಾಗ ಇನ್ನು ಹುಲ್ಲು ಬೆಳೆಯಲು ನೀರೆಲ್ಲಿ? ಹಸುಗಳಿಗೆ, ಎತ್ತುಗಳಿಗೆ ಮೇವೆಲ್ಲಿ? ಇದು ಬಯಲು ಸೀಮೆಯ ಕತೆಯಾದರೆ, ಮಲೆನಾಡು ಮತ್ತು ಕರಾವಳಿಗಳಲ್ಲಿ ಹಸುಗಳನ್ನು ಮನೆಯಲ್ಲಿಯೇ ಕಟ್ಟಿಹಾಕಿ, ಅವುಗಳಿಗೆ ಹುಲ್ಲು ತಂದು ಹಾಕುವುದಕ್ಕಾಗಿಯೇ ಆಳುಗಳನ್ನು ಇಡುವುದೂ ಚಾಲ್ತಿಗೆ ಬಂದಿದೆ. ಮಾರುವಷ್ಟು ಹಾಲು ಕೊಡುವ ಹಸುವಾದರೆ, ಅದನ್ನು ಸಾಕುವುದು ಆರ್ಥಿಕವಾಗಿ ಲಾಭಕರವಾದೀತು. ಆದರೆ ಮನೆ ಖರ್ಚಿಗಾಗುವಷ್ಟೇ ಹಾಲು ಕೊಡುವ ಹಸುಗಳಾದರೆ, ಹಸು ಸಾಕುವುದಕ್ಕಿಂತ ಹಾಲು ಕೊಳ್ಳುವುದೇ ಒಳ್ಳೆಯದು ಎನ್ನಿಸುತ್ತದೆ.
ನನಗೆ ಇರುವುದು ಇಬ್ಬರೇ ಮಕ್ಕಳು. ಮೊದಲಿನ ಹಾಗೆಲ್ಲ ಈಗ ಯಾರಿಗೆ ೪-೫ ಮಕ್ಕಳು ಇರುತ್ತಾರೆ ಹೇಳಿ. ಈಗಂತೂ ಶಿಕ್ಷಣ ಕಡ್ಡಾಯ ತಾನೇ? ಹಾಗಾಗಿ ಇಬ್ಬರೂ ಶಾಲೆಗೆ ಹೋಗುತ್ತಿದ್ದಾರೆ. ಚೆನ್ನಾಗಿ ಓದಿಲಿ ಒಳ್ಳೆಯ ಕೆಲಸ ಸಂಪಾದಿಸಲಿ, ನಮ್ಮ ಹಾಗೆ ಕಷ್ಟಪಡದಿರಲಿ ಎನ್ನುವುದು ನಮ್ಮಾಸೆ. ಎಷ್ಟು ಓದಿದರೂ ಓದಿಸಬೇಕೆಂದುಕೊಂಡಿದ್ದೇನೆ. ಓದಿದ ಮಕ್ಕಳು ಕೊಟ್ಟಿಗೆ ಕೆಲಸಕ್ಕೆ ಒಪ್ಪಲ್ಲ.
ಹಾಗಾಗಿ ಮನೆಯಲ್ಲಿ ಕೆಲಸ ಮಾಡುವವನು ನಾನೊಬ್ಬನೇ. ಸ್ವಲ್ಪ ಮಟ್ಟಿಗೆ ನನ್ನ ಹೆಂಡತಿಯೂ ನನ್ನೊಂದಿಗೆ ಸೇರಿಕೊಳ್ಳುತ್ತಾಳೆ. ಹೊಲದ ಕೆಲಸ ಮಾಡುವುದಕ್ಕೇ ನಮ್ಮ ಮನೆಯಲ್ಲಿ ಜನ ಸಾಲದು. ಇನ್ನು ದನಗಳಿಗೆ ಮೇವು ತಂದು ಹಾಕುವವರು ಯಾರು? ಮಳೆಗಾಲದಲ್ಲಿ ಹೇಗೋ ನಡೆದೀತು, ಬೇಸಿಗೆಯಲ್ಲಿ ಮೇವಿಗೆ ಏನು ಮಾಡುವುದು? ನನಗಿರುವ ೫ ಎಕರೆ ಜಮೀನಿಗೆ ೫-೬ ಹಸು, ಎಮ್ಮೆ, ಕೋಣಗಳಿದ್ದರೆ ಅವುಗಳ ಗೊಬ್ಬರ ಸಾಕು. ಆದರೆ, ಅವು ವರ್ಷಕ್ಕೊಂದು ಕರು ಹಾಕಿದರೆ, ಅವನ್ನು ಸಾಕುವುದು ಹೇಗೆ ಎನ್ನುವುದು ನನ್ನ ಸಮಸ್ಯೆ.
ಈಗ ಮೊದಲಿನ ಹಾಗೆ ಊಳಲು ಎತ್ತು, ಕೋಣಗಳು ಬೇಕೇ ಬೇಕೆಂದೇನು ಇಲ್ಲ. ಟ್ರ್ಯಾಕ್ಟರ್‌ನಲ್ಲಿಯೇ ಕೆಲಸ ಬೇಗ ಆಗುತ್ತದೆ. ಹಾಗಾಗಿ ನಮಗೆ ಹೆಚ್ಚಾದ ದನಕರುಗಳನ್ನು ಮಾರೋಣವೆಂದರೆ ಕೊಳ್ಳುವವರ‍್ಯಾರು? ಎಲ್ಲ ಕೃಷಿಕರಿಗೂ ಇದೇ ಸಮಸ್ಯೆ. ಅವುಗಳನ್ನೇನು ಮಾಡೋಣ ಎನ್ನುವುದಕ್ಕೆ ಉತ್ತರವೆಲ್ಲಿ?
ಇನ್ನು ಗೋಮೂತ್ರ, ಗೋಮಯದಿಂದ ಔಷಧ, ಸಾಬೂನು, ಶಾಂಪೂ ಮೊದಲಾದವು ಗಳನ್ನು ತಯಾರಿಸಬಹುದೆಂದು ಪತ್ರಿಕೆಗಳಲ್ಲಿ ಬರುತ್ತಿದೆಯೇ ಹೊರತು ಅದು ಎಲ್ಲಿ ಆಗುತ್ತಿದೆ ಎನ್ನುವುದು ಸಾಮಾನ್ಯ ರೈತರಿಗೆ ಗೊತ್ತಿಲ್ಲ. ಹಾಗಾದರೆ, ನಾನು ಗೋಮೂತ್ರ/ಗೋಮಯ ಸಂಗ್ರಹಿಸಿ ಮಾರಬಹುದೇ? ಯಾರು ಕೊಳ್ಳುತ್ತಾರೆ? ಲೀಟರಿಗೆ/ಕೆಜಿಗೆ ೫-೬ ರೂಪಾಯಿ ಯಾದರೂ ಸಿಗುತ್ತದೆಯೇ?
ಒಟ್ಟಿನಲ್ಲಿ, ಇಂದು ಎಲ್ಲದರಲ್ಲಿಯೂ ನಾವು ಮುಂದೆ ಹೋಗಿ ಹಿಂದೆ ಬರುತ್ತಿದ್ದೇವೆ. ಮುಂದೆ ಹೋದ ಮೇಲೆ, ಹಿಂದಿನದ್ದೇ ಒಳ್ಳೆಯದಿತ್ತು ಎಂದೆನಿಸಿ ಹಿಂದೆ ಬರುವ ಪ್ರಯತ್ನ ಮಾಡುತ್ತಿದ್ದೇವೆ. ಈಗಲಾದರೂ ನಮಗೆ ಜ್ಞಾನೋದಯವಾಗುತ್ತಿರುವುದು ಒಳ್ಳೆಯದೇ. ಆದರೆ, ಹಿಂದಿನ ಕಾಲದಲ್ಲಿದ್ದಂತೆ ಎಲ್ಲವೂ ಇಂದಿಲ್ಲ. ಕೇವಲ ಕೃಷಿ, ಗೋಸಾಕಣೆಯಲ್ಲಿ ಮಾತ್ರ ಹಿಂದೆ ಬಂದರೆ ಸಾಲದು. ಬೇರೆ ಎಲ್ಲದರಲ್ಲೂ ಹಾಗೇ ಆಗಬೇಕು. ಎಲ್ಲರಿಗೂ ೪-೫ ಮಕ್ಕಳ ಕಾಲ ಹೋಗಿ ಒಂದೆರಡು ಮಕ್ಕಳ ಕಾಲ ಬಂದಿದೆ.
ಮಕ್ಕಳು ಕೃಷಿ ಕೆಲಸ ಮಾಡುವುದು ಹೋಗಿ, ಎಲ್ಲರೂ ಆಧುನಿಕ ಶಿಕ್ಷಣ ಪಡೆದು ಪೇಟೆಯಲ್ಲಿ ಕೆಲಸ ಮಾಡುವ ಕಾಲ ಬಂದಿದೆ. ಎಲ್ಲರೂ ಒಟ್ಟಿಗೆ ಇರುವ ಅವಿಭಕ್ತ ಕುಟುಂಬ ಹೋಗಿ, ಸಣ್ಣ ಸಣ್ಣ ಕುಟುಂಬಗಳ ಕಾಲ ಬಂದಿದೆ. ಹೀಗೆ ಒಂದಕ್ಕೊಂದು ಹೊಂದಿ ಕೊಂಡಿರುವ ಸಂಗತಿಗಳೆಲ್ಲ ಬದಲಾಗಿವೆ. ಇದನ್ನೆಲ್ಲವನ್ನು ಹಿಂದೆ ತರಲು ಸಾಧ್ಯವೇ ಎನ್ನುವುದು ಪ್ರಶ್ನೆ. ಇಲ್ಲವಾದಲ್ಲಿ, ಅವೆಲ್ಲಾ ಹೇಗೇ ಇರಲಿ, ಗೋರಕ್ಷಣೆ ಮಾತ್ರ ಮಾಡೋಣವೆಂದರೆ, ಅದಕ್ಕೆ ಪೂರಕವಾದ ಕೃಷಿ ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ಗೋ ಉತ್ಪನ್ನಗಳ ಉದ್ಯಮ ಬಲಗೊಳ್ಳಬೇಕು. ಅಥವಾ, ಗೋ ಸಾಕಣೆ ಮಾಡುವ ಕೃಷಿಕರಿಗೆ ಸರ್ಕಾರದಿಂದ ಏನಾದರೂ ಪ್ರೋತ್ಸಾಹ ಸಿಗಬೇಕು. ಗೋಸಾಕಣೆ ಮಾಡುವವರಿಗೆ ಸರ್ಕಾರ ಬೆಂಬಲ ಬೆಲೆ ಕೊಡುವುದೋ ಅಥವಾ ನಮಗೆ ಕರೆಂಟ್ ಬಿಲ್, ಫೋನ್ ಬಿಲ್ ಮನ್ನಾ ಮಾಡುವುದೋ ಮಾಡೀತೇ? ಆಗ ಕೃಷಿಕರಿಗೆ ಗೋಸಾಕಣೆ ಮಾಡಲು ಪ್ರೋತ್ಸಾಹ ಕೊಟ್ಟಂತಾಗುತ್ತದೆ.
ಇದೆಲ್ಲಾ ಕೆಲವು ಕಾಲ ನಡೆಯ ಬಹುದು. ಆದರೆ, ದೀರ್ಘಾವಧಿಯಲ್ಲಿ ಗೋ ಆಧಾರಿತ ಕೃಷಿ, ಗೋ ಆಧಾರಿತ ಗ್ರಾಮ ಜೀವನ ನಡೆಯುವಂತೆ ಆಗಬೇಕು. ಇಂತಹ ಪ್ರಯತ್ನಗಳು ಎಲ್ಲಿಯಾದರೂ ಆಗಿರ ಬಹುದು. ಅಥವಾ ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುವ ನಾಯಕರ, ಚಿಂತಕರ ತಲೆಯಲ್ಲಿ ಯೋಜನೆಗಳಿರಬಹುದು. ಆದರೆ, ಅದ್ಯಾವುದೂ ನನ್ನಂತಹ ಸಾಮಾನ್ಯ ಕೃಷಿಕರಿಗೆ ಗೊತ್ತಿಲ್ಲ. ಎಲ್ಲಿಯೂ ಚರ್ಚೆ ಯಾಗುತ್ತಿಲ್ಲ. ಅಂತಹ ಯೋಜನೆಗಳಿದ್ದರೆ ಅಥವಾ ಪ್ರಾಯೋಗಿಕವಾಗಿ ಎಲ್ಲಿಯಾದರೂ ಜಾರಿಗೊಳಿಸಿದ್ದರೆ ದಯವಿಟ್ಟು ಅದನ್ನು ಎಲ್ಲರೊಂದಿಗೆ ಹಂಚಿಕೊಂಡಲ್ಲಿ ಎಲ್ಲರಿಗೂ ಲಾಭವಾದೀತು. ನಮಗೆ ಕೃಷಿಯ ಜೊತೆಗೆ ಗೋಸಾಕಣೆಯಲ್ಲಿ ಒಂದು ಹೊಸ ಅವಕಾಶ ಸಿಕ್ಕೀತು.
-ಕೆ. ಟಿ. ಬಸವರಾಜ್, ಕೃಷಿಕ, ತಿಪಟೂರು
ಬಹಳ ಉತ್ತಮ ವಿಷಯವನ್ನು ಮಂಡಿಸಿದ್ದೀರಿ. ನೀವು ಹೇಳಿರುವುದು ಸತ್ಯ. ಆದರೆ ಕಟುಕರಿಗೆ ನೀಡುವ ಬದಲು ಅನ್ಯ ಮಾರ್ಗವೇ ಇಲ್ಲವೇ. ಮನೆಯಲ್ಲಿ ಇರುವ ವಯಸ್ಸಾದ ತಂದೆಗಳು ಏನೂ ಮಾಡುವುದಿಲ್ಲ. ಅವರು ಗೊಡ್ಡು ಎತ್ತುಗಳು, ಕೋಣಗಳು ಎಂದು ಹೊರಗಟ್ಟುವುದು ಸರಿಯೆ. ನಿಜ ಇಂದು ಗೋಮಾಳಗಳು ಜಮೀನುಗಳಾಗಿ ಪರಿವರ್ತನೆಗೊಂಡಿದೆ. ಹಾಗೇ ಅರಣ್ಯ ನಾಶದಂಚಿಗೆ ಸಾಗುತ್ತಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಗಮನ ಹರಿಸುವಂತಹ ಹಾಗೇ ಎಚ್ಚರಿಸುವಂತಹ ಕಾರ್ಯ ಮಾಡಬೇಕಾಗಿದೆ. ನಿಜ ರೈತನಿಗೆ ಲಾಭವಿಲ್ಲದ ಹಸುಗಳನ್ನು ಸಾಕುವುದು ಕಷ್ಟದ ಕೆಲಸ. ಅದೂ ಇವತ್ತಿನ ಪರಿಸ್ಥಿತಿ ಮತ್ತಷ್ಟು ಕಷ್ಟಕರ. ಆದರೂ ಗೋ ಮಾತೆಗೆ ಅನ್ಯ ಮಾರ್ಗ ಹುಡುಕಿದರೆ ಉತ್ತಮ ಎನ್ನುವುದು ನನ್ನ ಅಭಿಪ್ರಾಯ.
ಸುರೇಶ್
ಪತ್ರಕರ್ತರು.