ಗ್ರಾಮಗಳು ಕೃಷಿ, ಕೈಗಾರಿಕೆಯ ಸಮ್ಮಿಲನದ ಕೇಂದ್ರವಾಗಲಿ: ಆರೆಸ್ಸೆಸ್ ಸಹ ಸರಕಾರ್ಯವಾಹ ಮುಕುಂದ ಸಿ ಆರ್
ಬೆಂಗಳೂರು: ಸ್ಥಾನಿಕವಾಗಿ ಉದ್ಯೋಗಳ ಅವಕಾಶ ದೊರೆತಾಗ ಮಾತ್ರ ವಲಸೆ ಕಾರ್ಮಿಕ ಪದ್ಧತಿ ಕೊನೆಯಾಗುವುದು. ಗ್ರಾಮಗಳಲ್ಲಿ ಕೃಷಿ ಹೊರತಾಗಿ ಅನ್ಯ ಉದ್ಯೋಗಗಳ ಲಭ್ಯತೆಯಿಲ್ಲ. ಮಳೆ ಆಧಾರಿತ ಕೃಷಿಯೂ ಕೂಡಾ ಪೂರ್ಣ ಪ್ರಮಾಣದ ಉದ್ಯೋಗ ನೀಡಲು ಸಾಧ್ಯವಿಲ್ಲ. ಹಾಗಾಗೀ ಗ್ರಾಮಗಳು ಕೃಷಿಯ ಜೊತೆಗೆ ಲಘು ಉದ್ಯಮಗಳ ಕೇಂದ್ರಗಳಾಗಿ ಹೊರಹೊಮ್ಮಿದರೆ ಆತ್ಮನಿರ್ಭರತೆಯ ಕಲ್ಪನೆ ಸಾಕಾರಗೊಳ್ಳುವುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದಜಿ ಹೇಳಿದರು.
(ಪೂರ್ಣ ವಿಡಿಯೋ ವೀಕ್ಷಿಸಲು ಇಲ್ಲಿ ನೋಡಿ)
ಪ್ರಜ್ಞಾಪ್ರವಾಹ ಕರ್ನಾಟಕ ಘಟಕದಿಂದ ಆತ್ಮನಿರ್ಭರ ಭಾರತ: ಸಾಧ್ಯತೆಗಳು ಮತ್ತು ಸವಾಲುಗಳು ವಿಷಯದ ಕುರಿತಾಗಿ ಸೋಮವಾರ ಜರುಗಿದ ಆನ್‍ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೇವಲ ಆರ್ಥಿಕ ಕ್ಷೇತ್ರದಲ್ಲಿ ಸ್ವಾವಲಂಬನೆ ಪಡೆಯವುದೇ ಆತ್ಮನಿರ್ಭರತೆಯ ಕಲ್ಪನೆ ಸಾಕಾರಗೊಳ್ಳುವುದಿಲ್ಲ. ಕೃಷಿ, ಉದ್ಯಮ, ಮಾರುಕಟ್ಟೆ, ರಕ್ಷಣೆ, ಆರೋಗ್ಯ ಮತ್ತು ಸಂಸ್ಕøತಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಹೊಂದುವುದೇ ನಿಜವಾದ ಅತ್ಮನಿರ್ಭರತೆಯಾಗಿದೆ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಸಂಪತ್ತಿನ ವರ್ಗಾವಣೆಯನ್ನೆ ಅಭಿವೃದ್ಧಿ ಎಂದು ನಂಬಲಾಗಿದೆ. ಆದರೆ ಸಂಪತ್ತಿನ ಸೃಷ್ಟಿಗೆ ಆದ್ಯತೆ ನೀಡಬೇಕು. ಈ ಹಿಂದೆ ಈ ಮಾದರಿಯನ್ನು ಮಹಾತ್ಮಾ ಗಾಂಧೀಜಿ, ದೀನದಯಾಳ ಉಪಾಧ್ಯಯ ಮತ್ತು ಲೋಹಿಯಾ ಅವರ ಚಿಂತನೆಗಳಲ್ಲಿ ಅಡಕವಾಗಿದೆ ಎಂದರು.
2008 ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಜಾಗತಿಕರಣವನ್ನು ಸ್ಲೋಬಲ್ಯೈಸೇಷನ್ ಎಂದು ಕರೆಯಲಾಗಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ಜಾಗತಿಕರಣವನ್ನು ಟಾ.. ಟಾ… ಬಾಯ್ ಬಾಯ್ ಗ್ಲೋಬಲ್ಯೈಷನ್ ಎಂದು ಅನೇಕ ದೇಶಗಳ ಹೇಳುತ್ತಿರುವುದನ್ನು ಕಾಣುತ್ತೇವೆ. ಕೇವಲ ಭಾರತವಷ್ಟೇ ಅಲ್ಲದೇ ಇಂದು ಅನೇಕ ದೇಶಗಳು ಆತ್ಮನಿರ್ಭರತೆ ಮತ್ತು ಸ್ವಾವಲಂಬನೆಯ ಕುರಿತಾಗಿ ಯೋಜನೆ ರೂಪಿಸುತ್ತಿವೆ. ಕೋವಿಡ್-19 ಮಹಾಮಾರಿಯ ಹಿನ್ನೆಲೆಯಲ್ಲಿ ವಿಶ್ವದಂತೆ ಭಾರತವು ನಲುಗಿ ಹೋಗಿರುವುದು ಸತ್ಯ. ಆದರೆ ಕೋವಿಡ್-19 ವ್ಯಕ್ತಿಗತವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಒಳಮುಖ ನೋಟದ ಅವಕಾಶ ನೀಡುವುದರ ಮೂಲಕ ನವ ನವ ಅವಕಾಶಗಳು ಗೋಚರಿಸುತ್ತಿರುವುದನ್ನು ನಾವು ಕಾಣುತ್ತೇವೆ ಎಂದರು.

ಭಾರತ ಶೇ.70ರಷ್ಟು ಜನಸಂಖ್ಯೆ 35 ವಯೋಮಾನದ ಕೆಳಗಿನವರದ್ದಾಗಿದೆ. 2075ರವರೆಗೆ ಈ ಪ್ರಮಾಣದಲ್ಲಿ ಯುವಕರ ಸಂಖ್ಯೆ ಮುಂದುವರೆಯುತ್ತದೆ ಎಂದು ವಿಶ್ವದ ಅನೇಕ ಅಧ್ಯಯನಗಳು ತಿಳಿಸುತ್ತಿವೆ. ಹಾಗಾಗೀ ಸರ್ಕಾರದ ಸ್ಟಾರ್ಟ್ ಅಪ್, ಮೆಕ್ ಇನ್ ಇಂಡಿಯಾ ಮತ್ತು ಮುದ್ರಾ ಯೋಜನಾ ಹೀಗೆ ಅನೇಕ ಯೋಜನೆಗಳ ಅಡಿಯಲ್ಲಿ ಸ್ಥಾನಿಕವಾಗಿ ಯುವಕರು ಉದ್ಯಮ ತೆರೆಯಲು ಮುಂದಾಗಬೇಕು. ಕೃಷಿ, ತಂತ್ರಜ್ಞಾಮ ಉದ್ಯಮ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆಗೆ ಒತ್ತು ನೀಡುವ ವಿಪುಲ ಉದ್ಯೋಗವಕಾಶಗಳನ್ನು ಸೃಷ್ಟಿಸಬೇಕು. ಗ್ರಾಮ ಜೀವನಕ್ಕೆ ಚೈತನ್ಯ ನೀಡುವ ಮೂಲಕ ರಾಷ್ಟ್ರ ಜೀವನವನ್ನು ಸಶಕ್ತಗೊಳಿಸಬೇಕು ಎಂದು ತಿಳಿಸಿದರು.
ಅಂಕಣಕಾರ ಮತ್ತು ಲೇಖಕ ಸಂತೋಷ ತಮ್ಮಯ್ಯ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ವಿಷಯವಾಗಿ ಮಾತನಾಡಿ, ಭಾರತ ದೇಶ ಸ್ವಾತಂತ್ರ್ಯ ಪಡೆದಾಗಿನಿಂದಲೂ ಮೊದಲ ಪ್ರಧಾನಿ ನೆಹರೂ ಅವರ ನೀತಿಗಳ ಪರಿಣಾಮದಿಂದ ಸೈನ್ಯ, ಭದ್ರತೆ ಮತ್ತು ರಕ್ಷಣೆ ಕ್ಷೇತ್ರಗಳನ್ನು ನಿರ್ಲಕ್ಷಿಸಿದೆ. ಶಸ್ತ್ರಾಸ್ತ್ರಗಳು ಒಂದೇಡೆಯಾದರೆ ಕನಿಷ್ಠ ಭಾರತೀಯ ಸೈನಿಕರು ತೊಡುವ ಬೂಟ್, ಕಾಲುಚೀಲ ಮತ್ತು ಉಣ್ಣೆಯ ಜಾಕೆಟ್‍ಗಳನ್ನು ಕಳೆದ 7 ದಶಕಗಳಿಂದ ಆಮದು ಮಾಡಿಕೊಳ್ಳುತ್ತಿದ್ದೆ. ಆದರೆ ಕಳೆದ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಫಲವಾಗಿ ಸದ್ಯ 40 ಲಕ್ಷ ಸೈನಿಕರಿಗೆ ಸ್ವದೇಶಿ ನಿರ್ಮಿತ ಬೂಟ್ ಮತ್ತು ಕಾಲುಚೀಲ ದೊರೆಯುತ್ತಿವೆ. ಮೇಕ್ ಇನ್ ಇಂಡಿಯಾದ ಪರಿಣಾಮ ಕೆಲ ಶಸ್ತ್ರಾಸ್ತ್ರಗಳ ತಂತ್ರಜ್ಞಾನವು ವಿನಿಮಯವಾಗುತ್ತಿದೆ. ಹಂತ ಹಂತವಾಗಿ ಕೆಲವೇ ವರ್ಷಗಳಲ್ಲಿ ಭಾರತ ಶಸ್ತ್ರಾಸ್ತ್ರಗಳ ನಿರ್ಮಾಣದಲ್ಲಿ ಸ್ವಾವಲಂಬಿ ಹೊಂದುವುದರ ಜೊತೆಗೆ, ರಫ್ತು ಕೂಡಾ ಮಾಡಬಲ್ಲದು. ಸೈನ್ಯ ವಿಜ್ಞಾನ ಎಂಬ ವಿಷಯವನ್ನು ಶಿಕ್ಷಣದಲ್ಲಿ ಅಡಕ ಮಾಡುವ ಅವಶ್ಯಕತೆಯಿದೆ ಎಂದರು.
ಕೃಷಿ ತಜ್ಞ ಮತ್ತು ಐಸಿಎಆರ್ ಅಧ್ಯಾಪಕ ಪ್ರೊ.ರಾಮಾಂಜಿನಿ ಗೌಡ ಆಹಾರ ಭದ್ರತೆ ಮತ್ತು ಸ್ವಾವಲಂಬನೆ ವಿಷಯವಾಗಿ ಮಾತನಾಡಿ, ಸಾವಯವ ಕೃಷಿಗೆ ಆದ್ಯತೆ ನೀಡುವುದರ ಮೂಲಕ, ಭೂಮಿಯ ಮತ್ತು ಜನರ ಆರೋಗ್ಯ ವೃದ್ಧಿಸಬಹುದು. ಅಷ್ಟೇ ಅಲ್ಲದೆ ಸಾವಯವ ಕೃಷಿಯಲ್ಲಿ ಸಂಶೋಧನೆ ಹೆಚ್ಚಾದಂತೆ, ಇಳುವರಿ ಕೂಡಾ ಹೆಚ್ಚು ಪಡೆಯಬಹುದು. ಹನಿ ನೀರಾವರಿ, ಸೌರ ಮತ್ತು ವಾಯುಶಕ್ತಿ ಉತ್ಪಾದನೆ ಮತ್ತು ಬಳಕೆ ಹೀಗೆ ನವ ಪ್ರಯೋಗಗಳಿಗೆ ಸರ್ಕಾರ ರೈತರಿಗೆ ನೆರವು ನೀಡಬೇಕು. ಕೃಷಿಯ ಜೊತೆಗೆ ರೈತರು ಪಶು ಸಂಗೋಪನೆ, ಮೀನುಗಾರಿಕೆ ಮತ್ತು ರೇಶ್ಮೆ ಉತ್ಪಾದನೆ ಹೀಗೆ ಪರ್ಯಾಯ ಆದಾಯ ಮೂಲಗಳನ್ನು ಹೊಂದಬೇಕು. ಸರ್ಕಾರ ಸಾವಯವ ಕೃಷಿಗೆ ಪ್ರತ್ಯೇಕ ನಿಗಮ ಮಾಡಿ, ಸಾವಯವ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ಅನುಕೂಲ ಒದಗಿಸಿ ಕೊಡಬೇಕು ಎಂದರು.
ಉದ್ಯಮಿ ಹಾಗೂ ಲಘು ಉದ್ಯೋಗ ಭಾರತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಪ್ರಸನ್ನ ಆರ್ಥಿಕ ಸ್ವಾವಲಂಬನೆಯಲ್ಲಿ ಲಘು ಉದ್ಯೋಗಗಳ ಪಾತ್ರ ವಿಷಯದ ಕುರಿತಾಗಿ ಮಾತನಾಡಿ, ಲಘು ಉದ್ಯೋಗವು ದೇಶದಲ್ಲಿ ಕೃಷಿಯ ನಂತರ ಅತಿ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರವಾಗಿದೆ. 11 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಲಘು ಉದ್ಯೋಗ ಕ್ಷೇತ್ರ ಸೃಷ್ಟಿಸಿದೆ. ಜಗತ್ತಿನ ಶೇ.17 ರಷ್ಟು ಜನಸಂಖ್ಯೆ ಹೊಂದಿದ ಭಾರತ ರಫ್ತಿನಲ್ಲಿ ಜಗತ್ತಿನ ಕೇವಲ ಶೇ.2.6 ಪ್ರಮಾಣ ಹೊಂದಿದೆ. ಲಘು ಉದ್ಯೋಗಕ್ಕೆ ಸೂಕ್ತ ಮಾರ್ಗದರ್ಶನ, ಸ್ವ-ಉದ್ಯೋಗದ ಕಲ್ಪನೆಯ ಕೊರತೆ ಮತ್ತು ಕೇಂದ್ರಿಕೃತಗೊಂಡ ಕಾರ್ಖಾನೆಗಳ ವ್ಯವಸ್ಥೆಯಿಂದ ಲಘು ಉದ್ಯಮಕ್ಕೆ ಮಹತ್ವ ದೊರೆತಿಲ್ಲ. ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಸ್ಥಾನಿಕ ಸಂಪನ್ಮೂಲ ಆಧಾರಿತ ಲಘು ಉದ್ಯಮಕ್ಕೆ ಸ್ಥಾಪನೆಗೆ ಸರ್ಕಾರ ಉತ್ತೇಜನ ನೀಡಲು ಮುಂದಾಗಬೇಕು ಎಂದರು.