
ಅಸ್ಸಾಂ, ಮಾರ್ಚ್ 17: ಸುಳ್ಳು ಅನಾರೋಗ್ಯದ ವೈದ್ಯಕೀಯ ಸರ್ಟಿಫಿಕೇಟ್ ನೀಡಿ ಚುನಾವಣಾ ಕೆಲಸ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ 17 ಮಂದಿ ಇದೀಗ ಅದೇ ಸರ್ಟಿಫೀಕೇಟ್ ಆಧಾರದಲ್ಲಿ ಕೆಲಸ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ಹೌದು, ಈ ಘಟನೆ ನಡೆದದ್ದು ಈಶಾನ್ಯ ಭಾರತದ ರಾಜ್ಯಗಳಲ್ಲೊಂದಾದ ಅಸ್ಸಾಂನಲ್ಲಿ. ಇದೇ ಮಾರ್ಚ್ 27ರಿಂದ 3 ಹಂತಗಳಲ್ಲಿ ಅಸ್ಸಾಂನ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣಾ ಕರ್ತವ್ಯಕ್ಕೆ ಸರ್ಕಾರೀ ಅಧಿಕಾರಿಗಳನ್ನು ಬಳಸಿಕೊಳ್ಳುವುದು ಸಾಮಾನ್ಯ.
ಚುನಾವಣಾ ಕರ್ತವ್ಯವ್ನನು ತಪ್ಪಿಸಿಕೊಳ‍್ಳುವ ಅಸ್ಸಾಂನ ನಲ್ಬಾರಿ ಜಿಲ್ಲೆಯ 17 ಅಧಿಕಾರಿಗಳು ಸುಳ್ಳು ಅನಾರೋಗ್ಯದ ವೈದ್ಯಕೀಯ ಸರ್ಟಿಫಿಕೇಟ್ ನೀಡಿ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು.
ಇದೇ ಸರ್ಟಿಫಿಕೇಟ್ ಆಧಾರವಾಗಿಸಿಕೊಂಡ ಜಿಲ್ಲಾಧಿಕಾರಿ ಸರ್ಕಾರಿ ಕೆಲಸಕ್ಕೆ ಆರೋಗ್ಯ ಬಹುಮುಖ್ಯವಾಗಿದೆ. ನೀವು ಅನಾರೋಗ್ಯ ಪೀಡಿತರಾಗಿರುವುದರಿಂದ ಸರ್ಕಾರೀ ಕೆಲಸದಲ್ಲಿ ಮುಂದುವರಿಯುವುದು ಸರಿಯಲ್ಲ. ಹೀಗಾಗಿ ವಿಆರ್ ಎಸ್ (ಸ್ವಯಂ ನಿವೃತ್ತಿ) ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.
ಈ ಪ್ರಕ್ರಿಯೆಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಎಲ್ಲ ರಾಜ್ಯಗಳಲ್ಲಿಯೂ ಈ ವ್ಯವಸ್ಥೆ ಜಾರಿಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.