
ಯಾವ ದೇಶದ ಯುವಜನತೆ ತನ್ನ ಭೂತಕಾಲವನ್ನು ಮರೆಯುತ್ತದೆಯೋ ಆ ದೇಶಕ್ಕೆ ಭವಿಷ್ಯವೂ ಇಲ್ಲʼ ಎಂಬುದು ಪ್ರಸಿದ್ಧ ಪಾಶ್ಚಾತ್ಯ ಚಿಂತಕ ಖಲೀಲ್ ಗಿಬ್ರಾನ್ ನ ಮಾತು. ನಿಜವೂ ಹೌದು. ಆದರೆ ಪರಕೀಯರೇ ಬರೆದ ಚರಿತ್ರೆ, ಇತಿಹಾಸಗಳನ್ನು ಈಗಲೂ ಓದುವ ನಮ್ಮ ಯುವಜನತೆ ಭಾರತದ ಭವಿತವ್ಯವನ್ನು ಯಾವ ನೆಲೆಯ ಮೇಲೆ ನಿರ್ಮಿಸಬೇಕೆಂಬ ಗೊಂದಲದಲ್ಲಿ ಮುಳುಗಿರುವುದು ಸತ್ಯ. ಇಂತಹ ಕತ್ತಲ ನಿವಾರಣೆಗೆ ಧರಂಪಾಲರಂತಹ ಈ ನೆಲದ ನಿಜವಾದ ಸತ್ವವನ್ನು ಅಧಿಕೃತವಾಗಿ ಹೇಳಬಲ್ಲವರ ಮಾತುಗಳು ಬೆಳಕಾಗುತ್ತವೆ.
ಭಾರತದ ಶಿಕ್ಷಣ ವ್ಯವಸ್ಥೆ ಬ್ರಿಟಿಷರು ಕಾಲಿಡುವುದಕ್ಕೆ ಮುಂಚೆ ಹೇಗಿತ್ತು, ಎಷ್ಟು ವಿಸ್ತಾರವಾಗಿ ಹಾಗೂ ವ್ಯವಸ್ಥಿತವಾಗಿತ್ತು? ಎಂಬುದನ್ನು ಅವರ ʼಬ್ಯೂಟಿಫುಲ್ ಟ್ರೀʼ ಪುಸ್ತಕ ಕಟ್ಟಿ ಕೊಡುತ್ತದೆ. ಇದರ ಆಧಾರದ ಮೇಲೆ ಭಾರತೀಯ ಶಿಕ್ಷಣದ ಭವ್ಯತೆ ಹಾಗೂ ವೈಜ್ಞಾನಿಕತೆಯನ್ನು ನಾವು ತಿಳಿಯಬಹುದು. ಜಾತಿಗಳೊಳಗಿನ ಮೇಲುಕೀಳು ಎಂಬ ಭ್ರಮೆ ನಿಜವಲ್ಲದ ಆದರೆ ಪ್ರಯತ್ನಪೂರ್ವಕವಾಗಿ ಹುಟ್ಟಿಹಾಕಿದ್ದು ಎಂಬ ವಿಚಾರ ತಿಳಿದು ರೋಮಾಂಚನವಾಗುತ್ತದೆ. ಶಿಕ್ಷಣವು ಬ್ರಾಹ್ಮಣರ ಬುತ್ತಿ ಅದು ಎಲ್ಲರಿಗೂ ಹಂಚಿಕೆಯಾಗುತ್ತಿರಲಿಲ್ಲ ಎಂಬ ಸುಳ್ಳಿನ ಬೃಹತ್ ಬಲೂನನ್ನು ಅವರ ನೀಡುವ ಅಧಿಕೃತ ಅಂಕಿಅಂಶಗಳು ಚುಚ್ಚಿ ಒಡೆದು ಹಾಕುತ್ತವೆ.
ಧರಂಪಾಲ ಸಮಗ್ರ – Dharampal Classics Series 5 Books ಪುಸ್ತಕಗಳನ್ನು ಇಲ್ಲಿ ಖರೀದಿಸಬಹುದು:
https://www.sahityabooks.com/shop/moulika-vaicharika/dharmapal-classics-series-5-books/
ಧರಂಪಾಲರು ಮಾತನಾಡುವುದೆಲ್ಲವೂ ದಾಖಲೆಗಳ ಮೂಲಕವೇ. ತಮ್ಮ ನಿಲುವು ನೋಟಗಳನ್ನು ತಮ್ಮ ಕೃತಿಗಳಲ್ಲಿ ತುಂಬಿರುವುದು ಕಡಿಮೆಯೇ, ಹಾಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಅದಕ್ಕೆ ರಾಶಿಯಾಗಿ ದಾಖಲೆಗಳನ್ನು ಒದಗಿಸುತ್ತಾರೆ. ಮತ್ತು ಇಷ್ಟೆಲ್ಲಾ ದಾಖಲೆಗಳನ್ನು ಅವರ ಒದಗಿಸುವುದು ಲಂಡನ್ನಿನ ಇಂಡಿಯಾ ಅರ್ಕೈವ್ಸ್ ನ ಸಂಗ್ರಹಗಳಿಂದ. ಬ್ರಿಟಿಷ್ ಅಧಿಕಾರಿ, ಲೇಖಕ ಮತ್ತು ಪ್ರವಾಸಿಗಳೇ ನೀಡಿದ ವರದಿ, ಮಾಡಿದ ಟಿಪ್ಪಣಿಗಳನ್ನು ಸುಮಾರು ಒಂದೂವರೆ ದಶಕಗಳ ಕಾಲ ಆಳವಾಗಿ ಅಧ್ಯಯನ ಮಾಡಿ, ಬೇಕಾದ್ದೆಲ್ಲವನ್ನೂ ನಕಲು ಪ್ರತಿ ಮಾಡಿಕೊಂಡು, ಹತ್ತಾರು ಟ್ರಂಕುಗಳಲ್ಲಿ ಹೇರಿಕೊಂಡು ಭಾರತಕ್ಕೆ ತಂದಂತಹ ಅಧ್ಯಯನ ಸಾಮಾಗ್ರಿಯಿಂದ.
ಭಾರತದ ಅಸ್ಮಿತೆ ಏನು ಎನ್ನುವುದರ ಅರಿವನ್ನು ತಮ್ಮ ಆಳವಾದ ಸಂಶೋಧನೆಗಳಿಂದ ತಿಳಿಸಿಕೊಟ್ಟವರು ಧರಂಪಾಲರು. ಗಾಂಧಿವಾದಿಯಾಗಿದ್ದರೂ ಆ ವಿಚಾರಕ್ಕೆ ಹೊಂದಿಸಲು ಸಂಶೋಧನೆಯನ್ನು ಮಾಡದೇ ಸತ್ಯವೆಂದು ಕಂಡಿದ್ದನ್ನೇ ದಾಖಲಿಸಿದರು. ಇದು ಈಗಿನ ಕಾಲಕ್ಕೂ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವವರಿಗೊಂದು ಆದರ್ಶ. ದೇಶದ ಸಮಗ್ರತೆಯ ಹಿನ್ನೆಲೆಯಲ್ಲಿ ಅತ್ಯಂತ ಮೌಲ್ಯಯುತವಾದ ವಿಚಾರಗಳು ಅವರಿಂದ ಮೂಡಿಬಂದವು. ಇಂಗ್ಲಿಷ್ನಲ್ಲಿ 5 ಮತ್ತು ಹಿಂದಿಯಲ್ಲಿ 10 ಸಂಪುಟಗಳಲ್ಲಿ ಅವರ ಕೃತಿಗಳು ಈಗ ಲಭ್ಯ.
1922ರ ಫೆಬ್ರವರಿ 19ರಂದು ಜನಿಸಿದ ಧರಂಪಾಲರು ದಿವಂಗತರಾದದ್ದು 2006ರಲ್ಲಿ. ಪ್ರಸ್ತುತ ವರ್ಷ ಅಂದರೆ 2021 ಧರಂಪಾಲರ ಜನ್ಮ ಶತಮಾನದ ವರ್ಷ. ಇಂತಹ ಒಬ್ಬ ಮಹನೀಯರ ದರ್ಶನ, ಅವರೊಂದಿಗೆ ವಿಚಾರ ವಿನಿಮಯ ಮತ್ತು ಅವರ ಹಲವು ಕೃತಿಗಳನ್ನು ಓದುವ ಸೌಭಾಗ್ಯ ನನಗೆ ಪ್ರಾಪ್ತವಾಗಿದ್ದು ನನ್ನ ಸುಕೃತವೇ. ಹಾಗೇ ನೋಡಿದರೆ ವೈಚಾರಿಕ ಓದಿನ ಕಡೆಗೆ ನನ್ನನ್ನು ಸೆಳೆದದ್ದು ಸಹ ಧರಂಪಾಲರೇ ಎಂದರೆ ಅಚ್ಚರಿಯಿಲ್ಲ. ಅದು ʼಭಾರತ ಜಾಗೃತಿʼ ಎಂಬ ಧರಂಪಾಲರದೇ ವಿಚಾರ ಸಂಗ್ರಹದ ಕೃತಿ. ಕನ್ನಡಕ್ಕೆ ಶ್ರೀಯುತ ಎಸ್ಆರ್ ರಾಮಸ್ವಾಮಿಯವರು ತಂದದ್ದು. ಕಾಲೇಜು ದಿನಗಳಲ್ಲಿ ಆ ಕೃತಿ ನನ್ನ ಮೇಲೆ ಅಪಾರ ಪ್ರಭಾವ ಬೀರಿತು. ಅಲ್ಲಿಯವರೆಗೆ ಇದ್ದ ಐತಿಹಾಸಿಕ ಕತೆ, ಕಾದಂಬರಿಗಳ ಹುಚ್ಚನ್ನು ಬಿಡಿಸಿದ್ದು ಇದೇ ಪುಸ್ತಕ. ಗಾತ್ರದಲ್ಲಿ ಚಿಕ್ಕದು ಆದರೆ ವಿಚಾರದಲ್ಲಿ ಮಹತ್ವದ್ದಾದ ಕೃತಿ.
1999 ಅಥವಾ 2000ನೇ ಇಸವಿಯಲ್ಲಿ ನಾನು ಧರಂಪಾಲರನ್ನು ನೋಡಿದ್ದು. ಅಂದು ಬೆಂಗಳೂರಿನ ಜಿಗಣಿಯ ವಿವೇಕಾನಂದ ಯೋಗ ಕೇಂದ್ರದಲ್ಲಿ ಅವರ ಭೇಟಿ. ಭಾರತೀಯ ಜ್ಞಾನವಿಜ್ಞಾನ ಪರಂಪರೆ, ಯೋಗ ಇವುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯುಳ್ಳ ಯುವಕಯುವತಿಯರಿಗಾಗಿ ಡಾ ಶ್ಯಾಮಸುಂದರ್ ರವರು ಅಲ್ಲಿ ನಿವಾಸಿ ಶಿಬಿರಗಳನ್ನು ಏರ್ಪಡಿಸುತ್ತಿದ್ದರು. ನಾನು ಸಹ ಕಾರ್ಯಕರ್ತನಾಗಿ ಅದರ ನಿರ್ವಹಣೆಯಲ್ಲಿ ಸಕ್ರಿಯನಾಗಿದ್ದೆ. ಆ ದಿನ ನಾವು ನಿಗದಿಗೊಳಿಸಿದ ಉಪನ್ಯಾಸಗಳು ಎಲ್ಲ ಮುಗಿದಿದ್ದರೂ ಸಹ ಧರಂಪಾಲರು ಅದೇ ಕೇಂದ್ರದಲ್ಲಿ ವಿಶ್ರಾಂತಿಯಲ್ಲಿದ್ದಾರೆಂದು ತಿಳಿದು ಅವರ ಭೇಟಿಗೆ ಹೋದೆವು. ಅತ್ಯಂತ ಆಪ್ತ ಹಿರಿಯರನ್ನು ಕಂಡ ಭಾವ. ಜ್ಞಾನದ ಅಹಂಕಾರ ಯಾವುದೇ ರೀತಿಯಲ್ಲೂ ಅವರ ಹತ್ತಿರವೂ ಸುಳಿದಿರಲಿಲ್ಲ. ನಮ್ಮಂತಹ ಚಿಗುರು ಮೀಸೆಯವರ ಪ್ರಶ್ನೆಗಳನ್ನೂ ಗಂಭೀರವಾಗಿ ಆಲಿಸುತ್ತಿದ್ದರು. ನಾವು ಯಾರು? ಏನು ಎಂಬ ಬಗ್ಗೆ ಅವರಿಗೆ ಒಂದಿನಿತೂ ಕುತೂಹಲವಿಲ್ಲ ಬದಲಾಗಿ ಕೇಳಿದ ಪ್ರಶ್ನೆಯೆಡೆಗಷ್ಟೇ ಅವರ ಗಮನ.
ಅವರೊಂದಿಗಿನ ಮಾತುಕತೆ ನೆನೆಸಿಕೊಂಡರೆ ಇಂದಿಗೂ ಮನಸ್ಸು ಪುಳಕಗೊಳ್ಳುತ್ತದೆ. ಅತ್ಯಂತ ಆಸಕ್ತಿಯಿಂದ ಹಾಗೂ ನಗುಮುಖದಿಂದ ನಮ್ಮನ್ನು ಆಲಿಸುತ್ತಿದ್ದರು, ಆ ಹೊತ್ತಿಗೆ ಸ್ವಲ್ಪ ಶ್ರವಣದ ಸಮಸ್ಯೆಯಿತ್ತೆನಿಸುತ್ತದೆ ನಾವು ತುಸು ಜೋರಾಗಿ ಮಾತನಾಡಬೇಕಿತ್ತು. ಅವರು ನೀಡುತ್ತಿದ್ದ ಉತ್ತರ ಅತ್ಯಂತ ಧೀರ್ಘವಾಗಿದ್ದವು. ಕೆಲವೊಮ್ಮೆ ವಿಷಯಕ್ಕೆ ಸಂಬಂಧವಿಲ್ಲದ್ದು ಹೇಳುತ್ತಿದ್ದಾರೆ ವಯೋಸಹಜ ಮರೆವಿರಬೇಕು ಎಂದು ಕೊಳ್ಳುವಷ್ಟರಲ್ಲೇ ತಮ್ಮ ಮಾತುಗಳ ನಡುವಿನ ಕೊಂಡಿಯನ್ನು ಗಟ್ಟಿಗೊಳಿಸಿ ಚಕಿತರನ್ನಾಗಿಸುತ್ತಿದ್ದರು. ಬಹುಶಃ ಭಾರತದ ಜನಜೀವನವನ್ನು ಸಮಗ್ರವಾಗಿ ಕಂಡುಕೊಂಡಂತೆ, ಉತ್ತರಗಳನ್ನು ಸಹ ಎಲ್ಲ ಕೋನಗಳಿಂದ ಸಮರ್ಪಕವಾಗಿರುವಂತೆ ನೀಡುತ್ತಿದ್ದರು. ಪ್ರಶ್ನೆ ಕೇಳಿ ನಾವು ಬಳಲಿದರೂ ಉತ್ತರಿಸುವ ಅವರ ಉತ್ಸಾಹ ಹೆಚ್ಚುತ್ತಲೇ ಇತ್ತು. ಅವರೊಂದಿಗೆ ಕಳೆದ ಸುಮಾರು ಎರಡೂವರೆ ಮೂರು ಗಂಟೆಗಳ ಕಾಲವನ್ನು ಧ್ವನಿಮುದ್ರಿಸಿಕೊಳ್ಳಲು ಆಗಲಿಲ್ಲವಲ್ಲ ಎಂಬ ಕೊರಗು ನನಗಿನ್ನೂ ಇದೆ.
ಸ್ವತಂತ್ರ ಭಾರತ ಯಾವ ಅಡಿಪಾಯಗಳ ಮೇಲೆ ನಿರ್ಮಾಣಗೊಳ್ಳಬೇಕು ಎಂಬುದಕ್ಕೆ ತಳೆಯಬೇಕಾದ ಸ್ಪಪ್ಟವಾದ ನೀತಿ ನಿಲುವು ದೊರೆಯಲು ನಮಗೆ ಧರಂಪಾಲರು ಬೇಕೇ ಬೇಕು. ಅವರ ಅಧ್ಯಯನ ಮತ್ತು ಆ ದಿಕ್ಕಿನಲ್ಲಿಯೇ ಇನ್ನಷ್ಟು ಮಂದಿ ಸಂಶೋಧನೆ ನಡೆಸಿದವರು ನಮ್ಮ ಆಡಳಿತ ಪದ್ಧತಿ, ಜನಜೀವನದ ನೀತಿ ನಿಯಮಗಳನ್ನು ನಿರೂಪಿಸಿದ್ದರೆ ಇಂದಿಗೂ ನಾವು ಅನುಭವಿಸುತ್ತಿರುವ, ಒಂದು ಸಮಾಜವಾಗಿ ನಾವು ಹೊಂದಿರುವ ಗೊಂದಲಮಯ ನಿಲುವುಗಳಿಂದ ಮುಕ್ತವಾಗಬಹುದಿತ್ತು. ಅದರಲ್ಲೂ ಬ್ರಿಟಿಷರು ಹೋದ ನಂತರ ದೇಶದ ಸ್ವತಂತ್ರ ಜೀವನದ ಆರಂಭಿಕ ದಿನಗಳಲ್ಲಿ ಇದು ಅತ್ಯಂತ ಅವಶ್ಯಕವಾಗಿತ್ತು. ಈಗಾಗಲೇ ತಡವಾಗಿದೆ, ಚಿಂತೆಯಿಲ್ಲ ಇನ್ನಾದರೂ ಈ ವಿಫುಲ ಸಂಶೋಧನೆಯ ಕಡೆಗೆ ಗಮನ ಕೊಡಬೇಕಿದೆ. ವೈಭವಶಾಲಿ ಭಾರತದ ಪುನರುತ್ಥಾನದೆಡೆಗೆ ಸಾಗಲು ಧರಂಪಾಲರ ಕಾರ್ಯ ನಿಜಕ್ಕೂ ತೋರುಗಂಬವಾಗುವುದರಲ್ಲಿ ಸಂಶಯವಿಲ್ಲ.