
ಭಾರತ ಇತಿಹಾಸದ ಸಾಹಸಮಯ ಪುಟಗಳಲ್ಲಿ ಒಂದಾಗಿ, ರಾಷ್ಟ್ರಭಕ್ತ ಯುವಜನರ ಮೈ ರೋಮಾಂಚನಗೊಳಿಸುವ ಆ ಘಟನೆ ನಡೆದದ್ದು, 1670ರ ಫೆಬ್ರವರಿ ನಾಲ್ಕರಂದು. ಆ ನಿಮಿತ್ತ ಈ ನೆನಪು.
ಆತ ಸಾವಿರ ಸೈನಿಕರ ನಾಯಕನಾದ ಒಬ್ಬ ಸುಬೇದಾರ, ಶಿವಾಜಿ ಹತ್ತಾರು ಆಪ್ತರಲ್ಲಿ ಅವನೂ ಒಬ್ಬ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಶಿವಾಜಿಯ ಪಡೆದಿದ್ದ ದೇವದುರ್ಲಭ ಕಾರ್ಯಕರ್ತರ ಪಡೆಯಲ್ಲಿ ಅಗ್ರಣಿ. ತಾನಾಜಿ ಮಾಲಸುರೆಯಂತಹ ನಂಬುಗೆ ಭಂಟರ ಬೆಂಬಲದಿಂದಲೇ ಮೊಗಲಾಯಿ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದು ಛತ್ರಪತಿಯೆನಿಸಿಕೊಳ್ಳಲು ಶಿವಾಜಿಗೆ ಸಾಧ್ಯವಾದದ್ದು.. ಸಿಂಹಗಡದ ನೆತ್ತಿಯ ಮೇಲೆ ಹಸಿರು ಪತಾಕೆಯನ್ನಿಳಿಸಿ ಸ್ವರಾಜ್ಯದ ಭಗವೆಯನ್ನು ಹಾರಿಸಬೇಕು ಎಂಬ ವೀಳ್ಯ ಶಿವಾಜಿಯಿಂದ ಬಂದಾಗ ಮಗನ ಮದುವೆಯನ್ನೂ ಲೆಕ್ಕಿಸದೇ ದೇಶಕಾರ್ಯಕ್ಕೆ ಹೊರಟ ವೀರ ಈತ. ಯಾವುದೇ ಕೆಲಸವಾದರೂ ಪ್ರಾಣವನ್ನೇ ಪಣವಿಟ್ಟು ಹೋರಾಡುವ ರಣದುರಂಧರ ತಾನಾಜಿ. ಪ್ರತಿಕೂಲ ಪರಿಸ್ಥಿತಿಗಳಿದ್ದಷ್ಟೂ ಪರಾಕ್ರಮ ಮೆರೆಸುವ ಹುಚ್ಚು ಸಹ ಹೆಚ್ಚಾಗುತ್ತಿತ್ತು.
ಆತ ಮಾಡಿದ್ದು ಎಂತಹ ಸಾಹಸ ಗೊತ್ತೆ? ಐದು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಪಠಾಣ, ಅರಬ್ಬಿ ಮತ್ತು ರಜಪೂತ ಪಡೆಗಳನ್ನು ಅದಕ್ಕೆ ಹತ್ತಂಶವೂ ಇಲ್ಲದ ಸಣ್ಣ ಸಂಖ್ಯೆಯ ಮರಾಠಿ ವೀರರೊಡನೆ ಎದುರಿಸಿ ಗೆಲ್ಲಬೇಕು. ಬಹುಪಾಲು ನೆಲಕ್ಕೆ ಲಂಬವಾಗಿ ಎದ್ದು ನಿಂತ ಬೆಟ್ಟದ ಕಡೆಯಿಂದಲೇ ಮೇಲೇರಿ ಕೊಂಡಾಣ ದುರ್ಗಕ್ಕೆ ಲಗ್ಗೆಯಿಡಬೇಕು, ಏಕೆಂದರೆ ಮಿಕ್ಕೆಲ್ಲ ಕಡೆ ಸರ್ಪಗಾವಲು. ನಡುರಾತ್ರಿ ಕಗ್ಗತ್ತಲಲ್ಲೇ ಕದನ, ಬೆಳಗಾಗುವುದರೊಳಗೆ ವಿಜಯ ಪ್ರಾಪ್ತಿಯಾಗಬೇಕು. ಆ ಗಡದ ರಕ್ಷಕನೋ ಉದಯಭಾನು ರಾಥೋಡ್ ಎಂಬ ಬಹು ಪರಾಕ್ರಮಿ ರಜಪೂತ ದಳಪತಿ, ರಾಜ ಜಯಸಿಂಗನ ನಂಬುಗೆಯ ಆಳು. ಸ್ವತಃ ರಾಜವಂಶದವನಾದರೂ, ಮಹಾಪರಾಕ್ರಮಿಗಳಾದ ರಜಪೂತ ಸೈನ್ಯವನ್ನು ಹೊಂದಿದ್ದರೂ ಹಿಂದೂಧರ್ಮದ ರಕ್ಷಣೆಗೆ ನಿಲ್ಲದೇ ದೇವಾಲಯ ಧ್ವಂಸಗೈಯುವ, ವಿಗ್ರಹ ಭಂಜಕ ಔರಂಜೇಬನ ಅಧೀನದಲ್ಲಿ ಅವನ ಸಾಮ್ರಾಜ್ಯ ವಿಸ್ತರಿಸುವ ಧೌರ್ಭಾಗ್ಯದ ಜವಾಬ್ದಾರಿಯನ್ನು ಹೊತ್ತವನು ರಾಜ ಜಯಸಿಂಹ. ಉದ್ದೇಶರಹಿತ ಬಾಳು ಎಷ್ಟು ಹೀನ ಎಂಬುದಕ್ಕೆ ಉದಾಹರಣೆಗಳು ಸಹ ಇಂತಹವರೇ.
ತಾನಾಜಿ ಒಬ್ಬ ಆದರ್ಶ ಧ್ಯೇಯಜೀವಿ. ಈ ಹಿಂದೆಯೂ ಈತ ಯಶಸ್ವಿಯಾಗಿ ನಿರ್ವಹಿಸಿದ್ದ ಯುದ್ಧ ಪ್ರಸಂಗಗಳಿಂದಲೇ ಈತನ ಸಾಮರ್ಥ್ಯವನ್ನು ಶಿವಾಜಿ ಅರಿತಿದ್ದ. ಆದರೂ ಮಗನ ಮದುವೆಯ ಕಾರಣ ಹೇಳಿ ಈ ಅಪಾಯಕರ ಸಾಹಸ ಅಭಿಯಾನದಿಂದ ತಾನಾಜಿ ಹಿಂದೆ ಸರಿಯಬಹುದಾಗಿತ್ತು, ಆದರೆ ಹಾಗೇ ಆತ ಮಾಡದ ಕಾರಣಕ್ಕೇ ನಾವು ಇಂದಿಗೂ ತಾನಾಜಿಯ ಹೆಸರು ಹೇಳುತ್ತಿದ್ದೇವೆ.
ಶಿವಾಜಿಯು ತನಗೊಪ್ಪಿಸಿದ ಕಾರ್ಯದ ಗಂಭೀರತೆಯನ್ನು, ಕಠಿಣತೆಯನ್ನು ಅರಿತೇ ತಾನಾಜಿ ಸೇನಾ ಕಾರ್ಯಾಚರಣೆಯನ್ನು ಯೋಚಿಸಿದ. ಸಿಂಹ ಗಡ ಅಥವಾ ಕೊಂಡಾನ ಕೋಟೆಯ ಸಂರಚನೆಯನ್ನು, ರಕ್ಷಣಾ ಪ್ರಾಕಾರಗಳನ್ನು ಆತ ಅರಿತವನೇ ಆಗಿದ್ದುದು ಉಪಯೋಗಕ್ಕೆ ಬಂದಿತು. ವಿವಿಧ ತಂಡಗಳಲ್ಲಿ ಪುಟ್ಟ ಸೈನ್ಯವನ್ನು ಹಂಚಿ ನಿಶ್ಚಿತ ಕೆಲಸಗಳನ್ನು ನಿಗದಿಗೊಳಿಸಿ ತಾನೇ ಮುಂದಾಗಿ ನಿಂತು ಶತ್ರುಗಳನ್ನೆದುರಿಸಿದ.
ತಾನಾಜಿಯ ನಾಯಕತ್ವದ ಗುಣಗಳ ಮಹತ್ವ ಇಲ್ಲಿ ಅರಿವಾಗುತ್ತದೆ. ತನ್ನ ಆಕ್ರಮಣದ ಪ್ರತಿ ಹೆಜ್ಜೆಯ, ಪ್ರತಿ ಕ್ಷಣದ ಲೆಕ್ಕಾಚಾರವನ್ನೂ ಹಾಕಿದ್ದ. ಶತ್ರು ಜಾಗೃತಗೊಳ್ಳುವ ಹತ್ತಾರು ನಿಮಿಷಗಳೊಳಗಾಗಿ ಹಗ್ಗ ಹಿಡಿದು ಗೋಡೆಹತ್ತಿದ ಹಿಡಿಯಷ್ಟು ಮಂದಿ ಕೋಟೆಯ ಪ್ರವೇಶ ದ್ವಾರಗಳನ್ನು ಕೈವಶ ಮಾಡಿಕೊಂಡು ತೆರೆಯಬೇಕು, ಅದೂ ಹಲವು ಪ್ರಾಕಾರದಲ್ಲಿ ಭದ್ರವಾಗಿ ನಿಂತ ದ್ವಾರಗಳು. ಅದರ ನಂತರ ಘೋರ ಕಾದಾಟ, ಕೋಟೆಯ ಯಾವ ಭಾಗಗಳಲ್ಲಿ ಎಷ್ಟು ಶತ್ರು ಸೈನಿಕರಿರುತ್ತಾರೆ? ಕೋಟೆಯ ರಕ್ಷಣಾ ಸೂತ್ರವೇನು? ಯಾವ ಗುಂಪು ಯಾವ ಸ್ಥಳದಲ್ಲಿ ಆಕ್ರಮಣ ಎಸಗಬೇಕು. ನಮ್ಮ ಕಡೆ ಅತಿ ಕಡಿಮೆ ಹಾನಿ ಹಾಗೂ ಶತ್ರುವಿಗೆ ಅತಿ ಹೆಚ್ಚು ಹಾನಿ ಉಂಟುಮಾಡುವ ಬಗೆ ಇವೆಲ್ಲವೂ ಕರಾರುವಕ್ಕಾಗಿ ತಾನಾಜಿಯ ರಣತಂತ್ರದಲ್ಲಿತ್ತು.
ರಾಜನೋ, ಸೇನಾಪತಿಯೋ ರಣಾಂಗಣದಲ್ಲಿ ಬಿದ್ದರೆ ಅದೆಷ್ಟೇ ಬಲಿಷ್ಠ ಸೈನ್ಯವಿದ್ದರೂ ಯುದ್ಧವನ್ನು ಕೈಚೆಲ್ಲಿದ ಪ್ರಸಂಗಗಳು ನಮ್ಮ ಚರಿತ್ರೆಯಲ್ಲಿದೆ. ವಿಜಯನಗರದ ಅಳಿಯ ರಾಮರಾಯನ ಸೈನ್ಯದ ಉದಾಹರಣೆಯ ಇದೆಯಲ್ಲವೆ. ಬಹುಮನಿಗಳ ಸೈನ್ಯಕ್ಕಿಂತ ಬೃಹತ್ತಾಗಿದ್ದರೂ ಶಸ್ತ್ರಸಂಗ್ರಹದಲ್ಲೂ ಹೆಚ್ಚಿದ್ದರೂ ರಾಮರಾಯ ನೆಲಕ್ಕುರುಳಿದ ಕೂಡಲೇ ನಾಯಕನಿಲ್ಲದ ಸೈನ್ಯ ಗೆಲ್ಲಬಹುದಾಗಿದ್ದ ಯುದ್ಧವನ್ನು ಬಿಟ್ಟೋಡಿ ವೈಭವದ ವಿಜಯನಗರದ ಪತನಕ್ಕೆ ಕಾರಣವಾಯಿತು. ಆದರೆ ತಾನಾಜಿಯ ಮತ್ತೊಂದು ಮುಂದಾಲೋಚನೆ ನೋಡಿ, ನಾಯಕ ಬಿದ್ದರೂ ಕಾರ್ಯಾಚರಣೆ ಯಶಸ್ವಿಗೊಳ್ಳುವಂತೆ ಆ ಕ್ಷಣವೇ ಪಡೆಯ ನೇತೃತ್ವ ವಹಿಸುವಂತೆ ಜವಾಬ್ದಾರಿಯುತ ಕಟ್ಟಾಳುಗಳಿಗೆ ಸೂಚಿಸಿದ್ದ. ಈ ಮುಂದಾಲೋಚನೆ ನಿಜಕ್ಕೂ ಫಲ ನೀಡಿತು, ತಾನಾಜಿ ವೀರಮರಣವನ್ನಪ್ಪಿದರೂ ಆತನ ಪಡೆ ಹಿಮ್ಮೆಟ್ಟದೇ ವಿಜಯ ದಾಖಲಿಸಿತು.
ಮಹಾನ್ ಧ್ಯೇಯವೊಂದಕ್ಕೆ ಸಮರ್ಪಿಸಿಕೊಂಡ ಅತಿಸಾಮಾನ್ಯನೂ ಅದ್ಭುತ ವ್ಯಕ್ತಿಯಾಗಿ ಪರಿವರ್ತಿತನಾಗಿ ಬಿಡುತ್ತಾನೆ. ಸಂಸ್ಥೆ, ಸಂಘಟನೆ, ಸಾಮ್ರಾಜ್ಯಗಳಿಗೆ ಇಂತಹ ಕಾರ್ಯಕರ್ತರೇ ಅಡಿಪಾಯ. ತಮ್ಮ ಧ್ಯೇಯಸಾಧನೆಯ ಹೊರತಾಗಿ ಮತ್ತೊಂದು ಅಂತಹವರ ಜೀವನದಲ್ಲಿರುವುದಿಲ್ಲ. ‘ಧ್ಯೇಯ ಜನಿಸಿತು ದೇಹ ಧರಿಸಿ’ ಎಂಬ ಸಾಲುಗಳು ಇಂತಹವರಿಗಾಗಿಯೇ ಮೀಸಲು. ತಾನಾಜಿ ಮಾಲಸುರೆ ಇಂತಹ ಒಬ್ಬ ಕಾರ್ಯಕರ್ತ. ಸ್ವರಾಜ್ಯ, ಹಿಂದೂ ಸಾಮ್ರಾಜ್ಯ ಸ್ಥಾಪನೆಯೆಡೆಗಿನ ಈತನ ನಿಷ್ಠೆ ಅಚಲವಾದದ್ದು. ಶಿವಾಜಿ ಕಾರ್ಯಕ್ಕಾಗಿ ಆತನ ಸಮರ್ಪಣೆ ಎಣೆಯಿಲ್ಲದ್ದು. ಆದರೆ ಅದು ಶಿವಾಜಿಯೆಂಬ ವ್ಯಕ್ತಿಯ ಕುರಿತಾಗಿನ ಕುರುಡು ಪ್ರೇಮವಾಗಿರದೇ ರಾಷ್ಟ್ರನಿಷ್ಠೆಯ ನೇಮವಾಗಿತ್ತು.
ಇಂತಹ ವೀರವ್ರತಿಗಳಿದ್ದರೆ ಯಾವುದೇ ಕಾರ್ಯವೂ ಅಸಾಧ್ಯವಲ್ಲ. ಈಗಲೂ ಆ ಪುಣೆಯ ಸಮೀಪದಲ್ಲಿಯೇ ಇರುವ ಸಿಂಹಗಡದ ವೀಕ್ಷಣೆ ಮಾಡುವವರಿಗೆ ಆ ಅಗಾಧವೆನಿಸುವ ಪ್ರಚಂಡ ಪರಾಕ್ರಮದ ಪ್ರಸಂಗಗಳು ಕಣ್ಮುಂದೆ ಹಾದು ಹೋಗಿ ರೋಮಾಂಚನವಾಗುತ್ತದೆ, ಹೃದಯ ಕಂಪಿಸುತ್ತದೆ, ಅಭಿಮಾನದಿಂದ ಎದೆಯುಬ್ಬುತ್ತದೆ.
- ಸಂತೋಷ್ ಜಿ ಆರ್