ನಕ್ಸಲರು ಮತ್ತೆ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಛತ್ತೀಸ್‌ಗಢದ ದಂತೇವಾಡದಲ್ಲಿ ಇತ್ತೀಚೆಗೆ ೭೬ ಮಂದಿ ಸಿ.ಆರ್.ಎಫ಼್ ಯೋಧರನ್ನು ಹತ್ಯೆಗೈಯುವ ಮೂಲಕ ಪ್ರಜಾಪ್ರಭುತ್ವದ ವಿರುದ್ಧದ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಛತ್ತೀಸ್‌ಗಡ್‌ದ ದಾಂತೇವಾಡದ ದಟ್ಟ ಅರಣ್ಯದಲ್ಲಿ ೧೦೦೦ ನಕ್ಸಲರಿದ್ದ ಗುಂಪೊಂದು ಎರಡು ತಂಡಗಳಾಗಿ ಈ ಕಾರ್ಯವನ್ನು ನಡೆಸಿದೆ. ಸಿ.ಆರ್.ಪಿ.ಎಫ್. ಕ್ಯಾಂಪಿನಿಂದ ಸುಮಾರು ಮೂರು ಕಿ.ಮೀ. ಸುತ್ತಳತೆಯಲ್ಲಿನ ಎಲ್ಲಾ ಮರಗಳ ಬುಡಗಳಲ್ಲೂ ಪ್ರಬಲ ಸ್ಫೋಟಕಗಳನ್ನು ತುಂಬಿತ್ತು. ಆ ಮೂರು ಕಿ.ಮೀ. ಸುತ್ತಳತೆಯಲ್ಲಿ ಎಲ್ಲೆಲ್ಲಿ ನಮ್ಮ ಜವಾನರು ಅಡಗಿದರೋ ಅಲ್ಲೆಲ್ಲಾ ಆ ಮರಗಳು ಸ್ಫೋಟ ಗೊಂಡು ನಮ್ಮ ಜವಾನರೆಲ್ಲಾ ಹುತಾತ ರಾದರು. ಇತ್ತೀಚಿನ ದಿನಗಳಲ್ಲಿನ ನಕ್ಸಲ ರಿಂದಾದ ಅತ್ಯಂತ ಬರ್ಬರ ಕಾರ್ಯ ಇದು.
ಹಲವು ವರ್ಷಗಳಿಂದ ಕರ್ನಾಟಕವೂ ಸೇರಿದಂತೆ ದೇಶದ ಹಲವು ಭಾಗದಲ್ಲಿ ಈ ನಕ್ಸಲ್ ಹೋರಾಟದ ಪರಿಣಾಮವಾಗಿ ಸಾವಿರಾರು ಯೋಧರು ಮತ್ತು ಜನ ಸಾಮಾನ್ಯರು ಬಲಿಯಾಗಿದ್ದಾರೆ. ದೇಶದ ಭದ್ರತೆಗಿಂತ ತಮ್ಮ ವೈಯಕ್ತಿಕ ಹಿತಾಸಕ್ತಿಗಳು ಮುಖ್ಯವಾಗಿರುವ ರಾಜಕಾರಣಿಗಳು ಹಾಗೂ ತಮ್ಮ ಬರಹ-ಭಾಷಣಗಳ ಮೂಲಕ ನಕ್ಸಲರಿಗೆ ಬೆಂಬಲ ನೀಡಿ ಅವರ ಪರವಾಗಿ ವಾದಿಸುವ ಕೆಲವು ಬುದ್ಧಿಜೀವಿಗಳೂ ಈ ಹತ್ಯೆಗೆ ಪರೋಕ್ಷ ಕಾರಣರಲ್ಲವೇ?
- ಎರಡು ದಾರಿ, ಎರಡು ಧ್ಯೇಯ ಮತ್ತು ಎರಡು ವಿಭಿನ್ನ ಅಂತ್ಯ!: ಇತ್ತೀಚೆಗೆ ನಿಧನರಾದ ಹಿರಿಯ ಆರೆಸ್ಸೆಸ್ ಕರ್ಮಯೋಗಿ ನಾನಾಜಿ ದೇಶಮುಖ್ ಅವರು ವನವಾಸಿಗಳ ಅಭ್ಯುದಯಕ್ಕಾಗಿ ತಮ್ಮ ಜೀವನದ ಬಹುತೇಕ ಸಮಯವನ್ನು ಮುಡಿಪಾಗಿಟ್ಟವರು. ಬದುಕಿನುದ್ದಕ್ಕೂ ಇತರರಿಗೆ ನೆರವಾಗಿದ್ದ ಅವರು ಮರಣಾನಂತರವೂ ತಮ್ಮ ದೇಹದಾನ ಮಾಡುವ ಮೂಲಕ ಆದರ್ಶಪ್ರಾಯರಾದರು. ವನವಾಸಿಗಳಿಗಾಗಿ ಬದುಕಿದ ನಾನಾಜಿ ಈ ರೀತಿ ನಮ್ಮ ನಿಷ್ಠೆಯನ್ನು ಮೆರೆದರೆ ನಕ್ಸಲ್ ಚಳುವಳಿಯ ರೂವಾರಿಯೆಂದೇ ಹೇಳಲಾಗುವ ಕಾನು ಸನ್ಯಾಲ್ ಅಂತ್ಯ ಇನ್ನೊಂದು ರೀತಿ. ತನ್ನ ಜೀವನದಲ್ಲಿ ಯಾವ ಅರ್ಥವನ್ನೂ ಕಾಣದ ಕಾನು, ತಿಂಗಳ ಹಿಂದೆ ೭೮ರ ವೃದ್ಧಾಪ್ಯದಲ್ಲಿ ಆತ್ಮಹತ್ಯೆಗೆ ಶರಣಾದರು. ಬುಡಕಟ್ಟು ಜನರ ಅಭ್ಯುದಯಕ್ಕಾಗಿ ಬದುಕಿದ ವ್ಯಕ್ತಿ ಸಾವಿನಲ್ಲೂ ಆದರ್ಶವನ್ನು ಮೆರೆದರೆ, ಬುಡಕಟ್ಟು ಜನರ ಕೈಗೆ ಬಂದೂಕು ಕೊಟ್ಟ ವ್ಯಕ್ತಿ ಜೀವನದಲ್ಲಿ ಸೋತು ಹೀನಾಯ ಸಾವನ್ನು ಪಡೆದಿದ್ದು ವಿಪರ್ಯಾಸ.
ತಾವು ಬಡವರ, ವನವಾಸಿಗಳ ಪರ ಎಂದು ಹೇಳಿಕೊಳ್ಳುವ ನಕ್ಸಲರ ಬಂದೂಕಿಗೆ ಬಲಿಯಾದವರು ಎಂತಹವರು? ಸಿ.ಆರ್.ಪಿ.ಎಫ್. ಯೋಧರಲ್ಲಿ ಬಹು ಮಂದಿ ಬಡ ಕುಟುಂಬದಿಂದಲೇ ಬಂದವರು. ಅಷ್ಟೇ ಅಲ್ಲ, ಅನೇಕ ಬುಡಕಟ್ಟು ಜನಾಂಗದ ಯುವಕರು ದೇಶದ ರಕ್ಷಣೆಗಾಗಿ ಪೋಲಿಸ್ ಇಲಾಖೆಗೆ ಸೇರಿ ಬುಡಕಟ್ಟು ಜನರ ಪರವಾದ ಹೋರಾಟವೆಂದು ಅವರು ಕರೆದುಕೊಳ್ಳುವ ನಕ್ಸಲ್ ಚಳುವಳಿಯ ಕರಾಳ ಇತಿಹಾಸದಲ್ಲಿ ಬಲಿಯಾದವರ ಪಟ್ಟಿಯಲ್ಲಿ ಸೇರಿದ್ದಾರೆ.
ಒಂದಂತೂ ಸ್ಪಷ್ಟ, ನಕ್ಸಲರಿಗೆ ಬೇಕಾಗಿರುವುದು ಬಡವರ ಹಿತವಾಗಲೀ ಜನೋದ್ಧಾರವಾಗಲೀ ಅಲ್ಲ. ಅದು ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ನಾಶಗೊಳಿಸಿ ತಮ್ಮ ಸಿದ್ಧಾಂತ ಆಧರಿತ ಸರ್ವಾಧಿಕಾರವನ್ನು ಜಾರಿಗೆ ತರುವುದು. ತಮ್ಮ ಹಿಡಿತವಿರುವ ಪ್ರದೇಶಗಳಲ್ಲಿ ಮನೆಗಳಿಂದ ಬೆದರಿಕೆ ಮೂಲಕ ಹಣ, ಆಹಾರಗಳನ್ನು ಪಡೆದುಕೊಳ್ಳುವುದು, ತಾವು ಕೊಂದ ಪೋಲಿಸ್ ಅಥವಾ ಜನರ ಬಳಿಯಿರುವ ಒಡವೆ ಮತ್ತು ಆಯುಧಗಳನ್ನು ದೋಚಿಕೊಳ್ಳುವುದು ನಡೆದು ಬಂದಿದೆ.
ನಕ್ಸಲ್ ಹೋರಾಟ ತೀವ್ರತೆಯನ್ನು ಪಡೆಯುತ್ತಿರುವ ಈ ಸಂದರ್ಭದಲ್ಲಿ ಗೃಹ ಸಚಿವರ ಕೈ ಬ ಪಡಿಸಬೇಕಾದ್ದು ದೇಶದ ಜನರ ಕರ್ತವ್ಯವಾಗಿರಬೇಕಾದಾಗ ತಮ್ಮ ಸರಕಾರದಲ್ಲಿರುವ ಸಹೋದ್ಯೋಗಿಗಳೇ ಅವರ ಬೆಂಬಲಕ್ಕೆ ನಿಲ್ಲದಿರುವುದು ವಿಪರ್ಯಾಸ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ನಕ್ಸಲರನ್ನು ಮಣಿಸಲು ತೀವ್ರ ಕಾರ್ಯ ಯೋಜನೆ ಹಾಗೂ ನಕ್ಸಲರಿಂದ ಬ್ರೈನ್ ವಾಷ್ ಗೊಳಗಾಗಿ ಅವರ ಪರ ತಿರುಗದಂತೆ ಮುಗ್ಧ ಗ್ರಾಮಸ್ಥರಿಗೆ ತಿಳುವಳಿಕೆ ನೀಡುವ ಕೆಲಸವೂ ಆಗಬೇಕಾಗಿದೆ.
ನಕ್ಸಲರೆಂದರೆ……..
ಸಾಮಾನ್ಯವಾಗಿ ಭೂರಹಿತರ ಹಾಗೂ ಬುಡಕಟ್ಟು ಜನರ ಪರವಾಗಿ ಎಂದು ಹೇಳಿಕೊಂಡು ಶಸ್ತ್ರಸಜ್ಜಿತ ಹಿಂಸಾತ್ಮಕ ಹೋರಾಟ ನಡೆಸುವ ಒಂದು ಗುಂಪನ್ನು ನಕ್ಸಲೀಯರೆನ್ನಬಹುದು. ಆರ್ಥಿಕವಾಗಿ ಅತ್ಯಂತ ತೀರಾ ಕೆಳಮಟ್ಟವನ್ನು ಹೊಂದಿರುವ ಭೂರಹಿತರು, ಕೂಲಿಗಳು, ಬುಡಕಟ್ಟು ಜನಾಂಗ ಮುಂತಾದವರು ಸಮಾಜದ ಆರ್ಥಿಕ ವ್ಯವಸ್ಥೆಯ ವಿರುದ್ಧ ಬಂಡೆದ್ದು ಕಟ್ಟಿಕೊಂಡ ಗುಂಪಿದು ಎಂದು ಅವರು ಹೇಳಿಕೊಳ್ಳುತ್ತಾರೆ. ಇವರಲ್ಲಿ ಅವಿದ್ಯಾವಂತರು ಹಾಗೂ ವಿದ್ಯಾವಂತರೂ ಇದ್ದಾರೆ. ಆರ್ಥಿಕ ವರ್ಗರಹಿತ ಸಮಾಜದ ನಿರ್ಮಾಣಕ್ಕಾಗಿ ಹೋರಾಡುತ್ತೇವೆ ಎಂದು ಅವರು ಹೇಳುತ್ತಾರೆ. ವರ್ಗ ರಹಿತ ಸಮಾಜದ ನಿರ್ಮಾಣಕ್ಕಾಗಿ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿ ರುವುದು ಮಾತ್ರ ವಿಪರ್ಯಾಸ.
ನಕ್ಸಲೀಯರು ಅತ್ಯುತ್ತಮ ಗೆರಿಲ್ಲಾ ಯುದ್ಧ ಪರಿಣಿತರೂ, ಹೆಚ್ಚೆಚ್ಚು ಗ್ರಾಮೀಣ ಹಾಗೂ ಆದಿವಾಸಿಗಳು ವಾಸಿಸುವ ಸ್ಥಳಗಳಲ್ಲಿ ಅಂದರೆ ಹೆಚ್ಚು ದಟ್ಟಾರಣ್ಯಗಳಿರುವ ಪ್ರದೇಶಗಳಲ್ಲಿ ಕಂಡುಬರುತ್ತಾರೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗಿನ ಜಾರ್ಖಂಡ್, ಛತ್ತೀಸ್ ಘಡ್, ಮಧ್ಯಪ್ರದೇಶ, ಪೂರ್ವ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕದ ದಕ್ಷಿಣ ಭಾಗಗಳು, ಹಾಗೂ ಪಶ್ಚಿಮ ಓರಿಸ್ಸಗಳಲ್ಲಿ ಹೆಚ್ಚೆಚ್ಚು ನಕ್ಸಲೀಯರು ಕಂಡು ಬರುತ್ತಾರೆ. ಇವೆಲ್ಲಾ ಕರಾವಳಿ ತೀರದಿಂದ ಅತ್ಯಂತ ಒಳಗಿನ ಪ್ರದೇಶಗಳೇ. ಆಂಧ್ರಪ್ರದೇಶ, ಒರಿಸ್ಸಾ ಹಾಗೂ ಮಹಾರಾಷ್ಟ್ರಗಳಲ್ಲಿ ಪಿ.ಡಬ್ಲ್ಯು.ಜಿ(ಪೀಪಲ್ ವಾರ್ ಗ್ರೂಪ್) ಹೆಚ್ಚು ಕ್ರಿಯಾತ್ಮಕವಾಗಿದ್ದರೆ ಬಿಹಾರ, ಜಾರ್ಖಂಡ್ ಹಾಗೂ ಛತ್ತೀಸ್‌ಗಡ್‌ದ ಉತ್ತರ ಭಾಗಗಳಲ್ಲಿ ಮಾವೋ ಕಮ್ಯೂನಿಸ್ಟರು ಹೆಚ್ಚು ಕ್ರಿಯಾತ್ಮಕವಾಗಿದ್ದಾರೆ.
೧೯೮೦ರ ದಶಕದಲ್ಲಿ ಸುಮಾರು ೩೦,೦೦೦ ಸದಸ್ಯರನ್ನೊಳಗೊಂಡ, ೩೦ನಕ್ಸಲ್ ಗುಂಪುಗಳು ಕ್ರಿಯಾತ್ಮಕವಾಗಿದ್ದವೆಂದು ವರದಿಗಳು ಹೇಳುತ್ತವೆ. ೨೦೦೪ ರಲ್ಲಿನ ಕೇಂದ್ರ ಗೃಹ ಇಲಾಖೆಯ ಸಮೀಕ್ಷೆಯಂತೆ ಸುಮಾರು ೯೩೦೦ ಭೂಗತರಾಗಿದ್ದ ನಕ್ಸಲೀಯರು ೬೫೦೦ ಪರವಾನಿಗೆಯ ಹಾಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪರವಾನಿಗೆ ಇಲ್ಲದ ದೇಶೀಯ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಕ್ರಿಯಾತ್ಮಕವಾಗಿದ್ದರೆಂದು ತಿಳಿಸುತ್ತದೆ.
ನಕ್ಸಲರ ರಕ್ತಸಿಕ್ತ ಇತಿಹಾಸ:
ಭಾರತೀಯ ಗೃಹ ವ್ಯವಹಾರಗಳ ಇಲಾಖೆಯು ಆಯಾ ವರ್ಷಗಳಲ್ಲಿ ನಕ್ಸಲರಿಂದ ನಡೆದ ಹತ್ಯೆಗಳ ಬಗ್ಗೆ ಬಿಡುಗಡೆಗೊಳಿಸಿದ ವರದಿಯಂತೆ:
೧೯೯೯ ರಲ್ಲಿ ಸುಮಾರು ೩೫೦ ಜನ ನಕ್ಸಲರಿಂದ ಹತ್ಯೆಗೀಡಾದರು. ನಕ್ಸಲ್ ಪಡೆಯ ೩ ಉನ್ನತ ಕಮಾಂಡರ್‌ಗಳು ಪೋಲೀಸರಿಂದ ಕೊಲ್ಲಲ್ಪಟ್ಟರು.
೧೯೯೯ರಲ್ಲಿ ತನ್ನ ಮೂರು ಜನ ಉನ್ನತ ಕಮಾಂಡರ್‌ಗಳನ್ನು ಕಳೆದುಕೊಂಡ ನಕ್ಸಲ್ ಪಡೆ, ೨೦೦೦ ದಲ್ಲಿ ಆಂಧ್ರ ಪ್ರದೇಶದಲ್ಲಿ (ಪೀಪಲ್ ವಾರ್ ಗ್ರೂಪ್) ತನ್ನ ಧಾಳಿಯನ್ನು ಚುರುಕುಗೊಳಿಸಿತು. ಸುಮಾರು ೩೦೦೦ ಸಂಖ್ಯೆಯ ನಕ್ಸಲರು ಶಸ್ತ್ರಾಸ್ತ್ರ ಸಜ್ಜಿತರಾಗಿ ಸಮಯಕ್ಕಾಗಿ ಕಾದರು. ಬೇರೆ ಬೇರೆ ಪ್ರಕರಣಗಳಲ್ಲಿ ಸುಮಾರು ೫೦ ಜನ ಹತ್ಯೆಗೀಡಾದರು.
೨೦೦೧ ರಲ್ಲಿ ನಕ್ಸಲರ ಹೋರಾಟ ಮತ್ತೂ ಚುರುಕುಗೊಂಡು, ಸುಮಾರು ೧೦೦ ಜನ ಹತ್ಯೆಗೀಡಾದ ಬೆನ್ನಲ್ಲೆ ಆಂಧ್ರ ಸರ್ಕಾರ ನಕ್ಸಲರನ್ನು ಮಾತುಕತೆಗೆ ಕರೆಯಿತು.
ಮಾತುಕತೆ ವಿಫಲಗೊಂಡ ಬೆನ್ನಲ್ಲೆ ೨೦೦೨ ರಲ್ಲಿಯೂ ಸುಮಾರು ೧೦೦ ಜನರ ಹತ್ಯೆ ನಕ್ಸಲರಿಂದಾಯಿತು. ಆಂಧ್ರ ಸರ್ಕಾರ ಪಿ.ಡಬ್ಲ್ಯು.ಜಿ. ಯ ಮೇಲಿನ ನಿಷೇಧವನ್ನು ಪುನ: ವಿಸ್ತರಿಸಿತು.
೨೦೦೩ ರಲ್ಲಿ ನಕ್ಸಲರು ಮತ್ತು ಪೋಲಿಸ್ ಕಾಳಗ ಪುನ: ಹಳೆಯ ಜಾಡಿನಲ್ಲೇ ಮುಂದುವರಿದು ಸುಮಾರು ೩೦೦ ಜನ ಹತ್ಯೆಗೀಡಾದರು. ಆಂಧ್ರ ಮುಖ್ಯಮಂತ್ರಿಯ ಮೇಲೂ ಹತ್ಯಾ ಪ್ರಯತ್ನ ನಡೆಯಿತು.
೨೦೦೪ ರಲ್ಲಿ ೪೦ ಜನರ ಹತ್ಯೆ- ಅದರಲ್ಲಿ ಹೆಚ್ಚಿನವರು ಪೋಲೀಸರು ಮತ್ತು ತೆಲುಗು ದೇಶಂ ಪಾಟಿ೯ಯ ಸದಸ್ಯರೇ ಆಗಿದ್ದರು.
೨೦೦೫ ರಲ್ಲಿ ಪರಿಸ್ಥಿತಿ ಸ್ವಲ್ಪ ತಹಬಂದಿಗೆ- ಪಿ.ಡ್ಬ್ಲ್ಯು.ಜಿ. ಭಾರತೀಯ ಕಮ್ಯೂನಿಸ್ಟ್ ಪಾರ್ಟಿ (ಮಾವೋ)ಯೊಂದಿಗೆ ವಿಲೀನಗೊಂಡಿತು. ಈಗ ಏಕೀಕೃತ ನಕ್ಸಲ್ ಪಡೆ ಭಾರತದ ಸುಮಾರು ಎಂಟು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ನೇಪಾಲದಲ್ಲಿ ಅರಸೊತ್ತಿಗೆಯನ್ನು ಕಿತ್ತುಹಾಕುವ ಚಳುವಳಿಯಲ್ಲಿ ಪಾಲೊಂಡ ನೇಪಾಲೀ ಮಾವೋಗಳಿಗೆ ಭಾರತೀಯ ಮಾವೋಗಳೂ ಸಹಾಯಹಸ್ತ ನೀಡಿದರು.
೨೦೦೬ ರಲ್ಲಿ ಸುಮಾರು ೫೦೦-೭೦೦ ಜನ ಹತ್ಯೆಗೀಡಾದರು. ಸರ್ಕಾರವು ನಕ್ಸಲರನ್ನು ಎದುರಿಸಲು ಗ್ರಾಮ ಸೈನಿಕರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ನೀಡಲಾರಂಭಿಸಿತು. ಸರ್ಕಾರದ ಪ್ರಯತ್ನ ಎಷ್ಟೇ ಆದರೂ, ನಕ್ಸಲರ ಪ್ರಾಬಲ್ಯ ಹೆಚ್ಚಾಗುತ್ತಲೇ ಹೋಯಿತು. ಅವರ ಪ್ರಾಬಲ್ಯವಿದ್ದ ಪ್ರಾಂತ್ಯಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು.
೨೦೦೭ ರಲ್ಲಿ ಸರ್ಕಾರ ಹಾಗೂ ನಕ್ಸಲರ ಕಾಳಗ ಅತಿ ಭೀಕರತೆಯನ್ನು ಮುಟ್ಟಿತು. ಇಡೀ ವರ್ಷ ನಕ್ಸಲರ ಕೇಕೆಯೇ-ಕೇಕೆ. ಸುಮಾರು ೬೫೦ ಜನ ಹತ್ಯೆಗೀಡಾದರು. ೨೦೦೭ ಮಾರ್ಚ್ ತಿಂಗಳಿನಲ್ಲಿ ೪೦೦ ಜನರ ನಕ್ಸಲ್ ಪಡೆಯು ಛತ್ತೀಸ್ ಘಡದಲ್ಲಿ ಆರಕ್ಷಕ ಠಾಣೆಯನ್ನು ಮುತ್ತಿಗೆ ಹಾಕಿ, ೧೨ ಜನ ಪೋಲೀಸರನ್ನು ಹತ್ಯೆಗೈಯಿತಲ್ಲದೆ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತು. ಸ್ಥಳೀಯ ನಾಗರೀಕರಲ್ಲಿ ಭಯದ ವಾತಾವರಣ ಮೂಡಿತಲ್ಲದೆ, ಜನರು ಸರ್ಕಾರ ಹಾಗೂ ನಕ್ಸಲರ ನಡುವೆ ಯಾರ ಪರ ವಹಿಸುವುದು ಉತ್ತಮ ಎಂಬ ಆಯ್ಕೆಯಲ್ಲಿ ತೊಡಗಿದರು.
೨೦೦೮ರಲ್ಲಿ ಸರ್ಕಾರ ಮತ್ತು ನಕ್ಸಲರ ಕಾಳಗ ಮತ್ತೂ ಭೀಕರತೆಯನ್ನು ಹುಟ್ಟಿಸಿತು. ಸುಮಾರು ೮೦೦ ಜನರು ಹತ್ಯೆಗೀಡಾದರಲ್ಲದೆ, ಅವರಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಜನ ಅಮಾಯಕ ನಾಗರೀಕರಾಗಿದ್ದರು. ವರದಿಗಳ ಪ್ರಕಾರ ನಕ್ಸಲರ ಪಡೆಯಲ್ಲಿ ಹೆಚ್ಚು ಜನ ಮಕ್ಕಳನ್ನು ಶಸ್ತ್ರಾಸ್ತ್ರ ತರಬೇತಿ ನೀಡಲು ಬಳಸಿಕೊಳ್ಳಲಾಗಿತ್ತು.
೨೦೦೯ರಲ್ಲಿ ನಕ್ಸಲರಿಂದ ಹತರಾದವರ ಸಂಖ್ಯೆ ೯೧೭ ಕ್ಕೆ ಮುಟ್ಟಿತು. ಅವರಲ್ಲಿ ೩೧೭ ಜನ ಆರಕ್ಷಕ ಪಡೆಯವರಾದರೆ ೬೦೦ ಜನ ನಾಗರೀಕರಾಗಿದ್ದರು. ಬದಲಾಗಿ ಸುಮಾರು ೨೧೭ ಜನ ನಕ್ಸಲರ ವಧೆ ಪೋಲೀಸರಿಂದ ಆಯಿತು.
ಬಿ.ಬಿ.ಸಿ ವರದಿಯ ಪ್ರಕಾರ ಈ ೨೦ ವರುಷಗಳ ಅವಧಿಯಲ್ಲಿ ನಕ್ಸಲರು ಸುಮಾರು ೬೦೦೦ ಕ್ಕೂ ಹೆಚ್ಚು ಜನರ ಪ್ರಾಣಹರಣ ಮಾಡಿದ್ದಾರೆ.
ಇತ್ತೀಚೆಗೆ ನಕ್ಸಲರಲ್ಲಿಯೇ ಕೆಲವು ಸಂಘಟನೆಗಳು ರಾಜಕೀಯ ಶಕ್ತಿಗಳಾಗಿ ರೂಪುಗೊಂಡಿದ್ದು ಸಂಸತ್ ಚುನಾವಣೆ ಗಳಲ್ಲೂ ಸ್ಪರ್ಧಿಸುತ್ತಿವೆ. (ಭಾರತೀಯ ಕಮ್ಯೂನಿಸ್ಟ್ ಪಾರ್ಟಿ (ಮಾರ್ಕ್ಸಿಸ್ಟ್-ಲೆನಿನಿಸ್ಟ್)-ಲಿಬರೇಷನ್) ಭಾರತೀಯ ಕಮ್ಯೂನಿಸ್ಟ್ ಪಾರ್ಟಿ (ಮಾವೋ) ಮತ್ತು ಭಾರತೀಯ ಕಮ್ಯೂನಿಸ್ಟ್ ಪಾರ್ಟಿ (ಮಾರ್ಕ್ಸಿಸ್ಟ್-ಲೆನಿನಿಸ್ಟ್)-ಜನಶಕ್ತಿಯ ಸದಸ್ಯರುಗಳು ಮಾತ್ರ ಇನ್ನೂ ಸರ್ಕಾರದೊಂದಿಗೆ ಗೆರಿಲ್ಲಾ ಯುದ್ಧದಲ್ಲಿಯೇ ತೊಡಗಿವೆ.