ಪೀಡಿತ ಗಿರಿಜನರ ಕಣ್ಣೀರು ಒರಿಸಿ ನೆರವಿಗೆ ನಿಂತ ಪೇಜಾವರ ಶ್ರೀಗಳು

ಅತ್ಯಡ್ಕ ಒಡೇರಮಠದಲ್ಲಿ ಒಂದು ದಿನ,
ಒಡೇರಮಠ ಎನ್‌ಕೌಂಟರ್ ಎಂದೇ ಪ್ರಸಿದ್ಧವಾದ ನಕ್ಸಲ್ ಎನ್‌ಕೌಂಟರ್‌ನಲ್ಲಿ ಐವರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಶೃಂಗೇರಿ ಸಮೀಪದ ಮೆಣಸಿನಹಾಡ್ಯದ ದಟ್ಟ ಕಾಡಿನ ನಡುವಿನ ಅತ್ಯಡ್ಕದ ರಾಮೇಗೌಡರ ಒಂಟಿ ಮನೆಯಲ್ಲಿ ಅಂದು ಗೌತಮ್ ಎಂಬ ನಕ್ಸಲ್ ಯುವಕ ತಂಗಿದ್ದ. ಖಚಿತ ಮಾಹಿತಿ ತಿಳಿದ ಪೊಲೀಸ್ ಪಡೆಯೊಂದು ಬೆಳ್ಳಂಬೆಳಿಗ್ಗೆ ಅಲ್ಲಿಗೆ ಧಾವಿಸಿತ್ತು. ಮೇಲೆ ನೂರು ಅಡಿ ಮೇಲೆ ರಸ್ತೆಯಲ್ಲಿ ಹತ್ತಾರು ಪೊಲೀಸರು ಕುಳಿತಿದ್ದರು. ಧರೆ ಇಳಿದು ಬಂದವರು ಇಬ್ಬರೇ. ಮನೆ ಬಾಗಿಲು ತಟ್ಟಿದ ಒಬ್ಬ ಪೊಲೀಸ್ ಯಾರಿದ್ದಾರೆ ಮನೆಯಲ್ಲಿ ಎಂದು ವಿಚಾರಿಸಿದ ಬಾಗಿಲು ತೆಗೆದ ಕಾವೇರಮ್ಮ ಯಾರೂ ಇಲ್ಲ ಎಂದರು. ಒಬ್ಬ ಪೊಲೀಸ್ ಹೊರಗೆ ನಿಂತಿದ್ದರೆ ಮತ್ತೊಬ್ಬ ಮನೆಯೊಳಗೆ ಹೆಜ್ಜೆ ಇಟ್ಟ. ಅವನು ಎರಡು ಹೆಜ್ಜೆ ಇಟ್ಟಿದನೋ ಇಲ್ಲವೋ ಅವನ ಭಜಕ್ಕೆ ತಾಗಿದಂತೆ ಗುಂಡೊAದು ಹಾರಿತು. ರಕ್ತ ಸುರಿಯತೊಡಗಿತು. ಕೈಯಲ್ಲಿದ್ದ ಗನ್ ಅನ್ನು ಆತ ಚಾಲೂ ಮಾಡಿದ. ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿಗೆ ಮೇಲೆ ಕುಳಿತು ಗುಂಡು ಹಾರಿಸಿದ್ದ ಗೌತಮ್‌ನತ್ತ ಇಬ್ಬರು ಪೊಲೀಸರೂ ಗುಂಡು ಹೊಡೆದರು. ಆತ ಕಿರುಚುತ್ತಾ ಪ್ರಾಣ ಬಿಟ್ಟ.
ಮನೆಯತ್ತ ತಿರುಗಿದ ಗನ್ ಕಾವೇರಮ್ಮ ಆಕೆಯ ಪತಿ ರಾಮೇಗೌಡ್ಲುವನ್ನು ಹೊಡೆದುರುಳಿಸಿತು. ಅಲ್ಲೇ ತಂಗಿದ್ದ ಪರಮೇಶ್ವರ ಮತ್ತು ಸುಂದರೇಶರೂ ಹತರಾದರು. ಮೇಲಿದ್ದ ಪೊಲೀಸರು ಕೆಳ ಬಂದರು. ದಶದಿಕ್ಕುಗಳಿಗೂ ಗುಂಡು ಹೊಡೆದರು. ಒಂದೆರಡು ಜಾನುವಾರುಗಳೂ ಸತ್ತು ಬಿದ್ದವು. ಆ ಮನೆಯಲ್ಲಿ ಪ್ರಶಾಂತ ಮತ್ತು ಪ್ರವೀಣ ಎಂಬ ಇಬ್ಬರು ಮಕ್ಕಳಿದ್ದರು. ಪೊಲೀಸರೇ ಆ ಮಕ್ಕಳಿಬ್ಬರನ್ನು ಆ ಜಾಗದಿಂದ ದೂರ ಅಟ್ಟಿಬಂದರು. ಬಹು ಹೊತ್ತಿನ ತನಕ ಅವರು ಗುಂಡು ಹಾರಿಸುತ್ತಲೇ ಇದ್ದರು. ನಕ್ಸಲರು ಅಲ್ಲೇ ಎಲ್ಲೋ ಅಡಗಿ ತಮ್ಮ ಮೇಲೆ ದಾಳಿ ಮಾಡುತ್ತಾರೆ ಎಂಬ ಭಯದಿಂದ ಬಹಳ ಹೊತ್ತು ಪೊಲೀಸರು ಗುಂಡು ಹಾರಿಸುತ್ತಲೇ ಹೋದರು. ಸುದ್ಧಿ ಮೇಲಾಧಿಕಾರಿಗಳಿಗೆ ತಲುಪಿ ಅವರು ಸ್ಥಳಕ್ಕೆ ಧಾವಿಸಿದರು. ಸುತ್ತಮುತ್ತಲಿನ ಜನ ಗುಂಡಿನ ಶಬ್ಧ ಕೇಳಿ ಅತ್ತ ಬರತೊಡಗಿದರು. ಘಟನೆ ನಡೆದ ಸ್ಥಳಕ್ಕೆ ಮಾಧ್ಯಮದವರೂ ಸೇರಿದಂತೆ ಯಾರೂ ಬಾರದಂತೆ ಪೊಲೀಸರು ತಡೆದರು. ಹಂಚಿನ ಆ ಮನೆಯ ಹಂಚುಗಳೆಲ್ಲಾ ಗುಂಡಿನ ದಾಳಿಗೆ ಒಡೆದೊಡೆದು ಬಿದ್ದಿತ್ತು. ಮನೆಯಲ್ಲಿ ಮನುಷ್ಯರದ್ದು ಐದು ಹೆಣ, ಸತ್ತ ಜನುವಾರುಗಳನ್ನು ದೂರ ಎಳೆದೊಯ್ದು ಕಮರಿಗೆ ಹಾಕಿದರು. ಸುದ್ಧಿ ಹತ್ತು ಊರಿಗೂ ತಲುಪಿತು. ತಮ್ಮ ಬಂದು ಒಬ್ಬನ ಮನೆಯಲ್ಲಿ ನಕ್ಸಲನೊಬ್ಬ ಮತ್ತೆ ನಾಲ್ವರು ಹತರಾದ ಸುದ್ಧಿ ತಿಳಿದ ಜನ ಅಲ್ಲಿಗೆ ಧಾವಿಸತೊಡಗಿದರು. ಅಷ್ಟರಲ್ಲಾಗಲೇ ಟಿವಿಗಳಲ್ಲಿ ಸುದ್ಧಿ ಭಿತ್ತರವಾಗುತ್ತಿತ್ತು.
ನಕ್ಸಲ್ ಬೆಂಬಲಿಗರ ದೊಡ್ಡ ಪಡೆಯೇ ಅಲ್ಲಿಗೆ ಬಂದಿತ್ತು. ಇವತ್ತು ಪೊಲೀಸರನ್ನ ಸುಮ್ಮನೆ ಬಿಡಬಾರದು. ಒಂದಿಷ್ಟು ಹೆಣ ಬೀಳಲಿ. ಅಲ್ಲಿಂದ ಹೆಣ ಎತ್ತಲು ಬಿಡಬಾರದು. ರಾಜ್ಯದ ಮುಖ್ಯಮಂತ್ರಿಗಳೇ ಬರಲಿ. ಸತ್ತವರ ಬಂಧುಗಳಿಗೆ ಪರಿಹಾರ ಕೊಡಲಿ. ಹತ್ಯೆ ಮಾಡಿದ ಪೊಲೀಸರನ್ನು ಜೈಲಿಗೆ ಕಳಿಸಲಿ. ಮುಖ್ಯಮಂತ್ರಿ ಕ್ಷಮೆ ಕೇಳಲಿ. ಹೀಗೆ ಒಂದೆರಡಲ್ಲ ಹತ್ತು ಬೇಡಿಕೆಗಳನ್ನು ನಕ್ಸಲ್ ಬೆಂಬಲಿಗರು ಗಿರಿಜನರ ಮೂಲಕ ಮುಂದಿಟ್ಟರು. ಅಲ್ಲಿಗೆ ಆಗಲೇ ಎಸ್‌ಪಿ, ಡಿಐಜಿ ಮತ್ತು ಕಂದಾಯ ಇಲಾಖೆಯ ಎಸಿ ಮತ್ತು ತಹಶೀಲ್ದಾರ್ ತಲುಪಿದರು. ಆ ಊರಿಗೆ ಬರುತ್ತಿದ್ದ ಎಲ್ಲಾ ರಸ್ತೆಗಳ ಮೇಲೂ ಬೃಹತ್ ಗಾತ್ರದ ಮರ ಕಡಿದುರುಳಿಸಲಾಯಿತು. ೬೦-೭೦ ಸಂಖ್ಯೆಯ ಪೊಲೀಸರಿದ್ದರೆ ಅವರ ಹತ್ತರಷ್ಟು ಜನರಿದ್ದರು. ಎ.ಸಿ.ಯ ಜೀಪನ್ನು ಸುಟ್ಟು ಹಾಕಲಾಯಿತು. ಆಗಲೇ ಕತ್ತಲಾವರಿಸಿತ್ತು. ಅಕ್ಷರಶಹಃ ಆಗ ನಕ್ಸಲ್ ಬೆಂಬಲಿಗರ ಹಾರಾಟ. ಒಬ್ಬೊಬ್ಬರನ್ನು ಕತ್ತರಿಸಿ ಹಾಕುವ ಮಾತು ಬರುತ್ತಿತ್ತು. ಅಲ್ಲಿದ್ದ ಸರ್ಕಾರಿ ನೌಕರರಿಗೆ ಅಭದ್ರತೆ ಭಾವನೆ ಕಾಡತೊಡಗಿತು. ತಾವು ಸುತ್ತುವರಿಯಲ್ಪಟ್ಟಿದ್ದೂ ತಮ್ಮತ್ತ ಹೊರಗಿನ ಪಡೆ ಬಾರದಂತೆ ರಸ್ತೆ ತಡೆದಿದ್ದೂ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಇದ್ದದ್ದರಲ್ಲೇ ಚಾಣಾಕ್ಷ ಅಧಿಕಾರಿಯೊಬ್ಬ ಎಲ್ಲರ ಕಣ್ಣು ತಪ್ಪಿಸಿ ಗುಡ್ಡ ಏರಿದರು. ಅಲ್ಲಿ ಅದೃಷ್ಟಕ್ಕೆ ಮೊಬೈಲ್ ಸಿಗ್ನಲ್ ಇದ್ದಿತ್ತು. ಸಿಕ್ಕಸಿಕ್ಕಲ್ಲೆಲ್ಲಾ ಕರೆ ಮಾಡಿದರೂ ಕರೆ ಆ ರಾತ್ರಿ ಸ್ವೀಕರಿಸುವವರಿರಲಿಲ್ಲ. ಅಂತೂ ಮಂಗಳೂರು ಎಸ್‌ಪಿ ಕರೆಗೆ ಸಿಕ್ಕರು. ತಮ್ಮ ಸ್ಥಿತಿಯನ್ನು ಅವರಿಗೆ ಮುಟ್ಟಿಸಿದ ಅಧಿಕಾರಿ ತಕ್ಷಣ ಎಲ್ಲಾ ಕಡೆಯಿಂದ ಪಡೆ ಬರುವಂತೆ ವಿನಂತಿಸಿದರು.
ಇತ್ತ ನಕ್ಸಲ್ ಬೆಂಬಲಿಗರಿಗೆ ರಾಜ್ಯ ಮುಖ್ಯಮಂತ್ರಿ ಬೆಳಿಗ್ಗೆ ಬರುತ್ತಾರೆ ಎಂದು ತಿಳಿಸಲಾಗಿತ್ತು. ಜನರೆಲ್ಲಾ ಬೊಬ್ಬೆ ಹೊಡೆದು ಸುಸ್ತಾಗಿದ್ದರು. ನಡುರಾತ್ರಿ ದಾಟಿದ ಮೇಲೆ ದೂರದಿಂದ ಒಂದರ ಹಿಂದೊAದು ವಾಹನ ಬರುತ್ತಿರುವುದು ಕಾಣಿಸಿತು. ರಸ್ತೆಯನ್ನು ಪೊಲೀಸರು ತೆರವುಗೊಳಿಸಿ ಸುತ್ತಲೂ ಸುತ್ತುವರೆದಿದ್ದರು. ಐದೂ ಹೆಣಗಳನ್ನು ಎತ್ತಿ ವಾಹನಕ್ಕೆ ತುಂಬಲಾಯಿತು. ಅಡ್ಡ ಬಂದವರ ಮೇಲೆ ಲಾಟಿ ಬೀಸಿದರು. ಬೆಚ್ಚಗೆ ಮನೆಯೊಂದರಲ್ಲಿ ಕುಳಿತು ಜನರನ್ನು ಪ್ರಚೋದಿಸುತ್ತಿದ್ದ ನಕ್ಸಲ್ ಬೆಂಬಲಿಗ ನಾಯಕರನ್ನು ಪೊಲೀಸರು ಬಂಧಿಸಿ ಜೀಪು ಹತ್ತಿಸಿದರು. ನಾಲ್ಕಾರು ಗಿರಿಜನ ಯುವಕರಿಗೆ ಏಳಲೂ ಆಗದಷ್ಟು ಲಾಟಿ ಏಟು ಬಿದ್ದಿತ್ತು. ಅವರಿನ್ನೆಲ್ಲಾ ಹೊತ್ತು ಆಸ್ಪತ್ರೆಗೆ ಸಾಗಿಸಲಾಯಿತು. ಪುನಃ ಹಗಲು ಕಳೆದು ರಾತ್ರಿ ಬರುವಷ್ಟರಲ್ಲಿ ನಾಲ್ಕೂ ಹೆಣಗಳೂ ಊರಿಗೆ ಬಂದಿಳಿದವು. ಸಮಸ್ತ ಗಿರಿಜನರ ಸಮ್ಮುಖದಲ್ಲಿ ಅಂತ್ಯಸAಸ್ಕಾರ ನಡೆಯಿತು. ಅಲ್ಲಿ ಗಿರಿಜನರ ಎಲ್ಲಾ ಹಿರಿತಲೆಗಳೂ ಇದ್ದವು. ಬೇಡಬೇಡ ಅಂದರೂ ನೀವೆಲ್ಲಾ ಬೇಡದ್ದು ಮಾಡಿದಿರಿ. ಕಂಡವರ ಮಾತು ಕೇಳಿ ಮನೆಮನೆಗೆ ನಕ್ಸಲರು ಬರುವಂತೆ ಮಾಡಿದಿರಿ. ಈಗ ನಕ್ಸಲರ ಜೊತೆ ನಮ್ಮವರೂ ಸಾಯುವಂತಾಯಿತು. ನೀವು ಕಡಿದು ಗುಪ್ಪೆ ಹಾಕಿದ್ದು ಇಷ್ಟೇ. ಇವತ್ತೇ ಕೊನೆ ಇನ್ನು ಹೊರಗಿನವರನ್ನು ಮನೆ ಸೇರಿಸಿದರೆ ನಾವೇ ಸರ್ಕಾರಕ್ಕೆ ತಿಳಿಸುತ್ತೇವೆ ಎಂದು ಹಿರಿಯರು ಕೆಂಡ ಕಾರಿದರು. ಇಡೀ ಪಶ್ಚಿಮಘಟ್ಟದಲ್ಲಿ ನಕ್ಸಲರ ಬೆನ್ನೆಲುಬು ಮುರಿಯುವಂತಾದ ಘಟನೆ ಇದು. ಇದರ ಜೊತೆ ನಕ್ಸಲ್ ಬೆಂಬಲಿಗರ ಬಣ್ಣವೂ ಬಯಲಾಯಿತು.
ಯಾವ ಸರ್ಕಾರನೂ ತಮ್ಮನ್ನು ಮುಟ್ಟದು ಎನ್ನುತ್ತಿದ್ದ ಈ ನಾಯಕರು ಜೈಲಿಗೆ ಹೋಗುವಂತಾಗಿತ್ತು. ಅವರನ್ನು ನಂಬಿ ಹಿಂದೆ ಹೋದ ತಪ್ಪಿಗೆ ಗಿರಿಜನ ಯುವಕರು ಕೇಸು, ಕೋರ್ಟು, ಲಾಟಿ ಏಟು, ಆಸ್ಪತ್ರೆ ಎಂದು ಇನ್ನಿಲ್ಲದ ಸಂಕಟ ಅನುಭವಿಸಿದ್ದರು. ಪ್ರಚೋದಿಸಿದವರಿಂದ ಯಾವ ಬೆಂಬಲವೂ ಇರಲಿಲ್ಲ. ಅವರೇ ಲಾಯರ್ ಇಡಬೇಕು. ಅವರೇ ಆಸ್ಪತ್ರೆ ಖರ್ಚು ಭರಿಸಬೇಕು. ಹೋರಾಟಕ್ಕೆ ಎಂದು ಕಂಡಕAಡಾಗಲೆಲ್ಲಾ ಗಿರಿಜನರಿಂದ ಹಣ ಎತ್ತಿದವರು ಕಷ್ಟಕಾಲದಲ್ಲಿ ಒಂದು ಸಾಂತ್ವಾನದ ನುಡಿಯನ್ನೂ ಆಡಲಿಲ್ಲ. ತಾವು ಎಲ್ಲೋ ತಪ್ಪಿದ್ದೇವೆ ಎಂಬ ಅನುಮಾನ ಗಿರಿಜನ ಯುವಕರ ಮನಸ್ಸಿಗೂ ಬಂದಿತ್ತು.
ಈ ಎಲ್ಲಾ ಘಟನೆ ನನಗೆ ನೆನಪಾಗಲು ಕಾರಣ ನಾನು ಮೊನ್ನೆಮೊನ್ನೆ ಒಡೇರಮಠ, ಅತ್ಯಡ್ಕಗಳಿಗೆ ಹೋಗಿ ಬಂದಿದ್ದರಿAದ ರಾಮೇಗೌಡ್ಲುವಿನ ಇಡೀ ಮನೆ ಅಲ್ಲಿ ಮಾಯವಾಗಿದೆ. ಅವನು ಸಾಗುವಳಿ ಮಾಡಿದ್ದ ಗದ್ದೆ ಹಾಳು ಬಿದ್ದಿದೆ. ರಸ್ತೆಯಿಂದ ಇಳಿದಿಳಿದು ಸಾಗಿದರೆ ಮನೆ ಅಲ್ಲಿತ್ತು ಎಂಬ ಕುರುಹು ಸಿಗುತ್ತದೆ. ಅಂದು ನಮ್ಮ ಜೊತೆ ಪ್ರಶಾಂತ ಇದ್ದ. ಆತ ಈಗ ಚಿಕ್ಕಮ್ಮ ಕಾಡೇಗೌಡ್ಲು ಮತ್ತು ಸುಶೀಲಮ್ಮರ ಜೊತೆ ಇದ್ದಾನೆ. ಅವನಿಗೀಗ ಪ್ರಾಯ ಬರುತ್ತಿದೆ. ಪೇಜಾವರ ಮಠದಿಂದ ಈ ಪ್ರಶಾಂತನಿಗೊAದು ನೆಲೆ ಕಲ್ಪಿಸಲು ನಿರ್ಧರಿಸಲಾಗಿದ್ದು ಅದಕ್ಕಾಗೇ ನಾಗೇಶ್ ಅಂಗೀರಸ ನನ್ನನ್ನೂ ಹರಿಕೃಷ್ಣ ಪುನರೂರರನ್ನು ಅಲ್ಲಿಗೆ ಕರೆದೊಯ್ದಿದ್ದರು. ಅನೇಕ ಪತ್ರಕರ್ತ ಗೆಳೆಯರೂ ಇದ್ದರು. ಮೆಣಸಿನಹಾಡ್ಯದ ಪಂಚಾಯಿತಿ ಸದಸ್ಯ ಗೋಪಾಲಕೃಷ್ಣ ಇದ್ದರು. ಈ ಗೋಪಾಲಕೃಷ್ಣ ದೇವೇಂದ್ರ ಎಂಬ ಸಹೋದರರು ಗಿರಿಜನ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಅತ್ಯಡ್ಕದಲ್ಲಿ ನಕ್ಸಲರಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದೇ ದೇವೆಂದ್ರ ಎಂಬ ಗುಲ್ಲೆದ್ದಿತ್ತು. ದೇವೇಂದ್ರನಿಗಾಗಿ ಒಂದೆರಡು ಬಾರಿ ಮುಂಡಗಾರು ಲತಾ ನೇತೃತ್ವದ ನಕ್ಸಲರ ತಂಡ ಊರೂರಲ್ಲಿ ವಿಚಾರಿಸಿ ಸೇಡು ತೀರಿಸಿಕೊಳ್ಳುವ ಮಾತನಾಡಿತ್ತು. ಇದರಿಂದ ದೇವೆಂದ್ರ ಹೆದರಿ ಮಾನಸಿಕವಾಗಿ ಹಿಂಸೆ ಅನುಭವಿಸಿದ್ದರು. ಬರಿದೇ ತನ್ನ ಮೇಲೆ ಬಂದ ಅಪವಾದದಿಂದ ತನಗೂ ಮೆಣಸಿನಹಾಡ್ಯ ಶೇಷೇಗೌಡ್ಲುವಿಗಾದ ಗತಿ ಬಂದೀತೆAದು ಅವರು ಕಂಗಾಲಾಗಿದ್ದರು. ಕಡೆಗೂ ನಕ್ಸಲರಿಗೆ ಜ್ಞಾನೋದಯವಾಗಿ ದೇವೇಂದ್ರರ ಪ್ರಾಣ ಉಳಿಯಿತು.
ಅತ್ಯಡ್ಕ ಘಟನೆ ಅಂದು ಮತ್ತೆ ಗಿರಿಜನರ ಬಾಯಿಯಲ್ಲ ಕೇಳುವಂತಾಯಿತು. ಅಂದಲ್ಲಿ ಗೌತಮ್ ತಂಗಿದ್ದು ನಿಜವಂತೆ, ಆತ ಗುಂಡು ಹಾರಿಸದಿದ್ದರೆ ಪೊಲೀಸರು ಮನೆ ಜಾಲಾಡಿ ಹಿಂತಿರುಗುತ್ತಿದ್ದರು. ಏನೂ ಆಗುತ್ತಿರಲಿಲ್ಲ. ಎಲ್ಲಾ ಮುಗಿದು ಪೊಲೀಸರೂ ಜಾಗ ಖಾಲಿ ಮಾಡಿದ ಮೇಲೆ ಗೌತಮ್ ಮಲಗಿದ್ದ ಕಟ್ಟಿಗೆ ರಾಶಿಯಡಿ ಆತನ ಬ್ಯಾಗ್ ಸಿಕ್ಕಿತ್ತಂತೆ. ಅದರಲ್ಲಿ ಇನ್ನೊಂದೆರಡು ಜೊತೆ ಸಮವಸ್ತçವೂ, ನಕ್ಸಲರ ಸಾಹಿತ್ಯವೂ ಗುಂಡುಗಳೂ ಇದ್ದವಂತೆ. ಗಿರಿಜನರು ಅದನ್ನು ಅಡಗಿಸಿಟ್ಟರಂತೆ. ಪೊಲೀಸರು ಸರಿಯಾಗಿ ತಪಾಸಣೆ ಮಾಡಲಿಲ್ಲ ಎಂಬ ಸಂಗತಿ ಇದರಿಂದ ಸಿದ್ಧವಾಯಿತು.
ಅಂದು ನಾವು ಊಟ ಮಾಡಿದ್ದು ರಂಗೇಗೌಡ್ಲು ಮತ್ತು ಶಾಂತಮ್ಮ ಎಂಬ ಗಿರಿಜನ ಕುಟುಂಬದ ಮನೆಯಲ್ಲಿ. ಊಟ ಜಯಪುರದಿಂದ ತರಿಸಿದ್ದರು. ಈ ಶಾಂತಮ್ಮನ ತಮ್ಮನೇ ಹಿಂದೆ ಹತನಾಗಿದ್ದ ಸುಂದ್ರೇಶ. ಆ ಘಟನೆ ನಡೆದಾಗ ಶಾಂತಮ್ಮನ ಮಗಳು ಲತಾ ಇನ್ನೂ ಪುಟ್ಟ ಬಾಲೆ. ಈಗ ಎಸ್.ಎಸ್.ಎಲ್.ಸಿ ಮುಗಿಸಿ ಓದು ಬಿಟ್ಟು ಮನೆಯಲ್ಲೇ ಇದ್ದಾಳೆ. ನಮ್ಮ ಜೊತೆ ಅವಳೂ ಒಡೇರಮಠಕ್ಕೆ ಬಂದಿದ್ದಳು. ತನ್ನ ಮಾವ ಗುಂಡಿಗೆ ಬಲಿಯಾಗಿದ್ದು ಆಕೆಗೆ ಸ್ಪಷ್ಟವಾಗಿ ನೆನಪಿದೆ. ಅಂದು ಮೃತನಾದ ಪರಮೇಶ್ವರನ ತಂದೆ ಸಹ ನಮಗೆ ಭೇಟಿಯಾಗಿದ್ದರು.
ಅತ್ಯಡ್ಕದ ಆ ಪಾಳುಬಿದ್ದ ಭೂಮಿ ಹಸನುಗೊಳಿಸಿ ಅಲ್ಲೇ ಒಂದು ಪುಟ್ಟ ಮನೆ ನಿರ್ಮಿಸಿ ಪ್ರಶಾಂತನನ್ನು ಅಲ್ಲಿ ಬಿಟ್ಟು ಆತನಿಗೆ ಮದುವೆ ಮಾಡಿ ರಾಮೇಗೌಡ್ಲು ಕುಟುಂಬ ಅದೇ ಜಾಗದಲ್ಲಿ ಪುನಃ ಬದುಕು ಕಟ್ಟಿಕೊಳ್ಳುವಂತೆ ಮಾಡಲು ಪೇಜಾವರ ಶ್ರೀಗಳು ಮುಂದಾಗಿದ್ದಾರೆ. ನಕ್ಸಲರಿಂದ ಹತ್ಯೆಯಾದ ಶೇಷೇಗೌಡ್ಲು ಕುಟುಂಬಕ್ಕೂ ಪೇಜಾವರ ಶ್ರೀಗಳು ಮನೆ ನಿರ್ಮಿಸಿ ಕೊಟ್ಟಿದ್ದರಲ್ಲದೇ ಶೇಷೇಗೌಡ್ಲು ಮಗನಿಗೆ ಅಂಗಡಿ ಮಾಡಿಸಿಕೊಟ್ಟಿದ್ದಾರೆ. ನಾವು ಶೇಷೇಗೌಡ್ಲು ಮನೆಗೂ ಭೇಟಿ ನೀಡಿದ್ದೆವು. ಹಿಂದೆ ಆತನ ಹತ್ಯೆಯಾದಾಗ ಅಲ್ಲಿಗೆ ೨ ಬಾರಿ ಹೋಗಿದ್ದೆ. ಈಗ ದಶಕದ ನಂತರ ಶೇಷೇಗೌಡ್ಲು ಪತ್ನಿ, ಮಗ, ಸೊಸೆ ಎಲ್ಲರನ್ನು ಮಾತನಾಡಿಸಿ ಬಂದೆ. ಆ ಮನೆಯವರಿಗೂ ಘಟನೆಯ ದುಃಸ್ವಪ್ನ ಇನ್ನೂ ಕಾಡುತ್ತಿದೆ. ಪಶ್ಚಿಮಘಟ್ಟಕ್ಕೆ ಗಿರಿಜನರ ಹಿತಕ್ಕಾಗಿ ಬಂದ ನಕ್ಸಲರಿಂದ ಅತೀ ಹೆಚ್ಚು ತೊಂದರೆ ಕಿರುಕುಳ ನೋವು ನಷ್ಟ ಅನುಭವಿಸಿದ್ದು ಗಿರಿಜನರು. ನಕ್ಸಲರ ಆಗಮನದಿಂದ ಮೆರೆದಾಡಿದ್ದು ನಾಡಿನಲ್ಲಿದ್ದ ನಕ್ಸಲ್ ಬೆಂಬಲಿಗರು. ಗಿರಿಜನ ಹೋರಾಟದ ಹೆಸರಿನಲ್ಲಿ ಇವರು ಎಲ್ಲಾ ದೃಷ್ಠಿಯಿಂದಲೂ ಶ್ರೀಮಂತರಾದರು.