• Samvada
Monday, May 23, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ನೋವಿರುವಲ್ಲಿ ಸೇತುವಾಗಿ ಇರಬಲ್ಲವರು ‘ಡಾ. ಸಿದ್ದಲಿಂಗಯ್ಯ’

Vishwa Samvada Kendra by Vishwa Samvada Kendra
June 24, 2021
in Articles
250
0
ಕವಿಗಳಾದ ಡಾ. ಸಿದ್ದಲಿಂಗಯ್ಯ ನಿಧನ: ಆರೆಸ್ಸೆಸ್ ನ ವಿ ನಾಗರಾಜ ತೀವ್ರ ಸಂತಾಪ
491
SHARES
1.4k
VIEWS
Share on FacebookShare on Twitter

ಈಚೆಗೆ ನಿಧನರಾದ ಕವಿ ಸಿದ್ದಲಿಂಗಯ್ಯ ಅವರ ಕುರಿತು ಅನೇಕ ಸಾಹಿತಿಗಳು, ಸಂಘಸಂಸ್ಥೆಗಳು ನುಡಿನಮನ ಸಲ್ಲಿಸಿ ಅವರ ಕುರಿತು ಒಂದು ಚಿತ್ರಣವನ್ನು ಕಟ್ಟಿಕೊಟ್ಟಿವೆ. ಈ ಒಮ್ಮುಖದ  ಚಿತ್ರಣಕ್ಕಿಂತ ಭಿನ್ನವಾಗಿಯೂ ಅವರು ಬದುಕಿದ್ದರು ಅನ್ನುವುದು ಗಮನಿಸತಕ್ಕ ಸಂಗತಿಯೆನಿಸುತ್ತದೆ.

ಅವರೇ ಅಲ್ಲಿಲ್ಲಿ ಪದೇಪದೇ ಹೇಳಿಕೊಂಡಿರುವ ಅವರ ಬಾಲ್ಯದ ಕೆಲವು ಪ್ರಸಂಗಗಳನ್ನು ಈ ನಿಟ್ಟಿನಲ್ಲಿ ಇಲ್ಲಿ ಉಲ್ಲೇಖಿಸಬಹುದು.

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

ಮೊದಲೆರಡು ಅನುಭವಗಳು

ಆಗ ಅವರಿಗಿನ್ನೂ ನಾಲ್ಕರ ವಯಸ್ಸು. ಮಾಗಡಿಯ ಸಮೀಪದ ಹಳ್ಳಿಯ ಅವರ ಮನೆಯ ಪಕ್ಕದಲ್ಲಿ ಇದ್ದ ಗೋಡೆಯ ಇನ್ನೊಂದು ಬದಿಯಲ್ಲಿ ಜಮೀನುದಾರರ ಹೊಲಗಳಿದ್ದುವು. ತಮಗಿಲ್ಲದ ಆ ಭೂಮಿಭಾಗ್ಯವನ್ನು ಆ ಗೋಡೆಯನ್ನು ತುಸು ಏರಿಕೊಂಡು ನೋಡುವುದರಲ್ಲೇ ಖುಷಿಪಟ್ಟುಕೊಳ್ಳುವ ಮನಸ್ಸಿನ ವಯಸ್ಸು. ಒಮ್ಮೆ ಓರಗೆಯ ಮಕ್ಕಳೊಂದಿಗೆ ಆಟವಾಡುತ್ತಾ ಹಾಗೆ ಗೋಡೆಯಿಂದ ಇಣುಕಿ ಆಕಡೆ ನೋಡಿದಾಗ ಹೊಲದಲ್ಲಿ ಉಳುಮೆ ದೃಶ್ಯ ಗೋಚರಿಸಿತು. ಉಳುಮೆಗೆ ಎತ್ತಿನ ಬದಲು ಮನುಷ್ಯರಿಬ್ಬರನ್ನು ಕಟ್ಟಿದ್ದಾರೆ! ಇದನ್ನು ನೋಡಿ ಆ ವಯಸ್ಸು ಅಚ್ಚರಿಯನ್ನೂ ಆನಂದವನ್ನೂ ಪಟ್ಟಿತು. ಇಣುಕುವ ಕಣ್ಣುಗಳೆಡೆಗೆ ಉಳುಮೆ ಸಾಗುತ್ತಾ ಬರುತ್ತಿದ್ದಾಗ ಎತ್ತುಗಳ ಜಾಗದಲ್ಲಿದ್ದ ಇಬ್ಬರು ಮನುಷ್ಯರು ಸ್ಪಷ್ಟವಾಗುತ್ತ ಹೋದರು. ಆಗ ಆ ವಯಸ್ಸು ಪಡುತ್ತಿದ್ದ ಆನಂದದ ಜಾಗದಲ್ಲಿ ಸಂಕಟ, ದುಃಖಗಳೇ ವಕ್ಕರಿಸಿದವು. ಯಾಕೆಂದರೆ, ಆ ಇಬ್ಬರಲ್ಲಿ ಒಬ್ಬರು ಸಿದ್ದಲಿಂಗಯ್ಯ ಅವರ ತಂದೆಯೇ ಆಗಿದ್ದರು!

ಮಾಗಡಿಯ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಸಿದ್ದಲಿಂಗಯ್ಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಗಡಿಯಲ್ಲಿ ಪೂರೈಸಿ ಪ್ರೌಢಶಿಕ್ಷಣಕ್ಕೆ ಬೆಂಗಳೂರು ಸೇರಿಕೊಂಡರು. ಅವರ ತಾಯ್ತಂದೆಯರು ಉದ್ಯೋಗದ ನಿಮಿತ್ತ ಆ ಮುಂಚೆಯೇ ಬೆಂಗಳೂರು ಸೇರಿಕೊಂಡಿದ್ದರು.  ಈ ನಡುವಿನ ಅವಧಿಯಲ್ಲಿ ಅವರು ತಾಯಿಯ ತವರೂರು ಮಾಗಡಿ ಸಮೀಪದ ಮಂಚನಬೆಲೆಯಲ್ಲಿ ಇದ್ದುಕೊಂಡು ಶಾಲೆಗೆ ಹೋಗುತ್ತಿದ್ದರು. ತಾಯಿ ಕೆಲಸಮಾಡುತ್ತಿದ್ದುದು ಬೆಂಗಳೂರಿನ ಶ್ರೀರಾಮಪುರದಲ್ಲಿದ್ದ ಒಂದು ವಿದ್ಯಾರ್ಥಿನಿಲಯದಲ್ಲಿ. ಅಲ್ಲಿ ಅವರಿಗೆ ಕಸಗುಡಿಸುವ ಕೆಲಸ. ಅಲ್ಲಿಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಕಾಡಿಬೇಡಿ ಅವರು ತಮ್ಮ ಮಗನಿಗೆ ಅಲ್ಲಿ ಪ್ರವೇಶ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಹಾಗೆ ಆ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ಸಿದ್ದಲಿಂಗಯ್ಯನವರ ಪ್ರೌಢಶಿಕ್ಷಣ ಮಲ್ಲೇಶ್ವರಂ ಶಾಲೆಯಲ್ಲಿ ಮುಂದುವರಿಯಿತು. ಎಲ್ಲ ಸಮುದಾಯದ, ವಿಭಿನ್ನ ಆರ್ಥಿಕ ಸ್ತರದ ಹಿನ್ನೆಲೆಯ ಮಕ್ಕಳಿದ್ದ ಆ ವಿದ್ಯಾರ್ಥಿನಿಲಯದಲ್ಲಿ ಒಮ್ಮೆ ಹಬ್ಬದ ಒಂದು ದಿನ ಊಟಕ್ಕೆ ಬಡಿಸುವ ಸಂದರ್ಭದಲ್ಲಿ ಮಕ್ಕಳ ಸಾಲಿನಲ್ಲಿ ಕೊನೆಯಲ್ಲಿ ಊಟಕ್ಕೆ ಕುಳಿತಿದ್ದ ಮನುಷ್ಯನೊಬ್ಬನನ್ನು ಜೋರುಮಾಡಿ ಎಬ್ಬಿಸಿ ಹೊರಗೆ ಕಳುಹಿಸಲಾಯಿತು. ಊಟಮಾಡುತ್ತಿರುವಾಗ ಈ ದೃಶ್ಯವನ್ನು ನೋಡಿದ ಬಾಲಕ ಸಿದ್ದಲಿಂಗಯ್ಯ ಮತ್ತೊಮ್ಮೆ ತನ್ನ ನಾಲ್ಕರ ವಯಸ್ಸಿನಲ್ಲಿ ಪಡೆದಿದ್ದ ದುಃಖ-ಸಂಕಟಗಳನ್ನೇ ಅನುಭವಿಸಬೇಕಾಯಿತು. ಯಾಕೆಂದರೆ, ಹಾಗೆ ಅಂದು ಊಟದ ಸಾಲಿನಿಂದ ಎಬ್ಬಿಸಲ್ಪಟ್ಟ ವ್ಯಕ್ತಿ ಈ ಬಾಲಕನ ತಂದೆಯೇ ಆಗಿದ್ದರು! ತನ್ನ ಹೆಂಡತಿ ಅಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿದ್ದಾಳೆ ಮತ್ತು ತನ್ನ ಮಗ ಅಲ್ಲಿದ್ದುಕೊಂಡು ಓದುತ್ತಿದ್ದಾನೆ, ಹಾಗಾಗಿ ತನಗಲ್ಲಿ ಊಟಸಿಗುತ್ತದೆ ಎಂದುಕೊಂಡು ಸಿದ್ದಲಿಂಗಯ್ಯನವರ ತಂದೆ ಆ ಊಟದ ಸಾಲಿನಲ್ಲಿ ಕುಳಿತಿದ್ದರು.

 ಮತ್ತೆರಡು ಅನುಭವಗಳು

ಅವರು ಓದುತ್ತಿದ್ದ ಮಾಗಡಿಯ ಶಾಲೆಯಲ್ಲಿ ನಾಗಪ್ಪಾಚಾರ್ ಎಂಬ ಮೇಷ್ಟ್ರು ಇದ್ದರು. ಸಿದ್ದಲಿಂಗಯ್ಯ ಎಂದರೆ ಆ ಮೇಷ್ಪ್ರಿಗೆ ಅಚ್ಚುಮೆಚ್ಚು. ಬಾಲಕ ಸಿದ್ದಲಿಂಗಯ್ಯನ ಓದಿನ ಕುರಿತು ವಿಶೇಷವಾಗಿ ವಿಚಾರಿಸಿಕೊಳ್ಳುತ್ತಿದ್ದ ಅವರು, ಮುಂದಿನ ಓದಿನ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದರು. ಮುಂದಿನ ನಿನ್ನ ಓದು ಏನಾದೀತೋ ಹೇಗಾದೀತೋ ಎಂದು ಬಾಲಕನ ಜತೆ ಕಾಳಜಿಯಿಂದ ಮಾತಾಡುತ್ತಾ ಕೆಲವೊಮ್ಮೆ ಆತಂಕವನ್ನೂ ಪಟ್ಟುಕೊಳ್ಳುತ್ತಿದ್ದರು. ಪ್ರತಿದಿನ ತರಗತಿಯಲ್ಲಿಯೇ ಸಿದ್ದಲಿಂಗಯ್ಯನನ್ನು ಎದ್ದುನಿಲ್ಲಿಸಿ ತಿಂಡಿತಿಂದೆಯಾ, ಊಟಮಾಡಿದೆಯಾ ಎಂದು ಕಾಳಜಿಯ ಪ್ರಶ್ನೆಯನ್ನು ಹಾಕುತ್ತಿದ್ದರು. ಕಿತ್ತುತಿನ್ನುತ್ತಿದ್ದ ಬಡತನದಿಂದಾಗಿ ಕೆಲವೊಮ್ಮೆ ಊಟತಿಂಡಿಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಪ್ರತಿಬಾರಿಯೂ ಸಂಕೋಚದಿಂದ ಬಾಲಕ ಉತ್ತರಿಸುತ್ತಿದ್ದುದು ‘ಆಗಿದೆ, ಮಾಡಿದೆ’ ಎಂದೇ. ಉತ್ತರದ ಧ್ವನಿಯಲ್ಲಿ ಊಟತಿಂಡಿ ಆಗಿಲ್ಲವೆಂದು ತಿಳಿಯುತ್ತಿದ್ದ ನಾಗಪ್ಪ ಮೇಷ್ಟ್ರು ಈ ಬಾಲಕನಿಗೆ ಅದರ ವ್ಯವಸ್ಥೆಯನ್ನು ಮಾಡುತ್ತಿದ್ದರು. ತಮಗಾಗಿ ತಂದುದನ್ನು ಬಾಲಕನೊಂದಿಗೆ ಹಂಚಿ ಊಟಮಾಡುತ್ತಿದ್ದರು.

ಮಲ್ಲೇಶ್ವರಂ ಪ್ರೌಢಶಾಲೆಯಲ್ಲಿ ಸಿದ್ದಲಿಂಗಯ್ಯನವರಿಗೆ ಪಾಠಮಾಡುತ್ತಿದ್ದ ಅಧ್ಯಾಪಕರಲ್ಲಿ ಆಂಡಾಳಮ್ಮ ಎಂಬವರೂ ಒಬ್ಬರು. ಅವರಿಗೆ ಬಡಮಕ್ಕಳ ಬಗ್ಗೆ ಅತೀವವಾದ ಪ್ರೀತಿ ಮತ್ತು ಕಾಳಜಿ. ಪ್ರತಿದಿನವೆಂಬಂತೆ ಅವರು ಶಾಲೆಗೆ ಬರುವಾಗ ಆ ಮಕ್ಕಳಿಗೆ ಪುಳಿಯೊಗರೆ ಮಾಡಿಕೊಂಡು ಬಂದು ಹಂಚುತ್ತಿದ್ದರು. ತಾಯ ಮಮತೆಯನ್ನುಣಿಸುತ್ತಿದ್ದ ಈ ಶಿಕ್ಷಕಿಯೆಂದರೆ ಮಕ್ಕಳಿಗೂ ಅಷ್ಟೇ ಅಚ್ಚುಮೆಚ್ಚು. ಬಡಮಕ್ಕಳಿಗೆ ಪೆನ್ಸಿಲು, ಪುಸ್ತಕ ಇತ್ಯಾದಿ ಅಧ್ಯಯನದ ಪರಿಕರಗಳನ್ನು ತಮ್ಮದೇ ಖರ್ಚಿನಲ್ಲಿ ಪೂರೈಸುತ್ತಿದ್ದರು. ಒಮ್ಮೆ ಹಾಗೆ ಇಂಥ ಪರಿಕರಗಳನ್ನು ಕೊಡಲು ತರಗತಿಯಲ್ಲಿ ಬಡಮಕ್ಕಳನ್ನು ಎದ್ದುನಿಲ್ಲಲು ಹೇಳಿದರು. ಸಂಕೋಚಪ್ರವೃತ್ತಿಯ ಸಿದ್ದಲಿಂಗಯ್ಯ ಎದ್ದುನಿಲ್ಲಲಿಲ್ಲ. ಮುಂದೆ; ಒಮ್ಮೆ ಕೆಲಸಪೂರೈಸಿ ಅದೇ ವೇಷದಲ್ಲಿ ಮಗನನ್ನು ಕಾಣಲೆಂದು ಶಾಲೆಗೆ ಬಂದ ಸಿದ್ದಲಿಂಗಯ್ಯನವರ ತಂದೆಯನ್ನು ನೋಡಿದ ಆಂಡಾಳಮ್ಮನವರು, ಅವರು ಬಂದ ಉದ್ದೇಶದ ಜತೆಗೆ ಅವರ ಹಿನ್ನೆಲೆಯನ್ನೂ ವಿಚಾರಿಸಿಕೊಂಡರು. ಆತ ತೀರಾ ಬಡವ ಎನ್ನುವ ವಾಸ್ತವ ಗೊತ್ತಾಯಿತು. ತಂದೆಯವರನ್ನು ಕಳುಹಿಕೊಟ್ಟ ಬಳಿಕ ಆಂಡಾಳಮ್ಮ ಸಿದ್ದಲಿಂಗಯ್ಯನವರ ಬಳಿ ಬಂದು ವಿಚಾರಿಸಿ, ಯಾಕೆ ನೀನು ಅಂದು ಎದ್ದುನಿಲ್ಲಲಿಲ್ಲ ಎಂದು ಪ್ರೀತಿಯಿಂದ ಕೇಳಿದರು. ಮರುದಿನವೇ ಆಂಡಾಳಮ್ಮನವರ ಮಮತೆಯನ್ನು ಹೊತ್ತ ಪೆನ್ಸಿಲ್ ಪುಸ್ತಕಗಳು ಸಿದ್ದಲಿಂಗಯ್ಯನವರ ಚೀಲವನ್ನು ತಡಮಾಡದೆ ಸೇರಿಕೊಂಡಿದ್ದವು. ಅಂದಿನಿಂದ ಆಂಡಾಳಮ್ಮ ಸಿದ್ದಲಿಂಗಯ್ಯನವರನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳತೊಡಗಿದರು.

ಅನುಭವಗಳು ಬೆಳೆಸಿದ ಬಗೆ

ಸಿದ್ದಲಿಂಗಯ್ಯನವರ ಬಾಲ್ಯದ ಈ ನಾಲ್ಕು ಅನುಭವಗಳು ಅವರ ಮಾತಿನಲ್ಲಿ ಪದೇಪದೇ ಬರುತ್ತಿದ್ದವು. ಅಂದರೆ ಈ ನಾಲ್ಕೂ ಅನುಭವಗಳು ಅವರ ಬದುಕನ್ನು ಪ್ರಭಾವಿಸಿವೆ ಎಂದು ತಿಳಿಯಲಡ್ಡಿಯಿಲ್ಲ. ಇವುಗಳಲ್ಲಿ ಮೊದಲೆರಡನ್ನು ಅವರು ಕಂಡನುಭವಿಸಿ ಸಂಕಟಪಟ್ಟುಕೊಂಡರೆ ಉಳಿದೆರಡು ಉಂಡನುಭವಿಸಿ ಸಂತಸಪಟ್ಟುಕೊಂಡಂಥವುಗಳು. ತಥಾಕಥಿತ ಮೇಲ್ವರ್ಗದ ಮಂದಿ ಅವರ ತಂದೆಯನ್ನು ಎತ್ತಾಗಿ ದುಡಿಸಿ ಊಟದ ಸಾಲಿನಿಂದ ಅಮಾನುಷವಾಗಿ ಎಬ್ಬಿಸಿ ಅಪಮಾನಿಸಿದರೆ, ಅದೇ ಮೇಲ್ವರ್ಗಕ್ಕೆ ಸೇರಿದ ಮಂದಿ ಅವರಿಗೆ ಊಟತಿಂಡಿ ಪುಸ್ತಕ ಪೆನ್ಸಿಲ್ ಇತ್ಯಾದಿ ಕೊಟ್ಟು ಮುಂದಿನ ಶಿಕ್ಷಣದ ದಾರಿಯನ್ನು ಸುಗಮಗೊಳಿಸಿ ಅವರನ್ನು ಪ್ರೀತಿಗೌರವಗಳಿಂದ ಗುರುತಿಸಿದರು.

ಮೊದಲೆರಡು ಅನುಭವಗಳು ಅವರನ್ನು ಇಕ್ರಲಾ ವದೀರ್ಲಾ ಇತ್ಯಾದಿ ಬಂಡಾಯದ ಸಾಲುಗಳ ಕವಿಯಾಗಿಸಿದರೆ, ಮತ್ತೆರಡು ಅನುಭವಗಳು ಅವರನ್ನು ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಸಮನ್ವಯ ಸಾಧಿಸಬಲ್ಲ ಹೃದ್ಯ ಮನುಷ್ಯನನ್ನಾಗಿಸಿತು. ದಲಿತ-ಬಂಡಾಯದ ಸಂವೇದನೆಗಳಿಂದ ಕೂಡಿದ ಅವರ ಕೃತಿಗಳಿಂದ ಶೂದ್ರ ಶ್ರೀನಿವಾಸ, ಡಿ. ಆರ್. ನಾಗರಾಜ್ ಮುಂತಾದವರು ಅವರ ಆಪ್ತವಲಯಕ್ಕೆ ಸೇರ್ಪಡೆಗೊಂಡರೆ, ವಿನಯವಂತಿಕೆ ಎಲ್ಲರ ಬಗೆಗಿನ ಆದರ ಇತ್ಯಾದಿ ಮೇರು ಸ್ವಭಾವಗಳಿಂದಾಗಿ ಜಿ. ವೆಂಕಟಸುಬ್ಬಯ್ಯ, ಚಿದಾನಂದಮೂರ್ತಿ ಮುಂತಾದವರು ಅವರ ಶ್ರದ್ಧಾಸ್ಥಾನವನ್ನು ಪ್ರವೇಶಿಸಿದರು.

ಕವಿಯಾಗಿ, ನಾಟಕಕಾರರಾಗಿ, ಪ್ರಬಂಧಕಾರರಾಗಿ, ವೈಚಾರಿಕ ಬರಹಗಾರರಾಗಿ; ಪಂಪ, ನಾಡೋಜ, ನೃಪತುಂಗ, ರಾಜ್ಯೋತ್ಸವ ಮುಂತಾದ ಪ್ರಶಸ್ತಿಗಳನ್ನು ಪಡೆದ ಸಿದ್ದಲಿಂಗಯ್ಯನವರು ಬೆಳೆದುನಿಂತ ಬಗೆ ವಿಶಿಷ್ಟವಾದುದು.

ಎರಡು ಸಮ್ಮೇಳನಗಳ ನಡುವೆ

ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅವರು ವಾಚಿಸಿದ ‘ಇಕ್ರಲಾ ವದೀರ್ಲಾ/ ಇವರ ಚರ್ಮ ಎಬ್ರಲಾ..’ ಕವನವು ಇಡಿಯ ಸಭೆಯಲ್ಲಿ ಒಂದು ಮೌನಸಂಚಲನವನ್ನು ಉಂಟುಮಾಡಿತ್ತು. ಆಗಿನ್ನೂ ಅವರು ಕಾಲೇಜು ವಿದ್ಯಾರ್ಥಿ. ಬಿಸಿರಕ್ತದ ವಯಸ್ಸು. ಆ ವಯಸ್ಸಿನಲ್ಲಿ ಧೈರ್ಯವಹಿಸಿ ಸ್ವತಂತ್ರವಾಗಿ ಯೋಚಿಸಬಲ್ಲ ತಥಾಕಥಿತ ದಲಿತ ಸಮುದಾಯದ ವ್ಯಕ್ತಿಯೊಬ್ಬ ಅಂಥ ಸಾಲುಗಳನ್ನು ಹೇಳುವುದು ಅಚ್ಚರಿಯಾಗಬೇಕಿಲ್ಲ. ಮೇಲೆ ಹೇಳಿದ ಮೊದಲೆರಡು ಅನುಭವಗಳು ಅವರಿಂದ ಅಂಥ ಸಾಲುಗಳನ್ನು ಸರ್ಜಿಸಿವೆ. ಮತ್ತು ಅಂಥ ಅನುಭವಗಳು ಆ ಕಾಲದಲ್ಲಿ ಇಲ್ಲಿಯ ಆ ಸಮುದಾಯದ ಯಾರಿಗೇ ಆದರೂ ಆಗದಿರುವುದು ಕಷ್ಟಸಾಧ್ಯ. ಆಕ್ರೋಶವು ಕವಿತೆಯಾಗಿ ಹೊರಹೊಮ್ಮಿತ್ತಲ್ಲಿ. ಅವರ ‘ಹೊಲೆ ಮಾದಿಗರ ಹಾಡು’ ಕವನಸಂಕಲನ ಸಿದ್ಧಗೊಂಡುದೂ ಅವರ ವಿದ್ಯಾರ್ಥಿದೆಸೆಯಲ್ಲಿಯೇ. ಮುಂದೆ ಕೇವಲ ದಲಿತ ಹೋರಾಟಕ್ಕಷ್ಟೆ ಅಲ್ಲ; ರೈತ, ಕಾರ್ಮಿಕ, ವಿದ್ಯಾರ್ಥಿ ಇತ್ಯಾದಿ ನಾನಾ ವಲಯದ ಹೋರಾಟಗಾರರಿಗೂ ಸಿದ್ದಲಿಂಗಯ್ಯನವರ ಹಾಡುಗಳು ಘೋಷಸರಕುಗಳಾದವು.

ರಾಮಾಯಣದ ಕವಿಯ ಬಾಯಿಯಿಂದಲೂ ಆಕ್ರೋಶವೇ ಕಾವ್ಯವಾಗಿ ಹೊರಹೊಮ್ಮಿದ್ದು. ಸಿದ್ದಲಿಂಗಯ್ಯ ಅವರ ಕಾವ್ಯಸೃಷ್ಟಿಯೂ ಅಂಥದ್ದೇ ಹಿನ್ನೆಲೆಯಿಂದ ಆದುದು. ವ್ಯತ್ಯಾಸವಿಷ್ಟೆ: ವಾಲ್ಮೀಕಿ ಅನ್ಯರಿಗೊದಗಿದ ಕ್ರೌರ್ಯಕ್ಕೆ ಆಕ್ರೋಶಗೊಂಡು ಶಾಪವಾಕ್ಯವನ್ನುಚ್ಚರಿಸಿದ ಮರುಕ್ಷಣವೇ ಪಶ್ಚಾತ್ತಾಪಪಟ್ಟು ಶಾಂತನಾದ. ಸಿದ್ದಲಿಂಗಯ್ಯ ತಮಗಾದಂತೆಯೇ ತಮ್ಮವರ ಮೇಲಾಗುತ್ತಿದ್ದ ಅನ್ಯಾಯದ ವಿರುದ್ಧ ಆಕ್ರೋಶಗೊಂಡು ಕಾವ್ಯಸೃಷ್ಟಿಯನ್ನು ಒಂದಷ್ಟು ಮುಂದರಿಸಿ, ಮುಂದೆ ತಮ್ಮದೇ ಆದ ಸಮನ್ವಯದ ದಾರಿಯಲ್ಲಿ ತಮ್ಮವರ ಹಿತಸಾಧಿಸುವಲ್ಲಿ ರತರಾದರು. ಅಂಥ ಸಮನ್ವಯದ ಪಥವನ್ನು ಮುಂದೆ ಅವರು ಶ್ರವಣಬೆಳಗೊಳದಲ್ಲಿ ನಡೆದ 81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತಾಡಿದ ಸಂದರ್ಭದಲ್ಲಿ ಕಾಣಬಹುದು.

ಆದಿತ್ಯನಾಗಿ ಕಾರ್ಯ

ಬಂಡಾಯದ ದಾರಿಯಿಂದ ಬೇರೆಯಾಗಿ ತಮ್ಮದೇ ದಾರಿಯಲ್ಲಿ ಸಾಗುವಾಗ ಎದುರಾದ ತಮ್ಮವರದೇ ಆಕ್ರೋಶಕ್ಕೆ ಎದೆಗುಂದದೆ ಶಾಂತರಾಗಿ ಆದರೆ ದೃಢಿಷ್ಠರಾಗಿ ಎದೆಯೊಡ್ಡಿದರು. ಅವರು ಹಾಗೆ ಭಿನ್ನ ದಾರಿಯಲ್ಲಿ ಸಾಗಲು ಬೇಕಾದ ಸನ್ನಿವೇಶವು ಸೃಷ್ಟಿಯಾದುದು ಪ್ರಯೋಗಶೀಲ ಚಿತ್ರನಿರ್ದೇಶಕ ಪುಟ್ಟಣ್ಣ ಕಣಗಾಲರಿಂದ ಎನ್ನಬಹುದು. ಪುಟ್ಟಣ್ಣ ತಮ್ಮ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಮೂರು ಗೀತೆಗಳನ್ನು ಆಗ್ರಹಪೂರ್ವಕವಾಗಿ ಸಿದ್ದಲಿಂಗಯ್ಯನವರಿಂದಲೇ ಬರೆಸಿದರು. ಹಾಡಿನ ವಸ್ತು ಪುಟ್ಟಣ್ಣ ಅವರದು. ಸಾಹಿತ್ಯ ಸಿದ್ದಲಿಂಗಯ್ಯ ಅವರದು. ಆದರೆ ಅವು ಎಲ್ಲವೂ ಪ್ರೀತಿಯ ವಸ್ತುವುಳ್ಳವೇ ಆಗಿದ್ದವು. ಇವುಗಳ ರಚನೆ ತನ್ನದು ಎಂದು ತಿಳಿದರೆ ಬಂಡಾಯದ ಸ್ನೇಹಿತರೆಲ್ಲ ತನ್ನ ಮೇಲೆ ಮುಗಿಬೀಳುತ್ತಾರೆ ಎಂದು ಅವರಿಗೆ ಒಂದು ಮುನ್ಸೂಚನೆ ಇದ್ದೇ ಇತ್ತು. ಹಾಗಾಗಿ ಅವರದನ್ನು ‘ಆದಿತ್ಯ’ ಎಂಬ ಹೆಸರಲ್ಲಿ ಬರೆದರು. ಅದೃಷ್ಟವಶಾತ್ ಸಿನಿಮಾದ ಜತೆಗೆ ಅದರ ಹಾಡಿಗೂ ಪ್ರಶಸ್ತಿ ಬಂತು. ಮುಖ್ಯಮಂತ್ರಿಗಳಿಂದ ಪ್ರಶಸ್ತಿಯನ್ನು ಸ್ವೀಕರಿಸಲು ‘ಆದಿತ್ಯ’ ಹೋಗಲೇಬೇಕಾಗಿಬಂದು ಸಿದ್ದಲಿಂಗಯ್ಯನವರ “ಆದಿತ್ಯ ಬಣ್ಣ” ಬಯಲಾಯಿತು. ಬಂಡಾಯದ ಕವಿ ಅದ್ಹೇಗೆ ಇಂಥ ಪ್ರೇಮಗೀತೆಗಳನ್ನು ಬರೆದಿರಿ ಎಂದು ತಮ್ಮ ಆಪ್ತವಲಯದವರೇ ಭಾರೀ ಆಕ್ರೋಶಗೊಂಡು ತಮ್ಮ ವಿರುದ್ಧ ಪ್ರತಿಭಟನೆ ಮಾಡಿದರು.

ಒಂದು ಕಾಲದಲ್ಲಿ ತಥಾಕಥಿತ ಮೇಲ್ವರ್ಗದ ಮಂದಿಯಿಂದ ಕ್ರೌರ್ಯದ ಅಪಮಾನದ ಅನುಭವವನ್ನು ಪಡೆದ ಸಿದ್ದಲಿಂಗಯ್ಯ ಅವರು ಇದೀಗ ತನ್ನದೇ ಜನರಿಂದ ಅವುಗಳನ್ನೆಲ್ಲ ಎದುರಿಸಬೇಕಾದ ಸ್ಥಿತಿಯೊಂದೊದಗಿತು. ತನ್ನವರನ್ನು ಏನಕೇನ ಮೆಚ್ಚಿಸುವ ಮತ್ತು ವಿರುದ್ಧ ಪಾಳಯವನ್ನು ಏನಕೇನ ವಿರೋಧಿಸುವ ಜನಪ್ರಿಯ ದಾರಿಯನ್ನು ತುಳಿಯದೆ ಅವರು ತಮ್ಮದೇ ಸಮನ್ವಯದ ದಾರಿಯನ್ನು ಕಂಡುಕೊಂಡು ಎದುರಾದ ಸವಾಲುಗಳನ್ನು ವಿನಯದಿಂದ ಆದರೆ ಅಷ್ಟೇ ದೃಢಿಷ್ಠ ಮನೋಭಾವದಿಂದ ಅಲಕ್ಷಿಸಿ ಒಬ್ಬಂಟಿಯಾಗಿ ಸಾಗಿದರು. ಹೀಗೆ ಸಾಗುತ್ತಲೇ ಅವರು ತನ್ನನ್ನು ವಿರೋಧಿಸುವ ತನ್ನವರ ಸ್ನೇಹವನ್ನು ಕಳಕೊಳ್ಳದೆ ಅವರ ವಿಚಾರಕ್ಕೆ ತದ್ವಿರುದ್ಧ ಎನ್ನಲಾಗುವ ವಲಯದ ಮುಖ್ಯರ ಸ್ನೇಹವನ್ನು ಸಂಪಾದಿಸಿಕೊಂಡರು.

ಸಂಘವಲಯದಲ್ಲಿ

 ತಾರುಣ್ಯದಿಂದಲೇ ಅವರನ್ನು ಬಾಧಿಸುತ್ತಿದ್ದ ಮಧುಮೇಹ ಕಾಯಿಲೆಗೆ ಸ್ನೇಹಿತರ ಸಲಹೆಯಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ ನಡೆಯುತ್ತಿರುವ ಜಿಗಣಿಯ ವಿವೇಕಾನಂದ ಯೋಗ ಕೇಂದ್ರದಲ್ಲಿ ವಾರಗಳ ಕಾಲ ಇದ್ದು ಚಿಕಿತ್ಸೆಯನ್ನು ಪಡೆದುಕೊಂಡರು. ಅಲ್ಲಿ ಅದೇ ಸಮಯದಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದ ಸಂಘದ ಸರಕಾರ್ಯವಾಹರಾಗಿದ್ದ ಹೊ. ವೆ. ಶೇಷಾದ್ರಿಯವರ ಸಂಪರ್ಕವಾಗಿ ಅವರೊಂದಿಗೆ ಒಂದು ವೈಚಾರಿಕ ಸಂವಾದವನ್ನು ನಡೆಸಿದರು. ಚಿಂತನಶೀಲರಾಗಿದ್ದ ಶೇಷಾದ್ರಿಯವರೂ ದುರ್ಬಲ ಸಮುದಾಯದ ಜನರನ್ನು ಸಬಲರನ್ನಾಗಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಜೋಡಿಸಬೇಕೆನ್ನುವ ವಿಚಾರವುಳ್ಳವರೇ ಆಗಿದ್ದರು. ಆದರವರದು ಸಾಮರಸ್ಯದ ದಾರಿ. ಅದೇ ವಿಚಾರವುಳ್ಳ ಸಿದ್ದಲಿಂಗಯ್ಯನವರು ಭಿನ್ನ ದಾರಿಯಲ್ಲಿದ್ದರು. ಶೇಷಾದ್ರಿಯವರ ಜತೆಗಿನ ಸ್ನೇಹ-ಸಂವಾದಗಳು ಅವರ ದಾರಿಯನ್ನು ಇನ್ನಷ್ಟು ಪರಿಷ್ಕರಿಸಿಕೊಳ್ಳುವಂತೆ ಮಾಡಿದವು. ಮುಂದಕ್ಕೆ ಅವರಿಗೆ ಜಗದೀಶ್, ವಾದಿರಾಜ್ ಮುಂತಾದ ಸಂಘದ ಕೆಲವು ಪ್ರಚಾರಕರ, ಕಾರ್ಯಕರ್ತರ ಆತ್ಮೀಯತೆಗಳೂ ಲಭಿಸುತ್ತ ಹೋದವು. ಅವರ ನಿಲುವುಗಳೂ ವಿಸ್ತಾರವನ್ನು ಪಡೆಯುತ್ತ ಹೋದವು.

1996ರಲ್ಲಿ ಬೆಂಗಳೂರಿನ ರಾಷ್ಟ್ರೋತ್ಥಾನ ಸಭಾಂಗಣದಲ್ಲಿ ಸಾಮರಸ್ಯ ವೇದಿಕೆಯ ವತಿಯಿಂದ ಎರಡು ದಿನಗಳ ಸಾಮರಸ್ಯ ಸಾಹಿತ್ಯ ಗೋಷ್ಠಿ ನಡೆಯಿತು. ಸಾಮರಸ್ಯ ವೇದಿಕೆಯು ಹಿಂದೂ ಸಮಾಜದ ಒಳಗೆ ಸಾಮರಸ್ಯವನ್ನು ಉಂಟುಮಾಡಲು ಪ್ರಾರಂಭಗೊಂಡ ಸಂಘದ್ದೇ ಗತಿವಿಧಿ ಎನ್ನಲಾಗುವ ಒಂದು ವೇದಿಕೆ. ಆ ಗೋಷ್ಠಿಯಲ್ಲಿ ಸಮಾರೋಪದ ಭಾಷಣ ಸಿದ್ದಲಿಂಗಯ್ಯನವರದೇ. ತನ್ನವರ ವಿರೋಧವನ್ನು ಲೆಕ್ಕಿಸದೆ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಮತ್ತಲ್ಲಿ ಮಾತಾಡುತ್ತ ಸಾಮರಸ್ಯದ ಕುರಿತ ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತ ಅದಕ್ಕೆ ಪೂರಕವಾಗಿ ತಾನು ದಲಿತ ಕವಿಯಲ್ಲ, ಕನ್ನಡ ಕವಿಯೆಂದು ಘೋಷಿಸಿದರು. ಮರುದಿನ ಪತ್ರಿಕೆಗಳಲ್ಲಿ ಇದೇ ಶೀರ್ಷಿಕೆಯಲ್ಲಿ ಈ ಸುದ್ದಿ ಪ್ರಕಟವೂ ಆಯಿತು. ಹೀಗೆ ಅವರು ಮೊದಲು ದಲಿತ ಸಂವೇದನೆಯನ್ನು ಹೊಂದಿದ್ದರೂ ಸಮಾಜವನ್ನು ನೋಡುವ ಅವರ ದೃಷ್ಟಿ ವಿಸ್ತಾರಗೊಂಡಂತೆಲ್ಲ ಬಡವರು ನೊಂದವರು ಉಳಿದ ಸಮುದಾಯದಲ್ಲಿಯೂ ಇದ್ದಾರೆ ಎಂಬ ತಥ್ಯವನ್ನು ಕಂಡುಕೊಂಡು ತಮ್ಮ ಸಂವೇದನೆಯನ್ನು ವಿದ್ಯಾರ್ಥಿ ರೈತ ಕಾರ್ಮಿಕ ಹೀಗೆ ವಿಸ್ತಾರಗೊಳಿಸುತ್ತ ಆಯೆಲ್ಲರ ಹಿತ ಕಾಯುವಲ್ಲಿ ಪರಿಶ್ರಮರತರಾದರು.

ರಾಜಕೀಯ ನೆಲೆಯಲ್ಲಿ

ಅವರಿಗೆ ಒಂದೆಡೆಯಿಂದ ರಾಮಕೃಷ್ಣ ಹೆಗಡೆ, ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ ಮುಂತಾದ ರಾಜಕೀಯ ಪ್ರಮುಖರ ಸ್ನೇಹವೂ ಇತ್ತು. ಎರಡು ಅವಧಿಗಳಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ತಮ್ಮೀ ಜನರ ಶ್ರೇಯಕ್ಕಾಗಿ ರಾಜಕೀಯ ನೆಲೆಯಲ್ಲಿಯೂ ದುಡಿದರು. ಅಲ್ಲಿ ಅವರು ಪ್ರಸ್ತಾಪಿಸಿದ ವಿಷಯಗಳೆಲ್ಲ ಪುಸ್ತಕರೂಪವನ್ನೂ ಪಡೆದಿವೆ. ಪ್ರಧಾನಿ ಮೋದಿಯವರ ಬಳಿ ಕೂಡಾ ಇದೇ ದೃಷ್ಟಿಯಿಂದ ಮಾತುಕತೆ ನಡೆಸಿದ್ದರು. ಕೇಂದ್ರ ಗೃಹಮಂತ್ರಿ ಅಮಿತ್ ಶಹಾ ತಮ್ಮ ಭೇಟಿಗೆ ಮನೆಗೇ ಬಂದಾಗಲೂ ಅವರು ತಮ್ಮೀ ವಿಚಾರವನ್ನು ಹಂಚಿಕೊಳ್ಳದೆ ಬಿಡಲಿಲ್ಲ. ಈಯೆಲ್ಲ ಸಂದರ್ಭಗಳಲ್ಲಿ ಅವರು ಸಾಹಿತಿಗಳೆನಿಸಿಕೊಂಡ ಹೋರಾಟಗಾರರೆನಿಸಿಕೊಂಡ ತಮ್ಮವರಿಂದ ತೀವ್ರವಾದ ಪ್ರತಿಭಟನೆಯನ್ನು ಎದುರಿಸಬೇಕಾಯಿತು.

ಮುಂದೆ ಅವರು ತಮ್ಮವರೆನ್ನುವವರ ಕುರಿತಂತೆಯೂ ವಿನಯದಿಂದ ಆದರೆ ಅಷ್ಟೇ ಸ್ಪಷ್ಟವಾಗಿ ಅಭಿಪ್ರಾಯವನ್ನು ಪ್ರಕಟಿಸಿದ್ದಾರೆ. ಅವರೆನ್ನುವಂತೆ; ದಲಿತ ಸಂಘರ್ಷ ಸಮಿತಿ ದಾರಿ ತಪ್ಪಿದೆ, ದುಡ್ಡು ಕೊಟ್ಟವರು ಹೇಳಿದಂತೆ ಹೋರಾಟ ಮಾಡುತ್ತಿದೆ. ಅಂಬೇಡ್ಕರ್ ವಾದಿಗಳು ಅಂಬೇಡ್ಕರ್ ಕುರಿತು ಒಂದಕ್ಷರವನ್ನೂ ಓದಿಕೊಂಡಿರುವುದಿಲ್ಲ. ಅಲ್ಲಿ ದ್ವೇಷವಷ್ಟೆ ತುಂಬಿಕೊಂಡಿದೆ. ಮೇಲ್ವರ್ಗದವರನ್ನು ದ್ವೇಷಿಸುವುದರಿಂದ ಏನನ್ನೂ ಸಾಧಿಸಲಾಗದು..

ಸಮನ್ವಯದ ನಾಸ್ತಿಕ

‘ಇಕ್ರಲಾ..’ ‘ದಲಿತರು ಬಂದರು ದಾರಿ ಬಿಡಿ..’ ‘ಯಾರಿಗೆ ಬಂತು ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ..’ ಎನ್ನುತ್ತ ದಲಿತ ಬಂಡಾಯಗಳ ಚಳವಳಿಗಳಿಗೆ ಹುಟ್ಟನ್ನೂ ದಾರಿಯನ್ನೂ ತೋರಿದ ಕವಿ ಮುಂದೆ ಸಾಗಿದ ಇಂಥ ದಿಕ್ಕನ್ನು ನೋಡಿದಾಗ ಅವರ ವಲಯದ ಮಂದಿ ದಿಙ್ಮೂಢರಾಗುವುದು ಸಹಜ, ಅವರ ಯೋಚನಾಮಿತಿಯಲ್ಲಿ ಪ್ರತಿಭಟಿಸುವುದೂ ಸಹಜ. ಆದರೆ ತನ್ನ ಜತೆಗೆ ಯಾರು ಬಂದರು, ಎಷ್ಟು ಜನ ಬಂದರು ಎಂಬುದನ್ನು ನೋಡದೆ ಸಿದ್ದಲಿಂಗಯ್ಯ ಏಕಾಂಗಿಯಾಗಿ ಮುನ್ನಡೆದು ತಾವು ವಿರೋಧಿಸುತ್ತಿದ್ದ ವಿಚಾರಪರಿವಾರದಲ್ಲಿಯೂ ದುರ್ಬಲರ ಕುರಿತು ಇರುವ ಸಂವೇದನೆಯನ್ನು ಗುರುತಿಸಿ ಅದರ ಜತೆಗೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಗಿದರು.

      ಹೀಗೆ; ಅವರ ಬದುಕಿನ ಸಾಧನೆಯಲ್ಲಿ ದರ್ಪದ ಜಮೀನುದಾರರು ಅಧಿಕಾರಿಗಳು ಒಂದು ರೀತಿಯ ಪ್ರಭಾವವನ್ನು ಬೀರಿದರೆ ನಾಗಪ್ಪಾಚಾರ್ ಆಂಡಾಳಮ್ಮನಂಥವರು ಇನ್ನೊಂದು ರೀತಿಯ ಪ್ರಭಾವವನ್ನು ಬೀರುವಲ್ಲಿ ಯಶಸ್ವಿಯಾದರು.

ಅವರು ಶ್ರೀಮಂತರು-ಬಡವರು, ನಗರಿಗರು- ಹಳ್ಳಿಗರು ಯೋಚಿಸುವ ಧಾಟಿಯಲ್ಲಿರುವ ವ್ಯತ್ಯಾಸವನ್ನು ಗುರುತಿಸುತ್ತಿದ್ದರು: ರಸ್ತೆಯಲ್ಲಿ ನಡೆಯುವಾಗ ಕಲ್ಲಿನಿಂದ ಎಡವಿದರೆ ಶ್ರೀಮಂತ ಕಾಲಿಗೇನಾಯಿತೆಂದು ನೋಡಿ ವ್ಯವಸ್ಥೆಯನ್ನು ಆಕ್ಷೇಪಿಸಿ ಹಾಗೆಯೇ ಮುಂದೆ ಹೋಗುತ್ತಾನೆ, ಹಳ್ಳಿಯ ಬಡವ ಅದನ್ನು ಮೆಟ್ಟಿದೆನೆಂದು ತಿಳಿದು ಅದಕ್ಕೆ ನಮಸ್ಕರಿಸಿ ರಸ್ತೆಯ ಪಕ್ಕಕ್ಕಿಟ್ಟು ಮುಂದೆ ಹೋಗುತ್ತಾನೆ. ಈ ನಿಟ್ಟಿನಲ್ಲಿ ಹಳ್ಳಿಯವರಿಂದ ಬಡವರಿಂದ ಕಲಿಯುವುದು ತುಂಬಾ ಇರುತ್ತದೆ ಎನ್ನುತ್ತಿದ್ದ ಅವರು ದೇವರನ್ನು ನಂಬದ ನಾಸ್ತಿಕರಾಗಿದ್ದರು ಎಂಬುದನ್ನು ನಂಬುವುದೇ ಕಷ್ಟ. ಅಷ್ಟಲ್ಲದೇ ತನ್ನನ್ನು ವಿರೋಧಿಸುವವರನ್ನು ಪ್ರತಿಭಟಿಸುವವರನ್ನು ಎಲ್ಲರನ್ನೂ ಅತೀವ ಗೌರವದಿಂದ ಕಾಣುತ್ತಿದ್ದ ಅವರಲ್ಲಿ ಆಸ್ತಿಕನಲ್ಲಿರಬಹುದಾದ ಶ್ರದ್ಧೆ, ವಿನಯ, ನಿಃಸ್ಪೃಹತೆ ಇತ್ಯಾದಿ ದೈವೀಗುಣಗಳು ಸಂಪನ್ನವಿದ್ದವು. ಸಾಮಾನ್ಯವಾಗಿ ನಾಸ್ತಿಕನಲ್ಲಿ ನಿರೀಕ್ಷಿಸುವ ದಂಬ ಅಹಂಕಾರ ಇತ್ಯಾದಿ ಗುಣವಿಕಾರಗಳು ಅವರ ಸ್ವಭಾವದಲ್ಲಿ ಸ್ಥಾನಪಡೆದಿರಲಿಲ್ಲ. ಅಲ್ಲದೇ ಅವರ ಶೋಧಪ್ರಬಂಧದ ವಿಷಯವು ‘ಗ್ರಾಮದೇವತೆಗಳು’ ಆಗಿತ್ತು!

ಆಗಬೇಕು ನಷ್ಟಪರಿಹಾರ

 ಪ್ರಸ್ತುತ ಸಂದರ್ಭದಲ್ಲಿ ಸಮಗ್ರ ಸಮಾಜದ ಹಿತವನ್ನು ಕುರಿತು ಆಲೋಚಿಸುವವರನ್ನು ಬಲಪಂಥೀಯರು ಎಂದು ಗುರುತಿಸಲಾಗುತ್ತದೆ. ಹಾಗೇ ಕೆಲವು ನಿರ್ದಿಷ್ಟ ಸಮುದಾಯ, ಪಂಗಡ, ವರ್ಗಗಳ ಬಗ್ಗೆ ಸಂಘರ್ಷದ ಧಾಟಿಯಲ್ಲಿ ಯೋಚಿಸುವವರನ್ನು ಎಡಪಂಥೀಯರೆಂದು ಗುರುತಿಸಲಾಗುತ್ತದೆ. ಸಮಗ್ರವಾಗಿ ಯೋಚಿಸುವವರಿಗೆ ಯಾರೊಂದಿಗೂ ಸ್ನೇಹಹಸ್ತವನ್ನು ಚಾಚಲು ಅಡ್ಡಿಯಿರಲಾರದು. ಸಂಘರ್ಷದ ಧಾಟಿಯಲ್ಲಿ ಯೋಚಿಸುವವರಿಗೆ ಆ ಧಾಟಿಯೇ ಒಂದು ಮುಖ್ಯ ಅಡ್ಡಿ. ಇಂಥಲ್ಲಿ ಇವರ ನಡುವೆ ಒಂದು ಸೇತುವಾಗಿ ಇದ್ದವರು ಸಿದ್ದಲಿಂಗಯ್ಯನವರು. ಸದ್ಯಕ್ಕೆ ಅಂಥ ಇನ್ನೊಬ್ಬ ವ್ಯಕ್ತಿ ಸಿದ್ಧಗೊಳ್ಳಬೇಕಾಗಿದೆ. ಅಲ್ಲಿಯವರೆಗೆ ಅವರಿಲ್ಲದಿರುವಿಕೆಯು ಈ ನಿಟ್ಟಿನಲ್ಲಿಯಂತೂ ಒಂದು ನಷ್ಟವೇ. ಇದನ್ನು ತುಂಬಲಾರದ ನಷ್ಟ ಎಂದು ಕ್ಲೀಷೆಯಾಗಿ ಹೇಳುವುದಕ್ಕಿಂತ ತುಂಬಬೇಕಾದ ನಷ್ಟ ಎಂದು ವಾಸ್ತವತೆಯಿಂದ ಹೇಳುವುದು ಉತ್ತಮ.

ದುರ್ಬಲರ ನೋವಿರುವಲ್ಲಿ ಸಿದ್ದಲಿಂಗಯ್ಯ ಇರುತ್ತಾರೆ ಅನ್ನುವುದು ಅವರ ಕುರಿತಾದ ಭಾವುಕವಾದ ಒಂದು ಒಕ್ಕಣೆ. ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳ್ಳದೆ ಅದನ್ನು ಮೀರಿನಿಂತ ಅವರು ಸಮಾಜದ ಎಲ್ಲ ಸಮುದಾಯದಲ್ಲಿರುವ, ಬದುಕಿನ ಎಲ್ಲ ರಂಗಗಳಲ್ಲಿರುವ ದುರ್ಬಲರ ನೋವಿನಲ್ಲೂ ಇರುತ್ತಾರೆ ಮತ್ತು ಹಾಗೆ ನೋವಿರುವವರ ಮತ್ತು ನೋವಿಲ್ಲದೆಯೂ ನೋವಿಗೆ ಸ್ಪಂದಿಸುವವರ ನಡುವೆ ಸೇತುವಾಗಿಯೂ ಅವರು ಇರುತ್ತಾರೆ ಅನ್ನುವುದು ಅವರ ಕುರಿತಾದ ಈ ಭಾವುಕ ಒಕ್ಕಣೆಯನ್ನು ಸರಿಯಾಗಿ ವಿಸ್ತರಿಸಿದಂತೆ ಆದೀತು.

ನಾರಾಯಣ ಶೇವಿರೆ.

  • email
  • facebook
  • twitter
  • google+
  • WhatsApp

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
ಹೊಸ ಆಟಿಕೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿ ಪ್ರಧಾನಿ ಮೋದಿ ಕರೆ

ಹೊಸ ಆಟಿಕೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿ ಪ್ರಧಾನಿ ಮೋದಿ ಕರೆ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ಮೌಢ್ಯದ ಎಂಜಲ  ಮೇಲೆ  ಉರುಳಿದ್ದು  ಸಾಕು: ರೋಹಿಣಾಕ್ಷ ಶಿರ್ಲಾಲು

ಮೌಢ್ಯದ ಎಂಜಲ ಮೇಲೆ ಉರುಳಿದ್ದು ಸಾಕು: ರೋಹಿಣಾಕ್ಷ ಶಿರ್ಲಾಲು

December 9, 2011

ನೇರನೋಟ: ‘ಇಂಡಿಯಾ’ – ಭಾರತ ಆಗುವುದು ಯಾವಾಗ?

August 28, 2013
ಈಗೆಲ್ಲಿದೆ ಕುವೆಂಪು ಕಂಡ ಆ ದಟ್ಟ ಮಲೆನಾಡು?

ಈಗೆಲ್ಲಿದೆ ಕುವೆಂಪು ಕಂಡ ಆ ದಟ್ಟ ಮಲೆನಾಡು?

January 7, 2022
RSS expresses deep condolence on demise of IAS officer DK Ravi, says ‘We expect impartial inquiry’

RSS expresses deep condolence on demise of IAS officer DK Ravi, says ‘We expect impartial inquiry’

March 17, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In