ಭಾರತ ಸರ್ಕಾರ ಪ್ರತಿ ವರ್ಷ ನೀಡುವ ಪದ್ಮ ಪ್ರಶಸ್ತಿಗಳು ವಿವಿಧ ಸಾಧಕರನ್ನು ದೇಶಕ್ಕೆ ಪರಿಚಯಿಸಿ, ಅವರ ಶ್ರೇಷ್ಠ ಸಾಧನೆಗಳನ್ನು ಅನಾವರಣಗೊಳಿಸುತ್ತದೆ. ೨೦೨೨ನೇ ಸಾಲಿನ ಪದ್ಮ ಪ್ರಶಸ್ತಿಗಳು ಇತ್ತೀಚೆಗೆ ಕೇಂದ್ರ ಸರ್ಕಾರ ಘೋಷಿಸಿದ್ದು, ಅದರಲ್ಲಿ ಕರ್ನಾಟಕದ ಐದು ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ಇಡೀ ರಾಜ್ಯಕ್ಕೆ ಸಂತಸ ಹಾಗೂ ಹೆಮ್ಮಯ ವಿಷಯವಾಗಿದೆ. ಈ ಸಾಧಕರ ಜೀವನಗಾಥೆ ಕುರಿತು ಒಂದಿಷ್ಟು ತಿಳಿದುಕೊಳ್ಳುವುದು ನಮ್ಮಕರ್ತವ್ಯವೂ ಹೌದು.
೧. ಜನರ ಧ್ವನಿಯಾದ ಸಾಹಿತಿ ಡಾ. ಸಿದ್ದಲಿಂಗಯ್ಯ
ಮೂಲತಃ ಬೆಂಗಳೂರು ಗ್ರಾಮಾಂತರ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದವರು. ಕವಿ, ನಾಟಕಕಾರ, ಕನ್ನಡ ಪ್ರಾಧ್ಯಾಪಕ, ಶಾಸಕ ಹಾಗೂ ಉಪೇಕ್ಷಿತ ಸಮಾಜದ ಏಳಿಗೆಗೆ ಶ್ರಮಿಸಿದವರು ಡಾ. ಸಿದ್ದಲಿಂಗಯ್ಯ. ನಾಡಿನಾದ್ಯಂತ ‘ದಲಿತ ಕವಿ’ ಎಂದೇ ಖ್ಯಾತರಾಗಿದ್ದಾರೆ.

‘ಯಾರಿಗೆ ಬಂತು ಎಲ್ಲಿಗೆ ಬಂತು ೪೭ರ ಸ್ವಾತಂತ್ರö್ಯ’ ಎಂಬ ಅವರ ಕವಿತೆಯ ಸಾಲುಗಳು ಇಡೀ ನಾಡತುಂಬ ಜನಪದದಂತೆ ಹರಡಿ, ಚಲನಚಿತ್ರ ಗೀತೆಯಾಗಿಯೂ ಮೂಡಿ ಬಂದಿತ್ತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿ, ದಲಿತ ಚಳವಳಿಗೆ ಹೊಸ ಆಯಾಮ ನೀಡಿದ್ದರು.
‘ಹೊಲೆ ಮಾದಿಗರ ಹಾಡು’, ‘ಮೆರವಣಿಗೆ’, ‘ಏಕಲವ್ಯ’, ‘ನೆಲಸಮ’ ಮುಂತಾದವುಗಳು ಅವರ ಬರೆವಣಿಗೆಯಿಂದ ಹೊರಹೊಮ್ಮಿದ ಅದ್ಭುತ ಕೃತಿಗಳು. ಕವನ, ನಾಟಕ, ವಿಮರ್ಶೆ, ಲೇಖನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೊಡುಗೆ ನೀಡಿದ್ದಾರೆ.
ಶ್ರವಣಬೆಳಗೊಳದಲ್ಲಿ ೮೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ೧೯೮೬ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೨೦೦೭ರಲ್ಲಿ ನಾಡೋಜ ಪ್ರಶಸ್ತಿ ಹಾಗೂ ಪ್ರಸ್ತುತ ಪದ್ಮಶ್ರೀ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳು ಅವರ ಸಾಧನೆಗೆ ಮೆರಗು ತಂದಿವೆ.
೨ ಬಾರಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ, ಕರ್ನಾಟಕ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ೨೦೨೧ರಲ್ಲಿ ಅವರು ಇಹಲೋಕ ತ್ಯಜಿಸಿದ್ದರೂ, ಅವರ ಕೃತಿಗಳು ಮಾತ್ರ ಜನರ ಧ್ವನಿಯಾಗಿ ರಿಂಗಣಿಸುತ್ತಿವೆ.
೨. ನೀಲಿಕ್ರಾಂತಿ ರೂವಾರಿ ಸುಬ್ಬಣ್ಣ ಅಯ್ಯಪ್ಪನ್
ವೃತ್ತಿಯಿಂದ ವಿಜ್ಞಾನಿ ಹಾಗೂ ಅಭಿಯಂತರ. ಬೆಂಗಳೂರು ಮೂಲದವರು. ಮಂಗಳೂರು ಫಿಶರೀಸ್ ಮಹಾವಿದ್ಯಾಲಯದಲ್ಲಿ ಮೀನು ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಕೃಷಿ, ಜಲಚರ ವಿಜ್ಞಾನ, ಸೂಕ್ಷö್ಮಜೀವ ವಿಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಇವರ ಸೇವೆ ಗಣನೀಯವಾಗಿದೆ. ಭಾರತದ ನೀಲಿಕ್ರಾಂತಿಗೆ ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸುಬ್ಬಣ್ಣ ಅವರು ಮೀನುಗಾರಿಕೆ, ಸರೋವರ ವಿಜ್ಞಾನ (ಲಿಮ್ನಾಲಜಿ) ಹಾಗೂ ಜಲಜೀವಿಗಳ ಸೂಕ್ಷö್ಮ ಜೀವ ವಿಜ್ಞಾನದ ಕ್ಷೇತ್ರಗಳಲ್ಲಿ ಕೈಗೊಂಡ ಸಂಶೋಧನೆಗಳಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಸುಬ್ಬಣ್ಣ ಅಯ್ಯಪ್ಪನ್ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ರಾಷ್ಟಿçÃಯ ಬ್ಯಾಂಕ್ (ನಬಾರ್ಡ), ಯೋಜನಾ ಆಯೋಗದ ಕಾರ್ಯಕಾರಿ ಮಂಡಳಿ ಸದಸ್ಯ, ಮಣಿಪುರ ರಾಜ್ಯದ ಇಂಫಾಲ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ, ಕೇಂದ್ರ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಹಾಗೂ ಭಾರತೀಯ ಕೃಷಿ ಸಂಶೋಧನ ಮಂಡಳಿಯ (ಐ.ಸಿ.ಎ.ಆರ್) ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ವಿವಿಧ ಸಂಶೋಧನೆಗಳ ಮೂಲಕ ಅಪಾರ ಪಾಂಡಿತ್ಯ ಹೊಂದಿದ್ದಾರೆ.
೩. ಗಮಕ ಗಂಧರ್ವ ಎಚ್. ಆರ್. ಕೇಶವಮೂರ್ತಿ
ಎಚ್.ಆರ್. ಕೇಶವಮೂರ್ತಿ ಅವರ ಪ್ರಾಯ ೮೮ರ ಇಳಿವಯಸ್ಸು ಈಗಲೂ ವಿದ್ಯಾರ್ಥಿಗಳಿಗೆ ಅತ್ಯುತ್ಸಾಹದಿಂದ ಉಚಿತವಾಗಿ ಗಮಕ ಕಲೆಯ ಜ್ಞಾನವನ್ನು ಧಾರೆಯೆರೆಯುತ್ತಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸಳ್ಳಿಯವರು. ಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡು, ಗಮಕ ವಾಚನ ಅಧ್ಯಯನ ಆರಂಭಿಸಿದರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ೧೦೦ಕ್ಕೂ ಅಧಿಕ ರಾಗಗಳಲ್ಲಿ ಗಮಕ ವಾಚಿಸುವ ಮೂಲಕ ‘ಗಮಕ ಗಂಧರ್ವ’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.

೪೦ ವರ್ಷಗಳಿಂದ ರಾಜ್ಯ ಹಾಗೂ ದೇಶವ್ಯಾಪಿ ಕಾರ್ಯಕ್ರಮ ನೀಡುತ್ತ ಬಂದಿದ್ದು, ಅವರ ಶೈಲಿಯು ನಾಡಿನಾದ್ಯಂತ ಖ್ಯಾತವಾಗಿದೆ. ಕುಮಾರವ್ಯಾಸ ಭಾರತ, ರನ್ನನ ಗದಾಯುದ್ಧ, ರಘುವಂಶ ಮುಂತಾದ ಶ್ಲೋಕಗಳಿಗೆ ರಾಗ ಸಂಯೋಜಿಸಿ, ಗಮಕ ಕಲೆಯ ಮಹತ್ವವನ್ನು ದೇಶದೆಲ್ಲೆಡೆ ಪಸರಿಸಿದ್ದಾರೆ. ಕುಮಾರವ್ಯಾಸ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ವಿವಿಧ ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ಅವರ ಸುದೀರ್ಘ ಕಲಾ ಸೇವೆಗೆ ಪದ್ಮಶ್ರೀ ಒಲಿದು ಬಂದಿದ್ದು, ಗಮಕ ಕಲೆಯ ಮೆರಗು ಉಚ್ಛಾçಯವಾಗಿದೆ.
೪. ಕನ್ನಡದ ಭಗೀರಥ ಅಮೈ ಮಹಾಲಿಂಗ ನಾಯ್ಕ
ಕೃಷಿಗೆ ಅಗತ್ಯವಿರುವ ನೀರಿಗೆ ಬೋರ್ವೆಲ್ ಅವಲಂಬಿತವಾಗದೆ, ಸಾಂಪ್ರದಾಯಕ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಏಕಾಂಗಿಯಾಗಿ ದುಡಿದವರು ಮಂಗಳೂರಿನ ಕೃಷಿ ಕಾರ್ಮಿಕ ಅಮೈ ಮಹಾಲಿಂಗ ನಾಯ್ಕ.
ಸುರಂಗಗಳಲ್ಲಿ ವಿದ್ಯುತ್ ರಹಿತವಾಗಿ, ಗುರುತ್ವಾಕರ್ಷಣೆ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿದ ಮಹಾಂಲಿAಗ ನಾಯ್ಕ ಅವರು ಒಬ್ಬರೇ ೭ ಸುರಂಗಗಳನ್ನು ಕೊರೆದಿದ್ದಾರೆ. ತಮ್ಮ ಪಾಲಿಗೆ ದೊರೆತ ಎರಡು ಎಕರೆ ಬರಡು ಗುಡ್ಡ ಪ್ರದೇಶದಲ್ಲಿ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ.

ಹಗಲು ರಾತ್ರಿ ಎನ್ನದೇ ಶ್ರಮಿಸಿ, ಜೀವಜಲಕ್ಕಾಗಿ ತೋಡಿದ ಐದು ಸುರಂಗಳಲ್ಲಿ ನೀರು ದೊರಕಲಿಲ್ಲ. ಆದರೂ ಅವರ ಉತ್ಸಾಹ ಬತ್ತಲಿಲ್ಲ. ೬ನೇ ಸುರಂಗದಲ್ಲಿ ಅವರ ಯತ್ನದ ಫಲ ಜೀವಜಲ ಉದಿಸಿತು. ತಮ್ಮದೇ ಸ್ವಂತ ತೋಟ ಮಾಡುವ ಅವರ ಕನಸು ಫಲಿಸಿತು. ಈ ಕಾರ್ಯಕ್ಕೆ ಅವರ ಸಂಪೂರ್ಣ ಕುಟುಂಬ ಬೆಂಬಲವಾಗಿತ್ತು.
ಅವರ ಅವಿಶ್ರಾಂತ ಕೃಷಿ ಕಾಯಕ ಗುರುತಿಸಿದ ದೂರದರ್ಶನ ಅವರ ಕುರಿತು ‘ವಾಟರ್ ವಾರಿಯರ್’ ಎಂಬ ಧಾರಾವಾಹಿ ಬಿತ್ತರಿಸಿತ್ತು. ೨೦೧೮ರಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಪುರಸ್ಕಾರ ಸಂದಿತು. ಸದ್ಯ ಪದ್ಮಶ್ರೀ ಲಭಿಸುವ ಮೂಲಕ ಅವರ ಜೀವನಗಾಥೆ ರೈತ ಸಮುದಾಯಕ್ಕೆ ಸ್ಪೂರ್ತಿಯಾಗಿದೆ.
೫. ಕೃಷಿ ಯಂತ್ರಗಳ ಅನ್ವೇಷಕ ಅಬ್ದುಲ್ ನಡಕಟ್ಟಿನ
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಅಬ್ದುಲ್ ಖಾದರ ನಡಕಟ್ಟಿನ ಅವರ ಕೃಷಿ ಸಂಶೋಧನೆ ಹಾಗೂ ಕೃಷಿ ಉಪಕರಣಗಳ ಅನ್ವೇಷಣೆಗಳನ್ನು ಗುರುತಿಸಿದ ಕೇಂದ್ರ ಸರ್ಕಾರ, ಅವರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.

ಅಣ್ಣಿಗೇರಿಯಲ್ಲಿ ವಿಶ್ವಶಾಂತಿ ಕೃಷಿ ಸಂಶೋಧನ ಕೇಂದ್ರ ಸ್ಥಾಪಿಸಿ, ಅದರಲ್ಲಿ ಕೃಷಿ ಉಪಕರಣಗಳ ಸಂಶೋಧನೆ ಹಾಗೂ ನಿರ್ಮಾಣ ಕಾರ್ಯ ಕೈಗೊಂಡ್ಡಿದ್ದಾರೆ. ನಡಕಟ್ಟಿನ ಕೂರಗಿ, ಹುಣಸೆ ಬೀಪ ಬೇರ್ಪಡಿಸುವ ಯಂತ್ರ, ಗಾಲಿ ಕುಂಟೆ, ಶೇಂಗಾ ಬಿಡಿಸುವ ಯಂತ್ರ, ಕಾಲುವೆ ತೋಡುವ ಟ್ರೆಂಚ್, ರೋಟೊವೆಟರ್ ಇವು ನಡಕಟ್ಟಿನ ಅವರ ಪ್ರಮುಖ ಸಂಶೋಧನೆಗಳು. ಮಹಾರಾಷ್ಟç, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ದೇಶಾದ್ಯಂತ ನಡಕಟ್ಟಿನ ಕೂರಗಿ ಯಂತ್ರಗಳು ಬೇಡಿಕೆಯಲ್ಲಿವೆ.
ಅವರ ಕೃಷಿಪರ ಕಾಳಜಿ, ಕೃಷಿ ಸಂಶೋಧನೆಗೆ ೨೦೧೫ರಲ್ಲಿ ರಾಷ್ಟçಪತಿ ಪ್ರಣಬ್ ಮುಖರ್ಜಿ ಅವರಿಂದ ಜೀವಮಾನ ಸಾಧನೆ ಪ್ರಶಸ್ತಿ, ೨೦೧೭ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ. ತಮ್ಮ ಕೃಷಿ ಸಂಶೋಧನ ಕೇಂದ್ರದಲ್ಲಿ ನೂರಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿ ಅನೇಕರ ಬಾಳಿಗೆ ಬೆಳಕಾಗಿದ್ದು, ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಇದಲ್ಲದೇ, ತಮಿಳುನಾಡಿನ ಶಹನಾಯಿ ವಾದಕ ಹಾಗೂ ಹಿಂದೂಸ್ಥಾನಿ ಸಂಗೀತಗಾರ ಪಂ. ಎಸ್. ಬಾಳೇಶ ಭಜಂತ್ರಿ ಈ ಬಾರಿ ಪದ್ಮಶ್ರೀಗೆ ಭಾಜನರಾಗಿದ್ದು, ಇವರು ಮೂಲತಃ ಬೆಳಗಾವಿಯ ಎಮ್.ಕೆ. ಹುಬ್ಬಳ್ಳಿಯವರು. ಸದ್ಯ ಇವರು ಚೆನ್ನೆöÊನಲ್ಲಿ ನೆಲೆಸಿದ್ದಾರೆ.
ಒಟ್ಟಾರೆ, ಕನ್ನಡಿಗರ ಸಾಧನೆ ಇಡೀ ದೇಶದಲ್ಲೆ ಅನನ್ಯವಾಗಿದೆ. ಒಬ್ಬೊಬ್ಬರದ್ದು ಒಂದೊAದು ಕಥೆ. ಎಲ್ಲ ಕಥೆಗಳ ಮೂಲಕ ಅಪಾರ ಸ್ಪೂರ್ತಿ ಪಡೆಯಬಹುದು. ಈ ಸಾಧಕರ ಕಾರ್ಯ ಸಾಧನೆಗಳಿಗೆ ಪದ್ಮಶ್ರೀ ಸಲ್ಲುವ ಮೂಲಕ ಪದ್ಮಶ್ರೀಯ ಗರಿಮೆಯೇ ಹಿರಿದಾಗಿದೆ.