ಜನವರಿ ೧, ೨೦೨೨ ರಂದು ಬೆಂಗಳೂರಿನ ಬಸವನಗುಡಿಯ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಪರಿಸರದ ಕುರಿತು ನಮ್ಮ ದೃಷ್ಟಿಕೋನ’ ಎಂಬ ವಿಷಯದ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮ ಪೂಜನೀಯ ಸರಸಂಘಚಾಲಕರಾದ ಮಾನನೀಯ ಶ್ರೀ ಮೋಹನ ಭಾಗವತ್ ಅವರು ನೀಡಿದ ಉಪನ್ಯಾಸದ ಸಾರರೂಪ ಇಲ್ಲಿದೆ.
ಪರಿಸರದ ಕುರಿತು ನಮ್ಮ ದೃಷ್ಟಿಕೋನವೇನು? ಈ ಬಗ್ಗೆ ಬೆಂಗಳೂರಿನಲ್ಲಿ ನನ್ನದೊಂದು ಭಾಷಣ ಏರ್ಪಡಿಸಬೇಕೆಂಬುದು ಇಲ್ಲಿನ ಸಂಘದ ಅಧಿಕಾರಿಗಳ ಇಚ್ಛೆಯಾಗಿತ್ತು. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಪ್ರಸ್ತುತ ಸಂದರ್ಭದಲ್ಲಿ ಈ ಬಗ್ಗೆ ಇನ್ನಷ್ಟು ಹೆಚ್ಚು ಚಿಂತನೆ ನಡೆಯಬೇಕು. ಇದು ಕೂಡ ಎಲ್ಲರಿಗೂ ಗೊತ್ತಿರುವ ವಿಷಯವೇ. ಜನರು ಈ ವಿಷಯದ ಕುರಿತು ಚಿಂತನೆ ಮಾಡುತ್ತಲೇ ಇದ್ದಾರೆ. ಆದರೆ ಒಂದು ಬಾರಿ ಮತ್ತೆ ಎಲ್ಲರೂ ಈ ಕುರಿತು ಯೋಚಿಸುವಂತಾಗಲಿ ಎಂಬ ಕಾರಣಕ್ಕಾಗಿ ಪ್ರಾಯಶಃ ನನಗೆ ಈ ವಿಷಯದ ಕುರಿತು ಮಾತನಾಡಲು ಹೇಳಿರಬಹುದು.
ಪರಿಸರದ ಅಪಾಯ ಅದೆಷ್ಟು ಹೆಚ್ಚಿದೆ ಎಂಬುದು ಈಗ ತಾನೆ ನಾವೆಲ್ಲರೂ ಕೇಳಿದ ಗೀತೆಯಿಂದ ವೇದ್ಯವಾಗುತ್ತದೆ. ಓಝೋನ್ ಪದರದಲ್ಲಿ ಬಿರುಕು ಬಿಟ್ಟಿರುವುದರಿಂದ ಜಾಗತಿಕ ತಾಪಮಾನದ ಅಪಾಯ ಬಲವಾಗುತ್ತಿದೆ. ಎಲ್ಲೆಡೆ ಮಾಲಿನ್ಯ ಆವರಿಸಿಕೊಂಡಿದೆ. ಅನ್ನ, ನೀರು, ಭೂಮಿ, ವನಸ್ಪತಿ ಎಲ್ಲವೂ ವಿಷಮಯವಾಗಿದೆ. ಮಾಲಿನ್ಯದ ಅಪಾಯ ಬಹಳಷ್ಟು ಹೆಚ್ಚಿದೆ. ಪ್ರಕೃತಿ ಕೂಡ ವಿಚಿತ್ರವಾಗಿಬಿಟ್ಟಿದೆ. ಋತುಮಾನದ ಪ್ರಕಾರವೇ ನಮ್ಮ ಬದುಕು ಸಾಗುತ್ತಿತ್ತು. ಆದರೀಗ ಋತುಮಾನಗಳ ಕ್ರಮವೇ ತಪ್ಪಿಹೋಗಿದೆ ಎಂದು ಭಾಸವಾಗುತ್ತಿದೆ. ಪರಿಸರ ಮಾಲಿನ್ಯದ ಪರಿಣಾಮವಾಗಿಯೇ ಇಂದು ಹಲವು ಬಗೆಯ ರೋಗರುಜಿನಗಳು ಹುಟ್ಟಿಕೊಂಡಿವೆ, ಉಳಿದ ರೋಗಗಳಿಗೂ ಮನುಷ್ಯನ ಶರೀರ ತೆರೆದ ಮೈದಾನವಾಗಿಬಿಟ್ಟಿದೆ. ಹೀಗಾಗಿ ಇಡೀ ವಿಶ್ವವೇ ಚಿಂತಿತವಾಗಿದೆ. ಆದರೆ ಚಿಂತಿಸುವುದೊಂದೇ ಗೋಚರಿಸುತ್ತಿದೆಯೇ ಹೊರತು ಬೇರೆ ಏನೂ ಕಂಡುಬರುತ್ತಿಲ್ಲ. ಬ್ರೆಜಿಲ್ನಲ್ಲಿ ಭೂಸಮ್ಮೇಳನ ಜರುಗಿದಾಗಿನಿಂದ ಹಿಡಿದು ಗ್ಲಾಸ್ಗೋ ಸಮ್ಮೇಳನದವರೆಗೆ ಬಹಳಷ್ಟು ಘೋಷಣೆಗಳು ಮೊಳಗಿದವು. ಬಹಳಷ್ಟು ದೃಢನಿರ್ಧಾರಗಳನ್ನು ಕೈಗೊಳ್ಳಲಾಯಿತು.ಸುಸ್ಥಿರತೆಯ ಕುರಿತು ಮಾತುಕತೆಗಳು ನಡೆದವು. ಕಾರ್ಬನ್ ಕ್ರೆಡಿಟ್ ಕಡಿಮೆ ಮಾಡುವ ಮಾತು ಕೇಳಿಬಂತು. ಆದರೆ ಯಾವ ದೇಶಗಳಲ್ಲಿ ಇವೆಲ್ಲ ನಡೆದಿವೆಯೋ ಆ ದೇಶಗಳಲ್ಲಿ ಇವುಗಳನ್ನು ಸಾಧಾರಣ ಕೃತಿರೂಪಕ್ಕೆ ತರುವ ಪ್ರಯತ್ನ ನಗಣ್ಯವಾಗಿದೆ ಮತ್ತು ಯಾರು ಈ ವಿಷಯದಲ್ಲಿ ದೋಷಿಗಳಲ್ಲವೋ ಆ ದೇಶಗಳ ಮೇಲೆ ಹೆಚ್ಚಿನ ಒತ್ತಡವಿದೆ.
ಪರಿಸರ ರಕ್ಷಣೆಯ ವಿಚಾರ ಮಾಡಿದ್ದಾದರೆ ಅಭಿವೃದ್ಧಿಗೆ ಅಡ್ಡಿಯಾಗಬಹುದೆಂಬ ಆತಂಕವೂ ಆ ದೇಶಗಳನ್ನು ಕಾಡುತ್ತಿದೆ. ‘ನೀವು ನಿಮ್ಮ ವಿಕಾಸವನ್ನು ತಡೆಯಿರಿ’ ಎಂದು ವಿಕಾಸಶೀಲ ದೇಶಗಳ ಮೇಲೆ ವಿಕಸಿತ ದೇಶಗಳು ಒತ್ತಡ ಹೇರುತ್ತಿವೆ. ಸ್ವಯಂ ವಿಕಾಸ ಸಾಧಿಸಿದ ಬಳಿಕ ಈಗ ಅವು ನಮ್ಮನ್ನು ಹತ್ತಿಕ್ಕತೊಡಗಿವೆ!
ಈ ಸಮಸ್ಯೆಗೆ ಹಾಗಿದ್ದರೆ ನಿಜವಾದ ಪರಿಹಾರ ಏನು? ‘ಅಭಿವೃದ್ಧಿಯ ಯೋಜನೆಗಳಿಗಾಗಿ ಪರಿಸರ ನಾಶ ತಪ್ಪಿದ್ದಲ್ಲ’ ಎಂಬುದು ಇದು ಇಂದಿನ ಜಗತ್ತಿನ ನಿಯಮವಾಗಿದೆ. ಪರಿಸರವನ್ನು ಸುಸ್ಥಿತಿಯಲ್ಲಿಡಬೇಕೆಂದಾದರೆ ಅಭಿವೃದ್ಧಿ ಕ್ರಮಗಳನ್ನು ಸ್ಥಗಿತಗೊಳಿಸಿ ಎಂದೂ ಹೇಳಲಾಗುತ್ತಿದೆ. ೨೦೧೨ರಲ್ಲಿ ಒಂದು ಸಿನಿಮಾ ಬಂದಿತ್ತು. ಕಾರ್ಯಕ್ರಮವೊಂದಕ್ಕೆ ತೆರಳಲು ನನಗೆ ಇನ್ನೂ ೨೦ ನಿಮಿಷ ಸಮಯ ಉಳಿದಿತ್ತು. ನಾನಿದ್ದ ಕೊಠಡಿಯಲ್ಲಿ ಟಿವಿ ಆನ್ ಆಗಿತ್ತು. ಹಾಗಾಗಿ ಎಚ್ಬಿಓ ವಾಹಿನಿಯಲ್ಲಿ ಆ ಸಿನಿಮಾ ಪ್ರಸಾರವಾಗುತ್ತಿತ್ತು. ಆ ಸಿನಿಮಾದ ಹೆಸರು ‘ದಿ ಎಲೆವಂತ್ ಅವರ್.’ ಅದರರ್ಥ ‘ಅಂತಿಮ ಎಚ್ಚರಿಕೆ’ ಎಂದು. ಆ ಸಿನಿಮಾದಲ್ಲಿ ವಿವಿಧ ದೇಶಗಳ ಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ಆಡಳಿತ ಪ್ರಮುಖರು ಮುಂತಾದವರು ಪರಿಸರ ಸಮಸ್ಯೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇಡೀ ಸಿನಿಮಾದ ತಾತ್ಪರ್ಯವೇನೆಂದರೆ: “ಸುಮಾರು ೩೦೦ ವರ್ಷಗಳ ಹಿಂದಿನವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ ವೈಜ್ಞಾನಿಕ ಪ್ರಗತಿಯೊಂದಿಗೆ ನಮ್ಮ ಜೊತೆ ಸಾಧನಗಳು ಬಂದವು. ಇದುವರೆಗೆ ನಮ್ಮ ಬಳಿಯಿಲ್ಲದ ಸಾಧನಗಳು ಈಗ ದೊರಕಿವೆ. ಇದುವರೆಗೆ ನಾವು ಯಾವ ವೇಗದಲ್ಲಿ ತಿನ್ನುತ್ತಿದ್ದೆವೋ ಈಗ ಅದಕ್ಕಿಂತ ೧೦೦ ಪಟ್ಟು ಅಧಿಕ ವೇಗದಿಂದ ತಿನ್ನಬಲ್ಲೆವು. ಇದೇ ವೇಳೆ ಜೀವನದಲ್ಲಿ ಮೌಲ್ಯಗಳ ಸ್ಥಾನ ಕುಸಿದುಹೋಗುವ ಸಂಗತಿಯೂ ನಡೆಯಿತು. ಮನುಷ್ಯನ ವಿಲಾಸಿ ಬದುಕು ಹೆಚ್ಚತೊಡಗಿತು.”
ಇದುವರೆಗೆ ಮನುಷ್ಯ ‘ಪ್ರವಹಿಸುವ ಇಂಧನ’ ಅವಲಂಬಿಸಿ ಕಾರ್ಯ ನಿರ್ವಹಿಸುತ್ತಿದ್ದ. ಈಗ ಆತ ಸಂಚಿತ ಅಥವಾ ಶೇಖರಿಸಿದ ಇಂಧನದ ಸಂಗ್ರಹವನ್ನು ತೆರೆದುಬಿಟ್ಟ ಮತ್ತು ಅದನ್ನು ಪೂರ್ತಿ ಖಾಲಿ ಮಾಡಲು ಆರಂಭಿಸಿದ. ಕಲ್ಲಿದ್ದಲು, ತೈಲ ಮುಂತಾದ ಸಂಚಿತ ಇಂಧನದ ಸಂಗ್ರಹವನ್ನು ಮತ್ತೆ ತುಂಬಿಸಲು ಸಾಧ್ಯವಿಲ್ಲ. ಪ್ರಕೃತಿಯಲ್ಲಿ ಅಂತಹ ಯಾವುದೇ ವ್ಯವಸ್ಥೆ ಇರುವುದಿಲ್ಲ. ಸೂರ್ಯನ ಬೆಳಕು, ನೀರು, ಗಾಳಿ ಮುಂತಾದವನ್ನು ನಾವು ಉಪಯೋಗಿಸಿದಷ್ಟೂ ಅವು ನಿರಂತರವಾಗಿ ನಮಗೆ ದೊರಕುತ್ತಲೇ ಇರುತ್ತವೆ. ಸಂಚಿತ ಇಂಧನವನ್ನು ಬಳಕೆ ಮಾಡುತ್ತಿದ್ದರೆ ಮನುಷ್ಯನಿಗೆ ಹಾನಿಕಾರಕವಾಗುವ ಸಂಗತಿ ಹೆಚ್ಚುತ್ತದೆ. ಹಾಗಿದ್ದರೂ ನಾವು ಸಂಚಿತ ಇಂಧನವನ್ನು ಔಚಿತ್ಯ ಮೀರಿ ಬಳಕೆ ಮಾಡಿದೆವು. ಇದರಿಂದಾಗಿಯೇ ನಾವೀಗ ಅಪಾಯದ ಶಿಖರದ ಮೇಲೆ ನಿಂತಿದ್ದೇವೆ. ಈ ವಿಷಯಕ್ಕೆ ಸಂಬಂಧಿಸಿ ‘ಫ್ಯೂಚರ್ ಶಾಕ್’ ಎಂಬ ಪುಸ್ತಕವೂ ಪ್ರಕಟವಾಗಿತ್ತು. ನಾವು ಮತ್ತೆ ಹರಿಯುವ ಇಂಧನದ ಬಳಕೆಯತ್ತ ಸಾಗಬೇಕಾಗುತ್ತದೆ ಹಾಗೂ ಸುಸ್ಥಿರತೆಯ ಬಗ್ಗೆ ಗಮನಹರಿಸಬೇಕಾಗುತ್ತದೆ ಎಂದು ಆ ಪುಸ್ತಕದಲ್ಲಿ ಹೇಳಲಾಗಿತ್ತು. ಈ ಸಲಹೆಗಳ ಪದಗಳಲ್ಲಿ ವ್ಯತ್ಯಾಸವಿರಬಹುದು. ಆದರೆ ಸಂದೇಶ ಮಾತ್ರ ಅದೇ ಆಗಿದೆ. ಆದರೆ ಇಷ್ಟೆಲ್ಲ ಆದರೂ ಏನಾಗಬೇಕಿತ್ತೋ ಆ ರೀತಿ ಆಗುವುದು ಕಂಡುಬರುತ್ತಿಲ್ಲ. ಏಕೆ ಕಂಡುಬರುತ್ತಿಲ್ಲ? ಕಾರಣವಿಷ್ಟೇ; ಯಾವ ಕಾರಣಕ್ಕಾಗಿ ನಾವು ಸಂಚಿತ ಅಥವಾ ಶೇಖರಿಸಿದ ಇಂಧನದ ಬಳಕೆ ಮಾಡಿದೆವೋ ಆ ಬಗ್ಗೆ ಈಗಲೂ ನಾವು ತಲೆ ಕೆಡಿಸಿಕೊಂಡಿಲ್ಲ.
ಉದಾಹರಣೆಗಾಗಿ, ನಮ್ಮಲ್ಲಿ ಚರಕ ಸಂಹಿತೆಯಲ್ಲಿ ಹೇಳಿರುವುದೇನೆಂದರೆ ಮನುಷ್ಯನಿರಲಿ, ಜೀವಿಯಿರಲಿ ಅಥವಾ ಜಗತ್ತೇ ಆಗಿರಲಿ, ಅವೆಲ್ಲವೂ ಸಮಾನ ಪಂಚಮಹಾಭೂತ ಮತ್ತು ಚೈತನ್ಯ ತತ್ತ್ವದಿಂದ ಮಾಡಲ್ಪಟ್ಟಿವೆ. ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ – ಎಲ್ಲ ಪದಾರ್ಥಗಳ ಆಧಾರ ಇವೇ ಆಗಿವೆ. ಇದರಿಂದಲೇ ಎಲ್ಲ ವಿಷಯಗಳೂ ನಿರ್ಧರಿತವಾಗುತ್ತದೆ. ಚೇತನದಿಂದ ಚೈತನ್ಯ ಪ್ರಾಪ್ತವಾಗುತ್ತದೆ. ಎಲ್ಲವೂ ಅದೇ ರೀತಿ ಮಾಡಲ್ಪಟ್ಟಿವೆ. ಕಾಲ, ಅರ್ಥ ಮತ್ತು ಕರ್ಮಗಳಲ್ಲಿ ಅತಿಯೋಗ, ಅಯೋಗ ಅಥವಾ ಮಿಥ್ಯಾಯೋಗ ಉಂಟಾಗುವುದರಿಂದ ಇವುಗಳಲ್ಲಿ ವಿಕೃತಿಗಳು ನುಸುಳುತ್ತವೆ. ಕಾಲಕ್ಕೆ ಅನುಗುಣವಾಗಿ ಮನುಷ್ಯ ಬದುಕಲು ಪ್ರಯತ್ನಿಸುತ್ತಾನೆ. ಹೀಗೆ ಬದುಕಲು ಪ್ರಯತ್ನಿಸುವಾಗ ಯಾವುದನ್ನು ಮಾಡಬಾರದಿತ್ತೋ ಅದನ್ನು ಮಾಡುವ ಪ್ರಯತ್ನವೂ ನಡೆಯುತ್ತದೆ. ಅದನ್ನೇ ಮಿಥ್ಯಾಯೋಗ ಎನ್ನಲಾಗುತ್ತದೆ. ಯಾವುದನ್ನು ಮಾಡಬೇಕಿತ್ತೋ ಅದನ್ನು ಮಾಡದಿದ್ದರೆ ಅದನ್ನು ಅಯೋಗ ಎನ್ನಲಾಗುತ್ತದೆ. ಯಾವುದನ್ನು ಕಡಿಮೆ ಮಾಡಬೇಕಿತ್ತೋ ಅದನ್ನು ಅತಿಹೆಚ್ಚು ಮಾಡಿದರೆ ಅದನ್ನು ಅತಿಯೋಗ ಎನ್ನಲಾಗುತ್ತದೆ. ಇದೇ ರೀತಿ ಮನುಷ್ಯನಿಗೆ ಕೆಲವು ಬಯಕೆಗಳಿರುತ್ತವೆ. ಅದನ್ನು ಪೂರ್ತಿಗೊಳಿಸಲು ಕೆಲವು ಸಾಧನಗಳ ಪ್ರಯೋಜನ ಪಡೆಯುತ್ತಾನೆ. ಅದನ್ನು ಅರ್ಥ ಎನ್ನಲಾಗುತ್ತದೆ. ತನ್ನ ಹುಚ್ಚುತನದ ಕಾರಣಕ್ಕಾಗಿ ಆತ ಅರ್ಥದಲ್ಲೂ, ಕರ್ಮದಲ್ಲೂ ಅತಿಯೋಗ, ಅಯೋಗ ಹಾಗೂ ಮಿಥ್ಯಾಯೋಗ ಮಾಡುತ್ತಾನೆ. ಇದರಿಂದಾಗಿ ವಿಕೃತಿ ಮತ್ತು ಅಸಂತುಲನ ಉತ್ಪನ್ನವಾಗುತ್ತವೆ. ಧೀ, ಧೃತಿ ಮತ್ತು ಸ್ಮೃತಿಯಲ್ಲಿ ಭ್ರಮೆ ಮೂಡುವುದರಿಂದಾಗಿ ಹೀಗಾಗುತ್ತದೆ. ಧೀ ಎಂದರೆ ಮನುಷ್ಯನ ಬುದ್ಧಿಶಕ್ತಿ. ಬುದ್ಧಿ ಕೆಲವೊಮ್ಮೆ ತಪ್ಪು ವಿಚಾರ ಮಾಡುತ್ತದೆ ಅಥವಾ ತಪ್ಪುದಾರಿಯಲ್ಲಿ ಕೊಂಡೊಯ್ಯುತ್ತದೆ. ಧೃತಿ ಎಂದರೆ ದೃಢತೆಯಿಂದಿರುವುದು. ಭಯದ ಕಾರಣದಿಂದಾಗಿ ವ್ಯಕ್ತಿ ತಪ್ಪು ಮಾಡುತ್ತಾನೆ. ದುರಾಸೆಯಿಂದಲೂ ತಪ್ಪೆಸಗುತ್ತಾನೆ. ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ರೈಲುಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಈ ಸಂಕಟದ ಸನ್ನಿವೇಶ ಏಕೆ ಉಂಟಾಯಿತು? ಅಲ್ಲಿರುವ ಭೂಮಿ ಒಣಭೂಮಿಯಾಗಿತ್ತು. ಕಡಿಮೆ ನೀರು ಬಳಸಿ ಅಲ್ಲಿ ಪಾರಂಪರಿಕ ಪದ್ಧತಿಯ ಮೂಲಕ ಬೆಳೆ ತೆಗೆಯಲಾಗುತ್ತಿತ್ತು. ಜನರು ಇದನ್ನೇ ಅನುಸರಿಸಿಕೊಂಡು ಹೋಗಬೇಕಿತ್ತು. ಆದರೆ ಜನರು ಈ ಸಂಯಮವನ್ನು ಮೀರಿ ಅಲ್ಲಿ ಕಬ್ಬಿನ ಬೆಳೆ ತೆಗೆಯಲು ಹೊರಟರು. ಕಬ್ಬಿನ ಬೆಳೆಗೆ ಅತ್ಯಧಿಕ ನೀರಿನ ಅಗತ್ಯವಿದೆ. ಹೀಗಾಗಿ ಅಲ್ಲಿ ಅಂತರ್ಜಲದ ಮಟ್ಟ ತೀರಾ ಕೆಳಗೆ ಕುಸಿಯಿತು. ಕಬ್ಬು ಬೆಳೆಯುವುದರಿಂದ ಹೆಚ್ಚಿನ ಹಣ ಸಿಗುತ್ತದೆ ಎಂಬ ದುರಾಸೆಯಿಂದ ತಾವಾಗಿಯೇ ಸಮಸ್ಯೆಯನ್ನು ಮೈಮೇಲೆಳೆದುಕೊಂಡರು. ನಾವು ದೃಢತೆಯನ್ನು ಕಳೆದುಕೊಂಡಿದ್ದೇವೆ. ಪಂಜಾಬಿನಲ್ಲಿ ಹೊಲದಿಂದ ಅತ್ಯಧಿಕ ಹಣ ಸಂಪಾದನೆಗಾಗಿ ಜಮೀನಿಗೆ ಅತಿಹೆಚ್ಚು ರಾಸಾಯನಿಕವನ್ನು ಬಳಸಲಾಯಿತು. ಅದರ ದುಷ್ಪರಿಣಾಮ ಕಂಡುಬಂದಿದೆ. ಇಂದು ಪಂಜಾಬಿನಿಂದ ರೈಲು ತುಂಬಾ ಕ್ಯಾನ್ಸರ್ ರೋಗಿಗಳು ಜೈಪುರಕ್ಕೆ ಬರುತ್ತಿದ್ದಾರೆ. ದೃಢತೆ (ಧೃತಿ) ಕಳೆದುಕೊಂಡಿದ್ದರ ಉದಾಹರಣೆ ಇದು.
ಇದೇ ರೀತಿ ನಮ್ಮ ಸ್ಮೃತಿಯೂ ಭ್ರಷ್ಟವಾಗುತ್ತದೆ. ನಾವು ತಪ್ಪಾಗಿ ನಡೆದುಕೊಳ್ಳುತ್ತೇವೆ. ಒಮ್ಮೆ ಕೆಲವರು ವಿನೋಬಾ ಭಾವೆಯವರನ್ನು ಭೇಟಿಯಾಗಲು ಹೋಗಿದ್ದರು. ನಮ್ಮ ಜಮೀನಿನ ಫಸಲಿನ ಮೇಲೆ ಬಹಳ ಹುಳುಗಳು ಮುತ್ತಿಬಿಟ್ಟಿವೆ ಎಂದು ಅವರು ವಿನೋಬಾಜೀಯವರ ಬಳಿ ತಮ್ಮ ಕೊರಗು ಹೇಳಿಕೊಂಡರು. ಆಗ ವಿನೋಬಾಜೀಯವರು, ನೀವೆಲ್ಲರೂ ನಿಮ್ಮ ಗದ್ದೆಗಳಿಂದ ಕಪ್ಪೆಗಳನ್ನು ಹಿಡಿದು ರಫ್ತು ಮಾಡುತ್ತಿದ್ದೀರಿ. ಇದರಿಂದಾಗಿಯೇ ಹುಳುಗಳು ಆಕ್ರಮಣ ನಡೆಸಿವೆ ಎಂದರು. ಈ ಸಂಗತಿ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಕ್ರಮೇಣ ಈ ಸಂಗತಿ ನಿಜವೆಂದು ಅರಿವಾಗತೊಡಗಿತು. ಏಕೆಂದರೆ ಗದ್ದೆಗೆ ಹುಳುಗಳು ಬಂದಾಗ ಕಪ್ಪೆಗಳು ಅವುಗಳನ್ನು ತಿಂದುಹಾಕುತ್ತಿದ್ದವು. ಕಪ್ಪೆಗಳನ್ನು ಹಿಡಿದು ಪ್ರಯೋಗಾಲಯಗಳಿಗೆ ತಲುಪಿಸುತ್ತಿದ್ದುದರಿಂದ ರೈತರಿಗೆ ಹಣ ಸಿಗುತ್ತಿತ್ತು. ಹೀಗೆ ಮಾಡುವ ರೈತರ ಗದ್ದೆಗಳಲ್ಲಿ ಹುಳುಗಳ ಸಂಖ್ಯೆ ಹೆಚ್ಚಾಗಿತ್ತು. ಏಕೆಂದರೆ ಈ ಹುಳುಗಳನ್ನು ತಿಂದುಹಾಕುವ ಕಪ್ಪೆಗಳು ಅಲ್ಲಿರಲಿಲ್ಲ. ಇಂತಹ ಅಸಮತೋಲನದಿಂದಾಗಿಯೇ ಪರಿಸರಕ್ಕೆ ಹಾನಿಯಾಗುತ್ತದೆ.
ಪರಿಸರ ಸಮಸ್ಯೆ ಕುರಿತು ಮೇಲುಮೇಲಿನ ಚರ್ಚೆ, ವಾದಗಳಿಂದ ಏನೂ ಬದಲಾವಣೆ ಆಗಲಾರದು. ನಾವು ಕೇವಲ ಬೊಬ್ಬೆ ಹೊಡೆಯುತ್ತೇವೆ. ಆದರೆ ನಮ್ಮ ಸ್ವಾರ್ಥವನ್ನು ಜೋಪಾನವಾಗಿ ಕಾಪಾಡುತ್ತೇವೆ. ನಾವು ನಮ್ಮ ಸ್ವಾರ್ಥವನ್ನು ತೊರೆಯಲು ಸಿದ್ಧರಿರುವುದಿಲ್ಲ. ಆದರೆ ಜನರಿಗೆ ಅವರ ಉದ್ಯೋಗವನ್ನು ಬಂದ್ ಮಾಡಲು ಹೇಳುತ್ತೇವೆ. ಇಂತಹ ಪ್ರವೃತ್ತಿಯಿಂದ ಯಾವ ಪ್ರಯೋಜನವೂ ಆಗದು. ಏಕೆಂದರೆ ಈ ಅಪಾಯ ಎಲ್ಲರ ಮೇಲಿದೆ. ಚರಾಚರ ವಿಶ್ವವೇ ಇದನ್ನು ಅನುಭವಿಸುತ್ತಿದೆ. ಆಪತ್ತು ಸಂಭವಿಸಿದಾಗ ಪ್ರಾಣಿಗಳು ಕೂಡ ತಮ್ಮ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತವೆ. ಆದರೆ ಬುದ್ಧಿಶಕ್ತಿ ಹೊಂದಿರುವ ಮನುಷ್ಯ, ಅದೇ ಕಾರಣಕ್ಕಾಗಿ ದಾರಿ ತಪ್ಪುತ್ತಾನೆ. ತಪ್ಪು ಕೆಲಸ ಮಾಡುತ್ತಾನೆ. ಇದರಿಂದಾಗಿ ಎಲ್ಲರೂ ಒಟ್ಟಿಗೇ ಸಾಯುತ್ತಾರೆ. ಬದುಕಿ ಉಳಿಯಬೇಕಾದರೆ ಎಲ್ಲರೂ ಬದಲಾಗಲೇಬೇಕು. ಆದರೆ ಇದನ್ನು ಸಾಧಿಸುವುದಾದರೂ ಹೇಗೆ?
ಮೊದಲನೆಯದಾಗಿ, ನಾವು ಬಹಳಷ್ಟು ಮುಂದೆ ಬಂದಿದ್ದೇವೆ. ಈಗ ನಾವು ನಿಧಾನವಾಗಿ ಹಿಂದಕ್ಕೆ ಹೋಗಬೇಕಾಗಿದೆ. ಇವತ್ತಿನಿಂದಲೇ ಇದರ ಪ್ರಾರಂಭ ಮಾಡಬೇಕಿದೆ. ಎರಡನೆಯದಾಗಿ, ನಾವು ನಮ್ಮ ಸ್ವಭಾವಗಳನ್ನು ಬದಲಿಸಿಕೊಳ್ಳಬೇಕಾಗಿದೆ. ಆಧುನಿಕ ವಿಜ್ಞಾನದಿಂದ ಪ್ರಾಪ್ತವಾದ ಭೌತಿಕ ಸುಖ ಸೌಲಭ್ಯಗಳನ್ನು ಏಕಾಏಕಿ ನಾವು ತ್ಯಜಿಸಬೇಕೆ? ಆ ರೀತಿ ನಾವು ಯೋಚಿಸುವುದಕ್ಕೂ ಸಾಧ್ಯವಿಲ್ಲ. ಮತ್ತು ಮಾಡುವುದಕ್ಕೂ ಸಾಧ್ಯವಿಲ್ಲ. ವಿನಾಶವಾದರೋ ಅದೇ ತ್ವರಿತಗತಿಯಲ್ಲೇ ಜರುಗುತ್ತದೆ. ಹಾಗಾಗಿ, ಅಭಿವೃದ್ಧಿಯೂ ಆಗಬೇಕು ಹಾಗೂ ಪರಿಸರವೂ ರಕ್ಷಿಸಲ್ಪಡಬೇಕು. ಈ ರೀತಿ ಎಲ್ಲವೂ ಒಟ್ಟಾಗಿ ಸಾಗಬೇಕಾಗಿದೆ. ಆಗಿರುವ ನಷ್ಟ ಮರಳಿ ಬರಬೇಕು ಹಾಗೂ ಆಗಿರುವ ಲಾಭವೂ ಜತೆಗೇ ಇರಬೇಕು. ಹೀಗೆ ಇವೆಲ್ಲವನ್ನೂ ಒಟ್ಟಿಗೆ ನಿರ್ವಹಿಸಬೇಕಾದರೆ ಇಲ್ಲಿಯವರೆಗಿನ ನಮ್ಮ ದೃಷ್ಟಿಕೋನದಲ್ಲಿ ಪರಿವರ್ತನೆಯನ್ನು ತರಬೇಕಾಗಿದೆ. ನಮ್ಮ ಪರಿಸರ ದೃಷ್ಟಿಕೋನಕ್ಕೆ ಸಂಬಂಧಿಸಿ ಕಾಲಕ್ಕೆ ತಕ್ಕಂತೆ ಯೋಚನೆಗಳನ್ನು ಮಾಡಬೇಕಾಗಿದೆ.
ಕೆಲವು ವರ್ಷಗಳ ಹಿಂದೆ ೧೯೯೪ರಲ್ಲಿ ವರ್ಲ್ಡ್ ಟ್ರೇಡ್ ಆರ್ಗನೈಜೇಶನ್ “ಈ ಹೊಸ ಕಾಲಮಾನದಲ್ಲಿ ನೀವು ಎಲ್ಲವನ್ನೂ ಬಿಡಬೇಕಾಗುತ್ತದೆ” ಎಂದು ಜಗತ್ತಿಗೆ ಹೇಳಿತು. ನಿಮ್ಮ ಸಂಸ್ಕೃತಿ, ರೀತಿ-ರಿವಾಜು ಮುಂತಾದವುಗಳಿಗೆ ಯಾವುದೇ ಅರ್ಥವಿಲ್ಲ. ಎಲ್ಲರನ್ನೂ ಒಂದೇ ಪಡಿಯಚ್ಚಿನಲ್ಲಿ ಇಳಿಸಬೇಕಾಗಿದೆ. ನಾವು ಹೇಗೆ ಹೇಳುತ್ತೇವೋ ಹಾಗೆ ನಡೆಯಬೇಕಾಗುತ್ತದೆ ಎಂದು ಅಪ್ಪಣೆ ಕೊಟ್ಟಿತು. ಮತ್ತೆ ೧೯೯೮ರಲ್ಲಿ, ನಾವು ಹೇಳಿದಂತೆ ಎಲ್ಲರೂ ನಡೆದುಕೊಂಡಿಲ್ಲ. ಏಕೆಂದರೆ ಹಾಗೆ ಮಾಡುವುದರಿಂದ ಯಾವುದೇ ಲಾಭ ಆಗುತ್ತಿರಲಿಲ್ಲ ಎಂದು ಅದೇ ವರ್ಲ್ಡ್ ಟ್ರೇಡ್ ಆರ್ಗನೈಜೇಶನ್ ಹೇಳಿತು. ಪುನಃ ೨೦೦೫ರಲ್ಲಿ, ನಾವು ಹೇಳಿದಂತೆ ಜನರು ಮಾಡದಿದ್ದುದು ಒಳ್ಳೆಯದೇ ಆಯಿತು. ಏಕೆಂದರೆ ನಾವು ಹೇಳಿದ್ದು ತಪ್ಪಾಗಿತ್ತು ಎಂದು ಅದು ಹೇಳಿತು. ಪ್ರತಿಯೊಂದು ದೇಶದ ಅಭಿವೃದ್ಧಿಯ ಪಥ ಬೇರೆಬೇರೆಯಾಗಿರುತ್ತದೆ. ಆ ದೇಶದ ವೈಶಿಷ್ಟ್ಯತೆಗೆ ಅನುಗುಣವಾಗಿ ಅಲ್ಲಿನ ಯೋಜನೆ ರೂಪಿಸಬೇಕಾಗುತ್ತದೆ. ತಾನು ಎಲ್ಲರಿಗೂ ಗುರು ಎಂಬ ಅಹಂಕಾರ ವರ್ಲ್ಡ್ ಟ್ರೇಡ್ ಆರ್ಗನೈಜೇಶನ್ಗಿತ್ತು. ನಮಗೀಗ ಪ್ರತ್ಯೇಕ ದೃಷ್ಟಿ ಬೇಕಾಗಿದೆ. ಕೆಲವು ವರ್ಷಗಳ ಹಿಂದೆ ಫ್ರಾನ್ಸ್ನ ಅಧ್ಯಕ್ಷ ನಿಕೋಲಸ್ ಸಾರ್ಕೋಝಿಯವರು ವಿಶೇಷತಜ್ಞರ ಒಂದು ಸಮಿತಿ ರಚಿಸಿದ್ದರು. ಭಾರತದಿಂದ ಆರ್ಥಿಕತಜ್ಞ ಡಾ. ಅಮರ್ತ್ಯಸೇನ್ ಅವರನ್ನು ಆಹ್ವಾನಿಸಲಾಗಿತ್ತು. ಆ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಡಾ. ಅಮರ್ತ್ಯಸೇನ್, ‘ನಮ್ಮ ಜಿಡಿಪಿ ಇತ್ಯಾದಿ ಎಲ್ಲ ಸಂಗತಿಗಳು ಗೊಂದಲಮಯವಾಗಿದೆ. ಹಾಗಾಗಿ ನೀವು ಮತ್ತೆ ಇನ್ನೊಂದು ಬಾರಿ ವಿಶ್ಲೇಷಣೆ ಮಾಡಿ ನಮಗೆ ಸೂಕ್ತ ದಾರಿ ತಿಳಿಸಿ’ ಎಂದು ಹೇಳಿದ್ದರು.
ಕಳೆದೆರಡು ವರ್ಷಗಳ ಕೊರೋನಾ ಕಾಲಘಟ್ಟದಲ್ಲಿ ಜಗತ್ತು ಸತ್ಯದ ಮನವರಿಕೆಯತ್ತ ಹೊರಳಿದೆ. ಎಷ್ಟೇ ಹೇಳಿದರೂ ಮನವರಿಕೆಯಾಗದಿದ್ದ ಬಹಳಷ್ಟು ಸಂಗತಿಗಳು ಈಗ ಪೆಟ್ಟು ತಿಂದ ಮೇಲೆ ಮನವರಿಕೆಯಾಗತೊಡಗಿವೆ. ಆದ್ದರಿಂದ ನಮಗೀಗ ಮೂರನೆಯದೊಂದು ದಾರಿ ಬೇಕಾಗಿದೆ ಎಂದು ಇಡೀ ಜಗತ್ತು ಯೋಚಿಸತೊಡಗಿದೆ. ಮೊದಲು ನಾವು ಕಾಡುಮನುಷ್ಯರಾಗಿದ್ದೆವು, ಬರ್ಬರರಾಗಿದ್ದೆವು. ಈಗ ನಾವು ಆಧುನಿಕ ಅಥವಾ ನಾಗರಿಕರಾಗಿದ್ದೇವೆ. ಈ ಎರಡೂ ಕೂಡ ಅತಿರೇಕಗಳಾಗಿವೆ. ಅತಿ ನಗರೀಕರಣ ನಮ್ಮ ಜೀವನಕ್ಕೆ ಸಂಚಕಾರ ತರಲಿದೆ. ಪಶುತ್ವ (ಬರ್ಬರತೆ) ವು ನಮ್ಮ ಜೀವವನ್ನು ತೆಗೆಯಲಿದೆ. ಇವೆರಡರ ನಡುವಿನ ಇನ್ನೊಂದು ಮೂರನೆಯ ದಾರಿ ಇದೆಯೆ? ಆ ದಾರಿ ಭಾರತದ ಬಳಿ ಇದೆ ಎಂದು ಜಗತ್ತು ಹೇಳುತ್ತಿದೆ. ಈ ಎಲ್ಲ ಸಂಗತಿಗಳ ಬಗ್ಗೆ ಭಾರತದ ದೃಷ್ಟಿಯಾದರೂ ಏನು ಎಂಬುದನ್ನು ಯೋಚಿಸಿ. ಇದುವರೆಗೆ ಜಗತ್ತಿನ ದೃಷ್ಟಿಯಾದರೋ ಭೌತಿಕವಾದವಾಗಿತ್ತು! ಜಗತ್ತಿನಲ್ಲಿ ಕಿಂಚಿತ್ತೂ ಚೇತನವಿಲ್ಲ. ಕಾಣಿಸುವ ಚೇತನ ಕೂಡ ಭೌತಿಕವಸ್ತುವಿನಿಂದಲೇ ಮಾಡಲ್ಪಟ್ಟಿದೆ. ಭೌತಿಕತೆ ಇರುವ ತನಕ ಇರುತ್ತದೆ ಮತ್ತು ಒಂದು ದಿನ ಅದು ನಾಶವಾಗುತ್ತದೆ. ನಾವು ಹುಟ್ಟುತ್ತೇವೆ, ಸಾಯುತ್ತೇವೆ – ಇದಕ್ಕೆಲ್ಲ ಯಾವುದೇ ಅರ್ಥವಿಲ್ಲ. ಜನ್ಮ ಪಡೆದರೆ ಜೀವಿಸಬೇಕಾಗುತ್ತದೆ. ಹಾಗಾಗಿ ಎಲ್ಲರಿಗಿಂತ ಹೆಚ್ಚು ಉಪಯೋಗ ಪಡೆದು ಎಲ್ಲರಿಗಿಂತ ಹೆಚ್ಚು ಜೀವಿಸುವುದು ಪ್ರಾಣಿಗಳ ಧ್ಯೇಯವಾಗಿರುತ್ತದೆ. ಮನುಷ್ಯನ ಜೀವಿತ ಧ್ಯೇಯವೂ ಅದೇ ಆಗಿತ್ತು. ಆದರೆ ಮನುಷ್ಯನ ಬಳಿ ಬುದ್ಧಿ ಕೂಡ ಇದೆ. ಈ ಜಗತ್ತಿನಲ್ಲಿ ಎಲ್ಲವೂ ವಿಭಿನ್ನವಾಗಿದೆ. ಯಾರೊಂದಿಗೂ ನಮ್ಮ ಯಾವುದೇ ಸಂಬಂಧವಿಲ್ಲ. ಎಲ್ಲರ ನಡುವೆ ಸಂಘರ್ಷ ಇದೆ. ಆದ್ದರಿಂದ ಶಕ್ತಿ ಸಂಪನ್ನನಾಗು. ಸಾಧ್ಯವಾದಷ್ಟು ಹೆಚ್ಚು ತಿನ್ನು, ಸಾಧ್ಯವಾದಷ್ಟು ಹೆಚ್ಚು ದಿನ ತಿನ್ನು ಮತ್ತು ಯಾವತ್ತು ಸಾಯಬೇಕಾಗಿದೆಯೋ ಅವತ್ತು ಸತ್ತುಹೋಗು. ನಮ್ಮಲ್ಲಿನ ಚಾರ್ವಾಕ ಲೋಕಾಯತ ದರ್ಶನ ಹೇಳಿದ್ದು ಕೂಡ ಇದನ್ನೇ. ಆದರೆ ಅವರದೂ ಒಂದು ನೀತಿ ಇತ್ತು. ಸಮಾಜದಲ್ಲಿ ಒಟ್ಟಿಗೇ ವಾಸಿಸುವ, ಸೃಷ್ಟಿಯ ಜೊತೆ ಬದುಕುವ ನೀತಿ ಅದಾಗಿತ್ತು. ಆದರೆ ಇಲ್ಲಿ ಯಾವುದೇ ನೀತಿ ಇಲ್ಲ. ಈ ಚಿಂತನೆಗಳಿಗೂ ಕೆಲವು ಕಾರಣಗಳಿದ್ದಾವು. ಆದರೆ ಇಲ್ಲಿಯವರೆಗಿನ ಜೀವನವು ಅವೆಲ್ಲವನ್ನೂ ತಪ್ಪೆಂದು ಸಾಬೀತುಪಡಿಸಿದೆ.
ನಮ್ಮ ದೃಷ್ಟಿಕೋನ ಇದಕ್ಕಿಂತ ಭಿನ್ನವಾಗಿದೆ. ನಾವು ಯಾರನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ನೋಡುವುದಿಲ್ಲ. ಏಕೆಂದರೆ ಇಡೀ ಸೃಷ್ಟಿಯಲ್ಲಿರುವುದು ಒಂದೇ ತತ್ತ್ವ ಎಂಬುದು ನಮಗೆ ತಿಳಿದಿದೆ. ಆ ತತ್ತ್ವದ ಹಲವು ಬಗೆಯ ಆವಿಷ್ಕಾರಗಳಿವೆ. ಆದ್ದರಿಂದ ಜಗತ್ತು ನನ್ನಿಂದ ಬೇರೆಯಾಗಿಲ್ಲ. ನಾನು ಈ ಜಗತ್ತಿನ ಒಂದು ಅಭಿನ್ನ ಅಂಗವಾಗಿರುವೆ. ನಾನು ಇದರ ಮಾಲಿಕನಲ್ಲ, ನಾನು ಇದನ್ನು ಜಯಿಸಿದವನಲ್ಲ. ನಾನು ಈ ಸಂಪೂರ್ಣ ಜಗತ್ತಿನ ನಿಯಮಗಳ ಅಧೀನನಾಗಿ ಉಳಿದ ಎಲ್ಲ ಜನರಂತೆ ನಾನೂ ಕೂಡ ಒಂದು ಅಂಗವಾಗಿದ್ದೇನೆ. ಉಳಿದ ಎಲ್ಲ ಅಂಗಗಳು ವಿಶ್ವದ ಅನುಶಾಸನದಂತೆ ಯಾವ ರೀತಿ ಕಾರ್ಯನಿರ್ವಹಿಸುತ್ತಿವೆಯೋ ಅದೇ ರೀತಿ ನಾನು ಕೂಡ ಅದರ ಅನುಶಾಸನದಂತೆ ನಡೆಯಬೇಕಾಗಿದೆ. ಅದನ್ನು ಈಶ್ವರ ಎನ್ನಿ ಅಥವಾ ಈಶ್ವರನನ್ನು ನಂಬದವರು ಪ್ರಕೃತಿ ಎನ್ನಿ, ನನಗೆ ಬುದ್ಧಿಶಕ್ತಿ ದೊರಕಿರುವುದು ಅದರಿಂದಲೇ. ವಿಚಾರ ಮಾಡುವುದು ಮತ್ತು ಅಭಿವೃದ್ಧಿ ಮಾಡುವುದು ಆ ಬುದ್ಧಿಯ ಸ್ವಾಭಾವಿಕ ಗುಣವಾಗಿದೆ. ಹಾಗಾಗಿ ನನಗೆ ಅಭಿವೃದ್ಧಿ ಮಾಡುವ ಅನುಮತಿ ಇದೆಯಾದರೂ ಈ ಸೃಷ್ಟಿಯಿಂದ ನಾನು ಲೂಟಿ ಹೊಡೆಯುವಂತಿಲ್ಲ. ಮಗುವೊಂದು ತನ್ನ ತಾಯಿಯಿಂದ ತನ್ನ ಆಹಾರ ಪಡೆದಂತೆ, ಕರುವೊಂದು ತನ್ನ ತಾಯಿ ಹಸುವಿನಿಂದ ಹಾಲು ಹೀರಿದಂತೆ ನಾವೂ ಈ ಸೃಷ್ಟಿಯೊಂದಿಗೆ ನಡೆದುಕೊಳ್ಳಬೇಕು. ನಾವು ಹಸುವಿನಿಂದ ಹಾಲು ಪಡೆದಂತೆ ಅದಕ್ಕೆ ಮೇವನ್ನೂ ಉಣಬಡಿಸುತ್ತೇವೆ. ನಾವು ಅದರ ದೋಹನ, ಪಾಲನೆ ಮಾಡಬೇಕು, ಶೋಷಣೆಯನ್ನಲ್ಲ. ಏಕೆಂದರೆ ನಾವು ಅಂಗಭೂತವಾಗಿರುವುದರಿಂದ ಒಬ್ಬರ ಮೇಲೊಬ್ಬರು ಪರಸ್ಪರ ನಿರ್ಭರರಾಗಿದ್ದೇವೆ. ನನ್ನ ಕೈ ಬಲಿಷ್ಠವಾಗಿರಬಹುದು. ಆದರೆ ಮಿದುಳಿನಲ್ಲಿ ಕೊಂಚ ಗಲಿಬಿಲಿಯಾದರೂ ಕೈ ಅಸಹಾಯಕವಾಗುತ್ತದೆ. ಹಾಗಾಗಿ ಮಸ್ತಿಷ್ಕದ ಮೇಲೆ ಭಾರ ಬೀಳದಂತೆ ಕೈ ಕೆಲಸ ನಿರ್ವಹಿಸುವಂತಾಗಬೇಕು.
ನಮ್ಮ ಪರಂಪರೆಯ ಮಾತೊಂದಿದೆ:
ಯಾವತ್ ಭೂಮಂಡಲಂ ಧತ್ತೇ ಸಮೃಗವನಕಾನನಂ
ತಾವತ್ತಿಷ್ಠಥತಿ ಮೇದಿನ್ಯಾಮ್ ಸಂತತಿ ಪುತ್ರಪೌತ್ರಿಕೀ ||
ಈ ಭೂಮಿಯ ಮೇಲೆ ಎಲ್ಲಿಯವರೆಗೆ ಮೃಗ, ವನ, ಕಾನನವಿರುತ್ತದೆಯೋ ಅಲ್ಲಿಯವರೆಗೆ ಜೀವಿಗಳ ವಂಶ ಸತತವಾಗಿ ವೃದ್ಧಿಸುತ್ತಲೇ ಇರುತ್ತದೆ.
ನಮ್ಮ ನಿತ್ಯಕರ್ಮಗಳಲ್ಲಿ ಪಂಚಯಜ್ಞಗಳಿವೆ. ಕೀಟ, ಪತಂಗ, ಪಶು ಪಕ್ಷಿ ಮತ್ತಿತರೆ ಸೃಷ್ಟಿಯಲ್ಲಿರುವ ಹಸಿದ ಅತಿಥಿ ಜೀವಿಗಳಿಗೆ ಉಣಬಡಿಸಿದ ನಂತರವೇ ನಾವು ಉಣ್ಣುತ್ತೇವೆ. ಏಕೆಂದರೆ ಅವೆಲ್ಲವೂ ಜೀವಿಸಿದ್ದರೆ ನಾವೂ ಬದುಕಿರುತ್ತೇವೆ. ಮಕ್ಕಳಿಗೆ ಹೇಳಲಾಗುವ ಕಥೆಯೊಂದಿದೆ: ಒಂದು ಓತಿಕ್ಯಾತ ಇತ್ತು. ಒಮ್ಮೆ ಅದರ ಬಾಲ ತುಂಡಾಯಿತು. ಆ ಕಾಲದಲ್ಲಿ ಅದನ್ನು ಸರಿಪಡಿಸಲು ಸರ್ಜನ್ ಇತ್ಯಾದಿ ಯಾರೂ ಇರಲಿಲ್ಲ. ಕ್ಷೌರಿಕನೇ ಪ್ರಾಥಮಿಕ ಸರ್ಜನ್ ಆಗಿದ್ದ. ಹೀಗಾಗಿ ಓತಿಕ್ಯಾತ ನೋವಿನಿಂದ ಚೀರಾಡುತ್ತಾ ಕ್ಷೌರಿಕನ ಬಳಿ ಹೋಗಿ ತುಂಡಾದ ಬಾಲವನ್ನು ಸರಿಪಡಿಸು ಎಂದು ಕೇಳುತ್ತದೆ. ‘ನನ್ನ ಉಪಕರಣವನ್ನು ಸರಿಪಡಿಸಲು ಬಡಗಿಯ ಹತ್ತಿರ ಕೊಟ್ಟಿರುವೆ. ನೀನು ಆತನ ಬಳಿಗೆ ಹೋಗಿ ಅದನ್ನು ತಂದುಕೊಟ್ಟರೆ ನಿನ್ನ ಬಾಲ ಜೋಡಿಸುವೆ’ ಎಂದು ಕ್ಷೌರಿಕ ಹೇಳಿದ. ಓತಿಕ್ಯಾತ ಬಡಗಿಯ ಬಳಿಗೆ ಹೋಯಿತು. ‘ನನ್ನ ಸಲಕರಣೆ ಮುರಿದುಹೋಗಿದೆ. ಅದನ್ನು ಸರಿಪಡಿಸಲು ಕಮ್ಮಾರನ ಬಳಿ ಕೊಟ್ಟಿರುವೆ. ನೀನು ಅದನ್ನು ತಂದುಕೊಡು’ ಎಂದು ಬಡಗಿ ಹೇಳುತ್ತಾನೆ. ಕಮ್ಮಾರನ ಬಳಿಗೆ ಹೋದಾಗ ಕಮ್ಮಾರನು ‘ನನ್ನದೊಂದು ಉಪಕರಣವನ್ನು ರಿಪೇರಿ ಮಾಡಲು ಚಮ್ಮಾರನಿಗೆ ಕೊಟ್ಟಿರುವೆ. ನೀನು ಅದನ್ನು ತಂದುಕೊಟ್ಟರೆ ನಾನು ಸರಿಪಡಿಸುವೆ’ ಎಂದು ಹೇಳಿದ. ಹೀಗೆ ಒಬ್ಬೊಬ್ಬರನ್ನು ಹುಡುಕಿಕೊಂಡು ಓತಿಕ್ಯಾತ ಇಡೀ ಹಳ್ಳಿಯುದ್ದಕ್ಕೆ ಅಲೆಯಿತು. ಎಲ್ಲರ ಬಳಿ ಕೆಲಸ ಪೂರೈಸಿಕೊಂಡು ವಾಪಸ್ ಕ್ಷೌರಿಕನ ಬಳಿ ಬಂದು ತನ್ನ ಬಾಲವನ್ನು ರಿಪೇರಿ ಮಾಡಿಸಿಕೊಂಡಿತು. ಈ ಕಥೆ ಮಕ್ಕಳಿಗೆ
ರವಾನಿಸುವ ಸಂದೇಶವೇನೆಂದರೆ ಸಮಾಜದಲ್ಲಿ ಪ್ರತಿಯೊಬ್ಬರೂ ಇನ್ನೊಬ್ಬರನ್ನು ಅವಲಂಬಿಸಿದ್ದಾರೆ. ಸಮಾಜವನ್ನು ವ್ಯವಸ್ಥಿತವಾಗಿ ಮುನ್ನಡೆಸಲು ಎಲ್ಲರನ್ನೂ ಸಂಭಾಳಿಸಬೇಕಾಗುತ್ತದೆ.
ನಾವು ಈ ಸೃಷ್ಟಿಯ ಅಂಗಗಳು. ನಾವು ಇದರ ಮಾಲಿಕರಲ್ಲ. ಅತಿಯಾಸೆಪಡಬೇಡಿ. ಏಕೆಂದರೆ ನಿಮ್ಮ ಲೋಭಕ್ಕೆ ಅಂತ್ಯವೇ ಇರುವುದಿಲ್ಲ. ಅಗ್ನಿಗೆ ತುಪ್ಪ ಸುರಿಯುವುದರಿಂದ ಅಗ್ನಿ ಶಮನವಾಗುವುದಿಲ್ಲ. ಮತ್ತಷ್ಟು ಪ್ರಜ್ವಲಿಸಿ ಉರಿಯುತ್ತದೆ. ಹಾಗೆಯೇ ವಿಲಾಸಿ ಬದುಕಿನಿಂದ ಬಯಕೆಯ ಹಸಿವು ಇನ್ನಷ್ಟು ಹೆಚ್ಚುತ್ತದೆ.
ನ ಜಾತು ಕಾಮಃ ಕಾಮಾನಾಂ ಉಪಭೋಗೇನ ಶಾಮ್ಯತಿ
ಹವಿಷಾ ಕೃಷ್ಣವತ್ಮೇðವ ಭೂಯ ಏವಾಭಿವರ್ಧತೇ ||
(ಮಹಾಭಾರತ, ಆದಿಪರ್ವ)
ನಾವು ಜೀರ್ಣವಾಗುತ್ತೇವೆ. ಉಪಭೋಗಿಸುವ ಕ್ಷಮತೆ ಕಡಿಮೆಯಾಗುತ್ತದೆ. ಆದರೆ ಬಯಕೆಗಳ ಸಮಾಪ್ತಿ ಆಗುವುದಿಲ್ಲ.
ತೃಷ್ಣಾ ನ ಜೀರ್ಣಾ ವಯಮೇವ ಜೀರ್ಣಾ
ಆದ್ದರಿಂದ ಸಂಯಮಶೀಲನಾಗಿರು. ಹೊಟ್ಟೆಗೆ ಹಿಡಿಯುವಷ್ಟೇ ತಿನ್ನು. ಅದಕ್ಕಿಂತ ನೀನು ಹೆಚ್ಚಿಗೆ ಸೇವಿಸಿದ್ದಾದರೆ ನೀನು ದಂಡನೆಗೆ ಪಾತ್ರನಾಗುತ್ತೀಯಾ.
ಯಾವತ್ ಭ್ರಿಯೇತ್ ಜಠರಂ ತಾವತ್ ಸ್ವತ್ವಂ ಹಿ ದೇಹಿನಾಂ,
ಅಧಿಕಂ ಯೋಭಿಮನ್ಯೇತ ಸ ಸ್ತೇನೋ ದಂಡಮರ್ಹತಿ ||
(ಶ್ರೀಮದ್ಭಾಗವತ ೭-೧೪-೮)
ನಮ್ಮ ಪರಂಪರೆಯಲ್ಲಿ ಇಂತಹ ಕಠಿಣ ಉಪದೇಶಗಳನ್ನು ಮೊದಲಿನಿಂದಲೂ ಹೇಳಲಾಗಿದೆ.
ಮನುಷ್ಯ ಅಭಿವೃದ್ಧಿಯತ್ತ ಸಾಗಿದಾಗಲೆಲ್ಲ ಒಂದಿಷ್ಟು ಅವಶ್ಯಕತೆಗಳು ವೃದ್ಧಿಸುತ್ತವೆ. ಅವುಗಳನ್ನು ಪೂರೈಸಿಕೊಳ್ಳಲು ಅನುಮತಿ ನೀಡಲಾಗಿದೆ. ಮಹಾತ್ಮ ಗಾಂಧಿ ಹೇಳುತ್ತಿದ್ದರು: ಜೀವನವಿರುವುದು ಲಾಲಸೆಗಳನ್ನು ತೀರಿಸಿಕೊಳ್ಳಲು ಅಲ್ಲ. ಯಾವುದರಿಂದ ಜಗತ್ತು ನಿರ್ಮಾಣವಾಗಿದೆಯೋ ಅದನ್ನು ನೀನು ಪಡೆದೆಯಾದರೆ ನಿನಗೆ ಹೊರಗೆ ಯಾವುದರ ಮೇಲೂ ಅವಲಂಬಿತವಾಗಬೇಕಾದ ಅವಶ್ಯಕತೆ ಇರುವುದಿಲ್ಲ. ನೀನು ಸದಾ ಸುಖವಾಗಿರಬಲ್ಲೆ. ಆ ಸುಖವು ಎಂದಿಗೂ ಸ್ವಾದರಹಿತವಾಗಿರುವುದಿಲ್ಲ. ಅವಶ್ಯಕತೆ ಎಷ್ಟಿದೆಯೋ ಅಷ್ಟನ್ನೇ ಪಡೆದುಕೊಳ್ಳಬೇಕು. ಶರೀರವನ್ನು ಹಸಿವಿನಲ್ಲಿರಿಸಿ ಮೋಕ್ಷ ಪ್ರಾಪ್ತಿ ಸಾಧ್ಯವಿಲ್ಲ. ಇದಕ್ಕಾಗಿಯೇ ಸಮತೋಲನದ ಉಪದೇಶ ನೀಡಲಾಗಿದೆ. ಜೀವನ ಆಧ್ಯಾತ್ಮದ ಮಾತನ್ನು ಹೇಳಿದೆ. ಎಲ್ಲರಿಗೂ ಪುರುಷಾರ್ಥ ಸಾಧಿಸಬೇಕೆಂದು ಹೇಳಲಾಗಿದೆ. ಶರೀರದ ಅವಶ್ಯಕತೆ ಪೂರ್ಣಗೊಳಿಸಲು ‘ಕಾಮ ಪುರುಷಾರ್ಥ’ದ ಅನುಮತಿ ನೀಡಲಾಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ:
ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ
(ಭಗವದ್ಗೀತೆ ೭-೧೧)
ಧರ್ಮ ಅರ್ಥಾತ್ ಎಲ್ಲರ ಜೀವನ ಯಾವುದರಿಂದ ನಡೆಯುತ್ತಿದೆಯೋ ಅದಕ್ಕೆ ಅನುಕೂಲಕರವಾದ ಕೆಲಸವನ್ನೇ ಮಾಡಬೇಕು. ಇತರರಿಗೆ ತೊಂದರೆಯಾಗದಂತಹ ನಿನ್ನ ಬಯಕೆಗಳಿರಬೇಕು. ನಮಗೆ ಸಮೃದ್ಧಿ ಬೇಕೆಂದಾದರೆ ನಾವು ಪರಿಶ್ರಮಪಡಬೇಕು.
ಉದ್ಯೋಗಿನಃ ಪುರುಷಸಿಂಹಮುಪೈತಿ ಲಕ್ಷ್ಮೀಂ
(ಪಂಚತಂತ್ರ)
ಅತಿ ಹೆಚ್ಚು ಸಮೃದ್ಧಿ ಅಥವಾ ಸುಖಿಯಾಗುವ ಮನುಷ್ಯನ ಪ್ರಯತ್ನಕ್ಕೆ ಅಧಿಕಾರ ದೊರಕಿದೆ. ಅದನ್ನು ಅರ್ಥ ಪುರುಷಾರ್ಥವೆನ್ನಲಾಗುತ್ತದೆ. ಆದರೆ ಅದರ ಉದ್ದೇಶ ಉಪಭೋಗ ಎಂದಲ್ಲ. ಮೋಕ್ಷದತ್ತ ಮುಂದುವರಿಯಲು ಅರ್ಥ ಪುರುಷಾರ್ಥವು ಧರ್ಮದ ಅನುಶಾಸನದಲ್ಲಿ ಇರಬೇಕಾಗುತ್ತದೆ. ಈ ಒಂದು ವಿಚಾರವನ್ನಿಟ್ಟುಕೊಂಡು ನಾವು ಎಲ್ಲ ಜೀವಿಗಳ ಜೀವನದ ವ್ಯವಸ್ಥೆ ಮಾಡಿದ್ದೇವೆ. ಮತ್ತು ಹಾಗಾಗಿ ಸಾಮೂಹಿಕ ಜೀವನದಲ್ಲಿ ಯಾವಾಗಲೂ ನಾವು ನಮ್ಮ ಮಿತಿಯತ್ತ ಗಮನಹರಿಸಿದ್ದೇವೆ. ನಾವು ಸಂಯಮದಿಂದ ಇರಬೇಕಾಗಿದೆ.
ನಾವು ಸೃಷ್ಟಿಯಿಂದ ಪಡೆಯೋಣ. ಆದರೆ ಸೃಷ್ಟಿಗೇ ಮರಳಿ ಕೊಡೋಣ. ಸೃಷ್ಟಿಯ ಪಂಚಮಹಾಭೂತಗಳಿಂದ ನಾವು ಪಡೆಯುತ್ತೇವೆ. ಪ್ರಕೃತಿಯಲ್ಲಿರುವ ಹಸುವಿನಂತಹ ಪ್ರಾಣಿಗಳಿಂದ ನಮ್ಮ ಜೀವನದಲ್ಲಿ ಉಪಯೋಗ ಪಡೆದುಕೊಳ್ಳುತ್ತೇವೆ. ವನಸ್ಪತಿಗಳಿಂದ ನಮಗೆ ಆಹಾರ ಮತ್ತು ಔಷಧಿ ಸಿಗುತ್ತದೆ. ಅವುಗಳ ಬಗ್ಗೆ ನಮ್ಮದು ಕೃತಜ್ಞತೆಯ ದೃಷ್ಟಿ. ಕೃತಜ್ಞತಾ ಭಾವದಿಂದ ನಾವು ಸೃಷ್ಟಿಯಲ್ಲಿ ಸರ್ವತ್ರ ಪವಿತ್ರ ದೇವತ್ವ ಹಾಗೂ ಮಾತೃತ್ವವನ್ನೇ ಕಾಣುತ್ತೇವೆ. ಸೃಷ್ಟಿಯ ಸಮೃದ್ಧಿಯನ್ನು ನಾವು ಲಕ್ಷ್ಮಿಮಾತೆಯೆಂದು ಭಾವಿಸಿ ಅದರ ಪೂಜೆ ಮಾಡುತ್ತೇವೆ. ಗೋವನ್ನು, ತುಳಸಿಯನ್ನು ತಾಯಿಯೆಂದು ಭಾವಿಸುತ್ತೇವೆ. ಪ್ರಕೃತಿಯಲ್ಲಿ ಈ ದೇವದೇವತೆಯರು ವಾಸವಾಗಿರುವುದನ್ನು ಕಾಣುತ್ತೇವೆ. ಅವು ನಮಗೆ ಎಲ್ಲವನ್ನೂ ನೀಡುತ್ತವೆ. ನಾವು ನಮ್ಮ ಪರಿಶ್ರಮದ ಫಲದಿಂದ ಅವುಗಳಿಗೆ ಪ್ರಿಯವಾದುದನ್ನು ನೀಡುತ್ತೇವೆ. ಈ ಸೃಷ್ಟಿಚಕ್ರವನ್ನು ನಾವು ಪ್ರಾಚೀನ ಕಾಲದಿಂದಲೂ ಗುರುತಿಸಿದ್ದೇವೆ. ಸೃಷ್ಟಿಯಲ್ಲಿ ಎಲ್ಲವೂ ಪರಸ್ಪರ ಸಂಬಂಧ ಹಾಗೂ ಪರಸ್ಪರ ನಿರ್ಭರವಾಗಿವೆ. ಈ ಸೃಷ್ಟಿಚಕ್ರ ನಿರಂತರವಾಗಿ ಚಲಿಸುತ್ತಿರುವುದರಿಂದಲೇ ನಾವೆಲ್ಲರೂ ಸುಖಿಗಳಾಗಿ ಜೀವಿಸಲು ಸಾಧ್ಯವಾಗಿದೆ.
ಹಾಗಾಗಿ ನಮ್ಮ ಜೀವನವು ಕೇವಲ ಸ್ವಂತದ್ದನ್ನು ನಿರ್ವಹಿಸಲು ಮಾತ್ರವಲ್ಲ, ಆದರೆ ಇಡೀ ಸೃಷ್ಟಿಯನ್ನು ಮುನ್ನಡೆಸಲು ಇರುವುದಾಗಿದೆ. ನನ್ನ ಜೊತೆಜೊತೆಗೆ ಎಲ್ಲರ ಅಭಿವೃದ್ಧಿಯೂ ಆಗಬೇಕೆಂಬ ಜೀವನ ನಮ್ಮದಾಗಬೇಕಿದೆ. ಈ ರೀತಿ ಆಲೋಚಿಸದವರನ್ನು ಕಳ್ಳರೆಂದು ಹೇಳಲಾಗಿದೆ.
ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ
(ಭಗವದ್ಗೀತೆ ೩-೧೨)
ನಾವು ಸಂಯಮದೊಂದಿಗೆ ಇರಬೇಕಾಗಿದೆ. ಸ್ವಾರ್ಥಕ್ಕಾಗಿ ಅಲ್ಲ, ಆದರೆ ಎಲ್ಲರಿಗಾಗಿ ಬದುಕಬೇಕು. ಪ್ರಕೃತಿಯಿಂದ ನಮ್ಮ ಬದುಕಿಗೆ ಬಹಳಷ್ಟು ಉಪಯೋಗ ಇದೆ. ಕೆಲಸಕ್ಕೆ ಬಾರದ ನಿಷ್ಪçಯೋಜಕವಾದ ಒಂದೇ ಒಂದು ಗಿಡವೂ ಪ್ರಕೃತಿಯಲ್ಲಿಲ್ಲ. ‘ನಾಸ್ತಿ ಮೂಲಮನೌಷಧಂ’ ಎಂಬ ಉಕ್ತಿಯೊಂದಿದೆ.
ಹೌದು, ನಾವು ಅದನ್ನು ಗುರುತಿಸಲಾರೆವು. ಹಾಗಾಗಿ ನಾವು ಪ್ರಕೃತಿಯ ಮಹತ್ವವನ್ನು ಅರಿತುಕೊಂಡಿಲ್ಲ. ಶ್ರೀಮದ್ ಭಗವದ್ಗೀತೆಯಲ್ಲಿ ಹೇಳಿರುವುದೇನೆಂದರೆ – ಪ್ರಕೃತಿಯ ಒಂದು ಚಕ್ರವಿದೆ. ನಾವು ಒಂದು ವೇಳೆ ಪ್ರಕೃತಿಯಿಂದ ಪಡೆದರೆ ಅದನ್ನು ಮರಳಿ ಕೊಡಬೇಕಾಗುತ್ತದೆ. ಈ ಚಕ್ರವನ್ನು ಯಾರು ಪೂರ್ತಿ ಮಾಡುವುದಿಲ್ಲವೋ ಅಥವಾ ಅದನ್ನು ತಡೆಯುತ್ತಾನೋ ಆತನು ಪಾಪದಲ್ಲಿ ಭಾಗಿಯಾಗುತ್ತಾನೆ. ವರ್ತಮಾನ ಕಾಲದಲ್ಲಿ ಹೇಳಲಾಗಿರುವ ‘ಲೈಫ್ ಸೈಕಲ್’ ಎಂಬುದಕ್ಕೆ ಬಹಳಷ್ಟು ಹಿಂದೆಯೇ ಗೀತೆಯಲ್ಲಿ ಚಕ್ರವೆಂದು ಹೆಸರು ಕೊಡಲಾಗಿದೆ.
ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ
ಅಘಾಯುರಿಂದ್ರಿಯಾರಾಮೋ ಮೋಘಂ ಪಾರ್ಥ ಸ ಜೀವತಿ ||
(ಭಗವದ್ಗೀತೆ ೩-೧೬)
ಆದ್ದರಿಂದ ಅಭಿವೃದ್ಧಿಯ ಸರಿಯಾದ ನೀತಿಯು ಪರಿಸರದ ಅಭಿವೃದ್ಧಿಯನ್ನೂ ಜೊತೆಗೇ ಕೊಂಡೊಯ್ಯುತ್ತದೆ. ಪರಿಸರಕ್ಕೆ ಹಾನಿಯೆಸಗುವ ಅಭಿವೃದ್ಧಿ ನೀತಿಯು ಪೊಳ್ಳು ನೀತಿಯಾಗಿದೆ. ಅದನ್ನು ನಾವೆಲ್ಲರೂ ವಿಚಾರಪೂರ್ವಕವಾಗಿ ಬದಲಿಸಬೇಕಾಗಿದೆ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ಗದ್ದೆ ಉಳುಮೆ ನಡೆಯುತ್ತಿದೆ. ಆದರೆ ನಮ್ಮ ಗದ್ದೆ ಎಂದೂ ಹಾಳಾಗಲಿಲ್ಲ. ಹೆಚ್ಚು ಬೆಳೆ ತೆಗೆಯುವುದಕ್ಕಾಗಿ ನಾವು ರಾಸಾಯನಿಕವನ್ನು ಬಳಸಲು ಆರಂಭಿಸಿದೆವು. ನೋಡನೋಡುತ್ತಿದ್ದಂತೆ ನಮ್ಮ ಹೊಲಗದ್ದೆಗಳು ಬಂಜರಾಗತೊಡಗಿದವು.ಧಾನ್ಯ ವಿಷಯುಕ್ತವಾಯಿತು. ಅಲ್ಲದೆ ನಾನಾ ಬಗೆಯ ರೋಗಗಳೂ ಕಾಡತೊಡಗಿದವು. ರಾಸಾಯನಿಕ ಕೃಷಿಯಿಂದ ಜಮೀನು ಮತ್ತು ಶರೀರ ಎರಡೂ ಕೆಡುವುದಾದಲ್ಲಿ ಅಂತಹ ಕೃಷಿಯನ್ನು ನಾವೇಕೆ ಮಾಡಬೇಕು? ಎಲ್ಲವೂ ಸಮತೋಲಿತವಾಗಿ ನಡೆದುಕೊಂಡು ಹೋಗುವಂತಹ ಅಭಿವೃದ್ಧಿ ನೀತಿ ನಮಗೆ ಬೇಕಾಗಿದೆ. ನಾವು ಸಾವಿರಾರು ವರ್ಷಗಳಿಂದ ಎತ್ತು-ನೇಗಿಲು ಬಳಸಿ ಕೃಷಿ ಮಾಡುತ್ತಾ ಬಂದಿದ್ದೇವೆ. ಆ ನೇಗಿಲು ೩-೪ ಅಂಗುಲದಷ್ಟು ನೆಲದೊಳಗೆ ಇಳಿಯುತ್ತದೆ ಮತ್ತು ಕೆಳಗಿರುವ ಉಪಯುಕ್ತ ಮಣ್ಣನ್ನು ಮೇಲೆ ತರುತ್ತದೆ. ಚಿಕ್ಕ ಇರುವೆಗಳು ನೆಲದೊಳಗೆ ಇರುತ್ತವೆ ಮತ್ತು ಅಲ್ಲೇ ತಮ್ಮ ಮಲವನ್ನು ವಿಸರ್ಜಿಸುತ್ತವೆ. ಅದು ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಉಪಯುಕ್ತವಾಗುತ್ತದೆ. ವೈಜ್ಞಾನಿಕ ರೀತಿಯಲ್ಲಿ ತಯಾರಿಸಲಾದ ಟ್ರಾö್ಯಕ್ಟರ್ ಅನ್ನು ಗದ್ದೆಗಿಳಿಸಿದಾಗ ಅದು ೯-೧೦ ಅಂಗುಲದಷ್ಟು ನೆಲವನ್ನು ಬಗೆಯುತ್ತದೆ. ಅದರಿಂದಾಗಿ ಇರುವೆಗಳು ನಾಶವಾಗುವುದಲ್ಲದೆ, ಮಣ್ಣಿನ ಫಲವತ್ತತೆಯೂ ಕಮ್ಮಿಯಾಗುತ್ತದೆ.
ರಾಸಾಯನಿಕ ಔಷಧಿಗಳ ಬಳಕೆಯಿಂದ ನಾವು ಬಗೆಬಗೆಯ ಜೀವಜಂತುಗಳನ್ನು ಸಾಯಿಸುತ್ತಿದ್ದೇವೆ. ಇದರಿಂದಾಗಿ ಪ್ರಕೃತಿಯ ಚಕ್ರ ಏರುಪೇರಾಗುತ್ತದೆ ಮತ್ತು ಅದು ಮನುಷ್ಯನಿಗೆ ಮಾರಕವೇ ಆಗುತ್ತದೆ. ದೊಡ್ಡ ನಗರ ಮತ್ತು ದಾರಿದ್ರö್ಯ ತುಂಬಿರುವ ಹಳ್ಳಿ ಒಟ್ಟೊಟ್ಟಿಗೇ ಹೋಗಲು ಸಾಧ್ಯವಿಲ್ಲ. ಜಗತ್ತಿನ ಹಲವು ದೇಶಗಳು ವ್ಯಾಪಾರದ ಕಾರಣದಿಂದಾಗಿ ಬಹಳಷ್ಟು ಮುಂದಿವೆ. ಆದರೆ ಅಲ್ಲಿ ಕೃಷಿ ಇಲ್ಲ. ಜಗತ್ತಿನಲ್ಲಿ ಎಲ್ಲರಿಗೂ ಹೊಟ್ಟೆ ತುಂಬಿಸಲು ಧಾನ್ಯವೇ ಬೇಕಾಗುತ್ತದೆ. ಒಂದು ವೇಳೆ ಜಗತ್ತಿನ ಉಳಿದ ದೇಶಗಳು ಸಶಕ್ತವಾಗಿ ಅಮೆರಿಕಾಗೆ ಆಹಾರಧಾನ್ಯ ಕೊಡುವುದನ್ನು ನಿಲ್ಲಿಸಿದರೆ ಅಲ್ಲಿನ ಜನರು ಹೇಗೆ ಜೀವಂತವಾಗಿರಲು ಸಾಧ್ಯ? ಏಕೆಂದರೆ ಅಮೆರಿಕದಲ್ಲಿ ಅವಶ್ಯಕತೆಗೆ ಅನುಸಾರವಾಗಿ ಆಹಾರಧಾನ್ಯವನ್ನು ಬೆಳೆಯುತ್ತಿಲ್ಲ. ಹಾಗಾಗಿ ದೇಶದಲ್ಲಿ ಎಲ್ಲರ ಅಭಿವೃದ್ಧಿಯೂ ಆಗಬೇಕು. ಯಾರನ್ನೋ ಅವಲಂಬಿಸಿರುವುದು ಸರಿಯಲ್ಲ. ನಮ್ಮಲ್ಲೊಬ್ಬ ಮೆಕ್ಯಾನಿಕಲ್ ಇಂಜಿನಿಯರ್ ಆಗಬಹುದು. ಆದರೆ ಆತನ ದೃಷ್ಟಿ ಯಾಂತ್ರಿಕವಾಗಿರದೆ ಮಾನವೀಯವಾಗಿರಬೇಕು. ಯಾವುದೇ ರೀತಿಯ ಲಾಭಕ್ಕಾಗಿ ನಾವು ಮನುಷ್ಯನನ್ನು ಬಲಿ ಕೊಡಬಾರದು. ಇದನ್ನು ಯಾವಾಗಲೂ ಗಮನದಲ್ಲಿಡಬೇಕು. ಕೇವಲ ಆರ್ಥಿಕ ಲಾಭ, ಮಾನವೀಯತೆಯನ್ನು ಕಡೆಗಣಿಸಿ ನಡೆಯುವ ತಂತ್ರಜ್ಞಾನ ಮತ್ತು ಪ್ರಕೃತಿಯ ಶೋಷಣೆ ಮಾಡುವ ಅಭಿವೃದ್ಧಿ ನೀತಿಯು ಅಸಂತುಲಿತ ಹಾಗೂ ವಿನಾಶಕಾರಿ ಆಗಿದೆ. ಅದನ್ನು ಬದಲಾಯಿಸಬೇಕಾಗಿದೆ. ವಾಸ್ತವಿಕ ಸಮೃದ್ಧಿ ನೀಡುವ ಹಾಗೂ ಮಾನವೀಯತೆಯ ಚೌಕಟ್ಟಿನಲ್ಲಿ ನಡೆಯುವ ತಂತ್ರಜ್ಞಾನದ ಪ್ರಯೋಜನ ಪಡೆಯುವ ಮನುಷ್ಯ ಕೂಡ ಪರಿಸರದ ಒಂದು ಅಂಗವಾಗಿದ್ದಾನೆ. ಇದನ್ನರಿತು ಸಾಗುವ ಅಭಿವೃದ್ಧಿ ನೀತಿಯನ್ನು ರೂಪಿಸಬೇಕಾಗಿದೆ.
ವಾಸ್ತವಿಕ ಸಮೃದ್ಧಿ ಎಂದರೇನು? ಈಗ ಅರ್ಥಶಾಸ್ತ್ರದಲ್ಲಿ ಹಣದ ಮಹತ್ವ ಅವಶ್ಯಕತೆಗಿಂತ ಹೆಚ್ಚು ಪ್ರಚಲಿತವಾಗಿದೆ. ತಿಜೋರಿಯಲ್ಲಿ ಹಣ ಬಹಳಷ್ಟಿದೆ. ಆದರೆ ಭಂಡಾರದಲ್ಲಿ ಆಹಾರಧಾನ್ಯವಿಲ್ಲದಿದ್ದರೆ ಹಣವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಪರಂಪರೆಯಲ್ಲಿ ಸಮೃದ್ಧಿಯ ಸಮಗ್ರ ರೂಪದ ಕಲ್ಪನೆ ಹಾಗೂ ಉಪಾಸನೆಯ ವಿಧಾನವನ್ನು ಈ ರೀತಿ ಹೇಳಲಾಗಿದೆ:-
ಶ್ರೀರ್ವರ್ಚಸ್ವಮಾಯುಷ್ಯಮಾರೋಗ್ಯಮಾವಿಧಾಚ್ಛೋಭಮಾನಂ ಮಹೀಯತೇ
ಧಾನ್ಯಂ ಧನಂ ಪಶುಂಬಹುಪುತ್ರಲಾಭಂ ಶತಸಂವತ್ಸರಂ ದೀರ್ಘಮಾಯುಃ ||
ಇಷ್ಟೇ ಅಲ್ಲ, ಮನಸ್ಸಿನ ಸಮೃದ್ಧಿಯನ್ನೂ ಲಕ್ಷ್ಮಿಮಯ ರೂಪದಲ್ಲಿ ನೋಡ
ಲಾಗಿದೆ.
ನ ಕ್ರೋಧೋ ನ ಚ ಮಾತ್ಸರ್ಯೋ ನ ಲೋಭೋ ನಾಶುಭಾ ಮತಿಃ||
ನಮ್ಮ ಜೀವನದೊಂದಿಗೆ ಎಲ್ಲರ ಜೀವನ ಅಭಿವೃದ್ಧಿ ಹೊಂದಲು ಯಾವುದು ಅನಿವಾರ್ಯವಾಗಿದೆಯೋ ಅವೆಲ್ಲಕ್ಕೂ ಲಕ್ಷ್ಮಿಮಯ ಹೆಸರನ್ನು ಕೊಡಲಾಗಿದೆ.
ನಾವು ಈ ಬಗ್ಗೆ ವಿಚಾರ ಮಾಡಬೇಕಾಗಿದೆ ಹಾಗೂ ವಿಷಯುಕ್ತ ರಾಸಾಯನಿಕ ಪದಾರ್ಥಗಳಿಂದ ಹೊಲಗದ್ದೆಗಳನ್ನು ರಕ್ಷಿಸಬೇಕಾಗಿದೆ. ಸೆಗಣಿಗೊಬ್ಬರ ಅಥವಾ ಪ್ರಾಕೃತಿಕವಾದ ಗೊಬ್ಬರ ಗಳ ಪ್ರಯೋಗವನ್ನು ಮಾಡಬೇಕಾಗಿದೆ. ಏಕೆಂದರೆ ಇದರ ಬಳಕೆಯಿಂದ ಯಾವುದೇ ಪ್ರಾಣಹಾನಿಯಾಗದು. ಪ್ರಾಕೃತಿಕವಾದ ಗೊಬ್ಬರದ ಬಳಕೆಯಿಂದ ಅಭಿವೃದ್ಧಿಯ ವೇಗವೂ ವೃದ್ಧಿಸಲಿದೆ. ಅಲ್ಲದೆ ಚಕ್ರವೂ ನಿಲ್ಲದು. ನಾವು ಮತ್ತೆ ಹಿಂದಿನ ಕಡೆಗೆ ತಿರುಗಿ ನೋಡಬೇಕಾಗಿದೆ ಮತ್ತು ಎಷ್ಟು ಹಿಂದೆ ಹೋಗಬಹುದು ಎಂಬುದನ್ನು ನಿರ್ಧಾರ ಮಾಡಬೇಕಾಗಿದೆ. ನಾವು ಎತ್ತಿನಗಾಡಿ ಯುಗಕ್ಕಂತೂ ಹಿಂದೆ ಸರಿಯಲಾರೆವು. ಆದರೆ ಅತಿವೇಗವಾಗಿ ಹೋಗುವ ಕಾರುಗಳಿಗೆ ತಡೆಯನ್ನಂತೂ ಖಂಡಿತ ಒಡ್ಡಬಹುದು. ಏಕೆಂದರೆ ನಾವು ಪ್ರತಿಯೊಂದು ಸಂದರ್ಭದಲ್ಲೂ ಪ್ರಕೃತಿಯ ಜೊತೆಗೇ ಮುಂದೆ ಹೆಜ್ಜೆ ಹಾಕಬೇಕಾಗಿದೆ. ಹಾಗಾಗಿ ಪರಿಸರದ ಸಮಸ್ಯೆಗಳ ಪರಿಹಾರದ ಪ್ರಯತ್ನವು ನಮ್ಮೆಲ್ಲರ ಬಳಿಯಿಂದಲೇ ಶುರುವಾಗುತ್ತದೆ. ಕೆಲವು ನೀತಿಗೆ ಸಂಬಂಧಿಸಿದ ವಿಚಾರಗಳಿವೆ. ಅವುಗಳ ಬಗ್ಗೆ ಸಲಹೆಗಳನ್ನು ನೀಡಬೇಕಾಗಿದೆ. ಆ ಕುರಿತು ವಿಚಾರ ಮಾಡಬೇಕಿದೆ. ಹಾಗೂ ಪ್ರಾಮಾಣಿಕವಾಗಿ ಅವುಗಳನ್ನು ಜಾರಿಗೆ ತರಬೇಕಾಗಿದೆ.
ಮನುಷ್ಯ ತನ್ನ ಸ್ವಾರ್ಥವನ್ನು ತ್ಯಜಿಸಬೇಕಾಗಿದೆ. ಹಾಗೂ ದಂಡದ ನೀತಿಯನುಸಾರ ಕೆಲಸ ನಿರ್ವಹಿಸುವ ಸಂಗತಿಯನ್ನು ಮರೆಯಬೇಕಾಗಿದೆ. ನಾವು ಸಮಾಜವನ್ನು ನಮ್ಮ ಜೊತೆಗೇ ಒಯ್ದು ಮುಂದೆ ಸಾಗಬೇಕಿದೆ. ಒಂದು ವೇಳೆ ನಾವು ಓಡುತ್ತಾ ಹೋದರೆ ಒಂಟಿಯಾಗಿಯೇ ಹೋಗುತ್ತೇವೆ. ಎಲ್ಲರನ್ನೂ ಒಂದೇ ಬಾರಿ ಎಳೆದೊಯ್ಯಲು ಪ್ರಯತ್ನಿಸಿದರೆ ಕೆಳಗೆ ಬೀಳುವುದು ನಿಶ್ಚಿತ. ನಾವು ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನೂ, ಮಕ್ಕಳನ್ನೂ ಸಹ, ಜೊತೆಗೆ ಕರೆದುಕೊಂಡು ಹೋಗಬೇಕಾಗಿದೆ. ದೇಶದ ರಾಷ್ಟ್ರೀಯ ನೀತಿ ಪರಿಸರಕ್ಕೆ ವ್ಯತಿರಿಕ್ತವಾಗಿ ಇರಕೂಡದು. ಈ ಬಗ್ಗೆ ಎಲ್ಲ ದೇಶಬಾಂಧವರೂ ಚಿಂತಿಸಬೇಕಾಗಿದೆ. ಒಬ್ಬರು ಇನ್ನೊಬ್ಬರ ಮೇಲೆ ಭಾರ ಹಾಕುವಂತಿಲ್ಲ. ತಪ್ಪುಗಳು ಸಂಭವಿಸಿದರೆ ಅವುಗಳನ್ನು ಸರಿಪಡಿಸುವುದು ಹೇಗೆ ಎಂದು ವಿಚಾರ ಮಾಡಬೇಕು. ನಮ್ಮ ವ್ಯಕ್ತಿಗತ ಆಚರಣೆಯಲ್ಲಿ ಸರಳತೆಯನ್ನು ತರಬೇಕಾಗಿದೆ. ಅಂತೆಯೇ ನಮ್ಮ ಬಯಕೆ, ಕಾಮನೆ ಹಾಗೂ ದುರಾಸೆಗಳ ಮೇಲೆ ಸಂಯಮ ಸಾಧಿಸಬೇಕಾಗಿದೆ. ಹಾಗೂ ಬದುಕನ್ನು ಸರಳವಾಗಿ, ಅತಿ ಕಡಿಮೆ ಸೌಲಭ್ಯಗಳೊಂದಿಗೆ ಸಾಗಿಸಬೇಕಾಗಿದೆ.
ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಜೀವನದಲ್ಲಿ ಅನ್ನ, ಬಟ್ಟೆ, ಮನೆ, ಶಿಕ್ಷಣ, ಆರೋಗ್ಯ ಮತ್ತು ಅತಿಥಿಸತ್ಕಾರಗಳನ್ನು ನಿರ್ವಹಿಸಲೇಬೇಕಾಗುತ್ತದೆ. ಇದು ಜೀವನದ ಒಂದು ಭಾಗವೇ ಆಗಿರುತ್ತದೆ. ಆದರೆ ನಾವು ವಿಲಾಸಿ ಜೀವನ ನಡೆಸಬೇಕೆ? ಎಷ್ಟು ಲಕ್ಷುರಿಯಾಗಿರಬೇಕು – ಈ ಬಗ್ಗೆ ನಾವೇ ನಿರ್ಧರಿಸಬೇಕಾಗಿದೆ. ಜೊತೆಗೆ ನಿಯಂತ್ರಣವನ್ನೂ ಸಾಧಿಸಬೇಕಾಗಿದೆ. ಸಂಘದ ಸ್ವಯಂಸೇವಕರು ಮೂರು ಅಂಶಗಳ ಬಗ್ಗೆ ಕಾರ್ಯ ಆರಂಭಿಸಿದ್ದಾರೆ. ನೀರು ಉಳಿಸಿ, ಗಿಡ ನೆಡಿ ಮತ್ತು ಪಾಲಿಥೀನ್ ತೊಲಗಿಸಿ – ಇವೇ ಆ ಮೂರು ಅಂಶಗಳು. ಆದರೆ ಇದು ಕೇವಲ ಸ್ವಯಂಸೇವಕರಷ್ಟೇ ಮಾಡಬೇಕಾದ ಕೆಲಸವಲ್ಲ, ಎಲ್ಲರೂ ಮಾಡಬೇಕಾದ ಕೆಲಸ. ಈ ಕೆಲಸದ ಆರಂಭ ಮನೆಯಿಂದಲೇ ಶುರುವಾಗುತ್ತದೆ. ನೀರಿನ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕಾಗಿದೆ. ಆದಾಗ್ಯೂ ಸ್ನಾನದಂತಹ ಅಗತ್ಯ ಕೆಲಸವನ್ನು ಪ್ರತಿನಿತ್ಯ ನಿರ್ವಹಿಸಬೇಕಾಗುತ್ತದೆ. ಸ್ನಾನಕ್ಕೆ ಶವರ್ ಅಥವಾ ಬಾತ್‌ಟಬ್ ಬಳಸಿ ಅನವಶ್ಯಕ ನೀರು ಪೋಲು ಮಾಡುವುದನ್ನು ನಾವು ತಡೆಯಬಹುದು. ಮನೆಗೆ ಬರುವ ಅತಿಥಿಗಳಿಗೆ ಅಥವಾ ಮನೆಯಲ್ಲಿರುವವರಿಗೆ ಒಂದು ಲೋಟ ನೀರಿನ ಬದಲು ಅರ್ಧ ಲೋಟ ನೀರನ್ನು ಕೊಡಿ. ಅಗತ್ಯವಿದ್ದರೆ ಮತ್ತೆ ಅರ್ಧ ಲೋಟ ನೀರು ಕೊಡುವುದರಿಂದ ನೀರನ್ನು ಉಳಿಸಬಹುದು. ತುಂಬಿದ ಲೋಟದಲ್ಲಿರುವ ನೀರು ಎಂಜಲಾದರೆ ಅದನ್ನು ಚೆಲ್ಲಬೇಕಾಗುತ್ತದೆ.
ಮನೆಯಲ್ಲಿ ಮಣ್ಣಿನ ಕುಂಡಗಳಲ್ಲಿ, ಮನೆಯ ಛಾವಣಿಯ ಮೇಲೆ ಹೂವುಹಣ್ಣು ತರಕಾರಿ ತೋಟ ಮಾಡಬಹುದು. ರಾಸಾಯನಿಕ ಗೊಬ್ಬರದ ಬದಲಿಗೆ ಹಸುವಿನ ಗೊಬ್ಬರ ಅಥವಾ ಬೂದಿಯನ್ನು ಇಂತಹ ತೋಟಗಳಿಗೆ ಬಳಸಬಹುದು. ಇದರಿಂದಾಗಿ ವಿಷರಹಿತ ಆಹಾರ ಬೆಳೆಸಬಹುದಾಗಿದೆ. ಹೊಲಗದ್ದೆಗಳಿಗೆ ಪಂಚಗವ್ಯ ಬಳಸುವ ಪ್ರಯೋಗವೂ ಚಾಲ್ತಿಯಲ್ಲಿದೆ. ಹಳ್ಳಿಗಳಲ್ಲಿ ಇದರ ಬಳಕೆಯ ಮೂಲಕ ಹೊಲಗದ್ದೆಗಳಲ್ಲಿ ಫಸಲು ಪಡೆಯಲಾಗುತ್ತಿದೆ. ಆದರೆ ಈ ಎಲ್ಲ ಪ್ರಯೋಗಗಳನ್ನು ಮಾಡುವವರ ಸಂಖ್ಯೆ ಈಗ ಬಹಳ ಕಡಮೆ ಇದೆ. ಹೀಗಾಗಿ ಇಡೀ ಸಮಾಜವನ್ನು ಇದರತ್ತ ಒಲಿಸಿಕೊಳ್ಳುವ ಅಗತ್ಯವಿದೆ. ಆಗ ಅಂತಹ ಸಮಾಜದಿಂದ ಮೇಲೆದ್ದು ಬರುವ ಉತ್ತಮ ಆಚರಣೆಯ ವ್ಯಕ್ತಿಗಳು ಉಳಿದ ಜನರಿಗೂ ಇದನ್ನು ತಲಪಿಸುತ್ತಾರೆ.
ಭಾರತ ಒಂದು ಪ್ರಾಚೀನ ದೇಶ. ಇಲ್ಲಿನ ಜೀವವೈವಿಧ್ಯಗಳು, ಜಲ, ನೆಲ, ಜಾನುವಾರು, ಪ್ರಕೃತಿ, ಕಾನನಗಳನ್ನು ವಿದೇಶಿಯರು ಇಲ್ಲಿಗೆ ಬರುವುದಕ್ಕೆ ಮೊದಲು ನಾವು ಸುರಕ್ಷಿತವಾಗಿರಿಸಿದ್ದೆವು. ಮೊದಲು ಇದೇ ಪ್ರಕೃತಿಯ ಆಶ್ರಯದಲ್ಲಿ ನಾವು ಸಾವಿರಾರು ವರ್ಷಗಳವರೆಗೆ ಜೀವಂತವಾಗಿದ್ದೆವು. ಹಾಗೂ ಪ್ರಕೃತಿಗೆ ಯಾವುದೇ ಹಾನಿಯಾಗುತ್ತಿರಲಿಲ್ಲ. ಸುಮಾರು ಒಂದನೇ ಶತಮಾನದಿಂದ ೧೬ನೇ ಶತಮಾನದ ವರೆಗೆ ನಾವು ಜಗತ್ತಿನಲ್ಲಿ ಈ ವಿಷಯದಲ್ಲಿ ಮೊದಲನೇ ಸ್ಥಾನದಲ್ಲಿದ್ದೆವು. ಭಾರತದ ನೀರು ಮತ್ತು ನಿಸರ್ಗ ರೋಗಗಳಿಂದ ಮುಕ್ತಿ ಪಡೆಯಲು ಹೆಸರಾಗಿತ್ತು. ಗಂಗಾಮಾತೆಯ ಪ್ರಭಾವ ಎಷ್ಟಿತ್ತೆಂದರೆ ಜನರು ಗಂಗಾಜಲ ಸೇವಿಸಿ ರೋಗಮುಕ್ತರಾಗುತ್ತಿದ್ದರು. ಇತ್ತೀಚಿನ ಲಾಕ್‌ಡೌನ್ ಕಾಲಘಟ್ಟದಲ್ಲಿ ಪ್ರಕೃತಿಯ ಒಂದು ಸುಂದರ ದೃಶ್ಯ ಕೆಲವು ದಿನಗಳ ಮಟ್ಟಿಗೆ ಕಾಣಲು ದೊರಕಿತ್ತು. ವಿವಿಧ ಬಗೆಯ ಹೊಸಹೊಸ ಪಕ್ಷಿಗಳು ಆ ಸಂದರ್ಭದಲ್ಲಿ ಕಂಡುಬಂದವು. ಮೊದಲು ಭಾರತ ಹೀಗೆಯೇ ಇತ್ತು. ಆದರೆ ಭೌತಿಕವಾದ ಮತ್ತು ಬೇರೆ ದೇಶಗಳ ತಂತ್ರಜ್ಞಾನಗಳ ಹಿಂದೆ ಓಡೋಡಿಹೋಗಿದ್ದರ ಪರಿಣಾಮವಾಗಿ ಅದರ ಫಲವನ್ನು ಇಂದು ಅನುಭವಿಸುತ್ತಿದ್ದೇವೆ.
ಮನುಷ್ಯನ ಭೌತಿಕ ವಿಕಾಸ ಅಗತ್ಯವಾಗಿದೆ. ಆದರೆ ಅದು ಒಂದು ಮಿತಿಯಲ್ಲಿ ಸಾಗಬೇಕು. ಅಭಿವೃದ್ಧಿಯಾಗಬೇಕೆಂದು ಯಾವುದೇ ಹಂತಕ್ಕಾದರೂ ಹೋಗುವುದು ತರವಲ್ಲ. ಅಭಿವೃದ್ಧಿಯೆನ್ನುವುದು ಸಮಾಜದ ಹಿತಕ್ಕಾಗಿ ಮಾತ್ರ ಇರಬೇಕು. ನಾವೆಲ್ಲರೂ ಈ ಬಗ್ಗೆ ಆಲೋಚಿಸಬೇಕು ಹಾಗೂ ಈ ಕುರಿತು ಪ್ರಯೋಗಗಳನ್ನೂ ಮಾಡಬೇಕು. ಸಮಾಜದ ಹಿತಕ್ಕಾಗಿ ಅಗತ್ಯವಿದ್ದಷ್ಟೇ ಹೆಜ್ಜೆಯನ್ನು ಮುಂದಿಡಬೇಕು. ಇವತ್ತು ಇಡೀ ವಿಶ್ವವೇ ಭಾರತದತ್ತ ದೃಷ್ಟಿಹರಿಸಿದೆ. ಏಕೆಂದರೆ ಎಲ್ಲರಿಗೂ ಭಾರತದ ಬಗ್ಗೆ ಭರವಸೆ ಮೂಡತೊಡಗಿದೆ. ಭಾರತದ ಉತ್ಥಾನ ಕೂಡ ಆಗತೊಡಗಿದೆ. ಈ ಉತ್ಥಾನ ಕೇವಲ ಭಾರತಕ್ಕಾಗಿ ಅಲ್ಲ, ಆದರೆ ಇಡೀ ವಿಶ್ವಕ್ಕಾಗಿ ನಡೆಯುತ್ತಿದೆ. ತಾನು ವಿಷವನ್ನು ನುಂಗಿ ಇಡೀ ಜಗತ್ತನ್ನು ರಕ್ಷಿಸಿದ ಮಹಾಪುರುಷರ ಹೆಮ್ಮೆಯ ಇತಿಹಾಸ ಭಾರತದ್ದು. ಈಗ ಇಡೀ ವಿಶ್ವದ ಪ್ರಗತಿಗಾಗಿ ಭಾರತ ಮತ್ತೆ ಅದೇ ರೀತಿ ಮಾಡಬೇಕಾಗಿದೆ. ಭಾರತ ಅದೇ ರೀತಿ ಮಾಡುವಂತಾಗಲು ನಾವೆಲ್ಲ ಸ್ವತಃ ಅದೇ ರೀತಿ ನಡೆದುಕೊಳ್ಳಬೇಕಾಗಿದೆ.
ಇದಕ್ಕಾಗಿ ಯಾವ ಮಾರ್ಗಗಳನ್ನು ಅನುಸರಿಸಬಹುದೆಂದು ನಾನು ನಿಮ್ಮ ಮುಂದೆ ಕೆಲವು ಅಂಶಗಳನ್ನು ಪ್ರಸ್ತುತಪಡಿಸಿರುವೆ.
ನೀವು ಈ ಕುರಿತು ವಿಚಾರ ಮಾಡುವಿರಿ ಎಂಬ ವಿಶ್ವಾಸ ನನ್ನದು.
(ಕನ್ನಡಕ್ಕೆ: ದು.ಗು. ಲಕ್ಷ್ಮಣ)
* * *