
ಉತ್ತರ ಕನ್ನಡ ಜಿಲ್ಲೆಯ ಜನರು ಸದಾ ಕಾಲ ಯಾವುದಾದರೊಂದು ಸಾಮಾಜಿಕ ಹೋರಾಟದಲ್ಲಿ ತೊಡಗಿಕೊಂಡಿರಲೇಬೇಕಾದ ಅನಿವಾರ್ಯತೆ ಒಂದಿಲ್ಲೊಂದು ಕಾರಣಕ್ಕೆ ಸೃಷ್ಟಿಯಾಗುತ್ತಲೇ ಇರುತ್ತದೆ. ಒಮ್ಮೆ ಕೈಗಾ ಹೋರಾಟವಾದರೆ ಇನ್ನೊಮ್ಮೆ ನದಿ ಜೋಡಣೆ ಹೋರಾಟ ಮತ್ತೊಮ್ಮೆ ಜಲವಿದ್ಯುತ್ ಯೋಜನೆಯ ವಿರೋಧಿಸಿ ಹೋರಾಟ ಇಲ್ಲದಿದ್ದರೆ ರಸ್ತೆ ಅಗಲೀಕರಣಕ್ಕೆ ಅರಣ್ಯ ನಾಶ ವಿರೋಧಿಸಿ ಹೋರಾಟ ; ಒಟ್ಟಿನಲ್ಲಿ ಪರಿಸರ ರಕ್ಷಣೆಯ ಹೋರಾಟ ಈ ನೆಲದಲ್ಲಿ ಸದಾ ಜೀವಂತ.
1979 ರಲ್ಲಿ ಬೇಡ್ತಿ ಜಲವಿದ್ಯುತ್ ಯೋಜನೆಯ ವಿರೋಧಿಸಿ ಹೋರಾಟ ಜೋರಾಗಿ ನಂತರ ಶ್ರೀಮತಿ ಅನುಸೂಯ ಶರ್ಮ ಅವರ ಪ್ರಯತ್ನದಲ್ಲಿ ಆ ಯೋಜನೆ ಸ್ಥಗಿತಗೊಂಡಿತ್ತು ಆದರೆ ನಂತರ ಪುನಃ 1992 ರಲ್ಲಿ ಮತ್ತೆ ಆ ಯೋಜನೆಯ ಅನುಷ್ಠಾನದ ಬಗ್ಗೆ ಸರ್ಕಾರ ಮಾತಾಡಿತ್ತು ಮತ್ತು ಅದಕ್ಕೆ ಪೂರಕವಾಗಿರುವ ಕೆಲಸಗಳು ಸರ್ಕಾರದ ಕಡೆಯಿಂದ ನಡೆಯತೊಡಗಿತು. ಆಗ ಸ್ವರ್ಣವಲ್ಲೀ ಶ್ರೀಗಳ ನೇತ್ರತ್ವದಲ್ಲಿ ನಡೆದ ಹೋರಾಟ ಇಡೀ ದೇಶದ ಗಮನ ಸೆಳೆದಿತ್ತು. ಅಂದು ಅವರು ಸೋಂದಾ ಶ್ರೀ ಮಠದಿಂದ ಯಲ್ಲಾಪುರದ ಮಾಗೋಡಿನವರೆಗೂ ಸುಮಾರು 50 ಕಿಲೋ ಮೀಟರ್’ಗಳ ದೀರ್ಘ ಪಾದಯಾತ್ರೆಯನ್ನು ಮಾಡಿ ಜನಸಾಮಾನ್ಯರ ಬದುಕಿಗೆ ಆಶಾಕಿರಣವಾಗಿ ನಿಂತರು. ಪರಿಣಾಮ ಸರಕಾರ ನಲುಗಿತು; ಹೋರಾಟದ ತೀವ್ರತೆ ಅರಿತ ಸರಕಾರ ಆ ಯೋಜನೆಯನ್ನು ಕೈ ಬಿಡುವುದು ಅನಿವಾರ್ಯವಾಗಿತ್ತು. ಶ್ರೀಗಳ ಹೋರಾಟಕ್ಕೆ ಜಯ ದೊರಕಿತು. ಇಷ್ಟಲ್ಲದೇ ಉತ್ತರಕನ್ನಡವನ್ನು ಅಭಿವೃದ್ಧಿಯ ಹೆಸರಲ್ಲಿ ದೋಚುವ ಕೆಲಸ ಅನೇಕ ಬಾರಿ ನಡೆಯಿತು. ಒಮ್ಮೆ ಅಘನಾಶಿನಿ ನದಿ ತಿರುವು ಎನ್ನುವ ಸರಕಾರ ಇನ್ನೊಮ್ಮೆ ಬೇಡ್ತಿ-ವರದಾ ನದಿ ಜೋಡಣೆ ಅನ್ನುತ್ತದೆ. ಒಟ್ಟಿನಲ್ಲಿ ಅಭಿವೃದ್ಧಿ ಎನ್ನುವ ರಾಕ್ಷಸನ ಒಂದು ಕಣ್ಣು ಉತ್ತರಕನ್ನಡದ ದಟ್ಟ ಅರಣ್ಯದ ಮೇಲೆ ಯಾವಾಗಲೂ ನೆಟ್ಟಿರುತ್ತದೆಯೇನೋ.
ಈಗ ಮತ್ತೊಮ್ಮೆ ಹೋರಾಟಕ್ಕೆ ಧುಮುಕಬೇಕಾದ ಅನಿವಾರ್ಯತೆ ಎದುರಾದಂತಿದೆ . ಕಾರಣವೆಂದರೆ ಅದು ‘ಬೇಡ್ತಿ-ವರದಾ ನದಿ ಜೋಡಣೆ’ ಯೋಜನೆ.1995 ರಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ನಿಗಮ(NWDA) ತನ್ನ ಪ್ರಾಥಮಿಕ ವರದಿಯಲ್ಲಿ ಈ ಯೋಜನೆಯ ಮೂಲಕ ಸುಮಾರು 8.5tmcft ರಷ್ಟು ನೀರನ್ನು ಸಂಗ್ರಹಿಸಿ ಉತ್ತರ ಕರ್ನಾಟಕಕ್ಕೆ ಹರಿಸಬಹುದು ಎಂದು ಹೇಳಿತ್ತು.ಕರ್ನಾಟಕ ನೀರಾವರಿ ನಿಗಮ ಪರಿಸರ ಮಂತ್ರಾಲಯದಿಂದ ಒಪ್ಪಿಗೆ ಪಡೆದುಕೊಂಡು ಯೋಜನೆಯನ್ನು ಜಾರಿಗೊಳಿಸಲು ಕೂಡ ಮುಂದಾಗಿತ್ತು. ಸುಮಾರು 25 ವರ್ಷಗಳ ಹಿಂದೆ ಜೀವ ತಳೆದುಕೊಂಡ ಈ ಯೋಜನೆಯ ವಿರುದ್ಧ ಜನ ತಿರುಗಿಬಿದ್ದಿದ್ದರಿಂದ ಇದು ಅನುಷ್ಠಾನವಾಗಿರಲಿಲ್ಲ. ಆದರೆ ಈಗ ಮತ್ತೆ ಈ ಯೋಜನೆಯ ಅನುಷ್ಠಾನದ ಕಡೆ ಸರಕಾರ ಗಮನಹರಿಸಿದೆ ಇದರ ಜೊತೆಜೊತೆಗೆ ಇದನ್ನು ವಿರೋಧಿಸಿ ಮತ್ತೆ ಹೋರಾಟದ ಕೂಗು ಕೂಡ ಜೋರಾಗಿಯೇ ಎದ್ದಿದೆ.
ಈ ಹಿಂದೆ 1995 ರಲ್ಲಿ ಘೋಷಿಸಿದ್ದ ಹಿಂದೆ ಬೇಡ್ತಿ-ವರದಾ ಯೋಜನೆಯ ಉದ್ದೇಶ ಬೇಡ್ತಿ ನದಿಯಲ್ಲಿ ಸಂಗ್ರಹಿಸಿದ ನೀರನ್ನು ವರದಾ ನದಿಯ ಮೂಲಕ ತುಂಗಭದ್ರಾ ಎಡದಂಡೆಗೆ ಹರಿಸುವುದು ಎಂದಾಗಿತ್ತು. ಅಂದು ಸರಕಾರವೇ ನೀಡಿದ್ದ ಅಂಕಿ ಅಂಶವೇನೆಂದರೆ ಈ ಯೋಜನೆಯಿಂದ ಸುಮಾರು 1005 ಹೆಕ್ಟೇರ್ ಪ್ರದೇಶ ಮುಳುಗಡೆಯಾಗುತ್ತದೆ ಎಂದು. ಇದು 787 ಹೆಕ್ಟೇರ್ ಅರಣ್ಯ ಪ್ರದೇಶ,137 ಹೆಕ್ಟೇರ್ ಸಾಗುವಳಿ ಭೂಮಿ ಮತ್ತು 88 ಹೆಕ್ಟೇರ್ ಕೃಷಿಯೇತರ ಭೂಮಿಯನ್ನು ಹೊಂದಿದೆ. ಈ ಹಿಂದೆ ಬೇಡ್ತಿ-ಅಘನಾಶಿನಿಕೊಳ್ಳ ಸಂರಕ್ಷ ಣಾ ಸಮಿತಿಯ ನೇತೃತ್ವದಲ್ಲಿ ನಡೆದ ಹೋರಾಟದಿಂದ ಈ ಯೋಜನೆಯನ್ನು ಹಿಮ್ಮೆಟ್ಟಿಸಲಾಗಿತ್ತು. ಆದರೆ ಈಗಿರುವ ಮಾಹಿತಿಯ ಪ್ರಕಾರ ಈ ಯೋಜನೆಯ ಸ್ವರೂಪವೀಗ ಕೊಂಚ ಬದಲಾಗಿದೆಯಂತೆ ಅಂದರೆ ಬೇಡ್ತಿ ನದಿಯ ನೀರನ್ನು ವರದಾ ನದಿಯ ಮೂಲಕ ಗದಗ ಸಮೀಪದ ಹಿರೇವಡ್ಡತ್ತಿಗೆ ಹರಿಸುವುದು ಈಗಿನ ಹೊಸ ಬದಲಾವಣೆ. ಈ ಯೋಜನೆಯ ಪ್ರಕಾರ ಶಿರಸಿ ತಾಲೂಕಿನ ಪಟ್ಟಣದ ಹೊಳೆ ಮತ್ತು ಶಾಲ್ಮಲಾ ನದಿಗಳಿಗೆ ಹಾಗೂ ಯಲ್ಲಾಪುರ ತಾಲೂಕಿನಲ್ಲಿ ಬೇಡ್ತಿ ನದಿಗೆ ದೊಡ್ಡ ಜಲಾಶಯಗಳನ್ನು ನಿರ್ಮಿಸಲಾಗುತ್ತದೆ. ಈ ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ದೊಡ್ಡ ದೊಡ್ಡ ಪಂಪುಗಳ ಮೂಲಕ ಎತ್ತಿ ಭಾರೀ ಗಾತ್ರದ ಪೈಪುಗಳ ಮೂಲಕ ಗದಗಿನ ಹಿರೆವಡ್ಡತ್ತಿಯ ಈಗಾಗಲೇ ಗುರುತಿಸಿದ ಜಾಗದಲ್ಲಿ (100tmc) ಶೇಖರಣೆ ಮಾಡಿ ಹಾವೇರಿ, ಗದಗ, ಕೊಪ್ಪಳ, ಸಿಂಧನೂರು ಹಾಗೂ ರಾಯಚೂರಿನ ಪ್ರದೇಶಗಳಿಗೆ ನೀರೊದಗಿಸಿವುದು ಈ ಯೋಜನೆಯ ಉದ್ದೇಶವಾಗಿದೆ.
ಪಟ್ಟಣದ ಹೊಳೆ, ಶಾಲ್ಮಲಾ ನದಿ ಮತ್ತು ಬೇಡ್ತಿ ನದಿಗಳಿಗೆ ಕಟ್ಟುವ ಜಲಾಶಯಗಳಲ್ಲಿ ಸುಮಾರು 22 ಟಿ ಎಂ ಸಿ ಅಡಿ ಹೆಚ್ಚುವರಿ ನೀರು ಸಂಗ್ರಹಿಸಲಾಗುತ್ತದೆಯಂತೆ ಮತ್ತು ಈ ನೀರನ್ನೇ ಸರಕಾರ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹರಿಸಲು ತಯಾರಾಗಿರುವುದು. ಕಳೆದ ಬಜೆಟ್ ನಲ್ಲಿ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿರುವ ರಾಜ್ಯ ಸರಕಾರ ವಿಸ್ತ್ರತ ವರದಿಯನ್ನು (ಡಿ. ಪಿ. ಆರ್) ಅನ್ನು ಸಿದ್ದಪಡಿಸಲು ರಾಷ್ಟ್ರೀಯ ಜಲ ಅಭಿವೃದ್ಧಿ ನಿಗಮಕ್ಕೆ (ಎನ್. ಡಬ್ಲು. ಡಿ. ಎ) ಮನವಿ ಮಾಡುವುದಾಗಿ ಹೇಳಿದೆ. ನೂರು ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಪೈಪ್ ಗಳನ್ನು ಅಳವಡಿಸಿ ನೀರು ಗದಗನ್ನು ತಲುಪುವಂತೆ ಮಾಡಲಾಗುವುದು ಮತ್ತು ನೀರನ್ನು ಸಂಗ್ರಹಿಸಿ ಸಾಗಿಸಲು ಆಳವಾದ ಬಾವಿಗಳನ್ನು ನಿರ್ಮಿಸಲಾಗುವುದು ಎಂಬುದು ಪ್ರಾಥಮಿಕ ಮಾಹಿತಿಯಿಂದ ದೊರೆಯುತ್ತದೆ. ಕುಡಿಯುವ ನೀರನ್ನು ಅವಶ್ಯಕ ಜಿಲ್ಲೆಗಳಿಗೆ ಸರಬರಾಜು ಮಾಡುವುದಕ್ಕೆ ಯಾರೂ ತಕರಾರು ಮಾಡುವುದಿಲ್ಲ ಆದರೆ ಈ ಕಾಮಗಾರಿಯನ್ನು ಬ್ರಹತ್ ನೀರಾವರಿ ಇಲಾಖೆ ಜಾರಿ ಮಾಡುತ್ತಿರುವುದು ಈಗ ಎಲ್ಲರಲ್ಲೂ ಆತಂಕ ಮತ್ತು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಒಟ್ಟಿನಲ್ಲಿ ಇದು ಪಶ್ಚಿಮ ಘಟ್ಟದ ಎರಡನೇ ಎತ್ತಿನ ಹೊಳೆ ಯೋಜನೆಯಾಗಲಿದೆಯೇ ಎಂಬುದೇ ಈಗ ಹಲವರ ಪ್ರಶ್ನೆ.
ಎತ್ತಿನ ಹೊಳೆ ಯೋಜನೆಯ ವೆಚ್ಚ ಅದಾಗಲೇ 24 ಸಾವಿರ ಕೋಟಿಗೆ ಏರಿದೆ ಮತ್ತು ಇಷ್ಟು ಹಣ ಖಾಲಿ ಮಾಡಿ ಕೂಡ ಆ ಯೋಜನೆ ಯಶಸ್ವಿಯಾಗಿದೆಯೇ?ಇಂತಹ ವಿಫಲ ಯೋಜನೆಯೇ ಕಣ್ಮುಂದೆ ಇರುವಾಗ ಸಾವಿರಾರು ಹೆಕ್ಟೇರ್ ಅರಣ್ಯ ಮತ್ತು ಸಾಗುವಳಿ ಪ್ರದೇಶವನ್ನು ನಾಶಮಾಡುವುದು ಎಷ್ಟು ಸೂಕ್ತ? ಈ ಹಿಂದೆ 1995ರ ಸಮಯದಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯ ವೆಚ್ಚವನ್ನು ಸುಮಾರು 622 ಕೋಟಿ ಎಂದು ಅಂದಾಜಿಸಲಾಗಿತ್ತು ಅಂದರೆ ಈಗ ಈ ಮೊತ್ತ ಎರಡು, ಮೂರು ಮತ್ತು ನಾಲ್ಕು ಪಟ್ಟು ಏರಿಕೆಯಾದರೂ ಆಗಬಹುದಲ್ಲವೇ? ಇಷ್ಟೊಂದು ಹಣವನ್ನು ವ್ಯಯಿಸುವ ಬದಲು ಬೇರೆ ಯಾವುದಾದರೂ ಪರ್ಯಾಯ ಯೋಜನೆ ರೂಪಿಸಬಹುದಲ್ಲವೇ?ಮಳೆಗಾಲದಲ್ಲಿ ಪ್ರವಾಹ ಉಂಟುಮಾಡುವ ಬೇಡ್ತಿ ನದಿ ಬೇಸಿಗೆಯಲ್ಲಿ ಸಂಪೂರ್ಣ ಬತ್ತಿಹೋಗುತ್ತದೆ. ಈ ನದಿಯನ್ನೇ ನಂಬಿರುವ ಅಂಕೋಲಾ ಮುಂಡಗೋಡು ಮತ್ತು ನದಿ ಪ್ರದೇಶದ ಅನೇಕ ಗ್ರಾಮಗಳೇ ನೀರಿಗೆ ಪರದಾಡುವ ಸನ್ನಿವೇಶ ಎದಿರಾಗುತ್ತದೆ. ಮತ್ತೇಕೆ ಈ ನದಿಗೆ ಅಣೆಕಟ್ಟು? ಧಾರವಾಡ ಹುಬ್ಬಳ್ಳಿಯ ಕೊಳಚೆ ನೀರನ್ನು ಹೊತ್ತು ತರುವ ಬೇಡ್ತಿಯ ನೀರು ಕುಡಿಯಲು ಯೋಗ್ಯವಾಗಿದೆಯೇ? ಮೇಲ್ನೋಟಕ್ಕೆ ಮತ್ತು ದಪ್ಪ ಚರ್ಮದ ಅಧಿಕಾರಿಗಳ ದೃಷ್ಟಿಯಲ್ಲಿ ಪಶ್ಚಿಮ ಘಟ್ಟದಲ್ಲಿ ಹರಿಯುವ ಬೇಡ್ತಿ, ಶಾಲ್ಮಲಾ ಮತ್ತು ಪಟ್ಟಣದ ಹಳ್ಳದ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತಿದೆ; ಆದರೆ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಹಾಗೂ ನದಿ ಪ್ರದೇಶದಲ್ಲಿ ಜೀವನ ಸಾಗಿಸುತ್ತಿರುವವರಿಗೆ ಇದೇ ನೀರಲ್ಲವೇ ಜೀವನಾಡಿ?
ಇದೇ ನದಿಯ ನೀರಿಗೆ ಪಂಪುಗಳನ್ನು ಅಳವಡಿಸಿಕೊಂಡು ರೈತರು ಬೆಳೆ ಬೆಳೆಯುತ್ತಿರುವುದಲ್ಲವೇ? ಹೆಚ್ಚುವರಿ ನೀರನ್ನು ಸಂಪೂರ್ಣವಾಗಿ ಬಳಸೀಯೇ ತೀರಬೇಕೆಂಬ ಹಟ ಎಷ್ಟು ಒಳ್ಳೆಯದು? ಸಮುದ್ರದ ಉಪ್ಪು ನೀರು ನದಿಗೆ ನುಗ್ಗುವುದನ್ನು ತಡೆಯಲು ಸಿಹಿನೀರಿನ ಹರಿವು ಮುಖ್ಯವಾಗಿದೆ ಮತ್ತು ಮೀನಿನ ಸಂತಾನ ಅಭಿವೃದ್ದಿಗೆ ಸಿಹಿನೀರು ಸಮುದ್ರ ಸೇರುವುದು ಆತ್ಯವಶ್ಯಕ ಹಾಗಾಗಿ ಸಿಹಿನೀರು ಹರಿಯದಿದ್ದರೆ ಕರಾವಳಿ ಪ್ರದೇಶದಲ್ಲಿ ಮತ್ಸ್ಯಕ್ಷಾಮ ಎದುರಾದರೂ ಅಚ್ಚರಿಯಿಲ್ಲ ಎಂದು ವಿಜ್ಞಾನಿಗಳು ಎಚ್ಚರಿಸುತ್ತಾರೆ. ಕರಾವಳಿಯ ಮೇಲೆ ಈ ನದಿ ಜೋಡಣೆ ಯೋಜನೆ ಬೀರುವ ಕರಾಳತೆಯನ್ನು ಸರಕಾರ ಗಮನಿಸಿಲ್ಲವೇ?ಮತ್ತು ಪ್ರಮುಖವಾಗಿ ಮೂರು ಜಲಾಶಯಗಳ ತೀವ್ರತೆಯನ್ನು ಈ ಪಶ್ಚಿಮ ಘಟ್ಟ ಪ್ರದೇಶಗಳು ತಡೆದುಕೊಳ್ಳುತ್ತದೆಯೇ?ಜೀವಂತ ನಿದರ್ಶನವಾಗಿ ಕೊಡಗು ನಮ್ಮ ಕಣ್ಮುಂದೆ ಇರುವಾಗ ಮತ್ತೊಂದು ವಿನಾಶಕ್ಕೆ ಸರಕಾರವೇ ಅಡಿಪಾಯ ಹಾಕುತ್ತಿದೆಯೇ? ಈ ವಿಷಯವಾಗಿ ಸಮೀಕ್ಷೆ ನಡೆದು, ವರದಿ ಸಿದ್ದವಿದೆಯೇ ?ಪಟ್ಟಣದ ಹಳ್ಳ, ಶಾಲ್ಮಲ ನದಿ ಮತ್ತು ಬೇಡ್ತಿ ಜಲಾನಯನದ ದಡದಲ್ಲಿರುವ ಅತ್ಯಮೂಲ್ಯ ಅರಣ್ಯ ಪ್ರದೇಶಗಳು ಮತ್ತು ಸಸ್ಯ ಸಂಕುಲಗಳನ್ನು ಕಳೆದುಕೊಂಡರೆ ಮತ್ತೇನು ಉಳಿದೀತು ಆ ಭಾಗದ ಜನರಿಗೆ ? ಉತ್ತರ ಕನ್ನಡದ ಅರಣ್ಯವನ್ನು ನಾಶ ಮಾಡಿ ಮಾತ್ರ ಅಭಿವೃದ್ಧಿ ಮಾಡುವಿರೆಂದಾರೆ ದಯವಿಟ್ಟು ಏನೂ ಮಾಡಬೇಡಿ, ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಸಾಕು.
ಯೋಜನೆಯ ವಿವರವನ್ನು ಸರಕಾರ ಇನ್ನೂ ತಿಳಿಸುತ್ತಿಲ್ಲ. ಒಂದು ಸಮಾಧಾನವೆಂದರೆ ಕೇಂದ್ರ ಸರಕಾರದ ಜಲ ಅಭಿವೃದ್ಧಿ ಸಚಿವಾಲಯದ ವೆಬ್ಸೈಟ್ ನಲ್ಲಿ ಈ ಯೋಜನೆಯ ರೂಪುರೇಶೆ ಮತ್ತು ಸವಿವರವಾದ ವರದಿ ಇನ್ನೂ ಸಿದ್ದವಾಗಿಲ್ಲ ಎಂದು ತೋರಿಸುತ್ತಿದೆ. ಆದರೆ ಇದನ್ನು ನಂಬಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ರಾಜ್ಯ ಸರಕಾರ ಸ್ಪಷ್ಟವಾಗಿ ಈ ಯೋಜನೆಯ ಬಗ್ಗೆ ಜನರಿಗೆ ತಿಳಿಸಬೇಕಿದೆ. ಸಾವಿರಾರು ವರ್ಷಗಳಿಂದ ಜೀವಂತವಿರುವ ದಟ್ಟ ಅರಣ್ಯ ಪ್ರದೇಶವನ್ನು ಸರ್ವನಾಶ ಮಾಡುವ ಯೋಜನೆ ಇದಾಗಿದ್ದರೆ ಸರಕಾರ ನೂರು ಬಾರಿ ಯೋಚಿಸಲಿ. ಯೋಜನೆ ಜಾರಿಯಾಗದೆ ಬೇಡ್ತಿನದಿ ಕಣಿವೆಯಲ್ಲಿ ಹಸಿರು ಇನ್ನೂ ಸಾವಿರ ವರ್ಷ ನಳನಳಿಸಲಿ.