ಭಯ ಬೇಡ, ನಿಶ್ಚಿಂತೆಯಿರಲಿ : ಪೂಜ್ಯ ಪ್ರಮಾಣ ಸಾಗರ್ ಜೀ ಮಹಾರಾಜ್
ರೋಗ ಬಂದವರು ಎಲ್ಲರೂ ಸಾಯುವುದಿಲ್ಲ. ಆದ್ದರಿಂದ ಭಯ ಬೇಡ. ಮನಸ್ಸನ್ನು ಗಟ್ಟಿಯಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ನಮಗೂ ಈ ರೋಗ ಬಂದರೆ, ಚಿಕಿತ್ಸೆ ತೆಗೆದುಕೊಂಡು ಗುಣವಾಗುತ್ತೇವೆ ಎಂಬ ವಿಶ್ವಾಸವಿರಲಿ. ದೇಹಕ್ಕೆ ಬರುವ ಈ ರೋಗ ಮನಸ್ಸಿಗೂ ಬಾರದಿರಲಿ. ಯಾರಿಗೆ ಮನೋಬಲ ಗಟ್ಟಿ ಇರುತ್ತದೆಯೋ ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಹೋದರೂ ಗುಣವಾಗಿ ಬರುತ್ತಾರೆ. ಇದು ಅನೇಕ ವೈದ್ಯರ ಅನುಭವ.

ಹುಟ್ಟು ಸಾವುಗಳು ಶರೀರಕ್ಕೇ ಹೊರತು ನಮಗಲ್ಲ. ಹಾಗಾಗಿ ಸಾವಿಗೆ ಹೆದರುವ ಅಗತ್ಯವೇನು? ಆಯುಷ್ಯ ಮುಗಿದ ಮೇಲೆ ಯಾರೂ ನಮ್ಮನ್ನು ಬದುಕಿಸಲು ಸಾಧ್ಯವಿಲ್ಲ. ಆಯುಷ್ಯ ಮುಗಿಯದಿದ್ದರೆ ಯಾವ ರೋಗವೂ ನಮ್ಮನ್ನು ಕೊಲ್ಲಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಮನದಲ್ಲಿ ನಿಶ್ಚಿಂತೆಯಿರಲಿ. ನಮ್ಮ ನಮ್ಮ ಸಮಯ ಬಂದಾಗ ಎಲ್ಲರೂ ಹೋಗಲೇಬೇಕು. ಅದರ ಬಗ್ಗೆ ಚಿಂತಿಸುವುದೇನಿದೆ?
ಸಮಾಜದ ನೆರವಿಗೆ ಧಾವಿಸಿ
ರೋಗಿಗಳು ಮಾತ್ರವಲ್ಲ, ಮನೆಯವರೂ ಧೈರ್ಯಗೆಟ್ಟಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತದೆ. ಆದ್ದರಿಂದ ಮನೆಯವರೂ ಭಯಪಡದೇ ವಿಶ್ವಾಸದಿಂದ ಇರುವುದು ಬಹಳ ಮುಖ್ಯ. ಇಂತಹ ಸಾಂಕ್ರಾಮಿಕಗಳು ಮನುಕುಲವನ್ನು ಬಾಧಿಸುತ್ತಿರುವುದು ಇದೇ ಮೊದಲಲ್ಲ. ಈ ಮೊದಲೂ ಇಂತಹ ಅನೇಕ ರೋಗಗಳನ್ನು ಜಯಿಸಿ ಮನುಕುಲ ಮುಂದೆ ಬಂದಿದೆ. ಇಂತಹ ಸಂದರ್ಭಗಳಲ್ಲಿ ತೊಂದರೆಗೊಳಗಾದವರ ನೆರವಿಗೆ ಧಾವಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ದಾನಧರ್ಮಗಳು ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವಂಥವು. ಆದ್ದರಿಂದ ನಮ್ಮ ರಾಷ್ಟ್ರಕ್ಕೊದಗಿದ ಈ ಸಂಕಟವನ್ನು ಎದುರಿಸುವಲ್ಲಿ ನಾವೆಲ್ಲ ಮನಸ್ಸು ಬಿಚ್ಚಿ ದಾನ ಮಾಡೋಣ. ಒಬ್ಬರಿಗೊಬ್ಬರು ನೆರವಾಗೋಣ. ರೋಗದ ಭೀತಿಯನ್ನು ಬಿಟ್ಟು, ‘ನಾನು ಆರೋಗ್ಯವಾಗಿದ್ದೇನೆ’ ಎಂಬ ಧನಾತ್ಮಕ ಚಿಂತನೆಯೊಂದಿಗೆ ಮುಂದುವರಿಯೋಣ. ಈ ಯುದ್ಧದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಸದಾ ಇರಲಿ.
ವರದಿ: ರಾಧಾಕೃಷ್ಣ ಹೊಳ್ಳ