
ಕರ್ನಾಟಕದ ದಲಿತ ಚಳುವಳಿಯ ಮೊದಲ ಸಾಲಿನ ನಾಯಕರಾಗಿದ್ದ, ಒಳ್ಳೆಯ ಕವಿ, ಲೇಖಕರಾಗಿದ್ದ ಅದೆಲ್ಲಕ್ಕೂ ಮಿಗಿಲಾಗಿ ಹಲವು ವಿಚಾರಧಾರೆಯ ಸಾವಿರಾರು ಕಾರ್ಯಕರ್ತರಿಗೆ ಆತ್ಮೀಯ ಗೆಳೆಯರಾಗಿದ್ದವರು ಡಾ ಸಿದ್ಧಲಿಂಗಯ್ಯ .
ವಿದ್ಯಾರ್ಥಿ ದೆಸೆಯಲ್ಲೇ ಮಾರ್ಕ್ಸ್ , ಅಂಬೇಡ್ಕರ್ ಪ್ರಭಾವ ಅವರನ್ನು ಆವರಿಸಿತ್ತು. ಅವರ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನ ಬಂದಾಗ ಅವರಿನ್ನೂ ಕನ್ನಡ ಎಂ.ಎ ವಿದ್ಯಾರ್ಥಿ. ಅವರ ಹಾಡುಗಳೆ ಹೋರಾಟಕ್ಕೆ ಸಾವಿರಾರು ಯುವಜನರನ್ನು ಸೆಳೆದಿದ್ದವು . ಕೇವಲ ದಲಿತ ಹೋರಾಟವಷ್ಟೆ ಅಲ್ಲ, ವಿಧ್ಯಾರ್ಥಿ, ರೈತ, ಕಾರ್ಮಿಕ ಎಲ್ಲ ಹೋರಾಟಗಳಲ್ಲೂ ಧ್ವನಿಸುತ್ತಿದ್ದದ್ದು ಸಿದ್ಧಲಿಂಗಯ್ಯನವರ ಆ ಹಾಡುಗಳೆ.
ತೀರಾ ಇತ್ತೀಚಿಗೆ ಕಾಗಿನೆಲೆ ಕನಕ ಪೀಠದ ಸ್ವಾಮೀಜಿಗಳ ನೇತೃತ್ವದ ಎಸ್ಟಿ ಮೀಸಲಾತಿ ಹೋರಾಟದ ಪಾದಯತ್ರೆಯನ್ನು ನೋಡಲು ಹೋದಾಗ ಅಲ್ಲಿ ಕೇಳಿಬಂದದ್ದೂ ಸಿದ್ಧಲಿಂಗಯ್ಯನವರ ಹೋರಾಟದ ಹಾಡುಗಳೆ. ನಂತರ ಭೇಟಿಯಾದಾಗಲೊಮ್ಮೆ ಪಾದಯಾತ್ರೆಯನ್ನು ಆವರಿಸಿದ್ದ ಹೋರಾಟದ ಹಾಡಿನ ಬಗ್ಗೆ ಮೇಷ್ಟ್ರ ಗಮನಕ್ಕೆ ತಂದೆ . ‘ ಪದ್ಯಗಳು ಏನಾಗ್ತವೋ ಗೊತ್ತಿಲ್ಲ , ಹಾಡುಗಳು ಸಾಯಲ್ಲ ಅಲ್ವಾ ? ‘ ಎಂದಿದ್ದರು . ಹಾಡುಗಳ ಮೂಲಕ ಕವಿಯೂ ಅಜರಾಮರ….
1996 ರಲ್ಲೇ ಡಾ ಸಿದ್ಧಲಿಂಗಯ್ಯ ಸಾಮರಸ್ಯ ವೇದಿಕೆಯ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದರು . ಸಮರೋಪ ಭಾಷಣ ಮಾಡಿದ್ದರು . ಅಲ್ಲಿಯೇ ಅವರು ‘ ನಾನು ದಲಿತ ಕವಿಯಲ್ಲ , ಕನ್ನಡದ ಕವಿ ‘ ಎಂದಿದ್ದು .
ತೆಳುವಾದ ವ್ಯಂಗ್ಯ , ಹಾಸ್ಯ ಮಿಶ್ರಿತ ನವಿರು ಧಾಟಿಯಲ್ಲಿ ಸಾಗುವ ಅವರ ಆತ್ಮಕಥೆ ಊರು – ಕೇರಿ ಸರಣಿ ಹೊಸ ಪ್ರಪಂಚವನ್ನೇ ತೆರದಿಡುತ್ತದೆ . ನಗು ನಗಿಸುತ್ತಲೇ ಕಣ್ಣನ್ನು ತೇವಗೊಳಿಸುತ್ತದೆ . ಸಂವೇದನೆಯನ್ನು ಅರಳಿಸುತ್ತದೆ .
ಮೇಷ್ಟ್ರು ಊರು – ಕೇರಿಯ ಬಹುತೇಕ ಅಧ್ಯಾಯಗಳನ್ನು ಬರೆದಿದ್ದು ಬನ್ನೇರುಘಟ್ಟ ಸಮೀಪ ಇರುವ ಪ್ರಶಾಂತಿ ಕುಟೀರ ಎಂಬ ಯೋಗ ಕೇಂದ್ರದಲ್ಲಿ . ವಿಲಕ್ಷಣ ಜೀವನಶೈಲಿಯ ಕಾರಣದಿಂದೇನೋ ಮೇಷ್ಟ್ರಿಗೆ ಮಧ್ಯ ವಯಸ್ಸಿನಲ್ಲೇ ಸಕ್ಕರೆ ಖಾಯಿಲೆ ಬಾಧಿಸುತಿತ್ತು . ಇದರ ಚಿಕಿತ್ಸೆಗೆಂದೇ ಮೇಷ್ಟ್ರು ‘ ಪ್ರಶಾಂತಿ ಕುಟೀರ ‘ ದಲ್ಲಿ ದಾಖಲಾಗುವುದಿತ್ತು . ಅಲ್ಲಿಯೇ ಅವರ ಬರವಣಿಗೆಯೂ ಸಾಗುತ್ತಿತ್ತು . ಅಲ್ಲಿಯೇ ಸಿದ್ಧಲಿಂಗಯ್ಯನವರು ಆರೆಸ್ಸೆಸ್ ನ ಪ್ರಮುಖರಾದ ಹೊ ವೆ ಶೇಷಾದ್ರಿರವರನ್ನು ಭೇಟಿಯಾದದ್ದು . ಲೇಖಕರೂ ಆಗಿದ್ದ ಶೇಷಾದ್ರಿರವರ ಸರಳತೆ , ಅಸ್ಪೃಶ್ಯತೆಯ ಒಳ – ಹೊರಗುಗಳ ಬಗ್ಗೆ ಅವರಿಗಿದ್ದ ಕಾಳಜಿಪೂರ್ಣ ಸ್ಪಷ್ಟತೆ ಸಿದ್ಧಲಿಂಗಯ್ಯನವರನ್ನು ಸೆಳೆಯಿತು . ಶೇಷಾದ್ರಿಯವರು ತೀರಿಕೊಂಡಾಗ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು . ಶೇಷಾದ್ರಿರವರ ಕುರಿತಾಗಿ ಬಂದ ‘ ಧ್ಯೇಯಯಾತ್ರಿ ‘ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದರು .

ಹೊ.ವೆ. ಶೇಷಾದ್ರಿ ಜೊತೆಗಿನ ಒಡನಾಟದ ನೆನಪುಗಳನ್ನು ಊರು-ಕೇರಿಯ ಭಾಗ ೩ರಲ್ಲಿ ಸಿದ್ಧಲಿಂಗಯ್ಯ ದಾಖಲಿಸಿದ್ದಾರೆ .
ಅವತ್ತೊಂದ್ಸಲ ಸಿದ್ಧಲಿಂಗಯ್ಯನವರನ್ನು ಕಾಣಲು ನಾವು ಕೆಲವರು ಅವರ ರಾಜರಾಜೇಶ್ವರಿ ನಗರದ ಮನೆ ‘ ಬನವಾಸಿ’ ಗೆ ಹೊರಟಿದ್ದೆವು. ದಾರಿಗೊತ್ತಿದ್ದದ್ದು ನನಗಷ್ಟೆ . ಹೀಗಾಗಿ ಕಾರಿನ ಚಾಲನೆ ಮಾಡುತ್ತಿದ್ದವರಿಗೆ ದಾರಿ ಹೇಳುತ್ತಿದ್ದೆ . ‘ ಬನವಾಸಿ’ ಹತ್ತಿರ ಬಂದಾಗ ಸ್ವಲ್ಪ ಮುಂದೆ ಎಡಗಡೆ, ಕೆಂಪುಮನೆ… ಎಂದು ಹೇಳುವಾಗಲೇ ಹಿಂದೆ ಕುಳಿತ್ತಿದ್ದ ಗೆಳೆಯರು ‘ ಈಗಲೂ ಎಡಗಡೆನಾ… ? ‘ ಎಂದು ಕೇಳಿದ್ದರು .
ಈ ಪ್ರಶ್ನೆ ಅನೇಕರಿಗೆ ಬಂದಿದೆ . ಕೆಲವರು ಮೇಷ್ಟ್ರನ್ನ ಆರೆಸ್ಸೆಸ್ , ಬಿಜೆಪಿಗೆ ಸೇರಿಸಿ ಬೈದದ್ದು ಇದೆ . ಬಿಜೆಪಿಯ ಅಮಿತ್ ಶಾ ಮನೆಗೆ ಬಂದು ಭೇಟಿಯಾದಾಗ ಮೇಷ್ಟ್ರಿಗೆ ಬೆದರಿಕೆ ಕರೆಗಳೂ ಬಂದು ಕೆಲದಿನ ಪೋಲೀಸರು ಬನವಾಸಿಯನ್ನು ಕಾಯಬೇಕಾಗಿಯೂ ಬಂದಿತ್ತು . ಜಾತಿ ವೈಷಮ್ಯವನ್ನು ತಿಳಿಗೊಳಿಸುವ ಆರೆಸ್ಸೆಸ್ ಪ್ರಯತ್ನಗಳ ಬಗ್ಗೆ ಮೇಷ್ಟ್ರು ಅನೇಕಸಲ ತಾಸುಗಟ್ಟಲೆ ಚರ್ಚೆ – ಸಂವಾದ ಮಾಡಿದ್ದಾರೆ . ಸಮಸ್ಯೆಯ ಬೇರೆಯದೆ ಮುಖಗಳನ್ನು ಆರೆಸ್ಸೆಸ್ ನವರಿಗೂ ಪರಿಚಯಿಸಿದ್ದಾರೆ. ಪೂರ್ವಗ್ರಹವಿಲ್ಲದೆ ಚರ್ಚೆಗೆ ತೆರೆದುಕೊಳ್ಳುವ ಅಪರೂಪದ ವ್ಯಕ್ತಿತ್ವ ಅವರದ್ದು .
ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ಕೇಂದ್ರಕ್ಕೆ ಹಿರಿಯ ದಲಿತ ಚಿಂತಕ , ವಿದ್ವಾಂಸ ಡಾ ನರೇಂದ್ರ ಜಾಧವ್ ಬಂದಾಗ ನೆಡೆದ ಚರ್ಚೆಯಲ್ಲಿ ಪಾಲ್ಗೊಳ್ಳಲು ಬರೀ ವಾಟ್ಸಪ್ ಮೆಸೇಜ್ ನೋಡಿ ಬಂದಿದ್ದ ಮೇಷ್ಟ್ರು ನಮ್ಮನ್ನೆಲ್ಲ ಮೂಕರನ್ನಗಿಸಿದ್ದರು . ಸಿದ್ಧಲಿಂಗಯ್ಯ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಾಗ ಕನ್ನಡದ ಅನೇಕ ಹಿರಿಯ ಮನಸ್ಸುಗಳನ್ನು ಭೇಟಿಯಾಗಿ ‘ ನಿಜಕ್ಕೂ ಕನ್ನಡಕ್ಕೆ ಏನಾಗಬೇಕು ‘ ಎಂದು ಚರ್ಚಿಸಿದರು . ನಿವೃತ್ತ ನ್ಯಾಯಮೂರ್ತಿ ರಾಮಾಜೋಯಿಸ್ , ಡಾ ಚಿದಾನಂದ ಮೂರ್ತಿ , ಎಲ್ ಎಸ್ ಶೇಷಗಿರಿರಾವ್ , ನಿಘಂಟು ತಜ್ಞ ವೆಂಕಟಸುಬ್ಬಯ್ಯನವರನ್ನು ಭೇಟಿಯಾದಾಗ ಜೊತೆಗೆ ನಾನಿದ್ದೆ . ಜೀವಿ ಮತ್ತು ಚಿಮೂ ರವರ ಮುಂದೆ ಎಷ್ಟು ಹೇಳಿದರು ಕುರ್ಚಿಯಲ್ಲಿ ಕೂಡಲು ಸಿದ್ಧಲಿಂಗಯ್ಯ ಒಪ್ಪಲಿಲ್ಲ . ನೆಲದಲ್ಲಿ ಕುಳಿತೆ ಚರ್ಚಿಸಿದರು , ಸಲಹೆಗಳನ್ನು ಗುರುತು ಹಾಕಿಕೊಂಡರು …. ಹೊರಡುವಾಗ ‘ ಊರು – ಕೇರಿ ಮುಂದಿನಭಾಗ ಬೇಗ ಬರ್ಬೇಕಪ್ಪಾ , ನಾನು ಕಾಯ್ತಾ ಇದ್ದೀನಿ ‘ ಎಂದು ಜೀವಿ ತಬ್ಬಿ ಹೇಳಿದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ .

ವರ್ಷದ ಹಿಂದೆ ಬಳ್ಳಾರಿಯ ರಂಗತೋರಣದ ಗೆಳೆಯರು ಪ್ರತಿಷ್ಠಿತ ಜೋಳದರಾಶಿ ದೊಡ್ಡಣ್ಣ ಗೌಡರ ನೆನಪಿನ ವಾರ್ಷಿಕ ಪ್ರಶಸ್ತಿ ವಿತರಿಸಲು ಕರೆದಿದ್ದರು . ಎರಡು ದಿನ ಬಳ್ಳಾರಿಗೆ ಹೋಗಿಬರುವಾಗ ಮೇಷ್ಟ್ರ ಜೊತೆ ಭರಪೂರ ಮಾತುಕಥೆ . ಬಳ್ಳಾರಿಯಲ್ಲಿ ಮೇಷ್ಟ್ರು ಪೌರಾಣಿಕ ನಾಟಕಗಳ ಬಗ್ಗೆ ಮಾತನಾಡಿದರು . ರಾಮಯಾಣ , ಮಹಾಭಾರತ ಗ್ರಾಮೀಣ ಜನರಲ್ಲಿ ಉಂಟು ಮಾಡಿರುವ ಪರಿಣಾಮಗಳ ಬಗ್ಗೆ ಗಮನ ಸೆಳೆದರು . ‘ ರಾಮಂಗೆ , ಸೀತೆಗೆ ಬಂದಿರೋ ಕಷ್ಟಗಳ ಮುಂದೆ ನಮ್ಮದ್ಯಾವ ಲೆಕ್ಕ ? ‘ ಎಂಬ ಆಡುಮಾತುಗಳು ಬೆಳೆಸುವ ಮನೋಸ್ಥೈರ್ಯವನ್ನು ವಿಷ್ಲೇಶಿಸಿದರು . ವಾಪಸ್ ಬರುವಾಗ ಮಧ್ಯಾಹ್ನದ ಊಟಕ್ಕೆ ಎಲ್ಲಿ ನಿಲ್ಲಿಸುವುದು ಎಂಬ ಪ್ರಶ್ನೆ ಬಂತು .’ ಚಳ್ಳಕೆರೆಯಲ್ಲಿ ಆರೆಸ್ಸೆಸ್ ಗೆಳೆಯರಿದ್ದಾರೆ , ಅವರ ಮನೆಗೆ ಹೋಗೋಣ ಸ್ಸಾರ್ ‘ ಎಂದೆ . ‘ ಹೇಳದೆ – ಕೇಳದೆ ಹೋಗೋದಾ , ತೊಂದರೆ ಅಗಲ್ವಾ? ‘ ಮೇಷ್ಟ್ರು ಸಂಕೋಚಪಟ್ಟರು . ನಾವು ಊಟಕ್ಕೆ ಹೋದದ್ದು ರಾಮದಾಸ್ ಎನ್ನುವ ಕಾರ್ಯಕರ್ತರ ಮನೆಗೆ . ಅವರು ಮೇಷ್ಟ್ರ ಗೆಳೆಯ ಸಿಜಿಕೆರವರ ಅಣ್ಣನ ಮಕ್ಕಳು . ರಾಮದಾಸರವರಿಗೆ ಚಿಕ್ಕಪ್ಪನೇ ಮನೆಗೆ ಬಂದಷ್ಟು ಸಂಭ್ರಮ . ಮೇಷ್ಟ್ರಿಗೆ ಆಶ್ಚರ್ಯ ‘ ಈ ಸಿಜಿಕೆ ವಾಲ್ಮೀಕಿ ಸಮುದಾಯದವರು . ಅವರ ಅಣ್ಣನ ಮಕ್ಕಳೆಲ್ಲ ಎಷ್ಟೋಂದು ಆರೆಸ್ಸೆಸ್ ಆಗಿಬಿಟ್ಟಿದ್ದಾರೆ ‘ ಚಳ್ಳಕೆರೆ ಬಿಟ್ಟ ಮೇಲೂ ಸಿಜಿಕೆ ಬಗ್ಗೆ ಮಾತೇಮಾತು . ಸಿಜಿಕೆನೂ ಜೀವರಾಜ್ ಆಳ್ವ ಜೊತೆಗೆ ಬಿಜೆಪಿಗೆ ಹೋಗಿಬಂದಿದ್ದರೆಂಬ ಗುಟ್ಟು ಹೊರಹಾಕಿದ್ದರು…. But ಈ ರಾಮದಾಸ್ ಮನೆಯವರೆಲ್ಲ ಹಾಗಲ್ಲ , ಪಕ್ಕಾ ಆರೆಸ್ಸೆಸ್ ಆಗಿಬಿಟ್ಟಿದ್ದಾರೆ… ‘ ಮೇಷ್ಟ್ರ ಮಾತು ಸಾಗಿತ್ತು .
ನಾಲ್ಕು ತಿಂಗಳ ಹಿಂದೆ ಮೈಸೂರಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಮೇಷ್ಟ್ರನ್ನ ಒಪ್ಪಿಸುವ ಜವಾಬ್ದಾರಿ ನನಗೆ ಬಂದಿತ್ತು . ಚಾಮರಾಜನಗರ ಸಂಸದ ಶ್ರೀನಿವಾಸಪ್ರಸಾದರವರ ಅಳಿಯ ಡಾ ಮೋಹನ್ ರವರು ಬರೆದ ಅವರ ಜೀವಾನಾನುಭವದ ಪುಸ್ತಕ . ಮೈಸೂರಿನ ಡಾ ಅನಂದಕುಮಾರ್ , ಲೇಖಕ ಡಾ ಮೋಹನ್ ಜೊತೆ ಮೇಷ್ಟ್ರ ಭೇಟಿ . ಒಂದು ತಾಸಿಗೂ ಮೀರಿದ ಮಾತು . ಯಾವ ಕಾಲೇಜು ಗ್ರಂಥಾಲಯವನ್ನು ಮೀರಿಸುವಷ್ಟು ಪುಸ್ತಕಗಳ ರಾಶಿ . ಹೊಸ ಲೇಖಕರಿಗೆ ಮೇಷ್ಟ್ರ ಉತ್ಸಾಹವೇ ದೊಡ್ಡದೊಂದು ಪಾಠ …. ಮಾತಿನಡುವೆ ಮೇಷ್ಟ್ರು ತಮ್ಮ ಲಿವರ್ ಗೆ ಆಗಿರುವ ಬಾಧೆಯನ್ನು ಹೇಳಿಕೊಂಡರು …. ಡಾಕ್ಟರ್ ಗಳು ಕೈಚೆಲ್ಲುತ್ತಿದ್ದಾರೆ . ಚನ್ನೈಗೆ ಹೋಗಬೇಕಂತೆ ಅನ್ನುವಾಗ ಮನಸ್ಸು ಹಿಂಡಿದಂತೆ ಆಯಿತು .
ಕಳೆದ ತಿಂಗಳು , ಎಪ್ರಿಲ್ ಮೂವತ್ತರ ರಾತ್ರಿ ಹತ್ತುವರೆ ಇರಬೇಕು . ಮೇಷ್ಟ್ರ ಫೋನು . ನನಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ಮಾಡಬೇಕೊ ಗೊತ್ತಾಗ್ತಾ ಇಲ್ಲ . … ಮನೆಯಲ್ಲಿ ಚಿಕ್ಕ ಮೊಮ್ಮಕ್ಕಳು ಇದ್ದಾರೆ . ಅಸ್ಪತ್ರೆ ಬೆಡ್ಗೆ ಏನಾದರು ಮಾಡಬೇಕಲ್ಲ ‘ ಅಂದರು .
ಮರುದಿನ ಬೆಳಗ್ಗೆ ಶಂಕರಪುರದ ರಂಗದೊರೈ ಆಸ್ಪತ್ರೆಗೆ ದಾಖಲಾದರು . ಅಸ್ಪತ್ರೆಯಿಂದಲೂ ಮೇಷ್ಟ್ರು ಫೋನ್ ಮಾಡಿದ್ದರು… ಕೊರೊನಾ ಬೇರೆ , ಜೊತೆಗೆ ಅವರಿಗೆ ಮೊದಲೇ ಇದ್ದ ಖಾಯಿಲೆಗಳು .ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು . ಸರ್ಕಾರದ ತುರ್ತು ಸಹಾಯವೂ ಲಭಿಸಿತು . ಮಣಿಪಾಲ್ ಆಸ್ಪತ್ರೆಯ ಐಸಿಯೂಗೆ ವರ್ಗಾವಣೆ … ಆಗಾಗ ಚೇತರಿಕೆಯ ಸುದ್ದಿಗಳು ಬಂದವಾದರೂ ಕೊನೆಗೂ ಅವರು ಉಳಿಯಲಿಲ್ಲ .
* * * * *
ಊರು ಕೇರಿಯಲ್ಲೊಂದು ಪ್ರಸಂಗ ಓದಿದ ನೆನಪು .
ಮಾಗಡಿ ತಾಲೂಕಿನ ಹಳ್ಳಿಯಲ್ಲಿ ಸವರ್ಣೀಯರಿಂದ ದಲಿತ ಹುಡುಗನೊಬ್ಬ ಹಿಗ್ಗಾಮಗ್ಗ ಏಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದ . ಆಗ ಸಿದ್ದಲಿಂಗಯ್ಯ ಡಿಎಸ್ಸೆಸ್ ನ ಪ್ರಮುಖರು . ಸುದ್ದಿಕೇಳಿ ದೌಡಾಯಿಸಿದರು . ಆಸ್ಪತ್ರೆಗೆ ಹೋಗಿ ನೋಡಿದರು . ಇಷ್ಟು ಹೊಡೆತ ಬಿದ್ದಿದೆ .ಆದರೆ ಪೊಲೀಸ್ ಕಂಪ್ಲೇಟು ಆಗಿಲ್ಲ . ಎಸ್ಸೈ ಕಂಪ್ಲೇಟ್ ತಗೊತಾ ಇಲ್ಲ , ಏಟು ತಿಂದಿರೊ ಹುಡುಗನ ಫೋಟೊ ತನ್ನಿ ಅಂತ ಷರತ್ತು . ಹೊಡೆತ ತಿಂದ ದಲಿತನ ಫೋಟೊ ತೆಗೆಯೋಕೆ ಯಾರು ಒಪ್ತಾ ಇಲ್ಲ . ಹೇಗೊ ಯಾರನ್ನೋ ಹಿಡಿದು ಫೋಟೊ ತೆಗೆದುಕೊಂಡು ಠಾಣೆಗೆ ಹೊದರೆ ಎಸೈ ‘ಎನ್ರೀ ಇದು ಏಟು ತಿಂದಿದಾನೆ ಅಂತೀರಾ , ನೋಡಿದರೆ ವಿಕ್ಟಿಮ್ ನಗ್ತಾವನಲ್ರಿ….’
ಫೋಟೊ ಗ್ರಾಫರ್ ಕೊನೆಕ್ಷಣದಲ್ಲಿ ಸ್ಮೈಲ್ ಪ್ಲೀಸ್ ಅಂದದ್ದು ಕೈಕೊಟ್ಟಿತ್ತು . ವಿಕ್ಟಿಮ್ ಕಷ್ಟದಲ್ಲಿ ನಕ್ಕಿದ್ದ.
ನೋವು ನುಂಗಿಕೊಂಡೆ ನಗುತ್ತಿರುವವರು ನಾವು ದಲಿತರು.
ಮೇಷ್ಟ್ರು ಸಾಯುವುದಿಲ್ಲ , ಇಂತಹ ನೋವು ನುಂಗಿಕೊಂಡು ನಗುವ ಅಸಂಖ್ಯ ದಲಿತರಲ್ಲಿ ಮೇಷ್ಟ್ರು ಇದ್ದೇ ಇರುತ್ತಾರೆ.