
ಜಿದ್ದಾಜಿದ್ದಿನ ಚುನಾವಣಾ ಕಣವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಕೊನೆಗೆ ಮಮತಾ ಬ್ಯಾನರ್ಜಿ ದಾಖಲೆಯ ಬಹುಮತದೊಂದಿಗೆ ಗೆದ್ದು ಮುಖ್ಯಮಂತ್ರಿಯಾಗಿದ್ದಾರೆ . ಆಡಳಿತ ಪಕ್ಷವಾಗಿ , ವಿರೋಧ ಪಕ್ಷವಾಗಿ ದೊಡ್ಡ ಇತಿಹಾಸ ಹೊಂದಿದ್ದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ನಾಮಾವಶೇಷಗೊಂಡಿವೆ . ಐದು ವರ್ಷದ ಹಿಂದೆ ಲೆಕ್ಕಕ್ಕೆ ಇಲ್ಲದಂತೆ ಇದ್ದ ಬಿಜೆಪಿ 77 ಶಾಸಕರ ಪ್ರಬಲ ವಿರೋಧ ಪಕ್ಷವಾಗಿ ಎದ್ದು ನಿಂತಿದೆ . ಈ ಚುನಾವಣೆ ಪಶ್ಚಿಮ ಬಂಗಾಳದಲ್ಲಿ ‘ ಭದ್ರಲೋಕ ‘ ಎಂದೇ ಗುರುತಿಸಲಾಗುವ ಮುಂದುವರೆದ ಜಾತಿಗಳ ಪ್ರಾಬಲ್ಯಕ್ಕೆ ಏಟು ಕೊಟ್ಟಿದೆ . ಮಾತ್ರವಲ್ಲ ದಲಿತ ರಾಜಕಾರಣದ ಹೊಸ ಅಲೆ ಮೇಲೇಳಲು ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ದಲಿತ ರಾಜಕಾರಣ ಎರಡೂ ಒಟ್ಟೊಟ್ಟಿಗೆ ಗಟ್ಟಿಗೊಳ್ಳುತ್ತಿರುವುದು ಹೆಚ್ಚು ಚರ್ಚೆಗೆ ಒಳಪಡಬೇಕಾದ ಸಂಗತಿಯಾಗಿದೆ .
ಪಂಜಾಬ್ , ಹಿಮಾಚಲ ಪ್ರದೇಶದ ನಂತರ ಅತಿಹೆಚ್ಚು ಅಂದರೆ ಶೇ 23 ರಷ್ಟು ಪರಿಶಿಷ್ಟ ಜಾತಿಯವರಿರುವುದು ಪಶ್ಚಿಮ ಬಂಗಾಳದಲ್ಲಿ . ಜೊತೆಗೆ ಶೇ 6 ರಷ್ಟು ಪರಿಶಿಷ್ಟ ವರ್ಗದವರೂ ಇದ್ದಾರೆ . ಆದರೂ ದಲಿತ ರಾಜಕಾರಣ , ದಲಿತ ನಾಯಕತ್ವ ಮುನ್ನೆಲೆಗೆ ಬಂದಿರಲಿಲ್ಲ . ಪಶ್ಚಿಮ ಬಂಗಾಳದ ಎಸ್ಸಿ ಪಟ್ಟಿಯಲ್ಲಿ ಅರವತ್ತು ಜಾತಿಗಳಿದ್ದರೂ ಸಂಖ್ಯಾಬಲದಿಂದ ನಾಮಶೂದ್ರ , ರಾಜಬಂಶಿ , ಬೌರಿ , ಪೌಂಡ್ರ , ಬಾಗಡಿ, ಚಮ್ಮಾರ ಇವು ಪ್ರಮುಖ ದಲಿತ ಜಾತಿಗಳು . ಪಶ್ಚಿಮ ಬಂಗಾಳದಲ್ಲಿ 68 ಎಸ್ಸಿ ಮೀಸಲು ಕ್ಷೇತ್ರಗಳಿದ್ದರೆ , 16 ಎಸ್ಟಿ ಮೀಸಲು ಕ್ಷೇತ್ರಗಳಿವೆ. 2010 ರಲ್ಲಿ ಮೊದಲಬಾರಿಗೆ ಮಮತಾ ಬ್ಯಾನರ್ಜಿ ಎಡಪಕ್ಷಗಳನ್ನು ಸೋಲಿಸಿ ಅಧಿಕಾರ ಹಿಡಿದರು. ಆಗ ಮಮತಾರವರ ಟಿಎಂಸಿ ಪಕ್ಷ 37 ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ಗೆದ್ದಿತ್ತು . ಎಡರಂಗಕ್ಕೆ 21 , ಕಾಂಗ್ರೆಸ್ ಗೆ 10 ಸ್ಥಾನಗಳು ದಕ್ಕಿತ್ತು. 2016 ರ ಚುನಾವಣೆಯಲ್ಲಿ ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ಟಿಎಂಸಿ ಗಳಿಕೆ 50 ಕ್ಕೇರಿದರೆ , ಎಡರಂಗ 11 , ಕಾಂಗ್ರೆಸ್ 8ಕ್ಕೆ ಇಳಿದಿತ್ತು .
ಈ ವರ್ಷದ ಚುನಾವಣೆಯದ್ದು ಬೇರೆಯದೆ ಕಥೆ . 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರವೇಶ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ , ಎಡರಂಗವನ್ನು ಮೂಲೆಗುಂಪು ಮಾಡಿತು . ಬಂಗಾಳದ 10 ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ 5 ಹಾಗೂ ಎರಡೂ ಎಸ್ಟಿ ಮೀಸಲು ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತು .
ಈ ಬೆಳವಣಿಗೆ ಟಿಎಂಸಿಯ ರಣನೀತಿ ನಿರೂಪಕರನ್ನು ಎಚ್ಚೆತ್ತು ಕೊಳ್ಳುವಂತೆ ಮಾಡಿತು . ಈ ಸಲ ಟಿಎಂಸಿ ಚುನಾವಣೆಯ ದಿನಾಂಕ ಘೋಷಣೆಯಾದ ಮರುದಿನವೇ ಎಲ್ಲಾ 294 ವಿಧಾನಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿತು . ಅಚ್ಚರಿಯೆಂದರೆ ಟಿಎಂಸಿ 68 ಎಸ್ಸಿ ಮೀಸಲು ಕ್ಷೇತ್ರವಲ್ಲದೇ 11 ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತರಿಗೆ ಟಿಕೇಟ್ ನೀಡಿತು . ಹಾಗೆಯೇ ಮುಸ್ಲೀಮರಿಗೆ ಕೊಡುತ್ತಿದ್ದ 60 ಸ್ಥಾನಗಳನ್ನು 44 ಕ್ಕೆ ಇಳಿಸಿತು . ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತರಿಗೆ ಟಿಕೇಟ್ ಕೊಡುವ ಪ್ರಯೋಗವನ್ನು ಬಿಜೆಪಿ 2016 ರಲ್ಲೇ ಮಾಡಿತ್ತಾದರೂ ಗಮನ ಸೆಳೆದಿರಲಿಲ್ಲ . ಈ ಸಲ ಬಿಜೆಪಿ , ಟಿಎಂಸಿಗಿಂತಲೂ ಮುಂದೆ ಹೋಯಿತು . 68 ಎಸ್ಸಿ ಮೀಸಲು ಕ್ಷೇತ್ರಗಳ ಜೊತೆಗೆ 27 ಸಾಮಾನ್ಯ ಕ್ಷೇತ್ರಗಳಲ್ಲಿಯೂ ದಲಿತರಿಗೆ ಬಿಜೆಪಿ ಟಿಕೇಟ್ ನೀಡಿತು . ಇದು ದಲಿತ ರಾಜಕಾರಣದಲ್ಲಾದ ದೊಡ್ಡ ಬೆಳವಣಿಗೆ . ಅನ್ಯಾನ್ಯ ರಾಜ್ಯಗಳಲ್ಲಿ ಒಂದೆರಡು ಸಾಮಾನ್ಯ ಕ್ಷೇತ್ರಗಳಲ್ಲಿ ಟಿಕೇಟ್ ಕೊಟ್ಟ ಉದಾಹರಣೆ ಇತ್ತಾದರು ಈ ಪ್ರಮಾಣದಲ್ಲಿ ಎಲ್ಲಿಯೂ ಮುಂದೆ ಹೋಗಿರಲಿಲ್ಲ . ಈ ಸಲದ ಚುನಾವಣೆಯ ಫಲಿತಾಂಶದಲ್ಲಿ ಟಿಎಂಸಿ 213 ಕ್ಷೇತ್ರಗಳಲ್ಲಿ ಗೆದ್ದು ದಾಖಲೆ ನಿರ್ಮಿಸಿತಾದರೂ ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ 50 ರಿಂದ 36 ಕ್ಕೆ ಕುಸಿದಿದೆ . ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 8 ದಲಿತ ಅಭ್ಯರ್ಥಿಗಳು ಗೆದ್ದು ಟಿಎಂಸಿ ಹೆಮ್ಮೆಪಡುವಂತೆ ಮಾಡಿದ್ದಾರೆ . ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯಿಂದ 32 ಅಭ್ಯರ್ಥಿಗಳು ಗೆದ್ದರೆ ‘ ಹೊಸ ಪ್ರಯೋಗ’ ದಿಂದ ಬಿಜೆಪಿಗೆ ಮೂವರು ಹೆಚ್ಚುವರಿ ದಲಿತ ಶಾಸಕರು ಸಿಕ್ಕಿದ್ದಾರೆ . ಎಸ್ಟಿ ಸಮುದಾಯದವರು ಟಿಎಂಸಿಯಿಂದ 10 , ಬಿಜೆಪಿಯಿಂದ 9 ಅಭ್ಯರ್ಥಿಗಳು ಗೆದ್ದಿದ್ದಾರೆ . ಇದರಲ್ಲಿ ಟಿಎಂಸಿಯ ಒಬ್ಬರು , ಬಿಜೆಪಿಯ ಇಬ್ಬರು ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದವರು . ಒಟ್ಟಾರೆ ಬಿಜೆಪಿಯಿಂದ ಗೆದ್ದ 77 ಶಾಸಕರಲ್ಲಿ 44 ( ಅಂದರೆ ಶೇ 57 ರಷ್ಟು ) ಮಂದಿ ಪರಿಶಿಷ್ಟ ಜಾತಿ , ವರ್ಗದವರಾಗಿದ್ದಾರೆ .
ಬಂಗಾಳದಲ್ಲಿ ‘ ಭದ್ರಲೋಕ್ ‘ ಎಂದು ಗುರುತಿಸಲಾಗುವ ಬ್ರಾಹ್ಮಣ , ಕ್ಷತ್ರಿಯ ಇತ್ಯಾದಿ ಮೇಲುಜಾತಿಗಳಿಂದ ಟಿಎಂಸಿಗೆ 102 ಶಾಸಕರು ದಕ್ಕಿದರೆ ಬಿಜೆಪಿಯಿಂದ ಗೆದ್ದವರು 25 .
ಪಶ್ಚಿಮ ಬಂಗಾಳದಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯ ಬಲು ಕಡಿಮೆ . ಈ ಸಲ ಟಿಎಂಸಿಯಿಂದ 15 , ಬಿಜೆಪಿಯಿಂದ 8 ಓಬಿಸಿ ಶಾಸಕರು ಆಯ್ಕೆಯಾಗಿದ್ದಾರೆ . ಪಶ್ಚಿಮ ಬಂಗಾಳದ ‘ಮುಸ್ಲಿಂ ಓಲೈಕೆ ‘ ರಾಜಕಾರಣ ಹಿಂದುಳಿದ ವರ್ಗಗಳ ವಿಷಯದಲ್ಲಿ ಢಾಳಾಗಿ ನೆಡದಿದೆ. ಕಾಂಗ್ರೆಸ್, ಎಡರಂಗ, ಟಿಎಂಸಿ ಪೈಪೋಟಿಗೆ ಬಿದ್ದವರಂತೆ ಮುಸ್ಲಿಂ ಸಮುದಾಯದ 177 ಜಾತಿಗಳಲ್ಲಿ 99 ಜಾತಿಗಳನ್ನು ಓಬಿಸಿ ಪಟ್ಟಿಗೆ ಸೇರಿಸಿವೆ. ಅದೇ ಮಶಿಯಾ, ತೇಲಿ, ತಮುಲ್, ಸಹಾ ಜಾತಿಗಳು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗುಳಿದಿವೆ . ಮುಸ್ಲಿಂ ಸಮುದಾಯದ ಸಗಟು ಮತಗಳು ಟಿಎಂಸಿಗೆ ಒಲಿದಿದ್ದು ಮೀಸಲು ಕ್ಷೇತ್ರಗಳ ಮೇಲು ಪ್ರಭಾವ ಮೂಡಿಸಿದೆ . ಅತಿಯಾದ ಮುಸ್ಲಿಂ ಬಾಹುಳ್ಯದ ಮುರ್ಶಿದಾಬಾದ್ , ದಕ್ಷಿಣ ಪರಗಣ , ಉತ್ತರ ದಿಗ್ಣಾಪುರ್ , ಹೂಗ್ಲಿ ಜಿಲ್ಲೆಗಳಲ್ಲಿನ ಮೀಸಲು ಕ್ಷೇತ್ರಗಳಲ್ಲಿ ಟಿಎಂಸಿ ಅನಾಯಸವಾಗಿ ಗೆದ್ದಿದೆ . ಕಾಂಗ್ರೆಸ್ , ಎಡಪಕ್ಷಗಳು ಜಂಟಿಯಾಗಿ ಸ್ಪರ್ಧಿಸಿ , ಸ್ಥಳೀಯ ಮುಸ್ಲಿಂ ಪಕ್ಷದೊಂದಿಗೆ ಮಾಡಿಕೊಂಡ ಮೈತ್ರಿ ಮುಸ್ಲಿಂ ಸಮುದಾಯದ ಮೇಲೆ ಯಾವ ಪ್ರಭಾವವನ್ನು ಬೀರಿಲ್ಲ . ಟಿಎಂಸಿ ಮುಸ್ಲಿಮರಿಗೆ 44 ಕ್ಷೇತ್ರಗಳಲ್ಲಿ ಟಿಕೇಟ್ ಕೊಟ್ಟರೆ ಕಾಂಗ್ರೆಸ್ , ಎಡರಂಗದ ಮೈತ್ರಿಕೂಟ 78 ಕಡೆಗಳಲ್ಲಿ ಟಿಕೇಟ್ ಕೊಟ್ಟೂ ಏನೂ ಸಾಧಿಸಲಿಲ್ಲ . ಒಟ್ಟಾರೆ ಯಾವ ಸೀಟನ್ನು ಗೆಲ್ಲದಿದ್ದರೂ ಸಿಪಿಎಮ್ ಶೇ 4.73 ರಷ್ಟು , ಕಾಂಗ್ರೆಸ್ ಶೇ 2.93 ರಷ್ಟು ಮತಗಳನ್ನಷ್ಟೆ ಗಳಿಸಿವೆ . ಪಕ್ಕದ ಬಿಹಾರದಲ್ಲಿ 12 ಶಾಸಕರನ್ನು ಹೊಂದಿರುವ ನಕ್ಸಲ್ ಪ್ರೇರಿತ ಸಿಪಿಎಮ್ಮೆಲ್ ಶೇ 0.3 ಮತ ಗಳಿಸಿದರೆ ದಲಿತರ ಪಕ್ಷ ಎಂದೇ ಗುರುತಿಸಲಾಗುವ ಬಿಎಸ್ಪಿ ಶೇ 0.39 ಮತ ಪಡೆದಿದೆ .
ಅಬ್ಬರದ ಪ್ರಚಾರದಿಂದ ಗಮನ ಸೆಳದಿದ್ದ ಬಿಜೆಪಿಗಿದ್ದದ್ದು ಏರು ಹಾದಿ . ಶೇ 70.54 ರಷ್ಟಿರುವ ಹಿಂದುಗಳ ಮತಗಳಲ್ಲೇ ಬಿಜೆಪಿ ಬಹುಮತ ಸಾಧಿಸಬೇಕಿತ್ತು . ಬಿಜೆಪಿ ನಾಲ್ವರು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೇಟ್ ಕೊಟ್ಟಿತ್ತಾದರು ಹೆಚ್ಚಿನ ಮತಗಳಿಕೆ ಸಾಧ್ಯವಾಗಿಲ್ಲ . ಒಟ್ಟು ಮತದಾನದಲ್ಲಿ ಬಿಜೆಪಿ ಶೇ 38.1 ರಷ್ಟು ಮತಗಳಿಸಿದೆಯಾದರೂ , ಹಿಂದುಗಳಲ್ಲಿ ಶೇ 54 ರಷ್ಟು ಮತ ಪಡೆದಿದೆ . ಅದೇ ಟಿಎಂಸಿಗೆ ಮುಸ್ಲಿಂ ಮತಗಳು ಸಗಟಾಗಿ ಬಂದಿದೆಯಾದರು ಹಿಂದುಗಳ ಮತ ಬಂದಿರುವದು ಶೇ 31 ರಷ್ಟು ಮಾತ್ರ .
ದೇಶದಲ್ಲಿ ಆತಿ ಹೆಚ್ಚು ಪರಿಶಿಷ್ಟ ಜಾತಿಯವರ ಜನಸಾಂದ್ರತೆ ಇರುವ ಜಿಲ್ಲೆ ಎಂದರೆ ಅದು ಪಶ್ಚಿಮ ಬಂಗಾಳದ ಕೂಚ್ ಬಿಹಾರ್, ಇಲ್ಲಿ ಶೇ 53 ರಷ್ಟು ದಲಿತರಿದ್ದಾರೆ . ಈ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 7 ಗೆದ್ದರೆ , ಟಿಎಂಸಿ 2 ಗೆದ್ದಿದೆ . ಅರವತ್ತರ ದಶಕದಲ್ಲಿ ನಕ್ಸಲ್ ಚಳವಳಿಯ ಬೀಜ ಬಿತ್ತಿದ ನಕ್ಸಲ್ ಬಾರಿ ಇರುವುದು ಡಾರ್ಜಲಿಂಗ್ ಜಿಲ್ಲೆಯಲ್ಲಿ . ಈ ಸಲ ನಕ್ಸಲ್ ಬಾರಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಆನಂದಮಯ ಬರ್ಮನ್ ಗೆದ್ದಿದ್ದಾರೆ . ತನ್ನ ಆತ್ಮಕಥೆ Interrogating My Chandal Life ಮೂಲಕ ದೇಶದ ಗಮನಸೆಳದಿದ್ದ , ಶಾಲೆಯ ಮುಖ ನೋಡದ ರಿಕ್ಷಾ ಚಾಲಕ , ಲೇಖಕ ಮನೋರಂಜನ್ ಬೈಪಾರಿ ಬಾಲಘರ್ ಮೀಸಲು ಕ್ಷೇತ್ರದಿಂದ ಟಿಎಂಸಿ ಟಿಕೇಟ್ ಪಡೆದು ವಿಧಾನಸಭೆ ಪ್ರವೇಶಿಸಿದ್ದಾರೆ . ಪುಟ್ಟ ಗುಡಿಸಲಲ್ಲಿ ವಾಸಿಸುವ ಬಿಜೆಪಿ ಕಾರ್ಯಕರ್ತೆ ಚಂದನಾ ಬೌರಿ ಸಲ್ತೋರಾ ಮೀಸಲು ಕ್ಷೇತ್ರದಿಂದ ಗೆದ್ದಿದ್ದಾರೆ .
ಚುನಾವಣಾ ಫಲಿತಾಂಶದ ನಂತರ ಬಂಗಾಳದಲ್ಲಿ ಹಿಂಸಾಚಾರ ಮುಂದುವರಿದೆ . ಇದು ಕಮ್ಯುನಿಷ್ಟರ ಕಾಲದಿಂದಲೂ ನೆಡೆಯುತ್ತಿರುವ ಚುನಾವಣೋತ್ತರ ದೌರ್ಜನ್ಯ. ಈಗ ಏಟು ತಿನ್ನುತ್ತಿರುವವರಲ್ಲಿ ಹೆಚ್ಚಿನವರು ಬಿಜೆಪಿಯನ್ನು ಬೆಂಬಲಿಸಿದ ದಲಿತರು. ಪಾಠ ಕಲಿತಿರುವ ಮಮತಾ ಇದೆಲ್ಲವನ್ನು ನಿಭಾಯಿಸಿಯಾರು. ಆದರೆ ಬಂಗಾಳದಲ್ಲಿ ಮೇಲೆದ್ದಿರುವ ದಲಿತ ರಾಜಕಾರಣ ಇಲ್ಲಿಗೆ ನಿಲ್ಲುವುದಿಲ್ಲ .
ಪ್ರಜಾವಾಣಿಯಲ್ಲಿ ಪ್ರಕಟಿತ