
ಅಲೆ ಅಲೆಗಳಲ್ಲಿ ಭೀಕರವಾಗುತ್ತ ಸಾಗಿರುವ ಕರೋನಾ ಕಾಲಘಟ್ಟದಲ್ಲಿ ಅಮೆರಿಕದ ಒಂದು ನಿಲವು ತುಸು ಅಚ್ಚರಿ ಉಂಟುಮಾಡುವಂತಿದೆ.
ಲಸಿಕೆಗಳನ್ನು ಹಕ್ಕುಸ್ವಾಮ್ಯ ಮುಕ್ತವಾಗಿಸುವುದಕ್ಕೆ ತನ್ನದೂ ಅನುಮೋದನೆ ಇದೆ ಅಂತ ಬಿಡೆನ್ ಆಡಳಿತ ವಿಶ್ವ ಆರೋಗ್ಯ ಸಂಸ್ಥೆಗೆ ಹೇಳಿದೆ. ಭಾರತದಂಥ ದೇಶಗಳು ಕೊರೊನಾಗೆ ಸಂಬಂಧಿಸಿದ ಲಸಿಕೆಗಳು ಪೆಟೆಂಟ್ ಮುಕ್ತವಾಗಿರಬೇಕು ಅಂತ ತುಂಬ ಪ್ರಾರಂಭದಲ್ಲೇ ಹೇಳಿತ್ತು. ಅರ್ಥಾತ್, ಲಸಿಕೆಯ ರೆಸಿಪಿ ಎಲ್ಲರಿಗೂ ತಿಳಿಯುವಂತೆ, ಸಂಸಾಧನಗಳಿರುವ ಬೇರೆ ದೇಶಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಉತ್ಪಾದಿಸಿಕೊಳ್ಳಲು ಅನುವಾಗುವಂತಿರುವ ವ್ಯವಸ್ಥೆ. ಸಹಜವಾಗಿಯೇ ಇದಕ್ಕೆ ಜಾಗತಿಕ ಫಾರ್ಮಾ ವಲಯದಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತು. ಲಸಿಕೆಗಳಲ್ಲಿ, ಭವಿಷ್ಯದಲ್ಲಿ ಬರಲಿರುವ ಇನ್ನೂ ಹಲವು ಸೋಂಕುಗಳಿಗೆ ಮದ್ದಿನ ಅನ್ವೇಷಣೆಯಲ್ಲಿ ಬಿಲಿಯಗಟ್ಟಲೇ ಡಾಲರುಗಳನ್ನು ತೊಡಗಿಸಿರುವ ಬಿಲ್ ಗೇಟ್ಸ್ ಥರದವರು ಇದು ಸಾಧ್ಯವೇ ಇಲ್ಲ ಅಂತ ಘಂಟಾಘೋಷವಾಗಿ ಹೇಳಿದ್ದೂ ಆಗಿದೆ.
ಈ ಬಗ್ಗೆ ಹೆಚ್ಚಿನದನ್ನು ಚರ್ಚಿಸುವ ಮುನ್ನ ಒಂದು ಅಭಿಪ್ರಾಯ ಟಿಪ್ಪಣಿ ಅವಶ್ಯ. ಕೊರೋನಾದಂಥ ರೋಗಗಳಿಗೆ ಪ್ರತಿಯಾಗಿ ಹುಟ್ಟಿಕೊಂಡಿರುವ ಲಸಿಕೆಗಳು – ಅವು ದೇಸಿ ಆಗಿರಲಿ, ಫಿಜರ್ ನಂಥ ವಿದೇಶಿ ಕಂಪನಿಗಳಾಗಿರಲಿ – ಆರಂಭಿಕವಾಗಿ ಸ್ವಲ್ಪ ವ್ಯವಹಾರಿಕವಾಗಿದ್ದರೆ ತಪ್ಪಿಲ್ಲ. ಅವು ಒಂದಿನಿತೂ ಲಾಭದ ಅಪೇಕ್ಷೆ ಇಟ್ಟುಕೊಳ್ಳದೇ ಮನುಕುಲದ ಸೇವೆಗೆ ತಮ್ಮ ತಂತ್ರಜ್ಞಾನ ವಿನಿಯೋಗಿಸಬೇಕು ಎಂಬುದು ಉದಾತ್ತ ಒತ್ತಾಸೆಯೇ ಆದರೂ, ಅನ್ವೇಷಣೆಗೆ ಬೆಲೆ ಇಲ್ಲ ಎಂದಾದಾಗ ಸಹಜವಾಗಿಯೇ ಆ ಕ್ಷೇತ್ರದಲ್ಲಿ ಆಸಕ್ತಿ ಮತ್ತು ಬಂಡವಾಳಗಳು ಇಲ್ಲವಾಗುತ್ತವೆ. ಹೀಗಾಗಿ ಮುಂದಿನ ಸಾಂಕ್ರಾಮಿಕ ವಕ್ಕರಿಸಿಕೊಂಡಾಗ, ‘ಮಲಗುವುದಕ್ಕೆ ಜಾಗವೇ ಸಿಗುತ್ತಿಲ್ಲ ಆಸ್ಪತ್ರೆಯಲ್ಲೂ, ಸ್ಮಶಾನದಲ್ಲೂ’ ಅಂತ ಎದೆ ಗೋಳಾಗಿಸುವ ಕವಿಗಳಷ್ಟೇ ಇದ್ದುಬಿಟ್ಟರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅದಕ್ಕೆ ನಮ್ಮೆಲ್ಲರಿಂದ ಲಾಭಕೋರರು, ಬಂಡವಾಳಶಾಹಿಗಳು ಅಂತ ಉಗಿಸಿಕೊಳ್ಳುವ ಖಾಸಗಿ ಕ್ಷೇತ್ರವೇ ಬೇಕಾಗುತ್ತದೆ. ಆದರೆ, ವ್ಯವಹಾರ ತಕ್ಷಣಕ್ಕೆ ದುರಾಸೆಗೆ ತಿರುಗಿಕೊಳ್ಳುವುದೂ ವಾಸ್ತವವೇ ಆದ್ದರಿಂದ, ಫಿಜರ್ ಥರದ ಲಸಿಕೆ ಕಂಪನಿಗಳು ತಮ್ಮ ಒಪ್ಪಂದದಲ್ಲಿ ಲ್ಯಾಟಿನ ಅಮೆರಿಕ ದೇಶಗಳ ಸಂಪನ್ಮೂಲಗಳನ್ನೇ ಅಡಕ್ಕೆ ಇಟ್ಟುಕೊಳ್ಳುವ, ಏನೇ ಹೆಚ್ಚು-ಕಡಿಮೆ ಆದರೂ ತಮಗೆ ಸಂಬಂಧವಿಲ್ಲ ಎಂಬ ಷರತ್ತು ಹಾಕಿರುವ ಪ್ರಕರಣಗಳು ವರದಿಯಾಗಿವೆ.
ಈಗ ಮತ್ತೆ ಪೇಟೆಂಟ್ ಮುಕ್ತವೆಂಬ ಪರಿಕಲ್ಪನೆಗೆ ತೆರೆದುಕೊಳ್ಳುತ್ತಿರುವ ಅಮೆರಿಕದಂಥ ದೇಶಗಳ ವಿಚಾರಧಾಟಿಯನ್ನೇ ಅಗೆದು ನೋಡುವುದಾದರೆ…. ಇದೇನೋ ಮಾನವಕುಲ ಉದ್ದಾರವಾಗಲೆಂಬ ಉದಾತ್ತ ಯೋಚನೆಯ ಪರಾಕಾಷ್ಠೆ ಅಂತೇನೂ ಭ್ರಮೆಗೆ ಬೀಳಬೇಕಿಲ್ಲ. ಆದರೆ, ಮೊನ್ನೆಯವರೆಗೆ ಲಸಿಕೆಗೆ ಬೇಕಾದ ಕಚ್ಚಾ ಪದಾರ್ಥಗಳನ್ನೂ ತಮ್ಮಲ್ಲೇ ಇಟ್ಟುಕೊಂಡಿದ್ದ ಹಾಗೂ ತಮ್ಮ ದೇಶಕ್ಕೆ ಎರಡು ಸಲ ಲಸಿಕೆ ಹಾಕಿದ ನಂತರವು ಮತ್ತೆ ಇಡೀ ಜನಸಂಖ್ಯೆಗೆ ಮತ್ತೊಮ್ಮೆ ಹಾಕಬಹುದಾದಷ್ಟು ಲಸಿಕೆ ಸ್ಟಾಕನ್ನು ಅನವಶ್ಯಕವಾಗಿ ತನ್ನಲ್ಲಿರಿಸಿಕೊಂಡಿದ್ದ ಅಮೆರಿಕದಂಥ ದೇಶ ತನ್ನ ವಿಚಾರಧಾಟಿಯನ್ನು ಬದಲಾಯಿಸಿದ್ದೇಕೆ? ತನ್ನ ನೆಲದ ಫಾರ್ಮಾ ಕಂಪನಿಗಳ ಮುನಿಸಿಗೆ ಕಾರಣವಾಗಬಲ್ಲ ನಿರ್ಧಾರವೊಂದಕ್ಕೆ ತಿರುಗಿಕೊಂಡಿದ್ದೇಕೆ?
ಸಂಕ್ಷಿಪ್ತವಾಗಿ ಉತ್ತರಿಸುವುದಾದರೆ ರೂಪಾಂತರಿ ಕರೋನಾ ವೈರಸ್ಸಿನ ಭಯ!
ವಿಸ್ತರಿಸಿ ಹೇಳುವುದಾದರೆ-
ಅಮೆರಿಕ, ಇಂಗ್ಲೆಂಡ್ ಗಳೇನೋ ತಮ್ಮೆಲ್ಲ ಜನಸಂಖ್ಯೆಗೆ ತಿಂಗಳೊಪ್ಪತ್ತಿನಲ್ಲಿ ಲಸಿಕೆ ಪೂರ್ಣಗೊಳಿಸಿಬಿಡುತ್ತವೆ ಎಂದುಕೊಳ್ಳೋಣ. ಇತ್ತ ಭಾರತವು ತನ್ನ ಅಗಾಧ ಜನಸಂಖ್ಯೆ ಕಾರಣದಿಂದ ಹಾಗೂ ಆಫ್ರಿಕಾದ ದೇಶಗಳಲ್ಲಿ ಹಲವು ಸಂಪನ್ಮೂಲ ಕೊರತೆ ಕಾರಣದಿಂದ ಲಸಿಕೆ ಅಭಿಯಾನ ಮುಗಿಸುವುದಕ್ಕೆ ವರ್ಷಗಳನ್ನೇ ತೆಗೆದುಕೊಳ್ಳುತ್ತವೆ.
ಆಗೇನಾಗುತ್ತದೆ? ವೈರಸ್ಸಿಗೆ ಸಮಯ ಸಿಗುತ್ತದೆ. ಈ ಸಮಯದಲ್ಲಿ ಅದು ಬಲಿಷ್ಟವಾಗುತ್ತದೆ, ರೂಪಾಂತರ ಹೊಂದುತ್ತದೆ. ಮೊದಲ ಅಲೆಯಲ್ಲಿ ವಯಸ್ಸಾದವರು ಮತ್ತು ಅನ್ಯರೋಗಗಳಿದ್ದವರಿಗೆ ಮಾತ್ರವೇ ಹೆಚ್ಚಾಗಿ ಸಾವನ್ನು ತೋರಿಸಿದ್ದ ಕರೋನಾ ಈ ಬಾರಿ ಉಳಿದವರನ್ನೂ ಸಾವಿನ ಮನೆಗೆ ಕರೆದೊಯ್ಯುವಂತೆ ರೂಪಾಂತರ ಹೊಂದಿರುವಂತೆ.
ಇವತ್ತಿನ ಜಾಗತಿಕ ಎಕಾನಮಿ ಅದೆಷ್ಟು ಅಂತರ್ಬೆಸುಗೆ ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತು. ಪಕ್ಕದ ಮನೆಯವ ಕೆಮ್ಮಿಕೊಂಡಿದ್ದಾರೆ ಅಂತ ತುಂಬ ದಿನ ಬಾಗಿಲು ಹಾಕಿಕೊಂಡೇ ಇರುವುದು ನಮಗೆ ಹೇಗೆ ವೈಯಕ್ತಿಕ ನೆಲೆಯಲ್ಲಿ ಸಾಧ್ಯವಿಲ್ಲವೋ ಹಾಗೆಯೇ ದೇಶಗಳಿಗೂ ಸಹ.
ಹೀಗಾಗಿ ಮೂಲ ವುಹಾನ್ ಹೆಸರನ್ನೇ ಮರೆಸುವಂತೆ ಆಫ್ರಿಕನ್ ವೆರೈಟಿ, ಲಂಡನ್ ವೆರೈಟಿ, ಇಂಡಿಯನ್ ವೆರೈಟಿಗಳೆಲ್ಲ ಈಗ ಸದ್ದು ಮಾಡಿಕೊಂಡಿವೆ. ಇಂಥ ಮುಂದುವರೆದ ಅಲೆಗಳೆಲ್ಲ ಅದಾಗಲೇ ಲಸಿಕೆ ಪಡೆದುಕೊಂಡವರಿಗೆ ತೀರ ಹಾನಿ ಮಾಡಿಲ್ಲ ಎಂಬುದು ಈ ಕ್ಷಣದ ಸತ್ಯವಾಗಿದ್ದಿರಬಹುದಾದರೂ, ರೂಪಾಂತರ ಹೆಚ್ಚುತ್ತಲೇ ಹೋದರೆ ಮೊದಲು ಪಡೆದ ರೋಗನಿರೋಧಕತೆ ಎಷ್ಟರಮಟ್ಟಿಗೆ ನಿಂತುಕೊಂಡಿದ್ದೀತು ಎಂಬುದು ಅನುಮಾನಾರ್ಹವೇ. ಹಾಗೆಂದೇ, ಅಮೆರಿಕದಂಥ ಧನವಂತ ದೇಶಗಳು ಈ ರೋಗದಲೆ ಇನ್ಯಾವುದೋ ದೇಶದಲ್ಲಿ ಮುಂದುವರಿದುಕೊಂಡಿದ್ದರೂ ದೀರ್ಘಾವಧಿಯಲ್ಲಿ ತನ್ನಂಥವರು ತೆರಬೇಕಿರುವ ಬೆಲೆ ಏನು ಎಂಬುದನ್ನು ಲೆಕ್ಕ ಹಾಕಿದೆ. ಹಾಗೆಂದೇ ರೂಪಾಂತರಗಳಾಗುವ ಮುಂಚೆ ಶೇ. 60-70ರಷ್ಟು ಜಾಗತಿಕ ಜನಸಂಖ್ಯೆ ಈ ವೈರಸ್ಸನ್ನು ಏಕಕಾಲದಲ್ಲಿ ಹಿಮ್ಮೆಟ್ಟಿಸುವಂತಾಗಬೇಕು. ಅದಕ್ಕಾಗಿಯೇ ಪೆಟೆಂಟ್ ಮುಕ್ತ ಲಸಿಕೆಯ ವಿಚಾರಧಾರೆ ಗಟ್ಟಿಯಾಗುತ್ತಿದೆ.
ಅಮೆರಿಕ ಅನುಮೋದಿಸಿದ ಮಾತ್ರಕ್ಕೆ ಇನ್ನು ನಾಲ್ಕು ದಿನಗಳಲ್ಲಿ ಆಗಿಬಿಡುವ ಮಾತು ಇದಲ್ಲ. ಸರ್ಕಾರಗಳನ್ನು ಮೀರಿಸುವ ಬೃಹತ್ ಉದ್ದಿಮೆ ಲೆಕ್ಕಾಚಾರಗಳೆಲ್ಲ ಇಲ್ಲಿವೆ. ಆದರೆ, ಅದೃಶ್ಯ ವೈರಿಯ ರೂಪಾಂತರ ಪರಾಕ್ರಮ ಮುಂದೊಂದು ದಿನ ತಮ್ಮ ದೌರ್ಬಲ್ಯವನ್ನು ಜಾಹೀರಾಗಿಸೀತು ಎಂಬ ಭಯವೇನಾದರೂ ಈ ಕಂಪನಿಗಳಿಗೆ ಗೋಚರಿಸಿಬಿಟ್ಟರೆ ಎಲ್ಲರೂ ಒಂದಾಗಿ ಬಂದು ಮನುಕುಲವನ್ನು ರಕ್ಷಿಸುವ ‘ಮಹಾ ಔದಾರ್ಯ’ದ ನಡೆಯನ್ನು ಶೀಘ್ರ ದಲ್ಲೇ ಘೋಷಿಸಿಯಾರು.
—
ಈ ರೋಗಕ್ಕೆ ಸೀಮಿತವಾದ ಈ ಜಗತ್ತಿನ ಕತೆ ಹಾಗಿರಲಿ. ‘ಎಲ್ರಿಗೂ ಒಳ್ಳೆಯದಾಗಲಿ’ ಎಂಬ ಬದುಕಿನ ಫಿಲಾಸಫಿ ದೊಡ್ಡತನವಲ್ಲ; ವಾಸ್ತವದಲ್ಲದು ನಮ್ಮೆಲ್ಲರ ಅನಿವಾರ್ಯ. ಪಕ್ಕದವನ ಎದೆಗಪ್ಪಳಿಸಿದ ಅಲೆಯ ಕಂಪನಗಳು ಇಂದಲ್ಲ ನಾಳೆ ನಮ್ಮೆಲ್ಲರನ್ನೂ ಸವರದೇ ಇರದೇ?