
ನಮ್ಮ ದೇಶದಲ್ಲಿ ಅತಿಯಾಗಿ ಚರ್ಚೆಯಾಗದೇ ಸಂಕೀರ್ಣವಾಗಿ ಉಳಿದ ಮತ್ತು ಹಳೆಯದಾದ ಎರಡು ಕಾನೂನುಗಳನ್ನು ಸರಿಮಾಡಿದ ಶ್ರೇಯಸ್ಸು ನಮ್ಮ ಈಗಿನ ಕೇಂದ್ರ ಸರಕಾರಕ್ಕೆ ಸಲ್ಲಬೇಕು. ಆ ಎರಡು ಕಾನೂನುಗಳೇ ಒಂದು ಕೃಷಿ ಕಾನೂನು ಮತ್ತೊಂದು ಕಾರ್ಮಿಕ ಕಾನೂನು. ಕೃಷಿ ಕಾನೂನಿನ ಬದಲಾವಣೆಗಳ ಬಗ್ಗೆ ಬಹುಪಾಲು ವಿಷಯಗಳನ್ನು ನಾವೆಲ್ಲ ತಿಳಿದಿದ್ದೇವೆ ಆದರೆ ಕಾರ್ಮಿಕ ಕಾನೂನಿನಲ್ಲಾದ ಐತಿಹಾಸಿಕ ಬದಲಾವಣೆಗಳ ಬಗ್ಗೆ ಮಾತನಾಡುತ್ತಿರುವವರ ಸಂಖ್ಯೆ ತುಂಬಾ ಕಡಿಮೆ ಹಾಗಾಗಿ ಇದರ ಮೇಲೆ ನಡೆದ ಚರ್ಚೆಗಳೂ ಕಡಿಮೆ.ಕಳೆದ 74 ವರ್ಷದಲ್ಲಿ ಮೊದಲ ಬಾರಿಗೆ ಕಾರ್ಮಿಕ ಕಾನೂನುಗಳ ಮಹತ್ವದ ಸುಧಾರಣೆಗೆ ಕೇಂದ್ರ ಸರಕಾರ ಒತ್ತು ನೀಡಿದ್ದು ನಿಜಕ್ಕೂ ಪ್ರಶಂಸನೀಯ.
ಕಾರ್ಮಿಕ ಕಾನೂನುಗಳ ಸರಮಾಲೆಗಳೇ ಇದ್ದರೂ ಸಂಕಷ್ಟಕ್ಕೆ ಗುರಿಯಾಗುತ್ತಿದ್ದ ಕಾರ್ಮಿಕ ವರ್ಗ ಹಾಗೂ ಕಂಪ್ಲೈಯೆನ್ಸ್ ಬರ್ಡನ್ ಗಳಿಂದ ತತ್ತರಿಸಿ ಹೋಗಿರುವ ಉದ್ಯಮ; ಈ ಎರಡೂ ವರ್ಗದ ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದಿಟ್ಟತನದಿಂದ ಕಾರ್ಮಿಕ ಕಾಯಿದೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ.ಕೃಷಿ ಕಾಯ್ದೆಯನ್ನು ವಿರೋಧಿಸಿದ ಹಾಗೆಯೇ ಇದನ್ನೂ ವಿರೋಧಿಸಿ ಅಲ್ಲಲ್ಲಿ ಹೋರಾಟಗಳು ನಡೆಯುತ್ತಿವೆ ಆದರೆ ಈ ಕಾರ್ಮಿಕ ಕಾನೂನುಗಳ ಪರಿಚಯ ಇರುವ ಅನೇಕ ಹಿರಿಯ ತಜ್ಞರುಗಳು ದೇಶದ ಕಾರ್ಮಿಕ ವಲಯದ ಹಿತ ಕಾಪಾಡುವ ದಿಸೆಯಲ್ಲಿ ಈ ಕಾನೂನುಗಳು ‘ಮೈಲಿಗಲ್ಲು’ ಎಂದು ವರ್ಣಿಸುತ್ತಿದ್ದಾರೆ. ಕಾರ್ಮಿಕ ಕಾಯಿದೆಗಳ ಸುಧಾರಣೆಗಳ ಇತಿಹಾಸದಲ್ಲಿ 2019 ಮತ್ತು 2020 ವರ್ಷಗಳು ಮಹತ್ವದ ವರ್ಷಗಳಾಗಿವೆ. ಕಾರಣ, ಸರಕಾರವು ಹಳೆಯ ಸುಮಾರು 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಒಟ್ಟುಗೂಡಿಸಿ, ವ್ಯವಸ್ಥಿತವಾಗಿ ಸರಳೀಕೃತಗೊಳಿಸಿ ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸಿದೆ ಅವುಗಳೆಂದರೆ:
(i) ವೇತನಗಳ ಸಂಹಿತೆ 2019(The Code on Wages),
(ii) ಕೈಗಾರಿಕಾ ಸಂಬಂಧ ಸಂಹಿತೆ 2020(The Industrial Relations Code),
(iii) ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ 2020(The Occupational Safety, Healthy and Working Conditions Code) ಮತ್ತು
(iv) ಸಾಮಾಜಿಕ ಭದ್ರತೆ ಸಂಹಿತೆ 2020(The Code on Social Security).
ಈ ಹೊಸ ಬದಲಾವಣೆಗಳು ದೇಶದಲ್ಲಿನ 50 ಕೋಟಿಗೂ ಹೆಚ್ಚು ಸಂಘಟಿತ, ಅಸಂಘಟಿತ ಮತ್ತು ಸ್ವಯಂ ಉದ್ಯೋಗ ವಲಯಗಳ ಕಾರ್ಮಿಕರ ವೇತನ ಮತ್ತು ಸಾಮಾಜಿಕ ಭದ್ರತೆಗಳ ಸುಧಾರಣೆಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಲಿವೆ. ವಿಶ್ವ ಬ್ಯಾಂಕ್ ನ ಪ್ರಕಾರ ಭಾರತದಲ್ಲಿ ಶೇಕಡಾ 67ರಷ್ಟು ಜನರ ವಯಸ್ಸು 15-64 ರ ಒಳಗಿದ್ದು ಇದನ್ನು ‘Working Age’ ಅನ್ನುತ್ತೇವೆ. ಇದನ್ನು ನಮ್ಮ ದೇಶದ ಆರ್ಥಿಕತೆಯ ಬೆಳವಣಿಗೆಗೆ ಬಹುದೊಡ್ಡ ಲಾಭವನ್ನಾಗಿ ಪರಿವರ್ತಿಸುವೆಡೆ ನಮ್ಮ ಪ್ರಯತ್ನವಿರಬೇಕು. ಇದನ್ನೇ ‘ಜನಸಂಖ್ಯೆಯ ಲಾಭ’ ಅಥವಾ ‘ಡೆಮೊಗ್ರಾಫಿಕ್ ಡಿವಿಡೆಂಡ್’ ಅನ್ನಬಹುದು.ಈ ಅವಕಾಶ ದೀರ್ಘ ಕಾಲದವರೆಗೆ ನಮಗಾಗಿ ಮೀಸಲಿರುವುದಿಲ್ಲ ಹಾಗಾಗಿ ಒಂದು ದೇಶವಾಗಿ ಈ ಅವಕಾಶವನ್ನು ನಾವು ಕೈ ಚೆಲ್ಲಿದರೆ ನಾವು ಶ್ರೀಮಂತರಾಗುವ ಮೊದಲು ಇಳಿ ವಯಸ್ಸಿಗೆ ತಲುಪಿಬಿಡುತ್ತೇವೆ.
ಭಾರತದಲ್ಲಿ ಕೆಲಸಮಾಡುವ ಕಾರ್ಮಿಕರಲ್ಲಿ ಶೇಕಡಾ 93 ರಷ್ಟು ಜನ ಅನೌಪಚಾರಿಕವಾಗಿ ಕೆಲಸ ಮಾಡುತ್ತಿದ್ದಾರೆ ಇದರಲ್ಲಿ 80 ಶೇಕಡಾ ಜನ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು. ಈ ಹೊಸ ಕಾನೂನು ಅಥವಾ ಸಂಹಿತೆಗಳ ಮೂಲ ಉದ್ದೇಶ ಔಪಚಾರಿಕ ಉದ್ಯೋಗವನ್ನು ಉತ್ತೇಜಿಸುವ ಜೊತೆಗೆ ಕೆಲಸ ಮಾಡುವ ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದಾಗಿದೆ. ಈ ಕಾನೂನಿನಲ್ಲಿ ಸ್ವಯಂ ಉದ್ಯೋಗಿಗಳು, ಅಸಂಘಟಿತ ವಲಯದ ಕಾರ್ಮಿಕರು, ವಲಸೆ ಕಾರ್ಮಿಕರು ಜೊತೆಗೆ ಪ್ಲಾಟ್ ಫಾರ್ಮ್ ಮತ್ತು ಜಿ ಐ ಜಿ ಕಾರ್ಮಿಕರಿಗೆ ನೊಂದಣಿ ಪ್ರಕ್ರಿಯೆ ಇರಲಿದ್ದು ಸರಕಾರ ಈ ಕಾರ್ಮಿಕರ ಹಿತಕಾಯುವ ಸಲುವಾಗಿ ‘ ಸಾಮಾಜಿಕ ಭದ್ರತಾ ನಿಧಿ’ ಯನ್ನು ಸೃಷ್ಟಿಸಲಿದೆ.
ವೇತನ ಸಂಹಿತೆ(The Code on Wages) ಯಲ್ಲಿ ಸದ್ಯ ಪ್ರಚಲಿತದಲ್ಲಿರುವ ನಾಲ್ಕು ಕಾಯಿದೆಗಳಾದ ವೇತನ ಪಾವತಿ ಕಾಯಿದೆ 1936, ಕನಿಷ್ಠ ವೇತನ ಕಾಯಿದೆ 1948, ಬೋನಸ್ ಪಾವತಿ ಕಾಯಿದೆ 1965 ಹಾಗೂ ಸಮಾನ ವೇತನ ಕಾಯಿದೆ 1976 ಗಳನ್ನು ಒಗ್ಗೂಡಿಸಿ ಒಂದೇ ಕಾನೂನಾಗಿ ಮಾಡಲಾಗಿದೆ. ಹೊಸ ವೇತನ ಕಾಯಿದೆ 2019 ಒಟ್ಟು 9 ಅಧ್ಯಾಯಗಳನ್ನು 66 ಸೆಕ್ಷನಗಳನ್ನು ಒಳಗೊಂಡಿದೆ.ಈ ಕಾಯಿದೆಯು ಸಮಗ್ರ ಭಾರತಕ್ಕೆ ಅನ್ವಯಿಸುತ್ತದೆ ಹಾಗೂ ಕೆಲವು ವಿನಾಯತಿಗಳನ್ನು ಹೊರತುಪಡಿಸಿದರೆ ಎಲ್ಲ ಕಾರ್ಖಾನೆಗಳು, ಸಂಸ್ಥೆಗಳು, ಉದ್ಯೋಗಿಗಳು ಹಾಗು ಮಾಲೀಕರಿಗೂ ಅನ್ವಯಿಸುತ್ತದೆ. ಪ್ರಮುಖವಾಗಿ ಈ ಕಾಯಿದೆಯು ಸಂಘಟಿತ ಹಾಗು ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೂ ಅನ್ವಯಿಸುತ್ತದೆ. ಈ ಮುಂಚೆ ವೇತನ ಪಾವತಿ ಕಾಯಿದೆಯು ಮಾಸಿಕ 24000 ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಹಾಗೆಯೇ ಕನಿಷ್ಠ ವೇತನ ಕಾಯಿದೆಯು ಕೆಲವು ಅನುಸೂಚಿತ ಉದ್ಯೋಗಗಳಿಗೆ ಮಾತ್ರ ಅನ್ವಯವಾಗುತಿತ್ತು. ಈಗ ಎಲ್ಲ ಉದ್ಯೋಗಿಗಳು, ಮೇಲ್ವಿಚಾರಕರು ಹಾಗು ವ್ಯವಸ್ಥಾಪಕರನ್ನು ಒಳಗೊಂಡಂತೆ ವೇತನ ಪಾವತಿಯಲ್ಲಿ ವಿಳಂಬ , ಕಾನೂನೇತರ ವೇತನ ಕಡಿತಗಳು ಮುಂತಾದ ಉಲ್ಲಂಘನಗಳಿಗೆ ಈ ಕಾಯಿದೆಯಡಿ ರಕ್ಷಣೆ ಕೋರಬಹುದಾಗಿದೆ. ಈ ಹೊಸ ಕಾನೂನಿನ ಪ್ರಕಾರ ವೇತನವನ್ನು ತಿಂಗಳ ಕೊನೆ ದಿನ ಮುಗಿದು ಏಳು ದಿನದ ಒಳಗಾಗಿ ಪಾವತಿ ಮಾಡಬೇಕು. ಜೀವನ ಮಟ್ಟವನ್ನು ಗಣನೆಗೆ ತೆಗೆದುಕೊಂಡು ಕನಿಷ್ಠ ವೇತನವನ್ನು (ಫ್ಲೋರ್ ವೇಜ್) ಕೇಂದ್ರ ಸರಕಾರ ನಿಗದಿ ಪಡಿಸಲಿದ್ದು,ರಾಜ್ಯಗಳು ನಿಗಧಿ ಪಡಿಸುವ ಕನಿಷ್ಟ ವೇತನವು ಕೇಂದ್ರ ನಿಗದಿ ಪಡಿಸಿರುವ ಕನಿಷ್ಟ ವೇತನಕ್ಕಿಂತ ಯಾವುದೇ ಕಾರಣಕ್ಕೂ ಕಡಿಮೆ ಇರಕೂಡದು.ಸಮಾನತೆಯನ್ನು ಕಾಪಾಡುವ ನಿಟ್ಟಿನಲ್ಲಿ ನೇಮಕಾತಿಯಿಂದ ವೇತನ ಪಾವತಿಯವರೆಗೆ ಯಾವುದೇ ಕಾರಣಕ್ಕೂ ಲಿಂಗ ತಾರತಮ್ಯ ಎಸಗುವಂತಿಲ್ಲ. ವೇತನ ವ್ಯಾಖ್ಯಾನವು ಮನೆ ಬಾಡಿಗೆ ಭತ್ಯೆ(HRA), ಪ್ರಯಾಣ ಭತ್ಯೆ(LTA) ಹಾಗು ಇನ್ನೂ ಇತರ ಕೆಲವು ಭತ್ಯೆಗಳನ್ನು ಒಳಗೊಳ್ಳುವುದಿಲ್ಲ. ಹೀಗೆ ಕಾಯ್ದೆಯಡಿಯಲ್ಲಿ ಹೊರತುಪಡಿಸಿದ ಕೆಲವು ಪ್ರಮುಖ ಭತ್ಯೆಗಳು ಒಟ್ಟು ವೇತನದ ಶೇಖಡಾ 50 ಕ್ಕಿಂತ ಹೆಚ್ಚು ಇದ್ದರೆ ಆ ಹೆಚ್ಚಿನ ಮೊತ್ತವನ್ನು ವೇತನಕ್ಕೆ ಸೇರಿಸಬೇಕೆಂದು ಹೇಳುತ್ತದೆ. ಇದು ಈ ಸಂಹಿತೆಯ ಪರಿಣಾಮಕಾರಿ ನಿರ್ಣಯಗಳಲ್ಲಿ ಪ್ರಮುಖವಾದದ್ದು.ಒಂದು ವೇಳೆ ಕಾರ್ಮಿಕ ಕೆಲಸಕ್ಕೆ ರಾಜೀನಾಮೆ ನೀಡಿದರೆ ಅಥವಾ ಕೆಲಸದಿಂದ ವಜಾ ಮಾಡಿದರೆ ಕಾರ್ಮಿಕನ ವೇತನ ಹಾಗೂ ಇತರ ಬಾಕಿಗಳನ್ನು ಎರಡು ದಿನಗಳಲ್ಲಿ ಪಾವತಿಸಬೇಕಾದದ್ದು ಸಂಸ್ಥೆಯ ಪ್ರಮುಖ ಆದ್ಯತೆಯಾಗಿರಬೇಕಾಗಿದೆ . ಇ ಕಾಮರ್ಸ್ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಹಾಗೂ ಫ್ರೀಲ್ಯಾನ್ಸ್ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರು ಕೂಡ ಈ ಕಾನೂನಿನ ಅಡಿಗೆ ಬರುವುದರಿಂದ ಅಲ್ಲಿ ಕೆಲಸ ಮಾಡುವ ಎಲ್ಲರಿಗೂ ಕಾನೂನಾತ್ಮಕವಾದ ಭದ್ರತೆ ದೊರಕುತ್ತಿರುವುದು ಮಹತ್ವವಾದ ವಿಷಯ.
ಕೈಗಾರಿಕಾ ಸಂಬಂಧಗಳ ಸಂಹಿತೆ(The Industrial Relations Code)ಯಡಿಯಲ್ಲಿ ಕಾರ್ಮಿಕ ಸಂಘಟನೆಗಳ ಕಾಯ್ದೆ 1926,ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯ್ದೆ 1946 ಹಾಗೂ ಕೈಗಾರಿಕಾ ವಿವಾದ ಕಾಯ್ದೆ 1947 ಎಂಬ ಮೂರು ಕಾನೂನುಗಳನ್ನು ಸೇರಿಸಲಾಗಿದೆ.ಕಾರ್ಮಿಕರ ವಿವಾದಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಈ ಸಂಹಿತೆ ಕೆಲಸ ಮಾಡಲಿದೆ.ಈ ಕಾನೂನು ಲಾಗೂ ಆದ ಮೇಲೆ ಕೈಗಾರಿಕಾ ನ್ಯಾಯಮಂಡಳಿಯಲ್ಲಿ ಒಬ್ಬ ಸದಸ್ಯರ ಬದಲು ಇಬ್ಬರು ಸದಸ್ಯರಿಗೆ ಅವಕಾಶ ಒದಗಿಸಲಾಗುವುದು. ಇದರಿಂದ ಒಬ್ಬ ಸದಸ್ಯರ ಅನುಪಸ್ಥಿತಿಯಲ್ಲಿಯೂ ಕೆಲಸ ಸರಾಗವಾಗಿ ನಡೆಯಬಹುದು.ರಾಜಿ ಸಂಧಾನ ಹಂತದಲ್ಲಿ ವಿವಾದ ಬಗೆಹರಿಯದಿದ್ದಲ್ಲಿ ವಿಷಯವನ್ನು ನೇರವಾಗಿ ನ್ಯಾಯಮಂಡಳಿಗೆ ಕೊಂಡೊಯ್ಯುವ ಅವಕಾಶ ಕೂಡ ಇದೆ. ಪ್ರಸ್ತುತ, ಪ್ರಕರಣವನ್ನು ಸಂಬಂಧಪಟ್ಟ ಸರಕಾರವು ನ್ಯಾಯ ಮಂಡಳಿಗಳಿಗೆ ಸಲ್ಲಿಸುತಿತ್ತು. ಈಗೀನ ಕಾನೂನಿನ ಪ್ರಕಾರ ನ್ಯಾಯ ಮಂಡಳಿಯ ತೀರ್ಪಿನ 30 ದಿನಗಳಲ್ಲಿ ತೀರ್ಪನ್ನು ಅನುಷ್ಟಾನಗೊಳಿಸಬೇಕಿದೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರು ಕೂಡ ಶಾಶ್ವತ ಕಾರ್ಮಿಕರು ಪಡೆಯುತ್ತಿರುವ ಎಲ್ಲ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಕಾರ್ಮಿಕ ಸಂಘಟನೆಗಳು ಯಾವುದೇ ವಿವಾದದ ಬಗ್ಗೆ ಮಾತುಕತೆ ನಡೆಸಲು “ನೆಗೋಷಿಯೇಟಿಂಗ್ ಯೂನಿಯನ್” ಮತ್ತು “ನೆಗೋಷಿಯೇಟಿಂಗ್ ಕೌನ್ಸಿಲ್”ಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮಾತುಕತೆಯ ಮೂಲಕ ವಿವಾದಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ ಮತ್ತು ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಸಂಸ್ಥೆಯಲ್ಲಿನ ಒಂದೇ ಕಾರ್ಮಿಕ ಸಂಘಟನೆಗೆ ಮಾತುಕತೆ ನಡೆಸಲು ಅವಕಾಶವಿದ್ದು ಒಂದು ವೇಳೆ ಒಂದು ಸಂಸ್ಥೆಯಲ್ಲಿ ಒಂದಕ್ಕಿಂತ ಅಧಿಕ ಕಾರ್ಮಿಕ ಸಂಘಟನೆಗಳಿದ್ದರೆ ಒಟ್ಟೂ ಕಾರ್ಮಿಕರಲ್ಲಿ ಶೇ 51 ಕ್ಕಿಂತಲೂ ಅಧಿಕ ಕಾರ್ಮಿಕರ ಸದಸ್ಯತ್ವ ಹೊಂದಿರುವ ಸಂಘಟನೆ ಮಾತ್ರವೇ ವಿವಾದ ಬಗೆಹರಿಸುವ ಮಾತುಕತೆಯ ಭಾಗವಾಗಬಹುದು.ಒಂದು ಸಂಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಮಿಕ ಸಂಘಟನೆಗಳು ಇದ್ದು, ಯಾವ ಸಂಘಟನೆಗೂ ಶೇ 51 ರಷ್ಟು ಕಾರ್ಮಿಕರ ಸದಸ್ಯತ್ವದ ಬಲ ಇಲ್ಲದಿದ್ದರೆ ಯಾವ ಸಂಘಟನೆಗೂ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸುವ ಹಕ್ಕು ದೊರೆಯುವುದಿಲ್ಲ. ಇಂತಹ ಸಂದರ್ಭದಲ್ಲಿ “ಮಾತುಕತೆ ಮಂಡಳಿ”ಯನ್ನು ರಚಿಸಲಾಗುತ್ತದೆ. ಸರಕಾರಿ ಅಧಿಕಾರಿಯು ಈ “ಮಾತುಕತೆ ಮಂಡಳಿ”ಯನ್ನು ರಚಿಸುವ ಅಧಿಕಾರ ಹೊಂದಿರುತ್ತಾರೆ. ಒಟ್ಟು ಕಾರ್ಮಿಕರ ಸಂಖ್ಯೆಯಲ್ಲಿ ಶೇ 20ಕ್ಕಿಂತಲೂ ಕಡಿಮೆ ಜನರ ಸದಸ್ಯತ್ವ ಹೊಂದಿರುವ ಕಾರ್ಮಿಕ ಸಂಘಟನೆಗೆ ಮಾತುಕತೆ ಮಂಡಳಿಯಲ್ಲಿ ಪ್ರಾತಿನಿಧ್ಯ ಇರುವುದಿಲ್ಲ. ಮಾತುಕತೆ ಮಂಡಳಿಯಲ್ಲಿ ಆಡಳಿತ ಮಂಡಳಿ ಸದಸ್ಯರ ಸಂಖ್ಯೆ ಮತ್ತು ಕಾರ್ಮಿಕರ ಪ್ರತಿನಿಧಿಗಳ ಸಂಖ್ಯೆ ಸಮನಾಗಿ ಇರಬೇಕು ಇದು ಮತ್ತೊಂದು ಪ್ರಮುಖ ಅಂಶ .ಈ ಮಂಡಳಿಯ ಅಧಿಕಾರಾವಧಿ 3 ವರ್ಷಗಳಾಗಿದ್ದು, 5 ವರ್ಷಗಳವರೆಗೆ ಇದನ್ನು ವಿಸ್ತರಿಸಲೂ ಅವಕಾಶವಿದೆ. ಕಾರ್ಮಿಕ ಸಂಘಟನೆಗಳ ಸದಸ್ಯತ್ವ ಶುಲ್ಕವನ್ನು ಸರ್ಕಾರ ನಿರ್ಧರಿಸಬಹುದಾಗಿದೆ. ಕಾರ್ಮಿಕರು, ಪ್ರತಿಭಟನೆ ಅಥವಾ ಮುಷ್ಕರ ನಡೆಸುವ 14 ದಿನಗಳ ಮುಂಚಿತವಾಗಿ ಸಂಸ್ಥೆಗೆ ಮತ್ತು ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು ಮತ್ತು ಈ ಅವಧಿಯಲ್ಲಿಯೇ ಸಂಸ್ಥೆ ಮತ್ತು ಕಾರ್ಮಿಕರು ಸಂಧಾನದ ಮೂಲಕ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು.ಉದ್ಯಮ ಮತ್ತು ಉದ್ಯೋಗಿಗಳ ನಡುವಿನ ಸಂಬಂಧ ಹಾಳಾಗದಂತೆ ನೋಡಿಕೊಂಡರೆ ಇಬ್ಬರ ಬೆಳವಣಿಗೆ ಕೂಡ ಸಾಧ್ಯವಿದೆ.ಇದನ್ನು ಸಾಧ್ಯವಾಗಿಸುವ ಪ್ರಯತ್ನ ಈ ಕಾನೂನಿನ ಮೂಲಕ ಆಗಲಿದೆ.
ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ(The Occupational Safety, Healthy and Working Conditions Code) ಯಡಿಯಲ್ಲಿ ಕಾರ್ಖಾನೆಗಳ ಕಾಯ್ದೆ 1948, ಪ್ಲಾಂಟೇಶನ್ ಕಾರ್ಮಿಕರ ಕಾಯ್ದೆ 1951,ಗಣಿ ಕಾಯ್ದೆ 1952,ಕಾರ್ಯನಿರತ ಪತ್ರಕರ್ತರು ಮತ್ತು ಇತರ ಪತ್ರಿಕೆ ನೌಕರರು (ಸೇವೆಯ ಷರತ್ತುಗಳು) ಮತ್ತು ವಿವಿಧ ನಿಬಂಧನೆಗಳ ಕಾಯ್ದೆ 1955,ಕಾರ್ಯನಿರತ ಪತ್ರಕರ್ತರು (ವೇತನ ನಿಗದಿ) ಕಾಯ್ದೆ 1958,ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆ 1961,ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗದ ಷರತ್ತುಗಳು) ಕಾಯ್ದೆ 1966,ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯ್ದೆ 1970,ಮಾರಾಟ ಉತ್ತೇಜನಾ ನೌಕರರ (ಸೇವೆಯ ಷರತ್ತುಗಳು) ಕಾಯ್ದೆ 1976,ಅಂತರ-ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ಮತ್ತು ಸೇವೆಯ ಷರತ್ತುಗಳ ನಿಯಂತ್ರಣ) ಕಾಯ್ದೆ 1979,ಸಿನಿಮಾ ಕೆಲಸಗಾರರು ಮತ್ತು ಸಿನೆಮಾ ಥಿಯೇಟರ್ ಕೆಲಸಗಾರರ (ಉದ್ಯೋಗ ನಿಯಂತ್ರಣ) ಕಾಯ್ದೆ 1981,ಡಾಕ್ ವರ್ಕರ್ಸ್ (ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ) ಕಾಯ್ದೆ 1986, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಸೇವೆಯ ಷರತ್ತುಗಳ ನಿಯಂತ್ರಣ) ಕಾಯ್ದೆ 1996 ಗಳೆಂಬ ಹದಿಮೂರು ಕಾನೂನುಗಳನ್ನು ಸೇರಿಸಲಾಗಿದೆ. ಈ ಸಂಹಿತೆಯ ಮೂಲ ಉದ್ದೇಶ ಕಾರ್ಮಿಕರ ಆರೋಗ್ಯದ ಹಿತವನ್ನು ಕಾಯುವುದಾಗಿದೆ. ನಿರ್ದಿಷ್ಟ ವಯಸ್ಸಿಗಿಂತ ಹೆಚ್ಚಿನ ವಯಸ್ಸಾದ ಕಾರ್ಮಿಕರಿಗೆ ಸಂಸ್ಥೆಯು ವರ್ಷಕ್ಕೊಮ್ಮೆ ಉಚಿತ ಆರೋಗ್ಯ ತಪಾಸಣೆ ಮಾಡಬೇಕಿದೆ. ನೇಮಕಾತಿ ಪತ್ರವನ್ನು ಪಡೆಯುವ ಹಕ್ಕನ್ನು ಮೊದಲಬಾರಿಗೆ ಕಾನೂನಾತ್ಮಕವಾಗಿ ನೀಡಲಾಗಿದೆ.
ಸಿನಿಮಾ ಕೆಲಸಗಾರರನ್ನು ಆಡಿಯೊ ವಿಷುಯಲ್ ವರ್ಕರ್ ಎಂದು ಹೆಸರಿಸಲಾಗಿದ್ದು , ಇದರಿಂದಾಗಿ ಹೆಚ್ಚು ಕಾರ್ಮಿಕರು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ ವ್ಯಾಪ್ತಿಗೆ ಬರುತ್ತಾರೆ. ಈ ಮೊದಲು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಕಲಾವಿದರಿಗೆ ಮಾತ್ರ ಈ ಭದ್ರತೆಯನ್ನು ನೀಡಲಾಗುತ್ತಿತ್ತು. ಮಹಿಳೆಯರಿಗೆ ಪ್ರತಿಯೊಂದು ವಲಯದಲ್ಲೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುಮತಿ ನೀಡಬೇಕಾಗಿರುತ್ತದೆ, ಆದರೆ ಉದ್ಯೋಗದಾತರು ಅವರ ಭದ್ರತೆಯ ವ್ಯವಸ್ಥೆ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮೊದಲು ಮಹಿಳೆಯರ ಒಪ್ಪಿಗೆಯನ್ನು ಪಡೆಯಬೇಕು.ಕೆಲಸದ ಸ್ಥಳದಲ್ಲಿ ಅಪಘಾತದಿಂದಾಗಿ ಕೆಲಸಗಾರನ ಸಾವು ಸಂಭವಿಸಿದಾಗ ಅಥವಾ ಕಾರ್ಮಿಕ ಗಾಯಗೊಂಡರೆ, ದಂಡದ ಕನಿಷ್ಠ ಶೇ.50 ಪಾಲನ್ನು ಪರಿಹಾರದ ಜೊತೆಗೆ ನೀಡಬೇಕಾಗುತ್ತದೆ.
ಸಾಮಾಜಿಕ ಭದ್ರತಾ ಸಂಹಿತೆ(The Code on Social Security)ಯಡಿಯಲ್ಲಿ ನೌಕರರ ಪರಿಹಾರ ಕಾಯ್ದೆ 1923,ನೌಕರರ ರಾಜ್ಯ ವಿಮಾ ಕಾಯ್ದೆ 1948,ನೌಕರರ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯ್ದೆ 1952,ಉದ್ಯೋಗ ವಿನಿಮಯ ಕೇಂದ್ರಗಳು (ಖಾಲಿ ಹುದ್ದೆಗಳ ಕಡ್ಡಾಯ ಅಧಿಸೂಚನೆ) ಕಾಯ್ದೆ 1959,ಹೆರಿಗೆ ಪ್ರಯೋಜನ ಕಾಯ್ದೆ 1961, ಗ್ರಾಚ್ಯುಟಿ ಆಕ್ಟ್ 1972,ಸಿನಿಮಾ ಕೆಲಸಗಾರರ ಕಲ್ಯಾಣ ನಿಧಿ ಕಾಯ್ದೆ 1981,ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ 1996,ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2008 ಎಂಬ ಒಂಬತ್ತು ಕಾನೂನುಗಳನ್ನು ಸೇರಿಸಲಾಗಿದೆ.ಈ ಸಂಹಿತೆಯಡಿಯಲ್ಲಿ ಪ್ರಮುಖವಾಗಿ ರಾಜ್ಯ ವಿಮಾ ನಿಗಮ (ಇ ಎಸ್ ಐ ಸಿ) ಮತ್ತು ಕಾರ್ಮಿಕರ ಭವಿಷ್ಯ ನಿಧಿ (ಇ ಪಿ ಎಫ್ )ವ್ಯಾಪ್ತಿಗಳ ವಿಸ್ತರಣೆಗೆ ಪ್ರಮುಖ ಒತ್ತನ್ನು ನೀಡಲಾಗಿದೆ.ಅಪಾಯಕಾರಿ ಕ್ಷೇತ್ರಗಳಲ್ಲಿ ಕಾರ್ಮಿಕ ಕೆಲಸ ಮಾಡುತ್ತಿದ್ದರೆ ಆ ಸಂಸ್ಥೆಗಳು ಅದರಲ್ಲಿ ಒಬ್ಬನೇ ಕೆಲಸಗಾರ ಕೆಲಸ ಮಾಡುತ್ತಿದ್ದರೂ ಸಹ ಆತನನ್ನು ಇಎಸ್ಐಸಿಯೊಂದಿಗೆ ಕಡ್ಡಾಯವಾಗಿ ನೊಂದಣಿ ಮಾಡಲೇಬೇಕಿದೆ. ಈ ಸಂಹಿತೆಯಡಿಯಲ್ಲಿ ಅಸಂಘಟಿತ ವಲಯ ಮತ್ತು ಜಿಐಜಿ ಕಾರ್ಮಿಕರನ್ನು ಇಎಸ್ಐಸಿಯೊಂದಿಗೆ ಜೋಡಿಸುವ ಯೋಜನೆಯನ್ನು ರೂಪಿಸಲು ಅವಕಾಶ ಕಲ್ಪಿಸಲಾಗಿದೆ.ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಜೋಡಿಸುವ ಆಯ್ಕೆಯನ್ನು ತೋಟಗಳ ಮಾಲೀಕರಿಗೆ ನೀಡಲಾಗಿದೆ.ಹತ್ತಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಿಗೆ ಇಎಸ್ಐಸಿ ಸದಸ್ಯರಾಗುವ ಆಯ್ಕೆಯನ್ನು ಸಹ ನೀಡಲಾಗಿದೆ. ಈ ಮುಂಚೆ ಕಾರ್ಮಿಕರ ಭವಿಷ್ಯ ನಿಧಿಯು ಷೆಡ್ಯೂಲ್ ನಲ್ಲಿ ಸೇರಿಸಲಾದ ಸಂಸ್ಥೆಗಳಿಗೆ ಮಾತ್ರ ಅನ್ವಯವಾಗುತ್ತಿತ್ತು ಆದರೆ ಇನ್ನೂ ಮುಂದೆ 20 ಕಾರ್ಮಿಕರನ್ನು ಹೊಂದಿರುವ ಎಲ್ಲಾ ಸಂಸ್ಥೆಗಳಿಗೂ ಇದು ಕಡ್ಡಾಯವಾಗಿ ಅನ್ವಯವಾಗುತ್ತದೆ ಮತ್ತು 20 ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಿಗೆ ಇಪಿಎಫ್‌ಒಗೆ ಸೇರ್ಪಡೆಗೊಳ್ಳುವ ಆಯ್ಕೆಯನ್ನು ಸಹ ನೀಡಲಾಗುತ್ತದೆ.ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಒದಗಿಸಲು ವಿವಿಧ ಯೋಜನೆಗಳನ್ನು ರೂಪಿಸಲು ಈ ಸಂಹಿತೆಗಳಡಿಯಲ್ಲಿ ಅವಕಾಶ ನೀಡಲಾಗಿದೆ. ಈ ಯೋಜನೆಗಳನ್ನು ಕಾರ್ಯಗತಗೊಳಿಸಲು “ಸಾಮಾಜಿಕ ಭದ್ರತಾ ನಿಧಿಯನ್ನು” ಕೂಡ ರಚಿಸಲಾಗುತ್ತದೆ ಎಂದು ಸರಕಾರ ಹೇಳಿದೆ”ಪ್ಲಾಟ್‌ಫಾರ್ಮ್ ಕೆಲಸಗಾರರು ಅಥವಾ ಜಿಐಜಿ ಕೆಲಸಗಾರ” ರನ್ನು ಕೂಡ ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ತರುವ ಕೆಲಸವನ್ನು ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ ಮಾಡಲಾಗಿದೆ. ಈ ವರ್ಗದ ಕಾರ್ಮಿಕರನ್ನು ಸಾಮಾಜಿಕ ಭದ್ರತೆಗೆ ಒಳಪಡಿಸುವ ಅಭೂತಪೂರ್ವ ಹೆಜ್ಜೆ ಇಟ್ಟ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ.ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಉದ್ಯೋಗಿಗಳಿಗೆ ಗ್ರಾಚ್ಯುಟಿಗಾಗಿ ಅವಕಾಶ ಕಲ್ಪಿಸಲಾಗಿದೆ ಮತ್ತು ಇದಕ್ಕಾಗಿ ಕನಿಷ್ಠ ಸೇವಾ ಅವಧಿಗೆ ಯಾವುದೇ ಷರತ್ತು ಇರುವುದಿಲ್ಲ. ಮೊದಲ ಬಾರಿಗೆ, ಒಪ್ಪಂದದ ಮೇಲೆ ನಿಗದಿತ ಅವಧಿಗೆ ಕೆಲಸ ಮಾಡುವ ಉದ್ಯೋಗಿಗೆ ಕೂಡ ಸಾಮಾನ್ಯ ನೌಕರನಂತೆ ಸಾಮಾಜಿಕ ಭದ್ರತೆಯ ಹಕ್ಕನ್ನು ನೀಡಲಾಗಿದೆ.ಅಸಂಘಟಿತ ವಲಯದ ಕಾರ್ಮಿಕರಿಗಾಗಿ ರಾಷ್ಟ್ರೀಯ ದತ್ತಾಂಶ ಸಂಗ್ರಹ ಮಾಡಲಾಗುವುದು.ಈ ಎಲ್ಲ ಕಾರ್ಮಿಕರ ನೋಂದಣಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಮಾಡಲಾಗುವುದು ಮತ್ತು ಈ ನೋಂದಣಿಯನ್ನು ಸ್ವಯಂ ಪ್ರಮಾಣೀಕರಣದ ಆಧಾರದ ಮೇಲೆ ಸರಳೀಕೃತ ವಿಧಾನದಲ್ಲಿ ಮಾಡಲಾಗುತ್ತದೆ. ಅಸಂಘಟಿತ ವಲಯದ ಫಲಾನುಭವಿಗಳಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳನ್ನು ವಿಸ್ತರಿಸಲು ಇದು ಅನುಕೂಲವಾಗಲಿದೆ. ಈ ದತ್ತಾಂಶದ ಸಹಾಯದಿಂದ ಅಸಂಘಟಿತ ವಲಯದ ಕಾರ್ಮಿಕರು ಸಾಮಾಜಿಕ ಭದ್ರತೆಯ ಫಲಾನುಭವವನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಮುಖವಾಗಿ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳ ಬಗ್ಗೆ ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿ ನೀಡುವ ಕೆಲಸವನ್ನು ಸರಕಾರವೇ ಮಾಡಲಿದ್ದು. ಈ ಯೋಜನೆಯ ಭಾಗವಾಗಿ 20 ಅಥವಾ ಹೆಚ್ಚಿನ ಕಾರ್ಮಿಕರನ್ನು ಹೊಂದಿರುವ ಎಲ್ಲಾ ಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ಕೆಲಸದ ಬಗ್ಗೆ ವರದಿ ಮಾಡುವುದು ಕಡ್ಡಾಯವಾಗಿದೆ. ಈ ಮಾಹಿತಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಒದಗಿಸುವ ಕೆಲಸವನ್ನು ಸರಕಾರದ ನೇತ್ರತ್ವದಲ್ಲೇ ಮಾಡಲಾಗುವುದು.
ಇಷ್ಟೊಂದು ಬದಲಾವಣೆಗಳನ್ನು ಮಾಡಿರುವ ಕೇಂದ್ರ ಸರಕಾರ ತಮ್ಮ ತಮ್ಮ ರಾಜ್ಯಗಳಿಗೆ ಅನುಗುಣವಾಗಿ ಇದನ್ನು ಬದಲಾಯಿಸಿಕೊಳ್ಳುವ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಿರುವುದು ಗಮನಾರ್ಹ ಸಂಗತಿ. ವಿಧ ವಿಧವಾದ ಪರವಾನಿಗೆ, ಬೇರೆ ಬೇರೆ ಕಾನೂನಿನಡಿಯಲ್ಲಿ ನೊಂದಣಿ ಮತ್ತು ‘ಕಂಪ್ಲೈಯೆನ್ಸ್’ ಗಳ ಹೊರೆ ಅನೇಕ ಉದ್ಯಮಗಳನ್ನು ಅಲ್ಲಾಡಿಸಿರುವುದಂತೂ ಸತ್ಯ ಈ ಹೊಸ ಕಾರ್ಮಿಕ ಕಾನೂನಿನಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ದೊರಕುವ ಲಕ್ಷಣಗಳು ಕಾಣಿಸುತ್ತಿವೆ. ಲೇಬರ್ ಕಂಪ್ಲೈಯೆನ್ಸ್ ಗಳ ತಪಾಸಣೆಯನ್ನು ವೆಬ್ ಆಧಾರಿತ ವ್ಯವಸ್ಥೆಯ ಮೂಲಕ ಮಾಡಲಾಗುವುದು ಎಂದು ಸರಕಾರ ಹೇಳಿರುವುದು ನಿಜಕ್ಕೂ ಖುಷಿಯ ವಿಚಾರ. ದೇಶದ ಬೆಳವಣಿಗೆಗೆ ಮಾರಕವಾಗಿರುವ ‘ಇನ್ಸ್‌ಪೆಕ್ಟರ್ ರಾಜ್’ಅನ್ನು ಕೊನೆಗಾಣಿಸಿ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಈ ಸಂಹಿತೆಗಳು ಕೆಲಸ ಮಾಡಲಿವೆ. ಇದೆಲ್ಲದರ ಜೊತೆಗೆ ಈ ಮಹತ್ವದ ಕಾನೂನುಗಳು ಹೊಸ ಹೊಸ ಕೈಗಾರಿಕೆಗಳಿಂದ ಹೂಡಿಕೆಯನ್ನು ಆಕರ್ಷಿಸಲು ಸಹಾಯವನ್ನಂತೂ ಮಾಡುತ್ತವೆ. ಈ ಕಾರ್ಮಿಕ ಸಂಹಿತೆಗಳು ದೇಶದಲ್ಲಿ ಶಾಂತಿಯುತ ಮತ್ತು ಸಾಮರಸ್ಯದ ಕೈಗಾರಿಕಾ ಸಂಬಂಧಗಳನ್ನು ಉತ್ತೇಜಿಸುವುದರ ಜೊತೆ ಜೊತೆಗೆ ಉದ್ಯಮ, ಉದ್ಯೋಗ, ಆದಾಯ, ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಕಾರಣವಾಗುತ್ತದೆ ಮತ್ತು ಕಾರ್ಮಿಕರಿಗೆ ಹೆಚ್ಚಿನ ಆದಾಯವನ್ನು ನೀಡುತ್ತದೆ ಹಾಗೂ ಜೊತೆ ಜೊತೆಗೆ ಇದು ವಿದೇಶಿ ನೇರ ಹೂಡಿಕೆ ಮತ್ತು ಉದ್ಯಮಿಗಳಿಂದ ದೇಶೀಯ ಹೂಡಿಕೆಯನ್ನು ಆಕರ್ಷಿಸಲು ಸಹಾಯ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.ಈ ಕಾನೂನು ನೂರು ಪ್ರತಿಶತ ಸರಿಯಾಗಿದೆ ಅನ್ನುವುದು ಇಲ್ಲಿನ ವಾದವಲ್ಲ ಆದರೆ ಇದು ಕಾರ್ಮಿಕ ವಿರೋಧಿ ಕಾನೂನು ಖಂಡಿತವಾಗಿಯೂ ಅಲ್ಲ. ಈಗಾಗಲೇ ಸೊ ಕಾಲ್ಡ್ ಕಾರ್ಮಿಕ ಸಂಘಟನೆಗಳು ಈ ಸಂಹಿತೆಗಳನ್ನು ವಿರೋಧಿಸಿ ಮಾತನಾಡುತ್ತಿವೆ ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಈ ಕಾನೂನುಗಳನ್ನು ಅತ್ಯಂತ ವ್ಯವಸ್ಥಿತವಾಗಿ ಜಾರಿ ಮಾಡುವ ಕಡೆ ಗಮನ ಹರಿಸಿದರೆ ಒಳ್ಳೆಯದು.