ಅಯೋಧ್ಯೆಯಲ್ಲಿ ಬಾಬರ್ ಕಟ್ಟಿಸಿದ್ದೆನ್ನಲಾದ ಹಳೆಯ ವಿವಾದಾಸ್ಪದ ಕಟ್ಟಡ ೧೮ ವರ್ಷಗಳ ಹಿಂದೆ ಧ್ವಂಸಗೊಂಡಿದ್ದು, ಇದಕ್ಕೂ ಮುನ್ನ ರಾಮಶಿಲಾ ಯಾತ್ರೆ, ರಾಮ ಜ್ಯೋತಿ ಯಾತ್ರೆಗಳ ಮೂಲಕ ದೇಶಾದ್ಯಂತ ಜನಜಾಗೃತಿಯ ಕೆಲಸ ನಡೆದಿತ್ತು. ರಾಮಜನ್ಮಭೂಮಿಯಲ್ಲಿ ಲಕ್ಷಾಂತರ ಜನರಿಂದ ಕರಸೇವೆಯೂ ನಡೆಯಿತು. ಹಿಂದೂ ಸಮಾಜದ ಶಕ್ತಿಯ ಪರಿಚಯ ವಿಶ್ವಕ್ಕಾಯಿತು. ಈ ಎಲ್ಲಾ ಬೆಳವಣಿಗೆಗಳಿಂದಾಗಿ ದೇಶದಲ್ಲಿ ಅಯೋಧ್ಯಾ ಅಂದೋಲನವು ಸ್ವಾತಂತ್ರ್ಯಾನಂತರ ನಡೆದ ಅತಿ ದೊಡ್ಡ ಆಂದೋಲನ ಎಂಬ ಸ್ಥಾನ ಪಡೆಯಿತು. ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಮತ್ತೆ ಜನಜಾಗೃತಿ ಮೂಡಿಸಲು ವಿಶ್ವ ಹಿಂದು ಪರಿಷತ್ ನಿರ್ಧರಿಸಿದ್ದು, ಈ ಕಾರ್ಯಕ್ಕೆ ಜನಬೆಂಬಲವನ್ನು ಕ್ರೋಢೀಕರಿಸಲಿದೆ. ಆ ಹಿನ್ನೆಲೆಯಲ್ಲಿ ಒಂದು ಲೇಖನ.
- ಆಗಸ್ಟ್ ೧೬ರಿಂದ ಧಾರ್ಮಿಕ ನಾಯಕರ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ವಿಶ್ವ ಹಿಂದೂ ಪರಿಷತ್ ಉದ್ದೇಶಿಸಿದೆ. ಮಂದಿರ ನಿರ್ಮಾಣಕ್ಕೆ ಬೇಕಾಗುವ ಕೆತ್ತನೆಗಳ ಕಾರ್ಯ ಈಗಾಗಲೇ ಹಲವು ವರ್ಷಗಳಿಂದ ನಡೆಯುತ್ತಿದ್ದು, ಯಾವುದೇ ಕ್ಷಣದಲ್ಲಿ ಮಂದಿರ ನಿರ್ಮಾಣಕ್ಕೆ ವಿಹಿಂಪ ಸಜ್ಜಾಗಿದೆ. ದೇಶದ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರಲು ಯಾವ ಸರಕಾರಕ್ಕೂ ಅಧಿಕಾರವಿಲ್ಲ, ಮಂದಿರ ನಿರ್ಮಾಣವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಇತ್ತೀಚಿಗೆ ಅಯೋಧ್ಯೆಯಲ್ಲಿ ನಡೆದ ಸಂತರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಶ್ರೀರಾಮ ಜನ್ಮಭೂಮಿ
ಶ್ರೀರಾಮ ಜನಿಸಿದ್ದು ಅಯೋಧ್ಯೆಯಲ್ಲಿ ಎ೦ದು ಬಹುತೇಕ ಎಲ್ಲಾ ರಾಮಾಯಣಗಳೂ ವಾಲ್ಮೀಕಿ ರಾಮಾಯಣ, ತುಳಸೀ ರಾಮಾಯಣ, ಕಾಳಿದಾಸನ ರಘುವ೦ಶ ಮತ್ತು ಅನೇಕ ಬೌದ್ಧ ಮತ್ತು ಜೈನ ಬರಹಗಳು ತಿಳಿಸುತ್ತವೆ. ಈ ಎಲ್ಲಾ ರಚನೆಗಳೂ ಅಯೋಧ್ಯೆಯ ಇತಿಹಾಸದ ಬಗ್ಗೆ ಅ೦ದರೆ ಅದರ ಭೌಗೋಳಿಕ ಅಸ್ತಿತ್ವ, ಶ್ರೀಮ೦ತ ಶಿಲ್ಪಕಲೆ, ಅಯೋಧ್ಯೆಯ ಸೌ೦ದರ್ಯದ ಬಗ್ಗೆ ಬಹಳ ವಿವರವಾಗಿ ವರ್ಣಿಸಿವೆ. ಅಯೋಧ್ಯೆ ಅನೇಕ ಸು೦ದರವಾದ ಅರಮನೆಗಳು ಹಾಗೂ ದೇವಾಲಯಗಳನ್ನು ಹೊ೦ದಿತ್ತೆ೦ದು ತಿಳಿಸುತ್ತವೆ ಈ ಗ್ರಂಥಗಳು. ಅಯೋಧ್ಯಾ ನಗರಿಯು ಸರಯೂ ನದಿಯ ದಡದಲ್ಲಿದ್ದು, ಒ೦ದು ಪಾರ್ಶ್ವದಲ್ಲಿ ಗ೦ಗ ಮತ್ತು ಪಾ೦ಚಾಲ ದೇಶಗಳನ್ನು ಮತ್ತೊ೦ದು ಪಾರ್ಶ್ವದಲ್ಲಿ ಮಿಥಿಲಾ ನಗರಿಯನ್ನು ಸರಹದ್ದಾಗಿ ಪಡೆದಿತ್ತು.
ಬಾಲ್ಯದಿಂದಲೇ ರಾಮಾಯಣ ಮತ್ತಿತರ ಗ್ರಂಥಗಳಲ್ಲಿರುವ ಆದರ್ಶಗಳು, ಜೀವನ ಧರ್ಮಗಳನ್ನು ಹಿರಿಯರ ಮೂಲಕ, ಜಾನಪದ ಕಥೆ, ನಾಟಕ, ಇತರ ಕಲೆಗಳ ಮೂಲಕ ಕಲಿತು ಅವುಗಳ ಆಧಾರದಲ್ಲೇ ಜೀವನವನ್ನು ರೂಪಿಸುವ ಭಾರತೀಯರಿಗೆ ರಾಮಾಯಣ ಜೀವನದ ಒಂದು ಭಾಗ. ಎಷ್ಟೇ ಪ್ರಾಚೀನವಾದರೂ ರಾಮಾಯಣ ಇಂದಿಗೂ ಮನೆಮಾತು. ರಾಮನ ಜನ್ಮಸ್ಥಳ ಎಲ್ಲಿ ಎಂಬ ಪ್ರಶ್ನೆಗೆ ಭಾರತದ ಪ್ರತಿಯೊಂದು ಮಗುವೂ ಹೇಳುವ ಒಂದೇ ಉತ್ತರ ’ಅಯೋಧ್ಯೆ’. ಇಂತಹ ಒಂದು ವಾತಾವಾರಣದಾಲ್ಲಿ ಬೆಳೆದ ಭಾರತೀಯರು ತಮ್ಮ ಆದರ್ಶ ಪುರುಷನ ಜನ್ಮಸ್ಥಳದಲ್ಲಿ ರಾಮನ ಒಂದು ಮಂದಿರವನ್ನು ಕಟ್ಟಲೂ ಸಾಧ್ಯವಿಲ್ಲ ಎಂಬುದನ್ನು ಅರಗಿಸಿಕೊಳ್ಳಲೂ ಸಾಧ್ಯವಿಲ್ಲ. ಆಂದೋಲನ ಇಷ್ಟೊಂದು ಪ್ರಭಾವಶಾಲಿಯಾಗಲು ಇರುವ ಹಿನ್ನೆಲೆ ಇದು.
ಮಂದಿರ-ಮಸೀದಿ
ವಿವಾದದ ಮೂಲವಿರುವುದು ಅಯೋಧ್ಯೆಯಲ್ಲಿರುವ ವಿವಾದಾಸ್ಪದ ಕಟ್ಟಡ ಮಸೀದಿಯಾಗಿತ್ತು ಎಂಬ ವಾದದಲ್ಲಿ. ವಿವಾದಿತ ಸ್ಥಳದಲ್ಲಿದ್ದ ರಾಮ ಮಂದಿರವನ್ನು ಮೊಘಲ್ ದೊರೆ ಬಾಬರ್ ಭಾಗಶ: ಧ್ವಂಸಗೊಳಿಸಿ ಅದನ್ನು ಮಸೀದಿಯಾಗಿ ಪರಿವರ್ತಿಸಿದ ಎಂದು ಹೇಳಲಾಗಿದೆ. ಆದರೆ ಅನೇಕ ವರ್ಷಗಳಿಂದ ಅಲ್ಲಿ ಯಾವುದೇ ಪ್ರಾರ್ಥನೆ ಅಥವಾ ಪೂಜೆಗಳು ನಡೆಯುತ್ತಿರಲಿಲ್ಲ. ಹಾಗಾಗಿ ಅದನ್ನು ಮಸೀದಿ ಎಂದು ಹೇಳುವುದು ಕೇವಲ ವಿವಾದಕ್ಕಾಗಿಯೇ ಎಂಬುದು ಸ್ಫಷ್ಟ.
ಮುಸ್ಲಿಮರು ಸೇರಿದಂತೆ ಇತರ ಮತೀಯರಿಗೆ ಭಾರತದ ನೆಲದಲ್ಲಿ ತಮ್ಮ ಮತಾಚರಣೆಗೆ, ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಿಕೊಳ್ಳಲು ಇಲ್ಲಿ ಮುಕ್ತ ಅವಕಾಶ ನೀಡಲಾಗಿದೆ. ಅಯೋಧ್ಯೆಯ ರಾಮ ಜನ್ಮಭೂಮಿ ಪ್ರದೇಶವನ್ನು ಹೊರತುಪಡಿಸಿ ಇತರೆಡೆ ಮಸೀದಿ ನಿರ್ಮಿಸಲು ಅವರು ಸ್ವತಂತ್ರರಾಗಿದ್ದಾರೆ. ಹೀಗಿರುವಾಗ, ಅಲ್ಲಿ ಮಂದಿರ ನಿರ್ಮಾಣವನ್ನು ತಡೆಯಲು ರಾಜಕೀಯ ಕಾರಣಗಳೇ ಪ್ರಮುಖ ವಾಗಿವೆಯೇ ಹೊರತು ಮತಶ್ರದ್ಧೆಯಲ್ಲ.
ವಿವಾದಿತ ಕಟ್ಟಡ ನೆಲಸಮಗೊಂಡ ಸಮಯದಲ್ಲಿ ಸಿಕ್ಕಿದ ಸಾಕ್ಷ್ಯಗಳು ಅಲ್ಲಿ ರಾಮ ಮಂದಿರವಿತ್ತೆಂಬುದನ್ನು ಢೃಡೀಕರಿಸಿ ದ್ದವು. ಅಲ್ಲಿನ ಕಂಬಗಳಲ್ಲಿ ದೇವತೆಗಳ ಕೆತ್ತನೆಗಳು, ಗಂಟೆ, ಪೂಜಾ ಸಾಮಾಗ್ರಿಗಳು ಇತ್ಯಾದಿ ಅಲ್ಲಿನ ಮಣ್ಣಿನಲ್ಲಿ ಹುದುಗಿದ್ದುದು ಅಲ್ಲಿ ಮಂದಿರವಿತ್ತೆಂಬುದಕ್ಕೆ ಸಾಕ್ಷಿಗಳಾಗಿವೆ.
ತುಷ್ಟೀಕರಣದ ರಾಜಕಾರಣದಿಂದಾಗಿ ಮುಸ್ಲಿಮರಿಗೂ ಬೇಡವಾಗಿದ್ದ ಮಸೀದಿಗಾಗಿ ಅವರನ್ನು ಹೋರಾಡುವಂತೆ ಉತ್ತೇಜಿ
ಸಿದ್ದು ಕೆಟ್ಟ ರಾಜಕೀಯದ ಪರಿಣಾಮಗಳಿಗೆ ಉದಾಹರಣೆ.
- ಅಯೋಧ್ಯೆಯು ಶ್ರೀರಾಮನ ಜನ್ಮಭೂಮಿಯೋ ಅಥವಾ ಬಾಬರನ ಮಸೀದಿಯೋ ಎಂಬ ಶತಮಾನಗಳ ವಿವಾದದ ಕುರಿತು ವಿಚಾರಣೆ ಮುಗಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠವು ಸೆಪ್ಟೆಂಬರ್ ತಿಂಗಳಲ್ಲಿ ತನ್ನ ಮಹತ್ವದ ತೀರ್ಪನ್ನು ನೀಡಲಿದೆ. ಆದರೆ ತೀರ್ಪಿಗೂ ಮೊದಲು ರಾಜಿ ಸಂಧಾನದ ಮೂಲಕ ಸಮಸ್ಯೆ ಪರಿಹರಿಸಲು ಸಾಧ್ಯವೇ ಎಂದು ಪರಿಶೀಲನೆ ನಡೆಸುವಂತೆ ಕೋರ್ಟ್ ಸಂಬಂಧಪಟ್ಟವರಲ್ಲಿ ಮನವಿ ಮಾಡಿಕೊಂಡಿದೆ. ಪೀಠವು ಅಂತಿಮ ತೀರ್ಪು ನೀಡುವ ಮೊದಲು ರಾಜಿ ಒಪ್ಪಂದಕ್ಕೆ ಬರುವುದು ಸಾಧ್ಯವಾದರೆ ಸಂಬಂಧಪಟ್ಟವರು ಈ ಕುರಿತು ನ್ಯಾಯಾಲಯದ ವಿಶೇಷ ಕರ್ತವ್ಯಾಧಿಕಾರಿಯನ್ನು ಭೇಟಿಯಾಗಲು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಮೂರ್ತಿ ಎಸ್.ಯು. ಖಾನ್, ಸುಧೀರ್ ಅಗರ್ವಾಲ್ ಮತ್ತು ಡಿ.ವಿ. ಶರ್ಮಾರವರನ್ನೊಳಗೊಂಡ ವಿಶೇಷ ಪೀಠವು ಸಲಹೆ ನೀಡಿದೆ.
ಲಿಬರ್ಹಾನ್ ವರದಿ
ಅಯೋಧ್ಯೆಯ ಕಟ್ಟಡ ನೆಲಸಮವಾದುದರ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರಕಾರ ನ್ಯಾ| ಲಿಬರ್ಹಾನ್ ಅವರ ನೇತೃತ್ವದಲ್ಲಿ ತನಿಖಾ ಅಯೋಗವನ್ನು ರಚಿಸಿತ್ತು. ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿ(೧೭ ವರ್ಷ) ತೆಗೆದುಕೊಂಡು, ೪೮ ಬಾರಿ ತನಿಖಾ ಅವಧಿ ವಿಸ್ತರಣೆಗಳನ್ನು ಪಡೆದು ಕೊಂಡು ಲಿಬರ‍್ಹಾನ್ ಅಯೋಗ ವರದಿಯೊಂದನ್ನು ಸಿದ್ಧಪಡಿಸಿತು. ಅಷ್ಟು ಸಮಯದಲ್ಲಿ ನಡೆಸಿದ ತನಿಖೆಯ ಅಂಗವಾಗಿ ಪ್ರಮುಖ ಅರೋಪಿಗಳನ್ನೇ ಅದು ವಿಚಾರಣೆ ನಡೆಸಿಲ್ಲ ಎಂಬುದು ಅಚ್ಚರಿ. ವರದಿಯ ತುಂಬಾ ಆಗಿರಬಹುದು, ಹೀಗಿರಬಹುದಾದ, ಸಾಧ್ಯತೆಯಿದೆ ಮೊದಲಾದ ಸಂದೇಹಗಳನ್ನು ಹೊತ್ತಿರುವ ತನಿಖೆಗಾಗಿ ಅಷ್ಟೊಂದು ವೆಚ್ಚ ಮಾಡುವ ಅಗತ್ಯ ಸರಕಾರಕ್ಕಿತ್ತೆ?
ಅಲ್ಲದೆ ಈ ವರದಿಯನ್ನು ಉದ್ದೇಶಪೂರ್ವಕವಾಗಿಯೇ ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ನ್ಯಾ| ಲಿಬರ‍್ಹಾನ್ ಅವರು ಬಳಸಿರುವ ಪದಗಳು ಹಾಗೂ ಮಾಧ್ಯಮಕ್ಕೆ ವರದಿ ಸೋರಿಕೆಯಾಗಿದ್ದನ್ನು ನೋಡಿದರೆ ಇಲ್ಲೇನೋ ಉದ್ದೇಶವಿದೆಯೆಂಬುದು ಮಾತ್ರ ಸ್ಪಷ್ಟವಾಗುತ್ತದೆ.
ಭಾರತದ ಮೇಲೆ ಧಾಳಿ ನಡೆಸಿದ ಬಾಬರ್ ಕಟ್ಟಿದ ಒಂದು ಕಟ್ಟಡ ರಾಷ್ಟ್ರೀಯ ಸ್ಮಾರಕವಾಗಬೇಕು, ಅದನ್ನು ಧ್ವಂಸಗೊಳಿಸಿ ರುವುದನ್ನು ತಪ್ಪು ಎಂದೇ ಭಾವಿಸಿದರೂ, ಯಾವುದೇ ಪ್ರಾರ್ಥನೆ ನಡೆಯದ ಕಟ್ಟಡದ ಮೇಲೆ ಮುಸ್ಲಿಮರಿಗೆ ಅಷ್ಟೊಂದು ಪ್ರೀತಿ ಇರುವುದೇ ಆದರೂ, ಮಂದಿರವನ್ನು ಕೆಡವಿದ ಬಾಬರನ ಕೆಲಸ ತಪ್ಪು ಎಂದು ಒಪ್ಪಿಕೊಳ್ಳಲು ಅವರಿಂದೇಕೆ ಆಗುವುದಿಲ್ಲ? ದೇಶದ ಇತಿಹಾಸ ಪುರುಷನ ಸ್ಮಾರಕವಾಗಬೇಕಾದ ಮಂದಿರವನ್ನು ಬಾಬರ್ ಕೆಡವಿದಾಗ ಹಿಂದುಗಳ ಭಾವನೆಗಳು ಎಷ್ಟು ಘಾಸಿಗೊಂಡಿರಲಿಕ್ಕಿಲ್ಲ ಎಂಬುದನ್ನು ಯೋಚಿಸಬೇಡವೇ?
ಕೋರ್ಟಿನ ಕಟಕಟೆಯಲ್ಲಿ…
೧೯೫೦ರಲ್ಲಿ ಗೋಪಾಲ್ ಸಿಂಗ್ ವಿಶಾರದ್ ಎಂಬವರು ಅಯೋಧ್ಯೆಯಲ್ಲಿನ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ಅವಕಾಶಕ್ಕೆ ಸಂಬಂಧಪಟ್ಟಂತೆ ಮೊದಲ ಪ್ರಕರಣ ದಾಖಲಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಅದೇ ವರ್ಷ ಪರಮಹಂಸ ರಾಮಚಂದ್ರ ದಾಸ್ ಎರಡನೇ ಪ್ರಕರಣ ದಾಖಲಿಸಿ, ನಂತರ ಹಿಂದಕ್ಕೆ ಪಡೆದುಕೊಂಡಿದ್ದರು.
ವಿವಾದಿತ ಪ್ರದೇಶವನ್ನು ಬಿಟ್ಟುಕೊಡುವಂತೆ ನಿರ್ದೇಶನ ನೀಡಬೇಕೆಂದು ೧೯೫೯ರಲ್ಲಿ ನಿರ್ಮೋಹಿ ಅಖಾಡಾ ಎಂಬ ಸಂಸ್ಥೆ ಮೂರನೇ ದಾವೆ ಹೂಡಿತ್ತು. ನಂತರ ೧೯೬೧ರಲ್ಲಿ ಡಿಕ್ಲರೇಶನ್ ಮತ್ತು ಒಡೆತನಕ್ಕಾಗಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ನಾಲ್ಕನೇ ಪ್ರಕರಣ ದಾಖಲಿಸಿತ್ತು.
ಡಿಕ್ಲರೇಶನ್ ಮತ್ತು ಒಡೆತನ ನೀಡಬೇಕೆಂದು ೧೯೮೯ರಲ್ಲಿ ಭಗವಾನ್ ಶ್ರೀ ರಾಮ್ ಲಾಲಾ ವಿರಾಜಮಾನ್ ಹೆಸರಿನಲ್ಲಿ ಐದನೇ ಪ್ರಕರಣ ದಾಖಲಾಗಿತ್ತು. ಈ ಒಟ್ಟಾರೆ ಐದು ಪ್ರಕರಣಗಳಲ್ಲಿ ಎರಡನೇ ಪ್ರಕರಣವೊಂದು ಮಾತ್ರ ಹಿಂದಕ್ಕೆ ಪಡೆಯಲ್ಪಟ್ಟಿರುವುದರಿಂದ ನಾಲ್ಕು ಪ್ರಕರಣಗಳು ಪ್ರಸಕ್ತ ಚಾಲ್ತಿಯಲ್ಲಿವೆ.
ಫೈಜಾಬಾದ್ ಸಿವಿಲ್ ನ್ಯಾಯಾಲಯ ದಲ್ಲಿದ್ದ ಈ ನಾಲ್ಕೂ ಪ್ರಕರಣಗಳನ್ನು ೧೯೮೯ರಲ್ಲಿ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.
೧೯೯೫ರಲ್ಲಿ ರಾಮ ಜನ್ಮಭೂಮಿ ಪರ ೩೫ ಹಾಗೂ ಬಾಬ್ರಿ ಮಸೀದಿ ಪರ ೨೩ ಸಾಕ್ಷ್ಯಗಳನ್ನು ಹಾಜರುಪಡಿಸಲಾಗಿತ್ತು. ಒಟ್ಟಾರೆ ಸಾಕ್ಷ್ಯಗಳು ೧೫,೦೦೦ ಪುಟಗಳನ್ನೂ ಮೀರಿದ್ದವು. ಈ ಸಂಬಂಧ ವಿಚಾರಣೆ ಮುಗಿಸಿರುವ ನ್ಯಾಯಾಲಯ ಅಕ್ಟೋಬರ್ ೧ರೊಳಗೆ ತೀರ್ಪು ನೀಡಲಿದೆ.
ಇತಿಹಾಸದ ಪ್ರಕಾರ ೧೨ನೇ ಶತಮಾನದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಕಟ್ಟಲಾಗಿತ್ತು. ಆದರೆ ೧೫೨೮ರಲ್ಲಿ ರಾಮ ಮಂದಿರವನ್ನು ಧ್ವಂಸ ಮಾಡಿ ಅಲ್ಲಿ ಬಾಬ್ರಿ ಮಸೀದಿಯನ್ನು ಕಟ್ಟಲಾಗಿತ್ತು.