ಬುಧವಾರ ಬೆಳಗ್ಗೆ 6.20 ಇಡೀ ದೇಶವೇ ಹೆಮ್ಮೆಯಿಂದ ಬೀಗುವ ಕ್ಷಣ. ವಿಜ್ಞಾನಿಗಳಿಗೆ ಅಭೂತವೂರ್ವ ಸಾಧನೆಗೈದ ಅಪರೂಪದ ಘಳಿಗೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಐತಿಹಾಸಿಕ ಘಟನೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ(ಎಸ್ ಡಿಎಸ್ ಸಿ) ನಭೋಮಂಡಲಕ್ಕೆ ಚಂದ್ರಯಾನ-1 ನೌಕೆ ಯಶಸ್ವಿಯಾಗಿ ಉಡಾವಣೆಗೊಳ್ಳುವ ಮೂಲಕ ಬಾಹ್ಯಾಕಾಶ ಇತಿಹಾಸದಲ್ಲಿಯೇ ನೂತನ ಮೈಲಿಗಲ್ಲು ಸ್ಥಾಪಿಸಿತು. ಈ ಉಪಗ್ರಹ ಚಂದ್ರನ ಮೇಲೆ ಹೊಸ ಬೆಳಕು ಚೆಲ್ಲುವ ಮೂಲಕ ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಬೆಳಗಿಂದಳಾಗಲಿದೆ. ಭಾರತೀಯ ವಿಜ್ಞಾನಿಗಳ ಸಾಧನೆಗೆ ಜಗತ್ತಿನಾದ್ಯಂತ ಪ್ರಶಂಸೆಯ ಸುರಿಮಳೆ ಎಲ್ಲಡೆ ಹರ್ಷದ ವಾತಾವರಣ ಕಂಡು ಬಂದಿತು.
ಭಾರತದ ಬಾಹ್ಯಾಕಾಶದ ಪಾಲಿಗೆ ಬುಧವಾರ ಬೆಳಗ್ಗೆ ಸುವರ್ಣ ದಿನ. ರಷ್ಯಾ, ಜಪಾನ್, ಯೊರೋಪ್ ಹಾಗೂ ಚೀನಾ ನಂತರ ಚಂದ್ರನತ್ತ ಹೊರಟಿರುವ ರಾಷ್ಟ್ರ ನಮ್ಮದೇ ಎಂಬ ದಾಖಲೆ ಸ್ಥಾಪಿಸಿರುವ ದಿನವೂ ಹೌದು. ಉಡಾವಣೆಗೆ ಕೆಲವೇ ಗಂಟೆಗಳ ಮುನ್ನ ಶ್ರೀಹರಿಕೋಟಾದಲ್ಲಿ ಸಾಕಷ್ಟು ಮಳೆ ಸುರಿಯುತ್ತಿತ್ತು. ಈ ಬಗ್ಗೆ ತಲೆಕೆಡಿಸಿಕೊಳ್ಳದ ವಿಜ್ಞಾನಿಗಳು ಚಂದ್ರಯಾನ ನೌಕೆ ಜಲ ನಿರೋಧಕ. ಎಷ್ಟೇ ಮಳೆ ಸುರಿದರೂ ಉಡಾವಣೆ ರದ್ದಾಗುವುದಿಲ್ಲ ಎಂದು ಮಂಗಳವಾರ ರಾತ್ರಿ ಸ್ಪಷ್ಟಪಡಿಸಿದ್ದರು. ಇಂದು ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದರೂ ಲೆಕ್ಕಿಸದ ವಿಜ್ಞಾನಿಗಳು ಚಂದ್ರಯಾನ-1 ನೌಕೆಯನ್ನು ಯಶಸ್ವಿಯಾಗಿ ಹಾರಿಸಿ ಎಲ್ಲರ ಪ್ರಶಂಸೆಗೆ ಭಾಜನರಾಗಿದ್ದಾರೆ.
ಚಂದ್ರಯಾನ-1 ಉಪಗ್ರಹ ಹೊತ್ತೊಯ್ಯುವ ಪಿಎಸ್ಎಲ್ ವಿ ಸಿ-11ಗೆ ಮಂಗಳವಾರ ರಾತ್ರಿಯೇ ಇಂಧನ ತುಂಬುವುದು ಸೇರಿದಂತೆ ಸಕಲ ಕಾರ್ಯಗಳನ್ನು ಸಜ್ಜುಗೊಳಿಸಿದ್ದರು. ಉಡಾವಣೆಯಾದ 18 ನಿಮಿಷದಲ್ಲಿ ಬೆಂಗಳೂರಿನ ಪೀಣ್ಯ ಕೇಂದ್ರಕ್ಕೆ ಉಪಗ್ರಹದಿಂದ ಮೊದಲ ಸಂದೇಶ ಬಂದಿದೆ. ಬಳಿಕ ಈ ಸಂದೇಶವನ್ನು ಬೆಂಗಳೂರು ಬಳಿಯೇ ಇರುವ ಬ್ಯಾಲಾಳು ಕೇಂದ್ರಕ್ಕೆ ರವಾನಿಸಲಾಗಿದೆ. ಐದೂವರೆ ದಿನದ ಬಳಿಕ ಚಂದ್ರನ ಕಕ್ಷೆಯನ್ನು ಉಪಗ್ರಹ ತಲುಪಲಿದೆ. ಬಳಿಕ ಚಂದ್ರನ ದೃಶ್ಯವನ್ನು ಹತ್ತಿರದಿಂದ ಸೆರೆಹಿಡಿಯಲಿದೆ. ಇದೇ ವೇಳೆ ಉಪಗ್ರಹದಲ್ಲಿರುವ ‘ಮೂನ್ ಇಂಪ್ಯಾಕ್ಟ್ ಪ್ರೋಬ್’ ಎಂಬ ಸಾಧನ ಚಂದ್ರನ ಮೇಲೆ ಬೀಳುತ್ತದೆ. ಅದರಲ್ಲಿ ತ್ರಿವರ್ಣ ಧ್ವಜವೂ ಇರುತ್ತದೆ. ಎರಡು ವರ್ಷಗಳ ಕಾಲ ಉಪಗ್ರಹ ಚಂದ್ರನ ಸುತ್ತ ಸುತ್ತುತ್ತದೆ.
ಚಂದ್ರನ ಯಾತ್ರೆ ಭಾರತದ ಪಾಲಿಗೆ ಇದೇ ಮೊದಲು. ವಿಶ್ವದ ಪಾಲಿಗೆ ಇದು 68ನೇ ಯಾತ್ರೆಯಾಗಿದೆ. 1959ರ ಜ. 2 ರಂದು ರಷ್ಯಾ ಮೊದಲ ಯಾತ್ರೆ ಕೈಗೊಂಡಿತ್ತು. ಆದಾದ ನಂತರ ಎರಡು ಅವಧಿಯಲ್ಲೇ ಅಮೆರಿಕ ಚಂದ್ರಯಾತ್ರೆ ನಡೆಸಿತ್ತು. ಈ ಎರಡೂ ರಾಷ್ಟ್ರಗಳು ಇದುವರೆಗೂ ಒಟ್ಟು 62 ಚಂದ್ರಯಾನಗಳನ್ನು ನಡೆಸಿವೆ.
ಕೃಪೆ: ದಟ್ನ್ ಕನ್ನಡ