– Praveen Kumar Mavinakadu
“ಮೀಸಲಾತಿ ವಿಚಾರವಾಗಿ ಸೌಹಾರ್ದಯುತ ವಾತಾವರಣದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು.ಮೀಸಲಾತಿ ಕುರಿತಾದ ಚರ್ಚೆಗಳು ತೀವ್ರ ವಾದ-ಪ್ರತಿವಾದದಲ್ಲಿ ಅಂತ್ಯ ಕಾಣುತ್ತಿವೆ.ಬದಲಾಗಿ ಆ ಬಗ್ಗೆ ಸಮಾಜದ ಎಲ್ಲ ವರ್ಗಗಳ ಜನರು ಸೌಹಾರ್ದಯುತವಾಗಿ ಚರ್ಚಿಸಿದರೆ ಒಳಿತು” ಎಂದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರಾದ ಶ್ರೀ ಮೋಹನ್ ಭಾಗವತ್ ಅವರು ಇತ್ತೀಚೆಗಷ್ಟೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.ಮೀಸಲಾತಿ ಕುರಿತಾದ ಚರ್ಚೆಗಳು ತೀವ್ರ ವಾದ-ಪ್ರತಿವಾದದಲ್ಲಿ ಅಂತ್ಯ ಕಾಣುತ್ತಿವೆ ಎನ್ನುವ ಅವರ ಮಾತನ್ನು ಸತ್ಯವೆಂದು ಸಾರುವುದೇ ಉದ್ದೇಶವೇನೋ ಎನ್ನುವಂತೆ ತಾವೇ ಈ ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷಕರು ಎಂದು ಹೇಳಿಕೊಳ್ಳುವ ಮತ್ತು ಇದುವರೆಗೂ ಮೀಸಲಾತಿಯ ಬಗ್ಗೆ ಯಾವುದೇ ಸೌಹಾರ್ದಯುತ ಅಭಿವ್ಯಕ್ತಿಗೂ ಆಸ್ಪದ ಕೊಡದ ಒಂದಷ್ಟು ಶಕ್ತಿಗಳು ಎದ್ದು ಕುಳಿತು ಅವರು ಹಾಗೆ ಅಭಿಪ್ರಾಯ ವ್ಯಕ್ತಪಡಿಸಿದ್ದೇ ಮಹಾಪರಾಧ ಎನ್ನುವ ರೀತಿಯಲ್ಲಿ ತಮ್ಮ ಆಕ್ಷೇಪಣೆ ಎತ್ತಿವೆ.
ಆರ್‌ಎಸ್‌ಎಸ್ ಅಪಾಯಕಾರಿ ಉದ್ದೇಶಗಳನ್ನು ಹೊಂದಿದೆ ಎಂದು ಹಿಂದೊಮ್ಮೆ ಇಡೀ ದೇಶದ ಅಭಿಪ್ರಾಯ ಸ್ವಾತಂತ್ರ್ಯವನ್ನೇ ಕಸಿದಿದ್ದ ಇಂದಿರಾ ಗಾಂಧಿಯವರ ವಾರಸುದಾರಿಣಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ವಾದ್ರಾ ಆರೋಪಿಸಿದ್ದಾರೆ. ಆರ್‌ಎಸ್‌ಎಸ್ ಮೀಸಲಾತಿ ಕುರಿತಂತೆ ಚರ್ಚೆಯಾಗಬೇಕು ಎಂದಿರುವುದರ ಹಿಂದೆ ಸಾಮಾಜಿಕ ನ್ಯಾಯದ ನಾಶ ಪಡಿಸುವ ಗುರಿ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಅರೆ! ಶ್ರೀಮತಿ ವಾದ್ರಾ ಜೀ.. ಕೇವಲ ನೀವು ನಿಮ್ಮ ಅಜ್ಜಿಯ ಮೊಮ್ಮಗಳು ಮತ್ತು ನಿಮ್ಮ ಅಜ್ಜಿಯ ರೀತಿಯ ಮೂಗನ್ನು ಹೊಂದಿದ್ದೀರಿ ಎನ್ನುವ ಕಾರಣಕ್ಕೆ ಎಷ್ಟೆಷ್ಟೋ ಹಿರಿ ತಲೆಗಳನ್ನೆಲ್ಲಾ ಬದಿಗೆ ಸರಿಸಿ ಪಕ್ಷದಲ್ಲಿ ಉನ್ನತ ಹುದ್ದೆಗೇರಿರುವ ತಮಗೆ ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ಅರ್ಹತೆಯಾದರೂ ಎಲ್ಲಿಂದ ಬಂತು?ಇಂದಿಗೂ ಸ್ವಂತ ಬಲದಿಂದ ಸತತವಾಗಿ ಗೆಲ್ಲುತ್ತಾ ಪಕ್ಷಕ್ಕಾಗಿ ಇಡೀ ಜೀವನವನ್ನೇ ಸವೆಸಿದ ನಾಯಕರನ್ನು ಬದಿಗೆ ಸರಿಸಿ ನಿಮ್ಮ ಕುಟುಂಬದಲ್ಲೇ ಪಕ್ಷದ ಅತ್ಯುನ್ನತ ಹುದ್ದೆಯನ್ನು ಇಟ್ಟುಕೊಳ್ಳುವ ಮತ್ತು ನಿಮ್ಮ ಕುಟುಂಬಕ್ಕೆ ಇಷ್ಟವಿಲ್ಲದೇ ಬಿಟ್ಟ ಉನ್ನತ ಹುದ್ದೆಗಳನ್ನು ಮಾತ್ರ ಉಳಿದವರಿಗೆ ನೀಡುವ ನಿಮ್ಮ ಮಾದರಿಯಲ್ಲೇ ಮೀಸಲಾತಿ ವ್ಯವಸ್ಥೆ ಕೂಡಾ ಸಾಗುತ್ತಿದೆ.ಕೆಲವರು ಮೀಸಲಾತಿಯ ಫಲವನ್ನು ಅನುಭವಿಸಿ ಅನುಭವಿಸಿ ಬೇಡವೆಂದು ಬಿಟ್ಟರೆ ಮಾತ್ರ ಉಳಿದ ಶೋಷಿತರಿಗೆ ಮೀಸಲಾತಿ ಸೌಲಭ್ಯ ದೊರೆಯುತ್ತಿದೆ. ಆದ್ದರಿಂದಲೇ ಹೇಗೆ ನಿಮ್ಮ ಪಕ್ಷದಲ್ಲಿ ಪ್ರಜಾ ಪ್ರಭುತ್ವವಿದೆ ಎಂದು ಹೇಳಿದರೂ ಎಲ್ಲರಿಗೂ ಅದರ ಫಲ ದೊರೆಯುತ್ತಿಲ್ಲವೋ,ಹಾಗೆಯೇ ಈ ದೇಶದಲ್ಲೂ ಮೀಸಲಾತಿಯಿದೆ ಎಂದು ಹೇಳಿದರೂ ಬಹುಪಾಲು ಶೋಷಿತರಿಗೆ ಅದರ ಫಲ ಸಮರ್ಪಕವಾಗಿ ದೊರೆಯುತ್ತಿಲ್ಲ.
ಖಾಸಗಿ ರಂಗದಲ್ಲಿಯೂ ಮೀಸಲಾತಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಿಮ್ಮ ಪಕ್ಷದ ಅಧ್ಯಕ್ಷೆಯೂ ಆಗಿರುವ ನಿಮ್ಮ ತಾಯಿ ಹಿಂದೊಮ್ಮೆ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಿದ್ದರಲ್ಲಾ…?! ಮೀಸಲಾತಿಯ ಬಗ್ಗೆ ಯಾವುದೇ ರೀತಿಯ ಚರ್ಚೆಯೂ ಆಗಬಾರದು ಎನ್ನುವ ನೀವು ಅದು ಹೇಗೆ ಇದುವರೆಗೆ ಇಲ್ಲದ ಖಾಸಗಿ ರಂಗದಲ್ಲೂ ಪರಿಶಿಷ್ಟ ಜಾತಿ, ಪಂಗಡದವರಿಗೆ ಉದ್ಯೋಗದಲ್ಲಿ ಮೀಸಲು ನೀಡುವ ಚರ್ಚೆಗೆ ಮುಂದಾದಿರಿ? ನೀವು ಮಾಡುತ್ತೇವೆಂದು ಹೇಳ ಹೊರಟಿದ್ದೂ ಮೀಸಲಾತಿ ನೀತಿಯಲ್ಲಿನ ಬದಲಾವಣೆಗಳನ್ನೇ ತಾನೇ? ನೀವು ಹೇಳಿದರೆ ಚಮತ್ಕಾರ,ಬೇರೆಯವರು ಹೇಳಿದರೆ ಬಲಾತ್ಕಾರವೇ?
ಮೀಸಲಾತಿಯ ಬಗ್ಗೆ ಚರ್ಚೆ ಏರ್ಪಡಿಸುವ ಬದಲು ಜಾತಿ ವ್ಯವಸ್ಥೆಯ ಬಗ್ಗೆ ಚರ್ಚೆ ಏರ್ಪಡಿಸಬೇಕು ಎನ್ನುವ ಮೂಲಕ ವಿಚಾರವನ್ನು ದಿಕ್ಕುತಪ್ಪಿಸುವ ಕೆಲಸಕ್ಕೆ ಮೀಸಲಾತಿಯನ್ನೇ ಮುಂದಿಟ್ಟುಕೊಂಡು ನಾಯಕನಾಗಬೇಕೆಂದು ಹಂಬಲಿಸುತ್ತಿರುವ ರಾವಣನೆನ್ನುವ ಯುವಕ ಕೈ ಹಾಕುತ್ತಾನೆ.”ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳಾಗಿವೆ.ಆದರೆ ದೇಶದ ಜನಸಂಖ್ಯೆಯ ಶೇ.54 ರಷ್ಟಿರುವ ದಲಿತರ ಬಳಿ ಸ್ವಲ್ಪವೂ ಜಮೀನು ಇಲ್ಲ.ಹೀಗಿರುವಾಗ ಮೀಸಲಾತಿ ವಿಚಾರ ಚರ್ಚೆಗೆ ಆಹ್ವಾನ ನೀಡುವ ಮೂಲಕ ಆರ್‌ಎಸ್‌ಎಸ್ ತನ್ನ ದಲಿತ ವಿರೋಧಿ ನೀತಿ ಪ್ರದರ್ಶಿಸುತ್ತಿದೆ” ಎನ್ನುವುದು ಸ್ವ ಘೋಷಿತ ದಲಿತ ನಾಯಕ ರಾವಣನ ವಾದ!
ಅಲ್ಲಪ್ಪಾ ರಾವಣಾ… ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳಾಗಿವೆ ಮತ್ತು ಅದರಲ್ಲಿ ಸುಮಾರು ಎಪ್ಪತ್ತು ವರ್ಷಗಳಿಂದ ಮೀಸಲಾತಿ ಜಾರಿಯಲ್ಲಿದೆ.ಹಾಗಿದ್ದೂ ಶೇ.54 ರಷ್ಟಿರುವ ದಲಿತರ ಬಳಿ ಸ್ವಲ್ಪವೂ ಜಮೀನು ಇಲ್ಲ ಎಂದರೆ ಮೀಸಲಾತಿ ವ್ಯವಸ್ಥೆಯಲ್ಲೇ ಏನೋ ಬದಲಾವಣೆಯಾಗಬೇಕೆಂದೇ ಅರ್ಥವಲ್ಲವೇ? ಹಾಗೇನೂ ಇಲ್ಲದಿದ್ದರೆ ಮೂರು ತಲೆಮಾರು ಮೀಸಲಾತಿ ಅನುಭವಿಸಿಯೂ ಶೇ.54 ರಷ್ಟಿರುವ ದಲಿತರು ಭೂ ರಹಿತರಾಗಿಯೇ ಇರಲು ಕಾರಣವೇನು?
ರಾವಣಾ.. ದಲಿತ ನಾಯಕರಲ್ಲೇ ಹತ್ತಾರು/ನೂರಾರು ಕೋಟಿ ಆಸ್ತಿ ಪಾಸ್ತಿ ಹೊಂದಿರುವ ಹಲವಾರು ಜನರನ್ನು ನಾನು ತೋರಿಸಬಲ್ಲೆ.ಅವರ ಪ್ರಮಾಣ ಶೇ. ಒಂದರಷ್ಟಿದೆ ಎಂದುಕೊಂಡರೂ ನಿಮ್ಮ ಪ್ರಕಾರ ಉಳಿದ ಶೇ.53 ರಷ್ಟು ದಲಿತರು ಭೂ ರಹಿತರಾಗಿದ್ದಾರೆಂದರೆ ಮೀಸಲಾತಿಯ ಲಾಭವನ್ನು ಕೆಲವೇ ಕೆಲವರು ಅನುಭವಿಸುತ್ತಿದ್ದಾರೆ ಎಂದಾಯಿತಲ್ಲವೇ?
ನೂರಾರು ಕೋಟಿಯ ಶೇ.1 ರಷ್ಟು ಬಲಾಢ್ಯರ ಪರ ಅದೇ ಭೂ ರಹಿತ ಶೋಷಿತರನ್ನು ಮುಂದಿಟ್ಟುಕೊಂಡು ಮೀಸಲಾತಿಯ ವಿಚಾರ ಚರ್ಚೆಯಾಗದಂತೆ ಮಾಡುವುದರಿಂದ ರಾವಣನ ಹೊಟ್ಟೆ ತುಂಬಬಹುದೇ ಹೊರತೂ ಶೇ.53 ರಷ್ಟು ಭೂ ರಹಿತ ಶೋಷಿತರ ಪರ ನಿಂತು ಶೇ.1 ರಷ್ಟು ಬಲಾಢ್ಯರನ್ನು ಎದುರು ಹಾಕಿಕೊಳ್ಳುವುದರಿಂದ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೂ ಸಿಗಲಾರದು. ಮೀಸಲಾತಿಯ ಬಗ್ಗೆ ಚರ್ಚೆಯಾಗಬಾರದು ಎನ್ನುತ್ತಿರುವುದರ ರಾವಣನ ಹಿಂದಿನ ಅಸಲಿಯತ್ತು ಗೊತ್ತಾಯಿತಲ್ಲವೇ?
ಮೀಸಲಾತಿಯ ವಿಚಾರ ಚರ್ಚೆಯಾದರೆ ಮುಂದೊಮ್ಮೆ ಅದು ದಮನಿತ ವರ್ಗಗಳ ಕೈ ತಪ್ಪಿ ಮೇಲ್ಜಾತಿಯವರ ತೆಕ್ಕೆಗೆ ಹೋಗಿಬಿಡುತ್ತದೆ ಎನ್ನುವ ಭಯ ಹುಟ್ಟಿಸಿ ಮೀಸಲಾತಿ ವಿಚಾರದ ಚರ್ಚೆಯ ವಿರುದ್ಧ ಎತ್ತಿಕಟ್ಟುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಣುವ ಸಂಗತಿ. ಮೀಸಲಾತಿಯೆಂದರೆ ಬಡವನನ್ನು ಶ್ರೀಮಂತನನ್ನಾಗಿ ಮಾಡುವುದಲ್ಲ,ಅದು ಸಾಮಾಜಿಕವಾಗಿ ಹಿಂದುಳಿದವರನ್ನು ಮುಂದೆ ತರಲು ಇರುವ ಸಾಧನ ಎನ್ನುವುದನ್ನೂ ಒಪ್ಪೋಣ. ಕರ್ನಾಟಕವನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ, ಮೀಸಲಾತಿ ಹಕ್ಕು ಹೊಂದಿರುವ ಸ್ಪೃಷ್ಯರು ಮತ್ತು ಅಸ್ಪೃಶ್ಯರು ಒಂದೇ ಪಟ್ಟಿಯಲ್ಲಿದ್ದರೂ ಅವರ ಸಾಮಾಜಿಕ ಸ್ಥಿತಿಗತಿಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎನ್ನುವ ಮಾಹಿತಿ ನ್ಯಾ.ಸದಾಶಿವ ಆಯೋಗದ ವರದಿಯಲ್ಲಿದೆ ಎನ್ನಲಾಗುತ್ತಿದೆ.ಹಾಗಿರುವಾಗ ಅಲ್ಲೂ ಸಾಮಾಜಿಕವಾಗಿ ಅತೀ ಹಿಂದುಳಿದವರು ಹಾಗೂ ಹಿಂದುಳಿದವರ ನಡುವೆ ಮೀಸಲಾತಿ ಹಂಚಿಕೆ ಆಗಲೇಬೇಕಲ್ಲವೇ?ಹಾಗೊಂದು ವೇಳೆ ಅದ್ಯಾವುದೂ ಆಗಲೇಬಾರದು ಎನ್ನುವುದಾದರೆ ಅತೀ ಹಿಂದುಳಿದವರು ಇನ್ನೂ ಎಷ್ಟು ಸಾವಿರ ವರ್ಷಗಳ ವರೆಗೆ ಮೀಸಲಾತಿಯಿದ್ದೂ ಅನುಭವಿಸಲಾಗದೆ,ಸಾಮಾಜಿಕವಾಗಿ ಮುಂದುವರಿಯಲಾಗದೆ ಹಾಗೆಯೇ ಬದುಕಬೇಕು? ಇದರ ಬಗ್ಗೆ ಚರ್ಚೆಯೇ ಆಗಬಾರದು ಎಂದರೆ ಕೆಲವೇ ಕೆಲವು ಬಲಾಢ್ಯರ ಪರವಾಗಿ ನೀವೇನೋ ಸಂಚು ನಡೆಸುತ್ತಿದ್ದೀರಿ ಎಂದಲ್ಲದೆ ಬೇರೇನಿರಲು ಸಾಧ್ಯ?
ಕಾಶ್ಮೀರದ 370 ನೇ ವಿಧಿ ತಾತ್ಕಾಲಿಕವಾಗಿದ್ದರೂ ಅದು ಶಾಶ್ವತ ಎನ್ನುವಂತೆ ಬಿಂಬಿಸಿ ಕೇವಲ ಒಂದು ಪ್ರತಿಶತ ಜನರ ಹೆಸರಿನಲ್ಲಿ ಭಾರತದಿಂದ ಶೇ. ಹತ್ತಕ್ಕಿಂತಲೂ ಹೆಚ್ಚು ಅನುದಾನ ಪಡೆಯುತ್ತಾ,ಒಂದೆರಡು ಕುಟುಂಬಗಳು ಅದೆಲ್ಲವನ್ನೂ ಬಳಸಿಕೊಂಡು ಅಲ್ಲಿನ ಜನರನ್ನು ವಂಚಿಸುತ್ತಾ ಮತ್ತದೇ ಅನುದಾನವಂಚಿತ ಜನರನ್ನು ಭಾರತದ ವಿರುದ್ಧವೇ ಎತ್ತಿ ಕಟ್ಟುತ್ತಿದ್ದಂತೆಯೇ ಮೀಸಲಾತಿ ವಿಚಾರದಲ್ಲಿಯೂ ಆಗುತ್ತಿದ್ದಂತಿದೆ.ಮೀಸಲಾತಿಯ ಹೆಚ್ಚು ಪಾಲು ಕಬಳಿಸುತ್ತಿರುವವರೇ ಮೀಸಲು ದಮನಿತರನ್ನು ಮೀಸಲಾತಿಯ ಚರ್ಚೆಯಾಗದಂತೆ ಎತ್ತಿಕಟ್ಟುತ್ತಿದ್ದಾರೆ ಎನ್ನುವ ಗುಮಾನಿಯಿದೆ.
ಆರೂವರೆ ವರ್ಷಗಳಿಗೂ ಹೆಚ್ಚು ಸಮಯ ತೆಗೆದುಕೊಂಡು,ಸುಮಾರು 15 ಕೋಟಿ ರೂ.ವೆಚ್ಚ ಮಾಡಿ,ಕರ್ನಾಟಕದ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಕುಟುಂಬಗಳ ಆರ್ಥಿಕ,ಸಾಮಾಜಿಕಹಾಗೂ ಶೈಕ್ಷಣಿಕ ಮಾಹಿತಿ ಸಂಗ್ರಹಿಸಿ ನ್ಯಾ. ಎ.ಜೆ.ಸದಾಶಿವ ಆಯೋಗದ ‘ಕರ್ನಾಟಕದ ಪರಿಶಿಷ್ಟ ಜಾತಿಗಳಿಗೆ ಸಾಂವಿಧಾನಿಕ ಸೌಲಭ್ಯ ಹಾಗೂ ಅವುಗಳ ಹಂಚಿಕೆಯಲ್ಲಿ ಆಗಿರುವ ತಾರತಮ್ಯ ಪರಿಶೀಲನೆ’ ವರದಿ ಸಲ್ಲಿಕೆಯಾಗಿ ಎಂಟು ವರ್ಷಗಳೇ ಆದರೂ ಇದುವರೆಗೂ ಆಯೋಗದ ವರದಿಯ ಶಿಫಾರಸನ್ನು ಜಾರಿಗೊಳಿಸುವುದು ಹಾಗಿರಲಿ,ಅದರ ಹೆಸರೆತ್ತಲೂ ಎಲ್ಲಾ ಪಕ್ಷಗಳ ಸರ್ಕಾರಗಳೂ ಹೆದರುವಂತೆ ಮಾಡಲಾಗಿದೆಯೆಂದರೆ ಮೀಸಲಾತಿಯಿದ್ದೂ ಮೀಸಲಾತಿ ಪಡೆಯಲಾಗದೆ ಉಳಿದಿರುವ ಶೋಷಿತರು ಇನ್ನೂ ಸಾವಿರ ವರ್ಷ ಶೋಷಿತರಾಗಿಯೇ ಉಳಿಯಲಿದ್ದಾರೆ ಎನ್ನುವುದರಲ್ಲಿ ಯಾರಿಗಾದರೂ ಅನುಮಾನವಿದೆಯೇ? ಮೀಸಲಾತಿಯ ಚರ್ಚೆಯೇ ಆಗದೆ,ಕಾಲಕಾಲಕ್ಕೆ ಬದಲಾವಣೆಯಾಗದೇ ಮೀಸಲು ದಮನಿತರ ಸಾಮಾಜಿಕ ಸ್ಥಿತಿಗತಿಗಳಲ್ಲಿ ಏಳಿಗೆ ಸಾಧ್ಯವೇ ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಹೇಳಿ, ಮೀಸಲಾತಿ ವಿಚಾರದ ಬಗೆಗಿನ ಕನಿಷ್ಠ ಚರ್ಚೆಯನ್ನೂ ವಿರೋಧಿಸುತ್ತಿರುವವರ ಬಳಿ ಬೇರೆ ಯಾವ ಪರಿಹಾರವಿದೆ?