
ಮೀಸಲಾತಿಗೆ ಈಗಿರುವ ಶೇ. 50ರ ಮಿತಿಯ ಮರುಪರಿಶೀಲನೆಗೆ ಒಳಪಡಿಸುವ ಅಗತ್ಯ ಇದೆಯೇ ಎಂಬ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಮಾರ್ಚ್ 15) ಆರಂಭಿಸಿದೆ.
1992ರ ಇಂದ್ರಾ ಸಾಹ್ನಿ ಪ್ರಕರಣದ (ಮಂಡಲ್ ತೀರ್ಪು ಎಂದೂ ಹೇಳಲಾಗುತ್ತದೆ) ಐತಿಹಾಸಿಕ ತೀರ್ಪಿನಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಶೇ. 50ರಷ್ಟಕ್ಕೆ ಮಿತಿಗೊಳಿಸಿತ್ತು. ಈ ತೀರ್ಪನ್ನು ವಿಸ್ತೃತ ಪೀಠವು ಮರುಪರಿಶೀಲನೆಗೆ ಒಳಪಡಿಸುವ ಅಗತ್ಯ ಇದೆಯೇ ಎಂಬ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇದೀಗ ಆರಂಭಿಸಿದೆ.
ಮೀಸಲಾತಿ ಮಿತಿಯ ಕುರಿತು ಲಿಖಿತ ಪ್ರತಿಕ್ರಿಯೆ ನೀಡುವಂತೆ ರಾಜ್ಯಗಳಿಗೆ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಸೂಚಿಸಿತ್ತು. ಈ ವಿಷಯದ ಟಿಪ್ಪಣಿ ಸಲ್ಲಿಸಲು ಕೆಲವು ರಾಜ್ಯಗಳು ಹೆಚ್ಚಿನ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಪೀಠವು ಟಿಪ್ಪಣಿ ಸಲ್ಲಿಸಲು ಎಲ್ಲ ರಾಜ್ಯಗಳಿಗೆ ಒಂದು ವಾರದ ಕಾಲಾವಕಾಶ ನೀಡಿದೆ.
ಹಿರಿಯ ವಕೀಲ ಅರವಿಂದ ದಾತಾರ್ ಅವರು ತಮ್ಮ ವಾದ ಮಂಡಿಸಿ ಇಂದ್ರಾ ಸಾಹ್ನಿ ಪ್ರಕರಣದ ತೀರ್ಪು ಮರುಪರಿಶೀಲನೆ ಅಗತ್ಯವಿಲ್ಲ ಎಂದರು. ಈ ತೀರ್ಪು ಮರುಪರಿಶೀಲನೆಗೆ 11 ನ್ಯಾಯಮೂರ್ತಿಗಳ ಪೀಠ ರಚಿಸಬೇಕಾಗುತ್ತದೆ. ಸುಪ್ರೀಂ ಕೋರ್ಟ್ ಸ್ಥಾಪನೆಯಾದ ಬಳಿಕ ಈವರೆಗೆ ಐದು ಬಾರಿ ಮಾತ್ರ 11 ನ್ಯಾಯಮೂರ್ತಿಗಳ ಪೀಠ ರಚನೆಯಾಗಿತ್ತು. ವಿಶಿಷ್ಟ ಮತ್ತು ಸಾಂವಿಧಾನಿಕವಾಗಿ ಭಾರಿ ಮಹತ್ವ ಇರುವ ಪ್ರಕರಣಗಳ ಸಂದರ್ಭದಲ್ಲಿ ಮಾತ್ರ ಇಷ್ಟೊಂದು ವಿಸ್ತೃತ ಪೀಠ ರಚಿಸಲಾಗಿದೆ. ಈಗ ಪ್ರಶ್ನೆ ಎದ್ದಿರುವುದು ಮೀಸಲಾತಿಯ ಮಿತಿಯ ಬಗ್ಗೆ ಮಾತ್ರ. 1992ರ ತೀರ್ಪಿನಲ್ಲಿ ಪರಿಶೀಲನೆಗೆ ಒಳಪಟ್ಟ ಇತರ ವಿಚಾರಗಳಲ್ಲಿ ಯಾವುದೇ ಸಂದೇಹ ಇಲ್ಲ ಎಂದು ದಾತಾರ್ ಹೇಳಿದರು.