ಮುಂಬೈ : ಅಧಿಕಾರಕ್ಕಾಗಿ ಶಿವಸೇನೆ ತನ್ನ ಮೂಲ ಸಿದ್ಧಾಂತ ಹಿಂದುತ್ವದಿಂದ ದೂರವಾಗುತ್ತಿದೆಯೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಪ್ರಾರಂಭವಾಗಿದೆ.

ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರು 1966ರಲ್ಲಿ ಪ್ರಾರಂಭಿಸಿದ ಶಿವಸೇನೆ ಪ್ರಖರ ಹಿಂದುತ್ವವಾದಿ ಪಕ್ಷ ಎಂದೇ ದೇಶದೆಲ್ಲೆಡೆ ಪ್ರಚಲಿತವಾಗಿತ್ತು. ಆದರೆ ಬಾಳಾ ಸಾಹೇಬ್ ಠಾಕ್ರೆ ಅವರ ನಿಧನದ ನಂತರ ಪಕ್ಷದ ಚುಕ್ಕಾಣಿ ಹಿಡಿದ ಉದ್ಧವ್ ಠಾಕ್ರೆ ಅಧಿಕಾರಕ್ಕಾಗಿ ಹಿಂದುತ್ವದಿಂದಲೇ ದೂರವಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಚುನಾವಣಾ ಪೂರ್ವದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿ ಮುಖ್ಯಮಂತ್ರಿ ಸ್ಥಾನ ನೀಡುವುದಿಲ್ಲ ಎಂಬ ಕಾರಣಕ್ಕೆ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದು ಠಾಕ್ರೆ ಅವರು ಸದಾ ವಿರೋಧಿಸಿಕೊಂಡು ಬಂದಿರುವ ಕಾಂಗ್ರೆಸ್ ಜೊತೆ ಸೇರಿಕೊಂಡು ಮುಖ್ಯಮಂತ್ರಿಯಾದರು.
ದೇಶದೆಲ್ಲೆಡೆ ಹಿಂದುಗಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತೀಕ್ಷ್ಣವಾಗಿ ಖಂಡಿಸುತ್ತಾ ಬಂದಿದ್ದ ಶಿವಸೇನೆ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಮಹಾರಾಷ್ಟ್ರದಲ್ಲಿ ಹಿಂದುಗಳ ಮೇಲೆ ಹಲ್ಲೆ ದೌರ್ಜನ್ಯಗಳ ಸಂಖ್ಯೆ ವೃದ್ದಿಯಾಗುತ್ತಿದ್ದರೂ ಮೌನ ವಹಿಸಿರುವುದು ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಪಾಲ್ಗರ್ ನಲ್ಲಿ ಹಿಂದು ಸಾಧುಗಳನ್ನು ಅಮಾನುಷವಾಗಿ ಹತ್ಯೆ ಮಾಡಿದ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದರಲ್ಲಿ ಮೀನಾವೇಷ ಎಣಿಸುತ್ತಿರುವುದು ಒಂದೆಡೆಯಾದರೆ ಸ್ವತಃ ಶಿವಸೇನೆ ಮುಸ್ಲಿ ಓಲೈಕೆಯ ಲೇಖನ, ಜಾಹಿರಾತು, ಪ್ರಕಟಣೆಗಳನ್ನು ನೀಡುತ್ತಿರುವುದು ವರದಿಯಾಗುತ್ತಿದೆ. ಟಿಪ್ಪುಸುಲ್ತಾನ್ ಜಯಂತಿ ಗೆ ಶುಭಾಶಯ ಕೋರಿದ್ದು, ಇದೀಗ ಹೊಸ ವರ್ಷಕ್ಕೆ ಬಿಡುಗಡೆಗೊಳಿಸಿದ ಕ್ಯಾಲೆಂಡರ್ ನಲ್ಲಿ ಶಿವಸೇನೆಯ ಹೆಸರನ್ನು ‘ಶಿವಶಾಹೀ’ ಎಂದು ನಮೋದಿಸಿದ ಉರ್ದು ಮಿಶ‍್ರಿತ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮುಸ್ಲಿಂ ತುಷ್ಟೀಕರಣಕ್ಕೆ ಓಲೈಕೆಗೆ ಮುಂದಾಗಿದೆ.

ಇದೇ ತುಷ್ಟೀಕರಣವನ್ನು ಬಾಳಾ ಸಾಹೇಬ್ ಠಾಕ್ರೆ ಅವರು ಜೀವನದುದ್ದಕ್ಕೂ ಟೀಕಿಸುತ್ತಾ ಪ್ರತಿಭಟಿಸುತ್ತಾ ಶಿವಸೇನೆಯನ್ನು ಮಹಾರಾಷ್ಟ್ರದ ಪ್ರಮುಖ ಪಕ್ಷವಾಗಿ ಕಟ್ಟಿನಿಲ್ಲಿಸಿದ್ದರು ಎಂಬುದನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮರೆತಿದೆಯೇ ಎನ್ನುವುದು ಈಗಿನ ಪ್ರಶ್ನೆ.