• Samvada
  • Videos
  • Categories
  • Events
  • About Us
  • Contact Us
Wednesday, March 22, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home BOOK REVIEW

ಮುಸ್ಲಿಂ ಮಹಿಳೆಯರಿಗೆ ಬಗೆವ ಮಹಾದ್ರೋಹ ‘ತ್ರಿವಳಿ ತಲಾಖ್’

Vishwa Samvada Kendra by Vishwa Samvada Kendra
March 4, 2021
in BOOK REVIEW
260
0
ಮುಸ್ಲಿಂ ಮಹಿಳೆಯರಿಗೆ ಬಗೆವ ಮಹಾದ್ರೋಹ ‘ತ್ರಿವಳಿ ತಲಾಖ್’
510
SHARES
1.5k
VIEWS
Share on FacebookShare on Twitter

ಮುಸ್ಲಿಂ ಮಹಿಳೆಯರಿಗೆ ಸಂಬಂಧಿಸಿದ `ತ್ರಿವಳಿ ತಲಾಖ್’ ಬಗ್ಗೆ ಮಗದೊಮ್ಮೆ ಬಹಳಷ್ಟು ಚರ್ಚೆಗಳು ದೇಶದಾದ್ಯಂತ ನಡೆಯುತ್ತಿವೆ. ತ್ರಿವಳಿ ತಲಾಖ್ ಮುಸ್ಲಿಂ ಪುರುಷರ ಪಾಲಿಗೆ ವರದಾನವೆಂದೇ ಪರಿಗಣಿಸಲಾಗಿರುವ ಒಂದು ಅನಿಷ್ಟ ಪದ್ಧತಿ. ಈ ಪದ್ಧತಿಯಂತೆ ಓರ್ವ ವಿವಾಹಿತ ಮುಸ್ಲಿಂ ಪುರುಷ ತನ್ನ ಪತ್ನಿಯಿಂದ ವಿವಾಹವಿಚ್ಛೇದನ ಪಡೆಯಲು ಬೇರೇನೂ ಮಾಡಬೇಕಾಗಿಲ್ಲ; ಮೂರು ಬಾರಿ ‘ತಲಾಖ್’ ಎಂದು ಹೇಳಿದರೆ ಅಷ್ಟು ಸಾಕು. ನ್ಯಾಯಾಲಯಗಳು ಈ ಪದ್ಧತಿಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವ ಕಾರಣದಿಂದ ಇದು ಮತ್ತೆಮತ್ತೆ ಚರ್ಚೆಯನ್ನು ಹುಟ್ಟುಹಾಕುತ್ತಿದೆ.

ಒಂದು ನೆಲೆಯಲ್ಲಿ ನೋಡಿದರೆ ಎಲ್ಲ ತಲಾಖ್‌ಗಳೂ ಕ್ರೂರವಾದವುಗಳೇ; ಅದಕ್ಕೆ ಮುಖ್ಯಕಾರಣವೆಂದರೆ ಅವು ಏಕಪಕ್ಷೀಯ. ಮುಸ್ಲಿಂ ಸಮುದಾಯದಲ್ಲಿ ಮದುವೆಯ ಸಂದರ್ಭದಲ್ಲಿ ವಧುವಿನ ಒಪ್ಪಿಗೆಯನ್ನು ಕೇಳಲಾಗುತ್ತದೆ. ಆಕೆ ತನ್ನ ಒಪ್ಪಿಗೆಯನ್ನು ಹೇಳಿದ ಬಳಿಕವೇ ಮದುವೆ ನಡೆಯುತ್ತದೆ. ಅಂದರೆ ಅದೊಂದು ಒಪ್ಪಂದ; ಏಕಪಕ್ಷೀಯ ಅಲ್ಲ. ಆದರೆ ತ್ರಿವಳಿ ತಲಾಖ್ ಕೇವಲ ಪುರುಷನ ಹಕ್ಕೆಂಬಂತೆ ಏಕಪಕ್ಷೀಯವಾಗಿದೆ.

READ ALSO

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!

Conflict resolution : The RSS way

ಮುಸ್ಲಿಂ ಸಮಾಜದಲ್ಲಿ ತ್ರಿವಳಿ ತಲಾಖ್ ಹೆಚ್ಚಲು ಕಾರಣವಾದ ಅಂಶವೆಂದರೆ ವಿಚ್ಛೇದಿತ ಮುಸ್ಲಿಂ ಮಹಿಳೆಗೆ ನೀಡುವ ಜೀವನಾಂಶ (ಪರಿಹಾರ)ದಲ್ಲಿನ ಅಶಿಸ್ತು. ವಿಚ್ಛೇದಿತೆಗೆ ಆಕೆಯ ಮತ್ತು ಆಕೆಯ ಜೊತೆಗೇ ಮನೆಯಿಂದ ಹೊರಬೀಳುವ ಮಕ್ಕಳ ಜೀವನನಿರ್ವಹಣೆಗೆ ಜೀವನಾಂಶ ನೀಡಿಕೆ ಅತ್ಯಂತ ಅವಶ್ಯ; ಮತ್ತು ಆ ಮೊತ್ತ ಸಾಕಷ್ಟು ದೊಡ್ಡದಿರಬೇಕು. 1974ರಲ್ಲಿ ಸುಪ್ರೀಂಕೋರ್ಟ್ ನೀಡಿದ ಒಂದು ತೀರ್ಪಿನ ಕಾರಣದಿಂದಾಗಿ ಜೀವನಾಂಶ ನೀಡಿಕೆಯಲ್ಲಿ ದೇಶದಲ್ಲಿ ತಕ್ಕಮಟ್ಟಿನ ಶಿಸ್ತು ಬಂದಿತ್ತು. ಅಪರಾಧ ದಂಡಸಂಹಿತೆ (ಸಿಆರ್‌ಪಿಸಿ)ಯ 125ನೇ ವಿಧಿಯ ಪ್ರಕಾರ ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶವನ್ನು ನೀಡಲಾಗುತ್ತಿತ್ತು. ಅದರ ಪರಿಣಾಮವಾಗಿ ದೇಶದಲ್ಲಿ ದಿಢೀರ್ ತಲಾಖ್ ನೀಡಿ ಮುಸ್ಲಿಂ ಮಹಿಳೆಯರ ಬಾಳನ್ನು ಗೋಳನ್ನಾಗಿಸುವುದು ಸಾಕಷ್ಟು ನಿಯಂತ್ರಣಕ್ಕೂ ಬಂದಿತ್ತು.

‘ಪರ್ಸನಲ್ ಲಾ ಬೋರ್ಡ್’

ಆದರೆ ದೇಶದಲ್ಲಿ 1975ರಲ್ಲಿ ಸ್ಥಾಪನೆಗೊಂಡ ’ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ (ಐಐಎಂಪಿಎಲ್‌ಬಿ) ಅದಾಗಲೇ ಸಾಕಷ್ಟು ಬೆಳೆದು ರಾಜಕೀಯವಾಗಿಯೂ ಬಲಶಾಲಿ ಎನಿಸಿತ್ತು. ಮತ್ತು ತುರ್ತುಪರಿಸ್ಥಿತಿ (1975-77)ಯ ವೇಳೆ ಸಂವಿಧಾನಕ್ಕೆ ಸೇರಿಸಲ್ಪಟ್ಟ `ಇದು ಸೆಕ್ಯುಲರ್ ದೇಶ’ ಎನ್ನುವ ಪದಗುಚ್ಛ ಮತ್ತು ಪರಿಕಲ್ಪನೆ ತನ್ನದೇ ಪ್ರಭಾವ ಬೀರತೊಡಗಿತ್ತು. ಮುಸ್ಲಿಮರ ವಿವಾಹವಿಚ್ಛೇದನೆ, ಜೀವನಾಂಶ ನೀಡಿಕೆ ಎಲ್ಲವೂ ಮುಸ್ಲಿಮರಿಗೆ ಸಂಬಂಧಿಸಿದ ಅವರ ಮತೀಯ ಅಥವಾ ಧಾರ್ಮಿಕ ವಿಚಾರಗಳು, ಸರ್ಕಾರ ಅದರಲ್ಲಿ ಮಧ್ಯಪ್ರವೇಶ ಮಾಡುವುದು ಸಲ್ಲದು… ಮುಂತಾಗಿ ವಾದಗಳು ಬೆಳೆದಿದ್ದವು. ಮಾತ್ರವಲ್ಲ, ಶಾಸನಾತ್ಮಕ ಅಥವಾ ಧಾರ್ಮಿಕವಾದ ಯಾವ ಮನ್ನಣೆ ಇಲ್ಲದಿದ್ದರೂ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿ ತನಗೆ ಭಾರೀ ಅಧಿಕಾರವಿದೆ, ತಾನು ಅವರ ನೈಜ ಪ್ರತಿನಿಧಿ ಎಂಬಂತೆ ಬಿಂಬಿಸುವಲ್ಲಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಬಹಳಷ್ಟು ಯಶಸ್ವಿಯಾಗಿತ್ತು.

ಇಷ್ಟಾದಮೇಲೆ ಅದರಲ್ಲಿ ವೋಟ್‌ಬ್ಯಾಂಕ್ ರಾಜಕೀಯವೂ ಪ್ರವೇಶಿಸದಿದ್ದರೆ ಆದೀತೆ? ಅದು 1980ರ ದಶಕದ ಮಧ್ಯದ ಹೊತ್ತಿಗೆ ಪರಿಸ್ಥಿತಿಯನ್ನು ಇನ್ನೊಂದು ತುದಿಗೆ ತಂದುನಿಲ್ಲಿಸಿತು. ಆಗ ಬಂದ ‘ಶಾಬಾನು ಪ್ರಕರಣ’ದ ಸುಪ್ರೀಂಕೋರ್ಟ್ ತೀರ್ಪು ದೇಶದಲ್ಲಿ ಭಾರೀ ಕೋಲಾಹಲವನ್ನೆ ಸೃಷ್ಟಿಸಿತು. ಇಂದೋರಿನ ಶಾಬಾನು ಎನ್ನುವ ವಿಚ್ಛೇದಿತ ಮಹಿಳೆಯ ಜೀವನಾಂಶಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಮತ್ತು ಅದಕ್ಕೆ ಸಂಬಂಧಿಸಿ ರಾಜೀವ್‌ಗಾಂಧಿ ನೇತೃತ್ವದ ಕಾಂಗ್ರೆಸ್ ಕೇಂದ್ರಸರ್ಕಾರ ನಡೆದುಕೊಂಡ ರೀತಿ ಮುಂದೆ ವಿಷಪ್ರಾಯವಾಯಿತು. ಅದೇ ಮುಂದೆ ಸಂತ್ರಸ್ತ ಮುಸ್ಲಿಂ ಮಹಿಳೆಯರಿಗೆ ಮಗ್ಗುಲ ಮುಳ್ಳಾಯಿತು.

ಜೀವನವೇ ಮುಡಿಪು

ಈ ಬೆಳವಣಿಗೆಗಳನ್ನು ತೀರಾ ಹತ್ತಿರದಿಂದ ಕಂಡವರು ಪುಣೆಯ ಸಯ್ಯದ್ ಭಾಯಿ ಎಂದು ಪ್ರಸಿದ್ಧರಾದ ಸಯ್ಯದ್ ಮೆಹಬೂಬ್ ಶಾ ಖಾದ್ರಿ. ಕಂಡದ್ದು ಮಾತ್ರವಲ್ಲ, ವಿಚ್ಛೇದಿತ ಮುಸ್ಲಿಂ ಮಹಿಳೆಯರ ಸಂಕಷ್ಟ ನಿವಾರಣೆಗೆ ಅವರು ತಮ್ಮ ಇಡೀ ಜೀವನವನ್ನು ಅಕ್ಷರಶಃ ಮುಡಿಪಾಗಿಟ್ಟರು. ಇದಕ್ಕೆ ಕಾರಣ ಸಯ್ಯದ್ ಭಾಯಿ ಅವರ ಸ್ವಂತ ತಂಗಿಯೇ ಕ್ರೂರವಾಗಿ ವಿಚ್ಛೇದಿತಳಾದ ಅನುಭವ. ಅವರ ಅನುಭವಗಳೆಲ್ಲವನ್ನು 2001ರಲ್ಲಿ ಪ್ರಕಟವಾದ `ದಾಗದಾವಾರ್ಚಿ ಪೆರಾನು’ (ಬಂಡೆಯ ಮೇಲೆ ಬಿತ್ತಿದ ಬೀಜ) ಎನ್ನುವ ಮರಾಠಿ ಕೃತಿಯಲ್ಲಿ ದಾಖಲಿಸಲಾಗಿದೆ. ಅದನ್ನು ಅಂಜಲಿ ಪಟವರ್ಧನ್ ಕುಲಕರ್ಣಿ ಎಂಬವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಕನ್ನಡದ ಹಿರಿಯ ಲೇಖಕಿ ಡಾ. ಸಾರಾ ಅಬೂಬಕ್ಕರ್ ಅದನ್ನೀಗ ’ಮುಸ್ಲಿಂ ಮಹಿಳೆಯರು ಮತ್ತು ತಲಾಖ್’ ಎನ್ನುವ ಹೆಸರಿನಲ್ಲಿ ಕನ್ನಡಕ್ಕೂ ತಂದಿದ್ದಾರೆ. ಅದಕ್ಕೆ ’ಜಿಹಾದ್-ಎ-ತೀನ್ ತಲಾಖ್’ (ಏಕಪಕ್ಷೀಯ ತಲಾಖ್ ವಿರುದ್ಧ ನಮ್ಮ ಯುದ್ಧ) ಎಂದು ಅನ್ವರ್ಥ ಉಪನಾಮವನ್ನೂ ನೀಡಿ ಮಂಗಳೂರಿನ ತಮ್ಮ ‘ಚಂದ್ರಗಿರಿ ಪ್ರಕಾಶನ’ದ ಮೂಲಕ ಪ್ರಕಟಿಸಿದ್ದಾರೆ.

ಒಂದು ಅದ್ಭುತ ತೀರ್ಪಿಗೆ ವಸ್ತುವಾದಶಾಬಾನು ಅವರನ್ನು ಕರೆಯಿಸಿ ತಮ್ಮ ‘ಮುಸ್ಲಿಂ ಸತ್ಯಶೋಧಕ ಮಂಡಲ’ದ ವತಿಯಿಂದ ಅವರನ್ನು ಸಮ್ಮಾನಿಸಬೇಕೆಂದು ಸಯ್ಯದ್ ಭಾಯಿ ಅವರಿಗೆ ಅನ್ನಿಸಿತು. ಅದಕ್ಕೆ “ಮುಸ್ಲಿಂ ಪುರುಷರು ಆಕೆಯ ರಕ್ತಕ್ಕಾಗಿ ಕಾಯುತ್ತಿದ್ದಾರೆ. ಇಂತಹ ಪರಿಸರದಲ್ಲಿ ಆಕೆಗೆ ಸಮ್ಮಾನ ಮಾಡಲು ಸಾಧ್ಯವೇ?” ಎಂದು ಕೆಲವರು ಎಚ್ಚರಿಸಿದ್ದರು. ಇನ್ನು ಕೆಲವರು “ಬೇಕಿದ್ದರೆ ಖಾಸಗಿಯಾಗಿ ಅಭಿನಂದಿಸಿ” ಎಂದು ಸಲಹೆ ನೀಡಿದರು. ಅದಕ್ಕೆ ಸಯ್ಯದ್ ಭಾಯಿ “ಇದು ಸಾವಿರಾರು ಮಹಿಳೆಯರ ಸಮಸ್ಯೆ. ಆದ್ದರಿಂದ ಸಾರ್ವಜನಿಕವಾಗಿಯೇ ಸಮ್ಮಾನಿಸಬೇಕಾಗಿದೆ” ಎಂದು ತಮ್ಮ ನಿಲವನ್ನು ಸ್ಪಷ್ಟಪಡಿಸಿದರು. ಸ್ನೇಹಿತರೊಂದಿಗೆ ಇಂದೋರಿಗೆ ಹೋಗಿ ಶಾಬಾನು ಮನೆಯ ಬಾಗಿಲು ಬಡಿದಾಗ ಅವರು “ಇಲ್ಲಿ ಇಂದೋರಿನ ಜನತೆ ನನ್ನನ್ನು ಕೊಲೆ ಮಾಡಲು ತೀರ್ಮಾನಿಸಿರುವಾಗ ನೀವು ಪುಣೆಯಂತಹ ದೂರದ ಸ್ಥಳದಿಂದ ನನ್ನನ್ನು ಸಮ್ಮಾನಿಸಲು ಬಂದಿರುವುದು ವಿಚಿತ್ರವಾಗಿದೆ. ಇದು ನನ್ನ ಕೆಲಸದಲ್ಲಿ ನಂಬಿಕೆ ಇಡುವಂತೆ ಮಾಡಿದೆ” ಎಂದರಲ್ಲದೆ, ನಿಗದಿತ ದಿನ (ಜುಲೈ 18, 1985) ಪುಣೆಯಲ್ಲಿ ಸಮ್ಮಾನವನ್ನು ಸ್ವೀಕರಿಸುವ ಸಂದರ್ಭದಲ್ಲಿ “ಎಲ್ಲ ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಸಿಗುವಂತೆ ಮಾಡುವೆ” ಎಂದು ಭರವಸೆಯನ್ನೂ ನೀಡಿದರು.

ನಿಜವೆಂದರೆ ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶ ಕೊಡಬೇಕೆಂದು ಸುಪ್ರೀಂಕೋರ್ಟ್ ಹಿಂದೆಯೂ ತೀರ್ಪು ನೀಡಿತ್ತು. 1974ರಲ್ಲಿ ತಾಹಿರಾಬಿ ಎಂಬವರಿಗೆ ಸಿಆರ್‌ಪಿಸಿ 125ನೇ ವಿಧಿಯಂತೆ ಜೀವನಾಂಶ ನೀಡಲೇಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಅದರಂತೆ ಮುಂದಿನ ಹತ್ತು ವರುಷ ವಿಚ್ಛೇದಿತ ಮುಸ್ಲಿಂ ಮಹಿಳೆಯರ ಜೀವನಾಂಶ ಹಕ್ಕು ಜಾರಿಯಲ್ಲಿತ್ತು. 125ನೇ ವಿಧಿ ಜಾರಿಗೆ ಮುನ್ನ ವಿಚ್ಛೇದಿತ ಮುಸ್ಲಿಂ ಮಹಿಳೆಯರ ಪಾಡು ಭಿಕ್ಷುಕಿಯರ ಪಾಡಿನಂತಿತ್ತು. ಸಿಆರ್‌ಪಿಸಿ 125ನೇ ವಿಧಿಯನ್ನು ವಿಚ್ಛೇದಿತ ಮುಸ್ಲಿಂ ಮಹಿಳೆಯರ ಜೀವನಾಂಶ ವಿ?ಯಕ್ಕೆ ಇಂದಿರಾಗಾಂಧಿಯವರ ಸರ್ಕಾರವೇ ಅನ್ವಯಿಸಿತ್ತು. ಅದರಿಂದ ನಿರಾಧಾರ ಮುಸ್ಲಿಂ ಮಹಿಳೆಯರಿಗೆ ಸ್ವಲ್ಪ ನೆಮ್ಮದಿಯಾದರೆ, ಮುಸ್ಲಿಂ ಪುರುಷರು ಮಾತ್ರ ಮನಶ್ಶಾಂತಿಯನ್ನೆ ಕಳೆದುಕೊಂಡರು. ಪರ್ಸನಲ್ ಲಾ ಬೋರ್ಡ್ ಮತ್ತು ಮುಸ್ಲಿಂ ರಾಜಕಾರಣಿಗಳ ನಿಯೋಗ ಪ್ರಧಾನಿ ಇಂದಿರಾ ಅವರನ್ನು ಭೇಟಿಮಾಡಿ ಮನವಿ ಸಲ್ಲಿಸಿತು. “ಶರಿಯತ್ ಪ್ರಕಾರ ವಿಚ್ಛೇದನದ ಬಳಿಕ ಮೂರು ತಿಂಗಳು ಹತ್ತು ದಿನಗಳ ಇದ್ದತ್ ಅವಧಿಗೆ ಮಾತ್ರ ಜೀವನಾಂಶ ನೀಡಿದರೆ ಸಾಕು; ಆಕೆಯ ಜೀವನಪರ್ಯಂತ ನೀಡಬೇಕಿಲ್ಲ. ಸಿಆರ್‌ಪಿಸಿ 125ನೇ ವಿಧಿಯ ಪ್ರಕಾರ ಜೀವನಾಂಶ ಕೊಡಬೇಕಿಲ್ಲ” ಎಂದೂ ವಾದಿಸಿತು.

ಸರ್ಕಾರ ಅದಕ್ಕೆ ಮಣಿದು “ತಲಾಖ್ ನೀಡಿದ ಪತಿಯು ಪತ್ನಿಗೆ ಮೆಹರ್ ಮತ್ತು ಇದ್ದತ್‌ನ ಹಣವನ್ನು ಶರಿಯತ್ ಪ್ರಕಾರ ನೀಡಿ ಅದಕ್ಕೆ ಸಾಕ್ಷ್ಯ ಒದಗಿಸಿದರೆ ಅಂಥವನು 125ನೇ ವಿಧಿಯ ವ್ಯಾಪ್ತಿಗೆ ಬರುವುದಿಲ್ಲ” ಎಂಬುದನ್ನು ಒಪ್ಪಿಕೊಂಡಿತು. 125ನೇ ವಿಧಿಗೆ ಬದಲಾಗಿ ವಿಧಿ 127(3)ನ್ನು ಅನ್ವಯಿಸಿತು. ಅದರಿಂದಾಗಿ ತಲಾಖ್ ನೀಡಿ ಒಂದೆರಡು ಸಾವಿರ ರೂ. ನೀಡಿದರೆ ಸಾಕು, ಮತ್ತೆ ಹಾಯಾಗಿರಬಹುದು ಎಂಬಂಥ ಪರಿಸ್ಥಿತಿ ಉದ್ಭವಿಸಿತು.

ತಾಹಿರಾಬಿಗೆ ಜೀವನಾಂಶ

ಅಂತಹ ಸನ್ನಿವೇಶದಲ್ಲಿ 1974ರಲ್ಲಿ ತಾಹಿರಾಬಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ನಿಜವಾಗಿಯೂ ಕ್ರಾಂತಿಕಾರಿ ಎನಿಸಿತು. ನ್ಯಾ| ವಿ.ಆರ್. ಕೃಷ್ಣ ಅಯ್ಯರ್ ತಮ್ಮ ತೀರ್ಪಿನಲ್ಲಿ “ಅಸಹಾಯಳಾದ ಬಡ ಮುಸ್ಲಿಂ ಮಹಿಳೆ ತಾಹಿರಾಬಿಗೆ ಜೀವನಾಂಶ ನೀಡದಿದ್ದರೆ ಆಕೆಯು ಬದುಕು ಸಾಗಿಸಲು ವೇಶ್ಯಾವೃತ್ತಿಯನ್ನು ಅವಲಂಬಿಸಬೇಕಾಗಬಹುದು. ಆದ್ದರಿಂದ ಪೀನಲ್‌ಕೋಡ್‌ನ 127(3)ನ್ನು ಅನ್ವಯಿಸುವುದು ಸರಿಯಲ್ಲ. ಸಿಆರ್‌ಪಿಸಿ 125ನೇ ವಿಧಿಯ ಪ್ರಕಾರವೇ ಆಕೆಗೆ ಪತಿಯು ಜೀವನಾಂಶ ನೀಡಬೇಕು” ಎಂದು ಆದೇಶವಿತ್ತರು. ಅದರಿಂದಾಗಿ ಒಂದೆಡೆ ಸಾವಿರಾರು ಜನ ಮುಸ್ಲಿಂ ಮಹಿಳೆಯರು ಪರಿಹಾರ ಪಡೆದರೆ, ಸಾವಿರಾರು ಜನ ಪುರುಷರು ತಮ್ಮದು ವಿಚ್ಛೇದನೆಯೇ ಆಗಿಲ್ಲವೆಂದು ಹೆಂಡಂದಿರನ್ನು ವಾಪಸ್ಸು ಮನೆಗೆ ಸೇರಿಸಿಕೊಂಡರು. ಜೀವನಾಂಶ ಕೊಡುವ ಭಯದಿಂದಾಗಿ ತಲಾಖ್ ಕೊಡುವವರ ಸಂಖ್ಯೆಯೇ ಕಡಮೆ ಆಯಿತು! ಇದು ಸಯ್ಯದ್ ಭಾಯಿ ಅವರಂತಹ ಹೋರಾಟಗಾರರಿಗೆ ಸಂತೋಷ ನೀಡಿತು.

ಮುಂದೆ ಬಂದದ್ದು ಶಾಬಾನು ಪ್ರಕರಣ. ಆಕೆಯ ಪತಿ ಅಹಮದ್ ಖಾನ್ ಓರ್ವ ನ್ಯಾಯವಾದಿ. ಹಲವು ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಕೇಸುಗಳನ್ನು ಗೆದ್ದುಕೊಟ್ಟಿದ್ದಲ್ಲದೆ, ’ತಲಾಖ್ ಪೀಡಿತರ ರಕ್ಷಕ’ ಎನಿಸಿದ್ದ. ಆದರೆ ಸ್ವಂತದ ವಿಷಯ ಬಂದಾಗ ಅದೇ ಮನುಷ್ಯ ಪತ್ನಿಯ ಜೊತೆ ಜಗಳವಾಡಿ ತಲಾಖ್ ನೀಡಿದ. ಅರುವತ್ತು ವರ್ಷ ವಯಸ್ಸಿನ ಶಾಬಾನು ಒಂಟಿಯಾದರು; ಜೀವನಾಂಶವನ್ನೂ ಕೊಡದೆ ಪತಿ ಬೇರೆ ಮದುವೆಯಾದ. ಶಾಬಾನುಗೆ ಮಗ ಮತ್ತು ಮಗಳ ಬೆಂಬಲವಷ್ಟೆ ದೊರೆಯಿತು. 125ನೇ ವಿಧಿಯಂತೆ ಜೀವನಾಂಶ ಕೊಡಬೇಕು ಎಂದು ಆಕೆ ಪತಿಯ ವಿರುದ್ಧ ದಾವೆ ಹೂಡಿದ್ದರಿಂದ ನ್ಯಾಯವಾದಿ ಅಹಮದ್ ಖಾನನ ದ್ವಿಮುಖ ನೀತಿ ಸಾರ್ವಜನಿಕವಾಗಿ ಚರ್ಚೆಗೆ ಗುರಿಯಾಯಿತು. ವಿಷಯ ತಿಳಿದ ಮುಸ್ಲಿಂ ಪರ್ಸನಲ್  ಲಾ ಬೋರ್ಡ್ ಈ ಸಂದರ್ಭವನ್ನು ದೇಶದಲ್ಲಿ ’ಇಸ್ಲಾಮಿಕ್ ಶಾಸನ’ದ ಬಲವರ್ಧನೆಗೆ ಬಳಸಿಕೊಳ್ಳಲು ಮುಂದಾಯಿತು. ಅಹಮದ್ ಖಾನ್‌ಗೆ ಬೆಂಬಲ ನೀಡಿ, ‘ಇಸ್ಲಾಮಿಕ್ ಕಾನೂನಿನಲ್ಲಿ ಜೀವನಾಂಶ ಕೊಡಬೇಕೆಂಬ ವಿವರ ಇಲ್ಲ’ ಎಂದು ವಾದಿಸಿತು.

ಆದರೆ ಸುಪ್ರೀಂಕೋರ್ಟ್ ಅಂತಹ ವಾದವನ್ನು ತಳ್ಳಿಹಾಕಿ ಶಾಬಾನುಗೆ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿತು (1985). ಅದಕ್ಕೆ ಪರ್ಸನಲ್ ಲಾ ಬೋರ್ಡ್‌ನ ವಿರೋಧವು ನಿರೀಕ್ಷಿತವೇ ಆಗಿತ್ತು. ಇಸ್ಲಾಂ ಧರ್ಮ ಅಪಾಯದಲ್ಲಿದೆ ಎಂದು ಹುಯಿಲೆಬ್ಬಿಸಿ, ತೀರ್ಪಿನ ವಿರುದ್ಧ ಹೋರಾಡಲು ಅದು ಮುಸ್ಲಿಮರಿಗೆ ಕರೆ ನೀಡಿತು. “ನ್ಯಾಯಾಲಯಕ್ಕೆ ಮುಸ್ಲಿಮರ ಧಾರ್ಮಿಕ ವಿಷಯದಲ್ಲಿ ಚೆಲ್ಲಾಟವಾಡಲು ಅಧಿಕಾರವಿಲ್ಲ; ಈ ತೀರ್ಪನ್ನು ನಾವು ಅನುಸರಿಸುವುದಿಲ್ಲ; ತೀರ್ಪು ಮುಸ್ಲಿಮರ ಧಾರ್ಮಿಕ ನಿಯiಗಳಲ್ಲಿ ಸರ್ಕಾರದ ಹಸ್ತಕ್ಷೇಪ” – ಎಂದು ಬಣ್ಣಿಸಿತು.

ಮುಂದುವರಿದು, “ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮುಸ್ಲಿಂ ನಿಯಮಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಖುರಾನ್ ಶರಿಯತ್‌ಗಳನ್ನು ತಮ್ಮ ಇಚ್ಛೆಯಂತೆ ವ್ಯಾಖ್ಯಾನಿಸುತ್ತಾರೆ. ಇದರಿಂದ ತಿಳಿಯುವುದೆಂದರೆ ಇಂಡಿಯಾದಲ್ಲಿ ಇಸ್ಲಾಂಧರ್ಮ ಅಪಾಯದಲ್ಲಿದೆ. ಶರಿಯತ್‌ನಲ್ಲಿ ಮಧ್ಯಪ್ರವೇಶ ಮಾಡುವುದನ್ನು ನಾವು ಎಂದಿಗೂ ಸಹಿಸಲಾರೆವು” ಎಂದು ಟೀಕಿಸಿತು. ಇನ್ನೊಂದೆಡೆ ಪ್ರತಿಭಟನಕಾರರು ಜೀವನಾಂಶವನ್ನು ನಿರಾಕರಿಸಲು ಶಾಬಾನು ಅವರ ಮೇಲೆ ಒತ್ತಡವನ್ನೂ ತಂದರು.

ರಾಜೀವ್‌ಗಾಂಧಿ ಭೇಟಿ

ಈ ನಡುವೆ ಅಹವಾಲನ್ನು ದೆಹಲಿಗೆ ಒಯ್ಯುವ ಒಂದು ಸಾಹಸ ನಡೆಯಿತು. ಪುಣೆಯಲ್ಲಿ ನಡೆದ ಶಾಬಾನು ಸಮ್ಮಾನ ಕಾರ್ಯಕ್ರಮಕ್ಕೆ ರಾಜಕೀಯ ಮುಂದಾಳು ಪ್ರಮೀಳಾ ದಂಡವತೆ ಬಂದಿದ್ದರು. ಸಯ್ಯದ್ ಮತ್ತಿತರರು ಪ್ರಧಾನಿ ರಾಜೀವ್ ಗಾಂಧಿಯವರನ್ನು ಭೇಟಿಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕೆಂಬ ಅಪೇಕ್ಷೆ ವ್ಯಕ್ತಪಡಿಸಿದಾಗ ಪ್ರಮೀಳಾತಾಯಿ ತಮ್ಮ ಸಹಕಾರದ ಭರವಸೆ ನೀಡಿದರು. ಪ್ರಮೀಳಾ ಅವರ ಪ್ರಭಾವದಿಂದ ಪ್ರಧಾನಿ ಅವರ ಭೇಟಿ ದೊರೆಯಿತು; ಸಯ್ಯದ್ ಭಾಯಿ ಜೊತೆಗಿದ್ದರು. ಶ್ರೀಮತಿ ದಂಡವತೆ ಅವರು ಸಮಸ್ಯೆಯನ್ನು ವಿವರಿಸಿ, “ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನವರು ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶ ನೀಡಬಾರದೆಂದು ತಗಾದೆ ಮಾಡುತ್ತಿದ್ದಾರೆ; ಈ ವಿಷಯದಲ್ಲಿ ಯಾರಿಗೂ ಮಧ್ಯಪ್ರವೇಶ ಮಾಡಲು ಅನುಮತಿ ನೀಡಬಾರದು” ಎಂದು ಕೋರಿದರು. ಅದಕ್ಕೆ ಉತ್ತರಿಸಿದ ರಾಜೀವ್‌ಗಾಂಧಿ ಅವರು, “ನಾನಾಗಲಿ, ನನ್ನ ಸರ್ಕಾರವಾಗಲಿ ಈ ಕೇಸಿನಲ್ಲಿ ನ್ಯಾಯಾಲಯದ ತೀರ್ಪಿನ ವಿರುದ್ಧ ಹೋಗುವುದಿಲ್ಲ. ಈ ಜನ ತಮ್ಮ ಬಡತಾಯಂದಿರು ಅಥವಾ ಬಡಸೋದರಿಯರಿಗೆ ಸಿಗುವ ಜೀವನಾಂಶವನ್ನು ತಡೆಯಲು ತೀರ್ಮಾನಿಸಿರುವುದು ವಿಚಿತ್ರವಾಗಿದೆ. ಈ ಜನ ಈ ರೀತಿ ವರ್ತಿಸುವುದಾದರೂ ಯಾಕೆ? ನೀವು ಪ್ರಗತಿಪರ ಚಿಂತಕರಾಗಿದ್ದೀರಿ. ನಿಮ್ಮನ್ನು ವಿರೋಧಿಸುವ ಸಂಪ್ರದಾಯವಾದಿಗಳು ಮತ್ತು ನಿಮ್ಮ ನಡುವೆ ಸಂವಾದ ಏರ್ಪಡಿಸಲು ಸಾಧ್ಯವೇ ಎಂದು ನೋಡುತ್ತೇನೆ. ನನಗೆ ಸ್ವಲ್ಪ ಸಮಯ ಕೊಡಿ” ಎಂದು ಹೇಳಿದರು. ಮತ್ತು ಶಾಬಾನು ಅವರಿಗೆ “ಚಿಂತಿಸಬೇಡಿ. ನಿಮ್ಮ ಜೀವನಾಂಶ ನಿರಾತಂಕವಾಗಿ ಮುಂದುವರಿಯುತ್ತದೆಂದು ಭರವಸೆ ನೀಡುತ್ತೇನೆ” ಎಂದು ತಿಳಿಸಿದರು. ಪ್ರಧಾನಿಯ ಭರವಸೆಯಿಂದ ಎಲ್ಲರಿಗೂ ಸಂತೋ?ವಾಯಿತೆಂದು ಸಯ್ಯದ್ ಭಾಯಿ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.

ನಿಯೋಗಕ್ಕೆ ಪ್ರಧಾನಿ ಭರವಸೆ ನೀಡಿದ್ದು ದೊಡ್ಡ ಸುದ್ದಿಯಾಯಿತು. ದೇಶಾದ್ಯಂತ ’ವಿಚ್ಛೇದಿತ ಮುಸ್ಲಿಂ ಮಹಿಳೆಯರ ಜೀವನಾಂಶ ವಿರೋಧಿ ಚಳವಳಿ’ಯನ್ನು ತೀವ್ರಗೊಳಿಸಲಾಯಿತು; ಸುಪ್ರೀಂಕೋರ್ಟಿನ ತೀರ್ಪನ್ನು ವಿರೋಧಿಸುವಂತೆ ಮುಸ್ಲಿಂ ಜನರನ್ನು ಪ್ರಚೋದಿಸಲಾಯಿತು. ಪರ್ಸನಲ್ ಲಾ ಬೋರ್ಡ್ ’ಇಸ್ಲಾಂ ಅಪಾಯದಲ್ಲಿದೆ’ ಎಂಬ ಭಯವನ್ನು ದೇಶಾದ್ಯಂತ ಹಬ್ಬಿಸಿತು. ಶರಿಯತ್ ನಿಯಮದಲ್ಲಿ ಸರ್ಕಾರ ಮತ್ತು ನ್ಯಾಯಾಲಯಗಳು ಮಧ್ಯೆ ಪ್ರವೇಶಿಸಬಾರದೆಂಬ ತನ್ನ ಆಗ್ರಹವನ್ನು ಬೋರ್ಡ್ ಜೋರಾಗಿ ಹೇಳತೊಡಗಿತು.

ನಿಜವೆಂದರೆ ಬ್ರಿಟಿಷರ ಕಾಲದಲ್ಲಿ ಶರಿಯತ್ ನಿಯಮವನ್ನು ರದ್ದುಪಡಿಸಲಾಗಿತ್ತು. ವಿಭಿನ್ನ ಮತ-ಧರ್ಮಗಳ ಕ್ರೂರ ನಿಯಮಗಳನ್ನು ರದ್ದುಮಾಡಿ ಅವರು ಸಾಮಾನ್ಯ ದಂಡಸಂಹಿತೆ (ಪೀನಲ್‌ಕೊಡ್) ಯನ್ನು ಜಾರಿಮಾಡಿದ್ದರು. ಪರ್ಸನಲ್ ಲಾ ಬೋರ್ಡ್ ಈಗ ಮುಖ್ಯವಾಗಿ ತಲಾಖ್ ಬಗ್ಗೆ ಹೋರಾಟವನ್ನು ಕೇಂದ್ರೀಕರಿಸಿತ್ತು. ವಿಚ್ಛೇದಿತ ಮುಸ್ಲಿಂ ಮಹಿಳೆಯರ ಜೀವನಾಂಶಕ್ಕೆ ಒಪ್ಪಿದರೆ ತಲಾಖ್‌ಗೆ ಹಿನ್ನಡೆ ಆಗುತ್ತದೆ. ಒಂದು ಪ್ರಜಾಪ್ರಭುತ್ವ ದೇಶದಲ್ಲಿ ವೈಯಕ್ತಿಕ ಶಾಸನ(ಪರ್ಸನಲ್ ಲಾ)ದ ರಕ್ಷಣೆ ಕಷ್ಟ. ಅದಕ್ಕಾಗಿ ಧಾರ್ಮಿಕ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪ ಬೇಡ ಎಂಬ ವಾದಕ್ಕೆ ಪರ್ಸನಲ್ ಲಾ ಬೋರ್ಡ್ ಒತ್ತು ನೀಡಿತು.

ಅದೇ ವೇಳೆ ತನ್ನ ಜನರ ಮುಂದೆ “ನೀವು ಈಗ ಜೀವನಾಂಶದ ವಿರುದ್ಧ ಧ್ವನಿ ಎತ್ತದಿದ್ದರೆ ಇಡೀ ಇಸ್ಲಾಂ ಧರ್ಮಕ್ಕೆ ಅಪಾಯವಾಗಬಹುದು. ಆದ್ದರಿಂದ ನೈಜ ಮುಸ್ಲಿಮರು ಹಾಗೂ ಉತ್ತಮ ಇಸ್ಲಾಂ ಅನುಯಾಯಿಗಳು ಇದಕ್ಕೆ ಗಮನ ಕೊಡಬೇಕು” ಮುಂತಾಗಿ ಹೇಳುತ್ತಾ ಚಿತಾವಣೆ ಮಾಡಿದರು. ವಿಚ್ಛೇದಿತ ಮುಸ್ಲಿಂ ಮಹಿಳೆಯರ ಜೀವನಾಂಶದ ವಿಷಯವನ್ನೆ ಮುಂದಿಟ್ಟುಕೊಂಡು ದೇಶಾದ್ಯಂತ ಮುಸ್ಲಿಮರಲ್ಲಿ ಸಂದೇಹ, ಕೋಮುಭಾವನೆಗಳನ್ನು ಹರಡಿದರು. ಈ ರೀತಿ ಶಾಬಾನು ಅವರ ಜೀವನಾಂಶ ಪ್ರಕರಣವು ಮುಸ್ಲಿಮರಿಗೆ ’ಜೀವನ್ಮರಣದ ಪ್ರಶ್ನೆ’ ಆಯಿತು.

ಬದಲಾದ ಪ್ರಧಾನಿ

ಏತನ್ಮಧ್ಯೆ ಸಯ್ಯದ್ ಭಾಯಿ ಮತ್ತಿತರರು ರಾಜೀವ್‌ಗಾಂಧಿ ಅವರು ನೀಡಿದ ಭರವಸೆಯಿಂದಾಗಿ ಸಮಾಧಾನದಲ್ಲಿದ್ದರು. ಆಗ ಒಂದು ದಿನ ದೆಹಲಿಯಿಂದ ಪ್ರಮೀಳಾ ದಂಡವತೆ ಅವರಿಂದ ಸಯ್ಯದ್ ಅವರಿಗೆ ತುರ್ತು ಫೋನ್ ಕರೆ ಬಂತು. ’ಜೀವನಾಂಶ ರದ್ದತಿಗೆ ಸಂಬಂಧಿಸಿ ಏನೋ ಒಳಸಂಚು ನಡೆಯುತ್ತಿದೆ; ದೆಹಲಿಗೆ ಬನ್ನಿ. ಪ್ರಧಾನಿಯವರ ಮೇಲೆ ಭಾರಿ ಒತ್ತಡ ಬಂದಿದ್ದು, ಅವರು ನಮಗೆ ನೀಡಿದ ಮಾತಿನಿಂದ ಹಿಂದೆಸರಿಯುವ ಲಕ್ಷಣ ಕಾಣಿಸುತ್ತಿದೆ; ಆದ್ದರಿಂದ ವಿಚ್ಛೇದಿತ ಮುಸ್ಲಿಂ ಮಹಿಳೆಯರದ್ದೇ ಒಂದು ನಿಯೋಗ ಸಹಿತ ಬನ್ನಿ’ ಎಂದು ಪ್ರಮೀಳಾ ತಿಳಿಸಿದರು. ಕ್ರಮೇಣ ಎಂತಹ ಸ್ಥಿತಿ ಉಂಟಾಗಿತ್ತೆಂದರೆ, ಇದು ಸಮಾನರ ಯುದ್ಧವಾಗದೆ ಸಾವಿರಾರು ಸಂಖ್ಯೆಯ ಶರಿಯತ್‌ಪರ ಜನ ಮತ್ತು ಬೆರಳೆಣಿಕೆಯ ಜೀವನಾಂಶ ಬೆಂಬಲಿಗರ ಯುದ್ಧ ಎಂಬಂತಾಗಿತ್ತು. ಸಯ್ಯದ್ ಭಾಯಿ ತಮ್ಮ ಮುಸ್ಲಿಂ ಸತ್ಯಶೋಧಕ ಮಂಡಲದ ಸಭೆ ಕರೆದು ವಿ?ಯವನ್ನು ತಿಳಿಸಿದರು. ವಿಚ್ಛೇದಿತ ಮುಸ್ಲಿಂ ಮಹಿಳೆಯರ ಒಂದು ನಿಯೋಗವನ್ನು ದೆಹಲಿಗೆ ಒಯ್ದು ಪ್ರಧಾನಿ, ರಾ?ಪತಿ ಹಾಗೂ ಮುಸ್ಲಿಂ ಸಂಸತ್ಸದಸ್ಯರನ್ನು ಭೇಟಿಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಕೆಲವರು ’ದೆಹಲಿಗೆ ಹೋಗುವುದು ಬೇಡ, ಪ್ರಧಾನಿಗೆ ತಂತಿ ಸಂದೇಶವನ್ನು ಕಳುಹಿಸಿ, ಜಿಲ್ಲಾಧಿಕಾರಿ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡೋಣ’ ಎಂಬ ಸಲಹೆ ನೀಡಿದರು. ಅಂತಿಮವಾಗಿ ಪ್ರಮೀಳಾ ದಂಡವತೆ ಅವರು ಹೇಳಿದಂತೆ ದೆಹಲಿಗೆ ಸುಮಾರು ೪೫ ಮಂದಿಯ ನಿಯೋಗವನ್ನು ಒಯ್ಯುವುದು ಎಂದಾಯಿತು. ಓರ್ವ ವ್ಯಕ್ತಿ ಅದರ ಖರ್ಚು ವಹಿಸಿಕೊಳ್ಳಲು ಮುಂದೆಬಂದರು. ಶಾಬಾನು ಜೀವನಾಂಶ ಎಂಬುದು ಮುಸ್ಲಿಂ ಮಹಿಳೆಯರ ಉದ್ಧಾರಕ್ಕೆ ಮುಖ್ಯ ಮೆಟ್ಟಿಲಾಗಬಹುದೆಂಬ ಆಶಯದೊಂದಿಗೆ ನಿಯೋಗ ದೆಹಲಿಗೆ ತೆರಳಿತು; ಶ್ರೀಮತಿ ದಂಡವತೆ ಅಲ್ಲಿನ ವ್ಯವಸ್ಥೆಗಳನ್ನು ಮಾಡಿದರು. ಪ್ರಧಾನಿ ರಾಜೀವ್‌ಗಾಂಧಿ ಅವರಿಗೆ ಕೊಡುವುದಕ್ಕೆ ’ಜೀವನಾಂಶ ರಕ್ಷಿಸಿ’ ಎಂಬ ಮನವಿಯನ್ನು ಸಿದ್ಧಪಡಿಸಿಕೊಳ್ಳಲಾಗಿತ್ತು.

ಜೀವನಾಂಶದ ರಕ್ಷಣೆ ಮತ್ತು ಬಾಯಿಮಾತಿನ ತಲಾಖ್‌ನ ರದ್ದತಿ ಈ ಎರಡು ಅಂಶಗಳ ಬಗ್ಗೆ ಒತ್ತಾಯ ಮಾಡುವಂತೆ ಪ್ರಮೀಳಾ ಸಲಹೆ ನೀಡಿದರು. ನಿಯೋಗ ಮೊದಲಿಗೆ ಕಾನೂನು ಮಂತ್ರಿ ಎ.ಕೆ. ಸೇನ್ ಅವರನ್ನು ಭೇಟಿಮಾಡಿತು. ಅವರು ಮೊದಲಿಗೆ “ಈ ವಿಷಯ ಎತ್ತಲು ಪ್ರಧಾನಿಯ ಅನುಮತಿ ಇಲ್ಲದೆ ಅಸಾಧ್ಯ” ಎಂದರು. ನಿಯೋಗದ ಯಾರೋ ಭಾವಚಿತ್ರ ತೆಗೆಯಲು ಮುಂದಾದಾಗ ಸೇನ್ ಅವರ ನಿಜಬಣ್ಣ ಹೊರಗೆ ಬಂತು. ಒಮ್ಮೆಗೇ ಸಿಟ್ಟಾದ ಅವರು “ನನ್ನ ಕ್ಷೇತ್ರದಲ್ಲಿ ಎರಡೂವರೆ ಲಕ್ಷ ಮುಸ್ಲಿಮರಿದ್ದಾರೆ. ಈಗ ನಾನು ನಿಮ್ಮ ಮನವಿ ಸ್ವೀಕರಿಸಿದರೆ ಅವರಿಗೆ ಏನೆಂದು ಉತ್ತರಿಸಲಿ? ನೀವು ನಿಮ್ಮ ಮುಸ್ಲಿಂ ಮುಖಂಡರನ್ನು ಮತ್ತು ಮುಸ್ಲಿಂ ಸಂಸದರನ್ನು ಭೇಟಿಯಾಗಿ ನಿಮ್ಮ ಮನವಿಯನ್ನು ಅರ್ಪಿಸುವುದು ಒಳ್ಳೆಯದು” ಎನ್ನುವ ಪುಕ್ಕಟೆ ಸಲಹೆಯನ್ನು ನೀಡಿದರು. ಅಂದರೆ ಅವರ ಮಾತು ಈ ವಿಷಯದಲ್ಲಿ ವೋಟ್‌ಬ್ಯಾಂಕ್ ಪ್ರವೇಶಿಸಿದುದರ ಸ್ಪಷ್ಟ ಸೂಚನೆಯನ್ನು ನೀಡಿತು. ಆ ಎರಡೂವರೆ ಲಕ್ಷದಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರು ಇರಬಹುದು. ಆದರೆ ಅವರು ಈ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಧ್ವನಿ ಕಳೆದುಕೊಂಡವರು.

ಪ್ರಭಾವಿ ಸಂಸತ್ಸದಸ್ಯ ಸಯ್ಯದ್ ಶಹಾಬುದ್ದೀನ್ ಅವರನ್ನು ನಿಯೋಗ ಭೇಟಿಮಾಡಿದಾಗ ಅವರು “ಇದೆಂತಹ ವಂಚನೆ? ಅಂತಹ ಯಾವ ಮನವಿಯನ್ನೂ ನಾನು ಸ್ವೀಕರಿಸಲಾರೆ. ಅದು ನಮ್ಮ ಧರ್ಮಕ್ಕೆ ಸಂಬಂಧಪಟ್ಟ ವಿಷಯ” ಎಂದರಂತೆ. ಅದು ಧರ್ಮಕ್ಕೆ ಸಂಬಂಧಪಟ್ಟ ವಿಷಯವಾಗಿದ್ದು, ರಾಜಕಾರಣಿಯಾಗಿ ತಾನು ಅದಕ್ಕೆ ಕೈಹಾಕಲಾರೆ ಎಂಬುದು ತಾತ್ಪರ್ಯ.

ಕಾಂಗ್ರೆಸಿನ ಪ್ರಮುಖ ಮುಂದಾಳು ನಜ್ಮಾ ಹೆಪ್ತುಲ್ಲಾ ಅವರನ್ನು ಭೇಟಿಮಾಡಿದಾಗ ಆಕೆ ಬೇರೆಯೇ ವರಸೆ ತೆಗೆದರು. ನಿಯೋಗದ ಮಹಿಳೆಯರನ್ನು ಉದ್ದೇಶಿಸಿ, “ನಿಮಗೆ ಆತ್ಮಗೌರವವೇನೂ ಇಲ್ಲವಾ? ನಿಮ್ಮ ಗಂಡ ನಿಮ್ಮನ್ನು ವಿಚ್ಛೇದನ ಮಾಡಿದ ಬಳಿಕ ಜೀವನಾಂಶಕ್ಕಾಗಿ ಬೇಡುವುದೇಕೆ? ನನ್ನ ಗಂಡ ಏನಾದರೂ ನನಗೆ ತಲಾಖ್ ನೀಡಿದ್ದರೆ ನಾನು ಆತನೊಡನೆ ಹತ್ತು ಪೈಸೆಯ ದಯೆಗೂ ಅಂಗಲಾಚುತ್ತಿರಲಿಲ್ಲ” ಎಂದು ಅಪ್ಪಣೆ ಕೊಡಿಸಿದರು. ನಿಯೋಗದ ಓರ್ವ ಮಹಿಳೆ ತಡೆಯಲಾಗದೆ “ನಿಮಗೆ ಜೀವನಾಂಶ ಬೇಕಾಗಿಲ್ಲ; ನೀವೇ ಪತಿಗೆ ಕೊಡಬಹುದು” ಎಂದರು. “ನೀವೆಲ್ಲ ಬುರ್ಖಾ ಏಕೆ ಧರಿಸಿಲ್ಲ?” ಎಂದು ನಜ್ಮಾ ಕೇಳಿದಾಗ ನಿಯೋಗದಲ್ಲಿದ್ದವರು “ನೀವು ಮೇಕಪ್ ಮಾಡಿದ್ದೇಕೆ? ಲಿಪ್‌ಸ್ಟಿಕ್ ಏಕೆ? ಬಾಬ್‌ಕಟ್ ಮಾಡಿಕೊಂಡಿದ್ದೀರಲ್ಲಾ?” ಮುಂತಾಗಿ ಪ್ರಶ್ನಿಸಿ ಆಕೆಯನ್ನು ಜಾಲಾಡಿದರು.

ಜೈಲ್‌ಸಿಂಗ್ ವರಸೆ

ರಾಷ್ಟ್ರಪತಿ ಜೈಲ್‌ಸಿಂಗ್ ಅವರನ್ನು ಕಂಡು ವಿಷಯ ಪ್ರಸ್ತಾಪಿಸಿದಾಗ, “ನೀವು ಎಂಪಿಗಳನ್ನು, ಮಂತ್ರಿಗಳನ್ನು ಮತ್ತು ಪ್ರಧಾನಿಯನ್ನು ನೋಡಿ; ಅವರು ನೆರವು ನೀಡಬಹುದು. ನಾನೋ ಬರೇ ರಬ್ಬರ್‌ಸ್ಟ್ಯಾಂಪ್ ಮಾತ್ರ. ನಾನು ನಿಮಗೆ ಸಹಾಯ ಮಾಡಲು ಸಾಧ್ಯವೇ ಇಲ್ಲ” ಎಂದರು. ಆ ಹೊತ್ತಿಗೆ ಅಲ್ಲಿಗೆ ಬಂದ ಒಂದು ಕಡತಕ್ಕೆ ರಾಷ್ಟ್ರಪತಿ ಸಹಿ ಹಾಕಲು ನಿರಾಕರಿಸಿದ್ದು ಇವರ ಕಣ್ಮುಂದೆಯೇ ನಡೆಯಿತು. ನಿಯೋಗದಲ್ಲಿದ್ದವರು ಅದನ್ನು ಅವರ ಗಮನಕ್ಕೆ ತಾರದೇ ಇರಲಿಲ್ಲ. ಕೊನೆಗೆ ಅವರಿಂದ ’ಪ್ರಧಾನಿಯವರ ಬಳಿ ಚರ್ಚಿಸುವೆ’ ಎಂಬ ಭರವಸೆ ಸಿಕ್ಕಿತು.

ಒಟ್ಟಿನಲ್ಲಿ ನಿಯೋಗಕ್ಕೆ ಕಹಿಪ್ರಸಂಗಗಳೇ ಎದುರಾಗುತ್ತಾ ಹೋದವು. ಪ್ರಧಾನಿಯ ಭೇಟಿ ಸಿಗುವುದೇ ಕಷ್ಟವೇನೋ ಎಂಬಂತಿತ್ತು. ಪ್ರಮೀಳಾತಾಯಿ ಅವರ ಪ್ರಯತ್ನದ ಫಲವಾಗಿ ಕೊನೆಯಲ್ಲಿ ಭೇಟಿ ದೊರೆಯಿತು. ಆದರೆ ವಿಷಯಕ್ಕೆ ಸಂಬಂಧಿಸಿ ರಾಜೀವ್‌ಗಾಂಧಿಯವರ ನಿಲವಿನಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂತು. “ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗಾಗಿ ನಾವು ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಲಿದ್ದು, ಅದರಂತೆ ವಿಚ್ಛೇದಿತ ಮಹಿಳೆಯರು ದೊಡ್ಡ ಮೊತ್ತದ ಹಣವನ್ನು ಪಡೆಯಲು ಶಕ್ತರಾಗುತ್ತಾರೆ” ಎಂದವರು ಹೇಳಿದರು. ಆಗ ನಿಯೋಗದಲ್ಲಿದ್ದ ಒಬ್ಬರು “ದೊಡ್ಡ ಮೊತ್ತ ಸಿಗುವುದಾದರೆ ಸರಿ. ಆದರೆ ಮುಸ್ಲಿಂ ವಿಚ್ಛೇದಿತ ಮಹಿಳೆಯರು ಜೀವನಾಂಶ ಪಡೆಯುವಲ್ಲಿ ಸಿಆರ್‌ಪಿಸಿ 125ನೇ ವಿಧಿಯನ್ನು ಉಳಿಸಿಕೊಳ್ಳಬೇಕು” ಎಂದು ಗಮನ ಸೆಳೆದರು. ಇನ್ನೊಬ್ಬರು “ಸಿವಿಲ್ ವಿವಾಹ ಕಾಯ್ದೆ ದೇಶದ ಎಲ್ಲ ಪ್ರಜೆಗಳಿಗೆ ಸಮಾನವಾಗಿ ಅನ್ವಯ ಆಗಲಿ. ಅದರಿಂದ ಬಾಯ್ದರೆ ತಲಾಖ್ ತಪ್ಪುತ್ತದೆ; ಜೊತೆಗೆ ಜೀವನಾಂಶ ಪಡೆಯುವ ಹಕ್ಕು ಇರಬೇಕು” ಎಂದು ಹೇಳಿದರು.

ಅದಕ್ಕೆ ಉತ್ತರಿಸಿದ ಪ್ರಧಾನಿ ರಾಜೀವ್ “ಸಿವಿಲ್ ವಿವಾಹ ಕಾನೂನನ್ನು ಐಚ್ಛಿಕ ಎಂಬುದಾಗಿ ಮಾಡುತ್ತೇವೆ ಹೊರತು ಎಲ್ಲರಿಗೂ ಕಡ್ಡಾಯಗೊಳಿಸಲು ಸಾಧ್ಯವಿಲ್ಲ” ಎಂದು ತಿಳಿಸಿದರು. ಆಗ ನಿಯೋಗದಲ್ಲಿದ್ದ ಒಬ್ಬರು “ಪೀನಲ್ ಕೋಡನ್ನು ಕೂಡ ಹಾಗೆ ಮಾಡಬಹುದಲ್ಲವೆ? ಒಬ್ಬಾತ ಕಳವು ಮಾಡಿದಾಗ ಶಿಕ್ಷೆಯನ್ನು ಕೂಡ ಐಚ್ಛಿಕ ಮಾಡಬಹುದಲ್ಲವೆ?” ಎಂದು ಕೇಳಿದರು. ಆಗ ರಾಜೀವ್‌ಗಾಂಧಿ ತಬ್ಬಿಬ್ಬಾದರಂತೆ. ಓರ್ವ ವಿಚ್ಛೇದಿತ ಮಹಿಳೆ “ನೀವೇಕೆ ಮುಸ್ಲಿಂ ಮಹಿಳೆಯರಿಗೆ ಪ್ರಯೋಜನವಾಗುವ ನಿಯಮ ರೂಪಿಸಬಾರದು? ನಮ್ಮನ್ನು ಒಂದು ಅಡಚಣೆ ಎಂದು ತಿಳಿದಿದ್ದೀರಾ?” ಎಂದು ನೇರವಾಗಿಯೇ ಕೇಳಿದರೆ ಮತ್ತೊಬ್ಬರು “ಶಾಬಾನು ಜೀವನಾಂಶ ರದ್ದತಿ ಮಸೂದೆ ತಂದರೆ ಹಿಂದೂ-ಮುಸ್ಲಿಮರ ನಡುವಣ ಕಂದಕ ವಿಸ್ತರಿಸಬಹುದು. ಅದರಿಂದ ಅಂತಿಮವಾಗಿ ತಮ್ಮ ಸರ್ಕಾರಕ್ಕೆ ಅಪಾಯ ಎದುರಾದೀತು” ಎಂದು ಎಚ್ಚರಿಸಿದರು.

ಚುನಾವಣೆ ಸಂಬಂಧ

ಕೂಡಲೇ ಎಚ್ಚರಗೊಂಡ ಪ್ರಧಾನಿ ರಾಜೀವ್‌ಗಾಂಧಿ “ಮುಂದಿನ ಚುನಾವಣೆಗೆ ಇನ್ನೂ ಸಮಯವಿದೆ. ಅಷ್ಟರೊಳಗೆ ಈ ಸಮಸ್ಯೆಗೆ ಹೆಚ್ಚು ಒಪ್ಪಿಗೆಯಾಗುವ ಪರಿಹಾರ ಕಂಡುಕೊಳ್ಳಬಹುದೆಂದು ಆಶಿಸುತ್ತೇನೆ” ಎಂದರು; ಮತ್ತು  “ವಿಚ್ಛೇದಿತ ಮಹಿಳೆಗೆ ನಿಯಮಿತ ಜೀವನಾಂಶ ಮೊತ್ತಕ್ಕಿಂತ ದೊಡ್ಡ ಮೊತ್ತದ ಹಣ ದೊರೆಯುವಂತೆ ಏರ್ಪಾಡು ಮಾಡುತ್ತೇವೆ” ಎನ್ನುವ ಮತ್ತೊಂದು ಭರವಸೆಯನ್ನು ಕೂಡ ನೀಡಿದರು. ರಾಜೀವ್‌ಗಾಂಧಿ ಪ್ರಧಾನಿಯಾದ ಆರಂಭದಲ್ಲಿ ಅವರಲ್ಲಿನ್ನೂ ಮುಗ್ಧತೆ ಉಳಿದಿತ್ತು; ಮಿಸ್ಟರ್ ಕ್ಲೀನ್ ಎಂಬ ಹೆಸರನ್ನೂ ಪಡೆದುಕೊಂಡಿದ್ದರು. ಆದರೆ ಕ್ರಮೇಣ ಬದಲಾಗುತ್ತಾ ಹೋದರು. ಈ ಪ್ರಕರಣದಲ್ಲಿ ಕೂಡ ಅದನ್ನು ಗುರುತಿಸಬಹುದೇನೋ! ’ಮುಂದಿನ ಚುನಾವಣೆಗೆ ಇನ್ನೂ ಸಮಯವಿದೆ’ ಎನ್ನುವಲ್ಲಿ ಅವರ ನಿಲವು ಕಾಣಿಸುತ್ತದೆ. ’ಭಾರೀ ಮೊತ್ತದ ಪರಿಹಾರ’ ಎನ್ನುವಾಗ ಅವರು ’ಸಿಆರ್‌ಪಿಸಿ ೧೨೫ನೇ ವಿಧಿಯ ಪ್ರಕಾರ ಜೀವನಾಂಶ’ ಎಂಬುದಕ್ಕೆ ಬದ್ಧರಾಗುತ್ತಿಲ್ಲ ಎಂಬುದು ಗಮನಾರ್ಹವಾಗಿತ್ತು.

ಆ ಕುರಿತು ಸಯ್ಯದ್ ಭಾಯಿ ಹೀಗೆ ವಿಶ್ಲೇಷಿಸುತ್ತಾರೆ – “ಪ್ರಧಾನಿಯವರ ಹಿಂದಿನ ಭರವಸೆ ಬದಲಾಗಿತ್ತು. ಕಾರಣ ಕಾಂಗ್ರೆಸ್ ಮತ್ತು ಅವರು ಸಂಪ್ರದಾಯನಿ? ಮುಸ್ಲಿಮರ ಮತ್ತು ರಾಜಕಾರಣಿಗಳ ಒತ್ತಡಕ್ಕೆ ಮಣಿದಿದ್ದರು. ಮುಂದೆ ದೇಶದ ತಲಾಖ್ ಪೀಡಿತ ಮುಸ್ಲಿಂ ಮಹಿಳೆಯರ ದುರದೃಷ್ಟಕ್ಕೆ ಅವರು ಮುದ್ರೆ ಒತ್ತಿದರು; ಅವರ ಮುಂದಿನ ಹೆಜ್ಜೆ ಜೀವನಾಂಶ ರದ್ದತಿಯೇ ಆಗಿತ್ತು.”

ಪ್ರಧಾನಿಯವರು ತೋರಿದ ಹಿಂಜರಿಕೆಯಿಂದಾಗಿ ಜೀವನಾಂಶ ವಿರೋಧಿಗಳು ತಮ್ಮ ಪ್ರತಿಭಟನೆಯನ್ನು ದ್ವಿಗುಣಗೊಳಿಸಿದರು. ಚಳವಳಿಯನ್ನು ದೇಶಾದ್ಯಂತ ಹಬ್ಬಿಸಿದರು. ಮುಸ್ಲಿಂ ಪುರುಷರು ಜೀವನಾಂಶ ಕೊಡುವುದನ್ನು ಕಾನೂನಿನಿಂದ ಮುಕ್ತ ಮಾಡಬೇಕೆಂದು ಸಾವಿರಗಟ್ಟಲೆ ಅರ್ಜಿ ಮತ್ತು ತಂತಿಸಂದೇಶಗಳು ಪ್ರಧಾನಿಗೆ ರವಾನೆಯಾದವು. ಶಾಬಾನು ಅವರ ಮೇಲೆ ಒತ್ತಡ ತಂದರು. “ಸುಪ್ರೀಂಕೋರ್ಟ್ ನನಗೆ ಕೊಡಮಾಡಿದ ಜೀವನಾಂಶವನ್ನು ತೆಗೆದುಕೊಳ್ಳಲು ನಾನು ನಿರಾಕರಿಸುತ್ತೇನೆ” ಎಂಬ ಹೇಳಿಕೆಗೆ ಆಕೆ ಸಹಿ ಹಾಕುವಂತೆ ಒತ್ತಾಯಿಸಿದರು. ಮೊದಲಿಗೆ ಆಕೆ ಒಪ್ಪಲಿಲ್ಲ. ’ಶಾಬಾನು ಜೀವನಾಂಶವು ದೇಶದ ಮುಸ್ಲಿಮರಿಗೆ ಬೆದರಿಕೆ’ ಎಂದು ಮತ್ತ? ಒತ್ತಡ ತಂದರು; ಇಂದೋರ್ ಬಂದ್ ಮಾಡಿದರು. ಅಂತೂ ಶಾಬಾನು ಅವರಿಂದ ಬಲಾತ್ಕಾರವಾಗಿ ಸಹಿ ಹಾಕಿಸಿಕೊಂಡು ’ಶಾಬಾನು ಜೀವನಾಂಶ ನಿರಾಕರಿಸಿದಳು’ ಎನ್ನುವ ಹೇಳಿಕೆ ನೀಡಿದರು.

ಜೀವನಾಂಶ ನೀಡುವ ಕಾನೂನಿನಿಂದ ಪುರುಷರಿಗೆ ವಿನಾಯತಿ ಕೊಡಬೇಕೆಂಬುದು ಮುಂದಿನ ಚಳವಳಿಯಾಗಿತ್ತು. ಯಾವ ಮುಸ್ಲಿಂ ಮಹಿಳೆಯೂ ಜೀವನಾಂಶಕ್ಕಾಗಿ ಕೋರ್ಟಿಗೆ ಹೋಗಬಾರದೆಂದು ನಿಶ್ಚಿತಪಡಿಸಲು ಯತ್ನಿಸಿದರು.

ಸಂಸತ್ತಿನಲ್ಲಿ

ಸಂಸತ್ತಿನಲ್ಲಿ ವಿಷಯ ಚರ್ಚೆಗೆ ಬಂದಾಗ ಕಾಂಗ್ರೆಸಿನವರಾದ ಮಂತ್ರಿ ಆರಿಫ್ ಮುಹಮ್ಮದ್ ಖಾನ್ ಅವರು ಜೀವನಾಂಶ ನೀಡಿಕೆಯನ್ನು ಬೆಂಬಲಿಸಿ ಮಾತನಾಡಿದರು. ಆದರೆ ಸರ್ಕಾರದ ನಿಲವು ವಿಭಿನ್ನವಾಗಿತ್ತು. ಜವಳಿ ಮಂತ್ರಿ ಝಡ್.ಎ. ಅನ್ಸಾರಿ ಅವರು ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶ ನೀಡುವುದನ್ನು ವಿರೋಧಿಸಿ ಸುದೀರ್ಘ ಭಾಷಣ ಮಾಡಿದರು; ಸರ್ಕಾರ ಜೀವನಾಂಶ ಕೊಡುಗೆಯ ಹಿಂತೆಗೆತಕ್ಕೆ ನಿರ್ಧರಿಸಿತು. ಸಮನಾದ ಜೀವನಾಂಶಕ್ಕೆ ಬದಲಾಗಿ ತಲಾಖ್ ಹೊತ್ತಿಗೆ ಒಂದು ದೊಡ್ಡ ಮೊತ್ತ ನೀಡಲು ನಿರ್ಧರಿಸಿ ಆ ಬಗ್ಗೆ ಹೊಸ ನಿಯಮವನ್ನು ರೂಪಿಸಲಾಯಿತು.

ಜೀವನಾಂಶ ವಿರೋಧಿ ಚಳವಳಿ, ಶಾಬಾನು ತೀರ್ಪು ವಿರೋಧಿ ರ‍್ಯಾಲಿಗಳು ನಡೆಯುತ್ತಲೇ ಇದ್ದವು. ಮುಸ್ಲಿಮರ ವೋಟು ಸಿಗಲಾರದೆಂದು ಸರ್ಕಾರಕ್ಕೆ ಬೆದರಿಕೆ ಒಡ್ಡಲಾಯಿತು. ಸರ್ಕಾರ ಅದಕ್ಕೆ ಮಣಿಯಿತು. “ಜೀವನಾಂಶದ ವಿಷಯದಲ್ಲಿ ಮುಸ್ಲಿಮರ ಮನೋಭಾವ ಮತ್ತು ಅಭಿಪ್ರಾಯಗಳನ್ನು ನಾವು ಗೌರವಿಸುತ್ತೇವೆ” ಎಂದು ಕಾಂಗ್ರೆಸ್ ನಾಯಕರು ಹೇಳಿದರು. ಜೀವನಾಂಶ ವಿರೋಧಿಗಳು ಅದರಿಂದ ಬೀಗಿದರು. ಆರಿಫ್ ಮುಹಮ್ಮದ್ ಖಾನ್ ಅವರು ಶಾಬಾನು ಕೇಸಿನ ಸಂಬಂಧ ಸರ್ಕಾರದ ನಿಲವನ್ನು ವಿರೋಧಿಸಿ ಸಂಸತ್ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅಂತೂ ವಿಚ್ಛೇದಿತ ಮುಸ್ಲಿಂ ಮಹಿಳೆಯ ಜೀವನಾಂಶ ಕೇಳುವ ಹಕ್ಕನ್ನು ಸರ್ಕಾರ ಇಲ್ಲವಾಗಿಸಿತು.

ಸರ್ಕಾರ ಮುಸ್ಲಿಂ ಪರ್ಸನಲ್ ಲಾ ಬೋರ್ಡಿನ ಜೊತೆ ಚರ್ಚಿಸಿ ಹೊಸ ನಿಯಮವನ್ನು ರೂಪಿಸಿತು. ಅದೇ ’ವಿಚ್ಛೇದಿತ ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣಾ ಮಸೂದೆ – 1986’. ಜೀವನಾಂಶಕ್ಕೆ ಅದರಲ್ಲಿ ಅವಕಾಶ ಇಲ್ಲ; ಪುರುಷರಿಗೆ ನಿಯಮಗಳಿಂದ ಬಿಡುಗಡೆ ದೊರೆಯಿತು. ಹೊಸ ಕಾನೂನಿನ ನಿಯಮಗಳು ಹೀಗಿವೆ:

  • ತಲಾಖ್ ನೀಡಿದ ಬಳಿಕ ಪತಿ ಇದ್ದತ್‌ನ ಸಮಯ ಮುಗಿಯುವವರೆಗೆ ಯೋಗ್ಯವಾದ ಮೊತ್ತ(ಹಣ)ವನ್ನು ಆಕೆಗೆ ನೀಡಬೇಕು.
  • ಮಕ್ಕಳು ತಾಯಿಯ ಜೊತೆಯಲ್ಲಿದ್ದರೆ ಎರಡು ವ? ಪ್ರಾಯದವರೆಗೆ ಅವರಿಗೆ ಜೀವನಾಂಶ ನೀಡಬೇಕು.
  • ಆ ಮಹಿಳೆಯ ಮರಣಾನಂತರ ಆಕೆಯ ಹೆಸರಿನಲ್ಲಿರುವ ಆಸ್ತಿಯನ್ನು ಆಕೆಯ ನ್ಯಾಯಯುತ ಉತ್ತರಾಧಿಕಾರಿಗಳು ಪಡೆದುಕೊಳ್ಳಬಹುದು.
  • ಆಕೆಯ ಸಂಬಂಧಿಕರು, ಉತ್ತರಾಧಿಕಾರಿಗಳು ಅಥವಾ ಆಕೆಯ ಹೆತ್ತವರು ಆಕೆಯನ್ನು ಸಲಹಲು ಸಾಧ್ಯವಿಲ್ಲದವರಾದರೆ ಆಕೆಗೆ ಜೀವನಾಂಶ ಕೊಡಲು ವಕ್ಫ್ ಬೋರ್ಡಿಗೆ ನ್ಯಾಯಾಲಯ ಆಜ್ಞೆ ಮಾಡಬಹುದು.
  • ಸಿಆರ್‌ಪಿಸಿ ೧೨೫ರಂತೆ ಅಫಿದವಿತ್ ಸಿದ್ಧಪಡಿಸಿದ ಬಳಿಕ ಈ ಕೇಸನ್ನು ನ್ಯಾಯಾಲಯದಲ್ಲಿ ಮಂಡಿಸಬಹುದು.
  • ಖುರಾನಿನಲ್ಲಿ

“ಖುರಾನಿನ ಎರಡನೇ ಸೂರಾದ ೨೪೦ನೇ ವಾಕ್ಯದಲ್ಲಿ ತಲಾಖ್ ನೀಡುವಾಗ ಅಕೆಯ ಮುಂದಿನ ಜೀವನಕ್ಕೆ ತೊಂದರೆ ಆಗದಂತೆ ಆಕೆಗೆ ’ಮತಾಃ’ ನೀಡಬೇಕು ಎಂದು ಸ್ಪಷ್ಟವಾಗಿ ಬರೆದಿದೆ. ’ಸಾಕಷ್ಟು ಹಣವನ್ನು ನೀಡಬೇಕು’ ಎಂಬುದು ಇದರ ಅರ್ಥ. ಆದರೆ ರಾಜೀವ್‌ಗಾಂಧಿಯವರ ಹೊಸ ಮಸೂದೆಯಲ್ಲಿ ಮತಾಃ ಎಂಬ ಶಬ್ದವೇ ಇಲ್ಲ. ಅಲ್ಲದೆ ಗಂಡುಮಕ್ಕಳು ೭ ವ?ಗಳವರೆಗೆ ಮತ್ತು ಹೆಣ್ಣುಮಕ್ಕಳು 14 ವರ್ಷಗಳವರೆಗೆ ತಾಯಿಯ ಬಳಿ ಇರಬೇಕು; ಮತ್ತು ತಂದೆ ಆ ಮಕ್ಕಳ ಖರ್ಚುವೆಚ್ಚ ನೋಡಿಕೊಳ್ಳಬೇಕು ಎಂಬುದು ಹಿಂದಿನ ನಿಯಮ. ಆದರೆ ಹೊಸ ಮಸೂದೆ ಮಕ್ಕಳಿಗೆ ೨2ವರ್ಷ ಆಗುವವರೆಗೆ ಮಾತ್ರ ಅವರಿಗೆ ಜೀವನಾಂಶ ನೀಡಬೇಕೆಂದು ಹೇಳುತ್ತದೆ” ಎಂದು ಸಯ್ಯದ್ ಭಾಯಿ ಆಕ್ಷೇಪಿಸುತ್ತಾರೆ; ಮತ್ತು “ಮುಸ್ಲಿಂ ಮಹಿಳೆಯರು ಏನನ್ನೂ ಪ್ರಶ್ನಿಸಲಾರರಲ್ಲವೆ? ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಈ ಮಹಿಳೆಯರಿಗೆ ಧ್ವನಿ ಇಲ್ಲವಾಗಿದೆ” ಎಂದು ವಿಷಾದಿಸುತ್ತಾರೆ.

ಇನ್ನೊಂದೆಡೆ ಅವರು “ಇಸ್ಲಾಮಿಕ್ ಕಾನೂನುಗಳು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ವಿಭಿನ್ನವಾಗಿವೆ ಎಂಬುದು ಪ್ರತಿಯೊಬ್ಬರಿಗು ಗೊತ್ತಿದ್ದರೂ ತಲಾಖ್ ನಿಯಮ ಬದಲಿಸಬೇಕೆಂದಾಗ ಅದು ಧರ್ಮಕ್ಕೆ ಸಂಬಂಧಪಟ್ಟದ್ದು ಎನ್ನುತ್ತಾ ಆ ಬದಲಾವಣೆಯನ್ನು ವಿರೋಧಿಸುತ್ತಾರೆ. ಈ ಹಟಮಾರಿತನದ ಹಿಂದೆ ಇರುವುದು ಒಂದೇ ಉದ್ದೇಶ; ಪುರುಷರು ಅನುಭವಿಸುತ್ತಿರುವ ಈ ಹಕ್ಕನ್ನು ಕಳೆದುಕೊಳ್ಳಲು ಮತ್ತು ಮಹಿಳೆಯರ ಪರ ನ್ಯಾಯತೀರ್ಮಾನವಾಗಿ ಮಹಿಳೆಯರಿಗೆ ಹಕ್ಕು ಸಿಗುವುದನ್ನು ಅವರು ಸಹಿಸಲಾರರು” ಎಂದು ವಿಶ್ಲೇಷಿಸುತ್ತಾರೆ.

ವೇಶ್ಯಾವಾಟಿಕೆಯತ್ತ

ಒಂದು ನೆಲೆಯಲ್ಲಿ ನೋಡಿದರೆ ಎಲ್ಲ ತಲಾಖ್‌ಗಳೂ ಕ್ರೂರವಾದವುಗಳೇ; ಅದಕ್ಕೆ ಮುಖ್ಯಕಾರಣವೆಂದರೆ ಅವು ಏಕಪಕ್ಷೀಯ. ಮುಸ್ಲಿಂ ಸಮುದಾಯದಲ್ಲಿ ಮದುವೆಯ ಸಂದರ್ಭದಲ್ಲಿ ವಧುವಿನ ಒಪ್ಪಿಗೆಯನ್ನು ಕೇಳಲಾಗುತ್ತದೆ. ಆಕೆ ತನ್ನ ಒಪ್ಪಿಗೆಯನ್ನು ಹೇಳಿದ ಬಳಿಕವೇ ಮದುವೆ ನಡೆಯುತ್ತದೆ. ಅಂದರೆ ಅದೊಂದು ಒಪ್ಪಂದ; ಏಕಪಕ್ಷೀಯ ಅಲ್ಲ. ಆದರೆ ತ್ರಿವಳಿ ತಲಾಖ್ ಕೇವಲ ಪುರುಷನ ಹಕ್ಕೆಂಬಂತೆ ಏಕಪಕ್ಷೀಯವಾಗಿದೆ. ತಲಾಖ್‌ಗೆ ಸಂಬಂಧಿಸಿದಂತೆ ಅನುವಾದಕಿ ಸಾರಾ ಅಬೂಬಕ್ಕರ್

ಹೀಗೆ ಹೇಳುತ್ತಾರೆ: “ಮುಂಬಯಿ ವೇಶ್ಯಾವಾಟಿಕೆಯ ಶೇ. 75ರಷ್ಟು ಮಹಿಳೆಯರು ತಲಾಖ್ ಪೀಡಿತರು. ಜೀವನಾಂಶ ನೀಡುವುದು ಧರ್ಮವಿರುದ್ಧವಾದರೆ ವೇಶ್ಯಾವಾಟಿಕೆ ಧರ್ಮಸಮ್ಮತವೆ? ರಾಜೀವ್ ಗಾಂಧಿಯವರು ತಂದ ’ವಿಚ್ಛೇಧಿತ ಮಹಿಳೆಯರ ಹಕ್ಕು ರಕ್ಷಣಾ ಮಸೂದೆ’ಯು ಪುರುಷಪ್ರಧಾನ ವ್ಯವಸ್ಥೆಯನ್ನು ಸಮರ್ಥಿಸುವಂತಿದ್ದು ಇದು ಮಹಿಳೆಯರನ್ನು ವಂಚಿಸುವುದಕ್ಕೆ ಒಂದು ಉದಾಹರಣೆ ಮಾತ್ರ ಆಗಿದೆ.”

ಮುಂದುವರಿದು, “ಹಳೆಯ ಹಲವು ನಿಯಮಗಳು ಮೂಲೆಸೇರಿವೆ. ಉದಾಹರಣೆಗೆ ಹಿಂದೆ ಗುಲಾಮರ ವ್ಯಾಪಾರ ನಡೆಯುತ್ತಿತ್ತು. 1400 ವರ್ಷ ಹಿಂದಿನ ಆ ಪದ್ಧತಿ ಈಗ ಉಳಿದಿಲ್ಲ. ಅದೇ ರೀತಿ ತ್ರಿವಳಿ ತಲಾಖ್ ಇಂದಿಗೆ ಎಷ್ಟು ಸರಿ? ಹಾಗೆಯೇ ಇಂದಿಗೆ ವಿಚ್ಛೇದನಗೊಂಡ ಮುಸ್ಲಿಂ ಪತಿ-ಪತ್ನಿ ಮತ್ತೆ ಒಂದಾಗಬೇಕಾದರೆ ಪತ್ನಿ ಇನ್ನೊಬ್ಬನನ್ನು ಮದುವೆಯಾಗಿ ಕೆಲಕಾಲ ಆತನೊಂದಿಗೆ ಪತ್ನಿಯ ಎಲ್ಲ ಕೆಲಸ ನಿರ್ವಹಿಸುತ್ತಾ ಬದುಕಿ ಮತ್ತೆ ವಿಚ್ಛೇದನ ಪಡೆದು ಬಂದು ಮೊದಲಿನ ಪತಿಯನ್ನು ಪುನಃ ಮದುವೆಯಾಗಬೇಕು. ಆಗ ಗರ್ಭೀಣಿಯಾದರೆ ಮಗು ಹೆರುವ ತನಕ ಬರುವಂತಿಲ್ಲ. ಇದು ಹಲಾಲಾ. ಇವೆಲ್ಲ ಧಾರ್ಮಿಕ ನಿಯಮ ಎನ್ನಲು ಆಧಾರ ಏನು? ಆ ಬಗ್ಗೆ ಪರಿವರ್ತನೆ ಆಗಬೇಕು” ಎನ್ನುತ್ತಾ ಸಯ್ಯದ್ ಭಾಯಿ ಅವರೊಂದಿಗೆ ಸಾರಾ ಸಹಮತ ವ್ಯಕ್ತಪಡಿಸುತ್ತಾರೆ.

ಸಾರಾ ಅಬೂಬಕ್ಕರ್ ಇನ್ನೊಂದು ಅಂಶದತ್ತ ಗಮನ ಸೆಳೆಯುತ್ತಾ, “ತಲಾಖ್ ಪೀಡಿತರಿಗೆ ಜೀವನಾಂಶ ನೀಡುವುದು ಹೊಸತೇನೂ ಅಲ್ಲ. ನ್ಯಾಯವಾದಿಯಾಗಿದ್ದ ನನ್ನ ತಂದೆ 1940 ರಿಂದ 1960ರ ದಶಕಗಳಲ್ಲಿ ತಲಾಖ್ ಪೀಡಿತ ಮಹಿಳೆಯರಿಗೆ ನ್ಯಾಯಾಲಯದಿಂದ ಜೀವನಾಂಶ ಕೊಡಿಸುತ್ತಿದ್ದರು. ಸಿಆರ್‌ಪಿಸಿ 125ನೇ ವಿಧಿಯಂತೆ ಅದು ನಡೆಯುತ್ತಿದ್ದು, ಆಗ ಯಾರೂ ಅದನ್ನು ಪ್ರಶ್ನಿಸುತ್ತಾ ಇರಲಿಲ್ಲ. ಹೀಗಿರುವಾಗ ಜೀವನಾಂಶವು ಇಸ್ಲಾಂಧರ್ಮವಿರೋಧಿ ಎಂದು 1985ರಲ್ಲಿ ಆದದ್ದು ಹೇಗೆ?” ಎಂದು ಪ್ರಶ್ನಿಸುತ್ತಾರೆ.

ಶಾಬಾನು ಕೇಸಿನ ತೀರ್ಪು ಬಂದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾ – “ಶಾಬಾನುಗೆ ಜೀವನಾಂಶ ಕೊಡಿಸಿದ್ದನ್ನು ಕೇರಳ ಜಮಾತೆ ಇಸ್ಲಾಮಿಂ ಪತ್ರಿಕೆ ’ಪ್ರಬೋಧನಂ’ ಹೊಗಳಿ ಬರೆಯಿತು. ಮರುದಿನ ಅದೇ ಪತ್ರಿಕೆ ’ನಮ್ಮಿಂದ ತಪ್ಪಾಗಿದೆ; ಜೀವನಾಂಶ ನೀಡಿದ ತೀರ್ಪು ಧರ್ಮವಿರೋಧಿ’ ಎಂದು ಬರೆಯಿತು” ಎನ್ನುವ ಸಾರಾ, “ದೆಹಲಿಯಲ್ಲಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಎಂಬ ’ಅವಿವೇಕಿ’ಗಳ ಸಂಘಟನೆ ಇದೆಯಲ್ಲಾ; ಅಲ್ಲಿಂದ ಪ್ರಬೋಧನವನ್ನು ಎಚ್ಚರಿಸಿರಬಹುದು” ಎಂದು ಅಭಿಪ್ರಾಯಪಡುತ್ತಾರೆ.

ಸಂವಿಧಾನಕ್ಕಿಲ್ಲ ಬೆಲೆ

“ಮೂರು ತಲಾಖ್‌ನ ಸೌಕರ್ಯ ಮಹಿಳೆಯರಿಗಿಲ್ಲ. ಮಹಿಳೆ ವಿಚ್ಛೇದನ ಬೇಕಿದ್ದರೆ ವಕೀಲನನ್ನು ಹಿಡಿದು ಕೋರ್ಟಿನಲ್ಲಿ ಹೋರಾಡಬೇಕು. ವರ್ಷಗಟ್ಟಲೆ ಹೋರಾಡಿದರೂ ಅದು ಸಿಗದೇ ಹೋಗಬಹುದು” ಎನ್ನುವ ಸಾರಾ, “ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದು ಅಂಬೇಡ್ಕರ್ ನೀಡಿದ ಉತ್ತಮ ಸಂವಿಧಾನ ನಮಗಿದೆ. ಅದರಂತೆ ತಾರತಮ್ಯಕ್ಕೆ ಅವಕಾಶವಿಲ್ಲ. ಸಮಾನ ಸೌಲಭ್ಯ, ಸಮಾನ ಅವಕಾಶಗಳಿದ್ದರೂ ಕೂಡ ಧರ್ಮದ ಹೆಸರಿನಲ್ಲಿ ಮುಸ್ಲಿಂಮಹಿಳೆಯನ್ನು ಸಮಾನತೆಯಿಂದ ಹೊರಗಿಟ್ಟಿದ್ದಾರೆ. ಈ ಅಸಮಾನತೆಯ ಕಾರಣದಿಂದ ಮುಸ್ಲಿಂ ಮಹಿಳೆಯರು ಪುರುಷರ ದೌರ್ಜನ್ಯ, ಶೋಷಣೆಗಳಿಗೆ ಗುರಿಯಾಗುತ್ತಿದ್ದಾರೆ” ಎಂದು ಟೀಕಿಸುತ್ತಾರೆ.

“ದೇಶದಲ್ಲಿ ಮುಸ್ಲಿಮೇತರ ಮಹಿಳೆಯರಿಗೆ ವಿಚ್ಛೇದನ ನೀಡುವುದು ಸುಲಭವಲ್ಲ. ಅದು ನ್ಯಾಯಾಲಯದಲ್ಲೇ ಆಗಬೇಕು; ಪತಿಯು ಜೀವನಾಂಶವನ್ನು ನೀಡಬೇಕು. ನೀಡದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆದರೆ ಮುಸ್ಲಿಮರಲ್ಲಿ ವಿಚ್ಛೇದನ ಪುರುಷರ ಏಕಸ್ವಾಮ್ಯ ಹಕ್ಕಾಗಿದೆ. ಮಕ್ಕಳ ಸಹಿತ ಆಕೆ ಮನೆಯಿಂದ ಹೊರಗಾಗುತ್ತಾಳೆ. ಅವಳಿಗೆ ಜೀವನಾಂಶವಿಲ್ಲ. ಜೀವನಾಂಶಕ್ಕಾಗಿ ಕೋರ್ಟಿಗೆ ಹೋಗುವ ಅಧಿಕಾರವೂ ಇಲ್ಲ. ಹಾಗಾದರೆ ಸರ್ವರಿಗೂ ಸಮಾನ ಹಕ್ಕು, ಸಮಾನತೆ ಎಂದು ಸಂವಿಧಾನ ನೀಡಿದ ಹಕ್ಕು ಇವರಿಗೆ ಅನ್ವಯ ಆಗುವುದಿಲ್ಲವೆ? ಇವರನ್ನು ಸಂವಿಧಾನದಿಂದ ಹೊರಗಿಡಲು ಕಾರಣವೇನು? ಸಮಾನ ಹಕ್ಕು ಇದೆ ಎಂದಾದರೆ ವಿಚ್ಛೇದನದ ಹೆಸರಿನಲ್ಲಿ ದೌರ್ಜನ್ಯ ನಡೆಸಲು ಅವಕಾಶ ಸಿಕ್ಕಿರುವುದು ಹೇಗೆ?” ಎಂದು ಪ್ರಶ್ನಿಸಿರುವ ಲೇಖಕಿ ಸಾರಾ ಅಬೂಬಕ್ಕರ್, ಈ ಕುರಿತು ಮುಸ್ಲಿಂ ಮಹಿಳೆಯರೆಲ್ಲರೂ ಚಿಂತನೆ ನಡೆಸಿ ದೌರ್ಜನ್ಯದ ವಿರುದ್ಧ ಹೋರಾಡಬೇಕು. ವಿಶೇಷ ವಿವಾಹ ಕಾಯ್ದೆ ಪ್ರಕಾರ ಎಲ್ಲ ವಿವಾಹಗಳನ್ನೂ ರಿಜಿಸ್ಟರ್ ಮಾಡಬೇಕು; ಅದರಿಂದ ಈ ಬಗೆಯ ತಲಾಖ್‌ಗೆ ತಡೆಯೊಡ್ಡಬಹುದೆಂದು ಸೂಚಿಸಿದ್ದಾರೆ.

’ವಿಚ್ಛೇದಿತ ಮುಸ್ಲಿಂಮಹಿಳೆಯರ ಹಕ್ಕುರಕ್ಷಣಾ ಮಸೂದೆ – 1986’ ಸಯ್ಯದ್ ಭಾಯಿ ಅವರ ಹೋರಾಟಕ್ಕೆ ದೊಡ್ಡ ಹಿನ್ನಡೆಯೇ ಆಗಿತ್ತು. ಆದರೆ ಅವರು ಬದುಕಿನಲ್ಲಿ ತಾನು ಆಗಲೇ ಹಿಡಿದಿದ್ದ ದಾರಿಯಿಂದ ಹಿಂದೆ ಸರಿಯಲಿಲ್ಲ. ದೇಶಾದ್ಯಂತ ಸಂಚಾರ ನಡೆಸಿ ವಿವಿಧ ನಗರ- ಪಟ್ಟಣಗಳಿಗೆ ಭೇಟಿ ನೀಡಿದರು. ೪೦ಕ್ಕೂ ಹೆಚ್ಚು ಕಡೆ ಮಹಿಳಾ ಸಹಾಯಕೇಂದ್ರಗಳನ್ನು ಸ್ಥಾಪಿಸಿ, ಸಂತ್ರಸ್ತ ಮುಸ್ಲಿಂ ಮಹಿಳೆಯರಿಗೆ ತಮ್ಮಿಂದಾದ ನೆರವು ನೀಡುತ್ತಾ ಬಂದರು; ಹೋರಾಟ ಅಗತ್ಯವೆನಿಸಿದಲ್ಲಿ ಅದನ್ನೂ ನಡೆಸಿದರು. ಹಮೀದ್ ದಳವಾಯಿ ಎನ್ನುವ ಖ್ಯಾತ ಸುಧಾರಕರು ಆರಂಭಿಸಿದ ’ಮುಸ್ಲಿಂ ಸತ್ಯಶೋಧಕ ಮಂಡಲ’ದ ಜೊತೆಗೆ ತಮ್ಮನ್ನು ಜೋಡಿಸಿಕೊಂಡು ದಣಿವರಿಯದ ಮಾನವೀಯ ಸೇವೆಯನ್ನು ನಡೆಸಿಕೊಂಡು ಬಂದರು.

  • email
  • facebook
  • twitter
  • google+
  • WhatsApp
Tags: ತ್ರಿವಳಿ ತಲಾಖ್ಮುಸ್ಲಿಂಮುಸ್ಲಿಂ ಮಹಿಳೆ

Related Posts

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!
BOOK REVIEW

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!

July 7, 2022
BOOK REVIEW

Conflict resolution : The RSS way

April 21, 2022
BOOK REVIEW

ಬುದ್ಧಚರಣ ಅನಿಕೇತನನ ಆಂತರ್ಯದ ಅನಾವರಣ!

February 28, 2022
BOOK REVIEW

ರಾಣಿ ಚೆನ್ನಭೈರಾದೇವಿ ಬಹುಪಾರಕ್!!

January 29, 2022
ಭಾರತದ ರೈತರು ಶ್ರೀಮಂತರಾಗಲು ಮತ್ತು ಸ್ವಾವಲಂಬಿಗಳಾಗಲು ಹೊಸ ಕೃಷಿ ಕಾಯಿದೆಯ ಅವಶ್ಯಕತೆಯಿದೆ.
Articles

ಭಾರತದ ರೈತರು ಶ್ರೀಮಂತರಾಗಲು ಮತ್ತು ಸ್ವಾವಲಂಬಿಗಳಾಗಲು ಹೊಸ ಕೃಷಿ ಕಾಯಿದೆಯ ಅವಶ್ಯಕತೆಯಿದೆ.

April 28, 2021
ತಮಿಳುನಾಡಿನ ಓಬವ್ವ ! : ಕುಯಿಲಿ ಎಂಬ ಧೀರೆಯ ಕಥನ
BOOK REVIEW

ಹುತಾತ್ಮ ಕುಯಿಲಿ, ಹೇಗಾದಾಳು ಎಲ್ಟಿಟಿಇ?

April 9, 2021
Next Post
ಚೀನಾಗಡಿಯಲ್ಲಿ ಮಾದರಿ ಗ್ರಾಮ ನಿರ್ಮಿಸಲು ಮುಂದಾದ ಅರುಣಾಚಲ ಸರ್ಕಾರ

ಚೀನಾಗಡಿಯಲ್ಲಿ ಮಾದರಿ ಗ್ರಾಮ ನಿರ್ಮಿಸಲು ಮುಂದಾದ ಅರುಣಾಚಲ ಸರ್ಕಾರ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

EDITOR'S PICK

ನೈಲ್ ನದಿ ಕಣಿವೆಯೂ ಹೇಮಾವತಿ ನದಿಯ ನೀರೂ….

January 25, 2022
RSS Chief Mohan Bhagwat says ‘Government lacks will to fight terror threats’

RSS Chief Mohan Bhagwat says ‘Government lacks will to fight terror threats’

September 25, 2011
Karnataka Uttar Prant’s Sangh Shiksha Varg concludes at Dharawad ಉತ್ತರ ಪ್ರಾಂತದ ಸಂಘ ಶಿಕ್ಷಾ ವರ್ಗ ಸಮಾರೋಪ

Karnataka Uttar Prant’s Sangh Shiksha Varg concludes at Dharawad ಉತ್ತರ ಪ್ರಾಂತದ ಸಂಘ ಶಿಕ್ಷಾ ವರ್ಗ ಸಮಾರೋಪ

May 12, 2015
ಹಿಂದೂ ಸಾಮ್ರಾಜ್ಯ ದಿನೋತ್ಸವ ; ಛತ್ರಪತಿ ಶಿವಾಜಿ ಮಹಾರಾಜ್  ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ

ಹಿಂದೂ ಸಾಮ್ರಾಜ್ಯ ದಿನೋತ್ಸವ ; ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ

May 31, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In