
ನವದೆಹಲಿ : ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವಾ ಬ್ರಿಗೇಡ್ ನ ಸಾಮಾಜಿಕ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ 2020ರ ಕೊನೆಯ ಹಾಗೂ 72ನೇ ಮನ್ ಕಿ ಬಾತ್ (‘ಮನದ ಮಾತು’) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಶ್ರೀರಂಗಪಟ್ಟಣದಲ್ಲಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವಾ ಬ್ರಿಗೇಡ್ ತಂಡ ಶಿಥಿಲಗೊಂಡಿದ್ದ, ಅವ್ಯವಸ್ಥೆಗೀಡಾಗಿದ್ದ ವೀರಭದ್ರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮಾಡಿತ್ತು. ಈ ಜೀರ್ಣೋದ್ಧಾರ ಕಾಮಗಾರಿಯ ಫೋಟೋಗಳು ಸಹ ವೈರಲ್ ಆಗಿತ್ತು. ಆ ಫೋಟೋಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಮುಕ್ತ ಕಂಠದಿಂದ ಶ್ಲಾಘಿಸಿದ್ದು, “ಸಾಧಿಸುವ ಛಲ, ಚೈತನ್ಯ, ಮಾಡಬೇಕೆಂಬ ಹುಮ್ಮಸ್ಸು ಕಂಡಾಗ ದೇಶದ ಯುವಕರ ಬಗ್ಗೆ ಸಂತೋಷ ಮತ್ತು ಭರವಸೆ” ಮೂಡುತ್ತದೆ, ಇಂತಹ ಇಚ್ಛಾಶಕ್ತಿ ಹೊಂದಿದ ಯುವಕರಿಗೆ ಯಾವುದೂ ಸಹ ದೊಡ್ಡ ಸವಾಲಲ್ಲ ಹಾಗೂ ಅಂತಹ ಯುವ ಶಕ್ತಿಗೆ ಯಾವುದೂ ಅಸಾಧ್ಯವಲ್ಲ. ಇಚ್ಛಾಶಕ್ತಿ, ಬದ್ಧತೆ ಇದ್ದಲ್ಲಿ ಯಾವುದನ್ನೂ ಸಾಧಿಸಬಹುದು ಎಂಬುದಕ್ಕೆ ಯುವಾ ಬ್ರಿಗೇಡ್ ತಂಡ ಉದಾಹರಣೆ ಎಂದು ಹೇಳಿದ್ದಾರೆ.

‘ಪ್ರತಿಯೊಬ್ಬರೂ ತಾವು ನಿತ್ಯ ಬಳಸುವ ವಸ್ತುಗಳ ಒಂದು ಪಟ್ಟಿಯನ್ನು ಮಾಡಬೇಕು, ಅದರಲ್ಲಿ ವಿದೇಶಿ ಸಂಸ್ಥೆಗಳು ತಯಾರಿಸಿದ ಎಷ್ಟು ವಸ್ತುಗಳಿವೆ ಎಂಬುದನ್ನು ಗುರುತಿಸಿ, ಅವುಗಳ ಬದಲಿಗೆ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಆರಂಭಿಸಬೇಕು’ ಎಂದು ಅವರು ಮನವಿ ಮಾಡಿದರು.
ಮೋದಿ ಹೇಳಿದ ಇತರ ವಿಷಯಗಳು
- ಹೊಸವರ್ಷದ ದಿನದಂದು ಎಲ್ಲರೂ ಕನಿಷ್ಠ ಒಂದು ಹೊಸ ನಿರ್ಣಯ ಕೈಗೊಳ್ಳುವುದಿಲ್ಲವೇ? ಈ ಬಾರಿ ದೇಶದ ಪರವಾಗಿ ಒಂದು ನಿರ್ಣಯ ಕೈಗೊಳ್ಳೋಣ
- ವ್ಯಾಪಾರಿಗಳು ‘ಭಾರತದಲ್ಲಿ ತಯಾರಾದದ್ದು’ ಎಂದು ಪ್ರಚಾರ ಮಾಡಿ, ಕೆಲವು ಉತ್ಪನ್ನಗಳನ್ನು ಮಾರುತ್ತಿದ್ದಾರೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆಯೂ ಬರುತ್ತಿದೆ. ಒಂದು ವರ್ಷದ ಅವಧಿಯಲ್ಲಿ ನಮ್ಮ ಮನಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಆಗಿದೆ
- ಒಂದೇಬಾರಿ ಬಳಸುವ ಪ್ಲಾಸ್ಟಿಕ್‌ನಿಂದ ದೇಶವನ್ನು ಹೊಸ ವರ್ಷದಲ್ಲಿ ಸಂಪೂರ್ಣವಾಗಿ ಮುಕ್ತಗೊಳಿಸಬೇಕು
- 2014–16ರ ಅವಧಿಯಲ್ಲಿ ದೇಶದಲ್ಲಿ ಚಿರತೆಗಳ ಸಂಖ್ಯೆ ಶೇ 60ರಷ್ಟು ಹೆಚ್ಚಾಗಿದೆ. ಹುಲಿ ಮತ್ತು ಸಿಂಹಗಳ ಸಂಖ್ಯೆಯೂ ಕಳೆದ ಕೆಲವು ವರ್ಷಗಳಿಂದ ಏರಿಕೆಯಾಗುತ್ತಿದೆ. ಇದು ಗಮನಾರ್ಹ ಸಾಧನೆ
ನೆರವು : ವಿವಿಧ ಪತ್ರಿಕೆಗಳು