
ಬೆಂಗಳೂರು: ಪಾದರಾಯನಪುರದ 11 ಅಡ್ಡರಸ್ತೆ-ಮುಖ್ಯರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನು ಮರುನಾಮಕರಣವನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಶಿಫಾರಸ್ಸು ಮಾಡಿದೆ.
ಪಾದರಾಯನಪುರದ 11 ಅಡ್ಡರಸ್ತೆ-ಮುಖ್ಯರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನು ಮರುನಾಮಕರಣ ಮಾಡುತ್ತಿರುವ ಸುದ್ದಿಯನ್ನು ಮೊದಲಬಾರಿಗೆ samvada.org ವರದಿ ಮಾಡಿತ್ತು. ಈ ವರದಿಯನ್ನು ಗಮನಿಸಿದ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ನೇತಾರರು ಮರುನಾಮಕರಣವನ್ನು ರದ್ದುಗೊಳಿಸುವಂತೆ ಬಿಬಿಎಂಪಿಯನ್ನು ಆಗ್ರಹಿಸಿದರು. ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಬಿಬಿಎಂಪಿ ಮರುನಾಮಕರಣವನ್ನು ಏಕಪಕ್ಷೀಯವಾಗಿ ಕೈಗೊಳ್ಳಲಾಗಿದ್ದು, ಇದನ್ನು ರದ್ದುಪಡಿಸುವಂತೆ ರಾಜ್ಯ ನಗರಾಭಿವೃದ್ದಿ ಇಲಾಖೆಯನ್ನು ಕೋರಿದೆ.


ಆಕ್ಷೇಪ: ಪ್ರಮುಖವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಅವರು ಆಕ್ಷೇಪ ವ್ಯಕ್ತಪಡಿಸಿ ಬಿಬಿಎಂಪಿ ಕಮಿಷನರ್ ಅವರಿಗೆ ಪತ್ರ ಬರೆದಿದ್ದರು
ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ಆಕ್ಷೇಪ

ಪಾದರಾಯನಪುರದ ಅಡ್ಡ ರಸ್ತೆಗಳಿಗೆ ಸಮಾಜ ಸೇವಕರ ಹೆಸರಿಡಬೇಕೆನ್ನುವ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈಗ ಸಮಾಜ ಸೇವಕರ ಹೆಸರಿನಲ್ಲಿ ಮುಸ್ಲಿಮರ ಹೆಸರುಗಳನ್ನು ಮಾತ್ರ ಶಿಫಾರಸ್ಸು ಮಾಡಲಾಗಿದೆ. ಒಂದು ಕೋಮಿನ ತುಷ್ಟೀಕರಣಕ್ಕೆ ಮುಂದಾಗಲಾಗಿದೆ ಎಂದು ಬಿಬಿಎಂಪಿ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಅನಂತಕುಮಾರ ಹೆಗಡೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಸ್ವಾತಂತ್ರ್ಯ ಹೋರಾಟಗಾರರು, ದೇಶಕ್ಕಾಗಿ ಹೋರಾಡಿದ ವೀರ ಸೈನಿಕರು, ರಾಷ್ಟ್ರದ ಮಹಾನ್ ವ್ಯಕ್ತಿಗಳ ಹೆಸರನ್ನು ಇಡಬಹುದು. ಆದರೆ, ಮುಸ್ಲಿಮರ ಹೆಸರನ್ನು ಇಡುವುದಕ್ಕೆ ನನ್ನ ತೀವ್ರ ವಿರೋಧವಿದೆ ಎಂದು ಅನಂತಕುಮಾರ ಹೆಗಡೆ ಹೇಳಿದ್ದರು.
ಒಂದೊಮ್ಮೆ ರಾಜ್ಯದ ಇತರ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳೂ ಇದೇ ರೀತಿಯ ನಿರ್ಣಯ ತೆಗೆದುಕೊಂಡಲ್ಲಿ ಪರಿಸ್ಥಿತಿ ಊಹೆಗೂ ನಿಲುಕದಂತಿರುತ್ತದೆ. ಇದು ಕೋಮುಸಾಮರಸ್ಯ ಕೆಡುವುದಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅನಂತಕುಮಾರ ಹೆಗಡೆ ಪತ್ರದಲ್ಲಿ ತಿಳಿಸಿದ್ದರು.
ಬಿಬಿಎಂಪಿ ಆಯುಕ್ತರಿಗೆ ಸಂಸದ ತೇಜಸ್ವಿ ಸೂರ್ಯ ಪತ್ರ, ತೀವ್ರ ಆಕ್ಷೇಪ

ಬಿಬಿಎಂಪಿ ನಿರ್ಧಾರವನ್ನು ಕಟುವಾಗಿ ಪ್ರಶ್ನಿಸಿ ಆಯುಕ್ತರಿಗೆ ಪತ್ರ ಬರೆದಿರುವ ತೇಜಸ್ವಿ ಸೂರ್ಯ, “ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಿಗೆ ಮುಸಲ್ಮಾನರ ಹೆಸರುಗಳನ್ನೇ ಶಿಫಾರಸ್ಸು ಮಾಡಿರುವ ಬಿಬಿಎಂಪಿ ಯ ಈ ನಿರ್ಧಾರವು ಭಾರತ, ಪಾಕಿಸ್ಥಾನದ ವಿಭಜನೆಗೆ ಮೂಲವಾಗಿದ್ದ ದ್ವಿರಾಷ್ಟ್ರ ಸಿದ್ಧಾಂತದ ಪಳಿಯುಳಿಕೆಯಂತಿದೆ” ಎಂದು ಬಿಬಿಎಂಪಿ ನಡೆಯನ್ನು ಖಂಡಿಸಿದ್ದರು.
“ಪಾದರಾಯನಪುರದ ಕೆಲವು ರಸ್ತೆಗಳಿಗೆ ಕೇವಲ ಮುಸ್ಲಿಂ ಹೆಸರುಗಳ ನಾಮಕರಣಕ್ಕೆ ಪ್ರಸ್ತಾವ ಮಾಡಿರುವ ಬಿಬಿಎಂಪಿ ಯ ನಿರ್ಧಾರಕ್ಕೆ ನನ್ನ ಸಂಪೂರ್ಣ ವಿರೋಧವಿದ್ದು, ನನ್ನ ಆಕ್ಷೇಪವಿದೆ. ಪಾಲಿಕೆಯು ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿದು, ಕೇವಲ ಮುಸ್ಲಿಂ ಹೆಸರುಗಳ ನಾಮಕರಣ ಪ್ರಕ್ರಿಯೆಯನ್ನು ಹಿಂಪಡೆಯಬೇಕು” ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದರು.

