1552 ರಿಂದ 1606ರವರೆಗೆ ಐವತ್ನಾಲ್ಕು ವರ್ಷಗಳ ಕಾಲ ಹೈವ,ತುಳುವ,ಕೊಂಕಣ ಪ್ರದೇಶಗಳನ್ನಾಳಿದ ಹಾಡುವಳ್ಳಿ,ನಗಿರೆಗಳ ಮಹಾಮಂಡಳೇಶ್ವರಿ.
ಪೋರ್ಚುಗೀಸರಿಂದ ‘ರೈನಾ ದ ಪಿಮೆಂಟಾ’ ಅಥವಾ ಪೆಪ್ಪರ್ ಕ್ವೀನ್ (ಕರಿ ಮೆಣಸಿನ ರಾಣಿ )ಎಂದು ಕರೆಸಿಕೊಂಡ.. ಮೊಹಮ್ಮದ್ದೀಯರ, ಪೂರ್ಚುಗೀಸರ ಮತಾಂತರದ ಒತ್ತಾಯದಿಂದ ಬೇಸತ್ತು ಆಶ್ರಯ ಬೇಡಿಬಂದವರಿಗೆ ಆಶ್ರಯವಿತ್ತು ಅವ್ವರಸಿ ಎಂದೇ ಹೆಸರಾದ ರಾಣಿ ಚೆನ್ನಭೈರಾದೇವಿ.. ಇಂದು ಇತಿಹಾಸ ಪುಟಗಳಿಂದ ಮರೆಯಾಗಿ ಹೋಗಿರುವುದು ದುರದೃಷ್ಟಕರ ಸಂಗತಿ ..
ಪೋರ್ಚುಗೀಸರ ಹುಟ್ಟಡಗಿಸಿದ್ದ ರಾಣಿ ಅಬ್ಬಕರ ಸಮಕಾಲೀನಳಾದ ರಾಣಿ ಚೆನ್ನಭೈರಾದೇವಿ,ಯುದ್ಧಕ್ಕೂ, ಸ್ನೇಹಕ್ಕೂ, ಆಡಳಿತಕ್ಕೂ ಸೈ ಎನಿಸಿಕೊಂಡಿದ್ದಲ್ಲದೇ ತನ್ನ ಚತುರ ವ್ಯಾಪಾರನೀತಿಯಿಂರ ರಾಣಿ ಎಲಿಜಿಬತ್ ಳಿಗೆ ಸಮ ಎಂದು ಸ್ವತಃ ಪೋರ್ಚುಗೀಸರಿಂದಲೇ ಕರೆಸಿಕೊಂಡಿದ್ದಳು..
ಚೆನ್ನಭೈರಾದೇವಿ ಜಿನೈಕ್ಯರಾದ 17 ವರ್ಷಗಳ ಬಳಿಕ ಆಕೆಯ ಬಗ್ಗೆ,ಆಕೆಯ ಚಾರಿತ್ರ್ಯಕ್ಕೆ ಮಸಿಬಳಿಯುವ ರೀತಿ ಇತಿಹಾಸ ಬರೆದ ಇಟಲಿ ಪ್ರವಾಸಿಗ ಡೆಲ್ಲಾವೆಲ್ಲೆಯಾ ಸುಳ್ಳುಗಳ್ಳನ್ನೇ ನಂಬಿ, ಶೌರ್ಯಕ್ಕೆ ಮತ್ತೊಂದು ಹೆಸರಂತಿದ್ದ ಭೈರಾದೇವಿಯಾ ಇತಿಹಾಸವನ್ನೇ ತಿರುಚಿ, ಆಕೆಯನ್ನು ಕಳಂಕಿತಳನ್ನಾಗಿ ಮಾಡಿ, ದಕ್ಷಿಣ ಭಾರತದ ಅತಿ ಶ್ರೀಮಂತ ಸಂಸ್ಥಾನದ ವೈಭವವನ್ನು ಮರೆತು ಸುಳ್ಳನ್ನೇ ಉಸಿರಾಡಿದ ಇತಿಹಾಸಕಾರರನ್ನು ಬಹುಶಃ ನಗಿರೆಯ ನೆಲ ಎಂದಿಗೂ ಕ್ಷಮಿಸದು!!
ಸಾಳುವ ವಂಶದ ಕುಡಿ ಚೆನ್ನ ಭೈರಾದೇವಿ ಕರಿ ಮೆಣಸಿನ ರಾಣಿಯಾಗಿ ಬೆಳೆದ ಪರಿ ಇತಿಹಾಸದಲ್ಲಿ ಅಜರಾಮರವಾಗಿರಲೇ ಬೇಕು..
ಕರಿ ಮೆಣಸಿನ ರಾಣಿಯ ಅಕಳಂಕ ಚರಿತೆ ಕೃತಿಯು
ಭೈರಾದೇವಿ ಕಾಲದ ವ್ಯಾಪಾರ,ತೆರಿಗೆ ನೀತಿ, ನಗಿರೆ ಮತ್ತು ಹಾಡುವಳ್ಳಿಗಳ ಸುಧಾರಣೆ, ರಾಜ್ಯವೊಂದನ್ನು ಸುಭೀಕ್ಷಗೊಳಿಸುವಲ್ಲಿ ರಾಣಿಯ ಪಾತ್ರ. ವಿಜಯನಗರ ಅರಸರ ನೆಚ್ಚಿನ ಸಾಮಂತಳಾಗಿ ಆಕೆ ಉಳಿದ ಪರಿ,ಕೆಳದಿ, ಬಿಳಗಿ ರಾಜರುಗಳನ್ನ ಹಿಮ್ಮೆಟ್ಟಿಸಿದ್ದು,ಪೂರ್ಚುಗೀಸರಿಗೆ ಈಕೆ ಹೆಣ್ಣಲ್ಲ ಕಿಚ್ಚೊತ್ತ ಕಾಳಿ ಎಂಬಂತೆ ಕಾಡಿಸಿದ್ದನ್ನು ಸವಿಸ್ತಾರವಾಗಿ ತಿಳಿಸಿದೆ. ಅಲ್ಲದೇ,ರಾಣಿಯ ಶೌರ್ಯ, ಜೀವನ, ಧಾರ್ಮಿಕತೆ, ಪ್ರಜೆಗಳೆಡೆಗಿದ್ದ ಪ್ರೀತಿ ಓದುಗರ ಮನಸ್ಸಲ್ಲಿ ಆಕೆಯ ಚಿತ್ರವನ್ನ ಅಚ್ಚೊತ್ತದೆ ಇರಲಾರದು.
ಗೆರುಸೊಪ್ಪೆ, ಹಾಡುವಳ್ಳಿ ಭವ್ಯ ಸಂಸ್ಥಾನನವನ್ನು 54 ವರ್ಷಗಳವರೆಗೆ ಆಳಿ,ಕೆಳದಿ ನಾಯಕರ ವಂಚನೆಯಿಂದ ಸರೆ ಸಿಕ್ಕಿ,ಮುಪ್ಪಿನಲ್ಲೂ ಸಲ್ಲೇಖನ ವ್ರತದ ಮೂಲಕ ಎಲ್ಲ ವೈಷಮ್ಯಗಳ ತೊರೆದು ಸಾವಿನಲ್ಲೂ ಸಾರ್ಥಕತೆ ಕಂಡಳೆಂಬ ಭೈರಾದೇವಿ ಕುರಿತ ಈ ಕಾದಂಬರಿ ಕೊನೆಯಲ್ಲಿ ಕಣ್ಣೀರು ತರಿಸಿದ್ದು ಸುಳ್ಳಲ್ಲ.. ವಿದೇಶಿಗರು ಎಷ್ಟೇ ಬಾರಿ ಈ ನೆಲದ ವೀರ ಮಾತೆಯರ ಇತಿಹಾಸ ತಿರುಚಲು ಯತ್ನಿಸಿದರೂ, ಬೂದಿ ಮುಚ್ಚಿದ ಕೆಂಡದಂತ ಇಂದಲ್ಲ ನಾಳೆ ನೈಜ್ಯ ಇತಿಹಾಸ ಹೊರಬರುತ್ತದೆಯಂಬುದಕ್ಕೆ ಭೈರಾದೇವಿ ಕುರಿತಾದ ಈ ಕಾದಂಬರಿ ಸಾಕ್ಷಿ ಎಂದರೇ ಅತಿಶಯೋಕ್ತಿ ಏನಲ್ಲ.
ಮತಾಂತರದ ವಿರುದ್ಧ ಗುಡುಗಿ, ಪೂರ್ಚುಗೀಸರ ವಿರುದ್ಧ ಬಿಜಾಪುರ,ಕಲ್ಲಿಕೋಟೆ ರಾಜರುಗಳ ಜತೆಗೆ ಸಾಮಾಂತರನ್ನು ಒಗ್ಗೂಡಿಸಿದ್ದ ಆಕೆಗೆ ಈ ರೀತಿ ಬಹುಪಾರಕ್ ಹೇಳುತ್ತಿದ್ದರಂತೆ.
ತಾಳ್ಮೆಯೊಳ್ ತಿರೆಯಂತಿಪ್ಪ, ಜಾಣ್ಮೆಯೊಳ್ ಗುರುವನಿನಂತಿಪ್ಪ, ತ್ಯಾಗದೊಳ್ ಜಿನನಂತಿಪ್ಪ, ಬೀರದೊಳ್ ಭೈರವನಂತಿಪ್ಪ, ಸಾರದೊಳ್ ಸಾಗರದಂತಿಪ್ಪ, ಪ್ರತಾಪದೊಳ್ ಬೆಂಗದಿರನಂತಿಪ್ಪ, ಶಾಂತತೆಯೊಳ್ ತಂಗದಿರನಂತಿಪ್ಪ, ಛಲದೊಳ್ ಸಿಂಗನಂತಿಪ್ಪ, ಪರಾಕ್ರಮದೊಳ್ ಸಿಡಿಲಂತಿಪ್ಪ, ಗಾಂಭೀರ್ಯದೊಳ್ ಕಡಲಂ ಪಡಿಗೊಳ್ವ, ಸರ್ವಾವನೀವಲ್ಲಭರಿಂ ಸಂಪ್ರಾಪ್ತ ಗೌರವರಾಗಿರ್ಪ,
ವಿದ್ವದ್ರಾಜಕವೀಂದ್ರನಟೇಂದ್ರ ಕಲೇಂದ್ರಗುಣೇಂದ್ರಾದಿಗಳಿಂ ಸಂಸ್ತುತರಾಗಿರ್ಪ, ಯಶೋಭೂಷಿತರಾಗಿರ್ಪ, ಸರ್ವಧರ್ಮಾಶ್ರಯ ಪ್ರದಾಯಿನಿ, ಮುಕ್ತಾರತ್ನಗಜಾಶ್ವಸ್ವರ್ಣ ಸಂಭೂಷಿಣಿ, ಶ್ರೀವರ್ಧಮಾನಸಮಚಾರ್ಯನುಸಂಧಾನಶಾಲಿನಿ, ಪ್ರಜಾಸಂಪತ್ಪರಿತ ಪಾಲಿನಿ, ಶ್ರೀಮತ್ಸಾಳುಕೃಷ್ಣದೇವಧರಣೀಕಾಂತಸ್ನುಷೆ, ಭಲ್ಲಾತಕೀಪುರವರಾಧೀಶ್ವರಿ, ಸಂಗೀತಪುರವರಾಧೀಶ್ವರಿ ಶ್ರೀಮನ್ಮಹಾಮಂಡಳೇಶ್ವರಿ ಚೆನ್ನ ಭೈರಾದೇವಿ ಬಹುಪರಾಕ್ ಬಹುಪರಾಕ್!!
ಭಾರತದ ಮಾತೃಶಕ್ತಿಗೆ ಸ್ಫೂರ್ತಿಯಾಗಿ ಚೆನ್ನಭೈರಾದೇವಿಯ ಹೆಸರೂ ಅನಂತವಾಗಿರಲಿ..ಸ್ವಾತಂತ್ರ್ಯ ಹೋರಾಟವೆಂಬುದನ್ನ ಕೆಲವರ ಹೆಸರಿಗಷ್ಟೇ ಮೀಸಲಿಟ್ಟವರಿಗೆ ಆ ಹೋರಾಟದ ಹಿಂದೆ ಇಂತಹದ್ದೊಂದು ದೈತ್ಯ ಮಾತೃಶಕ್ತಿಯ ತ್ಯಾಗವಿತ್ತೆಂಬುದು ಇನ್ನಾದರೂ ಅರಿವಿಗೆ ಬರಲಿ.. ಸ್ವಾತಂತ್ರ್ಯ ಅಮೃತಮಹೋತ್ಸವ ಮುಗಿವುದರೊಳಗೆ ಇಂತಹ ಮಾತೃಶಕ್ತಿಯ ಬೆಳಗು ಯುವಜನತೆಯ ಹೊಸ ಹಾದಿಗೆ ನಾಂದಿಯಾಗಲಿ..