“ಎಲ್ಲಾದರೂ ಇರು, ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!
ನೀ ಮೆಟ್ಟುವ ನೆಲ–ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀ ಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ.”(ಮೆಟ್ಟುವ ನೆಲ ಕರ್ನಾಟಕ)
ಕರ್ನಾಟಕದ ಏಕೀಕರಣದ ಚರ್ಚೆ ನಡೆಯುತ್ತಿದ್ದ ಕಾಲದಲ್ಲೇ ,ಎಲ್ಲೇ ಇದ್ದರೂ, ಹೇಗೆ ಇದ್ದರೂ ನೀನು ಕನ್ನಡಿಗನಾಗಿರು ಎಂಬ ಕರೆಯನ್ನು ಕೊಡುತ್ತಾರೆ. ‘ನೀ ಮೆಟ್ಟುವ ನೆಲ – ಅದೆ ಕರ್ನಾಟಕ’ ಎಂದು ಹೇಳುತ್ತಾ, ಕನ್ನಡಿಗನು ಜಗತ್ತಿನ ಎಲ್ಲೇ ಇದ್ದರೂ ಆತ ತುಳಿಯುವ ನೆಲ ಅದು ಕರ್ನಾಟಕದ ನೆಲ ಎಂದೇ ಭಾವಿಸಲಿ, ಜಗತ್ತಿನ ಯಾವುದೇ ಬೆಟ್ಟವನ್ನು ಏರಿದರೂ ಅದು ಕರ್ನಾಟಕದ ಸಹ್ಯಾದ್ರಿ ಎಂದೇ ಭಾವಿಸಲಿ, ಮುಟ್ಟುವ ಮರ– ಶ್ರೀಗಂಧ, ಕುಡಿಯುವ ನೀರು ಕಾವೇರಿ ಎಂದೇ ಭಾವಿಸಲಿ ಎಂದು ಹೇಳುವ ಕವಿಯ ಮಾತುಗಳು ಏಕೀಕರಣದ ಅರ್ಥವನ್ನು ವಿಸ್ತ್ತರಿಸುತ್ತದೆ. ಕನ್ನಡಿಗ ತಾನು ಹೋದ ಕಡೆಯೇ ಕರ್ನಾಟಕವನ್ನು ಕಾಣಬೇಕು ಎಂಬ ಆಲೋಚನೆಯೇ ಬಹಳ ವಿಶಿಷ್ಟವಾದುದು. ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ಸಂದೇಶದ ಬೀಜರೂಪವು ಇದೇ ಕವಿತೆಯ ಮೂಲಕ ವ್ಯಕ್ತವಾಗಿದೆ ಎಂದು ಹೇಳಬಹುದು. ಕರ್ನಾಟಕವನ್ನು ನೆಲಕ್ಕೆ, ಗಡಿ ಗುರುತುಗಳಿಗೆ ಅತೀತವಾಗಿ ಗ್ರಹಿಸಬಹುದೆಂಬುದರ ಸೂಚನೆಯಿದು. ಕುವೆಂಪು ಅವರೇ ‘ಕರ್ನಾಟಕದ ಕಾವ್ಯ ಸಂಸ್ಕೃತಿಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡ ಕನ್ನಡಿಗನು ಭೌಗೋಳಿಕವಾದ ಎಲ್ಲೆಗಳಿಂದ ಹೆದರಬೇಕಾದ್ದಿಲ್ಲ. . . . . ಕನ್ನಡ ಕಾವ್ಯವನ್ನೋದುವಾತನು ಅಮೇರಿಕೆಯಲ್ಲಿದ್ದರೂ ಅದು ‘ಕರ್ನಾಟಕವೇ’, ‘ಪಂಪನನೋದುವ ನಾಲಗೆ’ ಮಿಸಿಸಿಪಿ ಹೊಳೆಯ ನೀರನ್ನು ಈಂಟಿದರೂ ಅದು ಕಾವೇರಿಯೇ, ‘ಕುಮಾರವ್ಯಾಸನ ನಾಲಿಪ ಕಿವಿ’ ಆಂಡಿಸ್ ಪರ್ವತವನ್ನೇರುತ್ತಿದ್ದರೂ ಅದು ಸಹ್ಯಾದ್ರಿಯೇ” ಎನ್ನುತ್ತಾರೆ. ಕರ್ನಾಟಕದ ಬಗೆಗೆ, ಕನ್ನಡದ ಬಗೆಗೆ ಹೇಳುತ್ತಿರುವ ಪದ್ಯ ಕನ್ನಡಿಗನನ್ನು ‘ಎಂದೆಂದಿಗೂ ನೀ ಕನ್ನಡವಾಗಿರು’ ಎನ್ನುತ್ತಲೇ ಜಗದ್ವ್ಯಾಪಿ ಅನುಭವದ ಜೊತೆಗೆ ಸೇರಿಸುತ್ತದೆ. ಭೌಗೋಳಿಕ ಕರ್ನಾಟಕವನ್ನು ಭಾವವ್ಯಾಪ್ತಿಯ ಕರ್ನಾಟಕದ ಜೊತೆ ಸಮನ್ವಯಗೊಳಿಸುವ ಬಗೆ ಇಲ್ಲಿ ವಿಶಿಷ್ಟವಾಗಿದೆ. ಕುವೆಂಪು ಅವರು ಕನ್ನಡದ ಮೇಲೆ ತೋರುವ ಪ್ರೀತಿಗೆ ಜಗತ್ತು ‘ಅನ್ಯ’ವಾಗುವುದಿಲ್ಲ. ಜಗತ್ತನ್ನು ಅನ್ಯವಾಗಿಸದೇ ‘ಸ್ವ’ವನ್ನು, ‘ಸ್ವ ವಿಶಿಷ್ಟತೆ’ಯನ್ನು ಕಾಣುವುದನ್ನು ಇಲ್ಲಿ ನೋಡಬಹುದಾಗಿದೆ. ಇಲ್ಲಿ ಕನ್ನಡ, ಕರ್ನಾಟಕ ಒಂದಲ್ಲ. ಏಕಕಾಲಕ್ಕೆ ಹಲವಾಗುತ್ತದೆ. ‘ನೀ ಮೆಟ್ಟುವ ನೆಲ ಕರ್ನಾಟಕ’ ಎನ್ನುವಾಗ ಕವಿ ಕರ್ನಾಟಕವನ್ನು ಖಡ್ಗದ ಮೂಲಕ ವಿಸ್ತರಿಸಲು ಬಯಸುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇದು ಅಧಿಕಾರದ ವಿಸ್ತರಣೆಯಲ್ಲ. ಗುಲಾಮಗಿರಿಯ ವಿಸ್ತರಣೆಯೂ ಅಲ್ಲ. ಕನ್ನಡಿಗ ಕಾಲಿಟ್ಟಲ್ಲಿ ಸ್ಥಳೀಯ ಸಂಸ್ಕೃತಿ, ಭಾಷೆಗೆ ಅಪಾಯವೂ ಇಲ್ಲ. ಆದರೆ ಕನ್ನಡಿಗ ಮಾತ್ರ ತಾನು ಕಾಲಿಟ್ಟ ನೆಲವನ್ನೇ ಕರ್ನಾಟಕ ಎಂದು ಭಾವಿಸಿಕೊಳ್ಳುತ್ತಾ, ಆ ಕರ್ನಾಟಕವನು ಕಟ್ಟುವುದಕ್ಕೆ, ಆ ಕರ್ನಾಟಕದಲ್ಲಿ ಬದುಕುವುದಕ್ಕೆ ಪೂರಕವಾಗಿರುವುದನ್ನು ಒತ್ತಾಯಿಸುತ್ತದೆ. ನಾಡಿನ ಸೀಮೆ, ರಾಷ್ಟçದ ಸೀಮೆ, ಭಾಷೆಯ ಬೆಳವಣೆಗೆಗೆ, ಅದರ ವಿಸ್ತಾರಕ್ಕೆ ತೊಡಕಾಗಬೇಕಾಗಿಲ್ಲ ಎಂಬ ಸಮನ್ವಯ ದೃಷ್ಟಿ ಇಲ್ಲಿರುವುದನ್ನು ಗಮನಿಸಬಹುದು. ಕರ್ನಾಟಕದ ಕಲ್ಪನೆ ಕೇವಲ ಸದ್ಯದ ಸಂದರ್ಭದಲ್ಲಿ ಭಾಷೆಯನ್ನಾಡುವ ಭೂವಲಯದ್ದಲ್ಲ. ಅದು ಕನ್ನಡವನ್ನು ಕಟ್ಟಿದ, ಕರ್ನಾಟಕವನ್ನು ಸಾಂಸ್ಕೃತಿಕವಾಗಿ ರೂಪಿಸಿದ ಐತಿಹಾಸಿಕ ಸಂಗತಿಗಳ ಜೊತೆಗಿನ ಒಂದು ಭಾವನಾತ್ಮಕ ಸಂಬಂಧ. ಈ ಮನೋಸ್ತರದ ಕರ್ನಾಟಕವನ್ನು ಆಳುವವರು ಯಾವುದೋ ರಾಜಕೀಯ ನಾಯಕರಲ್ಲ, ಬದಲಾಗಿ ಸಾಂಸ್ಕೃತಿಕ ಕರ್ನಾಟಕವನ್ನು ಶ್ರೀಮಂತಗೊಳಿಸಿದ, ಕರ್ನಾಟಕದ ಸಾಂಸ್ಕೃತಿಕ ನಾಯಕರೇ ಆಳುವವರು. ‘ನೃಪತುಂಗ’ ಚಕ್ರವರ್ತಿ, ಆತನಿಗೆ ‘ಪಂಪ’ನೇ ಮುಖ್ಯಮಂತ್ರಿ. ಇನ್ನುಳಿದಂತೆ ರನ್ನ, ಜನ್ನ, ನಾಗವರ್ಮ, ರಾಘವಾಂಕ, ಹರಿಹರ, ಬಸವೇಶ್ವರ, ನಾರಣಪ್ಪ, ಸರ್ವಜ್ಞ, ಷಡಕ್ಷರರೇ ಸಚಿವ ಮಂಡಲದ ಮಂತ್ರಿಗಳು. ಇದು ಶಾಶ್ವತ ಸಚಿವ ಮಂಡಲ. ಶಾಶ್ವತ ಆಡಳಿತ ವ್ಯವಸ್ಥೆ. ಕವಿ ಕಲ್ಪನೆಯ ಈ ಸಚಿವ ಮಂಡಲ ಕರ್ನಾಟಕವನ್ನು ನಿಜವಾಗಿ ಆಳಬೇಕಾಗಿರುವ ಸರಸ್ವತಿ ಪ್ರಣೀತ ಸಾಂಸ್ಕೃತಿಕ ಜ್ಞಾನ ಸಂಕೇತಗಳು. ಈ ಕಾರಣದಿಂದಲೇ ಅಖಂಡ ಕರ್ನಾಟಕ ಎನ್ನುವುದು ಕೇವಲ ನಾಲ್ಕು ದಿನಗಳ ಒಂದು ರಾಜಕೀಯ ನಾಟಕ ಅಲ್ಲ ಎನ್ನುವುದನ್ನು ನೆನಪಿಸುತ್ತಾರೆ.ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ ! ದೇವಿ ಕಣಾ!
ಬೆಂಕಿ ಕಣಾ ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ !
ಖುಷಿಯ ಕಾಣ್ಬ ಕಣ್ಣಿಗೆ! ( ಅಖಂಡ ಕರ್ನಾಟಕ)
ಕವಿಯೇ ಹೇಳುವಂತೆ, ಕರ್ನಾಟಕ ನಮ್ಮ ಮಂತ್ರ, ನಮ್ಮ ಶಕ್ತಿ, ನಮ್ಮ ತಾಯಿ, ದೇವಿ, ಬೆಂಕಿ, ಸಿಡಿಲು. ಇದಕ್ಕೆ ಕಾಯುವ ಮತ್ತು ಕೊಲ್ಲುವ ಎರಡೂ ಶಕ್ತಿಯೂ ಇದೆ. ಹೊಟ್ಟೆ–ಬಟ್ಟೆಯ, ಪಕ್ಷ–ಜಾತಿಯ, ಅಹಂಕಾರ– ಸ್ವಾರ್ಥಗಳಾಚೆಗಿನ ಒಂದು ಸಮೃದ್ಧ ಕರ್ನಾಟಕದ ಆಶಯವನ್ನು ಕವಿ ಮುಂದಿಡುತ್ತಾರೆ. ಏಕೀಕರಣದ ಕರ್ನಾಟಕದ ಕನಸು ಸಾಕಾರಗೊಂಡಾಗ ಕುವೆಂಪು ಬರೆದ ‘ಕರ್ನಾಟಕ ರಾಜ್ಯೋದಯ ಶ್ರೀಗೀತೆ’ ಕವಿತೆ ಭಾರತ ಮತ್ತು ಕರ್ನಾಟಕದ ಸಂಬಂಧವನ್ನು ಬಲಗೊಳಿಸುವ, ಬಾಂಧವ್ಯವನ್ನು ಸುಮಧುರ ಗೊಳಿಸುವ ಸ್ವರೂಪದಲ್ಲಿದೆ. ನಾಡಿನ ಸಾಂಸ್ಕೃತಿಕ ಹಿರಿಮೆಯು ರಾಜ್ಯೋದಯದೊಂದಿಗೆ ಹೊಸ ಗೌರವವನ್ನು ಪಡೆದ ಸಂದರ್ಭದಲ್ಲಿ ನಾಡಿನ ಜನಗಳಿಗೆ ಕರ್ನಾಟಕವನ್ನು ಕಟ್ಟಿಕೊಡುವ ಬಗೆ ವಿಶಿಷ್ಟವಾದುದು.“ ಬರಿಯ ಚದರ ಮೈಲಿಗಳಲ್ತು ಕರ್ನಾಟಕದ ದೇಶ ವಿಸ್ತೀರ್ಣಂ;
ನೆನೆ, ನೆನೆ, ಮನೋಮಯದ ಸಂಸ್ಕೃತಿಯ ಕೋಶ ವಿಸ್ತೀರ್ಣಮಂ
ಮರೆಯದಿರು ಚದರ ಸಂವತ್ಸರದ ಶತಮಾನಗಳ ಕಾಲ ವಿಸ್ತೀರ್ಣಮಂ,
ಪ್ರಾಣಮಯ ಭಾವಪ್ರದೇಶ ವಿಸ್ತೀರ್ಣಮಂ,
ಚಿದಾಕಾಶ ವಿಜ್ಞಾನ ವಿಸ್ತೀರ್ಣಮಂ! ” (ಕರ್ನಾಟಕ ರಾಜ್ಯೋದಯ ಶ್ರೀ ಗೀತೆ)
ಕರ್ನಾಟಕ ರಾಜ್ಯ ೧೯೫೬ರಲ್ಲಿ ರಚನೆಗೊಂಡಾಗ ಕವಿ ಕುವೆಂಪು ರಚಿಸಿದ ಕವಿತೆಯ ಸಾಲಿದು. ಕರ್ನಾಟಕ ಉದಯಗೊಂಡಾಗಲೇ ಕವಿ ಕರ್ನಾಟಕ ಅಂದರೆ ಏನು ಎನ್ನುವುದನ್ನು ನಿರೂಪಿಸಿರುವುದು ಇಲ್ಲಿನ ವೈಶಿಷ್ಟ್ಯತೆ. ಕರ್ನಾಟಕವನ್ನು, ಅದರ ವಿಸ್ತೀರ್ಣವನ್ನು ಕೇವಲ ಅದರ ಭೌಗೋಳಿಕ ವಿಸ್ತಾರದಿಂದ ನೋಡುವುದಲ್ಲ, ಎಷ್ಟು ಚದರ ಮೈಲಿಗಳಲ್ಲಿ ಕರ್ನಾಟಕ ವಿಸ್ತರಿಸಿದೆ ಎನ್ನುವುದರಿಂದ ಕರ್ನಾಟಕದ ಮಹತ್ತನ್ನು ಅಳೆಯಲಾಗದು. ಅದು ಅಳೆಯಲಾಗದಷ್ಟು ವಿಸ್ತಾರವನ್ನು ಬೇರೆ ಬೇರೆ ಸ್ವರೂಪಗಳಲ್ಲಿ ಹೊಂದಿದೆ. ಭೂ ವಿಸ್ತೀರ್ಣ ಒಂದು ನೆಲೆಯಾದರೆ ಅದಕ್ಕಿಂತಲೂ ವಿಸ್ತಾರವಾದ ‘ಮನೋಮಯ ಸಂಸ್ಕೃತಿಯ ಕೋಶ’ ಇದೆ. ಶತಮಾನಗಳ ಕಾಲ ವಿಸ್ತೀರ್ಣ ಇದೆ; ಪ್ರಾಣಮಯ ಭಾವ ಪ್ರದೇಶದ ವಿಸ್ತೀರ್ಣ ಇದೆ. ಈ ಮೂಲಕ ಕರ್ನಾಟಕ ಎಂಬ ರಚನೆಯ ಹಿಂದಿನ ಕಲ್ಪನೆಯ ಅಗಾಧತೆ, ಪ್ರಾಚೀನತೆ, ಭಾವ ಸ್ವರೂಪ ಏನು ಎನ್ನುವುದನ್ನು ತೋರಿಸುವ ಪ್ರಯತ್ನ ಇಲ್ಲಿದೆ. ಕರ್ನಾಟಕದ ಮನೋಮಯ ಸಂಸ್ಕೃತಿ ಕೋಶ ವಿಸ್ತೀರ್ಣ, ಅದರ ಕಾಲ ವಿಸ್ತೀರ್ಣ, ಪ್ರಾಣಮಯ ಭಾವ ಪ್ರದೇಶ ವಿಸ್ತೀರ್ಣದ ಎದುರು ಭೂ ಪ್ರದೇಶದ ವಿಸ್ತೀರ್ಣ ನಗಣ್ಯವಾದುದು. ಕನ್ನಡಿಗರು ಕರ್ನಾಟಕವನ್ನು ಅದರ ಭೌಗೋಳಿಕ ಸ್ವರೂಪ, ವಿಸ್ತೀರ್ಣಗಳಿಂದ ಗ್ರಹಿಸಬೇಕಾಗಿಲ್ಲ. ಹಾಗೆಯೇ ಅನ್ಯರೂ ಕೂಡ ಕರ್ನಾಟಕವನ್ನು ಗ್ರಹಿಸಬೇಕಾದ ಬಗೆ ಯಾವುದು ಎಂಬುದನ್ನು ಇಲ್ಲಿ ತೋರಿಸುತ್ತಾರೆ. ಕುವೆಂಪು ಕಟ್ಟಿದ ಕನಾಟಕದ ದರ್ಶನವನ್ನು ಮಾಡಿಸುವ ಅವರ ಪ್ರಸಿದ್ಧ ಗೀತೆ,“ಜಯ್ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ!
ಜಯ್ ಸುಂದರ ನದಿವನಗಳ ನಾಡೆ
ಜಯ ಹೇ ರಸಋಷಿಗಳ ಬೀಡೆ !
ಭೂ ದೇವಿಯ ಮಕುಟದ ನವಮಣಿಯೆ
ಗಂಧದ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂದನರವ ತರಿಸಿದ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ ! ” (ಜಯ ಹೇ ಕರ್ನಾಟಕ ಮಾತೆ)
ಕುವೆಂಪು ಅವರೇ ಹೇಳುವಂತೆ “ ಕರ್ನಾಟಕದ ಕವಿ ತನ್ನ ಗಾಥೆಯ ಒಂದೊಂದು ಪದ್ಯದ ಕೊನೆಯ ಚರಣವನ್ನೂ; ಭಾರತದ ಏಕತ್ವ ರಕ್ಷಣೆಯ ಮಂತ್ರವನ್ನಾಗಿ ಘೋಷಿಸಿದ್ದಾನೆ. ರಾಘವ ಮಧುಸೂದನರವತರಿಸಿದ ಭಾರತ ಜನನಿಯ ತನುಜಾತೆ; ಜಯಹೇ ಕರ್ನಾಟಕ ಮಾತೆ !’ ‘ಕಪಿಲ ಪತಂಜಲಿ ಗೌತಮ ಜಿನನುತ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ……..’ ಇಲ್ಲಿ ಕರ್ನಾಟಕ ಮಾತೆಗೆ ತನ್ನದೇ ಆಗಿರುವ ಪ್ರತ್ಯೇಕ ಅಸ್ತಿತ್ವ ಇಲ್ಲ; ಸರ್ವದಾ ತಾಯಿ ಭಾರತಿಯ ಮಗಳಾಗಿಯೇ ಇರುವುದರಿಂದ ಮಾತ್ರ ಆಕೆಯ ಅಸ್ತಿತ್ವಕ್ಕೆ ರಕ್ಷೆ ಒದಗುತ್ತದೆ. ಅದರ ಪೋಷಣೆಗೆ ಅಮೃತ ಸಹಾಯ ಲಭಿಸುತ್ತದೆ ” ಎನ್ನುತ್ತಾರೆ. “ಕರ್ನಾಟಕ ಮಾತೆಗೆ ಸಲ್ಲುವ ಜಯಕಾರ ಆಕೆ ಭಾರತ ಜನನಿಯ ತನುಜಾತೆಯಾಗಿರುವುದರಿಂದಲೇ. ಭಾರತಮಾತೆಯ ಅಂಗೋದ್ಭವೆಯಾಗಿ ವಿನಾ ಕರ್ನಾಟಕಕ್ಕೆ ಬೇರೆಯ ಅಸ್ತಿತ್ವವೆಲ್ಲಿ? ಈಕೆ ಶ್ರೀರಾಮ ಶ್ರೀ ಕೃಷ್ಣರು ಅವತಾರ ಮಾಡಿದ ಭಾರತಾಂಬೆಯ ಮಗಳು; ಕಪಿಲ, ಪತಂಜಲ, ಗೌತಮ, ಜಿನ ಇವರೆಲ್ಲರಿಂದ ರೂಪಿತೆಯಾದ ಭಾರತಾಂಬೆಯ ಕನ್ಯೆ; ನಾನಕ, ರಾಮಾನಂದ, ಕಬೀರ, ಶ್ರೀ ಕೃಷ್ಣ ಚೈತನ್ಯ, ರಾಮಕೃಷ್ಣ ಪರಮಹಂಸರೆ ಮೊದಲಾದ ಮಹಾಪುರುಷರನ್ನು ಹಡೆದೂ ಅವರೆಲ್ಲರ ದಿವ್ಯ ತಪಸ್ಸಿನಿಂದಲೆ ಸಂಭೂತೆಯಾಗಿರುವ ಭಾರತಮಾತೆಯ ತನುಜಾತೆ. ಮಗಳ ಮೈಯಲ್ಲಿ ಹರಿವ ನೆತ್ತರು ತಾಯಿಯದು. ಇವಳ ಉಸಿರು ಅವಳು.ಇಬ್ಬರಿಗೂ ಇರುವ ಸಂಬಂಧ ಹೊಕ್ಕುಳ ಬಳ್ಳಿಯ ಸಂಬಂಧ. ಆದ್ದರಿಂದಲೇ ಅವಳು ತಿಂದರೆ ಇವಳಿಗೆ ಪುಷ್ಟಿ. ಮಗಳ ಪುಷ್ಟಿ ತಾಯಿಗೆ ತುಷ್ಟಿ” ಎನ್ನುವಲ್ಲಿ ಕಾಣುವುದು ಐಕ್ಯತೆಯ ಲೋಕದೃಷ್ಟಿಯೇ. ‘ಜಯ್ ಭಾರತ ಜನನಿಯ ತನುಜಾತೆ, ಜಯ್ ಹೇ ಕರ್ನಾಟಕ ಮಾತೆ’ ಎಂಬ ಸಾಲನ್ನು ಗಮನಿಸಿದರೆ, ಕುವೆಂಪು ಕಲ್ಪಿಸುವ, ಕಟ್ಟುವ ಕರ್ನಾಟಕದ ಚಿತ್ರಣದ ದರ್ಶನವಾಗುತ್ತದೆ. ಕವಿ ಕರ್ನಾಟಕವನ್ನು ‘ಭಾರತ ಜನನಿಯ ತನುಜಾತೆ’ ಎನ್ನುವಾಗಲೇ ಕವಿಯ ಮುಂದಿರುವ ಧೋರಣೆ ಸ್ಪಷ್ಟವಾಗಿರುವುದನ್ನು ನೋಡಬಹುದು. ಕರ್ನಾಟಕಕ್ಕೆ ಸಿಗುವ ಅಸ್ತಿತ್ವ, ಆತ್ಮಗೌರವ ಎಲ್ಲದಕ್ಕೂ ಭಾರತ ಎಂಬ ಒಂದು ದೊಡ್ಡ ಭಿತ್ತಿ ಕಾರಣ ಎನ್ನುತ್ತಾರೆ. ಇಲ್ಲಿ ಭಾರತ ಜನನಿಯಾಗುತ್ತಾಳೆ. ಕನ್ನಡ ಮಾತೆ ಮಗಳಾಗುತ್ತಾಳೆ. ಈ ತಾಯಿ– ಮಗಳು ಎನ್ನುವ ಸಂಬಂಧವೇ ಸಮನ್ವಯ ಮಾರ್ಗವೂ ಹೌದು. ಕುವೆಂಪು ಅವರ ರಾಷ್ಟಿಯತೆಗೆ ಒಂದು ಬಗೆಯ ದಾರ್ಶನಿಕ ಸ್ವರೂಪವಿತ್ತು. ನಾಡು ಕೂಡ ಗಡಿಯನ್ನು ಮೀರಿದ ಕಲ್ಪನೆಯೇ ಆಗಿತ್ತು. ಅವರು ಬಹುತ್ವದ ಕಲ್ಪನೆಯನ್ನು ಒಪ್ಪಿಕೊಂಡೆ ಕರ್ನಾಟಕದ ಹಾಗೂ ಭಾರತದ ಕಲ್ಪನೆಯನ್ನು ಮುಂದಿಡುತ್ತಾರೆ. ಕನ್ನಡ ಮತ್ತು ಭಾರತದ ನಡುವಿನ ಹೊಕ್ಕುಳು ಬಳ್ಳಿ ಸಂಬಂಧವನ್ನು ಮರೆತವರಿಂದ ಇಂದು ವಿಭಜನೆಯ ಧ್ವನಿ ಕೇಳುತ್ತಿರುವುದು. ಕನ್ನಡ ಮೊದಲೇ? ಭಾರತ ಮೊದಲೇ? ಎನ್ನುವ ಪ್ರಶ್ನೆಯಲ್ಲೇ ಒಡಕಿನ ವಾಸನೆಯಿದೆ. ಈ ಒಡಕಿನ ಭಾವ ಬ್ರಿಟಿಷರು ಬಿತ್ತಿದ ಒಡೆದು ಆಳಿದ ನೀತಿಗಿಂತ ಭಿನ್ನವೇನಲ್ಲ. ಕುವೆಂಪು ಭಾರತವನ್ನು ಕಂಡದ್ದು ಬಹುಜಿಹ್ವಾ ಭಾರತಿಯಾಗಿ.ಕನ್ನಡವೂ ಸೇರಿದಂತೆ ಎಲ್ಲಾ ದೇಶ ಭಾಷೆಗಳು ಆ ತಾಯಿಗೆ ಬೆಳಗಿದ್ದು ಐಕ್ಯತೆಯ ಆರತಿಯನ್ನು ಎನ್ನುವುದನ್ನು ತಮ್ಮ ಮಾತು ಬರವಣಿಗೆಗಳಲ್ಲಿ ಸ್ಪಷ್ಟಪಡಿಸುತ್ತಾರೆ. ‘ಭಾರತಿ’ಯ ಮಗಳಾಗಿ ಉಳಿಯಬೇಕಾದ ರಾಜ್ಯಗಳು ಸಂಘರ್ಷವನ್ನು ಬಿತ್ತಬಾರದು. ಸೌಹಾರ್ಧತೆಯನ್ನೇ ಮಂತ್ರವಾಗಿಸಿಕೊಂಡು ಮುನ್ನಡೆಯಬೇಕಾಗಿದೆ. ಈ ಎಚ್ಚರವನ್ನು ನಾವಿಂದು ಹೊಂದಬೇಕಾಗಿದೆ. ಕುವೆಂಪು ಅವರ ಸಾಹಿತ್ಯ ನಮಗೆ ತೋರುವುದು ಈ ಎಚ್ಚರವನ್ನು. ಅದನ್ನು ಮರೆತು ನಾವು ಕುವೆಂಪು ಅವರನ್ನು ಆರಾಧಿಸಿದರೆ ಅದು ತೋರಿಕೆಯ ನಡವಳಿಕೆಯಾಗುತ್ತದೆಯೇ ಹೊರತು ನಿಜವಾದ ಕಾಳಜಿಯಾಗುವುದಿಲ್ಲ.