ನಮ್ಮದು ಅತ್ಯಂತ ಪುರಾತನವಾದ ದೇಶ.ಇಲ್ಲಿನ ಸಂಸ್ಕೃತಿಯೂ ಪುರಾತನವಾದದ್ದು. ಇಲ್ಲಿನ ಸಂಸ್ಕೃತಿಯನ್ನು ಅರಣ್ಯ ಸಂಸ್ಕೃತಿಯೆಂದೂ ಕರೆಯುತ್ತಾರೆ. ಇಲ್ಲಿನ ಜನಸಂಖ್ಯೆಯಲ್ಲಿ ದೊಡ್ಡಪಾಲು ಬುಡಕಟ್ಟಿನ ಜನರದ್ದು ಇದೆ. ಹಿಂದಿನ ಜನಗಣತಿಯ ಪ್ರಕಾರ 10 ಕೋಟಿ ಗಿರಿಜನ(ಜನಜಾತಿ/ಬುಡಕಟ್ಟು)ರಿದ್ದಾರೆ. ಇವರು ಪ್ರಾಚೀನಕಾಲದಿಂದಲೂ ಕಾಡಿನಲ್ಲಿ ಸ್ವತಂತ್ರ ಬದುಕು ನಡೆಸಿಕೊಂಡು ಬಂದವರು. ಸಾಂಸ್ಕೃತಿಕವಾಗಿ ಶ್ರೀಮಂತರು. ದೇಶ, ಧರ್ಮ ರಕ್ಷಣೆಯಲ್ಲಿ ಮಂಚೂಣಿಯಲ್ಲಿರುವವರು. ಅಪ್ರತಿಮ ಶೂರರು. ಅನಾದಿ ಕಾಲದಿಂದ ಕೂಡಿ ಬಾಳಿದವರು. ಅವರು ಅರಣ್ಯವನ್ನು ದೇವರನ್ನಾಗಿ ಕಂಡು ಪೂಜಿಸುತ್ತಿದ್ದವರು. ನಮ್ಮ ದೇಶದಮೇಲೆ ಮೊಘಲರು, ಬ್ರಿಟೀಷರು, ಪೊರ್ಚುಗೀಸರು ಮುಂತಾದವರು ಆಕ್ರಮಣ ಮಾಡಿದಾಗ ಯುದ್ಧದಲ್ಲಿ ಹೋರಾಡಿ ಪ್ರಾಣಾರ್ಪಣೆ ಮಾಡಿದ್ದಾರೆ. ವಿದೇಶಿಯರು ಆಡಳಿತ ನಡೆಸುವ, ತಮ್ಮ ಸಾಮ್ರಾಜ್ಯ ವಿಸ್ತರಣೆಯ ಹಂಬಲದಿಂದ ವನವಾಸಿ ಪ್ರದೇಶಗಳ ಮೇಲೆ ದಾಳಿ ಮಾಡಿದಾಗ ಹೆಂಗಸರು, ಮಕ್ಕಳೆನ್ನದೆ ಇಡೀ ಸಮಾಜವೇ ಒಟ್ಟಾಗಿ ಹೋರಾಟ ಮಾಡಿದ ಉದಾಹರಣೆಗಳು ಇತಿಹಾಸದಲ್ಲಿ ಕಂಡುಬರುತ್ತದೆ.
ಆದರೆ ಸಾವಿರಾರು ವರ್ಷಗಳಿಂದ ವಿದೇಶಿಯರು ತಮ್ಮ ಅಕ್ರಮ ಆಡಳಿತ ಅವಧಿಯಲ್ಲಿ ಅವರ ಬದುಕನ್ನು ಛಿದ್ರಗೊಳಿಸಿದರು. ಇದರಿಂದಾಗಿ ಅವರದ್ದು ಅತಂತ್ರ ಬದುಕಾಯಿತು. ಸಾಮಾಜಿಕ ಕೊಂಡಿ ಕಳಚಿತು. ತಮ್ಮದೇ ನೆಲದಲ್ಲಿ ಅಲೆಮಾರಿಗಳಂತೆ ಬದುಕುವಂತಾಯಿತು. ಆಡಳಿತಗಾರರ ಅವಗಣನೆಗೆ ಒಳಗಾದರು. ಬ್ರಿಟೀಷರಂತೂ ಈ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ನಿಮ್ಮನ್ನು ಉದ್ಧಾರ ಮಾಡಲೆಂದೆ ನಾವು ಬಂದಿದ್ದೇವೆ ಎಂದು ಮಿಷನರಿಗಳ ಮೂಲಕ ಹೇಳಿಸಿದರು. ಶಿಕ್ಷಣ, ಆರೋಗ್ಯ ಸಹಾಯ ನೆಪಮಾಡಿ ಮುಗ್ದ ಜನರ ವಿಶ್ವಾಸ ಗಳಿಸಿದರು. ಮತಾಂತರ ಅವ್ಯಾಹತವಾಗಿ ನಡೆಯಿತು. ಅಂತಹ ಜನರಲ್ಲಿ ಹಿಂದುಗಳ ವಿರುದ್ಧ ದ್ವೇಷ ಭಾವನೆ ಬೆಳಸಿದರು. ಪ್ರತ್ಯೇಕತೆಯ ವಿಷ ಬೀಜವನ್ನು ಬಿತ್ತಿ ಪೋಷಿಸಿದರು. ವನವಾಸಿಗಳ ಮೂಲ ಸಂಸ್ಕೃತಿಯ ನಾಶವಾಯಿತು. ಕ್ರಿಶ್ಚಿಯನ್ನರ ಪಡಿಯಚ್ಚಾದರು.
ಹೀಗಿರುವಾಗ ಅವರಲ್ಲಿ ಸ್ವಧರ್ಮ ನಿಷ್ಠೆಯುಳ್ಳವರಿಗೆ ಇದರ ಬಗ್ಗೆ ಚಿಂತೆಯಾದರೂ ಅಸಹಾಯಕರಾಗಿದ್ದರು. ದೇಶದ ಉಳಿದ ಸಮಾಜದವರೂ ಆತ್ಮವಿಸ್ಮೃತಿಯಿಂದ ಏನೂ ಮಾಡದವರಾಗಿ ಅವರನ್ನು ದೂರವಿಟ್ಟರು.
ನವ ಸೂರ್ಯೋದಯ -‐
1947ರಲ್ಲಿ ಮಧ್ಯಪ್ರದೇಶದ ಸರಕಾರದಿಂದ ಹಿಂದುಳಿದ ಜಶಪುರ ಪ್ರದೇಶದ ಅಭಿವೃದ್ಧಿ ಅಧಿಕಾರಿಯಾಗಿ ನಿಯುಕ್ತಿಗೊಂಡವರು ಮಹಾರಾಷ್ಟ್ರದ ಅಮರಾವತಿಯ ವಕೀಲರಾದ ಶ್ರೀ ರಮಾಕಾಂತ ಕೇಶವ ದೇಶಪಾಂಡೆಯವರು. ಅವರು ಬಾಳಾಸಾಹೇಬ ದೇಶಪಾಂಡೆ ಎಂದು ಪ್ರಸಿದ್ಧರು. ಇವರು ಅಂದಿನ ಮುಖ್ಯಮಂತ್ರಿಯಾಗಿದ್ದ ಶ್ರೀ ರವಿಶಂಕರ ಶುಕ್ಲಾರವರ ಅಪೇಕ್ಷೆಯಂತೆ ವನವಾಸಿ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆದು ಶಿಕ್ಷಣ ನೀಡಿದರು. ವನವಾಸಿಗಳಲ್ಲಿ ರಾಷ್ಟ್ರೀಯ ಭಾವನೆಯನ್ನು ಜಾಗೃತಗೊಳಿಸಿದರು. ಮುಂದಿನ ದಿನಗಳಲ್ಲಿ ಸರಕಾರದ ಅಸಹಕಾರದಿಂದ ಬೇಸತ್ತು 1951ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆಯನ್ನು ಕೊಟ್ಟರು. ವನವಾಸಿಗಳ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದ ಬಾಳಾಸಾಹೇಬ ದೇಶಪಾಂಡೆಯವರಿಗೆ ಅವರಿಗಾಗಿ ತಾನು ಏನನ್ನಾದರೂ ಮಾಡಬೇಕೆಂಬ ಹಂಬಲ ಧೃಡವಾಯಿತು. ದೇಶಪಾಂಡೆಯವರು ಸಂಘದ ರಾಮಟೇಕ ತಾಲೂಕಿನ ಕಾರ್ಯವಾಹರಾಗಿದ್ದವರು. ಹಾಗಾಗಿ ಅಂದಿನ ಸರಸಂಘಚಾಲಕರಾಗಿದ್ದ ಶ್ರೀ ಗುರೂಜಿಯವರಲ್ಲಿ ಈ ವಿಷಯ ಕುರಿತು ಸಮಾಲೋಚಿಸಿದರು. ಗುರೂಜಿಯವರು ಸರಕಾರದ ಮೇಲೆ ಅವಲಂಬಿತರಾಗದೇ ಸ್ವತಂತ್ರವಾಗಿ ಕಾರ್ಯಮಾಡಲು ಸಲಹೆಯಿತ್ತು, ಶ್ರೀ ಮೋರೊಪಂತ ಕೇತ್ಕರ ಅವರನ್ನು (ಪ್ರಚಾರಕ)ಸಹಾಯಕರನ್ನಾಗಿ ಕಳುಹಿಸಿದರು. ಗುರೂಜಿಯವರ ಆಶೀರ್ವಾದ ದೊರೆತ ನಂತರ ಬಾಳಾಸಾಹೇಬ ದೇಶಪಾಂಡೆಯವರ ಸ್ವಲ್ಪವೂ ವಿಳಂಬ ಮಾಡದೇ 1952 ರ ಡಿಸೆಂಬರ 26 ರಂದು (ಮಾರ್ಗಶಿರ ಕೃಷ್ಣ ಚತುರ್ದಶಿ) ವನವಾಸಿ ಕಲ್ಯಾಣಾಶ್ರಮ ಪ್ರಾರಂಭ ಮಾಡಿದರು.
ಉದ್ದೇಶ, ಕಾರ್ಯವಿಧಾನ:-
ವನವಾಸಿಗಳ(ಗಿರಿಜನರ) ಸಮಗ್ರ ವಿಕಾಸ ಹಾಗೂ ಸ್ವಾವಲಂಬಿ ಸಮಾಜ ನಿರ್ಮಾಣ ಗುರಿಯನ್ನಾಗಿಸಿಕೊಂಡು ಕಲ್ಯಾಣಾಶ್ರಮ ಪ್ರಾರಂಭವಾಯಿತು. ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ಸಾಮಾಜಿಕ, ರಾಜಕೀಯ, ಧಾರ್ಮಿಕ ನೇತೃತ್ವ ತಯಾರಾಗಬೇಕು. ಅವಶ್ಯವಿರುವ ಸೇವಾಕಾರ್ಯ ಮಾಡಬೇಕು. ಸಾಮಾಜಿಕ ಜಾಗೃತಗೊಳಿಸುವ ಕಾರ್ಯಮಾಡುವುದು. ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ಕಾರ್ಯನಡೆಸಬೇಕು. ಈ ಎಲ್ಲಾ ಕಾರ್ಯನಿರಂತರವಾಗಿ ನಡೆಯುವಂತಾಗಲು ಬಲಿಷ್ಠ ಸಂಘಟನೆಯನ್ನು ಕಟ್ಟಬೇಕು. ಈ ಎಲ್ಲ ಕಾರ್ಯಮಾಡಲು ಸಮರ್ಪಣಾ ಭಾವದಿಂದ ಕಾರ್ಯ ಮಾಡುವ ಕಾರ್ಯಕರ್ತರ ಪಡೆ ನಿರ್ಮಾಣ ಮಾಡುವುದು. ಈ ನಿಟ್ಟಿನಲ್ಲಿ ವನವಾಸಿ ಕಲ್ಯಾಣಾಶ್ರಮ ನುರಿತ ಕಾರ್ಯಕರ್ತರನ್ನು ತಯಾರಿ ಮಾಡಿಕೊಳ್ಳುತ್ತಾ ಬಂದಿದೆ.
ಪರಿವರ್ತನೆಯ ಕಿರಣಗಳು:‐‐
ವನವಾಸಿ ಕಲ್ಯಾಣಾಶ್ರಮ ಪ್ರಾರಂಭ ವಾದದ್ದು ಛತ್ತೀಸಗಡದ ಜಶಪುರದಲ್ಲಿ. ನಿಧಾನವಾಗಿ ಓರಿಸ್ಸಾ, ಬಿಹಾರ ರಾಜ್ಯಗಳಿಗೆ ಹಬ್ಬಿ ಇಂದು ದೇಶವ್ಯಾಪಿಯಾಗಿ ಬೆಳೆದು ನಿಂತಿದೆ.
ವಿದ್ಯಾಕ್ಷೇತ್ರ:‐-
ವನವಾಸಿ ಮಕ್ಕಳಿಗಾಗಿ 240 ವಿದ್ಯಾರ್ಥಿನಿಲಯಗಳಲ್ಲಿ 8000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಸ್ಕಾರ ಶಿಕ್ಷಣ ನೀಡುತ್ತಿದೆ. ಛತ್ತೀಸಗಡ, ಝಾರ್ಖಂಡ, ಬಿಹಾರ, ತಮಿಳುನಾಡು, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕಾಗಿ ಶಾಲೆಗಳನ್ನು ನಡೆಸುತ್ತಾ ಸಾವಿರಾರು ಜೀವನ ಶಿಕ್ಷಣ ನೀಡುತ್ತಿದೆ. 5000ವನವಾಸಿ ಹಾಡಿಗಳಲ್ಲಿ ಏಕಲವಿದ್ಯಾಲಯ, ಮನೆಪಾಠ ಕೇಂದ್ರಗಳನ್ನು ನಡೆಸಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಕಾರ್ಯಮಾಡುತ್ತಿದೆ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವನವಾಸಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತಾಗಲು ನಿರ್ಮಾಣ ಪ್ರಕಲ್ಪವನ್ನು ಭೂಪಾಲ, ಬಿಲಾಸಪುರ ಮುಂತಾದ ಕಡೆ ನಡೆಸುತ್ತಿದೆ. ಪ್ರತಿಭಾವಂತ ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತಾಗಲು ಕರ್ನಾಟಕದಲ್ಲಿ “ಸಬಲ” ಪ್ರಕಲ್ಪ ಪ್ರೋತ್ಸಾಹ ನೀಡುತ್ತಿದೆ. ಈ ವಿವಿಧ ರೀತಿಯ ಪ್ರಯತ್ನಗಳಿಂದಾಗಿ ನೂರಾರು ವನವಾಸಿ ಮಕ್ಕಳು ವಿಶೇಷ ಸಾಧನೆ ಮಾಡಲು ಸಾಧ್ಯವಾಗುತ್ತಿದೆ.
ಆರೋಗ್ಯ ಕ್ಷೇತ್ರ:‐-
ವನವಾಸಿ ಸಾಮಾನ್ಯವಾಗಿ ಆರೋಗ್ಯವಾಗಿರುತ್ತಾರೆ. ಅಪೌಷ್ಟಿಕತೆ ಕಾಡುತ್ತಿದೆ.ಈ ಹಿನ್ನೆಲೆಯಿಂದ ವನವಾಸಿ ಕಲ್ಯಾಣ ಪಾರಂಪರಿಕ ಔಷಧೀಯ ಪದ್ದತಿಯನ್ನು ಪ್ರೋತ್ಸಾಹಿಸುವದರ ಜೊತೆಗೆ, ವೈದ್ಯಕೀಯ ಶಿಬಿರಗಳು, ಚಿಕಿತ್ಸಾಲಯ ಮತ್ತು ಆರೋಗ್ಯ ರಕ್ಷಕರ ಮೂಲಕ ಯೋಗ್ಯ ಔಷಧಿ, ಚಿಕಿತ್ಸೆ ದೊರಕಿಸಿಕೊಡಲು ಪ್ರಯತ್ನಿಸುತ್ತಿದೆ. ಕೇರಳದ ವಯನಾಡಿನ ಮುತ್ತಿಲ್ ನ ವಿವೇಕಾನಂದ ಆಸ್ಪತ್ರೆ, ಕರ್ನಾಟಕದಲ್ಲಿ ಹೆಗ್ಗಡದೇವನ ಕೋಟೆ, ಮುರ್ಡೇಶ್ವರದ ಹತ್ತಿರದ ಉತ್ತರಕೊಪ್ಪದಲ್ಲಿನ ಸಂಚಾರಿ ಆರೋಗ್ಯ ವಾಹಿನಿ, ಜಶಪುರದ ಜಗದೇವರಾಂ ಉರಾಂ ಉಚಿತ ಚಿಕಿತ್ಸಾಲಯ ಲಕ್ಷಾಂತರ ವನವಾಸಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದೆ.
ವನವಾಸಿ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಹಿತರಕ್ಷಾ ವಿಭಾಗದ ಪ್ರಯತ್ನದಿಂದ ಕೇಂದ್ರ ಸರ್ಕಾರ ಅರಣ್ಯ ಹಕ್ಕು ರಕ್ಷಣೆಯ ಕಾಯ್ದೆಯ ತೊಡಕುಗಳನ್ನು ನಿವಾರಿಸಿ ಅರಣ್ಯ, ಪರಿಸರ ಮತ್ತು ಕಂದಾಯ ಇಲಾಖೆಗಳು ಸಮನ್ವಯದಿಂದ ಕಾರ್ಯಮಾಡುವ ಕಾನೂನನ್ನು ಜಾರಿಗೊಳಿಸಿದೆ. ಸರಕಾರ ವನವಾಸಿಗಳನ್ನು ಒಕ್ಕಲೆಬ್ಬಿಸದೆ ಅರಣ್ಯದಲ್ಲೇ ವಾಸಮಾಡುವಂತಾಗಲು ಶಾಸನಬದ್ಧ ವ್ಯವಸ್ಥೆಯನ್ನು ತರಲು ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಸರಕಾರದ ವಿವಿಧ ಯೋಜನೆಯಲ್ಲಿ ಸಂತ್ರಸ್ತರಾದವರಿಗೆ ಸೂಕ್ತ ಪರಿಹಾರವನ್ನು ಕೊಡಿಸುವ ಪ್ರಯತ್ನ ಮಾಡುತ್ತಿದೆ. ಇದರಿಂದ ವನವಾಸಿಗಳಲ್ಲಿ ಜಾಗೃತಿಮೂಡುತ್ತಿದೆ. ಕಾರ್ಯಾಗಾರ, ವಿಚಾರಗೋಷ್ಠಿಗಳನ್ನು ಏರ್ಪಡಿಸಿ ನೀತಿರೂಪಣೆ ಮಾಡಲು ಅನುಕೂಲವಾದ ಅಧ್ಯಯನದ ಆಧಾರಿತವಾದ ವಿಷನ್ ಡಾಕ್ಯುಮೆಂಟ್ ತಯಾರುಮಾಡಿದೆ.
ಸಾಮಾಜಿಕವಾಗಿ ಸಮಾನ ಮನಸ್ಕ ಸಂಘಟನೆಗಳ ಸಹಕಾರ ಪಡೆಯಲು ಮಹಾರಾಷ್ಟ್ರದ ದೇವಗಿರಿ ಭಾಗದಲ್ಲಿ ವಿವಿಧ ಗಿರಿಜನ ಸಂಘಗಳ ನೆಟ್ ವರ್ಕ ಕಾರ್ಯ ಯಶಸ್ಸು ಕಂಡಿದೆ. ಇದರಿಂದಾಗಿ ವಿರೋಧಿ ವಿಚಾರದವರೂ ಹತ್ತಿರ ಬಂದು ಸಮನ್ವಯದಿಂದ ಕಾರ್ಯಮಾಡಲು ಸಾದ್ಯವಾಗುತ್ತಿದೆ.
ದೇವಗಿರಿ ಪ್ರಾಂತದ ನಂದೂರಬಾರ್ ಜಲ್ಲೆಯ ಬಾರೀಪಾಡಾ ಗ್ರಾಮದಲ್ಲಿ ಶ್ರೀ ಚೇತಾರಾಂ ಪವಾರ್ ನೇತೃತ್ವದಲ್ಲಿ ಕಾಡನ್ನು ಸಂರಕ್ಷಿಸಿ, ಸಂವರ್ಧನೆ ಮಾಡುವ ಹಾಗೂ ವನವಾಸಿಗಳನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡುತ್ತಿರುವ ವಿವಿಧ ಗ್ರಾಮವಿಕಾಸದ ಕಾರ್ಯವು ಕರ್ನಾಟಕದ ಉತ್ತರ ಕೊಪ್ಪದಲ್ಲಿ ಮಾದರಿಯಾಗಿ ನಡೆಯುತ್ತಿದೆ.
ಸೇವ್ ಕಲ್ಚರ್ ಸೇವ್ ಐಡಿಂಟಿಟಿ ಸೇವ್ ನ್ಯಾಶನಾಲಿಟಿ:-
ಈ ನೀತಿಯಡಿಯಲ್ಲಿ ಕಾರ್ಯಮಾಡುತ್ತಿರುವ ಪರಿಣಾಮ ಈಶಾನ್ಯ ಭಾರತದಲ್ಲಿ ಪ್ರತ್ಯೇಕತೆಯ ಕೂಗು ತಗ್ಗಿದೆ. ಅಲ್ಲಿನ ಪ್ರತಿ ಜನಾಂಗದ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗಾಗಿ ಬರವಣಿಗೆಯ, ಆಡಿಯೋ ಮತ್ತು ವಿಡಿಯೋ ಧಾಖಲಾತಿ ನಡೆಯುತ್ತಿದೆ. ಇದರಿಂದಾಗಿ ಯುವಪೀಳಿಗೆಯವರಿಗೆ ತಮ್ಮ ಶ್ರೇಷ್ಠ ಪರಂಪರೆಯ ದರ್ಶನದಿಂದ ತಮ್ಮ ವಾರಸಿಕೆಯ ಬಗ್ಗೆ ಅಭಿಮಾನ ಮೂಡುತ್ತಿದೆ.
ವಿವಿಧ ಸೇವಾಕಾರ್ಯದ ಪರಿಣಾಮವಾಗಿ ದೇಶವ್ಯಾಪಿಯಿರುವ ವನವಾಸಿಗಳಲ್ಲಿ ವನವಾಸಿ ಕಲ್ಯಾಣಾಶ್ರಮ ನಮ್ಮದು ಎಂಬ ಭಾವನೆ ಮೂಡಿದೆ. ಸ್ವಪ್ರೇರಣೆಯಿಂದ ಪೂರ್ಣಾವಧಿ, ಅಲ್ಪಾವಧಿ ಮತ್ತು ಸ್ಥಾನೀಯ ಕಾರ್ಯಕರ್ತರಾಗಿ ಜೋಡಿಸಿಕೊಳ್ಳುತ್ತಿದ್ದಾರೆ.
ಕ್ರೀಡಾ ಆಯಾಮ:-
ವನವಾಸಿಗಳ ಶಾರೀರಿಕ ಹಾಗೂ ಮಾನಸಿಕ ಧೃಡತೆಯಿರುವವರು. ಅವರಲ್ಲಿನ ಈ ಶಕ್ತಿಯನ್ನು ಕ್ರೀಡೆಯಲ್ಲಿ ಬಳಸಿಕೊಂಡು ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಕೊಡುಗೆ ನೀಡುವಂತಾಗಲು ಏಕಲವ್ಯ ಕ್ರೀಡಾ ಕೇಂದ್ರ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿವರ್ಷ 1988ರಿಂದ ನಡೆಸಿಕೊಂಡು ಬರುತ್ತಿದೆ. ಅದರ ಫಲವಾಗಿ ಶ್ರೀ ಲಿಂಬಾರಾಂ ರಾಠೋಡ, ಕವಿತಾ ರಾವತರಂಥಹ ಅಂತರಾಷ್ಟ್ರೀಯ ಕ್ರೀಡಾಪಟುಗಳು ತಯಾರಾಗಿದ್ದಾರೆ. ರಾಷ್ಟ್ರೀಯ ಮಟ್ಟದ ಕೋಚಗಳು ತಯಾರಾಗಿದ್ದಾರೆ.
ವನವಾಸಿಗಳ ನೇತೃತ್ವದ ವಿಕಾಸ:-
ಇತಿಹಾಸದಲ್ಲಿ ವನವಾಸಿಗಳು ರಾಜ್ಯವನ್ನಾಳಿದ ಉಲ್ಲೇಖ ಇದೆ. ಉದಾಹರಣೆಗೆ ಸುಗ್ರೀವ, ವಾಲಿ, ಘಟೋತ್ಕಚ, ರಾಜಾ ವೆಂಕಟಪ್ಪ ನಾಯಕ, ಈ ಪರಂಪರೆಯು ಮುಂದುವರೆದು ಬಂದು, ಅ.ಭಾ.ವ.ಕಲ್ಯಾಣಾಶ್ರಮದ ಅಧ್ಯಕ್ಷರಾಗಿ ವನವಾಸಿಗಳಾದ ಸ್ವರ್ಗೀಯ ಜಗದೇವರಾಮ ಉರಾಂ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ವನವಾಸಿ ಕಲ್ಯಾಣ ಆಶ್ರಮದ ವಿದ್ಯಾರ್ಥಿನಿಲಯದಲ್ಲಿದ್ದು ಓದಿದ ಶ್ರೀ ಸುದರ್ಶನ ಭಗತ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕದ ಶ್ರೀ ಶಾಂತಾರಾಮ ಸಿದ್ದಿಯವರು ಇಂದು ವಿಧಾನ ಪರಿಷತ್ತಿನ ಸದಸ್ಯರಾಗಿ ಸಾಮಾಜಿಕ ಕಾರ್ಯಮಾಡುತ್ತಿದ್ದಾರೆ. ಮಹಿಳಾ ಕಾರ್ಯಕರ್ತರಾದ ಭಗಿನಿ ಬುದ್ಧಿಮಾಯಾ ತಮಂಗ್ ಸಿಕ್ಕಿಂನ ರಾಜ್ಯ ಸಹಸಂಘಟನಾ ಕಾರ್ಯದರ್ಶಿಯಾಗಿ, ಮತ್ತು ಭಗಿನಿ ದೊನ್ಶಿನ್ಲು ಗೋಲ್ಮೇಯಿ ಮಣಿಪುರ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯಮಾಡುತ್ತಿದ್ದಾರೆ. ಅಖಿಲ ಭಾರತ (ಗಿರಿಜನ)ಪರಿಶಿಷ್ಟ ಜನಾಂಗದ(ಎಸ್ಟಿ) ಆಯೋಗದ ಅಧ್ಯಕ್ಷರಾಗಿ ಶ್ರೀ ಹರ್ಷ ಚವ್ಹಾಣ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ರೀತಿಯ ಕಾರ್ಯಕರ್ತರು ಅನೇಕ ರಾಜ್ಯಗಳಲ್ಲಿ ತಯಾರಾಗುತ್ತಿದ್ದಾರೆ. ವನವಾಸಿಗಳ ಆದರ್ಶ ವ್ಯಕ್ತಿಯಾಗಿ ಭಗವಾನ ಬಿರಸಾ ಮುಂಡಾ ಅವರ ಜಯಂತಿಯನ್ನು ಪ್ರತಿವರ್ಷ ನವೆಂಬರ 15 ರಂದು ಗಿರಿಜನ ಸ್ವಾಭಿಮಾನ ದಿವಸ’ ಎಂದು ಆಚರಿಸಿಕೊಂಡು ಬರುತ್ತಿದೆ. ಈ ವರ್ಷ ಕೇಂದ್ರ ಸರ್ಕಾರ ‘ಭಗವಾನ ಬಿರಸಾ ಮುಂಡಾ ಜಯಂತಿಯನ್ನು “ಜನಜಾತಿ ಗೌರವ ದಿವಸ” ಘೋಷಣೆ ಮಾಡಿದ್ದು ವನವಾಸಿ ಕಲ್ಯಾಣಾಶ್ರಮದ ಸಾಧನೆಯಾಗಿದೆ.
ವನವಾಸಿ, ಗ್ರಾಮವಾಸಿ ಮತ್ತು ನಗರವಾಸಿ ನಾವೆಲ್ಲಾ ಭಾರತವಾಸಿ ಎಂಬ ಸಂದೇಶದಿಂದಾಗಿ ಸಾವಿರಾರು ನಗರದವರು ವನವಾಸಿಗಳೂ ನಮ್ಮ ಬಂಧುಗಳೆ ಎಂಬ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ಮುಂಬಯಿ, ಹರಿಯಾಣ, ಪಂಜಾಬ, ದೆಹಲಿ, ಭೋಪಾಲ ಮತ್ತು ಕೋಲ್ಕತ್ತ ಮುಂತಾದ ಪ್ರಮುಖ ನಗರದವರು ಶಿಕ್ಷಣ, ಆರೋಗ್ಯ ಮತ್ತು ಗ್ರಾಮವಿಕಾಸ ಕಾರ್ಯಗಳಿಗೆ ವಿವಿಧ ರೀತಿಯ ಯೋಗದಾನ ನೀಡುತ್ತಿವೆ. ಕೋಲ್ಕತ್ತ ನಗರ ಸಮಿತಿಯವರು ವನವಾಸಿ ಪ್ರದೇಶಗಳಲ್ಲಿ ಸಾವಿರಕ್ಕೂ ಹೆಚ್ಚಿನ ಚೆಕ್ ಡ್ಯಾಮ್, ಕೆರೆಗಳ ನಿರ್ಮಾಣ ಮಾಡಿ ಕೃಷಿಕಾರ್ಯಕ್ಕೆ, ಜಾನುವಾರುಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ವನವಾಸಿ ಕಲ್ಯಾಣಾಶ್ರಮದ ಕಾರ್ಯ ನಿಯಮಿತವಾಗಿ ಹದಿನೈದು ಸಾವಿರ ಹಳ್ಳಿಗಳಲ್ಲಿ ನಡೆಯುತ್ತಿದೆ. ಅರವತ್ತು ಸಾವಿರ ಹಳ್ಳಿಗಳಲ್ಲಿ ಸಂಪರ್ಕವಿದೆ.ವನವಾಸಿಗಳಿಗಾಗಿಯೇ ದೇಶವ್ಯಾಪಿಯಾಗಿ ಕೆಲಸ ಮಾಡುತ್ತಿರುವ ಏಕೈಕ ಸಂಘಟನೆಯಾಗಿದೆ. ಭರವಸೆಯ ಹಾದಿಯಲ್ಲಿ ಸಾಗುತ್ತಿದೆ. ಸಾಗಬೇಕಾದ ದೂರ ಸಾಕಷ್ಟಿದೆ ಎಂಬ ಅರಿವೂ ಕಲ್ಯಾಣಾಶ್ರಮಕ್ಕಿದೆ. ಆದರೆ ಸಮಾಜದ ಸಹಕಾರದಿಂದ ಸಾಧಿಸಬಲ್ಲೆವು ಎಂಬ ವಿಶ್ವಾಸವಿದೆ. ಸಹೃದಯಿ ಸಮಾಜದ ಬಂಧು ಭಗಿನಿಯರು ಈ ಪವಿತ್ರವಾದ ಕಾರ್ಯದಲ್ಲಿ ಸಕ್ರಿಯವಾಗಿ ಕೈ ಜೋಡಿಸಬೇಕಾಗಿ ವಿನಮ್ರ ವಿನಂತಿಯನ್ನು ಮಾಡುತ್ತೇವೆ.
ವನವಾಸಿ ಕಲ್ಯಾಣ (ರಿ.) ಕರ್ನಾಟಕದ ಜಾಲತಾಣ: www.vanavasikalyana.org
ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮದ ಜಾಲತಾಣ : www.vanvasi.org
* 1952 ಡಿಸಂಬರ್ 26 ರಂದು ವನವಾಸಿ ಕಲ್ಯಾಣಾಶ್ರಮದ ಸ್ಥಾಪನೆ.
* ಭಾರತದಾದ್ಯಂತ ವನವಾಸಿಗಳಿಗಾಗಿ(ಗಿರಿಜನರ/ಬುಡಕಟ್ಟು ಜನರ) ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಏಕೈಕ ಸಂಘಟನೆ.
* ನವೆಂಬರ 15 ಭಗವಾನ ಬಿರಸಾ ಮುಂಡಾ ಜಯಂತಿಯನ್ನು ಕೇಂದ್ರ ಸರ್ಕಾರ “ಜನಜಾತಿ ಗೌರವ ದಿವಸ”ಘೋಷಣೆ ಮಾಡಲು ಕಾರಣವಾದ ಶಕ್ತಿ.
* 15000 ವನವಾಸಿ ಹಾಡಿಗಳಲ್ಲಿ 20,000 ವಿವಿಧ ಸೇವಾಕಾರ್ಯಗಳನ್ನು ನಡೆಸುತ್ತಿರುವ ಸ್ವಯಂಸೇವಾ ಸಂಸ್ಥೆ.
* 60,000 ವನವಾಸಿ ಹಾಡಿಗಳ ಸತತ ಸಂಪರ್ಕ