
ಸಾಲು ಸಾಲಾಗಿ ದೇಶಗಳು ಭಾರತದ ಬೆನ್ನಿಗೆ ನಿಲ್ಲಲು ಮುಂದೆ ಬರುತ್ತಿವೆ. ಈಗ ಭಾರತ ಜಗತ್ತಿನಲ್ಲಿ ಏಕಾಂಗಿಯಲ್ಲ. ಕೆಲವೇ ದಿನಗಳ ಹಿಂದೆ ಭಾರತಕ್ಕೆ ಕೊರೊನಾ ವಾಕ್ಸಿನ್ ತಯಾರಿಕೆಗೆ ಅತ್ಯಗತ್ಯ ಕಚ್ಚಾವಸ್ತುಗಳನ್ನು ಪೂರೈಸಲು ತಾನು ಅವಕಾಶ ಮಾಡಿಕೊಡುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಜೋಬೈಡೆನ್ ಹೇಳಿಕೆಯಿತ್ತರು. ಅವರ ಆ ಹೇಳಿಕೆಗೆ ಭಾರತ ಅಳುಮುಂಜಿಯ ಪ್ರತಿಕ್ರಿಯೆಯನ್ನು ನೀಡಲಿಲ್ಲ. ʼಅಯ್ಯೋ ಕಾಪಾಡಿ ನೀವಲ್ಲದಿದ್ದರೆ ನಮಗಾರು ಗತಿʼ ಎಂದು ಕೆಂಗೆಡಲಿಲ್ಲ. ಏಕೆಂದರೆ ಇದೀಗ ಜಗತ್ತು ಕಾಣುತ್ತಿರುವುದು ಬದಲಾದ ಭಾರತವನ್ನು. ಆತ್ಮನಿರ್ಭರ, ಸ್ವಾಭಿಮಾನಿ, ವಿಶ್ವಗುರು ಇತ್ಯಾದಿಗಳು ಬರೀ ಹೇಳಿಕೆಗೆ ಸೀಮಿತವಾಗದೇ ಆ ದಿಕ್ಕಿನೆಡೆಗೆ ಬಲವಾದ ಹೆಜ್ಜೆ ಇಡುತ್ತಿರುವ ಭಾರತ ಈಗಿನದ್ದು.
ಕೊವ್ಯಾಕ್ಸಿನ್ ಲಸಿಕೆಗಳನ್ನು ತಯಾರಿಸುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆ ಈಗಾಗಲೇ ಲಸಿಕೆ ತಯಾರಿಕೆಗೆ ಬೇಕಾಗಿರುವ ಎಲ್ಲ ಕಚ್ಛಾವಸ್ತುಗಳನ್ನು ಭಾರತದಲ್ಲಿಯೇ ತಾನು ಪಡೆದುಕೊಳ್ಳಲು ವ್ಯವಸ್ಥೆ ಮಾಡಿಕೊಂಡಿರುವುದಾಗಿ ತಿಳಿಸಿತು. ಭಾರತ ಮಾತ್ರವಲ್ಲ ಭಾರತದ ಹೊರಗೂ ಅಮೆರಿಕಾ ಹೊರತು ಪಡಿಸಿ ಬೇರೆ ದೇಶಗಳಿಂದಲೂ ಈ ವಸ್ತುಗಳನ್ನು ತುರ್ತಾಗಿಯೇ ಆಮದು ಮಾಡಿಕೊಳ್ಳಬಹುದೆಂಬ ಯೋಚನೆಯೂ ಉನ್ನತ ಮಟ್ಟದಲ್ಲಿಆಯಿತು.
ಅಮೆರಿಕಾ ತಾನು ಆತುರ ಬಿದ್ದು ಕಚ್ಛಾವಸ್ತು ಪೂರೈಕೆ ನಿಲ್ಲಿಸುವ ಮಾತನ್ನಾಡಿದ್ದೇನೆ ಎಂದು ಅರಿವಾಗುವ ಹೊತ್ತಿಗೆ ಅದರ ಮಾನವನ್ನು ಜಗತ್ತಿನಲ್ಲಿ ಹರಾಜು ಹಾಕಿ ಆಗಿತ್ತು. ಏಕೆಂದರೆ ಕಳೆದ ವರ್ಷ ಅಮೆರಿಕಾ ಕೋವಿಡ್ ವಿಷಮ ಪರಿಸ್ಥಿತಿಯನ್ನು ಎದುರಿಸಲಾರದೇ ಭಾರತಕ್ಕೆ ಅಗತ್ಯ ಔಷಧಿ ಕಳುಹಿಸಲು ಮನವಿ ಮಾಡಿಕೊಂಡ ಬೆನ್ನಲ್ಲೇ ಭಾರತ ಅದನ್ನು ಪೂರೈಸಿತ್ತು. ಆಗಿನ ಅಮೆರಿಕಾ ಅಧ್ಯಕ್ಷ ಟ್ರಂಪ್ ಇದನ್ನು ಮುಕ್ತಕಂಠದಿಂದ ಶ್ಲಾಘಿಸಿ ನಾವಿದನ್ನು ಎಂದಿಗೂ ಮರೆಯುವುದಿಲ್ಲ, ನಿಜಕ್ಕೂ ಭಾರತದ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ನಿಲ್ಲತ್ತೇವೆ ಎಂದು ಘೋಷಿಸಿದ್ದರು. ಆದರೆ ಅವರ ಸರ್ಕಾರ ಬದಲಾಗುತ್ತಲೇ ಈ ಅಭಿಪ್ರಾಯವೂ ಬದಲಾಯಿತು.
ಭಾರತದಂತಹ ಬಹುದೊಡ್ಡ ಮಾರುಕಟ್ಟೆಯ ಲಾಭ ಪಡೆಯಬೇಕೆಂದು ಉದ್ದೇಶಿಸಿದ್ದ ಅಮೆರಿಕಾದ ಫಾರ್ಮಾ ಕಂಪನಿಗಳು ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಮುರಿಯಬೇಕೆಂದು ಜೋ ಬೈಡನ್ ಮೇಲೆ ಒತ್ತಡ ತಂದು ಈ ನಿರ್ಧಾರವನ್ನು ಪ್ರಕಟಿಸುವಂತೆ ಮಾಡಿದ್ದರು. ಆದರೆ ಭಾರತದ ರಾಜತಾಂತ್ರಿಕ ನಡೆ ಮತ್ತು ಭಾರತದಿಂದ ಬರುವ ಕೆಲ ಕಚ್ಛಾ ಸಾಮಾಗ್ರಿಗಳ ಪೂರೈಕೆ ಇಲ್ಲದೆ ಅಮೆರಿಕಾದ ಫಾರ್ಮಾ ಕಂಪನಿಗಳು ಸಹ ಬೃಹತ್ ಪ್ರಮಾಣದಲ್ಲಿ ಲಸಿಕೆಗಳನ್ನು ತಯಾರಿಸಲು ಸಾಧ್ಯವಿಲ್ಲ. ಒಂದುವೇಳೆ ಪರಿಸ್ಥಿತಿ ಬಯಸಿದಲ್ಲಿ ಭಾರತವೂ ಅಮೆರಿಕಾ ಘೋಷಿಸಿದಂತೆಯೇ ತನ್ನ ದೇಶದಿಂದ ಇವುಗಳ ರಫ್ತನ್ನು ನಿರ್ಬಂಧಿಸಬಹುದು ಎಂಬುದು ಶ್ವೇತಭವನಕ್ಕೆ ತಿಳಿದು ಬಂದಿತು. ನಂತರ ಅವರ ನಿರ್ಧಾರ ಬದಲಾಗಿದೆ. ಯಾವುದೇ ರೀತಿ ಭಾರತವನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂಬ ವಿವೇಚನೆ ಮೂಡಿ ಬಂದಿದೆ.
ಅಮೆರಿಕಾ ಸರ್ಕಾರದ ಮತ್ತೊಂದು ಪ್ರಕಟನೆಯಂತೆ ಭಾರತಕ್ಕೆ ಕಚ್ಛಾವಸ್ತುಗಳನ್ನು ಕಳುಹಿಸಲು ಈಗ ಯಾವುದೇ ರೀತಿಯ ನಿರ್ಬಂಧಗಳನ್ನು ಹಾಕಲಾಗುತ್ತಿಲ್ಲ. ತಾನು ಭಾರತದ ಸ್ನೇಹಿ ನೀತಿಯನ್ನು ಹೊಂದಿರುವ ದೇಶ ಎಂದು ಅದು ತೋರಿಸಿಕೊಳ್ಳುತ್ತಿದೆ. ಈ ಬಗ್ಗೆ ಸ್ವತಃ ಅಲ್ಲಿನ ಅಧ್ಯಕ್ಷ ಟ್ವೀಟ್ ಮಾಡಿ ಹೇಳಿದ್ದಾರೆ. ಇದು ಕೇವಲ ಒಂದೆರಡು ದಿನಗಳಲ್ಲಿ ಮೂಡಿರುವ ಅಭಿಪ್ರಾಯವಲ್ಲ, ಬದಲಾಗಿ ಅನೇಕ ವರ್ಷಗಳಿಂದ ಮೋದಿಯವರು ನಡೆಸಿಕೊಂಡು ಬಂದಿರುವ ರಾಜತಾಂತ್ರಿಕ ನಡೆಯ ಪರಿಣಾಮ ಮತ್ತು, ಯಶಸ್ವಿ ವಿದೇಶಾಂಗ ನೀತಿಯ ಫಲಶ್ರುತಿ.
ಈ ಹಿಂದೆ ಇದೇ ಯೂರೋಪ್ ದೇಶಗಳಲ್ಲಿ ಔಷಧಿ, ವಿಪಿಪಿ ಕಿಟ್, ಮಾಸ್ಕ್ ಗಳ ಕೊರತೆಯುಂಟಾದಾಗ ಭಾರತ ಸಮರೋಪಾದಿಯಲ್ಲಿ ಇವುಗಳನ್ನು ತಯಾರಿಸಿ ಅಮೆರಿಕಾ ಸೇರಿದಂತೆ ವಿಶ್ವದ ನೂರಕ್ಕೂ ಹೆಚ್ಚು ದೇಶಗಳಿಗೆ ನೀಡಿತ್ತು. ಇತರ ದೇಶಗಳ ಲಸಿಕೆಗಳಿಗಿಂತ ಹೆಚ್ಚು ಪರಿಣಾಮಕಾರಿ ಮತ್ತು ಅಡ್ಡಪರಿಣಾಮಗಳಿಲ್ಲದ ತನ್ನದೇ ಆದ ತಂತ್ರಜ್ಞಾನದಿಂದ ತಯಾರಿಸಲಾದ ಎರಡು ಲಸಿಕೆಗಳನ್ನು ಭಾರತ ಅಭಿವೃದ್ಧಿ ಪಡಿಸಿತು. ಆಗಲೂ ಭಾರತ ಅನುಸರಿಸಿದ್ದು ಇದೇ ವಿಶ್ವಸ್ನೇಹಿ ನೀತಿ. ಯೂರೋಪಿನ ಹಲ ದೇಶಗಳೂ ಸೇರಿದಂತೆ ಏಷಿಯಾ, ಆಫ್ರಿಕ ಹೀಗೆ ವಿವಿಧ ಖಂಡಗಳ ಅನೇಕ ದೇಶಗಳಿಗೆ ಸುಮಾರು ಆರು ಕೋಟಿ ವಾಕ್ಸಿನ್ ಗಳನ್ನು ಮಾನವೀಯ ಕಾಳಜಿಯ ಹಿನ್ನೆಲೆಯಲ್ಲಿ ಕಳುಹಿಸಿತು.
ರಷ್ಯಾ ಮತ್ತು ಚೀನಾ ಸಹ ಇದೇ ರೀತಿ ಆಫ್ರಿಕಾ, ಯೂರೋಪು ಮತ್ತು ಏಷಿಯಾದ ವಿವಿಧ ದೇಶಗಳಿಗೆ ತನ್ನ ವಾಕ್ಸಿನ್‌ಗಳನ್ನು ಕಳುಹಿಸುತ್ತಿದ್ದರೂ ಸಹ, ಅದರ ಹಿಂದೆ ತಮ್ಮ ವ್ಯಾಪಾರಿ ನೆಲೆಯನ್ನು, ರಾಜಕೀಯ ಪ್ರಭಾವವನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದವು. ಈ ದೇಶಗಳ ವಾಕ್ಸಿನ್‌ಗಳ ಗುಣಮಟ್ಟವನ್ನೂ ಬಹಿರಂಗವಾಗಿಯೇ ಪ್ರಶ್ನಿಸಿದ್ದ ಕೆಲ ದೇಶಗಳು ಭಾರತದ ವಾಕ್ಸಿನ್ ಅನ್ನು ಯಾವುದೇ ಭೀತಿಯಿಲ್ಲದೇ ಬರಮಾಡಿಕೊಂಡವು.
ಈಗ ಭಾರತದಲ್ಲಿ ಎರಡನೇ ಅಲೆಯ ಸಮಯದಲ್ಲಿ ಎದುರಿಸುತ್ತಿರುವ ಸಂಕಷ್ಟಗಳು ಬರೀ ಭಾರತದ್ದಲ್ಲ ಬದಲಾಗಿ ನಮ್ಮದೇ ಆತ್ಮೀಯ ಮಿತ್ರನದ್ದು ಎಂದು ಹಲವಾರು ದೇಶಗಳು ನೆರವಿನ ಹಸ್ತ ಚಾಚಿ ಮುಂದೆ ಬಂದಿವೆ. ಭಾರತ ಅನುಸರಿಸಿದ ವಾಕ್ಸಿನ್ ಡಿಪ್ಲೊಮಸಿ ಇಂದು ಯಶಸ್ವಿಯೆಂದು ಸಾಬೀತಾಗಿದೆ. ಜಗತ್ತಿನ ಮೂಲೆಮೂಲೆಯ ದೇಶಗಳು ಭಾರತಕ್ಕೆ ವೈದ್ಯಕೀಯ ಉದ್ದೇಶಗಳಿಗಾಗಿ ಆಕ್ಸಿಜನ್, ವೆಂಟಿಲೇಟರ್, ಅತ್ಯಗತ್ಯ ಔಷಧಿ ಮತ್ತು ವೈದ್ಯಕೀಯ ಉಪಕರಣಗಳನ್ನು ಒದಗಿಸಲು ಮುಂದೆ ಬಂದಿವೆ.
ರಷ್ಯಾ ಯಾವುದೇ ಒತ್ತಡಕ್ಕೆ ಒಳಗಾಗದೇ ಆಕ್ಸಿಜನ್ ಪೂರೈಕೆಮಾಡುವ ಯಂತ್ರೋಪಕರಣಗಳನ್ನು ಭಾರತಕ್ಕೆ ಕಳುಹಿಸಿ ಕೊಟ್ಟಿದೆ. ನೆರೆಯ ಪುಟ್ಟ ದೇಶ ಭೂತಾನ್ ಸಹ ಭಾರತಕ್ಕೆ ಆಕ್ಸಿಜನ್ ಕಂಟೈನರ್ ಗಳನ್ನು ಕಳುಹಿಸಿದೆ. ಸೌದಿ ಅರೇಬಿಯಾದ ಬಂದರುಗಳಿಂದ 80 ಮೆಟ್ರಿಕ್ ಟನ್‌ಗಳಷ್ಟು ದ್ರವ ರೂಪದ ಆಕ್ಸಿಜನ್ ಕಂಟೇನರ್ ಗಳು ಭಾರತದತ್ತ ಹೊರಟಿದೆ. ಸಿಂಗಪೂರ್ ಆಕಿಜನ್ನಿನ ನಾಲ್ಕು ಕ್ರಯೋಜನಿಕ್ ಟ್ಯಾಂಕರ್ ಗಳನ್ನು ವಿಮಾನದ ಮೂಲಕ ಕಳುಹಿಸಿ ಕೊಟ್ಟಿದೆ. ವೆಂಟಿಲೇಟರ್ ಯಂತ್ರಗಳನ್ನು ಬೃಹತ್ ಪ್ರಮಾಣದಲ್ಲಿ ಸದ್ಯದಲ್ಲೇ ಕಳುಹಿಸುವುದಾಗಿ ಹೇಳಿದೆ. ಅರಬ್ ಸಂಯುಕ್ತ ರಾಷ್ಟ್ರಗಳು, ಡೆನ್ಮಾರ್ಕ್ ಇಸ್ರೇಲ್, ಫ್ರಾನ್ಸ್‌ಗಳು ನೆರವಿನ ಹಸ್ತ ಚಾಚಿ ನಿಂತಿವೆ.
ಯೂರೋಪಿಯನ್ ಯೂನಿಯನ್ ಜೊತೆಗೆ ಜಪಾನ್ ಮತ್ತು ಕೆನಡಾ ರಾಷ್ಟ್ರಗಳು ಸಹ ವೆಂಟಿಲೇಟರ್, ಆಕ್ಸಿಜನ್ ಇತ್ಯಾದಿ ಅಗತ್ಯ ವಸ್ತುಗಳನ್ನು ಕಳುಹಿಸಲು ಮುಂದೆ ಬಂದಿವೆ. ಮೊದಲಿಗೆ ಸುಮ್ಮನಿದ್ದ ಜರ್ಮನಿ ಸಹ ಭಾರತಕ್ಕೆ ಹರಿದು ಬರುತ್ತಿರುವ ಜಗತ್ತಿನ ಬೆಂಬಲವನ್ನು ನೋಡಿ ಬದಲಾಗಿದೆ. ಅದು ಭಾರತದ ಹಿಂದೆ ಒದಗಿಸಿದ್ದ ನೆರವನ್ನು ಶ್ಲಾಘಿಸಿ ಭಾರತದ ಬೆಂಬಲಕ್ಕೆ ನಿಲ್ಲುವುದು ನಮ್ಮ ಜವಾಬ್ದಾರಿ ಎಂದಿದೆ.
ಇದು ಭಾರತದ ಬಗ್ಗೆ ವಿಶ್ವದ ವಿವಿಧ ದೇಶಗಳು ಹೊಂದಿರುವ ಗೌರವ ಭಾವನೆಯನ್ನು ಮತ್ತು ಭಾರತ ಗಳಿಸಿರುವ ಶಕ್ತಿಯನ್ನೂ ಮತ್ತೊಮ್ಮೆ ಖಚಿತ ಪಡಿಸಿತು. ಕೊರೋನಾದ ನಿರ್ಮಿಸಿರುವ ಈ ವಿಷಮಯ ವಿಷಮ ಸನ್ನಿವೇಶವನ್ನು ಭಾರತ ಎದುರಿಸಿ ಗೆಲ್ಲುವುದರಲ್ಲಿ ಮತ್ತು ವಿಶ್ವಶಕ್ತಿಯ ಹೊಸಕೇಂದ್ರವಾಗುವಲ್ಲಿ ಯಾವುದೇ ಸಂಶಯವಿಲ್ಲ