ಚಿಂತನ

ಇಂದಿನ ಕಾಲದ ಮಕ್ಕಳು, ಯುವಜನರು ಯಾರನ್ನು ತಮ್ಮ ಆದರ್ಶವನ್ನಾಗಿಸಿಕೊಂಡಿದ್ದಾರೆ? ಯಾರ ಮೇಲೆ ಹೆಚ್ಚು ಅಭಿಮಾನವನ್ನು ಹೊಂದಿದ್ದಾರೆ? ಯಾರ ಬಗ್ಗೆ ಹೆಚ್ಚು ಚಿಂತನೆ ಮಾಡುತ್ತಿದ್ದಾರೆ? ಯಾರನ್ನು ತಮ್ಮ ನಾಯಕನ ಸ್ಥಾನದಲ್ಲಿ ಕೂರಿಸಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಇಂದಿನ ಸಮಾಜ ಎತ್ತ ಸಾಗುತ್ತಿದೆ ಎಂದು ಗಾಬರಿಯಾಗುವುದು ಖಂಡಿತ. ಯಾವ ಹಿಂದುಸ್ಥಾನದ ಶಿಕ್ಷಣ ವ್ಯವಸ್ಥೆಯು ವಿಶ್ವದಲ್ಲೇ ಸರ್ವಶ್ರೇಷ್ಠವೆಂದು ಮೆಕಾಲೆ ಎಂಬಾತನು ಬ್ರಿಟಿಷ್ ಸಂಸತ್ತಿನಲ್ಲೇ ವಿವರಿಸಿದ್ದನೊ ಹಾಗೂ ಅದನ್ನು ನಾಶ ಮಾಡುವವರೆಗೆ ಬ್ರಿಟಿಷರ ಸಾರ್ವಭೌಮತ್ವವನ್ನು ಅಲ್ಲಿ ಸ್ಥಾಪಿಸಲು ಸಾಧ್ಯತೆಯೇ ಇಲ್ಲವೆಂದು ತಿಳಿಸಿ, ಅಹಂಕಾರದ ಅಜ್ಞಾನದಿಂದ ಶತಮಾನಗಳ ಕಾಲ ದುರಾಚಾರ ನಡೆಸಿ ಗುರುಕುಲಗಳ ದುರಂತ ಅಂತ್ಯವನ್ನು ಮಾಡುವುದರ ಮೂಲಕ ಭವ್ಯ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆಯಲಾಯಿತು.
ಆಂಗ್ಲರ ಶಿಕ್ಷಣವನ್ನು ನಮ್ಮ ದೇಶದಲ್ಲಿ ಹೇರುವುದರ ಮೂಲಕ ಅವರ ಗುಲಾಮರಾಗಿ ಕಸುಬು ಮಾಡಿಸಿಕೊಳ್ಳಬೇಕೆಂದು ನಾಂದಿ ಹಾಡಿದರು. ಇದರ ಘೋರತೆಯಿಂದ ಇಂದಿಗೂ ಮಕ್ಕಳು ಅದರ ಪ್ರಭಾವವನ್ನು ತಪ್ಪಿಸಿಕೊಳ್ಳಲಾಗುತ್ತಿಲ್ಲ, ಸಮಾಜದ ಧರ್ಮ-ಮೌಲ್ಯಗಳ ಅಧಃಪತನವಾಗುತ್ತಿರುವುದು ಕಣ್ಣ ಮುಂದೆಯೇ ಕಾಣಿಸುತ್ತಿದೆ. ಯಾರು ತಮ್ಮ ದೇಶ-ಧರ್ಮದ ರಕ್ಷಣೆಗಾಗಿ ಸರ್ವೋಚ್ಛ ಬಲಿದಾನವನ್ನು ಮಾಡಿದರೊ, ಅಂತಹ ಹುತಾತ್ಮ ವೀರರನ್ನು ನೆನೆಯದೆ ಇಂದಿನ ಹಲವಾರು ಮಕ್ಕಳು ಪರಕೀಯ ಸಂಸ್ಕೃತಿಯನ್ನು ಪೋಷಿಸುತ್ತಿರುವ ಹಲವು ಸಿನಿಮಾ ನಾಯಕ-ನಾಯಕಿಯರ ಬಗೆಗೇ ಆಸಕ್ತಿ ವಹಿಸುತ್ತಿರುವುದು ನೋಡಿದರೆ ದುಃಖದ ಪರಾಕಾಷ್ಠತೆಯ ಅನುಭವವಾಗುವುದು. ಇದರಲ್ಲಿ ಕೇವಲ ಮಕ್ಕಳದ್ದು ಮಾತ್ರ ತಪ್ಪಿರದೆ, ಸಮಾಜವು ಸತ್ಯ-ಧರ್ಮದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವಲ್ಲಿ ಸೋಲುತ್ತಿರುವುದು ಪ್ರಮುಖ ಕಾರಣ. ಬ್ರಿಟಿಷರು ಕೇವಲ ದೈಹಿಕವಾಗಿ ಮಾತ್ರ ನಮ್ಮ ಮೇಲೆ ಆಡಳಿತ ನಡೆಸದೆ, ಬೌದ್ಧಿಕವಾಗಿ ಕೂಡ ಅವರ ಶಿಕ್ಷಣ ಪದ್ಧತಿಯ ಮೂಲಕ ಇಂದಿಗೂ ಹಲವಾರು ಜನರ ಮೇಲೆ ಆಡಳಿತ ನಡೆಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಯಾವ ಬ್ರಿಟಿಷರು ನಮ್ಮ ಶಕ್ತಿಯಾಗಿದ್ದ ನಮ್ಮ ಹೆಮ್ಮೆಯಾಗಿದ್ದ ಇತಿಹಾಸವನ್ನೇ ಸುಳ್ಳೆಂದು ಸಿದ್ಧಪಡಿಸಲು ದೊಡ್ಡ ದೊಡ್ಡ ಗ್ರಂಥಗಳನ್ನು ಬರೆಸಿ ವೈಚಾರಿಕ ದಾಳಿ ಪ್ರಾರಂಭಿಸಿ ಹೋದರೊ, ಅದು ಇಂದಿಗೂ ಮುಂದುವರೆಯುತ್ತಾ ಅದರ ವಿರುದ್ಧ ಸಂಘರ್ಷ ನಡೆಸಲು ದೇಶಭಕ್ತರು ತಮ್ಮ ಜೀವನವನ್ನು ಮುಡುಪಾಗಿಡುತ್ತಾ ಬಂದಿದ್ದಾರೆ. ಈ ಬ್ರಿಟಿಷ್ ವೈಚಾರಿಕತೆಯ ಪ್ರಭಾವದಿಂದ ನಮ್ಮ ಶಾಲಾ ಕಾಲೇಜಿನ ಪಠ್ಯ ಪುಸ್ತಕಗಳಲ್ಲಿ ಕೂಡ ಸಂಪೂರ್ಣ ಸತ್ಯವನ್ನು ಬರೆಯದೆ ನಮ್ಮ ಡಿಸೈನ್ ಇತಿಹಾಸಕಾರರು ಸರಿಯಾದ ಭೂತಕಾಲವನ್ನು ಪ್ರದರ್ಶಿಸದೆ, ನಮ್ಮ ಭವಿಷ್ಯತ್ ಕಾಲಕ್ಕೇ ಆಪತ್ತನ್ನು ತಂದೊಡ್ಡಿದ್ದಾರೆ. ಇಂತಹದ್ದೇ ಒಂದು ಮರೆಮಾಚಲಾದ ನಮ್ಮ ಪೂರ್ವಜರಾದ ಸಿಖ್ ಪರಂಪರೆಯ ಸಾಹಸಿ ಮಕ್ಕಳ ಬಲಿದಾನವಾದ ಡಿಸೆಂಬರ್ 26ರಂದು ವಾಸ್ತವದಲ್ಲಿ ಮಕ್ಕಳ ದಿನಾಚರಣೆ ನಡೆಯಬೇಕೆಂದು ಈ ಲೇಖನದ ಶೀರ್ಷಿಕೆಯ ಮೂಲಕ ಪ್ರಸ್ತುತ ಪಡಿಸಿದ್ದೇನೆ. ಇವರ ಬಗ್ಗೆ ನಾನು ಮೊದಲ ಬಾರಿ ತಿಳಿದು ಕೊಂಡ ಮೇಲೆ ಅನಿಸಿದ್ದು ಏನೆಂದರೆ ಇಷ್ಟೊಂದು ಸಾಹಸಿಗರಾದ ನಮ್ಮ ಪೂರ್ವಜರ ಕಥೆಯು ಏಕೆ ಅಷ್ಟೊಂದು ಪ್ರಚಾರವಾಗಿಲ್ಲ? ನಾವು ಓದುವ ಶಾಲಾ ಪುಸ್ತಕಗಳಲ್ಲಿ ಒಂದು ಸಾಲಾದರೂ ಇವರ ಬಗ್ಗೆ ಬರೆದೇ ಇಲ್ಲವೇಕೆ? ಈ ಸಮಾಜ ತನಗೆ ತಿಳಿದೋ ತಿಳಿಯದೆಯೋ ಅವರ ತ್ಯಾಗ, ಬಲಿದಾನವನ್ನು ನೆನೆಯದೆ ನಮ್ಮ ದೇಶದ ಚರಿತ್ರೆಗೆ ಕಳಂಕವನ್ನು ಮೆತ್ತಿಸಲು ಹೊರಟಿದೆಯೋ? ಎಂಬ ಆಘಾತಕಾರಿ ಪ್ರಶ್ನೆಗಳು.

ಮೂರು ಶತಮಾನಗಳಿಗಿಂತಲೂ ಹಿಂದೆ ಸಿಖ್ಖರ 10ನೇ ಗುರುವಾಗಿದ್ದ ಗುರು ಗೋವಿಂದ ಸಿಂಗರು ಡಿಸೆಂಬರ್ 21 ರಿಂದ 27ರ ವರೆಗಿನ ಕೆಲವೇ ಕೆಲವು ದಿನಗಳಲ್ಲಿ ತನ್ನಿಡೀ ಪರಿವಾರವನ್ನು ಕಳೆದುಕೊಂಡರು, ದೇಶ-ಧರ್ಮದ ರಕ್ಷಣೆಗಾಗಿ ಅವರ ಪರಿವಾರದ ಬಲಿದಾನವಾಯಿತು. ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ (ಸರಿ ಸುಮಾರು 9ನೇ ವಯಸ್ಸು) ತಮ್ಮ ತಂದೆ ಗುರು ತೇಗ್ ಬಹದ್ದೂರರು ಕಾಶ್ಮೀರಿ ಪಂಡಿತರ, ಸಿಖ್ಖರ ಮತಾಂತರದ ವಿರುದ್ಧ ಹೋರಾಡಿ ಬಲಿದಾನವಾಗಿದ್ದನ್ನು ಕಂಡಿದ್ದರು. ಆ ಚಿಕ್ಕ ವಯಸ್ಸಿನಲ್ಲೇ ಗುರುವಿನ ಜವಾಬ್ದಾರಿ ಹೊತ್ತು ಧರ್ಮ ರಕ್ಷಣೆ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಯಿತು. ನಂತರ ಅವರು ಕಂಡ ತಮ್ಮ ಪರಿವಾರದ ಬಲಿದಾನವೆಂದರೆ, ತಮ್ಮ ದೊಡ್ಡ ಮಕ್ಕಳಾದ 17 ವರ್ಷದ ಬಾಬಾ ಅಜಿತ್ ಸಿಂಗ್ ಹಾಗೂ 13 ವರ್ಷದ ಬಾಬಾ ಜುಝಿರ್ ಸಿಂಗ್ ಅವರದ್ದು. ಅದುವೇ ಬಹುಶಃ ಇಡೀ ಪ್ರಪಂಚದಲ್ಲೇ ದಾಖಲಾಗಿರುವ ಪರಾಕ್ರಮದ ಯುದ್ಧ ಚಮ್ಕೌರ್ ನಲ್ಲಿ. ಈ ಯುದ್ಧದಲ್ಲಿ ನಲವತ್ತೇ ನಲವತ್ತು ಖಾಲ್ಸಾ ಯೋಧರು ಮೊಘಲರ ಭಾರಿ ಸಂಖ್ಯೆಯ ಸೈನ್ಯವನ್ನು (ಕೆಲವೊಂದು ದಾಖಲೆ ಪ್ರಕಾರ 10 ಲಕ್ಷದ ಸೈನ್ಯ ) ಎದುರಿಸಿ ಸಂಘರ್ಷ ನಡೆಸಿದ್ದರು. ಇಂತಹ ಶೌರ್ಯವಂತ ನಾಯಕನ ಶಕ್ತಿ, ಮಾನಸಿಕ ಸಧೃಡತೆಯ ಬಗ್ಗೆ ಚಿಂತನೆ ಮಾಡುತ್ತಾ ಹೋದರೆ ಧ್ಯಾನದಲ್ಲೇ ಮುಳುಗಿ ಹೋಗಬಹುದು. ಚಮ್ಕೌರ್ ಯುದ್ಧದ ಸಂದರ್ಭದಲ್ಲಿ ತಮ್ಮವರಿಂದ ಬೇರ್ಪಟ್ಟ ಗುರು ಗೋವಿಂದ ಸಿಂಗರ ಚಿಕ್ಕ ಮಕ್ಕಳು ಬಾಬಾ ಜೊರಾವರ್ ಸಿಂಗ್( 9 ವರ್ಷ ) ಹಾಗೂ ಬಾಬಾ ಫತೆ ಸಿಂಗ್( 6 ವರ್ಷ )ಅವರಿಂದ ಮೊಘಲರ ಮಾನವೀಯತೆಯ ಗೈರು ಹಾಜರಿಯಲ್ಲಾದ ಬಲಿದಾನವು ಹಾಗೂ ಇದರ ಆಘಾತದಿಂದಾದ ತಮ್ಮ ತಾಯಿಯ ಬಲಿದಾನವು ಇವರ ಧೈರ್ಯವನ್ನು ಮನೋಸ್ಥೈರ್ಯವನ್ನು ಒಂದಿನಿತೂ ಕಡಿಮೆ ಮಾಡಲಿಲ್ಲ. ಇಷ್ಟೆಲ್ಲಾ ಮನಕಲುಕುವ ಘಟನೆಗಳು ಸಂಭವಿಸಿದರೂ, ಯಾವ ದೇವರನ್ನೂ ದೂಷಿಸದೆ ತಮ್ಮ ಗುರುವಿನ ಸ್ಥಾನದ ಧರ್ಮ ರಕ್ಷಣೆಯ ಕಾಯಕವನ್ನು ಅಂತ್ಯಕಾಲದವರೆಗೂ ಮಾಡುತ್ತಾ ಹೋದರು.

ಇಷ್ಟೆಲ್ಲಾ ಬಲಿದಾನಗಳ ಕಥೆಗಳಲ್ಲಿ ಗುರು ಗೋವಿಂದ ಸಿಂಗರ ಚಿಕ್ಕ ಮಕ್ಕಳಾದ ಜೊರಾವರ್ ಸಿಂಗ್ ಮತ್ತು ಫತೆ ಸಿಂಗ್ ಅವರ ಬಲಿದಾನವು ವಿಶೇಷವಾಗಿ ನಮ್ಮ ಅಂತಃಕರಣವನ್ನು ಮುಟ್ಟುತ್ತದೆ. ಚಮ್ಕೌರ್ ಯುದ್ಧದ ಸಂದರ್ಭದಲ್ಲಿ ತಮ್ಮವರಿಂದ ಬೇರೆಯಾಗಿ ಔರಂಗಜೇಬನ ನವಾಬ ವಜೀರ್ ಖಾನ್ ನ ಸೆರೆಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಗುರು ಗೋವಿಂದ ಸಿಂಗರ ಮಕ್ಕಳು ಇವರೇ ಎಂಬುದು ಗೊತ್ತಾಗಿಬಿಟ್ಟಿರುತ್ತದೆ. ಆ ಪುಟ್ಟ ಮಕ್ಕಳನ್ನು ಕೊರೆಯುವ ಚಳಿಯಲ್ಲಿ ನೆಲದ ಮೇಲೆ ಮಲಗಿಸುತ್ತಿರುತ್ತಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಅದನ್ನು ಪ್ರವೇಶಿಸುತ್ತಿದ್ದಂತೆಯೇ ಅವರು ಜೋರಾಗಿ “ವಾಹೆ ಗುರೂಜಿ ದ ಖಾಲ್ಸಾ ವಾಹೆ ಗುರು ದಿ ಫತೆ” ಎಂದು ಘರ್ಜಿಸುತ್ತಾರೆ. ಅಲ್ಲಿನ ಆಸ್ಥಾನದ ಸಭಾಪತಿಗಳು ನವಾಬನಿಗೆ ತಲೆಬಾಗಿ ನಮಸ್ಕರಿಸುವಂತೆ ತಿಳಿಸುತ್ತಾರೆ. “ಎಂದಿಗೂ ಇಲ್ಲ. ನಮಗೆ ಕೇವಲ ದೇವರು ಮತ್ತು ಗುರುವಿಗೆ ಮಾತ್ರ ತಲೆಬಾಗಿ ನಮಸ್ಕರಿಸುವಂತೆ ಕಲಿಸಲಾಗಿದೆ, ನಾವು ನವಾಬನ ಮುಂದೆ ತಲೆ ಬಾಗುವುದಿಲ್ಲ” ಎಂದು ಬಾಬಾ ಜೊರಾವರ ಸಿಂಗ್ ನು ಸಭೆಯಲ್ಲೇ ನಿರ್ಭಯವಾಗಿ ನುಡಿಯುತ್ತಾನೆ. ಇದರಿಂದ ಗಾಬರಿಯಾದ ನವಾಬನು “ನಿಮ್ಮ ತಂದೆ, ಇಬ್ಬರು ಅಣ್ಣಂದಿರು ಅದಾಗಲೇ ಯುದ್ಧದಲ್ಲಿ ಅಸುನೀಗಿದ್ದಾರೆ. ಅವರ ವಿಧಿಲಿಖಿತ ಚೆನ್ನಾಗಿರಲಿಲ್ಲ. ಆದರೆ, ನಿಮ್ಮ ಅದೃಷ್ಟ ಚೆನ್ನಾಗಿದೆ. ನೀವು ಇಸ್ಲಾಂಗೆ ಮತಾಂತರವಾಗಿ ನಮ್ಮಲ್ಲೊಬ್ಬರಾಗಿ ಬಿಡಿ. ನಿಮಗೆ ಸಂಪತ್ತು, ಅಧಿಕಾರ, ಸಮ್ಮಾನಗಳನ್ನು ನೀಡಲಾಗುವುದು. ಸಮೃದ್ಧ ಜೀವನವು ನಿಮ್ಮದಾಗುವುದು. ಮೊಘಲ್ ದೊರೆಗಳೂ ನಿಮ್ಮ ಸತ್ಕಾರವನ್ನು ಮಾಡುವರು. ಆದರೆ ನೀವು ಇಸ್ಲಾಂ ಒಪ್ಪಿಕೊಳ್ಳದಿದ್ದರೆ ನಿಮ್ಮನ್ನು ಕಠೋರವಾಗಿ ನಡೆಸಿಕೊಂಡು, ಜೀವವನ್ನೇ ತೆಗೆಯಲಾಗುವುದು” ಎಂಬ ಬೆದರಿಕೆಯನ್ನು ಒಡ್ಡುತ್ತಾನೆ.
ಜೊರಾವರ ಸಿಂಗ್ ತನ್ನ ತಮ್ಮನೆಡೆಗೆ ತಿರುಗಿ, “ನಮ್ಮ ಬಲಿದಾನದ ಸಮಯ ಬಂದಿದೆ ಸಹೋದರ. ನೀನು ಏನು ಯೋಚನೆ ಮಾಡುತ್ತಿದ್ದೀಯಾ ಪ್ರತಿಯಾಗಿ ಹೇಳುವುದರ ಬಗ್ಗೆ” ಎನ್ನುವನು. ಆಗ ಫತೆ ಸಿಂಗನು “ಪ್ರೀತಿಯ ಸಹೋದರ, ನಮ್ಮ ಅಜ್ಜ ತೇಗ್ ಬಹದ್ದೂರರು ಧರ್ಮ ರಕ್ಷಣೆಗಾಗಿ ತಮ್ಮ ತಲೆಯನ್ನೇ ಕತ್ತರಿಸಲು ಒಪ್ಪಿಕೊಂಡು ಬಲಿದಾನ ನೀಡಿದರು. ನಾವು ಅವರ ಧರ್ಮದ ಮಾರ್ಗವನ್ನೇ ಅನುಸರಿಸಬೇಕಿದೆ. ನಾವೇಕೆ ಸಾವಿಗೆ ಹೆದರಬೇಕು? ನಮ್ಮ ಪೂರ್ವಜರ ಶ್ರೇಷ್ಠತೆ, ಪರಂಪರೆ, ಸಾಹಸಗಾಥೆಯೇ ನಮ್ಮ ಶಕ್ತಿ. ನಾವು ನಮ್ಮ ಗುರುವಿನ ಸಿಂಹಗಳು. ನಾವು ನಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳುವುದಕ್ಕಿಂತ ಧರ್ಮ ರಕ್ಷಣೆ ಮಾಡುವುದೇ ಉತ್ತಮವಾದುದು” ಎಂದು ಹೇಳುವುದರ ಮೂಲಕ ತನ್ನ ಕಿರಿಯ ವಯಸ್ಸಿನ ಅಗಾಧ ಪ್ರಬುದ್ಧತನವನ್ನು ಪ್ರದರ್ಶಿಸಿದನು.
ಜೊರಾವರ ಸಿಂಗನು ನವಾಬನಿಗೆ “ನೀವು ನಮ್ಮ ತಂದೆಯನ್ನು ಯುದ್ಧದಲ್ಲಿ ಕೊಲ್ಲಲಾಗಿದೆ ಎಂದು ಹೇಳುತ್ತಿದ್ದೀರಿ. ಆದರೆ ನಮಗೆ ಗೊತ್ತಿದೆ ಅದು ಶುದ್ಧ ಸುಳ್ಳು. ಅವರು ಇನ್ನೂ ಬದುಕಿದ್ದಾರೆ ಮತ್ತು ಈ ಸಮಾಜಕ್ಕಾಗಿ ಇನ್ನೂ ಹಲವು ಪುಣ್ಯ ಕಾರ್ಯಗಳನ್ನು ಮಾಡಲಿದ್ದಾರೆ. ನಿಮ್ಮ ಸಾಮ್ರಾಜ್ಯವನ್ನೇ ಅಲುಗಾಡಿಸಲು ಅವರು ಬಂದೇ ಬರುತ್ತಾರೆ. ನಾವು ನಿಮ್ಮ ಬೇಡಿಕೆಗಳನ್ನು, ಆಮಿಷಗಳನ್ನು ತಿರಸ್ಕರಿಸುತ್ತೇವೆ. ನಮ್ಮ ಪರಂಪರೆಯು ನಮಗೆ ನಮ್ಮ ಜೀವವನ್ನು ತ್ಯಾಗ ಮಾಡಲು ಕಲಿಸಿದೆಯೇ ಹೊರತು ಧರ್ಮವನ್ನಲ್ಲ. ನೀವು ನಮಗೆ ಎಷ್ಟು ಕಷ್ಟವನ್ನು ಕೊಡಬಹುದೊ ಅಷ್ಟೂ ಕಷ್ಟವನ್ನು ಕೊಡಿ ಎಂದು ಆಹ್ವಾನಿಸುತ್ತೇವೆ” ಎಂದು ಹೇಳುವುದರ ಮೂಲಕ ತನ್ನ ತಂದೆ ಬದುಕಿರುವ ಆತ್ಮವಿಶ್ವಾಸವನ್ನು ತೋರ್ಪಡಿಸಿ, ಸುಳ್ಳು ಸಾವಿನ ಸುದ್ದಿ ಹೇಳಿ ತಮ್ಮನ್ನು ಭಯಪಡಿಸಲು ಮಾಡಿದ್ದ ಷಡ್ಯಂತರವನ್ನು ಭೇದಿಸುತ್ತಾನೆ ಹಾಗೂ ತಮ್ಮ ಪರಂಪರೆಯ ಆತ್ಮಗೌರವದ ಪಾಠವನ್ನು ಉಚ್ಛರಿಸುತ್ತಾನೆ.
ಇವರ ಅಪ್ರತಿಮ ಶೌರ್ಯದ ನುಡಿಗಳಿಗೆ ದಂಗಾದ ನವಾಬನು ಸಮಯಾವಕಾಶವನ್ನು ನೀಡಿ, ಮತ್ತೆ ಈ ಬೇಡಿಕೆಗಳ ಬಗ್ಗೆ ಯೋಚಿಸಲು ಆಗ್ರಹಿಸುತ್ತಾನೆ. ಹೀಗೆ ಮತ್ತೆ ಮತ್ತೆ ಮೂರು ದಿನಗಳ ಕಾಲ ವಿಚಾರಣೆ ಮಾಡಿ ಸಮಯಾವಕಾಶ ನೀಡಿ, ಕೊನೆಗೆ ನವಾಬನು “ನನಗೆ ಈಗಲೂ ನಿಮ್ಮಂತಹ ತೇಜಸ್ವಿ ಬಾಲಕರನ್ನು ಕೊಲ್ಲಲು ಇಷ್ಟವಿಲ್ಲ” ಎಂದು ಹೇಳಿ, “ನಿಮಗೆ ಈಗ ನಾನು ಸ್ವಾತಂತ್ರ್ಯ ಕೊಟ್ಟರೆ ಏನು ಮಾಡುವಿರಿ” ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಇಬ್ಬರೂ ಮಕ್ಕಳು “ಬಲಿಷ್ಠ ಸೇನೆಯನ್ನು ಕಟ್ಟಿ ನಿಮ್ಮ ಮೇಲೆ ಆಕ್ರಮಣ ಮಾಡಿ, ನಿಮ್ಮನ್ನು ನಾಶ ಮಾಡುವ ಮೂಲಕ ನಮ್ಮ ಜನರನ್ನು ರಕ್ಷಿಸುತ್ತೇವೆ” ಎನ್ನುವರು. “ಒಂದು ವೇಳೆ ನೀವು ಸೋತು ಹೋದರೆ ಆಗ ಏನು ಮಾಡುವಿರಿ”, ನವಾಬನ ಪ್ರಶ್ನೆ. “ಮತ್ತೊಮ್ಮೆ ಸೈನ್ಯ ಕಟ್ಟುತ್ತೇವೆ ಮತ್ತೊಮ್ಮೆ ಯುದ್ಧ ಮಾಡುತ್ತೇವೆ, ನಿಮ್ಮನ್ನೆಲ್ಲಾ ಕೊಲ್ಲುತ್ತೇವೆ ಅಥವಾ ನಾವೇ ಬಲಿದಾನವಾಗುತ್ತೇವೆ”, ಮಕ್ಕಳಿಬ್ಬರ ಉತ್ತರ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಸಾಹಸಿಗರಾಗಿರುವ ಈ ಮಕ್ಕಳು ದೊಡ್ಡವರಾದ ಮೇಲೆ ಖಂಡಿತ ನಮಗೆಲ್ಲ ದೊಡ್ಡ ದೊಡ್ಡ ವಿಪತ್ತುಗಳನ್ನು ತಂದೊಡ್ಡುತ್ತಾರೆ ಎಂದು ಮನವರಿಕೆ ಮಾಡಿಕೊಂಡ ನವಾಬನು ಮಾನವೀಯತೆಯನ್ನೇ ಮರೆತು, ಆ ಮಕ್ಕಳ ಸುತ್ತ ಇಟ್ಟಿಗೆಯ ಗೋಡೆ ಕಟ್ಟಿ ಜೀವಂತವಾಗಿ ಸಮಾಧಿ ಮಾಡುವಂತೆ ಆದೇಶಿಸುತ್ತಾನೆ.

ಮಕ್ಕಳ ದೇಹದ ಗಾತ್ರಕ್ಕೆ ಸರಿ ಹೊಂದುವಂತೆ ಸುತ್ತಲೂ ಸ್ವಲ್ಪವೂ ಅಂತರವಿಲ್ಲದಂತೆ ಗೋಡೆಗಳ ಪುಟ್ಟ ಕೋಟೆಯನ್ನೇ ನಿರ್ಮಿಸುತ್ತಾರೆ. ಪ್ರತಿ ಹಂತದಲ್ಲೂ ಇಟ್ಟಿಗೆ ಕಟ್ಟುತ್ತಿರುವಾಗ ಅಲ್ಲಿದ್ದ ಹಲವರು ಇಸ್ಲಾಂಗೆ ಮತಾಂತರವಾಗಲು ಒಪ್ಪಿಕೊಳ್ಳುವಂತೆ ಪ್ರಚೋದಿಸುತ್ತಾರೆ. ಅವರ ಭುಜಗಳ ಮಟ್ಟಿಗೆ ಗೋಡೆ ಕಟ್ಟಿ ನಿಲ್ಲಿಸಿದಾಗ, ಮತ್ತೊಮ್ಮೆ ಸ್ವತಃ ನವಾಬನೆ ಬಂದು ಇಸ್ಲಾಂ ಒಪ್ಪಿಕೊಂಡು ಜೀವ ಉಳಿಸಿಕೊಳ್ಳಿ ಎನ್ನುತ್ತಾನೆ. ಇಂತಹ ಯಾವುದೇ ಕೊನೆಯ ಜೀವ ಉಳಿಸಿಕೊಳ್ಳುವ ಆಮಿಷದ ಮಾತುಗಳ ಪ್ರಭಾವಕ್ಕೊಳಗಾಗದೆ ತಮ್ಮ ಸಂಕಲ್ಪವನ್ನು ಪೂರೈಸುವ ಮೂಲಕ ಅವರ ಪೂರ್ವಜರ ಘನತೆಯನ್ನು ಮತ್ತಷ್ಟು ಎತ್ತರಕ್ಕೇರಿಸುವಲ್ಲಿ ಯಶಸ್ವಿಯಾಗುತ್ತಾರೆ.
ಚಿಕ್ಕ ವಯಸ್ಸಿನಲಿಯೇ ಅಷ್ಟೊಂದು ಪ್ರಬುದ್ಧತನವನ್ನು ಹೊಂದಿದ್ದ ಗುರು ಗೋವಿಂದ ಸಿಂಗರ ಮಕ್ಕಳು ದುರಾಚಾರಿ ಮೊಘಲರ ಬಲಾತ್ಕಾರದ ಮತಾಂತರದಿಂದ ಸಿಖ್ಖರು, ಹಿಂದೂಗಳನ್ನು ರಕ್ಷಿಸುವಲ್ಲಿ ಹೇಗೆ ಅವರ ಪೂರ್ವಜರು ತಮ್ಮ ಬದುಕನ್ನು ಸಮರ್ಪಿಸಿದರೊ ಹಾಗೆ ಅವರ ದಾರಿಯಲ್ಲಿ ಸಾಗಿ ಅಮರರಾದರು. ಒಂದು ವೇಳೆ ಅಂದು ಬಲಾತ್ಕಾರದ ಮತಾಂತರವು ತಾಂಡವವಾಡುತ್ತಿದ್ದ ಕಾಲದಲ್ಲಿ ದೇಶ-ಧರ್ಮದ ರಕ್ಷಣೆಗಾಗಿ ಕ್ರೌರ್ಯದಿಂದ ಆಗುತ್ತಿದ್ದ ಬಲಿದಾನವನ್ನು ಸ್ವೀಕರಿಸದೆ ಹೋಗಿದ್ದರೆ, ಇಡೀ ಉತ್ತರ ಭಾರತವೇ ಮೊಘಲರ ಮತಾಂಧತೆಯ ಪರಿಣಾಮ ತಮ್ಮ ಜೀವಕ್ಕಿಂತಲೂ ಅಮೂಲ್ಯವಾದ ಧರ್ಮ, ಸಂಸ್ಕೃತಿ, ನಾಗರಿಕತೆಯ ವಿನಾಶದ ದುರಂತ ಇತಿಹಾಸಕ್ಕೆ ಸಾಕ್ಷಿಯಾಗಬೇಕಿತ್ತು. ಸ್ವಾಮಿ ವಿವೇಕಾನಂದರು ಹೇಳಿದ್ದಾರೆ “ಯಾರು ಈ ಪ್ರಪಂಚದಲ್ಲಿ ಉತ್ತಮರೊ ಹಾಗೂ ಧೈರ್ಯಶಾಲಿಗಳೊ ಅವರು ತಮ್ಮ ಬದಕನ್ನು ಸಮಾಜಕ್ಕಾಗಿ ಸಮರ್ಪಿಸಬೇಕು” ಎಂದು. ಹೀಗೆ ಸಮಾಜಕ್ಕಾಗಿ ಬದುಕಿದ ಸಿಖ್ ಪರಂಪರೆಯ ಎಲ್ಲಾ ಗುರುಗಳಿಗೆ ಸಿಖ್ ಹಾಗೂ ಹಿಂದೂ ಧರ್ಮೀಯರು ಎಂದಿಂದಿಗೂ ಕೃತಜ್ಞವಾಗಿರಬೇಕು ಮತ್ತು ಅಭಿಮಾನವನ್ನು ಹೊಂದಿರಬೇಕು. ಗುರು ಗೋವಿಂದ ಸಿಂಗರ ಭೋದನೆಯಂತೆ ‘ಶಾಂತಿಯಲ್ಲಿ ಸಂತರು ಸಂಘರ್ಷದಲ್ಲಿ ಯೋಧರೂ’ ಆಗಬೇಕೆಂಬುದು ಯಾವಾಗಲೂ ಆದರ್ಶಪ್ರಾಯವಾಗಿರುವುದು. ಕೊನೆಯಲ್ಲಿ ನಾವೆಂದೂ ಮರೆಯಬಾರದ ಒಂದು ಮಾತು “ಯಾವ ರಾಷ್ಟ್ರ ಹುತಾತ್ಮರನ್ನು ಸ್ಮರಿಸಿಕೊಳ್ಳುವುದಿಲ್ಲವೊ ಆ ರಾಷ್ಟ್ರಕ್ಕೆ ಉದ್ಧಾರವಿಲ್ಲ”.
