ವಿಶ್ವದ ಯಾವುದೇ ಮೂಲೆಯಲ್ಲಿ ಭಾರತೀಯರು ಸಂಕಷ್ಟಕ್ಕೆ ಸಿಲುಕಲಿ, ಯಾರಿಗೇ ತೊಂದರೆ ಆಗಲಿ, ಕೇವಲ ಒಂದೇ ಒಂದು ಟ್ವೀಟ್ ಮಾಡಿದರೂ ಸಾಕು. ಸುಷ್ಮಾ ಸ್ವರಾಜ್ ಎಂಬ ವಿದೇಶಾಂಗ ಸಚಿವೆಯು ಕ್ಷಿಪ್ರವಾಗಿ ನೆರವಿಗೆ ಧಾವಿಸುತ್ತಿದ್ದರು. ಕೂಡಲೇ ಆ ದೇಶದಲ್ಲಿರುವ ಭಾರತೀಯರ ರಾಯಭಾರಿಗಳಿಗೆ ಸೂಚಿಸಿ ಭಾರತೀಯರನ್ನು ರಕ್ಷಿಸುತ್ತಿದ್ದರು. ಅಷ್ಟರಮಟ್ಟಿಗೆ ಸುಷ್ಮಾ ಸ್ವರಾಜ್ ಜನಸ್ನೇಹಿಯಾಗಿದ್ದರು.
ಹಾಗಾಗಿಯೇ ಅವರು ವಿದೇಶಾಂಗ ಸಚಿವೆಯಾಗಿ ಮಾಡಿದ ಸಾಧನೆಗಳು ಅವರನ್ನು ಜನ ಎಂದಿಗೂ ಸ್ಮರಿಸುವಂತೆ ಮಾಡುತ್ತವೆ. ಹೌದು, ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವೆಯಾಗಿದ್ದಾಗ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸುಮಾರು 90 ಸಾವಿರಕ್ಕೂ ಅಧಿಕ ಜನರನ್ನು ರಕ್ಷಿಸಿದ ಖ್ಯಾತಿ ಅವರಿಗೇ ಸಲ್ಲುತ್ತದೆ. ಯಾರು ಎಷ್ಟೊತ್ತಿನಲ್ಲಿ ಬೇಕಾದರೂ ಸುಷ್ಮಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಿಸಿದರೆ ಅವರನ್ನು ರಕ್ಷಿಸುತ್ತಿದ್ದರು ಎಂಬುದಕ್ಕೇ ಈ ಸಂಖ್ಯೆಯೇ ಸಾಕ್ಷಿಯಾಗಿದೆ.
ಅಷ್ಟೇ ಅಲ್ಲ, ವಿದೇಶಾಂಗ ಸಚಿವೆಯಾಗಿದ್ದ ಅವರು ಭಾರತದಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ತೆರೆಯುವಲ್ಲಿ ಮಹತ್ತರ ಪಾತ್ರ ವಹಿಸಿದರು. ಸ್ವಾತಂತ್ರ್ಯ ಬಂದು ದೇಶಕ್ಕೆ ಏಳು ದಶಕವಾಗುತ್ತಿದ್ದರೂ ದೇಶಾದ್ಯಂತ ಇದ್ದುದು 77 ಪಾಸ್ ಪೋರ್ಟ್ ಸೇವಾ ಕೇಂದ್ರಗಳು. ಆದರೆ ಸುಷ್ಮಾ ಸ್ವರಾಜ್ ಅವರು ಕೇವಲ ಐದೇ ವರ್ಷದಲ್ಲಿ ಸೇವಾ ಕೇಂದ್ರಗಳ ಸಂಖ್ಯೆ 227ಕ್ಕೆ ಏರಿಸಿದರು. ಪಾಸ್ ಪೋರ್ಟ್, ವೀಸಾ ಪಡೆಯುವ ನಿಯಮ ಸಡಿಲಗೊಳಿಸಿದರು. ಇನ್ನು ವಿಶ್ವ ಸಂಸ್ಥೆಯಲ್ಲಿ ಮಾತನಾಡಿದ್ದು, ವಿಶ್ವಸಂಸ್ಥೆಯ 192 ಸದಸ್ಯ ರಾಷ್ಟ್ರಗಳಲ್ಲಿ 186 ದೇಶಗಳೊಡನೆ ಉತ್ತಮ ಸಂಬಂಧ ಹೊಂದಿದ್ದು ಸುಷ್ಮಾರ ಗಣನೀಯ ಸಾಧನೆಯಾಗಿದೆ.