
ನಾಗಪುರದಲ್ಲಿನ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿವಿಯಲ್ಲಿ ಅಂಬೇಡ್ಕರ್ ಜಯಂತಿಯ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳಾದ ಎನ್.ಎ ಬೊಬ್ಡೆಯವರು ಮಹತ್ವದ ವಿಷಯವೊಂದರ ಕುರಿತು ಬೆಳಕು ಚೆಲ್ಲಿದ್ದಾರೆ. ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿಸ ಬೇಕೆಂಬ ಪ್ರಸ್ತಾವನೆಯನ್ನು ಅಂಬೇಡ್ಕರ್ ಸಿದ್ಧಪಡಿಸಿದ್ದರು ಎಂಬುದೇ ಆ ಸಂಗತಿ.
ಆಗ ದ್ರವಿಡ ಚಳುವಳಿಯಿಂದಾಗಿ ವಿಶೇಷವಾಗಿ ತಮಿಳುನಾಡಿನಲ್ಲಿ ಹಿಂದಿ ವಿರೋಧ ತೀವ್ರವಾಗಿದ್ದ ಸಮಯ. ಇದಕ್ಕೆ ಪರಿಹಾರ ಮಾತ್ರವಲ್ಲ, ತನ್ನ ದಾಸ್ಯದ ನೊಗವನ್ನು ಕಳಚಿಕೊಳ್ಳುತ್ತಿರುವ ಹಂತದಲ್ಲಿ ಒಂದು ಸ್ವಾಭಿಮಾನಿ ಭಾರತ ನಿರ್ಮಾಣಕ್ಕೆ ತನ್ನದೆನ್ನುವ ಎಲ್ಲ ಪುರಾತನ ಸ್ಮೃತಿಗಳನ್ನು ಜಾಗೃತಿಗೊಳಿಸಿಕೊಳ್ಳುವ ಅವಶ್ಯಕತೆಯೂ ಇತ್ತು. ಇದಕ್ಕೆ ಸಂಸ್ಕೃತವನ್ನು ದೇಶದ ಆಡಳಿತ ಭಾಷೆಯನ್ನಾಗಿ ಮಾಡುವುದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ ಎಂದು ಅಂಬೇಡ್ಕರ್ ಭಾವಿಸಿದ್ದರು.
ಸಂಸ್ಕೃತ ಈ ನೆಲದ ಜ್ಞಾನ ಭಾಷೆ, ಇಲ್ಲಿ ಹುಟ್ಟಿ ವಿಶ್ವಾದ್ಯಂತ ವಿವಿಧ ಸ್ವರೂಪಗಳಾಗಿ ಹರಡಿದ ಅತಿ ಪ್ರಾಚೀನ ಭಾಷೆ. ಈ ಹಿನ್ನೆಲೆಯಲ್ಲಿ ಸಂಸ್ಕೃತ ರಾಷ್ಟ್ರಭಾಷೆಯಾಗುವುದು ಅತ್ಯಂತ ಸೂಕ್ತ. ಅಂಬೇಡ್ಕರ್ ಅವರು ಸ್ವತಃ ಸಂಸ್ಕೃತ ಅಭ್ಯಾಸ ಮಾಡಿದ್ದರು, ಅದರಲ್ಲಿನ ಮಹತ್ವದ ಸಾಹಿತ್ಯವನ್ನು ಅಧ್ಯಯನ ಮಾಡಿದ್ದರು ಎಂಬುದನ್ನು ಅವರ ಜೀವನ ಚರಿತ್ರೆಯನ್ನು ಅಭ್ಯಸಿಸಿದ ಎಲ್ಲರೂ ತಿಳಿದ ಸಂಗತಿಯೇ ಆಗಿದೆ. ಆದರೆ ಅಂಬೇಡ್ಕರ್ ಕುರಿತ ಅನೇಕ ಸಂಗತಿಗಳನ್ನು ಅವರ ಹೆಸರಿನ ಬಲದಲ್ಲಿ ರಾಜಕೀಯ ನಡೆಸಿಕೊಂಡು, ಸಂಘಟನೆಗಳನ್ನು ಕಟ್ಟಿಕೊಂಡು ಹೋರಾಟ ಮಾಡುತ್ತಿದ್ದವರು ಮರೆಮಾಚಿದ್ದರು.
ಸಂಸ್ಕೃತವನ್ನು ದಲಿತರಿಂದ ಮುಚ್ಚಿಡಲಾಗಿತ್ತು, ಅದು ಬ್ರಾಹ್ಮಣರ ಭಾಷೆ ಮಾತ್ರ ಎಂಬುದೆಲ್ಲ ಈಗ ಸುಳ್ಳಿನ ಕಂತೆ ಎಂಬುದು ಸ್ಪಷ್ಟವಾಗಿದೆ. ಸಂಸ್ಕೃತ ಒಂದು ಕಾಲದಲ್ಲಿ ಯಾವುದೇ ಭೇದವಿಲ್ಲದೇ ಸಕಲ ಜನಸಾಮಾನ್ಯರಿಗೂ ಎಟುಕುವ ಭಾಷೆಯಾಗಿತ್ತು. ಭಾರತದಲ್ಲಿ ಅನೇಕ ಭಾಷೆಗಳಿದ್ದರೂ ʼಸಂಸ್ಕೃತಕ್ಕೆ ವಿರೋಧʼ ಎಂಬುದು ಐರೋಪ್ಯ ವಿಚಾರಧಾರೆಯ ಬಳುವಳಿ. ಸಂಸ್ಕೃತವನ್ನು ಕೆಲ ಜಾತಿಯ ಜನರಿಗೆ ನಿಷೇಧಿಸಲಾಗಿತ್ತು ಎಂಬುದು ಸಹ ಅದೇ ಒಡೆದಾಳುವ ನೀತಿಯ ವಾದ ಮಾತ್ರ. ನಿಜಕ್ಕೂ ಹೇಳ ಬೇಕೆಂದರೆ ಜ್ಞಾನವನ್ನು ಭಾರತದಲ್ಲಿ ಯಾರಿಗೂ ನಿರಾಕರಿಸುವ ಪರಂಪರೆಯೇ ಇರಲಿಲ್ಲ. ಕೇವಲ ವಿದೇಶಿ ಆಕ್ರಮಣಗಳ ಫಲಶ್ರುತಿಯಾಗಿ ಭಾರತೀಯ ಸಮಾಜದಲ್ಲಿ ಬೆಳೆದ, ಬೆಳೆಸಿದ ಭೇದಭಾವದ ವಿಷ ಬೀಜಗಳು ಜಾತಿಜಾತಿಗಳ ನಡುವೆ ಕಂದರವನ್ನು ಸೃಷ್ಟಿಸಿ ಬಿಟ್ಟಿದ್ದವು ಮತ್ತು ಇದರ ಪರಿಣಾಮವಾಗಿ ನಮ್ಮಲ್ಲಿ ಏಕತೆಯೇ ಇಲ್ಲ ಎಂದು ಮೇಲ್ನೋಟಕ್ಕೆ ಸಿದ್ಧಗೊಳ್ಳುತ್ತಿತ್ತು.
ದೇಶವನ್ನು ಏಕಸೂತ್ರದಲ್ಲಿ ಬೆಸೆಯಲು ಸಂಸ್ಕೃತ ಅತ್ಯಂತ ಸೂಕ್ತ ಉಪಕರಣವಾಗಿದೆ. ಸುಪ್ರಿಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳೇ ಈ ವಿಷಯವನ್ನು ಉಲ್ಲೇಖಿಸಿರುವುದರಿಂದ ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿಸುವ ಚರ್ಚೆ ಕೈಗೆತ್ತಿಕೊಳ್ಳಲು ಇದು ಸಕಾಲ. ಭಾಷಾವಾರು ರಾಜ್ಯ ವಿಂಗಡಣೆಯ ದಿನಗಳಿಂದ ಬೆಳೆಯುತ್ತಿರುವ ದೇಶದ ಹಿತಕ್ಕೆ ಪೂರಕವಲ್ಲದ ಅತಿಯಾದ ಪ್ರಾದೇಶಿಕ ವಾದವನ್ನು ಇಲ್ಲವಾಗಿಸಲು ಎಲ್ಲರಿಗೂ ಒಪ್ಪಿತವಾಗುವಂತೆ ಸಂಸ್ಕೃತವನ್ನು ಆಡಳಿತ ಭಾಷೆಯನ್ನಾಗಿಸುವುದು ಒಳಿತು.
ಮೊದಲಿಗೆ ಸಂಸ್ಕೃತ ಮೃತಭಾಷೆಯೆಂಬ ಭಾವನೆ ಇಲ್ಲವಾಗಿಸಬೇಕು. ಎರಡನೆಯದಾಗಿ ಅದು ಜಾತಿಯೊಂದರ ಬಾಷೆ ಎನ್ನುವ ಭಾವನೆಯನ್ನೂ ತೊಡೆದು ಹಾಕಬೇಕಿದೆ. ಹೇಗೆ ಗಂಗೆ, ಗೋವು, ವೇದಗಳು, ಪುರಾಣಗಳು, ರಾಮಾಯಣಾದಿ ಇತಿಹಾಸದ ಕುರಿತು ಶ್ರದ್ಧೆಯ ಬಾವನೆಗಳು ದೇಶಾದ್ಯಂತ ಹರಡಿದೆಯೋ ಅದೇ ರೀತಿ ಸಂಸ್ಕೃತದ ಕುರಿತು ಇದೆ. ಭಾರತದ ಎಲ್ಲ ಭಾಷೆಗಳ ಜನನಿಯೂ ಸಂಸ್ಕೃತ. ವಿಶ್ವದ ಅನೇಕ ಪ್ರಾಚೀನ ಭಾಷೆಗಳ ಮೇಲೆಯೂ ಇದರ ಪ್ರಭಾವ ಅಪಾರ. ಇದು ಜ್ಞಾನದ ಭಾಷೆ, ನಮ್ಮ ಪುರಾತನ, ಪ್ರಾಚೀನ ಕಲೆ ಹಾಗೂ ವಿದ್ಯೆಯ ಸಂಗ್ರಹವೇ ಇದರಲ್ಲಿದೆ.
ಬರೇ ಪ್ರಾಚೀನ ಸಂಗತಿಗಳಿಗಾಗಿಯೇ ಸಂಸ್ಕೃತವನ್ನು ಮತ್ತೊಮ್ಮೆ ಪುನರುಜ್ಜೀವಗೊಳಿಸಬೇಕೆಂದು ವಾದಿಸುತ್ತಿಲ್ಲ. ಅನೇಕ ಭಾಷಾ ಪ್ರವೀಣರು, ಪ್ರೋಗ್ರಾಮಿಂಗ್ ತಜ್ಞರ ಪ್ರಕಾರ ಸಂಸ್ಕೃತ ಕಂಪೂಟರ್ ನ ಬಳಕೆಗೆ ಅತ್ಯಂತ ಸೂಕ್ತ ಬಾಷೆ. ಇದು ಅತ್ಯಂತ ಆಧುನಿಕ ಹಾಗೂ ವೈಜ್ಞಾನಿಕ ಭಾಷೆಯೂ ಹೌದು. ಏಕೆಂದರೆ ಸಂಸ್ಕೃತ ರೂಪುಗೊಂಡಿರುವುದೇ ಸೂತ್ರಾಧಾರಿತವಾಗಿ. ಹೌದು ಪಾಣಿನಿಯ ವ್ಯಾಕರಣ ಸೂತ್ರಗಳು ಸಂಸ್ಕೃತ ಭಾಷೆಗೆ ಸೂಕ್ತ ಚೌಕಟ್ಟನ್ನು ಒದಗಿಸಿವೆ. ಪಕ್ಕಾ ಲೆಕ್ಕಾಚಾರ ಮತ್ತು ಕರಾರುವಕ್ಕಾದ ವಿವರಣೆ ಇದರಿಂದ ಸಾಧ್ಯ. ವಿಜ್ಞಾನ ವಿಷಯಗಳ ಯಾವುದೇ ವಿವರಣೆಗೂ ಸಂಸ್ಕೃತವನ್ನು ಸುಲಭವಾಗಿ ಬಳಸಿಕೊಳ್ಳಬಹುದು.
ಎಲ್ಲ ಭಾರತೀಯ ಭಾಷೆಗಳ ವ್ಯಾಕರಣವೂ ಸಂಸ್ಕೃತ ಮೂಲದ್ದೇ. ಹೀಗಾಗಿ ಎಲ್ಲ ಭಾರತೀಯರಿಗೂ ಸುಲಭಗ್ರಾಹಿ. ಸಂಸ್ಕೃತವನ್ನು ಎಲ್ಲ ಭಾರತೀಯ ಲಿಪಿಗಳಲ್ಲೂ ಸುಲಭವಾಗಿ ಬರೆಯಲು ಸಾಧ್ಯ. ಅದಕ್ಕೂ ಹೆಚ್ಚಾಗಿ ಎಲ್ಲ ಭಾರತೀಯ ಭಾಷೆಗಳ ಪದಭಂಡಾರಗಳು ಸಂಸ್ಕೃತದ ಕೊಡುಗೆಯಿಂದ ತುಂಬಿವೆ.
ಚೀನಾ, ಜಪಾನ್, ರಷ್ಯಾ, ಜರ್ಮನ್, ಫ್ರಾನ್ಸ್ ಇತ್ಯಾದಿ ದೇಶಗಳು ಇಂಗ್ಲಿಷ್ ನ ಅವಲಂಬನೆಯಿಲ್ಲದೇ ತಮ್ಮ ದೇಶ ಭಾಷೆಗಳಲ್ಲಿಯೇ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿವೆ. ಆದರೆ ಭಾರತ ಮಾತ್ರ ತನ್ನದೇ ಅತ್ಯಮೂಲ್ಯ ಭಾಷೆಯನ್ನು ಮರೆತು ಇಂಗ್ಲಿಷ್ ನ ಮೊರೆ ಹೋಗಿದೆ. ದೇಶದ ಸ್ವಾಭಿಮಾನ ಜಾಗೃತಿಯ ದೃಷ್ಟಿಯಿಂದ ಭಾರತವು ಇನ್ನಾದರೂ ಸಂಸ್ಕೃತವನ್ನು ದೇಶಭಾಷೆಯನ್ನಾಗಿಸಬೇಕು.
ಸಂಸ್ಕೃತವನ್ನು ಆಡಳಿತ ಭಾಷೆಯನ್ನಾಗಿಸುವ ಅಂಬೇಡ್ಕರ್ ಅವರ ಪ್ರಸ್ತಾವ ಸೂಕ್ತ ಬೆಂಬಲ ದೊರೆಯದೇ ಮೂಲೆಗೆ ತಳ್ಳಲ್ಪಟ್ಟಿತು. ಆದರೆ ಇದೀಗ ಮತ್ತೊಮ್ಮೆ ಆ ಪ್ರಸ್ತಾವನೆಗೆ ಜೀವ ತುಂಬಬೇಕಿದೆ. ಭಾರತವು ಭಾರತವಾಗಿಯೇ ಉಳಿಬೇಕೆಂದರೆ ಇದು ಅನಿವಾರ್ಯ.