
ಕೆಲವರ್ಷಗಳ ಹಿಂದೆ ನಾಗರಹೊಳೆ ಅಭಯಾರಣ್ಯದ ಅಧಿಕಾರಿಯೊಬ್ಬರು ನಡು ಮಧ್ಯಾನ್ಹ ಸೋಜಿಗವೊಂದನ್ನು ತೋರಿಸುವೆ ಎಂದು ಕರೆದುಕೊಂಡು ಹೋದರು. ತಿತಿಮತಿ ಎಂಬ ಪುಟ್ಟ ಪೇಟೆಯ ಕಾವಲು ಗೋಪುರದಿಂದ ಚೆನ್ನಂಗಿ ಕಾಡಿನ ದಾರಿಯತ್ತ ಹೊರಟ ಜೀಪು ಕಾಡಿನ ರಸ್ತೆಯೊಳಗೆ ತಿರುಗಿತು. ಅಧಿಕಾರಿ ಇದು ದೇವಮಚ್ಚಿ ಅರಣ್ಯ ಎಂದರು. ದೇವಮಚ್ಚಿ ಕಾಡಿನ ಹತ್ತಾರು ಕಿ.ಮೀ ಉದ್ದಕ್ಕೂ ಅಲ್ಲಲ್ಲಿ ಮರದ ಕೆಳಗೆ ಕಲ್ಲುಗಳು, ಅವುಗಳಿಗೆ ಮೆತ್ತಿದ ಕುಂಕುಮ, ಕೆಲವು ಕಡೆ ಶೂಲಗಳಿದ್ದವು. ಅಧಿಕಾರಿ ಇವೆಲ್ಲವೂ ಕಾಡಿನ ದೇವರು ಎಂದರು. ಜೀಪು ನಿಲ್ಲಿಸಿ ಎರಡು ಕಿ.ಮೀ ನಡೆಸಿಕೊಂಡು ಬಿದಿರುಮೇಳೆಯೊಂದರ ಬಳಿ ಸಾಗಿ ನುಗ್ಗಿ ಎಂದರು. ಹೊರಗಿನಿಂದ ದಟ್ಟವಾಗಿ ಬೆಳೆದ ಬಿದಿರು ಪೊದೆ. ಒಳಗೆ ಇಬ್ಬರು ಮಲಗುವಂಥಾ ಬಯಲು! ಅದರೊಳಗೆ ಕೂರಿಸಿದ ಅಧಿಕಾರಿ ಏನನ್ನೋ ಕಾಯಲಾರಂಭಿಸಿದರು. ಮುಕ್ಕಾಲು ಗಂಟೆಯ ನಂತರ ಪ್ರಾಣಿಗಳು ಒಂದೊಂದಾಗಿ ಬರತೊಡಗಿದವು. ಜಿಂಕೆ, ಕಡವೆ, ಕಾಟಿ, ಕಾಡುಹಂದಿಗಳೂ ಬಂದವು. ವಿಚಿತ್ರವೆಂದರೆ ಅಲ್ಲೇನೂ ಹೊಳೆ-ಕೊಳಗಳಿರಲಿಲ್ಲ. ಬಂದ ಎಲ್ಲಾ ಪ್ರಾಣಿಗಳು ಏನನ್ನೋ ಮೇಯುತ್ತಿದ್ದಂತೆ ಕಾಣಿಸುತ್ತಿತ್ತು. ದೂರದ ಚೆನ್ನಂಗಿ ಕಾಡಿನಲ್ಲಿ ಸೂರ್ಯ ಇಳಿಯುತ್ತಿದ್ದಂತೆ ಬಿದಿರು ಮೇಳೆಯಿಂದ ಹೊರಗೆ ಕರೆದ ಅಧಿಕಾರಿ, ಪ್ರಾಣಿಗಳು ಮೇಯುತ್ತಿದ್ದ ಜಾಗಕ್ಕೆ ಕರೆದೊಯ್ದರು. ಅಷ್ಟಗಲ ನೆಲವನ್ನು ಪ್ರಾಣಿಗಳು ಉತ್ತಂತೆ ಕಾಣಿಸುತ್ತಿತ್ತು. ಅಧಿಕಾರಿ ಒಂದು ಚಿಟಿಕೆ ಮಣ್ಣನ್ನು ಕೈಯಿಂದ ತೆಗೆದು ತಿನ್ನುವಂತೆ ಹೇಳಿದರು. ಮಣ್ಣು ನಾಲಿಗೆ ಮುಟ್ಟುತ್ತಲೇ ಉಪ್ಪಿನ ಘಾಟು ಗಂಟಲೊಳಗೆ ಹೋದಂತಾಯಿತು. ಅರ್ಥ ಮಾಡಿಕೊಂಡ ಅಧಿಕಾರಿ, ‘ಈ ಲವಣಯುಕ್ತ ಮಣ್ಣು, ಅದನ್ನು ಪ್ರಾಣಿಗಳು ಹುಡುಕಿಕೊಂಡು ಬರಲು ಕಾರಣ-ಇವೆಲ್ಲಕ್ಕೂ ವಿಜ್ಞಾನ ಏನೇ ಕಾರಣಗಳನ್ನು ಕೊಡಬಹುದು. ಆದರೆ ನನ್ನ ಪ್ರಕಾರ ಭೂಮಿ ಎಲ್ಲರಿಗೆ ಬೇಕಾದುದನ್ನು ಒಡಲಲ್ಲಿಟ್ಟುಕೊಂಡಿದೆ, ಅಂದರೆ ಭೂಮಿ ಎಲ್ಲರದ್ದು”ಎಂದರು! ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂದಿನ ಯುಗಾದಿಯಿಂದ “ಭೂ ಸುಪೋಷಣ ಅಭಿಯಾನ” ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದಾಗ, ಅದರ ಹಿಂದಿನ ಸಂಕಲ್ಪವನ್ನು ನೋಡಿದಾಗ ಅನಿಸಿದ್ದು ಕೂಡಾ ಭೂಮಿ ಎಲ್ಲರಿಗೆ ಬೇಕಾದುದನ್ನು ಒಡಲಲ್ಲಿಟ್ಟುಕೊಂಡಿದೆ, ಅಂದರೆ ಭೂಮಿ ಎಲ್ಲರದ್ದು! ಎಂಬ ಪಿಲಾಸಫಿಯೆ.
ಭೂ ಸುಪೋಷಣ ಅಭಿಯಾನ, ಅಚ್ಚರಿಯೇತಕೆ?
ಪ್ರತಿನಿಧಿ ಸಭಾದಲ್ಲಿ ಘೋಷಿಸಿದ ಹಲವು ಮಹತ್ವಪೂರ್ಣವಾದ ಯೋಜನೆಗಳಲ್ಲಿ ಈ ಭೂ ಸುಪೋಷಣಾ ಅಭಿಯಾನ ಪರಿಸರವಾದಿಗಳ ಗಮನವನ್ನು ಸೆಳೆದಿದ್ದು ಮಾತ್ರವಲ್ಲ, ಕೆಲವರ ಅಚ್ಚರಿಗೂ ಕಾಣವಾಗಿತ್ತು. ಏಕೆಂದರೆ ಅವರೆಲ್ಲರೂ ಸಂಘವನ್ನು ದೂರದಿಂದ ನಿಂತು ನೋಡಿದ್ದರು, ಪೂರ್ವಗ್ರಹದ ಕಣ್ಣುಗಳಿಂದ ಸಂಘವನ್ನು ದಿಟ್ಟಿಸಿದ್ದರು ಅಥವಾ ಬೇರೊಂದು ಕಿಟಕಿಯ ಮೂಲಕ ಇಣುಕಿದ್ದರು. ಕೆಲವರಿಗಂತೂ ಸಂಘ, ಕಣ್ಣಿಗೆ ರಾಚುವ ರಾಷ್ಟ್ರೀಯತೆಯ ಸಂಗತಿಗಳನ್ನು ಬಿಟ್ಟು ಬೇರೆ ಸಂಗತಿಗಳ ಬಗ್ಗೆ ತಲೆಹಾಕದು ಎಂದೇ ತಿಳಿದಿದ್ದರು. ಅಂಥ ವರ್ಗಕ್ಕೆ ಹೆಚ್ಚೆಂದರೆ ಸಂಘ ಅಖಂಡ ಭಾರತದ ಕನಸ್ಸನ್ನು ಹಿಂಬಾಲಿಸುತ್ತಿರುವ ಸಾಂಸ್ಕೃತಿಕ ಸಂಘಟನೆ ಎಂಬಷ್ಟು ಅರಿವು ಮಾತ್ರ ಇತ್ತೇನೊ! ಆದರೆ ಯಾವಾಗ ಸಂಘ ಗ್ಲೋಬಲ್ ವಾರ್ಮಿಂಗ್, ಮಣ್ಣಿನ ಸವಕಳಿ, ನದಿ ಮೂಲಗಳ ಬಗ್ಗೆ ಮಾತಾಡಲಾರಂಭಿಸಿತೋ ಆಗ ಅವರೆಲ್ಲರೂ ಅಸಲಿಗೆ ಸಂಘ ಎಂದರೇನು ಎಂದು ಗೊಂದಲಗೊಂಡರು! ಆದರೆ ಸಂಘ ಸರ್ವವ್ಯಾಪಿತನ-ಸರ್ವಗ್ರಾಹಿತನ ಮತ್ತು ನಿರಂತರತೆ ಎಂಬ ಅಂಶಗಳನ್ನು ಮೈಗೂಡಿಸಿಕೊಳ್ಳದೇ ಇದ್ದಿದ್ದರೆ ಅದೂ ಎಲ್ಲಾ ಸಂಘಟನೆಗಳಂತೆ ಒಂದು ದಿನ ಕೊನೆಯಾಗಿ ಹೋಗುತ್ತಿತ್ತು. ಆದರೆ ಸಂಘದ ಬತ್ತಳಿಕೆಯಲ್ಲಿ ಅನೇಕ ಹೊಸ ವಿಷಯಗಳು ಸಮಾಜ ಕೇಂದ್ರಿತವಾಗಿ ಕಾಲಕಾಲಕ್ಕೆ ನಡೆಯುತ್ತಲೇ ಇರುತ್ತದೆ. ಪ್ರತಿನಿಧಿ ಸಭಾದಲ್ಲಿ ಕೈಗೊಂಡ ಎರಡು ನಿರ್ಣಯಗಳು, ಉದ್ದೇಶಿಯ ಯೋಜನೆಗಳೆಲ್ಲವೂ ಅದರ ಹೊಸತನ ಮತ್ತು ನಿರಂತರತೆಗೆ ಸಾಕ್ಷಿಗಳು. ಹಾಗಾಗಿ ಭೂ ಸುಪೋಷಣ ಅಭಿಯಾನ ಆಚ್ಚರಿಯ ಸಂಗತಿಯೇನೂ ಆಗಿರಲಿಲ್ಲ.
ಪರಂಪರೆಯಲ್ಲೇ ಇತ್ತು
ಯಾವುದು ಸೃಷ್ಟಿಯ ಮೂಲವಾಗಿದೆಯೋ, ಯಾವುದರಿಂದ ಸಕಲ ಚರಾಚರ ವಸ್ತುಗಳು ಅಸ್ತಿತ್ವವನ್ನು ಪಡೆದಿದೆಯೋ, ಯಾವುದು ಉಳಿದರೆ ಸಮಸ್ತ ಜಗತ್ತು ಉಳಿಯುತ್ತೇದೆಯೋ ಅದು ಮಣ್ಣು-ಭೂಮಿಯಲ್ಲದೆ ಬೇರೇನೂ ಅಲ್ಲ ಎಂಬುದು ಅಭಿಯಾನದ ಉದ್ದೇಶ. ಆಷ್ಟಕ್ಕೂ ಭೂಮಿಯನ್ನು ಪೂಜಿಸುವ ಪದ್ಧತಿ ನಮ್ಮ ಪರಂಪರೆಯಲ್ಲೇ ಇತ್ತು. ಕೆಲವರ್ಷಗಳ ಹಿಂದೆಯಷ್ಟೇ ವಿಶ್ವಸಂಸ್ಥೆ ಡಿಸೆಂಬರ್ ೫ ಅನ್ನು “ವಿಶ್ವ ಮಣ್ಣಿನ ದಿನ” ಎಂದು ಘೋಷಿಸಿತ್ತು. ಆದರೆ ಅಂಥಾ ಡಿಸೆಂಬರ್ ೫ ಅನ್ನು ಭಾರತ ಎಷ್ಟೋ ಲಕ್ಷ ವರ್ಷಗಳಿಂದಲೂ ಕಂಡಿದೆ! ಪ್ರತಿ ಮುಂಜಾನೆ ಸಮುದ್ರವಸನೇ ದೇವಿ…ಎನ್ನುವ ಪ್ರಾರ್ಥನೆಯನ್ನು ಇದುವರೆಗೆ ಆಗಿಹೋದ ಅದೆಷ್ಟೋ ಸಾಧುಗಳು, ರಾಜಮಹಾರಾಜರು, ತೀರಾ ಸಾಮಾನ್ಯರೂ ಹೇಳಿದ್ದಾರೆ, ಹೇಳುತ್ತಲೇ ಇದ್ದಾರೆ. ಹಾಗಾದರೆ ಮಣ್ಣಿನ ಕಾಳಜಿಯನ್ನು ನಮಗೆ ವಿಶ್ವಸಂಸ್ಥೆ ಬೋಧಿಸಿದ್ದೇ? ವಿಶ್ವಸಂಸ್ಥೆ ವರ್ಷದ ಒಂದು ದಿನವನ್ನು ಮಣ್ಣಿನ ದಿನ ಎಂದು ಆಚರಿಸುವುದು ದೊಡ್ಡದೋ ಅಥವಾ ದಿನವೂ ಮಣ್ಣನ್ನು ಆರಾಧಿಸುವ ಹಿಂದೂ ಸನಾತನ ಪರಂಪರೆ ಮುಖ್ಯವೋ? ಅಂದರೆ, ಸಂಘ ಈ ಮೊದಲು ಇಲ್ಲಿದ್ದ ಸಂಗತಿಗಳಿಗೇ ಅಭಿಯಾನದ ರೂಪವನ್ನು ಕೊಟ್ಟಿದೆ.
ವಿಶ್ವದ ಎಲ್ಲಾ ದೇಶಗಳೂ ಇಂದು ಮಣ್ಣು ಮತ್ತು ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ ಮತ್ತು ಅದನ್ನು ಬಗೆಹರಿಸಲು ಮಾರ್ಗೋಪಾಯಗಳನ್ನು ಹುಡುಕುತ್ತಿವೆ. ಆದರೆ ಆಧುನಿಕ ಮತ್ತು ತಂತ್ರಜ್ಞಾನದಲ್ಲಿ ತೀರಾ ಮುಂದುವರೆದಿರುವ ಅನೇಕ ದೇಶಗಳು ದಾರಿಗಾಣದೆ ಪರದಾಡುತ್ತಿವೆ. ಆದರೆ ಈ ಸಮಸ್ಯೆಯನ್ನು ತಾತ್ವಿಕವಾಗಿ ನೋಡುವವರೆಗೆ ಅದೆಂಥಾ ದೇಶವಾದರೂ ಅದಕ್ಕೆ ಪರಿಹಾರ ಕಂಡುಹುಡುಕುವಲ್ಲಿ ವಿಫಲವಾಗುತ್ತವೆ. ಏಕೆಂದರೆ ಬಹುತೇಕ ಇಂಥಾ ಸಮಸ್ಯೆಗಳನ್ನು ಮನುಷ್ಯ ಚಿಂತಿಸುವ ದಾಟಿಯಲ್ಲೇ ಸಮಸ್ಯೆಗಳಿರುತ್ತದೆ. “ಕಾಲಕ್ಕೆ ತಕ್ಕಂತೆ ಭೂಮಿಯಲ್ಲೂ ಮಾರ್ಪಾಡುಗಳಾಗಬಾರದೇ?’,
’ಅಭಿವೃದ್ಧಿಯಾಗಬೇಕೆಂದರೆ ರಾಜಿ ಮಾಡಿಕೊಳ್ಳಲೇಬೇಕು’, “ಭೂಮಿಯ ನಾಶ ಎಂಬುದು ಪರಿಸರವಾದಿಗಳ ಹುಯಿಲು ಮಾತ್ರ, ಇದು ಮನುಷ್ಯ ಯುಗ’-ಮುಂತಾದ ಚಿಂತನಾ ಕ್ರಮಗಳು ಸಮಸ್ಯೆಯನ್ನು ಮತ್ತಷ್ಟು ಬೆಳೆಸುತ್ತವೆ. ಆದರೆ ಪರಿಸರದ ಬಗ್ಗೆ ಹಿಂದೂ ಪರಂಪರೆಯ ತಾತ್ವಿಕತೆ ಪರಿಸರವಾದಿಗಳ ದೃಷ್ಟಿಕೋನಕ್ಕಿಂತ ಭಿನ್ನವೂ ವಿಶಿಷ್ಠವೂ ಆಗಿರುವ ಕಾರಣಕ್ಕೆ ರಾ.ಸ್ವ.ಸಂಘದ ಅಭಿಯಾನ ಮಹತ್ವ ಪಡೆದುಕೊಳ್ಳುತ್ತದೆ. ಭಾರತೀಯ ಚಿಂತನೆ, ಭಾರತೀಯ ಪದ್ಧತಿಗಳ ಪುನರುತ್ಥಾನ ಆಗಬೇಕು. ಗೋಮಾತೆ, ಭೂಮಾತೆಯ ಮಹಾನತೆಯ ಅರಿವು ಮೂಡಬೇಕು ಎಂಬುದು ಸಂಘದ ಚಿಂತನೆಯ ಸಾರ. ಭೂಮಿಯೂ ತಾಯಿಯಾದರೆ ಅದಕ್ಕೂ ವಿಶ್ರಾಂತಿ ಬೇಡವೇ ಎನ್ನುವ ಕಾಳಜಿ, ಅದು ನಾಳೆಗೂ ಆರೋಗ್ಯವಂತವಾಗಿ ಉಳಿಯಬೇಕೆನ್ನುವ ಮುಂದಾಲೋಚನೆ, ಅದರ ಪಾಲನೆ-ಪೋಷಣೆ, ಆಕೆಗೆ ವಿಷ ಉಣಿಸದೆ ಸತ್ವಗೊಳಿಸುವ ವಾತ್ಸಲ್ಯ ಎಲ್ಲವೂ ಹಿಂದೂ ಚಿಂತನೆಯಲ್ಲಿದ್ದ ಸಂಗತಿಗಳೇ. ಭೂಮಿಯನ್ನು ಹೀಗೆ ಕಾಣುತ್ತಾ ಭಾರತೀಯ ಪರಂಪರೆ ಅದನ್ನು ಯುಗಯುಗಗಳವರೆಗೆ ಆರೋಗ್ಯವಾಗಿ ಇಟ್ಟುಕೊಂಡಿತ್ತು. ಆದರೆ ಮನುಷ್ಯ ತನಗೆ ತಾನೇ ಅಭಿವೃದ್ಧಿಯ ವ್ಯಾಖ್ಯಾನವನ್ನು ಕೊಟ್ಟುಕೊಂಡ ನಂತರ ಭೂಮಿ ಹಾಗೆ ಉಳಿಯಲಿಲ್ಲ. ಆ ಕಾರಣದಿಂದ ರಾ.ಸ್ವ.ಸಂಘದ ಗೋಸೇವಾ, ಗ್ರಾಮವಿಕಾಸ, ಅಕ್ಷಯ ಕೃಷಿಪರಿವಾರ, ಕಿಸಾನ್ ಸಂಘ, ಸ್ವದೇಶಿ ಜಾಗರಣ ಮಂಚ್, ಕೃಷಿ ಪ್ರಯೋಗ ಪರಿವಾರ, ಸಾವಯವ ಕೃಷಿ ಪರಿವಾರ, ಸಹಕಾರ ಭಾರತಿ ಮೊದಲಾದ ಸಂಘಟನೆಗಳು ಮುಂದಿನ ಯುಗಾದಿಯಿಂದ ಭೂ ಸುಪೋಷಣ ಅಭಿಯಾನ ನಡೆಸುತ್ತಿದೆ. ಆ ಮೂಲಕ ಮಣ್ಣಿನ ಸವಕಳಿಯನ್ನು ತಡೆಯುವುದು, ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು, ರಾಸಾಯನಿಕಗಳ ಉಪಯೋಗ ಮಾಡದಿರುವುದರ ಸಂಕಲ್ಪವನ್ನು ಮಾಡಲಿದೆ. ಮಣ್ಣಿನ ರಕ್ಷಣೆಯ ಮೂಲಕ ರಾಷ್ಟ್ರದ ರಕ್ಷಣೆ ಎಂಬ ಆದರ್ಶವನ್ನು ಪ್ರಚಾರ ಮಾಡಲಿದೆ.
ಪರಂಪರೆಯ ಮರುನೆನಕೆ
ವಿಶ್ವಸಂಸ್ಥೆಯ ಒಂದು ವರದಿ ಪ್ರಕಾರ ಭೂಮಿಯಲ್ಲಿ ಪ್ರತೀ ವರ್ಷ ೨೪ ಬಿಲಿಯನ್ ಟನ್ನುಗಳಷ್ಟು ಮಣ್ಣು ನಾಶವಾಗುತ್ತಿದೆ. ಆಧುನಿಕತೆಯ ಹಿಂದೆ ಬಿದ್ದ ಜಗತ್ತಿನ ಎಲ್ಲಾ ದೇಶಗಳೂ ಭೂಮಿಯ ನಾಶವನ್ನು ಒಂದಲ್ಲಾ ಒಂದು ರೀತಿಯಲ್ಲಿ ಮಾಡುತ್ತಲೇ ಬರುತ್ತಿದೆ. ಆದರೆ ಅದಕ್ಕೆ ಪರಿಹಾರ ಮಾತ್ರ ಭಾರತದ ಬಳಿ ಇದೆ. ಏಕೆಂದರೆ ಜಗತ್ತಿನಲ್ಲಿ ಭೂಮಿಯನ್ನು ತಾಯಿ ಎಂದು ಭಾವಿಸುವ ಏಕೈಕ ರಾಷ್ಟ್ರ ಭಾರತ. ಹಾಗೆಯೇ ಭಾರತದಲ್ಲಿ ಭೂಮಿಯನ್ನು ತಾಯಿ ಎಂದು ಭಾವಿಸುವ ಸಮುದಾಯದಿಂದ ಮಾತ್ರ ಭೂಮಿ ಉಳಿಯುತ್ತದೆ. ಅಂದರೆ ಪರಿಹಾರ ಹಿಂದುಗಳ ಬಳಿ ಮಾತ್ರ ಇದೆ. ಉದಾಹರಣೆಗೆ ಅಥರ್ವವೇದದ ಭೂ ಸೂಕ್ತದಂತೆ ಭೂಮಿಯ ಬಗ್ಗೆ ಯಾವ ಮತಗಳ ಗ್ರಂಥಗಳೂ ಹೇಳಿಲ್ಲ. ಹಿಂದುಗಳಲ್ಲಿ ಆವರಿಸಿರುವ ವಿಸ್ಮೃತಿ ಅದನ್ನು ಮರೆಮಾಚಿದೆಯೇ ಹೊರತು ಅಂತಸತ್ವದಲ್ಲಿ ಅದಿನ್ನೂ ಇದೆ. ಅದನ್ನು ಜಾಗೃತ ಮಾಡುವ ಕಾರ್ಯವೇ ಈ ಭೂ ಸುಪೋಷಣ ಅಭಿಯಾನ.
ಭೂ ಸೂಕ್ತದಲ್ಲೇನಿದೆ?
“ತಾಯೇ, ನಾನು ಮಣ್ಣನ್ನು ಅಗೆಯುವಾಗ ನಿನಗೆ ನೋವಾಗದಿರಲಿ, ನಾನು ತೆಗೆಯುವ ಗುಂಡಿಯು ಮತ್ತೆ ಮುಚ್ಚಿಕೊಳ್ಳಲಿ. ನನ್ನಿಂದಾಗುವ ಅಪಚಾರಗಳನ್ನು ಕ್ಷಮಿಸು” ಎನ್ನುತ್ತದೆ ಭೂ ಸೂಕ್ತದ ಒಂದು ಶ್ಲೋಕ. ಆದರೆ ಹೀಗನ್ನುವ ಕಾಲದಿಂದ ನಾವಿಂದು ಬಹುದೂರ ಸಾಗಿ ಬಂದಿದ್ದೇವೆ. ನಗರಗಳು ಮಾತ್ರವಲ್ಲ, ಗ್ರಾಮಗಳಿಗೂ ಲಗ್ಗೆ ಇಟ್ಟಿರುವ ಮಹಾ ಯಂತ್ರಗಳಿಗೆ ಯಾವ ಪಾಪಗಳೂ ಅಂಟುತ್ತಿಲ್ಲ. ತಾನು ತೋಡುವ ಗುಂಡಿ ಪಾತಾಳ ಮುಟ್ಟುವ ಹಂಬಲ ಆ ಯಂತ್ರಗಳಿಗಿರುತ್ತವೆಯೇ ಹೊರತು ಪಶ್ಚಾತ್ತಾಪದ ಹಂಗಿಲ್ಲ. ಆದರೆ ಅವು ತೋಡಿದ ಗುಂಡಿಗಳಿಂದ ಎದ್ದ ಮಹಲುಗಳು ನೆಮ್ಮದಿಯ ಬದುಕನ್ನು ನೀಡುತ್ತಿವೆಯೇ? ಭೂ ಸೂಕ್ತದಲ್ಲಿ ಭೂಮಿಯ ಕುರಿತ ಪ್ರಾರ್ಥನೆಯೊಂದು ಹೀಗಿದೆ. “ತಾಯೇ, ಸಂಪತ್ತನ್ನು ಕರುಣಿಸು, ಜಲವನ್ನು ಕರುಣಿಸು, ವನಸ್ಪತಿಯನ್ನು ಕರುಣಿಸು”. ಭೂಮಿತಾಯೇನೋ ಅವನ್ನೆಲ್ಲಾ ಕರುಣಿಸಿದಳು. ಆದರೆ ಅದನ್ನು ಪಡೆದವರು ಆಕೆಗೇನು ಕೊಟ್ಟರು? ಬೆಟ್ಟಗಳು ಬರಿದಾದವು, ಬಯಲು ಪಟ್ಟಣವಾಯಿತು, ನೀರು ಕಲುಷಿತ ಮಾತ್ರವಲ್ಲ, ಮಾಯವೂ ಆಯಿತು. ಇನ್ನು ಬರಿದಾದ ವನದಲ್ಲಿ ವನಸ್ಪತಿಯೆಲ್ಲಿಂದ? ಎಲ್ಲವೂ ಬರಿದಾದ ಮೇಲೆ ವಿಶ್ವಸಂಸ್ಥೆ ಕಾಡಿಗೊಂದು, ಮಣ್ಣಿಗೊಂದು, ನೀರಿಗೊಂದು, ಗಾಳಿಗೊಂದು ಎಂದು ದಿನಾಚರಣೆಯನ್ನು ಘೋಷಿಸಿತು. “ನಿಲ್ಲುವಾಗಲೂ, ನಡೆಯುವಾಗಲೂ, ಮಲಗುವಾಗಲೂ ನೀನೇ ಆಧಾರ. ನಮಗೆಂದೂ ಸೋಲನ್ನುಂಟುಮಾಡಬೇಡ” ಎಂಬ ಶ್ಲೋಕದಲ್ಲಿ ಭೂಮಿಯನ್ನು ಸಶರೀರವಾಗಿ ನೋಡಿದ ಭಾವವಿದೆ. ಆ ಭಾವ ಎಲ್ಲರಲ್ಲೂ ಮೂಡಿದ್ದರೆ? ಆ ಸಂವೇದನೆ ಎಲ್ಲರಲ್ಲೂ ಹುಟ್ಟಿದ್ದರೆ? ವಿಶ್ವಸಂಸ್ಥೆಗೆ ಪ್ರತ್ಯೇಕ ದಿನ ಹುಡುಕುವ ಪ್ರಮೇಯವೇ ಬರುತ್ತಿರಲಿಲ್ಲ.
ಜಗತ್ತಿನಲ್ಲಿ ಎಲ್ಲವೂ ಒಂದು ನಿಯಮದಡಿಯಲ್ಲಿ ಸಾಗುತ್ತಿರುತ್ತದೆ. ಉಡ್ಡಯನ ಮಾಡಿದ ಉಪಗ್ರಹವನ್ನೂ ನಿಯಂತ್ರಿಸಬೇಕು, ಚಾಲನೆ ಕೊಟ್ಟ ವಾಹನವನ್ನೂ, ನೊಗ ಕಟ್ಟಿದ ಎತ್ತನ್ನೂ ನಿಯಂತ್ರಣದಲ್ಲೇ ಚಲಾಯಿಸಬೇಕು. ಅಂಥಲ್ಲಿ ಎಲ್ಲವನ್ನೂ ಕೊಟ್ಟ ಭೂಮಿಯನ್ನು ಎಗ್ಗಿಲ್ಲದೆ ಬಳಸಬಹುದೇ? ಪಾದಸ್ಪರ್ಶವನ್ನೂ ಆಪದ್ಧರ್ಮ ಎಂದು ಭಾವಿಸಿದ ಸಂವೇದನೆಯನ್ನು ಮರೆತೆವೇಕೆ ಎಂಬ ಪ್ರಶ್ನೆಗಳಿಗೆ ಈ ಅಭಿಯಾನ ಉತ್ತರ ನೀಡುತ್ತದೆ. ಕಾಶ್ಮೀರದ ಬಗ್ಗೆ, ಅಂತಾರಾಷ್ಟ್ರೀಯ ನಿಲುವುಗಳ ಬಗ್ಗೆ, ರಾಮನ ಬಗ್ಗೆ ಚಿಂತಿಸುವಷ್ಟೇ ತೀವ್ರವಾಗಿ ಅದು ಮಣ್ಣಿನ ಬಗ್ಗೆಯೂ ಚಿಂತಿಸಬಲ್ಲದು ಎಂಬ ಸಂದೇಶವನ್ನೂ ಜೊತೆಗೆ ನೀಡುತ್ತಿದೆ.