
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಸರಕಾರ್ಯವಾಹರಾಗಿ ಆಯ್ಕೆಗೊಂಡ ದತ್ತಾತ್ರೇಯ ಹೊಸಬಾಳೆಯವರು ಸಂಘಟನೆಯ ಇತಿಹಾಸದಲ್ಲಿ ಹೊಸ ಘಟ್ಟವೊಂದು ಪ್ರಾರಂಭವಾಗುತ್ತಿರುವುದನ್ನು ಸೂಚಿಸುವಂತಹ ಮಾತುಗಳನ್ನಾಡಿರುವುದು ಹಲವರ ಗಮನ ಸೆಳೆದಿದೆ. ಅವರು ಎರಡು ಪ್ರಮುಖ ಸಂಗತಿಗಳ ಬಗ್ಗೆ ಚರ್ಚಿಸಿದ್ದಾರೆ. ಮೊದಲನೆಯದು ಸಾಮಾಜಿಕ ಅಸಮಾನತೆ; ಎರಡನೆಯದು ಭಾರತದ ಸಂಕಥನ. ಈ ಎರಡೂ ಅಂಶಗಳು ದೇಶಕ್ಕಾಗಲೀ, ಸಂಘಕ್ಕಾಗಲೀ ಹೊಸತೇನೂ ಅಲ್ಲದಿದ್ದರೂ ಈ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ಆರೆಸ್ಸೆಸ್ ಉತ್ಸುಕವಾಗಿರುವುದನ್ನು ಹೊಸಬಾಳೆಯವರ ಹೇಳಿಕೆ ಸೂಚಿಸುತ್ತದೆ.
ನೂರರ ಹೊಸ್ತಿಲಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಂದಿನ ಭಾರತದ ಸಮಾಜ, ಸಂಸ್ಕೃತಿ ಮತ್ತು ರಾಜಕೀಯಗಳ ಮೇಲೆ ಅಳಿಸಲಾಗದ ಪ್ರಭಾವ ಬೀರಿದೆಯೆನ್ನುವುದನ್ನು ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ಇತರ ರಾಜಕೀಯ ಅಥವಾ ವೈಚಾರಿಕ ಚಳವಳಿಗಳಂತಲ್ಲದೇ, ವಸಾಹತುಶಾಹಿಯ ಪ್ರಭಾವವಿಲ್ಲದ ಶುದ್ಧ ಭಾರತೀಯ ನೆಲೆಗಟ್ಟಿನಲ್ಲಿ ರೂಪುಗೊಂಡ ಸಿದ್ಧಾಂತವನ್ನು ಆರೆಸ್ಸೆಸ್ ಪ್ರತಿನಿಧಿಸುತ್ತದೆ. ಇದೇ ಆರೆಸ್ಸೆಸ್ಸಿನ ಪ್ರೇರಕಶಕ್ತಿಯಾಗಿದ್ದು, ಒಂದರ ಮೇಲೊಂದರಂತೆ ಬಂದ ಹಲವಾರು ವಿರೋಧಗಳನ್ನು ಯಶಸ್ವಿಯಾಗಿ ಎದುರಿಸುವ ಬಲವನ್ನೂ ಅದಕ್ಕೆ ತಂದುಕೊಟ್ಟಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಕಳೆದ ಒಂದು ದಶಕದಿಂದ ಹೇಳುತ್ತಾ ಬಂದಿರುವಂತೆ, ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಸರಿಯಾಗಿ ಅರ್ಥೈಸಿಕೊಳ್ಳುವುದೇ ಮುಂದಿನ ದಿನಗಳಲ್ಲಿ ಸಂಘದ ಕೆಲಸಕ್ಕೆ ದಿಕ್ಕನ್ನು ನೀಡಲಿದೆ.
ಸಾಂಪ್ರದಾಯಿಕ ಎಡಪಂಥ ಮತ್ತು ಬಲಪಂಥ ಎಂಬ ಪೂರ್ವಗ್ರಹಪೀಡಿತ ದೃಷ್ಟಿಕೋನಗಳ ಗೋಜಿಗೆ ಹೋಗದೇ ಇತಿಹಾಸವನ್ನು ಪರಿಶೀಲಿಸುವುದಾದರೆ, ಇಂದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರು ಹಾಗೂ ಹಲವು ಆಫ್ರಿಕನ್ ಚಿಂತಕರು ಮತ್ತು ಕ್ರಾಂತಿಕಾರಿಗಳ ನಡುವೆ ಅನೇಕ ಸಮಾನತೆಗಳನ್ನು ನಾವು ಗುರುತಿಸಬಹುದು. ಭಾರತ ಮತ್ತು ಆಫ್ರಿಕದ ಸಾಮಾಜಿಕ ನಾಯಕರು ವಸಾಹತುಶಾಹಿಯನ್ನು ಬೇರೆಬೇರೆಯದೇ ರೀತಿಯಲ್ಲಿ ಅರ್ಥಮಾಡಿಕೊಂಡದ್ದರ ಪರಿಣಾಮವಾಗಿ ಗುಲಾಮಗಿರಿಯ ವಿರುದ್ಧದ ಅವುಗಳ ಹೋರಾಟಗಳೂ ಬೇರೆಬೇರೆಯದೇ ರೀತಿಯಲ್ಲಿ ಇದ್ದವು. ಭಾರತದಲ್ಲಿ ಇದೊಂದು ರಾಜಕೀಯ ಹೋರಾಟವಾಗಿತ್ತು. ಏಕೆಂದರೆ, ಬ್ರಿಟಿಷ್ ಆಡಳಿತವನ್ನು ನಮ್ಮ ಸಂಪತ್ತನ್ನು ಕೊಳ್ಳೆ ಹೊಡೆದು, ನಮ್ಮನ್ನು ರಾಜಕೀಯ ಗುಲಾಮಗಿರಿಗೆ ತಳ್ಳುವ ವ್ಯವಸ್ಥೆ ಎಂದು ಇಲ್ಲಿನ ನಾಯಕರಲ್ಲಿ ಹೆಚ್ಚಿನವರು ಪರಿಗಣಿಸಿದ್ದರು. ಆದ್ದರಿಂದ ಅದಕ್ಕನುಗುಣವಾಗಿ ಸ್ವಾತಂತ್ರ್ಯ ಹೋರಾಟವನ್ನು ರೂಪಿಸಲಾಯಿತು. ಇನ್ನೊಂದೆಡೆ, ಆಫ್ರಿಕನ್ ರಾಷ್ಟ್ರೀಯ ನಾಯಕರು ರಾಜಕೀಯ ಗುಲಾಮಗಿರಿ ಹಾಗೂ ವರ್ಣಬೇಧ ನೀತಿಯ ವಿರುದ್ಧವಷ್ಟೇ ಅಲ್ಲದೇ, ಸಾಂಸ್ಕೃತಿಕ ಗುಲಾಮಗಿರಿಯ ವಿರುದ್ಧವೂ ಅಷ್ಟೇ ಪ್ರಬಲವಾದ ಹೋರಾಟವನ್ನು ಕಟ್ಟಿ ನಿಲ್ಲಿಸಿದರು. ಕೀನ್ಯಾದ ಕಾದಂಬರಿಕಾರ ಗುಗಿ ವಾ ಥಿಯಾಂಗೋ ಅವರು ಹೇಳುವ ಪ್ರಕಾರ, ವಸಾಹತುಶಾಹಿಯ ದಬ್ಬಾಳಿಕೆಯ ಪ್ರಭಾವ ಕೇವಲ ಭಾಷೆಯ ಮೇಲಲ್ಲದೇ, ಬಹುತ್ವ ಮತ್ತು ಸಹಜೀವನವನ್ನು ಒಪ್ಪಿಕೊಳ್ಳುವ ’ಉಬುಂಟು’ (ಅಂದರೆ, ನೀನಿರುವುದರಿಂದ ನಾನಿದ್ದೇನೆ) ಎಂಬ ಕಲ್ಪನೆಯ ಆಧಾರದ ಮೇಲೆ ವಿಕಾಸಗೊಂಡ ಆಫ್ರಿಕಾದ ಮೌಲ್ಯವ್ಯವಸ್ಥೆಯ ಮೇಲೂ ಗಾಢವಾಗಿಯೇ ಆಗಿದೆ. ವಸಾಹತುಶಾಹಿಯ ಇಂತಹ ದುಷ್ಪರಿಣಾಮಗಳನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸುವಲ್ಲಿ ಆಫ್ರಿಕಾದ ಸ್ವಾತಂತ್ರ್ಯ ಹೋರಾಟ ಯಶಸ್ವಿಯಾಗಲಿಲ್ಲ ಎಂದು ಫ್ರಾನ್ಸ್ ಫ್ಯಾನನ್ ಅವರ ಅಭಿಮತ. ಅದರಲ್ಲಿ ಹುರುಳಿಲ್ಲದೇ ಇಲ್ಲ.
ಸ್ವದೇಶೀ ಚಿಂತಕರಾದ ಬಂಕಿಮಚಂದ್ರ ಚಟರ್ಜಿ, ರಾಜನಾರಾಯಣ್ ಬಸು, ಬಾಲಗಂಗಾಧರ ತಿಲಕ್, ಬಿಪಿನಚಂದ್ರ ಪಾಲ್, ಅರಬಿಂದೋ, ಲಾಲಾ ಲಜಪತರಾಯ್ ಹಾಗೂ ಇನ್ನಿತರರು ಯುರೋಪಿನ ವೈಚಾರಿಕ ಮತ್ತು ಸಾಂಸ್ಕೃತಿಕ ದಬ್ಬಾಳಿಕೆಯನ್ನು ತೀವ್ರವಾಗಿ ವಿರೋಧಿಸಿದರು. ಆದರೆ ಅವರ ಈ ಪ್ರಖರ ವಿಚಾರ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಕೇಂದ್ರಬಿಂದುವಾಗಲೇ ಇಲ್ಲ. ಅಷ್ಟೇ ಅಲ್ಲದೇ, ತಿಲಕರ ನಿಧನದ ಅನಂತರದ ದಿನಗಳಲ್ಲಂತೂ ಕಾಂಗ್ರೆಸ್ಸಿನ ನಿರ್ಣಯಗಳು ಮತ್ತು ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ವಿಷಯಗಳು ಸಂಪೂರ್ಣವಾಗಿ ಕಣ್ಮರೆಯೇ ಆಗಿಬಿಟ್ಟವು. ಕಾಂಗ್ರೆಸ್ಸಿನ ನಾಯಕತ್ವಕ್ಕೆ ರಾಜಕೀಯವೆಂಬುದು ಒಂದು ಅನಿವಾರ್ಯತೆಯಾಗಿತ್ತೇ ಹೊರತು, ಅದಕ್ಕೆ ಹೊರತಾದ ಯಾವ ಉನ್ನತ ಧ್ಯೇಯವೂ ಅಲ್ಲಿರಲಿಲ್ಲ. ಹಾಗಾಗಿ, ಇಲ್ಲಿನ ಸಮಾಜ ಮತ್ತು ಸಂಸ್ಕೃತಿಯ ಬಗ್ಗೆ ವಸಾಹತುಶಾಹಿ ಆಡಳಿತದ ತಿರಸ್ಕಾರದ ಧೋರಣೆಗಳಿಗೆ ಯಾವ ವಿರೋಧವೂ ಕಾಂಗ್ರೆಸ್ಸಿನ ಕಡೆಯಿಂದ ಉಂಟಾಗದೇ ಅವು ಹಾಗೆಯೇ ಮುಂದುವರಿದವು. ಉದಾಹರಣೆಗೆ, ೧೮೭೨ ರಿಂದ ೧೯೪೧ ರವರೆಗೆ ನಡೆದ ಎಂಟು ಜನಗಣತಿಯ ವರದಿಯಗಳಲ್ಲಿಯೂ ಹಿಂದುಗಳನ್ನು ಕ್ರಿಶ್ಚಿಯನ್ ರಿಲಿಜನ್ನಿಗೆ ಮತಾಂತರಗೊಳಿಸುವುದರಲ್ಲಿ ಮಿಷನರಿಗಳಿಗೆ ದೊರಕಿದ ಯಶಸ್ಸು ಮತ್ತು ಸೋಲುಗಳನ್ನು ವ್ಯಾಪಕವಾಗಿ ಚರ್ಚಿಸಲಾಗಿತ್ತು. ಮತಾಂತರವನ್ನು ತಮ್ಮ ಕಾರ್ಯಕ್ರಮದ ಅತಿಮುಖ್ಯ ಅಂಶವಾಗಿ ಬ್ರಿಟಿಷರು ಪರಿಗಣಿಸಿದ್ದರು. ‘ಒಂದು ನಶಿಸುತ್ತಿರುವ ಜನಾಂಗ’ (ಎ ಡೈಯಿಂಗ್ ರೇಸ್, ೧೯೦೯) ಹಾಗೂ ‘ಬರಲಿರುವ ಜನಗಣತಿಯ ನಂತರ ಹಿಂದುಗಳು’ (ಹಿಂದೂಸ್ ಆಫ್ಟರ್ ಕಮಿಂಗ್ ಸೆನ್ಸಸ್, ೧೯೧೦) ಎಂಬ ಪುಸ್ತಕಗಳ ಲೇಖಕರಾದ ಕರ್ನಲ್ ಯು. ಎನ್. ಮುಖರ್ಜಿ ಹಾಗೂ ಸ್ವಾಮಿ ಶ್ರದ್ಧಾನಂದ ಅವರಂತಹ ಚಿಂತಕರು ಬ್ರಿಟಿಷರ ಈ ಧೋರಣೆಯನ್ನು ಖಡಾಖಂಡಿತವಾಗಿ ವಿರೋಧಿಸಿದರೂ, ಕಾಂಗ್ರೆಸ್ ಅದನ್ನು ಅಲಕ್ಷಿಸಿತು. ಬ್ರಿಟಿಷ್ ಆಳುಗರು ತಮ್ಮ ಮೊದಲ ನಾಲ್ಕು ಜನಗಣತಿಗಳಲ್ಲಿಯೂ, ಅರಣ್ಯಪ್ರದೇಶಗಳಲ್ಲಿ ವಾಸಿಸುತ್ತಿದ್ದ ಭಾರತೀಯ ವನವಾಸಿ ಸಮಾಜವನ್ನು ಹಿಂದುಗಳು ಎಂದು ದಾಖಲಿಸದೇ, ಪ್ರತ್ಯೇಕವಾಗಿ ಅನಿಮಿಸ್ಟ್ (ಪಶು, ಪಕ್ಷಿ, ಮರಗಿಡಗಳನ್ನು ಪೂಜಿಸುವವರು) ಎಂದೇ ದಾಖಲಿಸಿ, ಅವರು ಹಿಂದುಗಳಲ್ಲ ಎನ್ನುವಂತೆ ಬಿಂಬಿಸಿದರು. ಹಾಗೆಯೇ, ಜಾತಿಯ ಕಟ್ಟಳೆಗಳನ್ನು ಮುರಿದು, ಇಂತಹ ವನವಾಸಿಗಳು ಮತ್ತು ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ ಪ್ರಗತಿಪರ ಬ್ರಾಹ್ಮಣರನ್ನು ‘ಅವನತಿಗೊಂಡ ಬ್ರಾಹ್ಮಣರು’ (ಡಿಗ್ರೇಡೆಡ್ ಬ್ರಾಹ್ಮಿನ್ಸ್) ಎಂದು ತುಚ್ಛವಾಗಿ ಕಾಣುವ ಮೂಲಕ, ಅಂತಹ ಪ್ರಯತ್ನಗಳಿಗೆ ತಣ್ಣೀರೆರಚಿದರು.
ವ್ಯವಸ್ಥಿತವಾಗಿ ದಾಳಿಗೊಳಗಾಗುತ್ತಿದ್ದ ಭಾರತೀಯ ಸಂಪ್ರದಾಯಿಕ ಜ್ಞಾನಪರಂಪರೆಯ ಬಗ್ಗೆ ಗಾಂಧಿಯವರು ಕಳವಳ ವ್ಯಕ್ತಪಡಿಸಿದಾಗಲೂ, ಕಾಂಗ್ರೆಸ್ ಮುಖಂಡತ್ವವು ಅದಕ್ಕೆ ಯಾವುದೇ ಕಿಮ್ಮತ್ತನ್ನು ಕೊಡಲಿಲ್ಲ್ಲ. ೧೯೩೧ ರ ತಮ್ಮ ಲಂಡನ್ನಿನ ಭಾಷಣದಲ್ಲಿ ಮಹಾತ್ಮ ಗಾಂಧಿಯವರು ಬ್ರಿಟಿಷರ ಈ ದಮನಕಾರಿ ನೀತಿಯ ಪರಿಣಾಮವಾಗಿ, ‘ಸುಂದರವಾದ ವೃಕ್ಷವೊಂದರ ಅವಸಾನ’ (ಬ್ಯೂಟಿಫುಲ್ ಟ್ರೀ ಪೆರಿಶ್ಡ್) ಆಗಿದೆ ಎಂದು ಸೂಚ್ಯವಾಗಿ ಹೇಳಿದರು. ಆಶ್ಚರ್ಯವೆಂಬಂತೆ, ಅದೇ ವರ್ಷ ಕೃಷ್ಣಚಂದ್ರ ಭಟ್ಟಾಚಾರ್ಯ ಅವರು ರಾಜಕೀಯ ಪ್ರಾಬಲ್ಯದಂತಲ್ಲದೇ, ಕಣ್ಣಿಗೆ ಕಾಣದಂತೆ ಕ್ರಮೇಣ ಎಲ್ಲೆಡೆ ಆವರಿಸಿಕೊಂಡು, ಭಾರತೀಯ ಸಂಸ್ಕೃತಿಯ ಬುಡಕ್ಕೇ ಕೊಡಲಿಯೇಟು ನೀಡುವ ಪಾಶ್ಚಾತ್ಯ ಸಾಂಸ್ಕೃತಿಕ ಪ್ರಾಬಲ್ಯದ ಕುರಿತು ಎಚ್ಚರಿಕೆ ನೀಡಿದ್ದರು.
ಮೊಘಲರು ಮತ್ತು ಬ್ರಿಟಿಷರ ಕಾಲದಲ್ಲಿ ಭಾರತದ ಜನತೆ, ಸಾಂಪ್ರದಾಯಿಕ ಜ್ಞಾನಪರಂಪರೆ ಮತ್ತು ಅಧ್ಯಾತ್ಮಿಕತೆಯ ಮೇಲೆ ನಡೆದ ಆಕ್ರಮಣಗಳಿಗೆ ಪ್ರತಿಕ್ರಿಯೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರಂಭ ಎನ್ನಬಹುದು. ದೇಶದ ಸಂಸ್ಕೃತಿ ಮತ್ತು ನಾಗರಿಕತೆಗಳ ಆಧಾರದ ಮೇಲೆಯೇ ಆರೆಸ್ಸೆಸ್ಸಿನ ಮೂಲಸಿದ್ಧಾಂತ ರೂಪುಗೊಂಡಿದೆ. ಸಾಂಸ್ಕೃತಿಕ ಸಾರ್ವಭೌಮತ್ವವಿಲ್ಲದ ರಾಜಕೀಯ ಸ್ವಾತಂತ್ರ್ಯವೆಂಬುದು, ಆತ್ಮವಿಲ್ಲದ ದೇಹ ಎಂದು ಅದು ಪರಿಗಣಿಸುತ್ತದೆ. ಆದ್ದರಿಂದ, ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿ ಮತ್ತು ಕ್ರಾಂತಿಕಾರಿಗಳಿಬ್ಬರಿಗೂ ಸಹಕಾರ ನೀಡಿದರೂ, ಸಾಂಸ್ಕೃತಿಕ ಆಕ್ರಮಣದ ವಿರುದ್ಧದ ಹೋರಾಟದ ತನ್ನ ಗುರಿಯಿಂದ ಅದು ವಿಚಲಿತಗೊಳ್ಳಲಿಲ್ಲ. ಎಲ್ಲರೊಂದಿಗೆ ಹೊಂದಿಕೊಳ್ಳುವ ಸ್ವಭಾವ ಮತ್ತು ಬಹುಮುಖಿ ವ್ಯಕ್ತಿತ್ವವನ್ನು ಆರೆಸ್ಸೆಸ್ಸಿನ ಬೆಳವಣಿಗೆಯಲ್ಲಿ ಕಾಣಬಹುದು.
ಮರಾಠಿ ಮಾತನಾಡುತ್ತಿದ್ದ ಸಂಘದ ಸಂಸ್ಥಾಪಕ ಸದಸ್ಯರು, ಬೇರೆ ಬೇರೆ ಪ್ರದೇಶಗಳಲ್ಲಿನ ಸ್ಥಳೀಯ ಸಾಂಸ್ಕೃತಿಕ ಪರಂಪರೆ, ವೈವಿಧ್ಯಮಯ ಭಾಷೆಗಳ ಜೊತೆ ಬೆರೆಯುವುದರ ಮೂಲಕ ಅವುಗಳನ್ನು ಪುನಶ್ಚೇತನಗೊಳಿಸಿದ್ದು, ಆ ಕಾರ್ಯಕರ್ತರಲ್ಲಿದ್ದ ವಿಶಿಷ್ಟ ಸಾಮರ್ಥ್ಯವನ್ನು ಪ್ರಕಟಿಸಿತು. ಹಿಂದುತ್ವವು ಭಾರತೀಯತ್ವ ಎಂಬುದಕ್ಕೆ ಸಮಾನಾರ್ಥಕ ಶಬ್ದವಾಗಿದ್ದು, ಅದು ಈ ದೇಶದ ನಾಗರಿಕರೆಲ್ಲರೂ ಗೌರವಿಸಿ ಆಚರಿಸುವ ಮೌಲ್ಯಗಳು ಮತ್ತು ಚಲನಶೀಲವಾದ ಸಂಸ್ಕೃತಿಯನ್ನು ಒಳಗೊಂಡಿರುತ್ತದೆ ಎಂಬ ಮೋಹನ್ ಭಾಗವತ್ ಅವರ ವಾದ ಸಮಂಜಸವೇ ಆಗಿದೆ. ಸಂಘದ ಸಂಸ್ಥಾಪಕರಾದ ಕೆ. ಬಿ. ಹೆಡಗೇವಾರ್ ಅವರ ಪ್ರಕಾರ, ಸಂಸ್ಕೃತಿ ಎಂಬುದು ಕೇವಲ ಬಾಹ್ಯ ಸಂಗತಿಯಲ್ಲ. ಬದಲಾಗಿ, ಅದೊಂದು ಪ್ರತಿಭಟನೆಯ ಮಾರ್ಗ, ರಾಷ್ಟ್ರೀಯ ಭಾವವನ್ನು ಜಾಗೃತಗೊಳಿಸುವ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ, ಮೌಲ್ಯಯುತ ಸಮಾಜದ ನಿರ್ಮಾಣಕ್ಕೆ ಒಂದು ಸಾಧನವಾಗಿತ್ತು.
ಒಂದು ವೈಚಾರಿಕ ಆಂದೋಲನವಾಗಿ ಪ್ರಾರಂಭವಾದ ಆರೆಸ್ಸೆಸ್, ಪ್ರಬಲ ರಾಜಕೀಯ ವಿರೋಧಗಳಿಂದಾಗಿ ಅನಿವಾರ್ಯವಾಗಿ ಒಂದು ಸಂಸ್ಥೆಯ ರೂಪವನ್ನು ತಳೆಯಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವೈಚಾರಿಕ ಆಂದೋಲನಗಳ ಭಾಗವಾಗಿರುವ ಹಲವು ಸಂಸ್ಥೆ-ಸಂಘಟನೆಗಳ ನಡುವೆ ನಡೆಯುತ್ತಿರುವ ಕದನಗಳಿಗೆ ಇಂದು ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಅವುಗಳಲ್ಲಿ ಹೆಚ್ಚಿನವು ಪೂರ್ವಾಗ್ರಹಗಳಿಂದ ಮತ್ತು ಕಟ್ಟುನಿಟ್ಟಾದ ಪರ-ವಿರೋಧಗಳೆಂಬ ವಿಭಜನೆಗಳಿಂದ ತುಂಬಿದ ದೃಷ್ಟಿಕೋನದಿಂದಲೇ ಎಲ್ಲವನ್ನೂ ನೋಡುತ್ತವೆ. ಆದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಂದೂ ಕುರುಡಾಗಿ ತನ್ನ ವಿಚಾರವೇ ಸರಿ ಎಂಬ ದುರಾಗ್ರಹಕ್ಕೊಳಗಾಗದೇ ತೆರೆದ ಮನಸ್ಸನ್ನು ಹೊಂದಿರುವ ಕಾರಣದಿಂದ, ಸಮಾನ ವಿಷಯಗಳ ಮೇಲೆ ಕೆಲಸ ಮಾಡುವ ಅನೇಕ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು, ಹಲವು ವಿಷಯಗಳಲ್ಲಿ ಅವರು ಸಂಘವನ್ನು ಒಪ್ಪಿಕೊಳ್ಳದಿದ್ದರೂ ಕೂಡ, ತನ್ನತ್ತ ಸೆಳೆಯುತ್ತಿದೆ. ಸಂಘದ ಈ ವಿಶಿಷ್ಟವಾದ ಗುಣವೇ ಸಂಕುಚಿತ ರಾಜಕೀಯ ಮತ್ತು ಸೈದ್ಧಾಂತಿಕ ವಿಭಜನೆಗಳನ್ನೂ ಮೀರಿ ಭಾರತದ ಸಂಕಥನವನ್ನು ಕಟ್ಟುವ ಸಾಮರ್ಥ್ಯವನ್ನು ಅದಕ್ಕೆ ತಂದುಕೊಟ್ಟಿದೆ. ಇದು ಸುಲಭವಾದ ಕಾರ್ಯವಲ್ಲ ಎನ್ನುವುದು ಹೌದಾದರೂ, ಅಸಾಧ್ಯವಾದದ್ದಂತೂ ಅಲ್ಲ.
ಹಿಂದುತ್ವ ಮತ್ತು ಹುಸಿ ಜಾತ್ಯತೀತತೆಗಳ ನಡುವಿನ ಸುದೀರ್ಘವಾದ ಸೈದ್ಧಾಂತಿಕ ಸಮರದಲ್ಲಿ, ಅನೇಕ ಪೂರ್ವಾಗ್ರಹಗಳೂ ಮತ್ತು ಗಾಯಗಳೂ ಉಂಟಾಗಿವೆಯೆನ್ನುವುದು ಸತ್ಯ. ಆದರೆ ಭವಿಷ್ಯದ ಭಾರತಕ್ಕೆ ಅವು ತಳಹದಿಯಾಗಲಾರವು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಕೇವಲ ವ್ಯಕ್ತಿನಿರ್ಮಾಣದಲ್ಲಿ ತೊಡಗಿದೆ ಎಂಬುದು ಭಾಗವತ್ ಅವರು ಹೇಳಿದುದರ ಅರ್ಥ ಅದು ಕೇವಲ ಸಜ್ಜನ ನಾಗರಿಕರನ್ನು ನಿರ್ಮಾಣ ಮಾಡುತ್ತಿದೆ ಎಂಬುದಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ದೃಷ್ಟಿಕೋನದಲ್ಲಿ ವ್ಯಕ್ತಿತ್ವವೆಂಬುದಕ್ಕೆ ವಿಶಾಲವಾದ ಅರ್ಥವಿದೆ. ಅಸಮಾನತೆ ಮತ್ತು ತಾರತಮ್ಯಗಳಿಂದ ಮುಕ್ತವಾದ ಆದರ್ಶ ಸಮಾಜ ನಿರ್ಮಾಣಕ್ಕೆ ಬೇಕಾದ ಮಾನಸಿಕ ತಯಾರಿಯೂ ಸಂಘದ ವ್ಯಕ್ತಿನಿರ್ಮಾಣ ಪ್ರಕ್ರಿಯೆಯ ಭಾಗವಾಗಿದೆ.
೧೯೭೪ ರಲ್ಲಿ ಆಗಿನ ಆರೆಸ್ಸೆಸ್ ಮುಖ್ಯಸ್ಥರಾದ ಬಾಳಾಸಾಹೇಬ್ ದೇವರಸರು ಸಮಾಜದಲ್ಲಿನ ಅಸಮಾನತೆಯನ್ನು, ಮುಖ್ಯವಾಗಿ ಅಸ್ಪೃಶ್ಯತೆಯನ್ನು, ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವ ಪಣತೊಟ್ಟರು. ಸಂಘವು ಇದನ್ನು ತನ್ನ ಒಂದು ಪ್ರಮುಖ ಆದ್ಯತೆಯನ್ನಾಗಿ ಮಾಡಿಕೊಂಡಿದ್ದರೂ, ಆ ಗುರಿಯನ್ನು ತಲುಪಲು ಇನ್ನೂ ಸಾಧ್ಯವಾಗಿಲ್ಲ. ಕಳೆದ ಮೂರು ದಶಕಗಳಿಂದ ಸೇವೆಯ ಮೂಲಕ ತನ್ನ ಈ ಉದಾತ್ತ ಗುರಿಯನ್ನು ತಲುಪುವ ಪ್ರಯತ್ನವನ್ನು ಸಂಘ ಮಾಡುತ್ತಲೇ ಇದೆ. ಮುಂದಿನ ದಿನಗಳಲ್ಲಿ, ರಾಷ್ಟ್ರದ ಸಾಮಾಜಿಕ-ಆರ್ಥಿಕ ಪರಿದೃಶ್ಯದಲ್ಲಿ ಪರಿವರ್ತನೆ ತರುವುದೇ ಭಾರತದ ಸಂಕಥನದ ಕೇಂದ್ರಬಿಂದುವಾಗಲಿದೆ. ಮತ್ತು, ಅದರಲ್ಲಿನ ಯಶಸ್ಸು ಮಾತ್ರವೇ ಪಾಶ್ಚಾತ್ಯ ಚಿಂತನೆಯಿಂದ ಪ್ರಭಾವಿತವಾದ ಪ್ರಾದೇಶಿಕವಾದಗಳ ಸುಳಿಯಿಂದ ಭಾರತವನ್ನು ಮೇಲೆತ್ತಬಲ್ಲದು. ಅತಿಯಾದ ರಾಜಕೀಯವು ಅತಿಯಾದ ಸಾಂಸ್ಕೃತಿಕವಾದದಷ್ಟೇ ಕೆಟ್ಟದ್ದು. ಆದ್ದರಿಂದಲೇ, ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಆಲೋಚನೆಗಳನ್ನು ಕೇವಲ ಸಾಂಸ್ಕೃತಿಕ ಮತ್ತು ವೈಚಾರಿಕ ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸದೇ, ಸಾಮಾಜಿಕ-ಆರ್ಥಿಕ ಅಂಶಗಳಿಗೂ ವಿಸ್ತರಿಸಿದೆ. ಭಾರತದ ಸಂಕಥನವೆಂಬುದು, ಕೇವಲ ನಮ್ಮ ಸಾಂಪ್ರದಾಯಿಕ ಜ್ಞಾನಪರಂಪರೆಯನ್ನು ಪುನರುಜ್ಜೀವನಗೊಳಿಸುವದಷ್ಟಕ್ಕೇ ಸೀಮಿತವಾದುದಲ್ಲ. ಸಮಕಾಲೀನ ಜಾಗತಿಕ ಸಮಸ್ಯೆಗಳನ್ನು ಎದುರಿಸುವುದೂ ಅದರ ಭಾಗವೇ ಆಗಿದೆ. ಒಂದು ವೈಶ್ವಿಕ ದೃಷ್ಟಿಕೋನವನ್ನಿಟ್ಟುಕೊಂಡು ಭಾರತದಲ್ಲಿ ಪರಿವರ್ತನೆ ತರುವುದರ ಜೊತೆಗೆ, ಭಾರತೀಯ ಚಿಂತನೆಗಳನ್ನು ವಿಶ್ವ ಸಮುದಾಯದೊಡನೆ ಹಂಚಿಕೊಳ್ಳುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಯಣದಲ್ಲಿನ ಹೊಸ ಅಧ್ಯಾಯವಾಗಲಿದೆ ಎನ್ನಬಹುದು.
ಜನರನ್ನು ಬುಡಮೇಲು ಮಾಡಿಯೇ ತಾನು ವಿಜೃಂಭಿಸುವ, ವ್ಯಕ್ತಿಕೇಂದ್ರಿತ ಚಿಂತನೆಯನ್ನು ಪ್ರಚೋದಿಸುವ ಮತ್ತು ಸ್ಪರ್ಧಾತ್ಮಕ ಭೋಗವಾದವನ್ನು ವೈಭವೀಕರಿಸುವ ನವ ಉದಾರವಾದದ (ನಿಯೋ ಲಿಬರಲಿಸಂ) ಭಾರದಿಂದ ಪ್ರಪಂಚವನ್ನು ಮುಕ್ತಗೊಳಿಸಬೇಕಾದ್ದು ಇಂದಿನ ಅಗತ್ಯ. ಈ ಉದಾರವಾದದಿಂದಾಗಿ ಪ್ರಾಚೀನ ಸೂಕ್ಷ್ಮ ಪರಂಪರೆಗಳು, ಸಾಂಸ್ಕೃತಿಕ ಜನಜೀವನ ಹಾಗೂ ಕೌಟುಂಬಿಕ ವ್ಯವಸ್ಥೆಗಳು ಅಳಿವಿನ ಅಂಚಿಗೆ ಬಂದು ನಿಂತಿವೆ. ಭಾರತೀಯ ಜೀವನಪದ್ಧತಿಯು ಆಧ್ಯಾತ್ಮಿಕತೆ ಮತ್ತು ಬಹುತ್ವವನ್ನು ಆಧರಿಸಿರುವ ಚಿಂತನೆಗಳಿಂದ ವಿಕಾಸವಾಗಿರುವಂಥದ್ದು. ರಾಜಕೀಯ ಪ್ರಭುತ್ವಕ್ಕಿರುವ ಅವಕಾಶ ಮತ್ತು ಸವಾಲುಗಳೇ ಬೇರೆ, ಸಾಂಸ್ಕೃತಿಕ ಸಂಘಟನೆಯೊಂದಕ್ಕಿರುವ ಅವಕಾಶ ಮತ್ತು ಸವಾಲುಗಳೇ ಬೇರೆ. ಸಾಂಸ್ಕೃತಿಕ ಸಂಘಟನೆಯೊಂದು ಸಮಾಜದಲ್ಲಿ ಪರಿವರ್ತನೆ ತರುವ ಮತ್ತು ದೇಶೀಯ ಚಿಂತನೆಗಳ ಆಧಾರದ ಮೇಲೆ ಜನಜೀವನವನ್ನು ಪ್ರಭಾವಿಸುವ ಸಾಧ್ಯತೆಗಳನ್ನು ಹೊಂದಿರುತ್ತದೆ. ತನ್ನ ಸುದೀರ್ಘ ಪಯಣದಲ್ಲಿ ಈಗ ಹೊಸ ಪಾತ್ರವನ್ನು ನಿರ್ವಹಿಸಲು ಸಿದ್ಧವಾಗಿ ಮುನ್ನಡೆಯುತ್ತಿರುವ ಸಂಘಕ್ಕೆ, ಪರಿಹಾರಕ್ಕಾಗಿ ಕಾಯುತ್ತಿರುವ ಹಲವು ಮಹತ್ತ್ವದ ಸಂಗತಿಗಳು ಎದುರಾಗಲಿವೆ.