• Samvada
  • Videos
  • Categories
  • Events
  • About Us
  • Contact Us
Sunday, January 29, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

‘ಸ್ವದೇಶೀ’- ಒಂದು ಜೀವನಶೈಲಿ

Vishwa Samvada Kendra by Vishwa Samvada Kendra
March 4, 2021
in Articles
251
0
‘ಸ್ವದೇಶೀ’- ಒಂದು ಜೀವನಶೈಲಿ
493
SHARES
1.4k
VIEWS
Share on FacebookShare on Twitter

ನಮ್ಮ ದೇಶದ ಜ್ಞಾನಿಗಳು, ಯೋಗಿಗಳು ಸಹಸ್ರಾರು ವರ್ಷಗಳಿಂದ ನಡೆಸಿಕೊಂಡು ಬಂದಂಥ ಜೀವನ ನಡವಳಿಕೆಗಳೇ ಸ್ವದೇಶೀ ಜೀವನಶೈಲಿ. ನಮ್ಮ ನಂಬಿಕೆಯ ಪ್ರಕಾರ ನಮ್ಮ ಜೀವನದ ಉದ್ದೇಶವೆಂದರೆ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’. ಮೋಕ್ಷ ನಮ್ಮ ಮರಣಾನಂತರ ದೊರಕುವುದು ಎನ್ನುವುದೊಂದು ಮಿಥ್ಯಾಕಲ್ಪನೆ. ಎಲ್ಲ ಬಗೆಯ ರಾಗದ್ವೇಷಗಳನ್ನು ಬಿಟ್ಟರೆ ಅದೇ ಮೋಕ್ಷ. ಯಾರ ಜೀವನ ಸರಳವಾಗಿರುತ್ತದೆಯೋ ಅವನು ಸುಖಿಯಾಗಿರುತ್ತಾನೆ, ಶಾಂತವಾಗಿರುತ್ತಾನೆ ಎನ್ನುತ್ತಾರೆ ನಮ್ಮ ಜ್ಞಾನಿಗಳು.

ಮನುಷ್ಯನ ಮನಸ್ಸು ಸದಾ ಏನನ್ನಾದರೂ ಬಯಸುತ್ತಲೇ ಇರುತ್ತದೆ; ಮನಸ್ಸು ಬಯಸಿದ್ದನ್ನೆಲ್ಲ ನೀಡಿದರೂ, ಆಸೆ ಹೆಚ್ಚುತ್ತಿರುತ್ತದೆಯೇ ವಿನಾ ಕಡಮೆಯಾಗುವುದಿಲ್ಲ. ಜೀವನವನ್ನು ಸರಳ ಮಾಡಿಕೊಂಡಷ್ಟೂ ಮನುಷ್ಯ ಆನಂದವಾಗಿರುತ್ತಾನೆ. ನಮ್ಮ ಜೀವನದ ಉದ್ದೇಶವೇನಿದೆ ಅದು ಆನಂದಮಾರ್ಗ. ನಮ್ಮ ಉಪನಿಷತ್ತುಗಳಲ್ಲಿ ಕೋಶಗಳ ಬಗ್ಗೆ ಉಲ್ಲೇಖಿಸಲ್ಪಟ್ಟಿದೆ: ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ, ಆನಂದಮಯಕೋಶ ಎಂದು. ನಾವು ಆನಂದಮಯಕೋಶವನ್ನು ತಲಪಬೇಕು. ಆ ಆನಂದ ಎಲ್ಲಿದೆ? ಮನುಸ್ಮøತಿಯ ಪ್ರಸಿದ್ಧ ವಾಕ್ಯ ಇದು:

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಸರ್ವಂ ಪರವಶಂ ದುಃಖಂ

ಸರ್ವಮಾತ್ಮವಶಂ ಸುಖಂ|

ಏತದ್ವಿದ್ಯಾತ್ ಸಮಾಸೇನ

ಲಕ್ಷಣಂ ಸುಖದುಃಖಯೋಃ||

ಪಾಶ್ಚಿಮಾತ್ಯರ ದೃಷ್ಟಿಯಲ್ಲಿ ಜೀವನದ ಉದ್ದೇಶ ಅರ್ಥ ಮತ್ತು ಕಾಮ; ನಮ್ಮ ಪ್ರಕಾರ ಅರ್ಥ ಮತ್ತು ಕಾಮದಿಂದ ಬಿಡುಗಡೆ ಎಂದು. ಸರಳತೆಯ ಮೂಲಕ ಆನಂದವನ್ನೂ ಆತ್ಮೋನ್ನತಿಯನ್ನೂ ಎರಡನ್ನೂ ಸಾಧಿಸುವುದು ನಮ್ಮ ಪರಿಕಲ್ಪನೆ.

ಉಪಭೋಗದಿಂದ ಪ್ರಕೃತಿನಾಶ

ಸರಳತೆಯಲ್ಲಿ ಪ್ರಕೃತಿಗೆ ಪೂರಕವಾದ ಬದುಕು ಇರುತ್ತದೆ. ಮಾನವಜೀವನಕ್ಕೂ ಪ್ರಕೃತಿಗೂ ಪರಸ್ಪರ ಸಂಬಂಧವಿದೆ. ಇಂದು ಬೃಹತ್ ಪ್ರಮಾಣದಲ್ಲಿ ಪ್ರಾಕೃತಿಕ ಸಂಪತ್ತು ಸೂರೆಗೊಳ್ಳುತ್ತಿದ್ದು, ಪ್ರಕೃತಿಯ ನಾಶವಾಗುತ್ತಿದೆ. ನಾವು ಅಳವಡಿಸಿಕೊಂಡಿರುವ ಉಪಭೋಗ (ಕನ್‍ಸ್ಯೂಮರಿಸಂ) ಜೀವನಕ್ರಮವೂ ಪ್ರಕೃತಿಗೆ ಮಾರಕವಾಗಿದೆ. ಉದಾಹರಣೆಗೆ ಕರ್ನಾಟಕದಲ್ಲಿ ಶೇ. 22ರಷ್ಟು ಮಾತ್ರ ಕಾಡು ಇದೆ. ತಜ್ಞರ ಅಭಿಪ್ರಾಯದಂತೆ ಶೇ. 34ರಷ್ಟು ಕಾಡು ಇರಬೇಕು. ಕಾಡು ಕಡಮೆ ಆಗುತ್ತಹೋದಂತೆ ಮೋಡವಿದ್ದರೂ ಅದನ್ನು ಆಕರ್ಷಿಸುವ ಸಾಮಥ್ರ್ಯ ಕಾಡಿಗೆ ಇರುವುದಿಲ್ಲ; ಅಂತರ್ಜಲ ಪೂರಣವಾಗುವುದಿಲ್ಲ. ಕಾಡಿದ್ದರೆ ಮಳೆ, ಮಳೆ ಇದ್ದರೆ ಅಂತರ್ಜಲ. ಕಾಡು ಇಲ್ಲದಿದ್ದರೆ ಮಳೆ ಬಂದರೂ ನೀರು ಹರಿದುಹೋಗಿ ಸಮುದ್ರವನ್ನು ಸೇರುತ್ತದೆಯೇ ವಿನಾ ಭೂಮಿಯೊಳಕ್ಕೆ ಇಂಗುವುದಿಲ್ಲ.

ಅನಾರೋಗ್ಯದಿಂದಾಗಿ ಟೇಬಲ್ ಬಳಕೆ ಮಾಡುವುದು ಬೇರೆ ಮಾತು. ಆದರೆ ಟೇಬಲ್ ಬಳಕೆಯೆ ಸ್ವಭಾವವಾಗಿ ಪರಿವರ್ತನೆಯಾಗುತ್ತಿರುವುದು ಅನಾರೋಗ್ಯಕರ ಬೆಳವಣಿಗೆ. ನಮ್ಮಲ್ಲಿ ‘ನಾವಾಗಿ ಬಡಿಸಿಕೊಳ್ಳಬಾರದು, ಬೇರೆಯವರು ಬಡಿಸಬೇಕು’ ಎನ್ನುವ ಪರಿಪಾಟಿಯಿದೆ. ಬಡಿಸುವುದು ಅನ್ನವನ್ನಲ್ಲ, ಸಿಹಿಯನ್ನಲ್ಲ; ಪ್ರೀತಿಯನ್ನು. ಬಡಿಸಿದಾಗ ತಾಯಿ-ಮಕ್ಕಳ ಸಂಬಂಧ, ತಂಗಿ-ಅಣ್ಣನ ಸಂಬಂಧ, ಸಂಬಂಧಿಕರ ಸಂಬಂಧ ವೃದ್ಧಿಸುತ್ತದೆ. ನಾವು ರೂಢಿಸಿಕೊಂಡ ಟೇಬಲ್ ಊಟದಲ್ಲಿ ಬಡಿಸುವ ಪ್ರಕ್ರಿಯೆಗೆ ತಡೆ ಉಂಟಾಗುವುದರಿಂದ ಆತ್ಮೀಯತೆ, ಪರಸ್ಪರ ಸಂಬಂಧದ ಬೆಳವಣಿಗೆಗೂ ಅಡ್ಡಿಯುಂಟಾಗುತ್ತದೆ. ಮಾತ್ರವಲ್ಲ, ಟೇಬಲ್‍ಸಂಸ್ಕøತಿ ಪ್ರಕೃತಿನಾಶಕ್ಕೂ, ನಮ್ಮ ಸಂಸ್ಕøತಿಯು ಶಿಥಿಲಗೊಳ್ಳುವುದಕ್ಕೂ ಕಾರಣವಾಗುತ್ತದೆ. ಹೆಚ್ಚು ಸಮಯ ಕುರ್ಚಿಯ ಮೇಲೆ ಕುಳಿತಿರುವುದರಿಂದ ಮಂಡಿಯ ಕೆಳಗೆ ರಕ್ತಪರಿಚಲನೆ ಆಗುವುದಿಲ್ಲ. ಆರೋಗ್ಯಸಂಬಂಧಿ ಸಮಸ್ಯೆಯೂ ತಲೆದೋರುತ್ತದೆ. ಆದರೆ ಟೇಬಲ್ ಬಳಕೆ ಈಗ ಸ್ವಭಾವವಾಗುತ್ತಿದೆ.

ಉಪಭೋಗದಿಂದ ಸಂಸ್ಕøತಿನಾಶ

ಉಪಭೋಗದ ಸಂಸ್ಕøತಿಯು ಪ್ರಕೃತಿಯ ಸಂಬಂಧ, ಮಾನವ ಸಂಬಂಧದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾಗುತ್ತಿದೆ. ಉಪಭೋಗದ ಫಲವಾದ ಫ್ರಿಡ್ಜ್ ಬಳಕೆಯ ಒಂದು ಪರಿಣಾಮವೆಂದರೆ ದಾನದ ಪ್ರವೃತ್ತಿ ಕಡಮೆಯಾಗಿರುವುದು. ಮಿಗತೆ ಆಹಾರವನ್ನು ಭಿಕ್ಷುಕರಿಗೋ ಹಸುಕರುಗಳಿಗೋ ನೀಡುತ್ತಿದ್ದ ನಾವಿಂದು ‘ನಾಳೆ ನಾವೇ ಊಟ ಮಾಡೋಣ’ ಎಂದು ಕಾಪಿಡುತ್ತೇವೆ. ನಮ್ಮ ಶರಣರು ‘ಹಸಿವಾಗದೆ ಉಣಬೇಡ, ಹಸಿವಾದರೆ ತಂಗಳು ಉಣಬೇಡ’ಎಂದಿದ್ದಾರೆ. ತಂಗಳು ತಿನ್ನುವುದು ಅನಾರೋಗ್ಯಕರ ಎನ್ನುತ್ತಾರೆ. ಫ್ರಿಡ್ಜ್‍ನಲ್ಲಿ ಝೀರೋ ಡಿಗ್ರಿ ಉಷ್ಣತೆಯಲ್ಲಿ ಇಟ್ಟ ಮಿಗತೆ ಆಹಾರವನ್ನು ತಿನ್ನುವುದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಕೊರೊನಾ ಕಾಲದಲ್ಲಿ ಆಯುರ್ವೇದವೈದ್ಯರು ‘ಯಾವುದೇ ಕಾರಣಕ್ಕೂ ಐಸ್‍ಕ್ರೀಮ್, ತಂಪಾದ ಪದಾರ್ಥ ತಿನ್ನಬೇಡಿ, ಕೊರೊನಾ ಬರುವ ಸಂಭವ ಜಾಸ್ತಿ’ಎನ್ನುವ ಎಚ್ಚರಿಕೆಯನ್ನು ಕೊಡುತ್ತಲೇ ಇದ್ದಾರೆ. ಫ್ರಿಡ್ಜ್‍ನಲ್ಲಿ ಇಟ್ಟ ತಂಪಾದ ಪದಾರ್ಥದಿಂದ ಶೀತ ನೆಗಡಿ ಹೆಚ್ಚಾಗುವ ಸಂಭವ ಜಾಸ್ತಿ.

ಫ್ರಿಡ್ಜ್‍ನಿಂದ ಹೊರಬೀಳುವ ಕ್ಲೋರೋಫ್ಲೋರೋಕಾರ್ಬನ್‍ನಿಂದಾಗಿ ಓಜೋನ್ ಪದರ ನಾಶವಾಗುತ್ತಿದ್ದು, ಸೂರ್ಯನ ಅತಿನೇರಳೆ ಕಿರಣಕ್ಕೆ ತಡೆ ಉಂಟಾಗುತ್ತಿಲ್ಲ ಎಂದು ವಿಜ್ಞಾನಿಗಳು ಚಿಂತೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಅಧಿಕವಾದ ವಿದ್ಯುತ್‍ಬಿಲ್‍ನಿಂದ ಕುಟುಂಬದ ಆರ್ಥಿಕತೆಗೂ ಹೊರೆ.

ಉಪಭೋಗದ ಇನ್ನೊಂದು ಫಲ ಪ್ರತಿ ಮನೆಯಲ್ಲೂ ಇರುವ ಟಿವಿ. ಈ ಘಟನೆಯಾಗಿ ಸುಮಾರು ಇಪ್ಪತ್ತು ವರ್ಷ ಕಳೆದಿರಬಹುದು. ಒಮ್ಮೆ ಒಬ್ಬರ ಮನೆಗೆ ಹೋದಾಗ ಆ ಮನೆಯ ಒಡತಿ ಹೇಳಿದರು, “ನಮ್ಮ ಸಂಬಂಧಿಯೊಬ್ಬರು ತೀರಿಕೊಂಡಿದ್ದಾರೆ” ಎಂದು. ಸಂಬಂಧಿಯೊಬ್ಬರು ತೀರಿಕೊಂಡಾಗ ಹೋಗುವುದು ಸಹಜ ತಾನೆ? ಹಾಗೆಂದು ಕೇಳಿದೆ, “ನೀವು ಹೋಗುವುದಿಲ್ವಾ?” ಆಕೆಯಿಂದ ಬಂದ ಉತ್ತರ ಹೀಗಿತ್ತು: “ಇಲ್ಲ, ಟಿವಿಯಲ್ಲಿ ‘ಸಂಕ್ರಾಂತಿ’ ಧಾರಾವಾಹಿ ಬರುತ್ತಿದೆ. ಅದು ತಪ್ಪಿಹೋಗುತ್ತದೆ.” ಸಂಬಂಧಿಕರ ಸಾವಿಗಿಂತ ಧಾರಾವಾಹಿಯೇ ಮುಖ್ಯವೇ?

ಇನ್ನು ಧಾರಾವಾಹಿಯ ಕಥೆ ಹೇಗೆ ಸಾಗಬೇಕು ಎಂದು ನಿಶ್ಚಯ ಮಾಡುವುದು ಕತೆಗಾರನಾಗಲಿ, ನಿರ್ದೇಶಕನಾಗಲಿ ಅಲ್ಲ; ಬದಲಾಗಿ ಜಾಹೀರಾತು ನೀಡುವ ಕಂಪೆನಿ ಅದನ್ನು ನಿರ್ಧರಿಸುತ್ತದೆ. ಬಹುತೇಕ ಮಾದಕಪಾನೀಯ ಸೇವನೆ, ಮನೆಮುರಿಯುವ ಕಥೆಗಳನ್ನು ವೈಭವೀಕರಿಸುತ್ತಿರುವುದು ದುರದೃಷ್ಟಕರ.

ಒಮ್ಮೆ ಯಲ್ಲಾಪುರದ ಒಬ್ಬರ ಮನೆಗೆ ಹೋದಾಗ ಅವರು ಹೇಳುತ್ತಿದ್ದರು, “ನಮ್ಮಲ್ಲಿ ಹಿಂದೆ ದೂರವಾಣಿ ಇಲ್ಲದಿದ್ದಾಗ ಯಾವುದೇ ಸಮಾರಂಭವಾದರೂ ಎಲ್ಲರ ಮನೆಗೂ ಖುದ್ದಾಗಿ ಹೋಗಿ ಆಮಂತ್ರಿಸಿ ಬರುತ್ತಿದ್ದೆವು. ಮುಖತಃ ಕ್ಷೇಮಸಮಾಚಾರ ಮಾತಾಡಿ ಬರುವ, ಪರಸ್ಪರ ಹೋಗಿಬರುವ ರೂಢಿ ಹೆಚ್ಚಾಗಿತ್ತು. ಈಗ ಫೋನ್ ಅಥವಾ ಎಸ್.ಎಂ.ಎಸ್. ಮೂಲಕ ಕ್ಷಣಾರ್ಧದಲ್ಲಿ ಆಮಂತ್ರಿಸಿಬಿಡುತ್ತೇವೆ. ಪರಸ್ಪರ ಸಂಬಂಧದ ಮೇಲೆ ಕಂಡೂಕಾಣದಂತೆ ಪರಿಣಾಮ ಆಗುತ್ತಿದೆ” ಎಂದಿದ್ದರು.

ಕ್ಷೀಣಿಸುತ್ತಿರುವ ಕರ್ಮಸಂಸ್ಕøತಿ

ಪತಿ-ಪತ್ನಿ ಇಬ್ಬರೂ ದುಡಿಯುವ ಮನೆಯಲ್ಲಿ ಅವರ ಧಾವಂತದ ಬದುಕಿಗೆ ಬಟ್ಟೆ ಒಗೆಯುವ ಯಂತ್ರದ ಮೊರೆಹೊಗುವುದು ಅನಿವಾರ್ಯ. ಆದರೆ ಮನೆಯಲ್ಲಿ ಬಟ್ಟೆ ಒಗೆಯುವ ಯಂತ್ರ ಇರಲೇಬೇಕು ಎನ್ನುವ ಭಾವನೆ ವ್ಯಾಪಕವಾಗುತ್ತಿರುವುದು ವಿಪರ್ಯಾಸ. ಬಟ್ಟೆ ಒಗೆಯುವ ಯಂತ್ರವು ಮೂರರಿಂದ ನಾಲ್ಕುಪಟ್ಟು ನೀರನ್ನು ಹೆಚ್ಚು ಬಳಕೆ ಮಾಡುತ್ತದೆ. ಕೆಲಸದವಳು ಒಂದಷ್ಟು ಹೆಚ್ಚು ಕೇಳಿದರೂ ಕೊಡದ ನಾವು ವಾಶಿಂಗ್‍ಮೆಶಿನ್ ಖರೀದಿಸುವ ನಮ್ಮ ಪ್ರವೃತ್ತಿಯಿಂದಾಗಿ ನಮ್ಮ ಕರ್ಮಸಂಸ್ಕøತಿಯ ಮೇಲೆ, ಪ್ರಕೃತಿಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಶಾರೀರಿಕ ಶ್ರಮದ ಕೊರತೆಯಿಂದ ಮಧುಮೇಹದಂತಹ ಹಲವು ಕಾಯಿಲೆಗಳು ಉಂಟಾಗುವುದಲ್ಲದೆ, ಉದ್ಯೋಗಸಂಸ್ಕøತಿಯೂ ನಾಶವಾಗುತ್ತದೆ.

ಮಾಲ್‍ಗಳ ದೊಡ್ಡಮಟ್ಟದ ಡಿಸ್ಕೌಂಟ್, ಫ್ರೀ ಎಂಬೆಲ್ಲ ಘೋಷಣೆ ವಿಶೇಷ ಆಕರ್ಷಣೆ. ಇದು ಮೇಲ್ನೋಟಕ್ಕೆ ಲಾಭದಾಯಕ ಎನಿಸಬಹುದು; ಆದರೆ ಒಂದು ಶರ್ಟ್ ತಯಾರಿಸಲು ಐದುಸಾವಿರ ಲೀಟರ್ ನೀರು ಬೇಕಾದರೆ, ಒಂದು ಸೀರೆ ತಯಾರಿಸಲು ಹದಿನೈದು ಸಾವಿರ ಲೀಟರ್ ನೀರು ಅಗತ್ಯ.

ಪ್ರಕೃತಿಯ ಶೋಷಣೆ

ಉಪಭೋಗದ ಸಂಸ್ಕøತಿಯ ಅನುಕರಣೆಯಿಂದ ಪ್ರಕೃತಿಯು ಶೋಷಿಸಲ್ಪಡುತ್ತದೆಯಲ್ಲದೆ, ಮಾನವಸಂಬಂಧ, ಸಂಸ್ಕøತಿ, ಉದ್ಯೋಗ, ಜೀವನಮೌಲ್ಯವೂ ಶಿಥಿಲವಾಗುತ್ತಿವೆ. ಯಂತ್ರವು ಮನುಷ್ಯನಿಗೆ ಸಹಾಯಕವಾಗಬೇಕಿತ್ತು, ತದ್ವಿರುದ್ಧವಾಗಿ ಯಂತ್ರಕ್ಕೆ ಮನುಷ್ಯನೇ ಸಹಾಯಕನಾಗುತ್ತಿದ್ದಾನೆ. ನಮ್ಮನ್ನು ಆಳುತ್ತಿರುವ ಉಪಭೋಗವು ಒಂದು ವಸ್ತುವಿಗೆ ಅರಿವಿಲ್ಲದೆ ನಮ್ಮನ್ನು ಗುಲಾಮರನ್ನಾಗಿಸುತ್ತಿದೆ. ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಪ್ರೀತಿಸುವುದನ್ನು ಮರೆತು ವಸ್ತುವನ್ನು ಪ್ರೀತಿಸುತ್ತ ಅವುಗಳ ಅತಿಬಳಕೆ ಮಾಡುತ್ತಿದ್ದಾನೆ. ಇದೊಂದು ಬಗೆಯ ಆಧುನಿಕತೆಯ ರೋಗ ಎನ್ನಬಹುದು.

ನಮ್ಮಲ್ಲಿ ‘ಅಣೆಕಟ್ಟು ಬೇಡ, ಅಣುಸ್ಥಾವರ ಬೇಡ’ ಎಂದೆಲ್ಲ ದೊಡ್ಡಮಟ್ಟದ ಚಳವಳಿಗಳು ನಡೆಯುತ್ತವೆ. ಆದರೆ ನಮಗೆ ಮಾತ್ರ ಇಪ್ಪತ್ತನಾಲ್ಕು ಗಂಟೆ ವಿದ್ಯುತ್ ಬೇಕು. ನಮ್ಮ ಜೀವನಶೈಲಿಯಿಂದಾಗಿ ಸರ್ಕಾರದ ಮೇಲೆ ಒತ್ತಡ ಬೀಳುವುದರ ಪರಿಣಾಮವಾಗಿ ಜನರ ಆಶೋತ್ತರಗಳ ಪೂರೈಕೆಗೆ ಬೃಹದ್‍ಯೋಜನೆಗಳ ಕುರಿತು ಯೋಚಿಸಬೇಕಾಗುತ್ತದೆ; ಅವು ಪ್ರಕೃತಿಯ ಮೇಲಿನ ದಬ್ಬಾಳಿಕೆಗೂ ಕಾರಣವಾಗುವಂಥದು.

ಇವೆಲ್ಲ ದೃಷ್ಟಿಯಿಂದ ನಮ್ಮ ಜೀವನಶೈಲಿ ಸರಳವಾಗಿದ್ದಷ್ಟೂ ಒಳ್ಳೆಯದು. ಅನಿವಾರ್ಯ ಬೇರೆ, ಅವಶ್ಯ ಬೇರೆ. ಊಟ, ಮಾನಮುಚ್ಚಲು ಬಟ್ಟೆ, ಕಾಲಿಗೆ ಚಪ್ಪಲಿ ಇವೆಲ್ಲ ಅನಿವಾರ್ಯ. ಮೊಬೈಲ್, ಫ್ರಿಡ್ಜ್, ವಾಶಿಂಗ್‍ಮೆಶಿನ್ ಇವೆಲ್ಲ ಉಪಯುಕ್ತವಾದವುಗಳು; ಆದರೆ ಅವು ಇಲ್ಲದಿದ್ದರೂ ನಾವು ಆನಂದವಾಗಿ ಬದುಕಬಹುದು.

ಇದೊಂದು ಜನಜನಿತ ವ್ಯಂಗ್ಯಕಥೆ. ಒಮ್ಮೆ ಒಬ್ಬ ಬ್ಯಾಂಕ್ ಮ್ಯಾನೇಜರ್ ಒಂದು ಹಳ್ಳಿಗೆ ಹೋಗುತ್ತಾನೆ. ಕಟ್ಟೆಯ ಮೇಲೆ ರೈತನೊಬ್ಬ ಕೆಲಸ ಮಾಡಿ ಆಯಾಸ ಪರಿಹಾರಕ್ಕೆಂದು ಮಲಗಿರುವುದನ್ನು ನೋಡಿದ ಮ್ಯಾನೇಜರ್ ಆತನ ಬಳಿ ಹೋಗಿ ಪ್ರಶ್ನಿಸುತ್ತಾನೆ,

“ಯಾಕೆ ಮಲಗಿದ್ದೀಯಾ?”

“ಕೆಲಸ ಮಾಡಿ ಆಯಾಸವಾಗಿದೆ. ಪರಿಹರಿಸಿಕೊಳ್ಳಲು ಮಲಗಿದ್ದೇನೆ” ಎಂದ, ಆ ರೈತ.

“ಏಳು, ಏಳು” ಮ್ಯಾನೇಜರ್ ಆತನನ್ನು ಎಬ್ಬಿಸುವ ಪ್ರಯತ್ನ ಮಾಡಿದ.

“ಎದ್ದು ಏನು ಮಾಡಬೇಕು?” ರೈತ ಪ್ರಶ್ನಿಸಿದ.

“ಬ್ಯಾಂಕ್ ಸಾಲ ಕೊಡುತ್ತದೆ.”

“ತೆಗೆದುಕೊಂಡು ಏನು ಮಾಡಬೇಕು?” ರೈತ ಮರು ಪ್ರಶ್ನಿಸಿದ.

“ಚೆನ್ನಾಗಿ ಉಳುಮೆ ಮಾಡಿ ಹೆಚ್ಚು ಬೆಳೆಯನ್ನು ತೆಗೆಯಬಹುದು” ಮ್ಯಾನೇಜರ್ ಹೇಳಿದ.

“ಆಮೇಲೆ?” ರೈತ ಕೇಳಿದ.

“ಅವನ್ನೆಲ್ಲ ಮಾರಾಟ ಮಾಡಿ ಹೆಚ್ಚು ಹಣ ಗಳಿಸಿ ದೊಡ್ಡ ಮನೆ ಕಟ್ಟಬಹುದು” ಮ್ಯಾನೇಜರ್ ಮಾರುತ್ತರ ನೀಡಿದ.

“ಆಮೇಲೆ?” ರೈತ ಕೇಳಿದ.

“ಆರಾಮವಾಗಿ ಇರಬಹುದು” ಮ್ಯಾನೇಜರ್ ಹೇಳಿದ.

“ನಾನು ಈಗಲೂ ಆರಾಮವಾಗಿಯೇ ಇದ್ದೇನಲ್ಲ!” ಎಂದು ಹೇಳಿ ರೈತ ಪುನಃ ಆರಾಮವಾಗಿ ಮಲಗಿದ.

ಶಾರದಾಮಾತೆ ಹೇಳುತ್ತಿದ್ದರು, “ಮನುಷ್ಯ ಕ್ಷಣದ ಸುಖಕ್ಕೋಸ್ಕರ ಬೆಟ್ಟದಷ್ಟು ಕಷ್ಟಪಡುತ್ತಾನೆ. ಆದರೆ ಒಂದು ಕ್ಷಣ ಅಧ್ಯಾತ್ಮಸಾಧನೆ, ಸರಳತೆಯ ಸಾಧನೆ ಮಾಡಿದರೆ ಬೆಟ್ಟದಷ್ಟು ಸುಖ ಸಿಗುತ್ತದೆ” ಎಂದು.

ಕ್ರೆಡಿಟ್‍ಕಾರ್ಡ್ ಸಂಸ್ಕøತಿಯಿಂದ ಜನರು ಸಾಲದ ಸುಳಿಯೊಳಗೆ ಸಿಲುಕುತ್ತಾರೆ. ಹಾಗೆಂದ ಮಾತ್ರಕ್ಕೆ ಆಧುನಿಕತೆ ಬೇಡವೆಂದಲ್ಲ. ಆದರೆ ಅತಿಯಾದ ಉಪಭೋಗ ಅಪಾಯಕಾರಿ ಅಷ್ಟೆ.

ಯಂತ್ರದಾಸ್ಯ

ಯಂತ್ರಗಳ ಇನ್ನೊಂದು ಅಪಾಯವೆಂದರೆ ಸಮಸಂಸ್ಕøತಿಯ ನಾಶದ ಜೊತೆಗೆ ಸಂಪತ್ತಿನ ಕೇಂದ್ರೀಕರಣ ಹಾಗೂ ದೊಡ್ಡ ಪ್ರಮಾಣದಲ್ಲಿ ಉದ್ಯೋಗನಾಶ. ಉಪಭೋಗದ ಫಲವಾಗಿ ಬೃಹದ್ ಯಂತ್ರಗಳ ಆವಿಷ್ಕಾರವಾಗುತ್ತಿದ್ದು, ಅವು ಮನುಷ್ಯನ ಸ್ಥಾನವನ್ನು ಆಕ್ರಮಿಸುತ್ತಿವೆ. ಪೆಪ್ಸಿಕೋಲಾ ಬಂದ ಮೇಲೆ ಭಾರತದಲ್ಲಿ ಹತ್ತುಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆನ್ನಲಾಗಿದೆ. ಮೂರುಸಾವಿರ ಸ್ಥಳೀಯಸಂಸ್ಥೆಗಳು ಬಾಗಿಲು ಮುಚ್ಚಿವೆ.

ಸರಾಸರಿ ಲೆಕ್ಕಹಾಕಿದರೆ ನಮ್ಮ ದೇಶದ ಶೇ. ಐವತ್ತರಷ್ಟು ಸಂಪತ್ತು ಕೆಲವೇ ಕೆಲವರ ಕೈಯಲ್ಲಿದೆ. ನೂರು ರೂಪಾಯಿ ಸಂಪಾದನೆ ಮಾಡಿದರೆ 56 ರೂಪಾಯಿ ಅವರ ಕೈಯಲ್ಲಿದ್ದು, ಈ ಪ್ರಮಾಣದ ಸಂಪತ್ತಿನ ಕೇಂದ್ರೀಕರಣವಾಗುತ್ತಿದೆ. ತಂತ್ರಜ್ಞಾನಗಳು, ಯಂತ್ರಗಳು ಮನುಷ್ಯನಿಗೆ ಸಹಾಯಕಗಳಾಗಿ ಕೆಲಸ ಮಾಡುವ ಬದಲು ಬಂಡವಾಳಶಾಹಿಗಳ ಏಜೆಂಟ್‍ಗಳಾಗಿ ಕೆಲಸ ಮಾಡುತ್ತಿವೆ. ಉಪಭೋಗದ ಪರಿಣಾಮವಾಗಿ ಮನೆತುಂಬ ವಸ್ತುಗಳನ್ನು ತುಂಬಿಕೊಳ್ಳುವ ರೂಢಿ ಬೆಳೆಯುತ್ತಿದ್ದು, ಇದೊಂದು ಬಗೆಯ ಮನೋಜಾಡ್ಯ.

ಗಾಂಧಿಯವರು ಹೇಳುವ ‘ಪ್ರಕೃತಿಗೆ ಪೂರಕ ಬದುಕು’ ತುಂಬ ಮೌಲ್ಯಯುತವಾದದ್ದು. ಪ್ರಕೃತಿ ನಮಗೆ ತಾಯಿಯಂತೆ. ಅದನ್ನು ಜೋಪಾನ ಮಾಡಬೇಕೇ ವಿನಾ ಶೋಷಣೆ, ದಬ್ಬಾಳಿಕೆ ಮಾಡುವುದಲ್ಲ. ಸರಳತೆಯು ಆತ್ಮೀಯತೆಗೆ, ಆನಂದದ ಜೀವನಕ್ಕೆ, ಯೋಗಮಾರ್ಗಕ್ಕೆ, ಪ್ರಕೃತಿಯನ್ನು ಉಳಿಸುವ ಮಾರ್ಗಕ್ಕೆ, ನಿತ್ಯಸುಖದ ಮಾರ್ಗಕ್ಕೆ ಮೂಲವಾದದ್ದು.

ಮಾತೃಭಾಷೆಯ ಮಹತ್ತ್ವ

ಮಾತೃಭಾಷೆಯ ವಿಚಾರದಲ್ಲಿ ಹೇಳಬೇಕಾದರೆ ‘ಇಂಗ್ಲಿಷ್ ನಮ್ಮ ಭಾಷೆಯಾಗಬೇಕು, ಕನ್ನಡ ಸಂಸ್ಕøತಿಯಾಗಬೇಕು’ ಎಂಬುದು ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿ. ವಿಪರ್ಯಾಸವೆಂದರೆ ಕನ್ನಡ ಭಾಷೆಯಾಗುತ್ತಿದೆ, ಇಂಗ್ಲಿಷ್ ಸಂಸ್ಕøತಿಯಾಗುತ್ತಿದೆ. ಇದು ಸಮಸ್ಯೆಯ ಕೇಂದ್ರ. ನಮ್ಮ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಇಂಗ್ಲಿಷಿನಲ್ಲಿ ಕಲಿಸಲಿ. ಆದರೆ ಗಣಿತ, ವಿಜ್ಞಾನ, ಇತಿಹಾಸವನ್ನೂ ಇಂಗ್ಲಿಷಿನಲ್ಲಿ ಬೋಧಿಸುವ ಅಗತ್ಯವಿದೆಯೇ? 

ಏಕೆಂದರೆ ಭಾಷೆ ಕೇವಲ ಒಂದು ಸಂವಹನ ಮಾಧ್ಯಮವಲ್ಲ, ಅದು ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮವೂ ಹೌದು. ಮಕ್ಕಳು ಆಂಗ್ಲಮಾಧ್ಯಮದಲ್ಲಿ ಕಲಿತರೆ ಬುದ್ಧಿವಂತರಾಗುತ್ತಾರೆ ಎನ್ನುವುದೊಂದು ಅಪಕಲ್ಪನೆ. ನಮ್ಮ ದೇಶದಲ್ಲಿ ಈವತ್ತು ಐಎಎಸ್ ಮಾಡಿದವರಲ್ಲಿ ಗಣನೀಯ ಸಂಖ್ಯೆಯವರು ಮಾತೃಭಾಷೆಯಲ್ಲಿ ಓದಿದವರು. ಸ್ವಾಮಿ ವಿವೇಕಾನಂದರಾಗಲಿ, ಐಸಾಕ್ ನ್ಯೂಟನ್ ಆಗಲಿ ಮಾತೃಭಾಷೆಯಲ್ಲೇ ಓದಿದವರಲ್ಲವೆ? ಮಕ್ಕಳಿಗೆ ಇಂಗ್ಲಿಷ್ ಕಲಿಯಲಿಕ್ಕೆ ಹತ್ತು ವರ್ಷ ಬೇಕಾಗುತ್ತದೆ.

ಜ್ಞಾನದ ಮಾರ್ಗ, ಸರಳತೆಯ ಮಾರ್ಗ ಯಾವುದೆಂದರೆ ಅದು ಮಾತೃಭಾಷೆಯೆ. ಇಂಗ್ಲಿಷನ್ನು ಭಾಷೆಯಾಗಿ ಕಲಿಸಲಿಕ್ಕೆ ವಿರೋಧವಿಲ್ಲ. ಇಂಗ್ಲಿಷ್ ಒಂದೇ ಯಾಕೆ? ಫ್ರೆಂಚ್, ಚೀನೀ, ಜರ್ಮನ್ ಯಾವುದನ್ನೂ ಭಾಷೆಯಾಗಿ ಕಲಿಯಬಹುದು. ಎಷ್ಟು ಹೆಚ್ಚು ಭಾಷೆ ಕಲಿಯುತ್ತೇವೋ ಅಷ್ಟು ಹೆಚ್ಚು ಲೋಕಜ್ಞಾನ, ವ್ಯವಹಾರಜ್ಞಾನ, ಮಾಹಿತಿ ಸಂಗ್ರಹ ಹೆಚ್ಚುತ್ತದೆ. ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆ ಅಲ್ಲ. ಈವತ್ತು ಎಂಟು ದೇಶದಲ್ಲಿ ಮಾತ್ರ ಇಂಗ್ಲಿಷ್ ಪ್ರಮುಖ ಭಾಷೆಯಾಗಿದೆ. 

‘ದೇವರು ಬಂದು ಮೂರು ವರ ಕೊಟ್ಟರೆ ಏನೇನು ಕೇಳುವಿರಿ?’ ಎಂದು ಒಂದು ಕಾನ್ವೆಂಟ್ ಶಾಲೆಯಲ್ಲಿ ಮಕ್ಕಳನ್ನು ಕೇಳಿದರಂತೆ. ಮೊದಲ ವರ ‘ನನ್ನ ಶಿಕ್ಷಕಿ ಇಲ್ಲವಾಗಲಿ’ ಎಂದರು; ಎರಡನೆಯ ವರ ‘ನನಗೆ ಆಡಲು ಬಿಡದ ನನ್ನ ತಾಯಿ ಇಲ್ಲವಾಗಲಿ’; ಮೂರನೆಯದು ‘ಶಾಲೆಗೆ ಸೇರಿಸಿದ ನನ್ನ ತಂದೆ ಇಲ್ಲವಾಗಲಿ’; ಈ ಮೂರು ವರ ಕೇಳುತ್ತೇವೆ ಎಂದವರಿಗೂ ಕಡಮೆಯಿಲ್ಲ.

ಗುರು ಬ್ರಹ್ಮ ಗುರು ವಿಷ್ಣು ಎಂದ ದೇಶದಲ್ಲಿ ಈ ಪರಿಯ ಒತ್ತಡದಿಂದ ಮಕ್ಕಳ ಯೋಚನಾಧಾಟಿಯೇ ಬದಲಾಗುತ್ತಿದೆ. ಪರೀಕ್ಷಾ ವ್ಯವಸ್ಥೆಯ ಜೊತೆಗೆ ಕಲಿಕಾ ಮಾಧ್ಯಮದ ಭಾಷೆಯೂ ಮಕ್ಕಳಿಗೆ  ಒತ್ತಡವನ್ನುಂಟುಮಾಡುತ್ತಿದೆ.

ಇಂಗ್ಲಿಷ್ ಅನ್ನು ಭಾಷೆಯಾಗಿ ಕಲಿಸಬಹುದೇ ವಿನಾ ಕಡ್ಡಾಯ ಮಾಡುವ ಅಗತ್ಯವಿಲ್ಲ. ಯಾರು ಬೇಕೋ ಅವರು ಕಲಿಯಲಿ.

ನಮ್ಮದಲ್ಲದ ಆಚರಣೆ ಸಲ್ಲ

ನಮ್ಮಲ್ಲಿ ಹುಟ್ಟುಹಬ್ಬದ ಆಚರಣೆ ಇಲ್ಲ, ಅದರ ಆವಶ್ಯಕತೆಯೂ ಅಷ್ಟೇನಿಲ್ಲ. ಆಚರಣೆಯ ವಿಧಾನದಲ್ಲಿ ನಮ್ಮತನವನ್ನು ರೂಢಿಸಿಕೊಳ್ಳಬಹುದು. ಅನಾಥಾಶ್ರಮಕ್ಕೆ ಏನಾದರೂ ನೀಡಬಹುದು, ಗೋಶಾಲೆಗೆ ಕೊಡಬಹುದು, ಮನೆಯಲ್ಲಿ ದೀಪಹಚ್ಚಿ ಬೆಳಗಬಹುದು. ದೀಪ ಆರಿಸಿ ಕೇಕ್ ಕತ್ತರಿಸುವ ಆಚರಣೆಯು ಅರ್ಥಹೀನ, ಹೊಸವರ್ಷದ ಆಚರಣೆಯೂ ಹಾಗೆಯೆ. ಪ್ರಕೃತಿಯಲ್ಲಿ ಬದಲಾವಣೆ ಆಗುವುದೇ ಹೊಸವರ್ಷ. ಯುಗಾದಿಯಲ್ಲಿ ಹೊಸಚಿಗುರಿನಿಂದ ಮರಗಿಡಗಳು ನಳನಳಿಸುತ್ತವೆ; ಪ್ರಕೃತಿಯಲ್ಲಿ ಬದಲಾವಣೆ ಕಾಣುತ್ತದೆ. ‘ಯಾವಾಗ ಬಾರ್‍ಗಳಲ್ಲಿ ಕುಡುಕರು ತುಂಬಿರುತ್ತಾರೋ ಅದು ಇಂಗ್ಲಿಷ್ ಹೊಸವರ್ಷ; ಯಾವಾಗ ದೇವಸ್ಥಾನಗಳಲ್ಲಿ ಜನ ತುಂಬಿರುತ್ತಾರೋ ಅದು ಭಾರತೀಯ ಹೊಸವರ್ಷ’ – ಹೀಗೊಂದು ವಿಡಂಬನೆಯ ಮಾತಿದೆ.

ಆಹಾರವೇ ಔಷಧ

ಉಪಭೋಗದ ಫಲವಾಗಿ ಮನೆಗಳಲ್ಲಿ ಬದಲಾಗುತ್ತಿರುವ ಆಹಾರಶೈಲಿಯಲ್ಲಿ ಮೈದಾದಿಂದ ತಯಾರಿಸಲ್ಪಡುವ ಆಹಾರಗಳು ಪ್ರಮುಖ ಆಕರ್ಷಣೆಯಾಗುತ್ತಿವೆ. ಮೈದಾದಲ್ಲಿನ ನಾರಿನಂಶದ ಅಭಾವದ ಪರಿಣಾಮವಾಗಿ ರಕ್ತ ದಪ್ಪವಾಗುತ್ತಹೋಗುತ್ತಿದ್ದು ಮಲಬದ್ಧತೆ, ಕಣ್ಣಿನ ದೋಷ, ಇವೇ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆÉ. ಪಿಟ್ಜಾ, ಬರ್ಗರ್, ಬನ್‍ಗೆ ಬದಲಾಗಿ ನಮ್ಮ ವಾತಾವರಣಕ್ಕನುಗುಣವಾಗಿ ರೂಢಿಸಿಕೊಂಡ ಆಹಾರಪದ್ಧತಿಯಾದ ರಾಗಿ, ಕುಚ್ಚಲಕ್ಕಿ, ಕೆಂಪಕ್ಕಿ, ನವಣೆ, ಸಜ್ಜೆ ಇಂಥವುಗಳ ಬಳಕೆ ನಮಗೆ ಹೊಂದುತ್ತದೆ.

ನಾವಿಂದು ಆಹಾರಪದ್ಧತಿಯ ಬದಲಾವಣೆಯ ಕಾರಣದಿಂದ ಬಹುದೊಡ್ಡ ಪ್ರಮಾಣದಲ್ಲಿ ಅನಾರೋಗ್ಯ ಎದುರಿಸುತ್ತಿದ್ದೇವೆ. ಅಮೆರಿಕದಲ್ಲಿ ಒಂದು ವರ್ಷಕ್ಕೆ ಊಟದ ಖರ್ಚು ನಾಲ್ಕುಸಾವಿರ ಡಾಲರ್, ಔಷಧಕ್ಕೆ ಖರ್ಚು ಎಂಟುಸಾವಿರ ಡಾಲರ್ ಇದ್ದರೆ, ಭಾರತದಲ್ಲಿ ನೂರು ರೂಪಾಯಿ ಊಟದ ಖರ್ಚು, ಎಪ್ಪತ್ತೆರಡು ರೂಪಾಯಿ ಔಷಧಕ್ಕೆ ಖರ್ಚು ಆಗುತ್ತಿದೆ. ಕೊರೋನದಿಂದ ಯೂರೋಪಿನಲ್ಲಿ ಸಾವಿನ ಪ್ರಮಾಣ 8.1 ಆಗಿದ್ದರೆ, ಕರ್ನಾಟಕದಲ್ಲಿ 1.53 ಆಗಿದೆ. ಭಾರತದಲ್ಲಿ 2.3 ಇದೆ. ನಮ್ಮ ದೇಶೀಯ ಆಹಾರದಿಂದಾಗಿಯೇ ನಮ್ಮ ಆರೋಗ್ಯ ಉಳಿದಿದೆ. ತಾಜಾ ಆಹಾರಗಳು, ಶುದ್ಧ ಆಹಾರಗಳನ್ನೇ ಬಳಸಬೇಕೆನ್ನುವುದು ನಮ್ಮ ರೂಢಿಯಲ್ಲಿರುವ ವಿಚಾರ. ನಮ್ಮಲ್ಲಿ ಹೆಚ್ಚಿನ ಜನಸಂಖ್ಯೆಯ ಜನರು ಗ್ರಾಮದಲ್ಲಿದ್ದು, ಬಿಸಿ ಆಹಾರವನ್ನೇ ತೆಗೆದುಕೊಳ್ಳುತ್ತಾರೆ. ಬದಲಾಗಿ ನಾವು ನಗರದಲ್ಲಿ ನೆಲಸುತ್ತಿದ್ದಂತೆ ಬೇಕರಿ ಅಂಗಡಿಗಳ ಹೇರಳ ದರ್ಶನವಾಗುತ್ತದೆ. ನಮ್ಮ ಆಹಾರದಿಂದಲೇ ಆರೋಗ್ಯ, ಆಹಾರವೇ ಔಷಧಿ.

ಜೀವನಮೌಲ್ಯಗಳ ಶಾಲೆ

ಪಾಶ್ಚಿಮಾತ್ಯ ಜೀವನಶೈಲಿಯ ಅನುಸರಣೆಯ ಇನ್ನೊಂದು ಫಲ ಕುಟುಂಬಗಳಲ್ಲಿ ಬಿರುಕು. ಉಪಭೋಗದ ಸಂಸ್ಕøತಿಯಲ್ಲಿ ಹಣವೂ ಅಧಿಕಾರವೂ ಕೇಂದ್ರವಾಗುತ್ತವೆ. ಅವಿಭಕ್ತ ಕುಟುಂಬದಲ್ಲಿ ಬೆಳೆಯುವುದರಿಂದ ಸಾಮಾಜಿಕಪ್ರಜ್ಞೆ ಹೆಚ್ಚಾಗುತ್ತದೆ. ಪರಸ್ಪರ ವಿಶ್ವಾಸದಿಂದ ಬಾಳುವ ಅಲ್ಲಿ ಒಂಟಿತನ ಕಾಡುವುದಿಲ್ಲ. ಹಾಗಾಗಿ ಆತ್ಮಹತ್ಯೆಯಂತಹ ಪ್ರಕರಣಗಳು ಕಡಮೆ ಇರುತ್ತವೆ. ಅವಿಭಕ್ತ ಕುಟುಂಬವು ಒಂದು ಬಗೆಯ ಶಿಕ್ಷಣಕೇಂದ್ರವಾಗಿದ್ದು, ಜೀವನಮೌಲ್ಯಗಳ ಕೇಂದ್ರವೂ ಹೌದು. ಮನೆಯೊಂದು ಒಡೆದರೆ ಆರ್ಥಿಕವಾಗಿಯೂ ಹೊರೆ ಬೀಳುತ್ತದೆ. ವಿಭಕ್ತ ಕುಟುಂಬದಿಂದ ಒಂಟಿತನ, ಆರ್ಥಿಕ ಹೊರೆ, ಒತ್ತಡ ಹೆಚ್ಚುತ್ತದೆ. ಹಣದ ಅಧಿಕಾರದ ಜೀವನಪದ್ಧತಿಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಕುಟುಂಬಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದ್ದು, ಬೆಂಗಳೂರಿನಂತಹ ನಗರದಲ್ಲಿ ಕೋಟ್ಯಂತರ ಜನ ಒಂದೆಡೆ ಬಾಳಿದರೂ ಸಾಕಷ್ಟು ಸಂಖ್ಯೆಯ ನಾಗರಿಕರು ಒಂಟಿತನದಿಂದ ಬಳಲುತ್ತಿರುವುದು ದುರಂತ.

ನಮ್ಮ ದೇಶದಲ್ಲಿ 18 ಕೋಟಿ ಲಕ್ಷಕ್ಕೂ ಮಿಕ್ಕಿ ವಾರ್ಷಿಕ ಉಳಿತಾಯವಿದ್ದು, ಅದರಲ್ಲಿ ಶೇ. 70ರಷ್ಟು ಉಳಿತಾಯ ಕುಟುಂಬಗಳಿಂದಲೇ ಆಗುತ್ತಿರುವುದು ಗಮನಾರ್ಹ. ಕುಟುಂಬ ಒಡೆದರೆ ಉಳಿತಾಯಸಂಸ್ಕøತಿ ನಾಶವಾಗುತ್ತದೆ. ನಮ್ಮಂತೆ ಪಾಶ್ಚಿಮಾತ್ಯರು ಉಳಿತಾಯ ಮಾಡುವುದಿಲ್ಲ. ಕುಟುಂಬಪದ್ಧತಿಯಲ್ಲಿ ಕುಟುಂಬಕ್ಕಾಗಿಯಾದರೂ ಉಳಿತಾಯ ಮಾಡುವ ರೂಢಿಯನ್ನು ಇಟ್ಟುಕೊಳ್ಳುತ್ತೇವೆ.

ಆತ್ಮೋನ್ನತಿಗಾಗಿ ಕಲೆ

ನಮ್ಮಲ್ಲಿ ಕಲೆಯು ಮನರಂಜನೆಯ ಮಾಧ್ಯಮವಲ್ಲ; ಬದಲಾಗಿ ಅದು ಸಂಸ್ಕಾರ ನೀಡುವಂತಹ ಆತ್ಮೋನ್ನತಿಯ ಸಾಧನ. ಕಲೆ ವಿಕಾಸಕ್ಕಾಗಿಯೇ ವಿನಾ ವಿಲಾಸಕ್ಕಾಗಿ ಅಲ್ಲ. ಕಲೆ ಆನಂದವನ್ನು ನೀಡುತ್ತದೆ, ಆತ್ಮೋನ್ನತಿಗೂ ದಾರಿ ಮಾಡಿಕೊಡುತ್ತದೆ. ಕಲೆ, ಸಾಹಿತ್ಯ, ಆಟಗಳು ಮನುಷ್ಯನನ್ನು ಉನ್ನತಿಗೇರಿಸಬೇಕು. ಭಾವ, ರಾಗ, ತಾಳ ಮಿಳಿತವಾದದ್ದು ನಮ್ಮ ಸಂಗೀತ. ನಮ್ಮ ಕಲೆಗಳಲ್ಲಿ ಸಂಸ್ಕಾರಗುಣ ವಿಶಿಷ್ಟವಾಗಿರುತ್ತದೆ.

ಈ ಬಗೆಯಲ್ಲಿ ನಮ್ಮ ದೇಶೀ ಒಂದು ಜೀವನಶೈಲಿ ಸಮಗ್ರವಾದ ಜೀವನಶೈಲಿ. ವ್ಯಕ್ತಿಯ ಕಲ್ಯಾಣ, ಸುಖ, ಸಮಾಜದ ಹಿತ, ಪ್ರಕೃತಿಯ ಸಂರಕ್ಷಣೆ ಎಲ್ಲವೂ ಅದರಲ್ಲಿ ಮಿಳಿತವಾಗಿದೆ. ‘ಟೈಮ್ ಟೆಸ್ಟೆಡ್’ ಆಗಿರುವ ಇಂತಹ ನಮ್ಮ ಜೀವನಶೈಲಿಯನ್ನು ನಮ್ಮ ಮಕ್ಕಳಿಗೆ ಶಿಕ್ಷಣದಲ್ಲಿ ರೂಢಿಸಬೇಕು. ಮನುಷ್ಯನು ಬುದ್ಧಿ, ವಿವೇಕಕ್ಕಿಂತ ಹೆಚ್ಚಾಗಿ ಅಭ್ಯಾಸಬಲದಿಂದಲೇ ಬದುಕು ನಡೆಸುತ್ತಾನೆ. ನಮ್ಮ ಈ ಜೀವನದೃಷ್ಟಿಯನ್ನು ನಮ್ಮ ಶಾಲೆಗಳಲ್ಲಿ ಕಲಿಸುವಂತಾದರೆ ಪ್ರಕೃತಿ, ಕುಟುಂಬ, ಜೀವನಮೌಲ್ಯ ಎಲ್ಲವೂ ಉಳಿಯಬಲ್ಲದು.

ಸ್ವದೇಶೀ ಎನ್ನುವುದು ಸರಳತನವೇ ವಿನಾ ಬಡತನವಲ್ಲ. ಸರಳತನ ವರವಾದರೆ ಬಡತನ ಶಾಪ. ನಮ್ಮ ಮೂಲಭೂತ ಆವಶ್ಯಕತೆಗಳಾದ ಆಹಾರ, ಮನೆ, ಬಟ್ಟೆ, ಶಿಕ್ಷಣಕ್ಕೆ ಅಭಾವವಾಗಲಿ ಲೋಪವಾಗಲಿ ಉಂಟಾಗಬಾರದು. ದೀನದಯಾಳ್ ಉಪಾಧ್ಯಾಯರು ಹೇಳುವಂತೆ – “ಅರ್ಥ ಕಾಮದ ಅಭಾವ, ಅರ್ಥ ಕಾಮದ ಪ್ರಭಾವ ಎರಡೂ ಆಗಬಾರದು.” ಧರ್ಮಾಧಾರಿತ ಅರ್ಥ ಕಾಮ; ಧರ್ಮದ ಆಧಾರದಲ್ಲಿ ಅರ್ಥಸಂಗ್ರಹಣೆ ಮಾಡಿ, ಅನುಭವಿಸಿ, ಮೋಕ್ಷವನ್ನು ಹೊಂದಬೇಕು. ಸ್ವದೇಶೀ ಚಿಂತನೆ ಬಡತನದ ವಿರುದ್ಧವಾಗಿದ್ದು ಸರಳತನವನ್ನು ಉತ್ತೇಜಿಸುವಂಥದ್ದು. ಉಪಭೋಗದ ಪರಿಣಾಮವಾಗಿ ಬಡತನದಿಂದ ಬಳಲುತ್ತಿರುವವರ ಮಧ್ಯೆಯೇ ಉಳ್ಳವರ ಕೈಯಲ್ಲಿ ಅಪಾರಪ್ರಮಾಣದ ಸಂಪತ್ತು ಶೇಖರವಾಗುತ್ತಿದೆ; ದೊಡ್ಡ ಪ್ರಮಾಣದ ಆರ್ಥಿಕತೆ ಉಳ್ಳವರ ಕೈಯಲ್ಲಿದೆ. ಇಂಥವರು ತಮ್ಮ ಸಂಪತ್ತನ್ನು ದಾನ ಮಾಡಿದ್ದಿದ್ದರೆ ಪುಣ್ಯಸಂಗ್ರಹವೂ ಸಾಧ್ಯವಾಗುತ್ತಿತ್ತು.

ಒಮ್ಮೆ ಸಾಮಾಜಿಕ ಕಾರ್ಯಕರ್ತರೊಬ್ಬರು ಮುಂಬಯಿಯ ಒಂದು ಗುಡಿಸಲಿಗೆ ಹೋಗಿದ್ದರು. ತಾಯಿ ಮಗಳು ಮನೆಯಲ್ಲಿದ್ದಾರೆ. ಇವರು ತಾಯಿಗೆ ನಿಮ್ಮ ಮಗಳನ್ನು ಕರೆಯಿರಿ ಎಂದರೆ ಆಕೆ, “ಅವಳು ಬರುವಂತಿಲ್ಲ. ನಮಗಿಬ್ಬರಿಗೂ ಇರುವುದು ಒಂದೇ ಸೀರೆ” ಎಂದು ಉತ್ತರಿಸಿದಳಂತೆ. ಒಂದು ಕಡೆ ಪರಿಸ್ಥಿತಿ ಹೀಗಿದ್ದರೆ, ಇನ್ನೊಂದು ಕಡೆಗೆ ರಿಲಯನ್ಸ್‍ನ ಅಂಬಾನಿ ಇರುವ ಮನೆಯಲ್ಲಿ ಐದು ಜನರಿಗೆ ಇಪ್ಪತ್ತೇಳು ಮಹಡಿಯ ಮನೆ, ಮೂರು ಹೆಲಿಪ್ಯಾಡ್ ಇವೆ.

ಟೈಮ್‍ಟೆಸ್ಟೆಡ್ ಜೀವನಶೈಲಿ

ನಮ್ಮ ಜೀವನಶೈಲಿ ಟೈಮ್‍ಟೆಸ್ಟೆಡ್ ವಿನಾ ಲ್ಯಾಬೊರೇಟರಿ ಟೆಸ್ಟೆಡ್ ಅಲ್ಲ. ಈವತ್ತು ನಾವು ಬಿತ್ತುತ್ತಿರುವ ಬೀಜ, ಅನುಸರಿಸುತ್ತಿರುವ ಕೃಷಿಪದ್ಧತಿ ಯಾವುದೂ ಟೈಮ್‍ಟೆಸ್ಟೆಡ್ ಅಲ್ಲ; ಹಾಗಾಗಿಯೇ ವಿಫಲವಾಗುತ್ತಿರುವುದು. ಕೃಷಿಯ ವಿಫಲತೆಗೆ ರೈತರು ಮಾತ್ರ ಕಾರಣವಲ್ಲ, ಪಾಶ್ಚಿಮಾತ್ಯರ ಟೈಮ್‍ಟೆಸ್ಟೆಡ್ ಅಲ್ಲದ ಪದ್ಧತಿಯ ಅನುಕರಣೆಯೂ ಕಾರಣ. ನಮ್ಮ ಪದ್ಧತಿಯು ಸಾವಿರಾರು ವರ್ಷಗಳ, ಕೋಟ್ಯಂತರ ಜನರ ಅನುಭವದ ಫಲವಾಗಿರುತ್ತದೆ. ಅದೇ ನಿಜವಾದ ಲ್ಯಾಬ್.

ಗಾಂಧಿಯವರ ಹಿತನುಡಿಯೊಂದು ಇಲ್ಲಿ ಅನುಕರಣೀಯ: ಗಾಂಧಿ ಹೇಳುತ್ತಾರೆ, “ನೀವೊಂದು ವಸ್ತು ತೆಗೆದುಕೊಂಡಾಗ ಈ ವಸ್ತುವಿನ ಸಂಪತ್ತು ಎಲ್ಲಿಗೆ ಹೋಗುತ್ತದೆ, ಅದು ಬಡವರ ಕಣ್ಣೀರು ಅಳಿಸುತ್ತಾ, ಅಂತಹ ವಸ್ತು ತೆಗೆದುಕೊಳ್ಳಿ, ಇದು ಪ್ರಕೃತಿಗೆ ಪೂರಕವಾದ ವಸ್ತುವಾ? ಅನಿವಾರ್ಯವಾ? ಈ ಸಂಪತ್ತು ಕೈಗಾರಿಕೋದ್ಯಮಿಗೆ ಹೋಗುತ್ತಾ, ಬಂಡವಾಳಶಾಹಿಗೆ ಹೋಗುತ್ತಾ, ಒಬ್ಬ ನೇಕಾರ, ಚಮ್ಮಾರ, ಕುಂಬಾರನಿಗೆ ಹೋಗುತ್ತಾ, ಎಂದು ಯೋಚಿಸಿ” ಎನ್ನುತ್ತಾರೆ.

ಖಾದಿಬಟ್ಟೆ ಬಳಕೆ ಮಾಡಿದರೆ ನೇಕಾರ ಉದ್ದಾರ ಆಗುತ್ತಾನೆ. ಮಣ್ಣಿನ ಪಾತ್ರೆ ಬಳಸಿದರೆ ಕುಂಬಾರನು ಉದ್ಧಾರವಾಗುತ್ತಾನೆ. ಚಪ್ಪಲಿ ಹೊಲಿಸಿದರೆ ಮೋಚಿಯ ಬದುಕು ಸುಗಮವಾಗುತ್ತದೆ. ಬಟ್ಟೆ ಹೊಲಿಸಿದರೆ ಸಿಂಪಿಗನ ಜೀವನ ಸುವ್ಯವಸ್ಥಿತವಾಗಿ ಸಾಗುತ್ತದೆ. ಈಗಿನ ಗಾರ್ಮೆಂಟ್ ಫ್ಯಾಕ್ಟರಿ ವ್ಯವಸ್ಥೆಯು ಅಪಾರವಾಗಿ ಮಹಿಳೆಯರ ಶೋಷಣೆ, ದಬ್ಬಾಳಿಕೆಗೆ ದಾರಿಮಾಡಿಕೊಟ್ಟಿದೆ. 

ನಾವು ಸ್ಥಳೀಯವಾಗಿ ಸಿದ್ಧವಾಗುವ ಅಗತ್ಯ ವಸ್ತುಗಳನ್ನು ಬಳಸದೆ ಯಾವುದೋ ಸ್ಥಳದಲ್ಲಿ ತಯಾರಾದ ವಸ್ತುಗಳನ್ನು ಬಳಸುತ್ತಿದ್ದೇವೆ. ಅದು ಉತ್ಪಾದನಾ ಸ್ಥಳದಿಂದ ಗ್ರಾಹಕರ ಕೈಗೆ ತಲಪಬೇಕಾದರೆ ಸಾಗಾಟದ ಖರ್ಚು, ಸುಗಮ ಸಾಗಾಣಿಕೆಯ ಸಾರಿಗೆಗಾಗಿ ಹೆದ್ದಾರಿ ಅಗಲೀಕರಣ, ಪ್ಯಾಕಿಂಗ್‍ಗೆ ಪ್ಲಾಸ್ಟಿಕ್ ಬಳಕೆ ಇವೆಲ್ಲ ಪ್ರಕೃತಿನಾಶ, ಆರ್ಥಿಕ ಹೊರೆಗೆ ಕಾರಣವಾಗುತ್ತವೆ. ಸ್ಥಾನೀಯ ವಸ್ತುಗಳನ್ನು ಎಷ್ಟು ಹೆಚ್ಚು ಬಳಕೆ ಮಾಡುತ್ತೇವೊ, ಅಷ್ಟು ಸಂಪತ್ತು ಸ್ಥಾನೀಯವಾಗಿ ಶೇಖರವಾಗುತ್ತದೆ.

ಮಾನಸಿಕ ಅನಾರೋಗ್ಯಕ್ಕೆ ದಾರಿ

ಅನೇಕ ರೋಗಗಳಿಗೆ ಮನಸ್ಸೂ ಕಾರಣವಾಗಿರುತ್ತದೆ. ಉಪಭೋಗ ಜೀವನಕ್ರಮದ ಅಸ್ತವ್ಯಸ್ತತೆಯ ಫಲವಾಗಿ ಹುಟ್ಟುವ ಒತ್ತಡವು ಮಾನಸಿಕ ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತದೆ. ಪರಿಣಾಮವಾಗಿ ನೂರು ರೂಪಾಯಿ ಊಟಕ್ಕೆ ಖರ್ಚು ಹಾಗೂ ಎಪ್ಪತ್ತೆರಡು ರೂಪಾಯಿ ಔಷಧದ ಖರ್ಚುಗಳ ನಡುವೆ ನಾವಿಂದು ಬದುಕುವಂತಾಗಿದೆ. ಹಣಸಂಪಾದನೆಗೆ ಅಡ್ಡದಾರಿ ಹಿಡಿಯುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಮೋಸ ವಂಚನೆಗಳೂ ಹೆಚ್ಚಾಗುತ್ತಿವೆ. ನಿರುದ್ಯೋಗವು ಅಪರಾಧಕ್ಕೆ ಒಂದು ಕಾರಣವಾದರೆ, ಸ್ವಭಾವವೂ ಮುಖ್ಯಕಾರಣ. ನಮ್ಮ ಮನಸ್ಸು ಶಾಂತವಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ. 

ನಮ್ಮದು ಪ್ರಕೃತಿಯ ನಡುವಿನ ಬದುಕು. ನಗರೀಕರಣ ಶಾಪ ಎನ್ನುತ್ತಲೆ ಈವತ್ತು ಜನರೆಲ್ಲ ನಗರದತ್ತ ಧಾವಿಸುತ್ತಿದ್ದಾರೆ. ನಮ್ಮ ವೇದ, ರಾಮಾಯಣ, ಪುರಾಣ ಇವೆಲ್ಲ ರೂಪಗೊಂಡದ್ದು ಪ್ರಕೃತಿಯ ನಡುವೆ, ಶಾಂತ ಪರಿಸರದಲ್ಲಿ ಹುಟ್ಟಿವೆಯೇ ವಿನಾ ನಗರದಲ್ಲಲ್ಲ. ಸ್ವದೇಶೀ ಜೀವನಶೈಲಿಯು ಪ್ರಕೃತಿಯ ಮಧ್ಯೆ ಬದುಕುವಂತಹ ಜೀವನಶೈಲಿ. ಪ್ರಕೃತಿಗೆ ಪೂರಕವಾದ ಬದುಕು. ಗ್ರಾಮದ ಕಲ್ಪನೆ ನಮ್ಮಲ್ಲಿ ಇರುವಷ್ಟು ಸುಂದರವಾಗಿ ಬೇರೆ ದೇಶಗಳಲ್ಲಿ ಇಲ್ಲ. ನಮ್ಮ ಶೇ. 68ರಷ್ಟು ಜನಸಂಖ್ಯೆ ಗ್ರಾಮದಲ್ಲಿದೆ. ಗ್ರಾಮದ ವಿಶೇಷವೆಂದರೆ ಪರಸ್ಪರ ಪರಿಚಯ, ಸ್ನೇಹ-ಸಂಬಂಧವಿರುವುದು. ನಗರದಲ್ಲಿ ನೆರೆಮನೆಯವರೇ ಯಾರೆಂದು ಗೊತ್ತಿರುವುದಿಲ್ಲ. ‘ಬಾತ್‍ರೂಂ ಅಟ್ಯಾಚ್ಡ್, ಫ್ಯಾಮಿಲಿ ಡಿಟಾಚ್ಡ್’ ಎನ್ನುವ ವಿಡಂಬನೆಯು ನಗರಕ್ಕೆ ಹೋಲಿಸಿಯೆ ಹುಟ್ಟಿಕೊಂಡದ್ದು. ಸದ್ಯಃ ಬೆಂಗಳೂರು ನಗರವೊಂದರಲ್ಲೇ ಅರವತ್ತುಸಾವಿರ ವಿಚ್ಛೇದನ ಪ್ರಕರಣಗಳಿವೆ.

ಗಾಂಧಿಯವರು ಬ್ರಿಟಿಷರಿಗೆ “ನಿಮ್ಮ ವೈಭವಕ್ಕೋಸ್ಕರ ನಾಲ್ಕು ಕೋಟಿ ಜನಸಂಖ್ಯೆಯ ನೀವು ಅರ್ಧದಷ್ಟು ಜಗತ್ತನ್ನು ಆಕ್ರಮಿಸಿದ್ದೀರಿ. ನಮ್ಮದು ಮೂವತ್ತಮೂರು ಕೋಟಿ. ನಿಮ್ಮ ತರಹ ಜೀವನ ಮಾಡಬೇಕೆಂದರೆ ನಮಗೆ ಎಂಟು ಜಗತ್ತು ಬೇಕು” ಎಂದು ಹೇಳಿದ್ದರಂತೆ. ‘ಧರ್ಮಾವಿರುದ್ಧೋ ಭೂತೇಷು ಕಾಮೋýಸ್ಮಿ ಭರತರ್ಷಭ’ ಎಂದ ಶ್ರೀಕೃಷ್ಣ ಗೀತೆಯಲ್ಲಿ. ಧರ್ಮ ಮತ್ತು ಕಾಮ ಎರಡೂ ನಾನೇ ಎಂದು. ಸಮೃದ್ಧಿ ತೀವ್ರತೆಗೂ ಹೋಗಬಾರದು. ಸ್ವದೇಶೀ ಎನ್ನುವುದು ಜಗತ್‍ಕಲ್ಯಾಣದ ಮಾರ್ಗ; ಆತ್ಮೋನ್ನತಿಯ, ಸರಳತೆಯ ಯೋಗಮಾರ್ಗ. ಇದೇ ಸರಿಯಾದ ಮಾರ್ಗ.

ಕೃಪೆ: ಉತ್ಥಾನ

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ಮುಸ್ಲಿಂ ಮಹಿಳೆಯರಿಗೆ ಬಗೆವ ಮಹಾದ್ರೋಹ ‘ತ್ರಿವಳಿ ತಲಾಖ್’

ಮುಸ್ಲಿಂ ಮಹಿಳೆಯರಿಗೆ ಬಗೆವ ಮಹಾದ್ರೋಹ ‘ತ್ರಿವಳಿ ತಲಾಖ್’

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ಸಂಕ್ರಾಂತಿ

ಸಂಕ್ರಾಂತಿ

September 1, 2010
RSS to increase its activities in the Northeastern States, especially at Arunachal

RSS to increase its activities in the Northeastern States, especially at Arunachal

March 21, 2012
Sanghanikethan: Ganesh Chaturthi celebrations concluded

Sanghanikethan: Ganesh Chaturthi celebrations concluded

August 25, 2019
Attended by RSS Chief Bhagwat, the 3day State level Conference concludes at Jamakhandi, Karnataka

Attended by RSS Chief Bhagwat, the 3day State level Conference concludes at Jamakhandi, Karnataka

August 25, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In