
ಕೆಲವೇ ವರ್ಷಗಳ ಹಿಂದಿನವರೆಗೂ ಸಮಾಜದ ಒಂದು ವರ್ಗದಲ್ಲಿ ಹತಾಶೆ ಮಡುಗಟ್ಟಿಬಿಟ್ಟಿತ್ತು. ತಮ್ಮ ಕೂಗನ್ನು ಕೇಳಿಸಿಕೊಳ್ಳುವವರೇ ಇಲ್ಲವಲ್ಲ ಎಂಬ ಅಸಹಾಯಕತೆಯಿಂದ ಅವರು ಕೊರಗುತ್ತಿದ್ದರು. ಈ ದೇಶದಲ್ಲಿ ಬಹುಸಂಖ್ಯಾತರಾಗಿದ್ದೂ ನಮ್ಮ ಆಶಯಗಳಿಗೆ ಕಿವಿಯಾಗುವವರೇ ಇಲ್ಲವೆಂಬ ಅಸಮಾಧಾನವು ಜ್ವಾಲೆಯಾಗಿ ಉರಿಯುತ್ತಿತ್ತು. ತಮ್ಮ ಈ ಕನಸುಗಳನ್ನೇ ಬಂಡವಾಳವಾಗಿಸಿಕೊಂಡ ರಾಜಕೀಯ ಪಕ್ಷವೊಂದು ‘ನಾವು ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಿಯೇ ತೀರುತ್ತೇವೆ’ ಎಂದು ಪ್ರತಿ ಚುನಾವಣೆಯಲ್ಲೂ ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಆಸೆ ಹುಟ್ಟಿಸುತ್ತಿತ್ತು. ಅದೆಷ್ಟೋ ಸಂಘರ್ಷ, ಅದೆಷ್ಟೋ ತ್ಯಾಗ, ಬಲಿದಾನಗಳು ನಡೆದರೂ ನೂರಾರು ವರ್ಷಗಳಿಂದ ಈ ಒಂದು ಆಸೆ ಈಡೇರದೇ ಭಾರತವರ್ಷವು ಆಸೆ ಬತ್ತಿದ ಕಂಗಳಿಂದ ಇದಕ್ಕಾಗಿ ಕಾಯುತ್ತಲೇ ಇತ್ತು. ನಿರೀಕ್ಷೆಯೇ ಸತ್ತು ಹೋಗುವಷ್ಟು ಸಮಯ ಅದಾಗಲೇ ಆಗಿ ಹೋಗಿತ್ತು. ನ್ಯಾಯಾಲಯದ ಕಟಕಟೆಗೆ ಈ ವಿಷಯ ಏರಿ, ದಿನ, ಮಾಸ, ಸಂವತ್ಸರಗಳು ಕಳೆಯುತ್ತಲೇ ಇದ್ದವು. ರಾಮಮಂದಿರವೆಂಬ ಸ್ವಪ್ನವು ತನ್ನ ಜೀವಿತದ ಅವಧಿಯಲ್ಲಿ ಸತ್ಯವಾಗುವುದೋ ಇಲ್ಲವೋ ಎಂಬ ಆತಂಕದಲ್ಲೇ ಅದೆಷ್ಟೋ ಹಿರಿಯರು ದಿನ ನೂಕುತ್ತಿದ್ದರು.
ಈಗ್ಗೆ ಆರೇಳು ವರ್ಷಗಳ ಹಿಂದೆ ರಾಮಮಂದಿರ ನಿರ್ಮಾಣವಾಗುತ್ತದೆಯೇ ಎಂದು ಈ ದೇಶದ ಯಾವುದೇ ಸಾಮಾನ್ಯ ವ್ಯಕ್ತಿಯನ್ನು ಕೇಳಿದ್ದರೂ ಆತನ ಮುಖದಲ್ಲೊಂದು ವಿಷಾದಭರಿತ ನಗುವೊಂದನ್ನು ಮಾತ್ರ ಕಾಣಬಹುದಿತ್ತು. ‘ಅವೆಲ್ಲ ಎಲ್ಲಿ ಸಾಧ್ಯ ಮಾರಾಯ್ರೆ?’ ಎಂದು ನಿರಾಸೆಯಿಂದ ಕೈ ಕೊಡವಿ ಮುಂದಕ್ಕೆ ಹೋಗುತ್ತಿದ್ದ. ಪ್ರತಿ ಸಲವೂ ಕೋರ್ಟು ಒಂದೋ ವಿಚಾರಣೆಯನ್ನು ಮುಂದಕ್ಕೆ ಹಾಕುತ್ತಿತ್ತು ಅಥವಾ ಎರಡೂ ಕಡೆಯವರಿಗೂ ಸಂಧಾನಕ್ಕೆ ಕಿವಿಮಾತು ಹೇಳುತ್ತಿತ್ತು. ಸಂಧಾನದಲ್ಲಿಯೇ ಮುಗಿಯಬಹುದಾಗಿದ್ದ ವಿಷಯವಾಗಿದ್ದರೆ ನ್ಯಾಯಾಲಯಕ್ಕೆ ಹೋಗಬೇಕಾದ ಆವಶ್ಯಕತೆಯೇ ಇರುತ್ತಿರಲಿಲ್ಲ. ಇದು ಹೀಗೆಯೇ ಮುಂದುವರೆಯುತ್ತಾ ಹೋದರೆ ಶ್ರೀರಾಮನನ್ನು ಗರ್ಭಗುಡಿಯೊಳಗೆ ಆರಾಧಿಸಲ್ಪಡುವುದನ್ನು ನಾವು ನೋಡುವುದು ಸಾಧ್ಯವೇ ಇಲ್ಲವೆಂಬ ತೀರ್ಮಾನಕ್ಕೆ ಹೆಚ್ಚಿನವರು ಬಂದಿದ್ದರು. ಮಾಧ್ಯಮಗಳಂತೂ ಮಂದಿರದ ವಿಷಯವನ್ನು ಕೇವಲ ರಾಜಕೀಯ ಲಾಭಕ್ಕೆ ಸೃಷ್ಟಿಸಲ್ಪಟ್ಟ ವಿಷಯವೆಂದು ಬಿಂಬಿಸುತ್ತಿದ್ದವು. ಮಂದಿರವನ್ನು ಕಟ್ಟಿಬಿಟ್ಟರೆ ಒಂದು ರಾಜಕೀಯ ಪಕ್ಷಕ್ಕೆ ಬೇರಾವ ವಿಷಯವೇ ಇರುವುದಿಲ್ಲವಾದ ಕಾರಣ ಆ ಪಕ್ಷದವರು ಎಂದೆಂದಿಗೂ ಮಂದಿರ ನಿರ್ಮಾಣದ ಬಗ್ಗೆ ಯತ್ನಿಸುವುದೂ ಇಲ್ಲ; ಮನಸ್ಸಿನಲ್ಲಿ ಪ್ರಾಮಾಣಿಕವಾಗಿ ಬಯಸುವುದೂ ಇಲ್ಲ ಎಂದೆಲ್ಲ ಜನರಲ್ಲಿ ಅವಿಶ್ವಾಸವನ್ನು ತುಂಬುವ ಪ್ರಯತ್ನವನ್ನು ನಡೆಸುತ್ತಲೇ ಇದ್ದವು.
ಇದೆಲ್ಲದರ ನಡುವೆ ‘ಕೆಲವರಿಗೆ’ ಮಾತ್ರ ಈ ವಿಷಯದಲ್ಲಿ ಆರಂಭದಿಂದಲೂ ಅದೊಂದು ಅದಮ್ಯವಾದ ವಿಶ್ವಾಸವಿತ್ತು. ಇಡೀ ದೇಶವೇ ವಿಶ್ವಾಸವನ್ನು ಕುಂದಿಸಿಕೊಂಡಿದ್ದರೂ ಅವರು ಮಾತ್ರ ಯಾವತ್ತೂ ಈ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಲೇ ಇರಲಿಲ್ಲ. ಮಂದಿರವಷ್ಟೇ ಅಲ್ಲ, ತಮ್ಮ ಪೂರ್ವಜರು ಈ ದೇಶದ ಬಗ್ಗೆ ಕಂಡ ಕನಸುಗಳೆಲ್ಲ ಈಡೇರಿಯೇ ಈಡೇರುತ್ತವೆ ಎಂದು ಹೇಳುತ್ತಲೇ ಇರುತ್ತಿದ್ದರು. ಅವರು ‘ರಾಷ್ಟ್ರಿಯ ಸ್ವಯಂಸೇವಕ ಸಂಘ’ದ ಕಾರ್ಯಕರ್ತರು. ಅವರ ವಿಶ್ವಾಸದ ಮಾತುಗಳು ಸಾಮಾನ್ಯ ಜನರಿಗೆ ಒಂದು ರೀತಿಯಲ್ಲಿ ವಿಚಿತ್ರವೆನಿಸುವಂತಿರುತ್ತಿತ್ತು. ಇವರೆಲ್ಲೋ ವಾಸ್ತವದ ಸ್ಥಿತಿಯನ್ನು ಒಪ್ಪಿಕೊಳ್ಳಲಾಗದೇ ಹೀಗೆಲ್ಲಾ ನುಡಿಯುತ್ತಾರೆಂದು ಭಾವಿಸುವಂತಿರುತ್ತಿತ್ತು. ಇವರು ಯಾವ ವಿಶ್ವಾಸದಲ್ಲಿ ಹೀಗೆ ಹೇಳುತ್ತಾರೆ? ಇವರಿಗೆಲ್ಲೋ ದೇಶಭಕ್ತಿಯ ಅಮಲು. ಹಾಗಾಗಿ ಮಂದಿರ ನಿರ್ಮಾಣವಾಗುತ್ತದೆ ಎನ್ನುತ್ತಾರೆ ಅಷ್ಟೆ. ಕೋರ್ಟಿನ ಆದೇಶ ಬರುವ ಮೊದಲೇ ಅದಕ್ಕಾಗಿ ಸಿದ್ಧತೆಯನ್ನು ನಡೆಸುತ್ತಿದ್ದಾರಲ್ಲ, ಇವರಿಗೆಲ್ಲೋ ಭ್ರಮೆ ಎಂದೆಲ್ಲ ಹೆಚ್ಚಿನವರು ಭಾವಿಸಿಬಿಟ್ಟಿದ್ದರು. ಅದೆಷ್ಟೋ ಜನ ಇದೇ ವಿಷಯವನ್ನಿಟ್ಟುಕೊಂಡೇ ಸಂಘದ ಕಾರ್ಯಕರ್ತರು ಸಿಕ್ಕಲ್ಲೆಲ್ಲ ಅವರನ್ನು ಕೆಣಕುತ್ತಿದ್ದರು. ಕೆದಕುತ್ತಿದ್ದರು.
‘ಮೊದಲು ರಾಮಮಂದಿರ ನಿರ್ಮಾಣ ಮಾಡಿ, ಉಳಿದದ್ದು ಆಮೇಲೆ ನೋಡೋಣ’ ಎಂಬೆಲ್ಲ ಮಾತುಗಳನ್ನು ಅವರು ದಿನವೂ ಕೇಳಿಸಿಕೊಳ್ಳಬೇಕಾಗುತ್ತಿತ್ತು. ಕೆಲವರಂತೂ ಕಣ್ಣೀರು ತುಂಬಿಕೊಂಡು ಮಂದಿರ ನಿರ್ಮಾಣ ಯಾವಾಗ? ಎಂದು ಭಾವುಕವಾಗಿ ಕೇಳುತ್ತಿದ್ದರು. ಅಂತಹ ಎಲ್ಲ ಪ್ರಶ್ನೆ, ವಿಡಂಬನೆ, ವ್ಯಂಗ್ಯಗಳೆಲ್ಲವನ್ನೂ ಸಂಘದ ಕಾರ್ಯಕರ್ತರು ಮಾತ್ರ ಮುಗುಳ್ನಗುತ್ತಲೇ ಸ್ವೀಕರಿಸುತ್ತಿದ್ದರು. ಒಂದಲ್ಲ ಒಂದು ದಿನ ಆ ಕನಸು ನನಸಾಗಿಯೇ ಆಗುತ್ತದೆ ಎಂದು ಭರವಸೆಯ ಮಾತನ್ನು ಮಾತ್ರ ಹೇಳುತ್ತಿದ್ದರು. ಈಗ ಆ ಕನಸು ನನಸಾಗುವ ಹಂತದಲ್ಲಿದೆ. ಇನ್ನೇನು ಕೆಲವೇ ವರ್ಷಗಳಲ್ಲಿ ಮಂದಿರ ನಿರ್ಮಾಣವಾಗಿ ದೇಶದ ಸ್ವಾಭಿಮಾನದ ಹೆಗ್ಗುರುತಾಗಿ ಎದ್ದು ನಿಲ್ಲಲಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲ ಕರಸೇವಕರ ಶ್ರದ್ಧೆ, ಭಕ್ತಿ, ಸಮರ್ಪಣೆಗಳೆಲ್ಲ ಫಲೀಭೂತವಾಗುತ್ತಿವೆ. ಈ ಹಂತದಲ್ಲಿ ಹಿಂತಿರುಗಿ ಒಮ್ಮೆ ನಾವು ನೋಡಬೇಕು. ಈ ಮುಳ್ಳುಕಲ್ಲಿನ ಹಾದಿಯನ್ನು ಬರಿಗಾಲಲ್ಲಿ ಸವೆಸಿದ ಸ್ವಯಂಸೇವಕರ ಸ್ಥೈರ್ಯ ಇಡೀ ದೇಶಕ್ಕೆ ಆದರ್ಶ. ಒಟ್ಟಾರೆ ಪರಿಸ್ಥಿತಿಯು ಪ್ರತಿಕೂಲವಾಗಿದ್ದಾಗ್ಯೂ ಭರವಸೆಯನ್ನು ಕಳೆದುಕೊಳ್ಳದ ಅವರ ಆಶಾವಾದ ಅತುಲ್ಯವಾದುದು. ಅವರಿಗೆ ಈ ಸ್ಥಿತಪ್ರಜ್ಞತೆ ಎಲ್ಲಿಂದ ಬರುತ್ತದೆ? ಈ ವಿಶ್ವಾಸ ಅವರಿಗೆ ಎಲ್ಲಿಂದ ಪೂರಣವಾಗುತ್ತದೆ?
ಇದೇ ಪ್ರಶ್ನೆಗಳನ್ನು ಸರಸಂಘಚಾಲಕರಿಗೆ ಒಮ್ಮೆ ಕೇಳಿದಾಗ ಅವರು ಹೇಳಿದ ಉತ್ತರ ‘ಅಂತರೀಕ್ಷಣೆ’ ಎಂದು. ಸಂಘದ ಅಖಂಡಭಾರತ ನಿರ್ಮಾಣವಿರಬಹುದು, ಹಿಂದೂ ರಾಷ್ಟ್ರದ ಕಲ್ಪನೆಯಿರಬಹುದು, ಇವೆಲ್ಲ ಸಮಾಜದಲ್ಲಿನ ಹೆಚ್ಚಿನವರಿಗೆ ಸರಿಯಾಗಿ ಅರ್ಥವಾಗಿಯೇ ಇಲ್ಲ. ಯಾಕೆಂದರೆ ಈ ಕಲ್ಪನೆಗಳು ಅತ್ಯಂತ ಆಳವಾದ ಚಿಂತನೆಯನ್ನು ಒಳಗೊಂಡಂಥವು. ಧರ್ಮವೆಂಬ ಶಬ್ದವನ್ನು ರಿಲಿಜನ್ ಮಟ್ಟಕ್ಕೆ ಇಳಿಸಿ ಅರ್ಥೈಸಿಕೊಂಡ ನಮ್ಮ ಸಮಾಜಕ್ಕೆ ಈ ಪರಿಕಲ್ಪನೆಗಳು ಸುಲಭಕ್ಕೆ ಗ್ರಾಹ್ಯವಾಗುವುದಿಲ್ಲ. ಹಾಗಾಗಿ ಅದದೇ ಪ್ರಶ್ನೆಗಳನ್ನು ಮತ್ತೆ ಮತ್ತೆ ಸಂಘಕ್ಕೆ ಕೇಳಲಾಗುತ್ತದೆ. ಆದರೆ ಸಂಘ ಪ್ರತಿಪಾದಿಸುವ ‘ಹಿಂದುತ್ವ’, ಅಖಂಡತೆಗಳನ್ನೆಲ್ಲ ಅರ್ಥೈಸಿಕೊಳ್ಳಲು ದಾರ್ಶನಿಕ ದೃಷ್ಟಿಯಿರಬೇಕಾಗುತ್ತದೆ. ಅನ್ಯಥಾ ಅಪಾರ್ಥವೇ ಆಗುವುದು. ನಮ್ಮ ದೇಶ ಇಂಥ ಒಂದು ದೃಷ್ಟಿಯನ್ನು ಕಳೆದುಕೊಂಡಿದ್ದರಿಂದಲೇ ಸಂಘದ ಈ ಆಶಯವನ್ನೂ ಕೂಡ ಅರ್ಥ ಮಾಡಿಕೊಳ್ಳಲು ಅಶಕ್ತವಾಗಿದೆ.
ಹಾಗಾಗಿಯೇ ನಾನಾ ಪ್ರಶ್ನೆಗಳನ್ನು ಅವರತ್ತ ಎಸೆಯಲಾಗುತ್ತದೆ. ಹಾಗಿದ್ದೂ ಎಲ್ಲೂ ತಮ್ಮ ಸಹನೆಯನ್ನು ಕಳೆದುಕೊಳ್ಳದೇ ಸ್ವಯಂಸೇವಕ ಮುನ್ನಡೆಯುತ್ತಲೇ ಇರುತ್ತಾನೆ. ಈ ಬಗೆಗೆ ಆತನ ವಿಶ್ವಾಸವನ್ನು ಯಾರಿಂದಲೂ ಕೊಂಕಿಸಲು ಸಾಧ್ಯವಿಲ್ಲ. ಎಂಥ ವಿಪತ್ತೇ ಎದುರಾದರೂ ತನ್ನ ಸಂಕಲ್ಪದಿಂದ ಆತ ಹಿಂದೆ ಸರಿಯಲಾರ. ಯಾಕೆಂದರೆ ಸಂಘ ಉದಯಿಸಿದ್ದೇ ಅಂಥ ವಿಷಮ ಪರಿಸ್ಥಿತಿಯಲ್ಲವೇ?
ಇಷ್ಟೊಂದು ದೃಢ ವಿಶ್ವಾಸ, ಧೈರ್ಯ, ತಿತಿಕ್ಷೆಗಳೆಲ್ಲ ಹೇಗೆ ನಿಮಗೆ ಸಿದ್ಧಿಸುತ್ತವೆ ಎಂದು ಕೇಳಿದಾಗ ಸರಸಂಘಚಾಲಕರು ಹೇಳಿದ್ದು ‘ಅಂತರೀಕ್ಷಣೆ’ಯಿಂದ ಎಂದು. ಒಬ್ಬ ಕಾರ್ಯಕರ್ತನನ್ನು ಕೇಳಿದರೆ ಹೇಳುವುದೂ ಇದನ್ನೇ. ಎದುರಿಗೆ ಅಕ್ಷೌಹಿಣೀ ಸೇನೆಯೇ ಇದ್ದರೂ ಏಕಾಂಗಿಯಾಗಿ ಎದುರಿಸಬೇಕಾಗಿ ಬಂದಾಗ ಮಾಡಬೇಕಾದದ್ದು ಏನನ್ನು ಎಂದರೆ ಅಂತರೀಕ್ಷಣೆಯನ್ನು ಎನ್ನುತ್ತಾರವರು. ಆತ್ಮಬಲಕ್ಕಿಂತ ದೊಡ್ಡದು ಈ ಜಗದಲ್ಲಿ ಮತ್ತೇನೂ ಇಲ್ಲ. ಅದೆಂಥದೇ ಸಂಕಟ ಎದುರಾದಾಗಲೂ ನಾವು ಎದುರಿಗಿರುವ ವಿಷಮ ಸ್ಥಿತಿಯನ್ನು ನೋಡದೇ ನಮ್ಮ ಆಂತರ್ಯವನ್ನು ಈಕ್ಷಿಸಬೇಕು.
ಅಂತರ್ಮುಖಿಗಳಾದಷ್ಟೂ ಬಾಹ್ಯದ ವೈಷಮ್ಯವನ್ನು ಗೆಲ್ಲುವ ಧೈರ್ಯ ಬರುತ್ತದೆ ಎನ್ನುತ್ತಾರವರು. ಸಂಘದಲ್ಲಿ ಹೇಳಿ ಕೊಡುವುದೂ ಇದನ್ನೇ. ಮೊದಲು ಉದ್ದೇಶಶುದ್ಧಿಯಿರಬೇಕು. ನಮ್ಮ ಕಾರ್ಯವು ಧರ್ಮಮಾರ್ಗದ್ದಾದರೆ ವಿಜಯವು ದೊರೆತೇ ದೊರೆಯುವುದೆಂಬ ನಂಬಿಕೆ ನಮಗಿರಬೇಕು. ಆಗ ನಾವಂದುಕೊಂಡದ್ದೆಲ್ಲವನ್ನೂ ಸಾಧಿಸುವ ಶಕ್ತಿ ದೊರೆಯುತ್ತದೆ ಎನ್ನುವ ಸರಸಂಘಚಾಲಕರ ಮಾತು ಬರಿಯ ಮಾತಲ್ಲ. ಕೋಟ್ಯಂತರ ಕಾರ್ಯಕರ್ತರ ನಿತ್ಯದ ಅಂತಃಸಂವಾದ.
ರಾಮಮಂದಿರವೂ ನಿರ್ಮಾಣವಾಗುತ್ತಿದೆ, ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನ-ಮಾನವನ್ನೂ ತೆಗೆದು ಭಾರತದೊಳಗೆ ಸೇರಿಸಿಯಾಯ್ತು, ದೇಶವಿರೋಧಿಗಳನ್ನು ಹೆಡೆಮುರಿ ಕಟ್ಟುವ ಕೆಲಸವೂ ನಡೆಯುತ್ತಿದೆ. ಸಾಮಾನ್ಯ ಜನರಿಗೆ ಇವೆಲ್ಲ ಕನಸಿನಲ್ಲಿ ನಡೆಯುತ್ತಿರುವಂತೆ ಅನಿಸಬಹುದು. ಆದರೆ ಸಂಘದವರಿಗಲ್ಲ. ಯಾಕೆಂದರೆ ಅವರು ಪ್ರತಿ ಕ್ಷಣವೂ ಭಾರತವನ್ನು ಮತ್ತೆ ಮೊದಲಿನಂತೆ ವಿಶ್ವಗುರುವಾಗಿಸುವ ಗುರಿಯನ್ನಿಟ್ಟುಕೊಂಡು ಅಹರಹಃ ಶ್ರಮಿಸುತ್ತಿರುವವರು. ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಾಗುವವರು. ಇಷ್ಟೆಲ್ಲ ಆದ ಮೇಲೂ ಅವರು ವಿಶ್ರಮಿಸುವುದಿಲ್ಲ. ಯಾಕೆಂದರೆ ಅವರು ಒಂದು ದಿನದ ಯಶಸ್ಸಿನ ಹಿಂದೆ ಬಿದ್ದವರಲ್ಲ. ಯಾವುದೋ ಒಂದನ್ನು ಈಡೇರಿಸಿಕೊಂಡುಬಿಟ್ಟರೆ ಮುಗಿಯುವುದಿಲ್ಲ. ಅದನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗಬೇಕು. ಈ ನೈರಂತರ್ಯಕ್ಕೆ ಪೂರ್ಣವಿರಾಮವೆನ್ನುವುದೇ ಇಲ್ಲ. ಹೀಗೆ ಉನ್ನತ ಸ್ಥಿತಿಯನ್ನು ಅನಂತ ಕಾಲದವರೆಗೆ ಕಾಪಾಡಿಕೊಂಡು ಹೋಗುವುದೇ ಯಶಸ್ಸು ಎಂದು ನಂಬಿದವರು ಅವರು. ಹಾಗಾಗಿ ನಾವೆಲ್ಲ ತೃಪ್ತರಾಗಿ ಕುಳಿತುಬಿಟ್ಟರೂ ಸ್ವಯಂಸೇವಕನಿಗೆ ವಿರಾಮವಿಲ್ಲ. ಆತ ಜೋಳಿಗೆ ಹಿಡಿದು ಸಮಾಜ ಸಂಘಟನೆಗೆ ಹೊರಟೇಬಿಡುತ್ತಾನೆ.
ವಿಷಯಭೋಗವಿರಕ್ತಿ , ವಿಶ್ವಲೀಲಾಸಕ್ತಿ |
ಕೃಷಿಗೆ ಸಂತತ ದೀಕ್ಷೆ, ವಿಫಲಕೆ ತಿತಿಕ್ಷೆ ||
ವಿಷಮದಲಿ ಸಮದೃಷ್ಟಿ, ವಿವಿಧಾತ್ಮ ಸಂಸೃಷ್ಟಿ |
ಕುಶಲಸಾಧನಗಳಿವು ಮಂಕುತಿಮ್ಮ ||
ಎಂದು ಡಿವಿಜಿಯವರು ಹೇಳಿದಂತೆ ಈ ಕುಶಲಸಾಧನಗಳಿದ್ದರೆ ಎಂಥ ದುಸ್ಸಾಧ್ಯವೂ ಸುಲಭಸಾಧ್ಯವೇ ಆಗಿಬಿಡುತ್ತದೆ.
ಹೀಗೆ ಒಬ್ಬ ಸ್ವಯಂಸೇವಕನ ದೃಷ್ಟಿ ಹಾಗೂ ಬದ್ಧತೆಗಳು ಎಲ್ಲರಿಗೂ ಅನುಸರ್ತವ್ಯವೆಂಬುದರಲ್ಲಿ ಎರಡು ಮಾತಿಲ್ಲ.